ಭೂಮಿಯನ್ನು ಕೊಲ್ಲುತ್ತಿರುವ ಅಂಕಿ ಅಂಶಗಳು ನಮಗೆ ಬೇಕು

ಭೂಮಿಯನ್ನು ಕೊಲ್ಲುತ್ತಿರುವ ಅಂಕಿ ಅಂಶಗಳು ನಮಗೆ ಬೇಕು

ಸಮುದ್ರದಲ್ಲಿ ಪ್ಲಾಸ್ಟಿಕ್ ಕಸದ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಕಡಲಾಮೆಗಳ ಮೂಗಿನಲ್ಲಿ ಪ್ಲಾಸ್ಟಿಕ್ ಸ್ಟ್ರಾ ಅಥವಾ ವೇಲ್ ಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕಸ ತೋರಿಸುವ ಯೂ ಟ್ಯೂಬ್ ಅನ್ನು ನೋಡಿರುತ್ತೀರಿ. ಅಲ್ಲೆಷ್ಟು ಪ್ಲಾಸ್ಟಿಕ್ ಕಸವಿದೆ? ಎಲ್ಲಿಂದ ಬರುತ್ತಿದೆ? ನಮಗೆ ನಿಜವಾಗಿಯೂ ಗೊತ್ತಿಲ್ಲ. ಯಾಕೆಂದ್ರೆ ಅದರ ಪ್ರಮಾಣವನ್ನು ನಾವು ಅಳೆದಿಲ್ಲ. ಅದರ ಅಂಕಿ ಅಂಶಗಳ ಕೊರತೆ ಇದೆ ಎನ್ನುತ್ತಾರೆ ಮಾರ್ಕಸ್ ಎರಿಕ್ ಸನ್, 5 ಗೈರ್ಸ್ ಇನ್ಸ್ ಸಿಟ್ಯೂಟ್ ನ ಸಹ ಸಂಸ್ಥಾಪಕ. ಇದು ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಸ್ವಯಂ ಸೇವಾ ಸಂಸ್ಥೆ.

ಪರಿಸರಕ್ಕೆ ಅಪಾಯ ತಂದೊಡ್ಡುತ್ತಿರುವುದು ಸಾಗರ ಕಸವೊಂದೇ ಅಲ್ಲ, ವಿಶ್ವ ಸಂಸ್ಥೆಯು ಅಂತಹ 93 ಸೂಚಕಗಳನ್ನು ಸುಸ್ಥಿರ ಅಭಿವೃದ್ಧಿಯಲ್ಲಿ (sustainable development)ಪರಿಸರ ಪತನದ ಕಾರಣಗಳನ್ನು ಅಳೆಯಲು ರೂಪಿಸಿದೆ. ಅಚ್ಚರಿಯೆಂದರೆ 68 ಸೂಚಕಗಳ ಬಗ್ಗೆ ಅಂಕಿ ಅಂಶಗಳು ದೊರಕದೆ ಇರುವುದು. ಇದಕ್ಕೆ ಉದಾಹರಣೆ ಯಾಗಿ ತೀವ್ರಗತಿಯಲ್ಲಾಗುತ್ತಿರುವ ಭೂ ಮೇಲ್ಪದರದ ಸವೆತ, ಸಾಗರಗಳ ಆಮ್ಲೀಯತೆಯಲ್ಲಿ ಹೆಚ್ಚಳ, ಹಾಗೂ ವ್ಯಾಪಾರಕ್ಕಾಗಿ ವನ್ಯ ಪ್ರಾಣಿಗಳ ಬೇಟೆಯಾಡುವಿಕೆ ಇವುಗಳ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸದೇ ಇರುವುದು. ಕೆಲವೊಮ್ಮೆ ಡೇಟಾ ಇದ್ದರೂ ಜಾಗತಿಕವಾಗಿ ಮುಕ್ತವಾಗಿ ಹಂಚಿಕೊಳ್ಳದೇ ಇರುವುದು. ಕಾರಣ ಏನೇ ಇರಲಿ ನಾವು ಇದರ ಬಗ್ಗೆ ಕಣ್ಣಿದ್ದೂ ಕುರುಡರಾಗಿದ್ದೇವೆ.

“ಸರಿಯಾಗಿ ಅಳೆಯದಿದ್ದರೆ ಸರಿಯಾಗಿ ನಿರ್ವಹಿಸಲಾರಿರಿ “ ಎನ್ನುತ್ತಾರೆ ವಿಶ್ವಸಂಸ್ಥೆಯ ಪರಿಸರ ಶಾಂತಿ ಕಾಪಾಡುವಿಕೆಯ ಮುಖ್ಯಸ್ಥರಾದ ಡೇವಿಡ್ ಬೆನ್ಸನ್. ಅವರ ಮಾತಿನಲ್ಲೇ ಹೇಳುವುದಾದರೆ ‘ಈ ಗ್ರಹವನ್ನು ಸಂರಕ್ಷಿಸಬೇಕಾದರೆ ನಮಗೆ ಅಂಕಿ ಅಂಶಗಳ ಕ್ರಾಂತಿಯಾಗ ಬೇಕು ‘ಪರಿಸರಕ್ಕೆ ಡಿಜಿಟಲ್ ಪರಿಸರ ವ್ಯವಸ್ಥೆಯ ಅವಶ್ಯಕತೆಯಿದೆ.

ಒಳ್ಳೆಯ ಸಂಗತಿಯೆಂದರೆ ನಮ್ಮಲ್ಲಿ ಅದಕ್ಕನುಗುಣವಾದ ಸಾಧನಗಳಿವೆ, ಪರಿಕರಗಳಿವೆ.  ತಂತ್ರಜ್ಞಾನದಿಂದ ಹಾನಿಯೂ ಇದೆ, ಒಳಿತೂ ಇದೆ. ಒಳಿತಾಗಬೇಕೆಂದರೆ ಕಣ್ಗಾವಲು ಬೇಕಿದೆ. ನಾವು ಕ್ಯಾಮೆರಾಗಳು, ಪಾಕೆಟ್ ಕಂಪ್ಯೂಟರ್, ಟೈಟಾನಿಕ್ ನಂತಹ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಮಷೀನ್ ಲರ್ನಿಂಗ್ ತುಂಬಿದಂತಹ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಈ ಪರಿಕರಗಳನ್ನು ಒಂದು ಒಳ್ಳೆ ಉದ್ದೇಶಕ್ಕಾಗಿ ಬಳಸಬಹುದು ಅದುವೇ “”ಭೂಮಿಯ ಅಧ್ಯಯನ “”.

ಈ ನಿಟ್ಟಿನಲ್ಲಿ ಕೆಲವೊಂದು ತಂತ್ರಜ್ಞಾನಗಳಿಂದ ಗಮನಾರ್ಹ ಅಧ್ಯಯನಗಳಾಗಿವೆ. ಗಣನೆಗೆ ತೆಗೆದುಕೊಂಡರೆ ಅದರಲ್ಲಿ ಒಂದು “ಜಾಗತಿಕ ಮೀನುಗಾರಿಕಾ ಗಡಿಯಾರ “(ಗ್ಲೋಬಲ್ ಫಿಶಿಂಗ್ ವಾಚ್ ). ಲಾಭ ರಹಿತವಾಗಿ, ವಿಶ್ವದ ಮೀನುಗಾರಿಕಾ ಹಡಗುಗಳ ಅತಿಯಾದ ಮೀನುಗಾರಿಕೆ ಚಟುವಟಿಕೆ ಯ ಬಗ್ಗೆ ನಿಗಾ ಇರಿಸುತ್ತದೆ. ಇದು ಹಡಗಿನಿಂದ ಕಳುಹಿಸಲ್ಪಟ್ಟ ಜೆಪಿಎಸ್ ತರಂಗಗಳನ್ನು ಬಳಸಿಕೊಂಡು, ಹಡಗಿನ ಬೆಳಕನ್ನು ಸ್ಯಾಟಲೈಟ್ ಇನ್ಫ್ರಾರೆಡ್ ಇಮೇಜಿಂಗ್ ಮಾಡಿ ಅಂಕಿ ಅಂಶಗಳನ್ನು ದಾಖಲಿಸುತ್ತದೆ. ಹಾಗೆ ನೋಡಿದರೆ ಇದು ಶೇ.90 ರಷ್ಟು ಪರಿಣಾಮಕಾರಿಯಾಗಿ, ಯಾವ ಹಡಗು ಯಾವ ರೀತಿಯ ಮೀನುಗಾರಿಕೆಯಲ್ಲಿ ತೊಡಗಿದೆ  ಎಂದು ನಿಖರವಾಗಿ ಹೇಳಬಲ್ಲದು.

ಒಂದು ವೇಳೆ, ಕಡಿಮೆ ಮೀನುಗಳಿದ್ದು, ಶಾರ್ಕ್ ಗಳು ಹೆಚ್ಚಿರುವ ಕಡೆಯಲ್ಲಿ ಹಡಗು ಕೆಲಸ ಮಾಡುತ್ತಿದ್ದರೆ ಅದು ಪ್ರಶ್ನಾರ್ಹ ಎಂದು ಹೇಳುತ್ತಾರೆ ಬ್ರಿಯಾನ್ ಸುಲ್ಲಿವನ್, ಗೂಗಲ್ ಅರ್ಥ್ ಔಟ್ ರೀಚ್ ನ ಹಿರಿಯ ಪ್ರೋಗ್ರಾಮ್ ಮ್ಯಾನೇಜರ್. ಬಹುಮುಖ್ಯವಾಗಿ ಜಾಗತಿಕ ಮೀನುಗಾರಿಕಾ ಗಡಿಯಾರವು ಅಂಕಿ ಅಂಶಗಳನ್ನು ಎಲ್ಲರಿಗೂ ಕೈಗೆಟುಕುವಂತೆ ಇಟ್ಟಿದೆ. ಹಾಗಾಗಿ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಇದನ್ನು ಬಳಸಿಕೊಂಡು ಹೊಸ ಸಾಗರ ಸಂರಕ್ಷಿತ ಪ್ರದೇಶಗಳಿಗಾಗಿ ಲಾಬಿ ನಡೆಸಲು, ಸರ್ಕಾರ ಮತ್ತು ಸ್ವಯಂ ಸೇವಾ ಸಂಘಗಳು ಕಾನೂನು ಬಾಹಿರ ಮೀನುಗಾರಿಕೆಯನ್ನು ತಡೆಯಲು ಬಳಸುತ್ತವೆ.

ನಮಗೆ ಅತ್ಯುತ್ತಮ ಪರಿಸರ ಅಂಕಿ ಅಂಶಗಳು ಬೇಕಾದರೆ, ಲಾಭ ಮಾಡುವ ಕಂಪನಿಗಳು, ನುರಿತತಂತ್ರಜ್ನ್ಯರು ಮತ್ತು ಹೈ ಎಂಡ್ ಸೆನ್ಸರ್ ಗಳು ಬೇಕು. ಪ್ಲಾನೆಟ್ ಎಂಬ ಸಂಸ್ಥೆ 140 ಉಪಗ್ರಹಗಳನ್ನು ಬಳಸಿ  ದಿನಪೂರ್ತಿ ಇಡೀ ಭೂಮಿಯ ಫೋಟೋಗಳನ್ನು ತೆಗೆಯುತ್ತದೆ. ಈ ರೀತಿಯದಾದ ಡೇಟಾ ಗಳನ್ನು ಇನ್ಶೂರೆನ್ಸ್ ಮತ್ತು ಹಣಕಾಸು ವ್ಯವಹಾರ ಸಂಸ್ಥೆಗಳು ಇಷ್ಟ ಪಡುತ್ತವೆ. ಕಾರಣ ಅದರಿಂದ ಅವುಗಳು ಹವಾಮಾನ ವೈಪರೀತ್ಯಮತ್ತು ಅವಘಡಗಳ ಬಗ್ಗೆತಿಳಿಯ ಬಹುದು. ಪ್ಲಾನೆಟ್ ತನ್ನ ಸೇವೆಗಳನ್ನು ಗ್ಲೋಬಲ್ ಫಾರೆಸ್ಟ್ ವಾಚ್ ಗೂ ವಿಸ್ತರಿಸಿದ್ದು ಅದರ ಮೂಲಕ ಅರಣ್ಯ ನಾಶದ ಬಗ್ಗೆ ಮುಕ್ತ ಮಾಹಿತಿಯನ್ನು ನೀಡುತ್ತದೆ.

ಇದರೊಂದಿಗೆ ಗೂಗಲ್ ನ ಕ್ಲೌಡ್ ಆಧರಿತ ಡೇಟಾ ವು ಭೂ ಮೇಲ್ಮೈ ನೀರಿನ ಗುಣಮಟ್ಟದ ಬಗ್ಗೆ ಮಾಹಿತಿ ನೀಡುತ್ತದೆ. ಗೂಗಲ್ ಡಿಜಿಟಲೀಕರಣ ಮಾಡಿದ 30ವರ್ಷಗಳ ಮಾಪನದ ಡೇಟಾ ದಿಂದ ಬಡ ರಾಷ್ಟ್ರಗಳು ತಮ್ಮ ನೆಲದ ಮೇಲ್ಮೈ ನೀರಿನ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದು ಅದಕ್ಕನುಗುಣವಾದ ಸಂರಕ್ಷಣಾ ವಿಧಾನಗಳನ್ನು ರೂಪಿಸಿ ಕೊಳ್ಳುತ್ತಿವೆ.

ಈ ನಿಟ್ಟಿನಲ್ಲಿ ತಂತ್ರಾಂಶವು ಸಹ ಶ್ರೀ ಸಾಮಾನ್ಯರಿಗೆ ಸಹಾಯಕವಾಗಬಲ್ಲದು. ಸಾಗರ ಕಸದ ಉಗಮದ ಬಗ್ಗೆ ಅರಿಯಲು ಮೇಲೆ ಹೆಸರಿಸಿದ ಎರಿಕ್ ಸನ್ ಮತ್ತು ಕೆಲ ಮಾಲಿನ್ಯ ವಿರೋಧಿ ಸಂಸ್ಥೆಗಳು ಆಪ್ಒಂದನ್ನು  ಸಿದ್ಧಪಡಿಸಿವೆ. ಇದರಿಂದ ಲಾಸ್ ಏಂಜೆಲಿಸ್ ನದಿಯ ದಂಡೆಗಳ ಮ್ಯಾಪ್ಮಾಡಿ ಅದರ  ಸಹಾಯ ದಿಂದ ಕಸ ಎಲ್ಲಿಂದ ಬರುತ್ತಿದೆ ಎಂದು ತಿಳಿಯ ಬಹುದಾಗಿದೆ.ಇದನ್ನು ನಗರ ಗಳು ಕಸದ ಮಾಲಿನ್ಯ ತಡೆಗಟ್ಟುವಲ್ಲಿ ಬಳಸಿ ನದಿಯ ನೈರ್ಮಲ್ಯತೆಯನ್ನು  ಕಾಪಾಡ ಬಹುದಾಗಿದೆ. ಈಕ್ವಾಡೋರ್ ನಿಂದ ಹವಾಯಿಯ ಆಸಕ್ತ ಗುಂಪುಗಳು ಈ ಆಪ್ ಅನ್ನು ತಮ್ಮ ಸರ್ವೇ ಗಳಲ್ಲಿ ಬಳಸಲು ಉದ್ಯುಕ್ತರಾಗಿದ್ದಾರೆ.

ಎರಿಕ್ ಸನ್ ಹೇಳುವಂತೆ “ಎಲ್ಲವು ಅಳೆಯಲ್ಪಡುವಂಥಹವು “.  ನಾಗರೀಕರ ಪಾಲ್ಗೊಳ್ಳುವಿಕೆಗೆ ಪರಿಣಾಮಕಾರಿ ಕಾಲುಗಳಿರುತ್ತವೆ. ಚೀನಾ ದಲ್ಲಿ 300ಮಿಲಿಯನ್ ಜನರು ಅಲಿಪೆ ಯಿಂದ ರೂಪಿತಗೊಂಡ ಆಪ್ ನ ಬಳಸಿ ಅರಣ್ಯ ಹೆಚ್ಚಿಸಲು ಧನ ಸಹಾಯ ಮಾಡಿದ್ದಲ್ಲದೆ ಅದರ ಬೆಳವಣಿಗೆಯನ್ನು ಉಪಗ್ರಹ ಮತ್ತು ಭೂ ಕ್ಯಾಮೆರಾಗಳ ಸಹಾಯದಿಂದ ನಿಗಾ ವಹಿಸಲುಅನುಕೂಲಕರವಾಯಿತು. ಈಗಾಗಲೇ ಅವರು 13 ಮಿಲಿಯನ್ ಮರ ನೆಟ್ಟಿದ್ದಾರೆ.  ಈ ರೀತಿಯದಾದ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ  ಅವಶ್ಯಕವಾದ ರಾಜಕೀಯ ಬೆಂಬಲವು ಪರಿಸರ ರಕ್ಷಣೆಗೆ ದೊರೆಯುತ್ತದೆ.  ಕತ್ತಲಲ್ಲಿ ತಿರುಗಬೇಕಾದ ಪ್ರಮೇಯ ಬಂದಾಗ ಮೊದಲು ಮಾಡುವ ಕೆಲಸ ದೀಪವನ್ನು ಹತ್ತಿಸುವುದು. ಈ ನಿಟ್ಟಿನಲ್ಲಿ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಬಳಕೆ ಆಗಬೇಕು.

ಈ ರೀತಿಯದಾದ ತಂತ್ರಾಂಶಗಳ ಬಳಕೆ ನಮ್ಮ ಭಾರತ ಹಾಗೂ ಎಲ್ಲ ರಾಜ್ಯಗಳಲ್ಲೂ ಆಗಬೇಕಿದೆ ಆಗ ಮಾತ್ರವೇ ನಾವು ಈ ಕಸದ ಮಾಲಿನ್ಯ,  ನೀರು ಮಾಲಿನ್ಯ ದಂತಹುವುಗಳನ್ನು ತಡೆಗಟ್ಟಬಹುದು. ಏನಂತೀರಾ?