ಕಾಲಾಂತರದಲ್ಲಿ ಬದಲಾಗುವ ಅರ್ಥೈಸುವಿಕೆ 

ಕಾಲಾಂತರದಲ್ಲಿ ಬದಲಾಗುವ ಅರ್ಥೈಸುವಿಕೆ 

ನಾವು ಗ್ರಹಿಸುವ ಬಗೆ ಕಾಲಾಂತರದಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ಲೇಖಕ ಸದಾನಂದ ಚಂದ್ರಶೇಖರಯ್ಯ ತಮ್ಮ ಅಜ್ಜಿಯನ್ನೇ ಉದಾಹರಣೆಯಾಗಿಟ್ಟುಕೊಂಡು ಬಾಲ್ಯದ ನೆನಪುಗಳೊಂದಿಗೆ ವಿವರಿಸಿದ್ದಾರೆ.  

ನನ್ನಜ್ಜಿ ಬಹಳ ಧಾರ್ಮಿಕ ವ್ಯಕ್ತಿ. ನಾನು ಚಿಕ್ಕವನಾಗಿದ್ದಾಗ ನನ್ನ ಅಜ್ಜಿಯನ್ನು ಬಹಳವಾಗಿ ಗೋಳುಹೊಯ್ದುಕೊಳ್ಳುತ್ತಿದ್ದೆ. ದೇವರ ಬಗೆಗೆ ಬಹಳ ಮುಕ್ತವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸ್ವಾತಂತ್ರ್ಯವಿದ್ದ ಕುಟುಂಬದಲ್ಲಿ ಬೆಳೆಯುತಿದ್ದ ನಾನು ಅವರ ಬಹುತೇಕ ಆಚರಣೆಗಳನ್ನು ಪ್ರಶ್ನಿಸಿ ಪೀಡಿಸುತ್ತಿದ್ದೆ. ನನಗೆ ಅರ್ಥವಾಗುವ ಹಾಗೆ ಅವರು ಉತ್ತರಿಸಲು ಸಾಧ್ಯವಾಗದ್ದಿದ್ದಾಗ ಜೋರಾಗಿ ನಕ್ಕು ಅಣಕಿಸುತ್ತಿದ್ದೆ. ಅವರು ಸಿಟ್ಟು ಬಂದು 'ಹೋಕಿ ಇಲ್ಲ್... ನೀ` ಎಂದು ತಿರಸ್ಕಾರದಿಂದ ಅಟ್ಟಿಸಿಕೊಂಡು ಬರುವಂತೆ ಒಂದೆರಡು ಹೆಜ್ಜೆ ಇಟ್ಟು ನಾಲಿಗೆ ಕಚ್ಚುವವರೆಗೂ ಬಿಡುತ್ತಿರಲಿಲ್ಲ.  ಅವರ ಈ ಹೆದರಿಸುವ ಭಂಗಿಗೆ ಹೆದರಿ ಹಂಗೂ ಒಂದಿಷ್ಟು ದೂರ ಓಡಿ ಹೋದಂತೆ ನಾಟಕ ಮಾಡಿ ಸ್ವಲ್ಪ ದೂರದಿಂದ ಕೂಗಿ ಮತ್ತದೇ ಪ್ರಶ್ನೆಗಳನ್ನು ಕೇಳಿ ಬಹಳಷ್ಟು ಸಾರಿ ಅವರಿಗೆ ಬೇಸರ ಉಂಟು ಮಾಡುತ್ತಿದ್ದುದು ನಮ್ಮ ಮನೆಯಲ್ಲಿ ದಿನ ನಿತ್ಯದ ಸಂಗತಿಯಾಗಿತ್ತು. ಈ ರೀತಿಯ ಇನ್ನೂ ಹಲವಾರು ಕೋಳಿ ಜಗಳಗಳು ನಮ್ಮ ನಡುವೆ ಯಾವಾಗಲೂ ಇರುತ್ತಿದ್ದವಾದರೂ, ಈ ಎಲ್ಲ ಕ್ರಿಯೆ ಪ್ರತಿಕ್ರಿಯೆಗಳ ನಡುವೆ ನನ್ನ ಮನಸ್ಸು ಅವರಿಗೆ ಅಗಾಧವಾದ ಪ್ರೀತಿಯನ್ನು ತನ್ನೊಳಗೆ ಬೆಳೆಸಿಕೊಳುತ್ತಲೇ ವಿಕಾಸವಾಗಿತ್ತೆಂದು ಅವರು ತೀರಿಹೋದಾಗ ತಿಳಿದು ಬಂದಿತು. 

ನಮ್ಮ ಮನೆಯಲ್ಲಿ ನಮ್ಮಪ್ಪ ಯಾವುದೋ ಒಂದು ಪ್ರವಾಸದಿಂದ ಕೊಂಡು ತಂದ ಗಡ್ಡ ಬಿಟ್ಟುಕೊಂಡಿದ್ದ ಮುಖದ ಶಿಲಾಕೃತಿಯೊಂದಿತ್ತು. ಮನೆಯ ಒಂದು ಕೋಣೆಯ ಮುಂಭಾಗಕ್ಕೆ ಅದನ್ನು ನೇತು ಹಾಕಲಾಗಿತ್ತು. ನಮ್ಮ ಅಜ್ಜಿಗೆ ಒಂದು ಅಭ್ಯಾಸವಿತ್ತು. ದಿನವೂ, ಬೆಳಿಗ್ಗೆ ಸ್ನಾನದ ನಂತರ ಮತ್ತು ಸಂಜೆ ದೀಪ ಹಚ್ಚುವ ಮುಂಚೆ ದೇವರ ಪೂಜೆ ಮಾಡಿ ವಿಭೂತಿ ಧರಿಸಿ ಊದುಬತ್ತಿ ಹಚ್ಚಿಕೊಂಡು ಅವರ ಮನಸ್ಸಿಗೆ ಪೊಜನೀಯ ಎನಿಸುವ ವಸ್ತುಗಳಿಗೆ ಒಮ್ಮೆ ಬೆಳಗುತ್ತ ಮನೆಯಲ್ಲಿ ಅವರೊಬ್ಬರಿಗೆ ಕೇಳುವ ಹಾಗೆ ಮಂತ್ರಗಳನ್ನು ಜಪಿಸುತ್ತಾ ಮನೆಯ ಒಳಗೆ ಒಂದು ಸುತ್ತು ಹಾಕುವುದು ವಾಡಿಕೆ. ಸಾಮಾನ್ಯವಾಗಿ ಹೀಗೆ ಸುತ್ತು ಹಾಕುವಾಗ ಮನೆಯ ಹಿತ್ತಲಿನ ತೆಂಗಿನ ಮರ, ಆಕಾಶ, ಸೂರ್ಯ, ಚಂದ್ರ, ಮುಂಬಾಗಿಲ ತೋರಣ, ಹೊಸ್ತಿಲು, ಮನೆಯ ಒಳಗೆ ನೇತು ಹಾಕಿರುವ ಫೋಟೋಗಳು, ಮುಖಾಕೃತಿಗಳು, ಗಡಿಯಾರ ಮತ್ತಿತರ ವಸ್ತುಗಳು ಅವರ ಈ ಊದುಬತ್ತಿ ಹೊಗೆಯಲ್ಲಿ ಮುಳುಗೇಳುತ್ತಿದ್ದವು. ಆದರೆ ಹೀಗೆ ಮಾಡುವಾಗ ಈ ಗಡ್ಡಾಕೃತಿಯ ಮುಖದ ಶಿಲಾಕೃತಿಗೆ ವಿಶೇಷ ಕಾಲಾವಧಿ ಕೊಡುತ್ತಿದ್ದರು. ಅದನ್ನು ತಮ್ಮ ಊದುಬತ್ತಿ ಪ್ರೋಕ್ಷಣೆಯ ಲಿಸ್ಟಿನಲ್ಲಿ ಯಾವಾಗ ಸೇರಿಸಿಕೊಂಡರೊ ಗೊತ್ತಿಲ್ಲ, ಆದರೆ ಅವರ ಈ ಕ್ರಿಯೆಯನ್ನು ಗಮನಿಸಿದ ಯಾರಿಗೆ ಆದರೂ ಈ ಮುಖಾಕೃತಿಯ ವಿಶೇಷ ಪೂಜೆಯನ್ನು ಗಮನಿಸದೆ ಇರಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿ ಖಾಲಿ ಕೂರುತ್ತಿದ್ದ ಸಮಯದಲ್ಲಿ ನನಗೆ ಇವರನ್ನು ಕೀಟಲೆ ಮಾಡುವುದೇ ಒಂದು ಟೈಮ್ ಪಾಸ್. ಹೀಗೆ ಹಲವಾರು ವಿಚಾರಗಳನ್ನು ಹಿಡಿದು ಪೀಡಿಸುತ್ತಿದ್ದ ನನಗೆ ಇವರ ಈ ಗಡ್ಡದ ಮುಖದ ಅಜ್ಜನ ಪೂಜೆಯ ರಹಸ್ಯ ತಿಳಿಯಬೇಕೆಂಬ ತೀವ್ರ ಬಯಕೆ ಉಂಟಾದುದು ಅಷ್ಟೇನೂ ಆಶ್ಚರ್ಯವಲ್ಲ. 

ಸರಿ, ಒಂದು ದಿವಸ ಈ ವಿಚಾರ ಹಿಡಿದು ಪೀಡಿಸುತ್ತಾ ``ಅದೇನು ನೀನು ಆ ಗಡ್ಡದ ಅಜ್ಜನಿಗೆ ಅಷ್ಟು ಭಕ್ತಿಯಿಂದ ಪೂಜಿಸುತ್ತಿಯ ನಂಗೆ ಹೇಳು``ಎಂದು ಕಾಡತೊಡಗಿದೆ. ನಾನು ಬಿಡುವುದಿಲ್ಲವೆಂದು ತಿಳಿದಾಗ ನಿಧಾನಕ್ಕೆ ಅವರು ವಿವರಿಸತೊಡಗಿದರು. ``ಅದು ಏಸುಕ್ರಿಸ್ತನ ಮೂರ್ತಿ ಕಣೋ. ಹೇಗೆ ಶಿವಪ್ಪ ನಮ್ಗೆ ದೇವ್ರೋ ಹಂಗೆ ಕ್ರಿಸ್ತರಿಗೆ ಅವ್ನು ದೇವ್ರು. ಮೇಲಿರೋ ಭಗವಂತ ಒಬ್ನೆ ಆದ್ರೂ ಬೇರೇ ಬೇರೇ ಜನಾಂಗದೋರ್ನ ಉದ್ದಾರ ಮಾಡಕ್ಕೆ,ಹಿಂಗೆ ಬೇರೆ ಬೇರೆ ರೂಪ್ದಲ್ಲಿ ಅವ್ತಾರ ಎತ್ತಿರ್ತಾನೆ``.ನನ್ನ ಆ ಸಂಕುಚಿತವಾದ ಮನಸ್ಸಿಗೆ ಅಂದು ಈ ವಿವರಣೆ ಅವರ ಮತ್ತೆಲ್ಲಾ ವಿವರಣೆಗಳಂತೆ ಹಾಸ್ಯಾಸ್ಪದ ಮತ್ತು ನಿರಾಧಾರವಾಗಿ ಕಂಡು ಬಂದರೂ, ಇಂದು ಅದೇ ವಿಚಾರವಾಗಿ ಯೋಚಿಸಿದಾಗ ನನ್ನ ಅಜ್ಜಿ ಒಬ್ಬ ಅಧ್ಯಾತ್ಮಿಕವಾಗಿ ಪಕ್ವ ಗೊಂಡಿದ್ದ ಒಬ್ಬ ಮಹಾನ್ ವ್ಯಕ್ತಿಯಾಗಿ ಕಂಡುಬರುತ್ತಾರೆ. ಹಣೆಗೆ ವಿಭೂತಿ ಧರಿಸದೆ ಮನೆಯಿಂದ ಹೊರಗೆ ಕಾಲಿಡಲು ಹಿಂದು ಮುಂದು ಯೋಚಿಸುವ ಪಕ್ಕ ಲಿಂಗಾಯತ ಸಂಪ್ರದಾಯಸ್ಥ ಮನೆಯಲ್ಲಿ ಬೆಳೆದ, ಎಂದೂ ಶಾಲೆಯ ಮೆಟ್ಟಿಲನ್ನೇ ಹತ್ತಿರದ, ಒಬ್ಬ ಅವಿದ್ಯಾವಂತ ಮಹಿಳೆ, ಸರ್ವ ಧರ್ಮ ಸಮನ್ವಯದ ಕಲ್ಪನೆಯನ್ನು ಇಷ್ಟು ವಿಶಾಲವಾಗಿ ತನ್ನ ಆಚರಣೆಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆಂದರೆ, ಜಾತಿ, ಧರ್ಮಗಳ ಬಣ್ಣಗಳನ್ನು ಜೀವನದ ಎಲ್ಲ ಮಗ್ಗುಲುಗಳಿಗೂ ಹಚ್ಚಿಕೊಂಡು ನಾಳೆಗಳನ್ನು ದ್ವೇಷದಿಂದ ಕಾದು ನೋಡುತ್ತಿರುವ ನಮಗೇನಾಗಿದೆ ಎಂದು ಎಷ್ಟೋ ಸಾರಿ ಚಿಂತೆಯಾಗುತ್ತದೆ. ಅವರ ಈ ವಿಶಾಲ ಕಲ್ಪನೆಯ ಮುಂದೆ, ಅದು ನಿಜವಾಗಿಯೂ ಕ್ರಿಸ್ತನ ಮುಖದಂತಿದ್ದ ಮೂರ್ತಿಯೇ ? ಇಷ್ಟೆಲ್ಲ ಹಿಂದೂ ಸಂಪ್ರದಾಯಗಳನ್ನು ಆಚರಿಸುವ ಆಕೆ ಅದೇಕೆ ಅನ್ಯ ಧರ್ಮದ ದೇವರಿಗೆ ಗಂಧದ ಕಡ್ಡಿ ಬೆಳಗುವ ರೂಢಿ ಮಾಡಿಕೊಂಡಿದ್ದಳು ? ನಿಜಕ್ಕೂ ಕ್ರಿಸ್ತ ಆ ಒಬ್ಬನೇ ಭಗವಂತನ ಇನ್ನೊಂದು ಅವತಾರವೇ ? ಊದುಬತ್ತಿಗೂ ಕ್ರಿಸ್ತನಿಗೂ ಎತ್ತಲಿನ ಸಂಬಂಧ ? ಇಂಥ ಎಲ್ಲ ಪ್ರಶ್ನೆಗಳು ಅತ್ಯಂತ ಕ್ಷುಲ್ಲಕವಾಗಿ ಕಂಡುಬರುವುದಲ್ಲದೆ ಇವರನ್ನು ಸರಿಯಾಗಿ ಅರ್ಥಯಿಸಿಕೊಳ್ಳದ ನನ್ನ ಅಂದಿನ ನಡವಳಿಕೆಯ ಮೇಲೆ ನಾಚಿಕೆ ಉಂಟಾಗುತ್ತದೆ. 

ನಮ್ಮಜ್ಜಿಗೆ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ತೆರಳಿದ ಮೇಲೆ ಮನೆಯಲ್ಲಿ ಇರುತ್ತಿದ್ದುದು ಒಂದೇ ಎಂಟರ್ಟೇನ್ಮೆಂಟ್...ಟಿವಿ ನೋಡುವುದು. ಆದರೆ ಅವರಿಗೆ ರಿಮೋಟ್ ಕಂಟ್ರೋಲರ್ರಿನ ಚಲನವಲನಗಳನ್ನು ಅರ್ಥೈಸಿಕೊಳ್ಳಲು ಎಂದಿಗೂ ಸಾಧ್ಯವಾಗಿರಲಿಲ್ಲ. ಇದನ್ನು ತಿಳಿದ ನಾನು, ಅವರನ್ನು ಗೋಳುಹೊಯ್ದುಕೊಳ್ಳುವ ಮತ್ತೊಂದು ಸಾಧನವಾಗಿ ಇದನ್ನು ಉಪಯೋಗಿಸುತಿದ್ದೆ. ಮಧ್ಯಾಹ್ನ ಟಿವಿ ನೋಡುವ ಸಮಯಕ್ಕೆ ಸರಿಯಾಗಿ ನಮ್ಮ ತಾಯಿಯೂ ಕೂಡ ಪಕ್ಕದ ಬೀದಿಯಲ್ಲಿಯೇ ಇರುತಿದ್ದ ನಮ್ಮ ದೊಡಮ್ಮರ ಮನೆಗೋ ಇನ್ನೆಲ್ಲಿಗೋ ಹೋಗಿಬಿಟ್ಟು, ಮನೆಯಲ್ಲಿ ಯಾರು ಕಾಣದಾದಾಗ ನಮ್ಮ ಅಜ್ಜಿ ಪೀಕಲಾಟಕ್ಕೆ ಸಿಲುಕುತಿದ್ದರು. ಕೊನೆಗೆ ಹತಾಶೆ ತಾಳಲಾರದೇ ರಸ್ತೆಯಲ್ಲಿ ಜನರ ಚಲನವಲನಗಳನ್ನು ನೋಡಲು ತೆರಳುತಿದ್ದರು. ಒಂದಿಷ್ಟು ಸಮಯವಾದರೂ ಯಾರೂ ಬರದಿದ್ದಾಗ ನಮ್ಮ ಮನೆಗೆ ಹೊಂದಿಕೊಂಡಂತಿದ್ದ ಬಂಗಾರದ ಪಟ್ಟೆ ಮಿಶಿನ್ ಅಂಗಡಿಯ ಹುಡುಗನನ್ನು ಕರೆದು ತಮಗೆ ಬೇಕಾದ ಕನ್ನಡ ಚಾನೆಲೊಂದನ್ನು ಹಾಕಿಸಿಕೊಂಡು ತಮ್ಮ ಟಿವಿ ಜಗತ್ತಿನೊಳಗೆ ಮುಳುಗಿಬಿಡುತಿದ್ದರು. ಇಂತಹ ಸನ್ನಿವೇಶಗಳು ಮಂಗಳವಾರ ಜರುಗಿದರೆ ಬಹಳವಾಗಿ ವ್ಯಥೆ ಪಡುತಿದ್ದರು. ನಮ್ಮ ಊರಿನಲ್ಲಿ ಮಂಗಳವಾರ ವ್ಯವಹಾರಗಳಿಗೆ ರಜೆಯ ದಿವಸ. ಅಂದು ಬಹಳವಾಗಿ ಬೇಸತ್ತು ರಸ್ತೆಯಲ್ಲಿ ತಮ್ಮ ಗುರುತಿರುವವರ ಹಾಜರಿಗೆ ಕಾಯುತಿದ್ದರು. ಯಾರೂ ಕಾಣದಿದ್ದಾಗ ಇನ್ನೇನು ಗತಿ ಇರದೆ ತಾವೇ ರಿಮೋಟ್ ಕಂಟ್ರೋಲರ್ ಉಪಯೋಗಿಸುವ ಸಾಹಸಕ್ಕೆ ಕೈ ಹಾಕುತಿದ್ದರು. ಕೇವಲ ಒಂದರಿಂದ ಒಂಬತ್ತರವರೆಗೆ ಗುಂಡಿಗಳನ್ನು ಒತ್ತುವುದಕ್ಕೆ ಮಾತ್ರ ಮಾಡಲು ಧೈರ್ಯ ಮಾಡುತಿದ್ದ ಅವರಿಗೆ ತಮಗೆ ಬೇಕಾದ ಕನ್ನಡ ವಾಹಿನಿಗಳನ್ನು ಹುಡುಕುವುದು ಅಸಾಧ್ಯದ ಕೆಲಸವಾಗಿ ತೋರುತಿತ್ತು. ಕೊನೆಗೆ ವಾಹಿನಿಗಳನ್ನು ಬದಲಿಸುವ ಆಟವನ್ನು ಬಿಟ್ಟು ಮೇಜಿನ ಮೇಲೆ ರಿಮೋಟನ್ನು ಇಟ್ಟು ತಮ್ಮ ಕಲ್ಪನಾ ಲೋಕಕ್ಕೆ ತೆರಳುತಿದ್ದರು. 

ಅವರು ಈ ರೀತಿ ಗೊತ್ತಿಲ್ಲದ ಭಾಷೆಯ, ಗೊತ್ತಿಲ್ಲದ ವಿಷಯದ ಚಾನೆಲ್ ಗಳನ್ನು ನೋಡುತಿದ್ದಾಗ ಸುಮ್ಮನಿರದ ಅವರ ಬಲ ಮೆದುಳು ಒಂದು ವಿನೋದಾತ್ಮಕವಾದ ಅನುವಾದ ಕಾರ್ಯದಲ್ಲಿ ತೊಡಗುತಿತ್ತು. ಅದು ಅವರು ಅಂದು ನೋಡಿದ ಚಿತ್ರಗಳನ್ನೆಲ್ಲಾ ಪೋಣಿಸಿ ತಮ್ಮ ತಿಳಿವಳಿಕೆಗೆ ಅರ್ಥವಾಗುವ ರೀತಿ ಒಂದು ಕತೆಯನ್ನು ರಚಿಸಿ, ಆ ಕತೆಯಲ್ಲಿ ಇವರನ್ನೆ ಪಾತ್ರಧಾರಿಗಳನ್ನಾಗಿ ಮಾಡಿಸಿ ಅರ್ಥವಾಗದ ಅವರ ಭಾಷೆಯ ಭಾವನೆಗಳಿಗೆ ಮಿಡಿಯುವಂತೆ ಮಾಡಿಸಿ ಮನದಲ್ಲೇ ಆ ಪಾತ್ರಗಳ ಇರುಸು ಮುರುಸುಗಳಿಗೆ ಸ್ಪಂದಿಸುವಂತೆ ಮಾಡುತಿತ್ತು. ಬಹುಶಃ ನಮ್ಮ ಅಜ್ಜಿ ಒಂದು ಅರ್ಥವಾಗದ ಭಾಷೆಯ ಒಂದು ಕಥಾ ವಸ್ತುವಿಗೆ ನಿರ್ದೇಶಕಿಯಾಗಿದ್ದಿದ್ದರೆ ಬಹಳ ಒಳ್ಳೆ ಸಿನಿಮಾ ಮಾಡಿಬಿಡುತಿದ್ದರೋ ಏನೋ! ಇವರು ತಮ್ಮ ಕಾಲ್ಪನಿಕ ಲೋಕದಲ್ಲಿ ಟಿವಿಯ ಪಾತ್ರಧಾರಿಗಳೊಂದಿಗೆ ಮಧ್ಯಾಹ್ನವಿಡೀ ಮುಳುಗಿರುತ್ತಿದ್ದಾಗ ನಾನು ಸರಿಯಾಗಿ ಸ್ಕೂಲಿನಿಂದ ಬರುತಿದ್ದೆ. ಹೀಗೆ ಬಂದ ನನಗೆ ಅರ್ಥವಾಗದ ಭಾಷೆಯ ಅವರ ಟಿವಿ ವೀಕ್ಷಣೆಯ ಸಮ್ಮರಿ ಕೇಳುವ ತವಕ. ಬಹಳ ಪೀಡಿಸಿದ ನಂತರ ನಿಧಾನಕ್ಕೆ ಶುರು ಮಾಡುತಿದ್ದರು. ಅವರ ಕತೆಯಲ್ಲಿ ಪಾತ್ರಧಾರಿಗಳ ಪಾಡು ಕೇಳಿ ನನಗೆ ಅದೆಷ್ಟೋ ಬಾರಿ ನಗು ಬರುತಿತ್ತು. ಅದೆಷ್ಟೋ ಸಾರಿ ಅವರ ಕಥೆಗಳಲ್ಲಿ ಇಂಗ್ಲಿಷಿನ ವಿಲ್ ಸ್ಮಿತ್ ಸಿನಿಮಾದ ನಾಯಕನ ಬದಲು ಕನ್ನಡದ ರಾಮಣ್ಣನಾಗಿ ಹೆಂಡತಿಗೆ ಮೋಸ ಮಾಡಿದ ಕ್ರೂರ ವಿಲನ್ ನಂತೆಯೂ, ಮಲೆಯಾಳದ ಮುಮ್ಮೂಟ್ಟಿ ಪಕ್ಕದ ಬೀದಿಯ ಗೋಪಾಲನಾಗಿ ಹಿತ್ತಲು ಕೇರಿಯ ಸರೋಜಮ್ಮನ ಚಿಕ್ಕಪ್ಪನಾಗಿಯೂ ಆಕೆಯ ಶೀಲವನ್ನು ಕಾಪಾಡಿದ ಶ್ರೀಕೃಷ್ಣನಂತೆಯೂ ಚಿತ್ರಿತವಾಗಿರುತ್ತಿದ್ದರು. ಸಾಲದ್ದಕ್ಕೆ ಇವರ ಕಥೆಗಳಲ್ಲಿ ಅನಿಮಲ್ ಪ್ಲಾನೆಟ್ಟಿನ ಇಲಿ, ನವಿಲುಗಳು, ಗಣಪತಿ-ಕಾರ್ತಿಕೇಯನ ವಾಹನಗಳಾಗಿಯೂ ಡಿಸ್ಕವರಿಯ ವಾಲ್ಕೆನೋಗಳು ಶಿವನ ರೌದ್ರ ನರ್ತನಗಳಾಗಿಯೂ ನ್ಯಾಷನಲ್ ಜಿಯಾಗ್ರಾಫಿಯ ಸಮುದ್ರ, ಪರ್ವತಗಳು ಕ್ಷೀರಸಾಗರ, ಮಂದರ ಪರ್ವತಗಳಾಗಿಯೂ ಅವರ ಕಥೆಗಳಲ್ಲಿ ತಮ್ಮದೇ ಪ್ರಾಮುಖ್ಯ ಗಳಿಸಿಕೊಳ್ಳುತ್ತಿದುದು ಆನಂತರ ಆ ಕತೆಯನ್ನು ಕೇಳುವವರಿಗೆ ಬಹಳ ಮಜಾದಾಯಕವಾಗಿರುತಿತ್ತು. ಕೆಲವೊಮ್ಮೆ ಸ್ಕೂಲಿನಿಂದ ಬರುತ್ತಿದ್ದ ನಾನು ಅವರು ಟಿವಿ ಕತೆಯನ್ನು ಇನ್ನಷ್ಟು ಸ್ವಾರಸ್ಯಕರವಾಗಿ ಮಾಡಲು ನಿಧಾನಕ್ಕೆ ಚಾನೆಲ್ ಗಳನ್ನು ಬದಲಿಸಿ ಬಿಡುತ್ತಿದ್ದೆ. ಆಗ ಕಥೆಯು ಹೊಸ ತಿರುವು ಪಡೆದು ಒಂದು ಭಾಗ ಹಳೆಯ ಕತೆಯ ಮುಂದುವರಿದ ಭಾಗಗಳಾಗಿ ಮೂಡಿಬರುತಿದ್ದವು. 

ಅವರ ಆ ಮುಗ್ಧ ಕಲ್ಪನೆ ಅಂದು ನನಗೆ ಹಾಸ್ಯಾಸ್ಪದವಾಗಿ ಕಂಡು ಬಂದರೂ,ಎರಡು ದಶಕಗಳ ನಂತರ,ಇಂದು ಅದೇ ಸನ್ನಿವೇಶಗಳು ಮನುಷ್ಯ ತನ್ನ ಸುತ್ತಲಿನ ಸಮಾಜವನ್ನು, ತನ್ನ ತಿಳಿವಳಿಕೆಯ ಆಧಾರದ ಮೇಲೆ ಹೇಗೆ ಅರ್ಥೈಯಿಸಿಕೊಳ್ಳಲು ಪ್ರಯತ್ನಿಸುತ್ತಾನೆಂಬ ಸೂಕ್ಷ್ಮ ಅವಲೋಕನ ನನ್ನ ಗ್ರಹಿಕೆಗೆ ಬಿಚ್ಚಿಡುತ್ತದೆ. ಅವರಂತೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಗಳಿಸಿಕೊಂಡಿರುವ ಅನುಭವಗಳ ಮೂಲಕ, ತಾವು ಕಟ್ಟಿಕೊಂಡಿರುವ ನಂಬಿಕೆಗಳ ಮೂಲಕ ತಮ್ಮ ಸುತ್ತ ನಡೆಯುವ ಸನ್ನಿವೇಶಗಳನ್ನು ತಮ್ಮ ತಮ್ಮ ಮನಸ್ಸುಗಳಲ್ಲಿ ಅರ್ಥಯಿಸಿಕೊಳ್ಳಲು ಪ್ರಯತ್ನಿಸಿರುತ್ತಾರೆ ಎಂದೆನಿಸುತ್ತದೆ.ಹಾಗಾಗಿಯೇ ಸನ್ನಿವೇಶ ಒಂದೇ ಆದರೂ ಅದರ ಬಗ್ಗೆ ನಾವುಗಳು ನಮ್ಮ ನಮ್ಮ ಮನಸ್ಸುಗಳಲ್ಲಿ ಎಳೆಯುವ ಸಮಾನಾಂತರಗಳು, ನಿರ್ಧಾರಗಳು ಬದಲಾಗುತ್ತವೆ. ಒಬ್ಬರಿಗೆ ಸರಿ ಎನ್ನಿಸುವ ಅದೇ ವಿಚಾರಗಳು ಇನ್ನೊಬ್ಬರಿಗೆ ತಪ್ಪಾಗಿ ಕಂಡು ಬರುತ್ತವೆ. ಈ ವ್ಯತ್ಯಾಸಗಳು ನಮ್ಮ ನಡುವೆ ಇರುವುದರಿಂದಲೇ ನಾವೆಲ್ಲರೂ ಪ್ರತ್ಯೇಕ ವ್ಜಕ್ತಿಗಳಾಗಿ ಇಲ್ಲಿ ಅಸ್ತಿತ್ವವನ್ನು ಹೊಂದಿರುತ್ತೇವೆ. ಆದರೆ ಈ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಯಿಸಿಕೊಳ್ಳದ ಬಹುಮುಖಿ ಮನಸ್ಸು ಕೇವಲ ನಾವುಗಳು ಗ್ರಹಿಸುವ ವಸ್ತುನಿಷ್ಠ ಸತ್ಯವನ್ನೇ ಅಂತಿಮ ಸತ್ಯವೆಂದು ಪಟ್ಟು ಹಿಡಿದು ವಾದಿಸುವಂತೆ ಮಾಡುತ್ತದೆ. 

 

                                                                                                                                                             - ಸದಾನಂದ ಚಂದ್ರಶೇಖರಯ್ಯ