ಅಂದು ಗೋಲಿಬಾರಪ್ಪ....ಇಂದು ಲಾಠಿಏಟಪ್ಪ....

ಅಂದು ಗೋಲಿಬಾರಪ್ಪ....ಇಂದು ಲಾಠಿಏಟಪ್ಪ....

ಏನೋ ಬಸಣ್ಣ ಕಂಡಿದ್ದೀಲ್ಲಲ್ಲೋ..... ಎಲ್ಗೇ ಹಾಳಾಗಿ ಹೋಗಿದ್ಯೋ?. ನಾ..ನಾಲ್ಕಸಲಾ ನಿನ್ನ ಮನಿಕಡಿಗೆ ಹೋಗಿ ಬಂದೆ..... ಮನಿಗೆ ಬೀಗಾ ಜಡ್ದ್ ಎಲ್ಗೆ ಹೋಗಿದ್ದೀ?. ಎಷ್ಟಂತ ಹುಡ್ಕ ಬೇಕ್ ನಿನ್ನ!, ನಿನ್ನ ಮೊಬೈಲ್ ಬಂದ್ ಆಗೇತಿ...ನೀನು ಬಂದ್ ಆಗಿ... ಏನ್ ನಿನ್ನ ಹಕಿಕತ್...?ನಾ ಎಲ್ಲೆ ಇವಾ ಪ್ರವಾಹದಾಗ ಕೊಚ್ಚಿಕೊಂಡ್ ಹೋದ್ನೋ ಏನ್ ಇವಂದ್ ಸುಳಿವ ಇಲ್ಲ ಅಂತ್ ಹೆದ್ರಿದ್ದೆ!. ಮ್ಯಾಲಿನ ಮನಿ ಪರಮ್ಯಾನ್ ಹತ್ತಸತಾ ಕೇಳಿದ್ದೆ, ಬಸ್ಯಾ ಎಲ್ಲೆ ಹೋಗ್ಯಾನ ಅವ್ನ ಮನಿ ಆವಾರ್ ಬ್ಯಾರೇ ಬಿದ್ದೈತಿ ಅಂತ್?

ನಾ ಎಲ್ಗೆ ಹೋಗ್ಲೀ ಕಾಕಾ....  "ಹನ್ನಂದ್ ದಿವ್ಸಾತು ಒಂದ ಸವ್ನ ಹಿಡ್ದ ಮಳಿ ಬಿಡವಲ್ದು..... "ಮನೆ ಜಂತ್ವಾನ್ ಹಿಡ್ದು ಕುಂದ್ರಾಕ್ ಜಾಗಾ ಇಲ್ದಂಗ್ ಆಗಿತ್ತು... "ಮೊದ್ಲ ನನ್ನ ಮನಿ ಮೇಲ್‍ಮುದ್ದಿದು.... ಮಳಿಗೆ ಮಾಳ್ಗಿ ಮಣ್ಣ ನೆಂದ್ ನೆಂದ್ ತೊಲಿ, ಜಂತಿ ಕೊಳ್ತ ಹೋಗಿದ್ವು, ಮನಿ ಬಿಳ ಸ್ಥಿತಿಯೋಳ್ಗ ಇತ್ತು, ತಾಡಪತ್ರಿ, ಕಟ್ಟೀದ್ರೂ ಮನಿಸೋರೋದು ನಿಲ್ವಲ್ದು...!. "ಮನ್ಯಾಗ್ ಹೆಂಡ್ತಿ- ಮಕ್ಕಳು ಕೈಯಾಗ ಜೀವಾ ಹಿಡ್ಕಂಡ್ ಮೂರು ದಿವ್ಸ್ ಇದ್ವೀ.  ಮಳಿ ಹೆಚ್ಚಾಗಿದ್ರಿಂದಾ ಹೊರ್ಗಿನ್ ಆವಾರ್ ಕುಸ್ದಬಿತ್ತು, "ಬಿದ್ದ ಮನ್ಯಾಗ್ ಹೆಂಗ್ ಇರೋದು  ಅಂತ್ ಹೆಂಡ್ತಿ, ಮಕ್ಕಳನ್ನ ಕಟಿಗೊಂಡು ಊರಬಿಟ್ಟಿದ್ದೆ ನೋಡ್ರೀ".   

ಅಲ್ಲೋ ಎಂತಾ ಮನ್ಷಾ ಅದಿಯೋ, ಅಲ್ಲೋ "ನಾವೇಲ್ಲಾ ನಿನ್ನ ಪಾಲ್ಗೆ ಸತ್ತಹೋಗಿದ್ವೀ ಅಂತ್ ತಿಳ್ಕೋಂಡಿದ್ದೆ ಹೆಂಗ್"?. "ಅಲ್ಲೋ ಒಂದ್ ಮಾತಾ ಹೇಳಬಾರದೇನೋ. ನಮ್ಮ ಮನ್ಯಾಗ ಇರಬಹದಿತ್ತಲ್ಲೋ"!. ಮನ್ಷಾ ಅಂದಮ್ಯಾಕ್ ಕಷ್ಟಾ-ಸುಖಾ ಬರೋವ.

ಮತ್ತೋಬ್ರಿಗೆ ನನ್ನಿಂದ್  ತೊಂದ್ರಿಯಾಕ್ ಅಂತ್ ನಾನಾ ನಿಮ್ಗ ಹೇಳಾಕ ಹೋಗಲಿಲ್ಲ ಕಾಕಾರ,  ಅದು ಅಲ್ದ "ಅಸ್ಲಿಮಳಿಗೆ ಸಸ್ಲಿ ಬೆಟ್ಟಾ ಏರಿತ್ತೂ.. ಅನ್ನೋಹಂಗ್ ಒಂದ್ ಸಮ್ನ ಮಳಿ ಸುರ್ಯಾಕ ಹತ್ತಿದ್ದು ಬಿಟ್ಟು ಬಿಡ್ದಂಗ್ 11ದಿವ್ಸ ಸುರದೈತಿ. "ಇಂತಾ ಮಳಿಗೆ ಯಾವ್ ಮನಿ ತಡಿತಾವ್ರೀ ಇವನವ್ನ!. ಆರ್‍ಸಿಸಿ ಅಲ್ಲಾ ಏಳ್‍ಸಿಸಿ ಮನಿನ್ ಸೋರಾವ್ರೀ". ಅದ್ಕ ನಾನು ಇಲ್ಲಿಬ್ಯಾಡ  ಬಿಡು ಅಂತ್ ನಮ್ಮ ಬೀಗರ್ ಊರು ಹೊಸರಿತ್ತಿ ಒಳ್ಗ ನಮ್ಮ ಬೀಗರಮನಿ ಹತ್ರ ಹೊಸಾಮನಿ ಕಟ್ಟಿದ್ದ ಖಾಲಿ ಇತ್ತು ಅಂತ್ ಗೊತ್ತಾತು. "ಮನಿ ಮಾಲಕರಿಗೆ ಹೇಳಿಕೊಂಡು 15ದಿವ್ಸಕ್ಕ ಅದ್ನ ಬಾಡ್ಗಿ ತಗೊಂಡು ಇದ್ದು ಮಳಿ ಹೋದ ಮ್ಯಾಲಿ ಈಗ ಊರ್ಗೆ ಬಂದವಿ ನೋಡ್ರೀ"...

ನಮ್ಮ ಫಜೀತಿ ಬ್ಯಾಡ್ರೀ. ಅಲ್ಲೆ ನೋಡೀದ್ರ ಕರೆಂಟ್ ಇಲ್ಲ, ಮೊಬೈಲ್ ಜಾರ್ಜ ಆಗವಲ್ವು. ಮ್ಯಾಲ ಆ ಊರು ನದಿ ದಂಡಿಮ್ಯಾಗ್ ಇರೋದ್ರಿಂದಾ ಪ್ರವಾಹದ ನೀರು ನುಗ್ಗಿ ನಾವು ಇದ್ದ ಮನಿನೂ ನೀರಾಗ ಮುಳ್ಗಿಹೋತು. ಅಲ್ಲಿ "ಬಸ್‍ಸ್ಟ್ಯಾಂಡ್ ಸೊಂಟ್‍ಮಟಾ ನೀರಾಗ ಮುಳ್ಗಿತ್ತು....ಜೀವಾ ಉಳದ್ರ ಸಾಕು ಅಂತ್ ಮತ್ತ ಅಲ್ಲಿಂದ ಗಂಜಿಕೇಂದ್ರದಾಗ ನಾಲ್ಕದಿವ್ಸ ಇದ್ದು ಈಗ ಊರ್ಗೆ ಬಂದೇವಿ ನೋಡ್ರೀ".

ಶ್ಯಾಣ್ಯಾ ಅದೀ ಬಿಡೂ, ಈಗ್ಯಾಗ ಊರ್ಗೆ ಬರ್ಯಾಕ ಹೋದಿ, ಅಲ್ಲೆ ಇರ್ಬೇಕಿಲ್ಲ!. ಗಂಜಿಕೇಂದ್ರದಾಗ್!

ಊರಬಿಟ್ಟ ಅದೆಂಗ್ ಗಂಜಿಕೇಂದ್ರದಾಗ ಇರಾಕ ಆಕ್ಕೇತ್ರಿ ಕಾಕಾ!. ಹುಟ್ಟಿದೂರು, ಹುಟ್ಟಿಬೆಳ್ದಮನಿ, ನೆರಿ-ಹೊರಿ ಇದ್ನೇಲ್ಲಾ ಬಿಟ್ಟ ನನ್ಗ ಇರಾಕ ಆಗದಿಲ್ರೀ?.  ಅದು ಅಲ್ದ "ಮನಿ ಒಳ್ಗ ಬಟ್ಟಿ,ಬರಿ, ಪಾತ್ರಿ, ಪಡ್ಗ, ಅಡ್ಗಿ ಸಾಮಾನಾ, ಕಾಳು, ಕಡಿ ಸಿಕ್ಕಂಡಾವು, ಇವ್ನ ತಕ್ಕಾಬೇಕಲ್ರೀ".

"ಅಲ್ಲೋ ನಿನ್ನ ಹಳೆಮನಿ ಪೂರ್ತಿ ಬಿದೈತಿ, ಈಗ್ ಎಲ್ಲಿರ್ತೀ?.  ಸುಮ್ಕ ಅಲ್ಲೆ ಇರಬೇಕಿಲ್ಲ"!.  "ಅದೇಂಗ್ ಗಂಜಿಕೇಂದ್ರದಾಕ ಇರಾಕ್ ಆಕೈತ್ರೀ. ಕೆಲ್ಸಾ ಇಲ್ಲ ಬಗ್ಸಿ ಇಲ್ಲಾ...ಪುಗ್ಸಟ್ಟೆ ಕೂಳ ಹಾಕ್ತಾರಾ ಅಂತ್ ಇದ್ರ ಹೆಂಗ್".? "ಮಳಿ ಕಡ್ಮಿ ಆಗೇತಿ ಅಂತ್ ಸರ್ಕಾರದವ್ರು ಗಂಜಿಕೇಂದ್ರಾ ಮುಚ್ಚತೇವಿ, ಶಾಲಿ ಸುರುವಾಕ್ಕಾವು, ನೀವು ಮನಿಗೆ ಹೋಗ್ರಿ. "ಸರ್ಕಾರದಿಂದ ನಿಮ್ಗ ಪರಿಹಾರ ಬಂದಮ್ಯಾಲ್ ನಿಮ್ಮನ್ ಕರ್ದು ಪರಿಹಾರ ಕೊಡ್ತವಿ ಅಂತ್ ಹೇಳಿ ಕಳ್ಸಿದ್ರು. ಅದ್ಕ ಊರಕಡಿಗೆ ಬಂದ್ವಿ ನೋಡ್ರೀ.

"ಗಂಜಿಕೇಂದ್ರದಾಗ ಉಣ್ಣಾಕ ಹೆಂಗ್ ಇತ್ತೋ"?, ನಿನ್ನ ಆಕಾರ ನೋಡೀದ್ರ ದಪ್ಪಾದಂಗ್ ಕಾಣ್ತೀ. ಚಲೋ ಚಲೋದು ಉಂಡು ಹಿಂಗ್ ಆಗಿಯೋ ಹೆಂಗ್?.

ಅಲ್ರೀ "ಗಂಜಿಕೇಂದ್ರ ಮನಿ ಹಂಗ್  ಎಲ್ಲೆಆಕೈತ್ರಿ"?. ಅದ, ಸಾಲಿ ಒಳ್ಗ ಮಕ್ಕಳಿಗೆ ಕೊಡ್ತಾರಲ್ರೀ ಬಿಸಿಯೂಟದ ಅನ್ನ-ಸಾರು, ಅದ್ನ ಮಾಡಿ ಹಾಕತಿದ್ರು.  "ದಿನಾನು ಅನ್ನಾ ಉಂಡು ಸಾಕಾಗಿತ್ತು, ನಾ ರೊಟ್ಟಿ ತಿನ್ನಾವಾ.. ಅಲ್ಲೆ ರೊಟ್ಟಿ ಇರ್ತಿರಲಿಲ್ಲ". "ಮೇಲಾಗಿ ಮಕ್ಕಳ ಶಾಲಿ ಐತಿ ,ಹೆಂಗಾದ್ರು ಸರಿ ಊರಾಗ ಇದ್ದ ಬದ್ಕೋಣ ನಡಿ ಅಂತ್ ಮನಿಯಾಕಿ ಸ್ವಾಟಿಗೆ ತಿವದ್ಲು, ಅದ್ಕ ಇಲ್ಗೆ ವಾಪಾಸ್  ಬಂದ್ವಿ ನೋಡ್ರೀ".

"ಅದ್ಕ ಸ್ವಾಟಿ ಉಬ್ಬೇತೇನು, ಹೆಗಲಾಗ್ ಗಂಟ್ ಹೊತ್ತಿಯಲ್ಲ ಏನೈತಿ ಅದ್ರಾಗ"?.

ಏನೂ ಇಲ್ಲಾ ಬೀಡ್ರಿ...., "ಮೊನ್ನೆ ಚಿತ್ರದುರ್ಗದ ಮೂರುಘಾಶರಣ್ರು ಗಂಜಿಕೇಂದ್ರಕ್ ಭೇಟ್ಟಿ ಕೊಟ್ಟಿದ್ರು, ಎಲ್ಲಾರಿಗೂ ಚದ್ದಾರ, ಬೆಡ್‍ಸಿಟು, ಬ್ರೆಡ್, ಬಿಸ್ಕಿಟು ಕೊಟಗಂತ್ ಬಂದ್ರು,  ನಾವಿದ್ದ ಕ್ವಾಣಿಗೆ ಬಂದ ನನ್ನ ನೋಡಿದವ್ರ ನನ್ನ ಮಾತಾಡ್ಸಿ ಯಾಕೋ ಬಸಣ್ಣ ನೀ ಇಲ್ಲಿ ಬಂದಿ, ನಿನ್ನ ಮನಿನೂ ಬಿದೈತಾ ಅಂತ್ ಮಾತಾಡ್ಸಿ ನನ್ನ ಇಬ್ರು ಮಕ್ಕಳಿಗೆ ನಾಲ್ಕು ಚಾದ್ದಾರ, ಬೆಡ್ ಸಿಟು, ಬ್ರೆಡ್, ಹಣ್ಣು-ಹಂಪ್ಲಾ ಕೊಟ್ಟಿದ್ರು" ಅವ್ನ ಗಂಟಿನ್ಯಾಗ ಕಟಿಕೊಂಡು ಬಂದೇನಿ..

ಅಲ್ಲೋ "ಮಠಾಧೀಶರು ಒಳ್ಳೆ ಕೆಲ್ಸಾಮಾಡ್ಯಾರಲ್ಲೋ"!.  "ಸ್ವಾಮಿಗೋಳು ಅಂದ್ರ ಮಠಾದ್ಗಾ ಚಲೋ ಚಲೋದು ಹೊಡ್ಕಂತ್ ಸಜ್ಜ ಇರ್ತಾರ" ಅಂತ್ ನಾ ತಿಳ್ಳಂಡಿದ್ದೆ.....? ಆದ್ರ "ಜನ್ರು ಕಷ್ಟದಾಗ ಅದ್ಯಾರ ಅಂತ್ ತಿಳ್ಕಂಡ್ ಜನ್ರ ಹತ್ರಾ ಬಂದ್ ಜನ್ರ ಕಷ್ಟಕ್ಕ ಆಗ್ಯಾರಲ್ಲ ಒಳ್ಳೇದಾತು ಬಿಡು".

ಶರಣ್ರು ಅಷ್ಟ ಬಂದಿದ್ದಿಲ್ರೀ. ಅವ್ರ ಜೊತಿಗೆ "ಹೊಸಮಠದ ಅಜ್ಜಾರು, ಹಳೆಮಠದವ್ರು, ಹುಕ್ಕೇರಿಮಠದ ಅಜ್ಜಾರು, ಅಕ್ಕಿಮಠದ ಅಜ್ಜಾರು, ಜೈನ್‍ರ ಸಂಘದವ್ರು. ವ್ಯಾಪಾರಿಗಳ ಸಂಘದವರು, ಕನ್ನಡ ಸಂಘದವ್ರು, ಒಟ್ಟಿನ್ಯಾಗ ಮನುಷತ್ವ ಇರೋ ಎಲ್ಲಾರು  ಬಂದು ಅವ್ರು ರೊಟ್ಟಿ, ಅಕ್ಕಿ, ಬ್ಯಾಳಿ, ಬೆಲ್ಲಾ, ರವಾ, ಉಂಡಿ, ಅವಲಕ್ಕಿ, ಕಸಬರ್ಗಿ, ಬ್ರೆಶ್, ಸಾಬೂನಾ, ಟವಲು. ಚೊಣ್ಣ, ಕೈವಸ್ತ್ರ ಹಿಂಗ್ ಮನಿತನ್ಕ ಬೇಕಾದ ಎಲ್ಲಾ ವಸ್ತುಗಳ್ನ  ಸಾಕ ಸಾಕ ಅನ್ನೋ ವಷ್ಟು ಕೊಟ್ಟು ಹೋಗ್ಯಾರ್ರೀ".

"ಎಲ್ಲಾರು ಸೇರಿ ಒಟ್ಟಿನ್ಯಾಗ ಒಳ್ಳೆ ಕೆಲ್ಸಾಮಾಡಾರಲ್ಲ! ಆತು ಬಿಡು. ಈಗ ಮುಂದಕ್ಕ ಏನ ಮಾಡವಾ.? ಮನಿ ಅಂತು ಪೂರ್ತಿ ಬಿದೈತಿ ಮುಂದ್ ಹೆಂಗ್"?.  

ಹೆಂಗ್ ಅಂದ್ರ ... ಮನಿ ಬಿದ್ರೇನಾತ್ರೀ, ಕಣಾ ಐತಲ್ರೀ. ಅಲ್ಲೆ ಸದ್ಯಕ್ಕ ತಗ್ಡಿನ ಶೆಡ್ಡ ಹಾಕತೇನಿ.  ಮೊನ್ನೆ ಶಾನಭೋಗ ಕುಲಕರ್ಣಿ ಪೋನ್ ಮಾಡಿದ್ದ, ಬಸಣ್ಣಾ ನಿನ್ನ ಮನಿ ಸರ್ವೇ ಮಾಡಬೇಕು, ತಹಶೀಲ್ದಾರ ಸಾಹೇಬ್ರು ಹೇಳ್ಯಾರ. "ಬಿದ್ದಮನಿ ಮುಂದ ನಿನ್ನ ನಿಲ್ಸಿ ಪೋಟೋ ತಗ್ಸ್ ಬೇಕಂತ್" ಅರ್ಜಂಟ್ ಎಲ್ಲಿದ್ರೂ ಬರಾಕಬೇಕು ಅಂತ್ ಹೇಳಿದ್ರು... ಮನಿಕಟಿಗೊಳ್ಳಾಕ ಅದೇಷ್ಟ್  ಪರಿಹಾರ ಕೊಡ್ತಾರಂತ ನೋಡಬೇಕು". "ಸರ್ಕಾರದವ್ರು ಪರಿಹಾರ ಕೊಡ್ಲಿಲ್ಲಾಂದ್ರ  ನೀವ್ ರೆಡ್ಡಿ ಬ್ಯಾಂಕ್‍ನ್ಯಾಗ ಮ್ಯಾನೇಜರ್ಗ ಹೇಳಿ ಒಂದೈವತ್ತ ಸಾವ್ರ ಸಾಲಾ ಕೊಡ್ಸ್ರೀ, ನಿಧಾನಕ್ಕ ಕಟಿಗೊಂಡಹೊಕ್ಕನೀ".

ಲೇ... ಲೇ...ಎಪ್ಪಾ,  "ಈಹಿಂದ್ ಮಾಡಿದ್ದ ಇತ್ತತೈದ್ ಸಾವ್ರ ಸಾಲ ಹಂಗ್ ಐತಿ", "ಮ್ಯಾನೇಜರು ಮೊನ್ನೆ ಎರಡಸಲಾ ಪೋನ್ ಹಚ್ಚಿ,  ನೀ ಸಾಲದ ಕಂತ್ ಕಟ್ಟಿಲ್ಲಾ ಅನ್ನೋದ ಹೇಳಿ ಸಾಲದ ಕಂತಕಟ್ಟಾಕ ಹೇಳ್ರೀ ಅಂತ್ ಗಂಟಬಿದ್ದಾನಾ".... ನೀ ನೋಡಿದ್ರ ಮತ್ತ ಸಾಲಕ್ಕ ಗಂಟ ಬಿದ್ದೀ. 

ಹೌದ್ರೀ ಕಾಕಾರ "ಮಳೆ ನಮ್ಮ ಜೀವ್ನಾನ ಪೂರ್ತೀ  ಮೂರಾ ಬಟ್ಟಿ ಮಾಡೇತಿ!. ಮನ್ಯಾಗ ಇದ್ದಿದ್ದ ಕಾಳುಕಡಿ, ಹಾಸ್ಗಿ-ಹೊದ್ಕಿ, ಬಟ್ಟಿ, ಬರಿ, ಚಡ್ಡಿ, ಬನೀನು, ಸೀರಿ ಏನೇನೂ ಉಳಿದಿಲ್ರ ನೋಡ್ರೀ". "ಎಲ್ಲಾನು ಆ ಹೊಳಿ ಗಂಗವ್ವ ತಗೊಂಡು ಹೋಗ್ಯಾಳ್ರೀ". ಮಕ್ಕಳು-ನಾವು ಉಟ್ಟ ಬಟ್ಟಿಮ್ಯಾಲ ಅದೇವಿ, ಏನೋ ಆ ಪುಣ್ಯಾತ್ನರು ಸ್ವಾಮಿಗಳು ಬಂದು ನಾಲ್ಕ ಅರ್ವಿ, ಅಕ್ಕಿ,ಜ್ವಾಳ ಕೊಟ್ಟಹೋಗ್ಯಾರಂತ ನಮ್ಮ ಜೀವ ಹೆಂಗೋ ನಡದೈತಿ. 

ಅಲ್ಲೋ "ದಿಲ್ಲಿಂದಾ ಶಾ, ರೇಣವ್ವ ಬಂದಿದ್ರಲ್ಲ ಅವ್ರೇನು ಕೊಡ್ಲಿಲ್ಲನೂ ನಿಮ್ಗ"?.

ಅವ್ರೇನು ಕೊಡ್ತಾರಿ ಹಂಗ್ "ವಿಮಾನ್ದಾಗ ಬಂದು ಕೈಬಿಸಿಗೆಂತ ಬಾಯಿ, ಮೂಗಿಗೆ ಬಟ್ಟಿಕಟಿಗೊಂಡು ಬಂದ್ ಅಲ್ಲೀಟ-ಇಲ್ಲೀಟ್ ಓಡಾಡ್ದೆಂಗ್ ಮಾಡಿ, ನಾವು ದಿಲ್ಲಿಗೆ ಹೋಗಿ ಹಿಂದ್ಕ-ಮುಂದ್ಕ ವಿಚಾರಾಮಾಡಿ ಪರಿಹಾರ ಹೆಂಗ್ಯ ಕೊಡ್ಬೇಕು, ಯಾರಿಗೆ ಕೊಡ್ಬೇಕು, ಎಷ್ಟೆಷ್ಟು ಕೊಡ್ಬೇಕು,  ಅನ್ನೋದನ್ನ ಹೇಳ್ತವಿ ಅಂತ್  ದಿಲ್ಲಿ ವಿಮಾನ ಏರಿದ್ರು"?.

ಅಲ್ಲೋ ಸಿ.ಎಂ.ಯಡೆಯೂರ್ಸ ಬಂದಿತ್ತಲ್ಲ, ಅದು ಏನು ಕೋಡ್ಲಿಲ್ಲನು...?

ಯಾಕ ಕೊಡ್ಲಿಲ್ಲರೀ... "ಬರೋಬ್ಬರಿ ನೆನ್ಪ ಇಡೋವಷ್ಟು ಬಾಸುಂಡಿ ಬರೋಹಂಗ್ ಪೊಲೀಸ್ರ ಕಡಿಂದ ಕೊಡ್ಸಿತೇತಿ"?. 

ಅದೇನ ಬಿಡ್ಸಿ ಹೇಳೋ... ಮಾರಾಯ?

ಏನ್ ಹೇಳಬೇಕ್ರೀ. ಮೊನ್ನೆ ಮುಖ್ಯಮಂತ್ರಿಗಳು ಕೊಣ್ಣೋರಿಗೆ ಬಂದಿದ್ರು, ಅಲ್ಗೆ  "ಯಡೆಯೂರಪ್ಪ ಕಾಟಾಚಾರಕ್ಕ ಬಂದು ಜನ್ರ ಕಷ್ಟಾ ಕೇಳ್ದಂಗ್ ಹಂಗ್ ಹೊಂಟಿದ್ರು" ಅದ್ಕ ಜನ "ನಾವು ಆರದಿವ್ಸಾತು ಕೂಳು-ನೀರು ಇಲ್ದಂಗ್ ಅದೇವಿ. ನಮ್ಮಮನಿಗೋಳು ಮಣ್ಣಪಾಲಾಗ್ಯಾವು. ಈಗ ಬಂದಿರೇನ್ರೀ, ನಿಮ್ಮ ಮನಿಯವ್ರಿಗೆ ಇಂತಾ ಕಷ್ಟ ಬಂದಿದ್ದರ ಗೊತ್ತಾಕಿತ್ತು ನಿಮ್ಗ. ನಿಮ್ಮನ್ನ ಹಂಗ್ ಹೋಗಾಕ ಬಿಡಂಗಿಲ್ಲ, ನಮ್ಗ ಮನಿಕೊಡ್ಸಿಹೋಗ್ರೀ ಅಂತ್ ಸಿಎಂ ಕಾರ್ಗೆ ಅಡ್ಡನಿತ್ಕಗೊಂಡಿದ್ದರು". ಅದ್ಕ "ಸಿಎಂನ ಮುಂದ ಈ ಖಾಕಿ ಮಂದಿ ಕೈಯಾಗ ಹಿಡ್ಕಂಡಿದ್ದ ಬಡ್ಗಿಲೆ ದನಕ್ಕ ಬಡ್ದಂಗ್ ಬಡ್ದು ಮುಖ್ಯಮಂತ್ರಿ ಕಾರ್ಗೆ ಅಡ್ಡನಿಂತೋರ್ನ ಬಡ್ದ ಹಿಂದಕ್ಕ ಕಳ್ಸಿ ಕಾರ್ಗೇ ಹೋಗ್ಯಾಕ ದಾರಿ ಮಾಡಿಕೊಟ್ರೂ".

ಅಲ್ಲೋ "ಸಿಎಂಗ್ ಹಿಂಗ್ ಅಸಂಯಿ ಮಾಡಬಾರ್ದೋ."..

ಮತ್ತಿನ್ನಹೆಂಗ್ಯ ಮಾಡಬೇಕ್ರೀ,,, "ಆ ಮನ್ಷಾ ಆಧಿಕಾರ ಇದ್ದಾಗ ಒಂದು, ಅಧಿಕಾರ ಇಲ್ದಾಂಗ ಒಂದು ಮಾತಾಡತಾನ್". "ಕೇಂದ್ರದಾಗ ನಮ್ಮ ಸರ್ಕಾರ ಐತಿ, ರಾಜ್ಯದಾಗೂ ನಮ್ಮ ಸರ್ಕಾರ ಬಂದ್ರ ರಾಜ್ಯದ ಜನ್ರೀಗೆ ಹಾಲು- ತುಪ್ಪದ ಹೊಳಿ ಹರ್ಸತನಿ, ಜನ್ರೀಗೆ ತಜಾಮಹಲ್ ಕಟ್ಟಸತೇನಿ, ಬಿಜಾಪುರ ಗೋಲಗುಮ್ಟಾ ಕಟ್ಟಸತನಿ" ಅಂತ ಹೇಳಿದ್ದ ಮನಷ್ಯಾ "ಈಗ ನೋಡ್ರೀ ನಮ್ಮ ಗೋರಿನೂ ಕಟ್ಸೋಹಂಗ್ ಕಾಣಂಗಿಲ್ಲ"?. ನಮ್ಮನ್ನ ನೋಡಿದ್ರು ನೋಡದಂಗ್ ಹೊಂಟಾನ್"!

"ನಾವು ಸುರಿಯೋ ಮಳಿ ಒಳ್ಗ ತೋಸಿಗೊಂಡು ತಪ್ಪಡ್ಯಾಗೇವಿ. ಇವಾ ಕಾರಿನ್ಯಾಗ ಕತುಗಂಡ್ ಮಸ್ಡಿನ ಸಿಂಡ್ರಿಸೆಗೆಂಡು ಕಾರಬಿಟ್ಟಿ ಇಳೆವಲ್ಲಾ.....

ಅಲ್ಲೋ "ಮುಖ್ಯಮಂತ್ರಿ ಅಂದ್ರ ಸಾವಿರ್ರಾರ್ ಕೆಲ್ಸ ಇರ್ತಾವು",  "ರಾಜ್ಯಕ್ಕ ರಾಜ್ಯಾನ ಪ್ರವಾಹಕ್ಕ ಒಳ್ಗಾಗಿ ಜನ ಸಂಕಟದಾಗ ಅದಾರ ಅವ್ರ ಗೋಳು ಕೇಳಬೇಕಲ್ಲ". ಹಿಂಗಾಗಿ ಅವಸರದಾಗ ಹೊಂಟಿರಬೇಕು!. "ಹೊತ್ತಾಗಿ ಕತ್ಲಾದ್ರ ಸಿಎಂ ಹರ್ಯಾಡೋ ವಿಮಾನದ ಕಣ್ಣ ಕಾಣ್ಸಂಗಿಲ್ಲ?. ಅದ್ಕ ಸಿಎಂ ಅವ್ಸ್ರ ಮಾಡಿ ಹೊಂಟಿರ್ಬೇಕು"....!

ಕಾಕಾ ಸುಮ್ನ ನನ್ನ ಹೊಟ್ಟಿ ಉರ್ಸಬ್ಯಾಡ್ರೀ,  ಅಲ್ಲಾ "ಈ ಮನ್ಷಾ ಹಸ್ರ ಟವಲ್ ಹಾಕ್ಕೋಂಡ ಏನ್ ಮಾಡಿದ್ದ ಅಂತ್ ಗೊತ್ತಿಲ್ಲ ಅನಬ್ಯಾಡ್ರೀ" ಹಿಂದ್ "2008ರಾಗ ಮುಖ್ಯಮಂತ್ರಿ ಆಗಿದ್ದ ವೇಳ್ಯಾದಾಗ ಹಾವೇರಿಯೋಳ್ಗ ರೈತ್ರು ಗೋಬ್ರಾ ಕೇಳಿದ್ರ ಗೋಲಿಬಾರ ಮಾಡ್ಸಿ ಗೋಬ್ರಾ ಕೇಳಿದ್ದ ರೈತರಿಗೆ ಗೊಂಡೇಟ ತಗೋಳ್ರೀ ಅಂತ್ ಕೊಡ್ಸಿದ್ದ. ಈಗ 2019ರಾಗ ಮತ್ತ ಮುಖ್ಯಮಂತ್ರಿ ಆಗ್ಯಾನ ಈಗ ಮನಿ ಕೇಳಿದ್ರ ಜನ್ರಿಗೆ ಲಾಟಿ ಏಟ್ ಕೊಡ್ಸಾನ್. ಅವಾಗ ಗೋಲಿಬಾರಪ್ಪ, ಇವಾಗ ಲಾಠಿ ಏಟಪ್ಪ ಆಗ್ಯಾನ ಈಮನ್ಷಾ,  ಇದ ಏನ್ರೀ ಇವ್ರ ರಾಮರಾಜ್ಯ, ಇದು ರಾಮರಾಜ್ಯಾ ಅಲ್ಲ ರಾವಣರಾಜ್ಯ. ರಾವಣ ರಾಜ್ಯ. 

ಲೇ ಎಪ್ಪಾ ಮೆತ್ತಗ ಮಾತಾಡೋ ಮಗ್ನ, ನಿನ್ನ ಜೊತಿಗೆ ನಾನು ಅದೇನಿ ಅಂತ್ ಮೊದ್ಲ ಹೋಯ್ಯಕೊಳ್ಳತಾರ. ಮೆತ್ತಗ ಮಾತಾಡೋ. "ಸಮಾದಾನಾ ಮಡ್ಕೋಳೋ ತಮ್ಮ ಸಮಾದಾನ. ಇಷ್ಟು ಸಿಟ್ಟು ಸೆಡ್ವು ಒಳ್ಳೇದಲ್ಲ, ನಿಹಂಗ್ ಕೂಗಾಡಿದ್ರ ಕಳ್ಳಂಡಿರೋ ಮನಿ-ಮಠಾ ಸಿಗೋದಿಲ್ಲ. ನಾಳೆ ನಿಮ್ಮ ಪಕ್ಷದವ್ರು ಯಾರರ ನಿಮ್ಮ ಹಾಪ್‍ಪ್ಯಾಂಟ್ ಲೀಡರಗಳಿಗ್ಗೆ ಕಡ್ಡಿ ಮಾಡಿ ನಿನ್ನ ಬಗ್ಗೆ ಕಿವಿಕಡ್ದ್ರ ಬಿದ್ದೀರೋ ಮನಿಗೆ ಬರೋ ಪರಿಹಾರನು ಬರೋದಿಲ್ಲೋ." ?

"ಬರ್ಲಿಕ್ಕರ ಬರಲಿಲ್ಲ ಬೀಡ್ರೀ, ಅಷ್ಟ ಹೊಟ್ಟಿ ಉರ್ಯಾಕ ಹತ್ತೇತಿ".  ಈಖಾದಿ, ಖಾಕಿ ಮಂದಿಗಿಂತ್ ಇದ್ರಿದ್ದ್ರಾಗ ಈಕ್ಯಾವಿ ಮಂದಿನ ಬೇಶ" ಅನಸಾಕ ಹತ್ತೇತಿ ನೋಡ್ರೀ. "ಈಖಾದಿ ತೋಟ್ಟೋರು ಹಾದಿ ಬಿಟ್ರು"!, "ಖಾಕಿ ತೊಟ್ಟೋರು ಅಧಿಕಾರ್ದಾಗಿರೊ ರಾಜಕಾರಣ್ಣಿಗಳ ಗುಲಾಮರಾಗ್ಯಾರ?. ಇದ್ದಿದ್ದ್ರಾಗ "ಅಲ್ಲೋಬ್ರು, ಇಲ್ಲೋಬ್ರ ಕ್ಯಾವಿತೊಟ್ಟೋರೂ ಜನ್ರ ಕಷ್ಟಕ್ಕ ಆಗ್ಯಾಕ ಹತ್ಯಾರ". 

ಅಂತಾದ್ರಾಗ "ಸುಮ್ಮನ್ ಇರ್ಲಾರ್ದ ಇರ್ವಿ ಬಿಟ್ಟಕೊಂಡ್ರು" ಅನ್ನೋ ಹಂಗ್ ಈಹೊನ್ನಾಳಿಹೋರಿಕರಾ ರೇಣ್ಕಾಚಾರಿ  "ನಡ್ಕಂಡ್ ಓಡಾಡೋ ನೀರಿನೊಳ್ಗ ತೆಪ್ಪದ ಹುಟ್ಟುಹಾಕಿ ಅದು ನಿತ್ಕೊಂಡು ಹುಟ್ಟಹಾಕಾಕ ಹೋಗಿ ಜನ್ರಕಡಿಂದ ಹೆಟ್ಟಸಿಗೊಂಡತಿ"!, ಇನ್ನು ಗೋಕಾಕದ ಬಾಲಚಂದ್ರ ಸಾವ್ಕಾರ ಸಂತ್ರಸ್ತರಿಗೆ ಲಗೂನ ಮನಿಕಟ್ಸಿಕೊಡ್ಲಿಲ್ಲಾಂದ ಯಡೆಯೂರಪ್ಪನ ಸರ್ಕಾರನ ಕೆಡ್ವತವಿ ಅಂತ ಹೇಳೇತಿ, ಎಂಎಲ್‍ಎಗಳು ಸಂತ್ರಸ್ತರಿಗೆ ನೆರವಾಗೋದು ಬಿಟ್ಟು ನಾಲ್ಗಿನ ಹೆಂಗ್ ಬೇಕಂಗ್ ಹರಿ ಬಿಡಾಕ ಹತ್ಯಾರ."ಹಾಳಾಗಿ ಹೋಗ್ಲಿ ಬಿಡ್ರೀ ಈಖಾದಿ, ಖಾಕಿಯವ್ರ ಸಹವಾಸ್" ನಡ್ರೀ ಬ್ಯಾಂಕಿನ ಕಡಿಗೆ ಹೋಗೋಣ ನಡ್ರೀ... ಮನಿಕಟ್ಟಕಾ ಸಾಲ ಕೊಡ್ಸ ನಡ್ರೀ ಎನ್ನುತ್ತ ಇಬ್ಬರು ಬ್ಯಾಂಕಿನ ಕಡೆ ನಡದ್ರು.