ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧ : ಇದರ ಹಿಂದೆಯೂ ಇದೆ ರಾಜಕೀಯ ಬಂಧ

ಬಂಡೀಪುರ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧ : ಇದರ ಹಿಂದೆಯೂ ಇದೆ ರಾಜಕೀಯ ಬಂಧ

ಬದುಕುವ ಹಕ್ಕು ನಮ್ಮಂತೆಯೇ ಪ್ರಾಣಿ ಪಕ್ಷಿಗಳಿಗೂ ಇದೆ. ಅವುಗಳಿಗೆ ಪರಿಸರ ಉಳಿಸಿ ಕೊಡುವುದರಿಂದ ನಾವೂ ಉಳಿಯುತ್ತೇವೆ ಎಂಬ ವಾಸ್ತವತೆಯಿಂದಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ 9 ರಿಂದ, ಮುಂಜಾನೆ 6 ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಇದಕ್ಕೆ ನ್ಯಾಯಾಲಯ ಕೂಡ ಸಮ್ಮತಿಸಿದೆ.

ರಾಷ್ಟ್ರೀಯ ಹೆದ್ದಾರಿ 212(ಈಗ 760) ಬಂಡೀಪುರ ವನ್ಯದಾಮದ 19.7 ಕಿಮೀ ಕೋರ್ ವಲಯ ಮತ್ತು 4.5 ಬಫರ್ ವಲಯ ಕೇರಳದ ವಯನಾಡು ರಕ್ಷಿತಾರಣ್ಯದ 24.2 ಕಿಮೀ ರಕ್ಷಣಾ ವಲಯ, 10.4 ಬಫರ್ ವಲಯವನ್ನೊಳಗೊಂಡು ಕೊಳ್ಳೇಗಾಲದಿಂದ ಕೊಝಿಕೊಡೆವರೆಗೆ 273 ಕಿಮೀ ಉದ್ದವಿದೆ.

ಕರ್ನಾಟಕ ಮತ್ತು ಕೇರಳದ ಗಡಿಯನ್ನ ಸಂಪರ್ಕಿಸುವ ಈ ಮಾರ್ಗ ಉಭಯ ರಾಜ್ಯಗಳಿಗೂ ಪ್ರಮುಖವಾದುದು. ಅಷ್ಟೇ ಅಲ್ಲ, ನಮ್ಮ ರಾಜ್ಯದ ಅನೇಕ ಹಾಡಿಗಳ ಊರುಗಳು ಈ ಮಾರ್ಗದಲ್ಲೆ ಇವೆ. 

ಸಮೀಕ್ಷೆಯ ಅನುಸಾರ ವಾರ್ಷಿಕವಾಗಿ ರಸ್ತೆ ಅಪಘಾತದಿಂದಲೇ ಜಿಂಕೆ, ಕಾಡೆಮ್ಮೆ, ನವಿಲು ಸೇರಿದಂತೆ ಅನೇಕ ವನ್ಯ ಮೃಗಗಳು ಈ ಹೆದ್ದಾರಿಯಲ್ಲಿ ಅಸುನೀಗಿವೆ. ಅದರಲ್ಲು ರಾತ್ರಿ ವೇಳೆ ಎಡೆ ಬಿಡದೆ ಸಂಚರಿಸುವ ವಾಹನಗಳು, ಅದರಿಂದ ಹೊರಬೀಳುವ ಬೆಳಕು ಪ್ರಾಣಿ ಸಂಕುಲಕ್ಕೆ ಮೃತ್ಯು ಪಾಶವಾಗಿ ಪರಿಣಮಿಸಿವೆ. ಇಂಥ ಸಮೀಕ್ಷೆಯ ಆಧಾರದಲ್ಲೇ ಮೈಸೂರು ಜಿಲ್ಲಾಧಿಕಾರಿ ರಾತ್ರಿ ವೇಳೆ ಬಂಡೀಪುರ ಅರಣ್ಯ ಪ್ರದೇಶವನ್ನ ಹಾಯ್ದು ಹೋಗುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದರು.

ಇದು ಕೇರಳದವರನ್ನ ಕೆರಳಿಸಿ, ನಾವು ಊರಿಗೆ ವಾಪಸ್ಸಾಗಲು ಆಗುತ್ತಿಲ್ಲ ಎಂಬ ಕೊಂಕೆತ್ತಿದ್ದರು. ನ್ಯಾಯಾಲಯ ಕೂಡ ಈ ನಿಷೇಧ ಸರಿ, ಪರ್ಯಾಯ ಮಾರ್ಗ ಹುಡುಕಿ ಎಂದೇಳಿತು. ಅದರನುಸಾರ ಎಲಿವೇಟೆಡ್ ರಸ್ತೆ ನಿರ್ಮಾಣದ ಪ್ರಸ್ತಾಪವಿದ್ದರೂ, ಇದು ಕೂಡ ಪ್ರಾಣಿಗಳಿಗೆ, ಅರಣ್ಯಕ್ಕೆ ಕಂಟಕ ಎಂದೇಳಲಾಗಿದೆ. ಮತ್ತೊಂದು ಪರ್ಯಾಯವಾಗಿ ಹುಣಸೂರು-ಗೋಣಿಕೊಪ್ಪ-ಸುಲ್ತಾನ್ ತೇರಿ-ಮೂಲೆಹೊಳಿ ಮಾರ್ಗವನ್ನ ಬಳಸಬಹುದು. ಇದು 39 ಕಿಮೀ ಹೆಚ್ಚುವರಿಯಾಗುತ್ತೆ ಅಷ್ಟೇ ಎಂಬ ಸಮೀಕ್ಷೆಯನ್ನ ಅರಣ್ಯ ಇಲಾಖೆಯವರು ಮಾಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸ ಬೇಕಿದೆ.

ಹೀಗಿದ್ದರೂ,ವಯನಾಡಿನ ಸಂಸದರಾಗಿ ರಾಹುಲ್ ಗಾಂಧಿ ಇರುವುದರಿಂದ ಅಲ್ಲಿನ ಜನ ಸಂಚಾರ ನಿಷೇಧ ತೆರವುಗೊಳಿಸುವಂತೆ ಮತ್ತೆ ಪ್ರಲಾಪ ಆರಂಭಿಸಿದ್ದಾರೆ. ಇಡೀ ರಾಷ್ಟ್ರದಲ್ಲೇ ಒಂದಷ್ಟು ಸುಭದ್ರ ನೆಲೆ ಕಾಂಗ್ರೆಸ್ ಗಿರುವುದು ಕರ್ನಾಟಕದಲ್ಲಿ. ವಯನಾಡು ಸಂಸದನಾಗಿ ಅಲ್ಲಿನವರ ಕೂಗಿಗೆ ದನಿಗೂಡಿಸಬೇಕಾದ ಅನಿವಾರ್ಯತೆಯಿರುವ ರಾಹುಲ್ ಗಾಂಧಿಗೆ ಈಗ ತೀವ್ರ ಇಕ್ಕಟ್ಟಿನ ಸ್ಥಿತಿ ಎದುರಾಗಿದೆ.

ಏನಾದರಾಗಲಿ ನಿಷೇಧ ತೆಗೆಯಲ್ಲ ಎಂದು ನಮ್ಮ ಸರ್ಕಾರ ಕೂತಿರುವುದು ನ್ಯಾಯ ಬದ್ದವಾಗಿರುವಂತೆ, ಕಾಂಗ್ರೆಸ್ ಮುಖಂಡನಿಗೆ ಅವರ ಕ್ಷೇತ್ರದಲ್ಲೇ ಮುಖಭಂಗ ಮಾಡುವ ರಾಜಕೀಯ ವಿಚಾರಕ್ಕಾಗಿಯೂ ಇದನ್ನ ಬಳಸಿಕೊಳ್ಳುತ್ತಿರುವುದರಿಂದ, ಇದಕ್ಕೂ ರಾಜಕೀಯ ಲೇಪ ಮೆತ್ತಿ ಕೊಂಡತಿದೆ.