ವಚನಕಾರರ ದೃಷ್ಟಿಯಲ್ಲಿ ‘ಹೊಲೆ-ಮಾದಿಗ’ರೆಂದರೆ ಯಾರು?

ವಚನಕಾರರ ಆಧ್ಯಾತ್ಮ ಅಥವಾ ಧರ್ಮ ತತ್ತ್ವವು ಸಾಮಾಜಿಕವಾದುದು. ಆತ್ಮಶುದ್ಧತೆಗೂ ಜಾತಿಗೂ ಯಾವುದೇ ಸಂಬಂಧವಿಲ್ಲ! ಆತ್ಮಶುದ್ಧಿಯುಳ್ಳ ಕುಜನಿಯೂ ಆತ್ಮಶುದ್ಧಿಯಿಲ್ಲದ ಕುಲೀನ ಬ್ರಾಹಣನಿಗಿಂತಲೂ ಶ್ರೇಷ್ಠ ಎಂಬುದೇ ಅವರ ವಾದ!

ವಚನಕಾರರ ದೃಷ್ಟಿಯಲ್ಲಿ ‘ಹೊಲೆ-ಮಾದಿಗ’ರೆಂದರೆ ಯಾರು?

‘ಸತ್ತುದನೆಳೆವ ಹೊಲೆತನಕ್ಕಿಂತಲೂ ಹೊತ್ತುತಂದು ಕೊಲುವ ಹೊಲೆತನದ ಮೇಲೆಯೇ ಶರಣರ ನಿಗಾ! ಹಾಗಾಗಿ ‘ಕೊಲುವವನೇ ಮಾದಿಗ ಹೊಲಸು ತಿಂಬುವವನೇ ಹೊಲೆಯ’ ಎಂಬ ವಚನವು  ‘ಸತ್ತುದನೆಳೆವ ಹೊಲೆಯರಿಗಿಂತಲೂ ‘ಹೊತ್ತುತಂದು ಕೊಲುವ ಹೊಲೆಯ’ರನ್ನುದ್ದೇಶಿಸಿದ್ದು.ಈ ‘ಹೊತ್ತುತಂದು ಕೊಲುವ ಹೊಲೆಯರು’(ಬಹುಶಃ ಯಜ್ಞಕ್ಕಾಗಿ) ಬೇರಾರೂ ಅಲ್ಲ ಅವತ್ತಿನ ವರ್ಣಾಶ್ರಮ ಧರ್ಮಿಗಳು.

ವಚನಕಾರರ ಕಾಲಕ್ಕೂ ಬಹು ಮೊದಲಿನಿಂದಲೇ-ಸಾವಿರಾರು ವರ್ಷಗಳಷ್ಟು ಪ್ರಾಚೀನದಿಂದಲೇ-ವೈದಿಕರು ಹುಟ್ಟು ಹಾಕಿದ ವರ್ಣ-ಜಾತಿ ವ್ಯವಸ್ಥೆ ಇತ್ತು. ಆದ್ದರಿಂದ ವಚನಕಾರರು ಈ ವೈದಿಕಪ್ರಣೀತ ಚತುವರ್ಣನೀತಿ ಬೋಧಿತ ಕುಲ ಜಾತಿ ಪರಿಕಲ್ಪನೆಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಿತ್ತು. ಆದರೆ ಆ ಪರಿಕಲ್ಪನೆಗಳಿಂದ ನಿರ್ದೇಶಿಸಲ್ಪಟ್ಟ ಜಾತಿವ್ಯವಸ್ಥೆಯನ್ನು ಅವರು ಎಷ್ಟು ಮಾತ್ರವೂ ಒಪ್ಪಿಕೊಂಡಿರಲಿಲ್ಲ. 
 
ವೈದಿಕರ ದೃಷ್ಟಿಯಲ್ಲಿ ವ್ಯಕ್ತಿಯೊಬ್ಬನ ‘ಹುಟ್ಟು’ ಅವನ ವರ್ಣ-ಕುಲ-ಜಾತಿಯನ್ನು ನಿರ್ಣಯಿಸುತ್ತದೆ. ಶರಣರ ದೃಷ್ಟಿಯಲ್ಲಿ ವ್ಯಕ್ತಿಯ ಜನನ ಅಲ್ಲ, ಅವನ ಗುಣಸ್ವಭಾವ ನಡಾವಳಿ-ನುಡಿವಳಿಗಳು,ಆಹಾರ, ದೈವತ ಅವನ ಕುಲ-ಜಾತಿಯನ್ನು ನಿರ್ಣಯಿಸುತ್ತವೆ. ವ್ಯಕ್ತಿಯೊಬ್ಬನ ಹೊಲೆ-ಮಾದಿಗ-ಶ್ವಪಚತನಗಳನ್ನು ನಿರ್ಣಯಿಸುವ ಹಲವು ಅಂಶಗಳಲ್ಲಿ ಪ್ರಥಮದ್ದು, ಪ್ರಾಣಿಗಳನ್ನು ಕೊಂದು ಮಾಂಸ ತಿಂಬುದು. ಆ ಕಾರಣಕ್ಕಾಗಿಯೇ ಸವರ್ಣೀಯರಿಂದ ತಾವು ‘ಹೊಲೆ-ಮಾದಿಗರು’ ಎಂದು ಹಣೆಪಟ್ಟಿ ಕಟ್ಟಿಸಿಕೊಂಡವರ ಪಾಡೇನೋ ಸರಿಯೇ! ಆದರೆ ಶರಣರು ಹಾಗೆ ‘ಹೊಲೆ-ಮಾದಿಗ’ ಎಂಬ ಹಣೆಪಟ್ಟಿ ಕಟ್ಟಿ ಒಂದು ಮುಗ್ದ ಜನಸಮುದಾಯದ ಬಗ್ಗೆ ಅಮಾನುಷ ದೃಷ್ಟಿ-ಧೋರಣೆ ತಾಳಿದ  ಬ್ರಾಹ್ಮಣರಲ್ಲಿಯೇ ಆ ಹೊಲೆತನವನ್ನು ಶೋಧಿಸಿ ಟೀಕಿಸಿದರು. ಇದು ಅವರ ಪ್ರಗತಿಪರತೆ. ಅವರು ಸನಾತನ ಹಿಂದೂ ಧರ್ಮದ ಚೌಕಟ್ಟಿನಲ್ಲಿದ್ದ ಕೆಳಸ್ತರದ ಜನರಲ್ಲಿ ಅವರು ಕಂಡರಿಯದ ಶ್ರೇಷ್ಠ ಗುಣಸ್ವಭಾವ ನಡಾವಳಿ-ನುಡಿವಳಿಗಳನ್ನು ಎತ್ತಿ ಹಿಡಿದು ಅವನನ್ನು ‘ಕುಲಜ’ ಎಂದಂತೆಯೇ ಮೇಲುಸ್ತರದ, ಅದರಲ್ಲೂ ಮುಖ್ಯವಾಗಿ, ಬ್ರಾಹ್ಮಣರಲ್ಲಿ ಕಂಡರಿದ ಕೀಳುತನ-ಕೊಳಕುತನಗಳನ್ನೂ ಹೊರ ತೆರೆದು ತೋರಿಸಿ, ಅವರನ್ನು ‘ಹೊಲೆ-ಮಾದಿಗ’ರೆಂದು ಕರೆಯಲು ಹಿಂಜರಿಯಲಿಲ್ಲ. ಬಸವಣ್ಣನ ಈ ವಚನ ನೋಡಿ:

‘ಹೊಲೆಯೊಳಗೆ ಹುಟ್ಟಿ ಕುಲವನರಸುವೆ.
ಎಲವೋ, ಮಾತಂಗಿಯ ಮಗ ನೀನು.
ಸತ್ತುದನೆಳೆವನೆತ್ತಳ ಹೊಲೆಯ?
ಹೊತ್ತು ತಂದು ನೀವು ಕೊಲುವಿರಿ.
ಶಾಸ್ತ್ರವೆಂಬುದು ಹೋತಿಂಗೆ ಮಾರಿ
ವೇದವೆಂಬುದು ನಿಮಗೆ ತಿಳಿಯದು.’
(576/ಬಸವಣ್ಣನವರ ವಚನ ಸಂಪುಟ-1)

ಸತ್ತುದನೆಳೆವ ಹೊಲೆತನಕ್ಕಿಂತಲೂ ಹೊತ್ತುತಂದು ಕೊಲುವ ಹೊಲೆತನದ ಮೇಲೆಯೇ ಶರಣರ ನಿಗಾ! ಹಾಗಾಗಿ ‘ಕೊಲುವವನೇ ಮಾದಿಗ ಹೊಲಸು ತಿಂಬುವವನೇ ಹೊಲೆಯ’ ಎಂಬ ವಚನವು ‘ಸತ್ತುದನೆಳೆವ ಹೊಲೆಯರಿಗಿಂತಲೂ ‘ಹೊತ್ತು ತಂದು ಕೊಲುವ ಹೊಲೆಯ’ರನ್ನುದ್ದೇಶಿಸಿದ್ದು.ಈ ‘ಹೊತ್ತು ತಂದು ಕೊಲುವ ಹೊಲೆಯರು’(ಬಹುಶಃ ಯಜ್ಞಕ್ಕಾಗಿ) ಬೇರಾರೂ ಅಲ್ಲ ಅವತ್ತಿನ ವರ್ಣಾಶ್ರಮ ಧರ್ಮಿಗಳು. ಹಾಗೆಯೇ ‘ಎಲವೋ, ಮಾತಂಗಿಯ ಮಗ ನೀನು’ ಎಂಬ ಸಾಲಿನಲ್ಲಿ ಒಬ್ಬನ ಮೂಲಕ ಆ ಇಡೀ ವರ್ಣಾಶ್ರಮಿಗಳನ್ನೇ ಸ್ವಲ್ಪ ದೂಷಣಾತ್ಮಕ ಧ್ವನಿಯಲ್ಲಿ ‘ಮಾತಂಗಿಯ ಮಕ್ಕಳು’ ಎಂದು ಶರಣರು ಕರೆದಿದ್ದಾರೆಂಬುದು ಸ್ಪಷ್ಟ. ಏಕೆಂದರೆ ಹಿಂದೂ ಧರ್ಮದ ನೀತಿಕಟ್ಟಳೆಗಳಡಿ, ಕೊಂದು ತಿಂಬುವ ಕಾರಣಕ್ಕಾಗಿ ಮಾತ್ರವಲ್ಲ ಅವರ ಹುಟ್ಟಿನ ಕಾರಣಕ್ಕೂ ‘ಹೊಲೆಮಾದಿಗರಾಗಿದ್ದವರು ಯಾರೆಂದು  ಶರಣರಿಗೆ ಗೊತ್ತು: 

 ‘ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ.
 ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
 ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ.
 ಇವರಿಬ್ಬರ ಮೂವರ ಕೂಡಿಕೊಂಡಿಪ್ಪ,
 ಕೊಟ್ಟುದ ಬೇಡನು ನಮ್ಮ ಕೂಡಲ ಸಂಗಯ್ಯ.’
 (1401/ಬಸವಣ್ಣನವರ ವಚನ ಸಂಪುಟ-1)

ಆದ್ದರಿಂದ, ಆಗಲೇ ಪರಂಪರಾನುಗತವಾಗಿ ಕರೆಯಲ್ಪಟ್ಟವರಿಗೆ ಮತ್ತೆ ಮತ್ತೆ ‘ನೀನು ಮಾತಂಗಿಯ ಮಗ, ನೀನು ಹೊಲಸು ತಿಂಬುವವನು’ ಎಂದು ಹೇಳುವ ಅಗತ್ಯವಿಲ್ಲ! ಯಾರು ಆ ಹೊಲೆಯರಂತೆಯೇ ಪ್ರಾಣಿಗಳನ್ನು ಕೊಂದೂ ಮಾಂಸವನ್ನು ತಿಂದೂ ಕೂಡಾ ತಾವು ಹೊಲೆ-ಮಾದಿಗರಲ್ಲ ಎಂದು ಮತ್ತೊಬ್ಬರನ್ನು ಹೀನವಾಗಿ ಕಾಣುತ್ತಿರುವರೋ ಆ ಸವರ್ಣೀಯರಿಗೆ, ಆ ಮಾತಿನ ಮೂಲಕ, ಅವರೊಳಗಿನ ದೋಷವನ್ನು ಎತ್ತಿ ತೋರಿಸುವ ಅವಶ್ಯಕತೆಯಿದೆ. ಆದ್ದರಿಂದ, ಶರಣರ ಟೀಕೆಗೆ ವಸ್ತುವಾದ ಹೊಲೆತನ ವೈದಿಕರ ಹೊಲೆತನ ಎಂದು ಹೇಳದೇ ವಿಧಿಯಿಲ್ಲ. ಈ ಕೆಳಗಿನ ವಚನಗಳು ಈ ಅಂಶವನ್ನು ಇನ್ನೂ ಹೆಚ್ಚು ಸ್ಪಷ್ಟಪಡಿಸುತ್ತವೆ. ವಿದ್ವಾಂಸರು ಈ ಕುರಿತು ಹೆಚ್ಚಿನ ಪರಾಮರ್ಶೆ ನಡೆಸಲಿ.

ಹೊಲೆಯೊಳಗೆ ಹುಟ್ಟಿಯೂ ಕುಲವನರಸುವುದು ಆ ಸವರ್ಣೀಯರ ಇಬ್ಬಂದಿತನ! ಈ ವಿಪ್ರರನ್ನು ಕುರಿತೇ ಬಸವಣ್ಣ ಹೀಗೆ ನುಡಿದಿದ್ದಾನೆ:

 ‘ಏನಯ್ಯಾ ವಿಪ್ರರು ನುಡಿದಂತೆ ನಡೆಯರು,ಇದೆಂತಯ್ಯಾ?
 ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ!
 ಕೂಡಲಸಂಗಮ ದೇವಯ್ಯಾ, ಹೊಲೆಯರ ಬಸುರಲ್ಲಿ
 ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೇ ದುಷ್ಟ.’
 (575/ಬಸವಣ್ಣನವರ ವಚನ ಸಂಪುಟ-1)

ನುಡಿ-ನಡೆಯೊಳೊಂದಾದ ಭಕ್ತಿಯನ್ನು ಬೋಧಿಸಿದ ಶರಣರು ನುಡಿದಂತೆ ನಡೆಯದೇ ಇರುವ ‘ಹೊಲೆತನವನ್ನು’ ಆ ವಿಪ್ರರಲ್ಲಿ ಹುಡುಕಿ ಟೀಕಿಸಿದರು. ಚೆನ್ನಬಸವಣ್ಣನವರ ‘ವೇದವನೋದಿ ಹೊನಲಲ್ಲಿ ಹೋದ ದ್ವಿಜರು ಕೆಟ್ಟ ಕೇಡಿಂಗೆ ಕಡೆಯಿಲ್ಲ’ ಎಂಬ ಒಂದು ವಚನದ ಕೆಲಸಾಲುಗಳು ಆ ವಿಪ್ರರ ಹೊಲೆತನವನ್ನು ಇನ್ನೂ ಹೆಚ್ಚು ಸ್ಪಷ್ಟಪಡಿಸುತ್ತವೆ: 

‘ಅಹಿಂಸಾ ಪರಮೋ ಧರ್ಮಃ’ ಎಂದೋದಿ ಅಸುರ ಭೋಜನಕ್ಕೆ ಅಂಗವಿಸಿ
ಕರ್ಮವ ಮಾಡಿ ಹೋತ ಕೊಂದು ತಿಂಬುದು ಪಾತಕವಲ್ಲವೇ?
‘ಪರಮೋ ಧರ್ಮಃ ಹಿರಣ್ಯ ಗರ್ಭಃ’ ಎಂದು ಹೊನ್ನ ಕಪಿಲಿಯಂ ಮಾಡಿ ಕಡಿದು
ಹಂಚಿಕೊಂಬುದು ಚಾಂಡಾಲವಲ್ಲವೇ?
ಹೊಲೆಯನಂತೆ ಹಲುವೆಣನ ಸುಟ್ಟು 
ಹೊರಸಿನ ಮೇಲೆ ಹತವಾದ ಕಳಗ ಹತ್ತಿದ ಹಸುವಿನ ಉತ್ಕ್ರಾಂತಿಯ 
ಕಾನನದಲ್ಲಿ ಕೂಳು ಭೋಜನವನುಂಡು,ಲೋಕೋಪಚಾರಕ್ಕೆ ಒಳಗಾಗಿ
ಪಾಪಕರ್ಮವ ಮಾಡಿ ಸಲ್ಲದೇ ಹೋದರು ಶಿವನಲ್ಲಿಗೆ.’
(1567/ಚೆನ್ನಬಸವಣ್ಣನವರ ವಚನ ಸಂಪುಟ-3)

ಬ್ರಾಹ್ಮಣರ ಹೊಲೆತನ ಯಜ್ಞ-ಯಾಗಾದಿಗೆ ಸುತ್ತಿಕೊಂಡದ್ದು. ಯಜ್ಞಕ್ಕೆ ಅವರು ಹಸು, ಕುದುರೆ, ಮೇಕೆ ಮುಂತಾದ ಹಲವಾರು ಪ್ರಾಣಿಗಳನ್ನು ಬಲಿನೀಡಿ ಅದರ ಮಾಂಸವನ್ನು ಭುಂಜಿಸುತ್ತಿದ್ದರು.ಈ ಅಂಶದ ಮೇಲೆ ಬೆಳಕು ಚೆಲ್ಲುವ ಇನ್ನೊಂದು ವಚನ ಹೀಗಿದೆ : 

‘ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ?
ವಿಷ್ಣು ನಿಮ್ಮಬಲ್ಲಡೆ ಭುಜವ ಸುಡಿಸಿಕೊಂಬನೆ?
ಶ್ರವಣ ನಿಮ್ಮ ಬಲ್ಲಡೆ ಬತ್ತಲೆಯಾಗಿ ತಲೆಯ ತರಿಸಿಕೊಂಬನೆ?
ಕೃತಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಗಜಯಾಗವ ಮಾಡಿ ಆನೆಯ ತಿನ್ನ ಹೇಳಿತ್ತೆ ನಿಮ್ಮ ವೇದ?
ತ್ರೇತಾಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಅಶ್ವಯಾಗವ ಮಾಡಿ ಕುದುರೆಯ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ?
ದ್ವಾಪರಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಮಹಿಷ ಹೋಮವ ಮಾಡಿ ಕೋಣನ ಕೊಂದು ತಿನ್ನ ಹೇಳಿತ್ತೆ ನಿಮ್ಮವೇದ?
ಕಲಿಯುಗದಲ್ಲಿ ಶಿವನ ಹೊಗಳುವ ವೇದವನೋದಿ
ಅಜಯಾಗವ ಮಾಡಿ ಹೋತನ ಕೊಂದು ತಿನ್ನ ಹೇಳಿತ್ತೆ ನಿಮ್ಮ ವೇದ?
ಬ್ರಾಹ್ಮಣನೇ ದೈವವೆಂದಾರಾಧಿಸಿ ಗೌತಮ ಗೋ ಹಂತೃವಾದುದಿಲ್ಲವೇ?
ಬ್ರಾಹ್ಮಣನೇ ದೈವವೆಂದಾರಾಧಿಸಿ ಪಂಚಪಾಂಡವರು ದೇಶಭ್ರಷ್ಠರಾಗರೆ?

 

ಬ್ರಾಹ್ಮಣನೇ ದೈವವೆಂದಾರಾಧಿಸಿ ಮುಕ್ತಿಗೆ ಸಂದವರಿಲ್ಲ!

ಅಯ್ಯಾ ನಮ್ಮ ಜಂಗಮ ಲಿಂಗವ ದೈವವೆಂದಾರಾಧಿಸಿ
ಮುಂದೆನುತಿಸಿ ಹಿಂದೆ ಆಡಿಕೊಂಬ ಪರವಾದಿ ಹೊಲೆಯರ ಬಾಯಲ್ಲಿ
ನಮ್ಮ ಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ 
ಅಂಗುಳವ ಮೆಟ್ಟಿಕ್ಕುವನೆಂದ ಕೂಡಲ ಚೆನ್ನಸಂಗಮದೇವ.’
(1400/ಚೆನ್ನಬಸವಣ್ಣನವರ ವಚನ ಸಂಪುಟ-3)

ಹೀಗೆ ಬ್ರಾಹ್ಮಣರನ್ನು ಹೊಲೆಯರೆಂದು ನುಡಿವ ಚೆನ್ನಬಸವಣ್ಣ ತನ್ನ ಇನ್ನೊಂದು ವಚನದಲ್ಲಿ ಮಹಾಭಸಿತ ಧರಿಸಿದವನೇ ಬ್ರಾಹ್ಮಣ, ಅದನ್ನು ಹೊರತು ಮಟ್ಟಿಮಸಿ ಧರಿಸಿದವನೇ ಶ್ವಪಚ ಎನ್ನುತ್ತಾನೆ:  

‘ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ ತಾನೆ ಪ್ರಸಿದ್ಧವಾಗಿ,
ಕೊಂಡಾಡಿಸಿಕೊಳ್ಳಲ್ಪಟ್ಟ
ಶ್ರೀ ಮಹಾಭಸಿತವ ಧರಿಸಿದಾತನೇ ಸದ್ಬ್ರಾಹ್ಮಣ.
ಇಂತಪ್ಪ ಮಹಾಭಸಿತವ ಬಿಟ್ಟು ಅಜ್ಞಾನ ಮತದಿಂದ
ವೇದಶಾಸ್ತ್ರಪುರಾಣಾಗಮಂಗಳಲ್ಲಿ ವಿರುದ್ಧವಾದ
ಮಟ್ಟಿಮಸಿಗಳ ಹಣೆಯಲ್ಲಿಟ್ಟುಕೊಂಡನಾದಡೆ, ಅವನು ಬ್ರಾಹ್ಮಣನಲ್ಲ,
ಅವನು ಪಂಚಮಹಾಪಾತಕಿ,ಆತ ಶ್ವಪಚನೆಂದು ಪುರಾಣ ಪ್ರಸಿದ್ಧ.’
(1571/ಚೆನ್ನಬಸವಣ್ಣನವರ ವಚನ ಸಂಪುಟ-3)

ಬಸವಣ್ಣ ಚೆನ್ನಬಸವಣ್ಣನವರ ಹಾಗೆಯೇ ವೈದಿಕರ ಜಾತಿಕಲ್ಪನೆಯನ್ನು ಒಪ್ಪದ ಅಂಬಿಗರ ಚೌಡಯ್ಯ ಹೊಲೆ-ಮಾದಿಗ ಜಾತಿಯನ್ನು ವ್ಯಾಖ್ಯಾನಿಸುವ ಬಗೆ ಹೀಗೆ: 

‘ಹೊಡವುಂಟು ದೇವರ ತಲೆಯ ತಾಟಿಸಿಕೊಂಬರು
ನೆಲಕೆಯೂ ತಲೆಗೆಯೂ ನಂಟೊಳವೇ?
ಕೊಲಬೇಡ ಪ್ರಾಣಿಯ, ಗೆಲಬೇಡ ನಂಬಿದರ,
ಛಲವ ಸಾಧಿಸಬೇಡ ಗೋತ್ರದಲ್ಲಿ.
ಕೊಲುವವ ಗೆಲುವವ ಛಲವ ಸಾಧಿಸುವವ
ಹೊಲೆಯರು ಮಾದಿಗರೆಂದನಂಬಿಗರ ಚೌಡಯ್ಯ’
(287/ಸಂಕೀರ್ಣ ವಚನ ಸಂಪುಟ-6)

ಒಂದು ಹಂತದಲ್ಲಿ ಎಲ್ಲಾ ಕುಲಹದಿನೆಂಟು ಜಾತಿಗಳನ್ನೂ ವ್ಯಕ್ತಿಯೊಬ್ಬನೊಳಗೇ ಹುಡುಕುವ  ಈ ಚೌಡಯ್ಯ ಊರು-ಕೇರಿಗಳ ಹೊರಗಿರುವ ‘ಹೊರಕೇರಿಯ ಹೊಲೆಯರಿಗೆ’ ಬದಲಾಗಿ ಊರೊಳಗಿರುವ ಹೊಲೆ-ಮಾದಿಗರ ಕಡೆ ನಮ್ಮ ಗಮನ ಸೆಳೆಯುತ್ತಾನೆ: 

‘ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ?
ಹೊಲೆಯ ಹೊರಕೇರಿಯಲ್ಲಿರುವನು,
ಊರೊಳಗಿಲ್ಲವೇ ಅಯ್ಯಾ ಹೊಲೆಯರು?’

ಹೀಗೆ ಪ್ರಶ್ನಿಸಿದ ಚೌಡಯ್ಯನು ಮುಂದುವರಿದು, ‘ತಾಯಿಗೆ ಬೈದವ, ತಂದೆಗೆ ಉತ್ತರ ಕೊಟ್ಟವ- ಬೈದವ, ಕೊಡುವ ದಾನಕ್ಕೆ ಅಡ್ಡಬಂದವ, ನಡೆವ ದಾರಿಗೆ ಮುಳ್ಳ ಹಚ್ಚಿದವ, ಬ್ರಾಹ್ಮಣನ ಕುತ್ತಿಗೆ ಕೊಯ್ದವ, ನಿಜವ ನುಡಿಯದವ, ಚಿತ್ತದಲಿ ಪರಸತಿಯ ಬಯಸಿದವ, ಲಿಂಗಮುದ್ರೆಯ ಕಿತ್ತವ, ಲಿಂಗಬಿಟ್ಟು ತಿರುಗುವವ, ಧರ್ಮ ಮಾಡದವ, ಬಸವನ ಕೊಂದವ, ಲಿಂಗಪೂಜೆ ಮಾಡದವ ಇಂತಪ್ಪ ಹೊಲೆಯರು ಊರತುಂಬಾ ಇರಲಾಗಿ ಹೊರಕೇರಿಯವರಿಗೆ ಹೊಲೆಯರೆನಬಹುದೆ?’ ಎಂದು ಪ್ರಶ್ನಿಸುತ್ತಾನೆ. (289/ಸಂಕೀರ್ಣ ವಚನ ಸಂಪುಟ-6)
 
ಆಕಾಶದ ಕಡೆ ತಲೆಯೆತ್ತಿ ಕೂಡುವುದಲ್ಲ, ಬದಲಾಗಿ ತನ್ನೊಳಗನ್ನು ಅರಿಯುವ, ಆತ್ಮಶುದ್ಧತ್ವದ, ಅಂತರಂಗ ಶುಚಿತ್ವದ, ಅರಿವಿನ ಮಹತ್ತ್ವದ ಬೋಧನೆಯನ್ನು ಮಾಡುವುದೇ ಆಧ್ಯಾತ್ಮ. ಆತ್ಮವೇ ದೇವರು, ಜೀವಾತ್ಮ ಮತ್ತು ಪರಮಾತ್ಮ ಅಭಿನ್ನ ಎಂಬ ಅದ್ವೈತದ ಭಾವನೆ ಬೆಳೆಸಿಕೊಳ್ಳುವತ್ತ ಮಾನವರಿಗೆ ನಿರ್ದೇಶನ ನೀಡುವ ತತ್ತ್ವವೇ ಆಧ್ಯಾತ್ಮ.ಈ ಆಧ್ಯಾತ್ಮ ವಿದ್ಯೆಗೂ ವರ್ಣ-ಜಾತಿಗೂ ಮಧ್ಯೆ ನಿರ್ಮಿಸಿದ್ದ ವೈದಿಕರ ನಿರ್ಬಂಧದ ಗೋಡೆಯನ್ನು ಮುರಿದ ಶರಣರು ಯಾವ ಜಾತಿಯವನೇ ಆಗಲೀ ಈ ಆಧ್ಯಾತ್ಮದ ಸಾಧನೆ ಅರ್ಹನೆಂದು, ಅದನ್ನು ಸಾಧಿಸಲು ವೀರಶೈವ ಗುರುವಿಂದ ಲಿಂಗಸಾಹಿತ್ಯವಾಗಬೇಕೆಂದು ಸಾರಿದರು. ಈ ಇಷ್ಟಲಿಂಗ ದೀಕ್ಷಿತನಲ್ಲದವನು, ಶಿವಪೂಜಕನಲ್ಲದವನು, ಸದ್ಗುಣ ಸದಾಚಾರಿಯಲ್ಲದವನು, ಕಾಮಕ್ರೋಧ ಮದ ಮತ್ಸರಾದಿ ದುರ್ಗುಣಿಯು, ವೇಶ್ಯೆಯರ ಸಂಗಿಯಾದವನು, ಪರಧನ ಪರಸತಿ ಬಯಸುವವನು, ನುಡಿ-ನಡೆಯೊಳೊಂದಾಗಿ ಬಾಳದವನು, ಅಂತರಂಗ ಬಹಿರಂಗ ಶುದ್ಧತ್ವವಿಲ್ಲದವನು, ಕೊಲುವವನು, ಮಾಂಸಹಾರಿಯು  ಹುಟ್ಟಿನಲ್ಲಿ ಮೇಲುಜಾತಿಯವನಾಗಿರಲಿ ಕೆಳಜಾತಿಯವನೇ ಆಗಿರಲಿ ಅವನು ಹೊಲೆಯ! ಅಂತೆಯೇ ಅವನು ಭವಿಯೂ ಕೂಡ! ಶರಣರ ‘ಹೊಲೆ-ಮಾದಿಗ’ ಹಾಗೂ ‘ಭವಿ’ ಪರಿಕಲ್ಪನೆಗಳಿಂದ ಸೂಚಿಸಲ್ಪಟ್ಟ ಜನಸಮುದಾಯದಲ್ಲಿ ಕೊಂದು ತಿಂಬುವ ಕೆಳಜಾತಿಯವರಿದ್ದಂತೆಯೇ ಬ್ರಾಹಣರಾದಿ ಇತರ ಮೇಲುಜಾತಿಯವರೂ ಇದ್ದಾರೆ. ಹೀಗಿದ್ದರೂ, ಅವರ ಜಾತಿ-ವರ್ಣ ಟೀಕೆಯಲ್ಲಿ ಪ್ರಮುಖ ಎದುರಾಳಿಗಳು ಬ್ರಾಹ್ಮಣರೇ ಎಂಬುದು ನಿರ್ವಿವಾದ ಎಂಬುದನ್ನು ಮೇಲೆ ಉದಾಹರಿಸಲ್ಪಟ್ಟ ಹಾಗೂ ಅಂತಹ ಇನ್ನೂ ಅನೇಕ ವಚನಗಳು ಸಾಧಿಸುತ್ತವೆ! 
 
ಕೊನೆಯದಾಗಿ, ಶರಣರ ಆಧ್ಯಾತ್ಮಬೋಧನೆ ಕಾಡು ಗುಹೆ ವಾಸಿಗಳಾದ ಮೋಕ್ಷಾಕಾಂಕ್ಷಿ ಸಂನ್ಯಾಸಿಗಳ ಅಸಾಮಾಜಿಕ ಜೀವನಕ್ಕೆ ಸಂಬಂಧಿಸಿಲ್ಲ! ಅದು ಸಮಾಜದ ಮಧ್ಯೆ ಸಂಸಾರಿಗಳಾಗಿದ್ದು ಬದುಕಿನ ಕೋಟಿ ನೋವು ಉಂಡವರಿಗೆ ಸಂಬಂಧಪಟ್ಟದ್ದು. ಅನುಭಾವಿ ಶರಣರು, ‘ನಿಸ್ಸಂಗಿತ್ವ’ ಜೀವನವನ್ನು ಜಂಗಮನಿಗೆ ಬೋಧಿಸಿದರೂ, ಯೋಗ ಸನ್ಯಾಸಗಳಿಗೆ ಮಹತ್ತ್ವ ನೀಡಿಲ್ಲ. ಅವರದು ಕಾಯಕ, ದಾಸೋಹ, ಗುರು-ಲಿಂಗ-ಜಂಗಮ ಸೇವೆ! ಅವರದು ಜಂಗಮಾಧಿಕ್ಯದ ಧರ್ಮ! ಆದ್ದರಿಂದ ವಚನಕಾರರ ಆಧ್ಯಾತ್ಮ ಅಥವಾ ಧರ್ಮ ತತ್ತ್ವವು ಸಾಮಾಜಿಕವಾದುದು. ಆತ್ಮಶುದ್ಧತೆಗೂ ಜಾತಿಗೂ ಯಾವುದೇ ಸಂಬಂಧವಿಲ್ಲ! ಆತ್ಮಶುದ್ಧಿಯುಳ್ಳ ಕುಜನಿಯೂ ಆತ್ಮಶುದ್ಧಿಯಿಲ್ಲದ ಕುಲೀನ ಬ್ರಾಹಣನಿಗಿಂತಲೂ ಶ್ರೇಷ್ಠ ಎಂಬುದೇ ಅವರ ವಾದ!
                                                                                                                       

 - ಬಸವರಾಜ ತೂಲಹಳ್ಳಿ