ಮುಳುಗುತ್ತಿರುವ ಬದುಕೂ ಹುಲ್ಲು ಕಡ್ಡಿಯ ದರ್ಪವೂ

ಅರಣ್ಯ ರಕ್ಷಣೆ, ಪರಿಸರ ರಕ್ಷಣೆ, ಹಸಿರು ರಕ್ಷಣೆ, ಜಲಸಂರಕ್ಷಣೆ, ಬದುಕುವ ಹಕ್ಕು, ಆರೋಗ್ಯದ ಹಕ್ಕು, ಶಿಕ್ಷಣದ ಹಕ್ಕು,  ನಾಗರಿಕ ಹಕ್ಕು ಇವೆಲ್ಲವೂ ನಾಗರಿಕ ಪ್ರಜ್ಞೆಯಿಂದ ಮರೆಯಾಗುತ್ತಿದ್ದು ಈ ಹಕ್ಕುಗಳ ಬಗ್ಗೆ ಮಾತನಾಡುವವರೆಲ್ಲರೂ ಬುದ್ಧಿ ಜೀವಿಗಳೆಂದೋ, ಗಂಜಿ ಗಿರಾಕಿಗಳೆಂದೋ, ಪ್ರಗತಿಪರರೆಂದೋ ಗುರುತಿಸಲ್ಪಡುತ್ತಾರೆ. ಹೆಜ್ಜೆ ಮುಂದುವರೆದಂತೆ ದೇಶದ್ರೋಹಿಗಳೂ ಆಗಿಬಿಡುತ್ತಾರೆ.

ಮುಳುಗುತ್ತಿರುವ ಬದುಕೂ ಹುಲ್ಲು ಕಡ್ಡಿಯ ದರ್ಪವೂ

ನೆರೆ, ಪ್ರವಾಹ, ಭೂಕಂಪ, ಭೂ ಕುಸಿತ ಮತ್ತು ಮುಳುಗಡೆ ಈ ಎಲ್ಲ ಅಪಾಯಗಳು ನಮ್ಮೆದುರಿನಲ್ಲೇ ಸಂಭವಿಸುತ್ತಿದ್ದರೂ ನಾವು ಸಂರಕ್ಷಿತ ವಲಯದಲ್ಲಿದ್ದೇವೆ ಎಂಬ ಅಹಮಿಕೆಯಿಂದಲೇ ಬದುಕು ಸಾಗಿಸುತ್ತಿದ್ದೇವೆ. ಒಂದು ವೇಳೆ ಯುದ್ಧ ಸಂಭವಿಸಿದರೂ ಹೀಗೆಯೇ ಇರುತ್ತೇವೆ. ಏಕೆಂದರೆ ಕಾಂಕ್ರೀಟ್ ಕಾಡುಗಳಲ್ಲಿ ವಾಸಿಸುವವರಿಗೆ ತರಗೆಲೆಗಳ ಸದ್ದು ಕೇಳುವುದಿಲ್ಲ. ಈಜು ಕೊಳದಲ್ಲಿ ಮುಳುಗುವವರಿಗೆ ಮೊಸಳೆಯ ಭೀತಿ ಇರುವುದಿಲ್ಲ. ನಿಯಂತ್ರಿತ ಹವೆ ಅನುಭವಿಸುವವರಿಗೆ ಹೊಗೆಯ ಘಾಟು ಬಡಿಯುವುದಿಲ್ಲ. ಪಾಪಾಸು ಕಳ್ಳಿ , ಬೋನ್ಸಾಯ್‍ಗಳ ನಡುವೆ ಬದುಕುವವರಿಗೆ ಹಸಿರಿನ ಪರಿವೆಯೇ ಇರುವುದಿಲ್ಲ. ಎಲ್ಲೋ ಮುಳುಗಡೆಯಾದರೆ ನಮಗೇಕೆ ಚಿಂತೆ ? ನೆರೆಮನೆಯ ಸೂತಕವೇ ತಟ್ಟದಿರುವ ಆಧುನಿಕ ಸಮಾಜಕ್ಕೆ ನೆರೆಯಲ್ಲಿ ಸೂರು ಕಳೆದುಕೊಂಡವರು ಹೇಗೆ ಕಾಣಲು ಸಾಧ್ಯ ? ಬಹುಶಃ ಇಡೀ ಸಮಾಜವೇ ಸ್ಥಿತಪ್ರಜ್ಞ ಸ್ಥಿತಿ ತಲುಪಿಬಿಟ್ಟಿದೆ ಎನಿಸುತ್ತದೆ. ಇದೇನು ಸ್ವತಂತ್ರ ಭಾರತದ ತಪಸ್ಸಿನ ಫಲವೋ ಅಥವಾ ಶತಮಾನಗಳ ಸಂಸ್ಕೃತಿಯ ಪ್ರತಿಫಲವೋ ತಿಳಿಯುತ್ತಿಲ್ಲ. ಗ್ರಾಮಗಳೇ ಕಾಣೆಯಾಗುತ್ತಿವೆ, ಊರೂರೇ ವಲಸೆ ಹೋಗುತ್ತಿದೆ, ಸೂರುಗಳು ಕೊಚ್ಚಿ ಹೋಗುತ್ತಿವೆ, ಶವಗಳೂ ವಲಸೆ ಹೋಗುತ್ತಿವೆ. ನಾವು ಅಕ್ರಮ ವಲಸಿಗರತ್ತ ಕಣ್ಣಿಟ್ಟಿದ್ದೇವೆ. 70 ವರ್ಷಗಳ ಸ್ವತಂತ್ರ ಭಾರತದಲ್ಲಿ ನಾವು ಎಷ್ಟೊಂದು ಮುಂದುವರೆದುಬಿಟ್ಟಿದ್ದೇವೆ ಅಲ್ಲವೇ ?

ನಮಗೆ ಮುಂಗಾರು ಎಂದರೆ ಹವಾಮಾನದ ಬದಲಾವಣೆಯಾಗಿ ಮಾತ್ರ ಕಾಣುತ್ತದೆ. ಹೆಚ್ಚು ಮಳೆಯಾದರೆ ಯಾವಾಗ ನಿಲ್ಲುತ್ತಪ್ಪಾ ಎಂದು ಚಿಂತಿಸುತ್ತೇವೆ, ಮಳೆ ಇಲ್ಲದಿದ್ದರೆ ಕಪ್ಪೆಗಳ ವಿವಾಹ ನಡೆಸುತ್ತೇವೆ. ಆದರೆ ಈ ಮುಂಗಾರು ವಿಪರೀತವಾದರೆ ನಾವೂ ಸಹ ಕಪ್ಪೆಗಳಂತೆ ಬಂಡೆಗಳ ಅಡಿಯಲ್ಲೋ, ಪೊಟರೆಗಳಲ್ಲೋ ಅವಿತು ವಟಗುಟ್ಟುತ್ತಾ ನೆಮ್ಮದಿ ಕಂಡುಕೊಳ್ಳುತ್ತೇವೆ. ಏಕೆಂದರೆ ಮುಂಗಾರಿನ ವೈಪರೀತ್ಯದ ಪರಿಣಾಮ ನಮಗೆ ತಾಗುವುದೇ ಇಲ್ಲ. ಈ ವರ್ಷದ ಮುಂಗಾರು ದೇಶದ 22 ರಾಜ್ಯಗಳ 357 ಜಿಲ್ಲೆಗಳಲ್ಲಿ ರುದ್ರ ತಾಂಡವ ಆಡಿದೆ. ಕೇಂದ್ರ ಸರ್ಕಾರದ ಮಾಹಿತಿಯ ಅನುಸಾರ 1990 ಜನರು ಮೃತಪಟ್ಟಿದ್ದಾರೆ, 46 ಜನರು ಕಾಣೆಯಾಗಿದ್ದಾರೆ, 3 ಲಕ್ಷ ಮನೆಗಳು ನಾಶವಾಗಿವೆ, 20 ಸಾವಿರ ಪ್ರಾಣಿಗಳು ಇಲ್ಲವಾಗಿವೆ, 14 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶವಾಗಿದೆ. ಇದು ಸಂಗ್ರಹಿಸಲಾದ ಮಾಹಿತಿ. ವಾಸ್ತವ ಇನ್ನೂ ಕಠೋರವಾಗಿರುತ್ತದೆ. ಕರ್ನಾಟಕದಲ್ಲಿ 106 ಜನ ಸತ್ತಿದ್ದು ಎರಡೂವರೆ ಲಕ್ಷ ಜನರು ನಿರಾಶ್ರಿತರಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಮನೆಗಳು ಕುಸಿದಿವೆ, ಕೊಚ್ಚಿಹೋಗಿವೆ.  ಏನ್ಮಾಡೋಕಾಗುತ್ತೆ ನಮ್ಮ ಕೈಯಲ್ಲೇನಿದೆ ಇದು ನೈಸರ್ಗಿಕ ವಿಪತ್ತು ಅಲ್ಲವೇ ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುತ್ತಾ ಅಕ್ರಮ ವಲಸಿಗರನ್ನು ಎಣಿಸಲು ಮುಂದಾಗುತ್ತೇವೆ. ಸತ್ತವರ ಗುರುತಿನ ಚೀಟಿ ಕೇಳುವ ಮಟ್ಟಕ್ಕೆ ಇನ್ನೂ ತಲುಪಿಲ್ಲ ಎನ್ನುವುದೊಂದೇ ಸಮಾಧಾನಕರ ಅಂಶ.

70 ವರ್ಷದ ಸ್ವತಂತ್ರ ಆಳ್ವಿಕೆಯ ನಂತರ ನಾವು ಕುತ್ತಿಗೆಗೆ ನೇತುಹಾಕಿದ ಚೀಟಿಯ ಮೂಲಕ ಸಹಮಾನವರನ್ನು ಗುರುತಿಸುವ ಹಂತ ತಲುಪಿದ್ದೇವೆ. ಇನ್ನೂ ಇದೇ ಹಾದಿಯಲ್ಲಿ ಮುಂದುವರೆದರೆ ಗುಲಾಮಗಿರಿ ಯುಗದ ಪಳೆಯುಳಿಕೆಗಳಿಗೆ ಮರುಜೀವ ನೀಡುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ನಮಗೆ ವಲಸೆಗಾರರ ಅಕ್ರಮ ಎದ್ದು ಕಾಣುತ್ತಿದೆ. ಆದರೆ ಅಕ್ರಮಗಳ ವಲಸೆ ಕಾಣುತ್ತಿಲ್ಲ. ಎಷ್ಟು ವ್ಯವಸ್ಥಿತವಾಗಿ ಅಕ್ರಮಗಳು ವಲಸೆ ಹೋಗುತ್ತಿವೆ. ವ್ಯಕ್ತಿಯಿಂದ ವ್ಯಕ್ತಿಗೆ, ಪಕ್ಷದಿಂದ ಪಕ್ಷಕ್ಕೆ, ಸಂಘಟನೆಯಿಂದ ಸಂಘಟನೆಗೆ, ಊರಿನಿಂದ ಊರಿಗೆ ಅಕ್ರಮಗಳು ಬೌದ್ಧಿಕವಾಗಿ, ಭೌತಿಕವಾಗಿ ವಲಸೆ ಹೋಗುತ್ತಲೇ ಇವೆ. ಎರಡು ದಶಕಗಳ ಹಿಂದೆ ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ಒತ್ತಾಸೆಯಾಗಿದ್ದ ಇಡೀ ಮಾಧ್ಯಮ ಲೋಕವೇ ಇಂದು ಅಕ್ರಮವಾಗಿ ವಲಸೆ ಹೋಗಿಬಿಟ್ಟಿದೆ. ಅಥವಾ ಅತ್ತಲಿಂದ ಅಕ್ರಮವಾಗಿ ವಲಸೆ ಬಂದವು ನಮ್ಮ ಬದುಕನ್ನು ನಿರ್ಧರಿಸುತ್ತಿವೆ. ಆದರೂ ನಮ್ಮ ಕಣ್ಣಿಗೆ ಕಾಫಿ ತೋಟದ ಬೆವರಿನ ಶಾಲೆಗಳು, ಮೆಟ್ರೋ ಸೇತುವೆಯ ಕೆಳಗಿನ ನರಪೇತಲಗಳು, ಕಲ್ಲು ಗಣಿಗಳಲ್ಲಿ ಬಂಡೆಗಳ ಒಡೆಯುವ ಕೃಷ ಆಕೃತಿಗಳು ಕಾಣುತ್ತಲೇ ಇಲ್ಲ.

ಇವೆಲ್ಲದರ ನಡುವೆ ನಾವು, ಸಾಮಂತರು ಮತ್ತು ಸಾಮ್ರಾಟರ ಸಂಘರ್ಷದಲ್ಲಿ ಸಿಲುಕಿ ಅಬ್ಬೇಪಾರಿಗಳಾಗುತ್ತಿರುವ ಸಾವಿರಾರು ಜೀವಗಳನ್ನು ಅಸಹಾಯಕರಂತೆ ನೋಡುತ್ತಾ ಕುಳಿತಿದ್ದೇವೆ. ಕರ್ನಾಟಕದಲ್ಲೂ ನೆರೆ ಸಂತ್ರಸ್ತರಿದ್ದಾರೆ ಎಂದು ಸಾಮ್ರ್ರಾಟರಿಗೆ ನೆನಪಿಸಲು ಎಷ್ಟೋ ದಿನಗಳೇ ಬೇಕಾಯಿತು. ಇಲ್ಲಿ ನಮ್ಮ ಕಣ್ಣೆದುರಿನಲ್ಲೇ ಅಳಿದವರು, ಉಳಿದವರು, ಅರೆಸತ್ತವರು, ಸೂರಿಲ್ಲದವರು, ನಿರ್ಗತಿಕರಾದವರು,  ದಿನಗಟ್ಟಳೆ ಕಣ್ಣೀರಿಟ್ಟರೂ ಫಲ ನೀಡದಂತಹ ಸ್ಥಿತಪ್ರಜ್ಞ ವ್ಯವಸ್ಥೆಯೊಳಗೆ ನಾವು ಝಗಮಗಿಸುವ ಮಿಣುಕು ದೀಪಗಳೊಂದಿಗೆ ಅದ್ಧೂರಿ ದಸರಾ ಆಚರಿಸುತ್ತಿದ್ದೇವೆ. ಬದುಕಿನ ಬೇರುಗಳೇ ಕೊಚ್ಚಿಹೋಗಿ ಬುಡವನ್ನೂ ಕಳೆದುಕೊಂಡು ಟೊಂಗೆಗಳನ್ನೂ ಉಳಿಸಿಕೊಳ್ಳಲಾರದೆ ಅವಸಾನದ ಅಂಚಿನಲ್ಲಿರುವ ಅಮಾಯಕರನ್ನು ನೆನೆದರೆ ಕರುಳು ಕಿತ್ತು ಬರುತ್ತಲ್ಲವೇ, ಅದಕ್ಕೇ ಮರ ಮರಕ್ಕೂ ದೀಪದ ಸರಪಳಿಗಳನ್ನು ಬಿಗಿದು ಹಸಿರ ತೋರಣದಲ್ಲಿ ದೀಪಗಳ ಹೂರಣವನ್ನು ಬಚ್ಚಿಟ್ಟು ಸಂತಸ ಪಡುತ್ತಿದ್ದೇವೆ. ಪಕ್ಷಿ ಸಂಕುಲ ವಿದೇಶ ಪ್ರವಾಸಕ್ಕೆ ಹೋಗಿರುವ ಹೊತ್ತಿನಲ್ಲೇ ನಮ್ಮ ಸಂಭ್ರಮ ಮುಗಿಲು ಮುಟ್ಟುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ ವಿವಾಹ ನಿಶ್ಚಿತಾರ್ಥವೂ ನಡೆದುಹೋಗಿದೆ.

ಇರಲಿ, ನಾವು ಮನುಜರಲ್ಲವೇ ? ಅಲ್ಲೆಲ್ಲೋ ಇರುವ ಸಂತ್ರಸ್ತರ ಬವಣೆಗೆ ನಾವು ಅತ್ತರೆ ಏನು ಪ್ರಯೋಜನ. ಕೊಂಚ ಹೊತ್ತು ಕರ್ಮ ಸಿದ್ಧಾಂತಕ್ಕೆ ಶರಣಾಗಿಬಿಡೋಣ. ಆದರೆ ಒಂದು ಸಂಗತಿಯನ್ನಂತೂ ಯೋಚಿಸಲೇಬೇಕು. ಈ ನೆರೆ ಸಂತ್ರಸ್ತರ ಬವಣೆ ಏನು ? ಅದು ಅವರ ಬದುಕನ್ನು ಹೇಗೆ ನಿಭಾಯಿಸಲು ಸಾಧ್ಯ ? ಮಳೆ ಹಾವಳಿಗೆ, ನೆರೆ ಪ್ರವಾಹಕ್ಕೆ ಬಲಿಯಾಗುವ ಎಲ್ಲರ ಸಮಸ್ಯೆಯೂ ಒಂದೇ ರೀತಿಯದ್ದಾಗಿರುವುದೇ ? ನೆರೆ ಪರಿಹಾರದ ಮೊತ್ತವನ್ನು ಸರ್ಕಾರ ನಿರ್ಧರಿಸುವುದಾದರೂ ಹೇಗೆ ? ರಾಜ್ಯ ಬೊಕ್ಕಸದಲ್ಲಿ ಹಣವೇ ಇಲ್ಲ ಏನ್ಮಾಡೋದು ಎಂದು ಮುಖ್ಯಮಂತ್ರಿಯವರೇ ಹೇಳಿದರೆ ಇದನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ ? ರಾಜ್ಯ ಸರ್ಕಾರ ಸಲ್ಲಿಸಿದ ಪರಿಹಾರದ ಅಂದಾಜು ಸರಿಯಿಲ್ಲ ಎಂದು ಕೇಂದ್ರ ಹೇಗೆ ನಿರ್ಧರಿಸುತ್ತದೆ ? ವೈಮಾನಿಕ ಸಮೀಕ್ಷೆಯ ಮೂಲಕ ಸಂತ್ರಸ್ತರನ್ನು ಕಾಣುವ ಕಣ್ಣುಗಳಿಗೆ ನೆಲದ ಮೇಲಿನ ವಾಸ್ತವ ಅರಿವಾಗುವುದಾದರೂ ಹೇಗೆ ? ಮೂಲತಃ ಇಲ್ಲಿ ಇರುವುದು ಸಂವೇದನೆಯ ಕೊರತೆ ಮತ್ತು ಜನಸಾಮಾನ್ಯರ ಬಗ್ಗೆ ಇರುವ ನಿಷ್ಕಾಳಜಿ. 

ಸಂತ್ರಸ್ತರು ಮತ್ತು ಪರಿಹಾರದ ನೆರೆಯಲ್ಲಿ ರಾಜಕೀಯ ಪ್ರಜ್ಞೆ ಮುಳುಗಿಹೋಗಿದ್ದರೆ, ಸಾಮಾಜಿಕ ಪ್ರಜ್ಞೆ ಕೊಚ್ಚಿ ಹೋಗಿದೆ. ನಮ್ಮ ದೇಶದ ದುರಂತ ಎಂದರೆ ಇಲ್ಲಿ ದೇವರೂ ಬಂಡವಾಳವಾಗಿಬಿಡುತ್ತಾನೆ. ಇನ್ನು ನೆರೆ ಪ್ರವಾಹ ಯಾವ ಲೆಕ್ಕ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ನಾವೇಕೆ ಹೀಗಾಗಿಬಿಟ್ಟೆವು ಎಂದು ಮತದಾರರು ತಮ್ಮನ್ನೇ ಪ್ರಶ್ನಿಸಿಕೊಳ್ಳುವಂತಾಗುತ್ತದೆ. ವಾಸ್ತವವಾಗಿ ನೆರೆ ಪೀಡಿತರೆಂದರೆ ಯಾರು ? ದಿನಗೂಲಿಗಳು, ಕೃಷಿ ಕಾರ್ಮಿಕರು, ಅಲ್ಪ ಸ್ವಲ್ಪ ಜಮೀನು ಹೊಂದಿರುವ ಕೃಷಿಕರು, ಗುಡಿಸಲುಗಳಲ್ಲಿ ವಾಸಿಸುವ ಕಸುಬುದಾರರು, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ಮತ್ತು ಸೂರಿಲ್ಲದೆಯೇ ಬದುಕುವ ಅಮಾಯಕರು. ಇವರು ಅನುಭವಿಸುವ ನಷ್ಟವನ್ನು ಗಣಕಯಂತ್ರದ ಮೂಲಕ ಅಳೆಯುವುದು ಅಸಾಧ್ಯ. ಏಕೆಂದರೆ ಹಣದ ಮೂಲಕ ಇವರ ಬದುಕನ್ನು ಮತ್ತೊಮ್ಮೆ ಸರಿಪಡಿಸಲಾಗುವುದಿಲ್ಲ. ಕೇವಲ ಸಾಂತ್ವನ ನೀಡಬಹುದಷ್ಟೆ. ಬದುಕನ್ನು ಮತ್ತೊಮ್ಮೆ ಕಟ್ಟಿಕೊಳ್ಳಲು ಇವರಿಗೆ ಆಸರೆ ಬೇಕಾಗುತ್ತದೆ. ಏಕೆಂದರೆ ತಮ್ಮ ಬಳಿ ಇರುವ ಅಲ್ಪಸ್ವಲ್ಪವನ್ನೇ ಕಳೆದುಕೊಂಡಿರುತ್ತಾರೆ. ಇಂಥವರ ನೆರವಿಗೆ ನಿಲ್ಲಬೇಕಾದವರು ಸ್ಥಳೀಯರು ಎಂದು ಗುರುತಿಸಲ್ಪಡುವ ಗ್ರಾಮಸಭೆ, ಮಂಡಲ, ತಾಲ್ಲೂಕು, ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಅಲ್ಲವೇ ?

ಈ ಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಕೊಂಚವಾದರೂ ಮಾನವೀಯ ಪ್ರಜ್ಞೆ ಜಾಗೃತವಾಗಿದ್ದರೆ ಬಹುಶಃ ಕರ್ನಾಟಕ ಮತ್ತು ದೆಹಲಿ ನಡುವಿನ ಕಬ್ಬಡಿ ಪಂದ್ಯ ನೋಡುವ ಅವಶ್ಯಕತೆಯೇ ಇರುತ್ತಿರಲಿಲ್ಲ. ತೊಡೆ ತಟ್ಟಿದ ಸದ್ದು ತೊರೆಯಲಿ ಕೊಚ್ಚಿ ಹೋಗುವ ಬದುಕನ್ನು ಮರಳುವಂತೆ ಮಾಡುವುದಿಲ್ಲ ಅಲ್ಲವೇ ? ದುರಂತ ಎಂದರೆ ಈ ತಳಮಟ್ಟದ ಜನಪ್ರತಿನಿಧಿಗಳು ಅಧಿಕಾರ ವಿಕೇಂದ್ರೀಕರಣದ ಫಲಾನುಭವಿಗಳಾಗಿದ್ದಾರೆಯೇ ಹೊರತು ಜನಸಾಮಾನ್ಯರ ನಾಡಿಮಿಡಿತವನ್ನು ಅರಿಯುವ ವೈದ್ಯರಾಗಿಲ್ಲ. ಇದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ದುರವಸ್ಥೆ. ಕರ್ನಾಟಕ ಸರ್ಕಾರ ಕೇಂದ್ರಕ್ಕೆ  38 ಸಾವಿರ ಕೋಟಿ ರೂ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದೆ. ಇದು ಅತಿಯಾಯಿತು ಎಂದು 3800  ಕೋಟಿ ರೂ ಕೇಳಿದೆ. ಆದರೆ ಕೇಂದ್ರ ಸರ್ಕಾರ 1200 ಕೋಟಿ ರೂ ನೀಡಿದೆ. ಈ ಅಲ್ಪ ಮೊತ್ತ ಪ್ರಭಾವಿ ವಲಯದ ಪಾಲಾಗುವುದು ನಿಶ್ಚಿತ. ಏಕೆಂದರೆ ಇದು ನಮ್ಮ ಪರಂಪರೆ. ರಸ್ತೆ ಮರುನಿರ್ಮಾಣ, ಕುಸಿದ ಸೇತುವೆಗಳ ದುರಸ್ತಿ, ಕೆರೆ ಅಚ್ಚುಕಟ್ಟಿನ ದುರಸ್ತಿ ಹೀಗೆ ಯಾರ ಉಪಯೋಗಕ್ಕೂ ಬಾರದ ಲೋಕೋಪಯೋಗಿ ಕಾಮಗಾರಿ ಎಲ್ಲವನ್ನೂ ನುಂಗಿಹಾಕುತ್ತದೆ. ಕೊಂಚ ಪಾಲು ಪರೋಪಕಾರಿ ಪಾಪಣ್ಣಗಳ ಪಾಲಾಗುತ್ತದೆ. 

ಅಂದರೆ ನಿಜವಾಗಿ ತಮ್ಮ ಸೂರು ಕಳೆದುಕೊಂಡಿರುವ ಸಂತ್ರಸ್ತರ ಪಾಡೇನು ? ವ್ಯವಸಾಯ ಮಾಡಿ ಬೆಳೆಸಿದ್ದ ಫಸಲು ಕಳೆದುಕೊಂಡವರ ಗತಿಯೇನು ? ಎಕರೆಗೆ ಇಷ್ಟು ಎಂದು ಪರಿಹಾರ ನೀಡಿಬಿಟ್ಟರೆ ಅವರ ನಾಳಿನ ಬದುಕು ಹಸನಾಗುತ್ತದೆಯೇ ? ಅಥವಾ ಸತ್ತವರಿಗೆ ಇಂತಿಷ್ಟು ಹಣ ನಿಗದಿಪಡಿಸಿ ಉಳಿದವರಿಗೆ ನೀಡಿದರೆ ಬದುಕುಳಿದವರ ಸ್ಥಿತಿ ಬದಲಾಗುವುದೇ ? ಕೊಚ್ಚಿ ಹೋದ ಮನೆ ಅಥವಾ ಗುಡಿಸಲಿಗೆ ಇಷ್ಟೇ ಹಣ ಎಂದು ನೀಡಿ ಕೈತೊಳೆದರೆ ಸೂರು ಕಳೆದುಕೊಂಡವರ ಬದುಕು ಸುರಕ್ಷಿತವಾಗುವುದೇ ? ಹೇಗೋ ಬದುಕುತ್ತಾರೆ, ಎಲ್ಲವನ್ನೂ ಸರ್ಕಾರವೇ ಮಾಡೋಕಾಗುತ್ಯೇ ? ಎಂದು ಕೇಳುವವರು ಹೇರಳವಾಗಿದ್ದಾರೆ. ನಿಜ ಜನರ ಹಿತಾಸಕ್ತಿ ರಕ್ಷಣೆ ಸರ್ಕಾರದ್ದು ಅವರನ್ನು ಸಾಕುವ ಹೊಣೆ ಅಲ್ಲ. ಆದರೆ ನೆರೆ, ಪ್ರವಾಹ, ಭೂಕುಸಿತ ಇವೆಲ್ಲವೂ ಸಂಭವಿಸುತ್ತಿರುವುದಕ್ಕೆ ಆಳುವ ವರ್ಗಗಳ ಆರ್ಥಿಕ ನೀತಿಗಳು, ಆಡಳಿತಾತ್ಮಕ ನಿಯಮಗಳು ಮತ್ತು ಅಭಿವೃದ್ಧಿಯ ಧೋರಣೆಯೇ ಅಲ್ಲವೇ ? ನೀವು ನಮ್ಮನ್ನು ಸಾಕುವುದು ಬೇಡ ಸ್ವಾಮಿ ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡಿ ಎಂದು ಗೋಗರೆಯುತ್ತಿರುವವರ ಆಕ್ರಂದನ ನಮಗೆ ಏಕೆ ಕೇಳಿಸುತ್ತಿಲ್ಲ ?

ಕೇಳಿಸುವುದೂ ಇಲ್ಲ. ಏಕೆಂದರೆ ನಮ್ಮ ಗಮನ ಬೇರೆಡೆ ಕೇಂದ್ರೀಕೃತವಾಗಿದೆ. ಅರಣ್ಯ ರಕ್ಷಣೆ, ಪರಿಸರ ರಕ್ಷಣೆ, ಹಸಿರು ರಕ್ಷಣೆ, ಜಲಸಂರಕ್ಷಣೆ, ಬದುಕುವ ಹಕ್ಕು, ಆರೋಗ್ಯದ ಹಕ್ಕು, ಶಿಕ್ಷಣದ ಹಕ್ಕು,  ನಾಗರಿಕ ಹಕ್ಕು ಇವೆಲ್ಲವೂ ನಾಗರಿಕ ಪ್ರಜ್ಞೆಯಿಂದ ಮರೆಯಾಗುತ್ತಿದ್ದು ಈ ಹಕ್ಕುಗಳ ಬಗ್ಗೆ ಮಾತನಾಡುವವರೆಲ್ಲರೂ ಬುದ್ಧಿ ಜೀವಿಗಳೆಂದೋ, ಗಂಜಿ ಗಿರಾಕಿಗಳೆಂದೋ, ಪ್ರಗತಿಪರರೆಂದೋ ಗುರುತಿಸಲ್ಪಡುತ್ತಾರೆ. ಹೆಜ್ಜೆ ಮುಂದುವರೆದಂತೆ ದೇಶದ್ರೋಹಿಗಳೂ ಆಗಿಬಿಡುತ್ತಾರೆ. ಮಹಾರಾಷ್ಟ್ರದ ಅರೇ ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳ ಹನನಕ್ಕೆ ನಿಷೇಧಾಜ್ಞೆಯೇ ಆಸರೆಯಾಗಿದೆ. ನ್ಯಾಯಾಂಗವೂ ಮೌನವಾಗಿದೆ. ಎಫ್‍ಐಆರ್ ಮುಂದಿನ ಕ್ರಮ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳುವುದಾದರೂ ಹೇಗೆ ಭವಿಷ್ಯದ ಸಂತ್ರಸ್ತರಿಗೆ ಸೂರು ಕಲ್ಪಿಸುವುದಾದರೂ ಹೇಗೆ ? ಗುಂಪುಥಳಿತ ನಮ್ಮನ್ನು ಘಾಸಿಗೊಳಿಸುತ್ತಿದೆ ಎಂದವರೆಲ್ಲರೂ ದೇಶದ್ರೋಹಿಗಳಾಗಿಬಿಟ್ಟಿದ್ದಾರೆ. ನಾಳೆ ಕೆರೆಗಳ ನಾಶ, ಅರಣ್ಯ ನಾಶ, ಪರಿಸರ ನಾಶ ನಮ್ಮನ್ನು ನಾಶಪಡಿಸುತ್ತದೆ ಎಂದವರೂ ದೇಶದ್ರೋಹಿಗಳಾಗಬಹುದು. ಏಕೆಂದರೆ ನಾವು ಅಭಿವೃದ್ಧಿಯ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಮುಂದಡಿ ಇಡುವಾಗ ಮರಳಿನ ಕಣಗಳು ಸಾಯುತ್ತಲೇ ಇರುತ್ತವೇ. ಹಾಗೆಯೇ ರಕ್ತದ ಕಣಗಳೂ ಸತ್ತು ಸತ್ತು ಹುಟ್ಟುತ್ತಲೇ ಇರುತ್ತವೆ. ಮನುಕುಲವೂ ಹಾಗೆಯೇ ಅಲ್ಲವೇ ? ಮುಳುಗುವವರು ಮುಳುಗುತ್ತಿರಲಿ , ನಮ್ಮ ಬಳಿ ವ್ಯವಸ್ಥೆ ಎನ್ನುವ ಹುಲ್ಲು ಕಡ್ಡಿ ಇದ್ದೇ ಇದೆ. ಅಸರೆಗೂ ಸರಿ ಕೈಸೆರೆಗೂ ಸರಿ. ಪ್ರತಿಬಾರಿ ಕಪ್ ನಮ್ದೇ.