ಅಕ್ರಮಗಳ ವಿರುದ್ಧ ಕಠಿಣ ಕ್ರಮ : ಅದು ಕೇವಲ ವಿವೇಚನೆಯ ಪ್ರಶ್ನೆಯಲ್ಲ; ಚುನಾವಣಾ ಆಯೋಗದ ಸಾಂವಿಧಾನಿಕ ಕರ್ತವ್ಯ

ಅಕ್ರಮಗಳ ವಿರುದ್ಧ ಕಠಿಣ ಕ್ರಮ : ಅದು ಕೇವಲ ವಿವೇಚನೆಯ ಪ್ರಶ್ನೆಯಲ್ಲ; ಚುನಾವಣಾ ಆಯೋಗದ ಸಾಂವಿಧಾನಿಕ ಕರ್ತವ್ಯ

ಸಮಸ್ಯೆಯ ಮೂಲ ಇರುವುದು ಚುನಾವಣಾ ಆಯುಕ್ತರ ನೇಮಕಾತಿ ಪದ್ಧತಿಯಲ್ಲಿನ ದೋಷಗಳಲ್ಲಿ. ಆಯುಕ್ತರನ್ನು ಆಡಳಿತಾರೂಢ ಸರ್ಕಾರಗಳು ಏಕಪಕ್ಷೀಯವಾಗಿ ನೇಮಕ ಮಾಡುತ್ತವೆ. ವಿಶಾಲ ತಳಹದಿಯ ಸಲಹಾ ಮಂಡಲಿಯನ್ನು ರಚಿಸಿ ಆಯುಕ್ತರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಇರದಂತೆ ಮಾಡಲು ಆಗ್ರಹ ಕೇಳಿಬರುತ್ತಲೇ ಇದೆ. ಇತರ ದೇಶಗಳಲ್ಲಿ ಹೀಗೆಯೇ ಮಾಡಲಾಗುತ್ತದೆ.  ಸೇವಾ ಹಿರಿತನದ ಮೇಲೆ ಬಡ್ತಿ ನೀಡಲಾಗುವುದರಿಂದ ಆಯುಕ್ತರು ಸರ್ಕಾರದ ಒತ್ತಡಗಳಿಗೆ ಮಣಿಯಬೇಕಾಗುತ್ತದೆ ಎನ್ನುತ್ತಾರೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ.

2019ರ ಮಹಾ ಚುನಾವಣೆಗಳು ಎರಡು ಕಾರಣಗಳಿಂದ ಬಹುಕಾಲ ನೆನಪಿನಲ್ಲುಳಿಯುತ್ತವೆ. ಮೊದಲನೆಯದು ಉನ್ನತ ರಾಜಕೀಯ ನಾಯಕರ ಸೀಮೋಲ್ಲಂಘನ ಮತ್ತು ಎರಡನೆಯದಾಗಿ ಕೇಂದ್ರ ಚುನಾವಣಾ ಆಯೋಗ ಸ್ವತಃ ಇಕ್ಕಟ್ಟಿನಲ್ಲಿ ಸಿಲುಕಿರುವುದು. ಚುನಾವಣಾ ಆಯೋಗ ಸತತವಾಗಿ ವಿರೋಧ ಪಕ್ಷಗಳಿಂದ, ಸಾರ್ವಜನಿಕರಿಂದ, ಮಾಧ್ಯಮಗಳಿಂದ ಮತ್ತು ನ್ಯಾಯಾಂಗದಿಂದ ತೀವ್ರ ದಾಳಿಗೊಳಗಾಗಿದೆ. ಇದುವರೆಗೂ ದೇಶದ ಅಡಳಿತ ವ್ಯವಸ್ಥೆಯಲ್ಲಿ ಅತಿ ಹೆಚ್ಚಿನ ನಂಬಿಕಸ್ಥ ಸಂಸ್ಥೆಯಾಗಿದ್ದ ಆಯೋಗದ ಇತಿಹಾಸದಲ್ಲಿ ಇದು ಅಚ್ಚರಿ ಮೂಡಿಸುವ ವಿಷಯವಾಗಿದೆ.

ವಿಶ್ವಾಸಾರ್ಹತೆಯ ಕೊರತೆ

ಚುನಾವಣಾ ಆಯೋಗ ಮತ್ತು ವಿರೋಧ ಪಕ್ಷಗಳ ನಡುವೆ ವಿಶ್ವಾಸಾರ್ಹತೆಯ ಕೊರತೆ ಆರಂಭವಾಗಿದ್ದು ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಬಳಕೆಯಿಂದ.  ಈ ನಿಟ್ಟಿನಲ್ಲಿ ಆಯೋಗ ಸಮರ್ಥವಾಗಿ ತನ್ನ ನಿಲುವು ಸ್ಪಷ್ಟಪಡಿಸದೆ ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. 

ಏಪ್ರಿಲ್ 8ರಂದು ರಾಷ್ಟ್ರಪತಿಗಳಿಗೆ ಬರೆದ ಪತ್ರವೊಂದರಲ್ಲಿ ದೇಶದ ಹಲವು ನಿವೃತ್ತ ಅಧಿಕಾರಿಗಳು, ರಾಯಭಾರಿಗಳು ಚುನಾವಣಾ ಆಯೋಗದ ದೌರ್ಬಲ್ಯ ಮತ್ತು ಮೃದು ಧೋರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಈ ಸಂಸ್ಥೆ ಇಂದು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸುತ್ತಿದೆ ಎಂದು ಆರೋಪಿಸಿದ್ದಾರೆ.

 ಕಳೆದ ಎರಡು ತಿಂಗಳ ಅವಧಿ ಆಯೋಗದ ಪಾಲಿಗೆ ಸವಾಲುಗಳ ಸಂದರ್ಭವಾಗಿದೆ. ನಾನು 2012ರಲ್ಲಿ ನಿವೃತ್ತಿ ಹೊಂದಿದ ನಂತರ ಆಯೋಗದ ಪರವಾಗಿ ಸ್ವ ಇಚ್ಚೆಯಿಂದ ವಕ್ತಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿದ್ದೆಡೆಯಲ್ಲಾ ಆಯೋಗದ ಎಲ್ಲ ಕ್ರಮಗಳನ್ನು ಸಮರ್ಥಿಸುತ್ತಲೇ ಬಂದಿದ್ದೇನೆ. ಇತ್ತೀಚಿನ ಬೆಳವಣಿಗೆಗಳನ್ನು ಕುರಿತು ಪ್ರತಿಕ್ರಯಿಸುವಂತೆ ಮಾಧ್ಯಮಗಳ ನೂರಾರು ಕೋರಿಕೆಗಳನ್ನು ತಿರಸ್ಕರಿಸಿದ್ದೇನೆ. ಕೆಲವು ಸಂದರ್ಭಗಳಲ್ಲಿ ನನ್ನನ್ನು ಚರ್ಚೆಗೆ ಎಳೆದುತರಲಾಗಿದೆ. ಈ ಚರ್ಚೆಗಳ ಸಂದರ್ಭದಲ್ಲಿ ನಾನು ಹೆಮ್ಮೆಯಿಂದ ಗುರುತಿಸಿಕೊಳ್ಳುವ ಈ ಸಂಸ್ಥೆಯನ್ನು ನಿಂದಿಸುವಂತೆ ಕಾಣದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ತಡಕಾಡಿದ್ದೇನೆ.

 ಇತ್ತೀಚೆಗೆ ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಇಬ್ಬರು ನಿವೃತ್ತ ಮುಖ್ಯ ಚುನಾವಣಾ ಆಯುಕ್ತರ ಮುಖದಲ್ಲೂ ಇದೇ ರೀತಿಯ ಆತಂಕವನ್ನು ಗಮನಿಸಿದ್ದೇನೆ. ಈ ಸಂದರ್ಭದಲ್ಲಿ ನನಗೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ “ ನಾವು ಗಂಭೀರವಾದ ವಿಚಾರಗಳ ಬಗ್ಗೆ ಮೌನ ವಹಿಸಿದ ದಿನದಂದೇ ನಮ್ಮ ಜೀವನದ ಅಂತ್ಯ ಆರಂಭವಾಗುತ್ತದೆ  ” ಎಂಬ ಹೇಳಿಕೆಯೂ, ತತ್ವಶಾಸ್ತ್ರಜ್ಞ ಪ್ಲೇಟೋನ “ ನಿಮ್ಮ ಮೌನವನ್ನು ನಾನು ಸಮ್ಮತಿ ಎಂದು ಭಾವಿಸುತ್ತೇನೆ ” ಎಂಬ ಹೇಳಿಕೆಯೂ ನೆನಪಾಗುತ್ತದೆ.

ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡಲು ಸರ್ವೋಚ್ಚ ನ್ಯಾಯಾಲಯ ಕಠಿಣ ಆದೇಶ ನೀಡಬೇಕಾಯಿತು. ಚುನಾವಣಾ ಆಯೋಗಕ್ಕೆ ಸದಾ ಇದ್ದ ಅಧಿಕಾರವನ್ನು ನೆನಪಿಸಲು ಸರ್ವೋಚ್ಚ ನ್ಯಾಯಾಲಯ ಮುಂದಾಗಬೇಕಾಗಿದ್ದು ದುರದೃಷ್ಟಕರ. 

ಸಂವಿಧಾನ ವಿಧಿ 329ರ ಅನ್ವಯ ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಚುನಾವಣೆಗಳ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ಆಯೋಗಕ್ಕೆ ಅಧಿಕಾರ ಇರುವುದಿಲ್ಲ. ಹಲವಾರು ತೀರ್ಪುಗಳ ಮೂಲಕ ಸರ್ವೋಚ್ಚ ನ್ಯಾಯಾಲಯವು ಈ ಅಂಶವನ್ನು ಪುನರುಚ್ಚರಿಸಿದ್ದು ಯಾವುದೇ ನ್ಯಾಯಾಲಯ ಮಧ್ಯಪ್ರವೇಶ ಮಾಡದಂತೆ ತಡೆಹಿಡಿದಿದೆ. ಆದರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯ ತಪ್ಪುಗಳನ್ನು ಸರಿಪಡಿಸಲು ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದ್ದು ಇದು ಮೇಲ್ನೋಟಕ್ಕೆ ಕಾಣುವುದಕ್ಕಿಂತಲೂ ಗಂಭೀರ ವಿಚಾರವಾಗಿದೆ.

ಏಪ್ರಿಲ್ 15ರಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠ, ದ್ವೇಷ ಭಾಷಣಗಳು ಮತ್ತು ಮತಧರ್ಮ ಕೇಂದ್ರಿತ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಆಯೋಗವು “ ಆಯೋಗವು ಅಸಹಾಯಕವಾಗಿದ್ದು, ಹಲ್ಲಿಲ್ಲದ ಹುಲಿಯಂತೆ, ಯಾವುದೇ ಅಧಿಕಾರ ಇಲ್ಲದೆ ನೋಟಿಸ್ ಜಾರಿ ಮಾಡಲಾಗಿದೆ, ಸಲಹೆ ನೀಡಲಾಗಿದೆ ಮತ್ತು ಉಲ್ಲಂಘನೆ ಸೀಮೆ ಮೀರಿದ ಸಂದರ್ಭದಲ್ಲಿ ದೂರು ದಾಖಲಿಸಲಾಗಿದೆ ” ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದೆ.

 ಆಯೋಗದ ಈ ನಿಲುವಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಕೆಂಡಾಮಂಡಲವಾಗಿದೆ. 1977ರ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು “ ಈಗ ಜಾರಿಯಲ್ಲಿರುವ ಕಾನೂನುಗಳು ಇಲ್ಲವಾಗಿಯೂ  ಯಾವುದಾದರು ಒಂದು ಸಮಸ್ಯೆಯನ್ನು ಪರಿಹರಿಸಬೇಕಾದಲ್ಲಿ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಕರ್ತವ್ಯ ನಿರ್ವಹಿಸಲು ಶಕ್ತಿ ಕೊಡುವಂತೆ, ತಮ್ಮ ಕಾರ್ಯಾಚರಣೆಯನ್ನು ನಡೆಸುವಂತೆ ಶಕ್ತಿಕೊಡಲು ಎರಡೂ ಕೈಗಳನ್ನು ಜೋಡಿಸಿ ದೇವರನ್ನು ಪ್ರಾರ್ಥಿಸುವುದು ತರವಲ್ಲ. ಅಥವಾ ಸಮಸ್ಯೆಯನ್ನು ನಿಭಾಯಿಸಲು ತಮಗೆ ಅಧಿಕ ಅಧಿಕಾರ ಕೊಡುವಂತೆ ಬಾಹ್ಯ ಅಧಿಕಾರ ಕೇಂದ್ರಗಳನ್ನು ವಿನಂತಿಸುವುದು ಸಮರ್ಥನೀಯವಲ್ಲ.

ಚುನಾವಣೆಗಳನ್ನು ನಡೆಸುವುದರಲ್ಲಾಗಲೀ, ಚುನಾವಣಾ ಪ್ರಕ್ರಿಯೆ ಸಮರ್ಥವಾಗಿ, ಮುಕ್ತ ಹಾಗೂ ಪಾರದರ್ಶಕವಾಗಿ ಪೂರ್ಣಗೊಳ್ಳುವುದರಲ್ಲಾಗಲೀ, ಆಯುಕ್ತರಾದವರು ತಮ್ಮ ಅಧಿಕಾರವನ್ನು ಸ್ವತಂತ್ರವಾಗಿ   ಚಲಾಯಿಸಬೇಕು ” ಎಂದು ಹೇಳಿತ್ತು. ಚುನಾವಣಾ ಆಯೋಗದ ಪಾಲಿಗೆ ಇದು ಬೈಬಲ್‍ನಂತೆ.

ಒಂದು ತಿಂಗಳು ಕಳೆದರೂ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ವಿರುದ್ಧ ಸಲ್ಲಿಸಲಾದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳದೆ ಹೋದಾಗ ಸುಪ್ರೀಂಕೋರ್ಟ್ ಮೇ 6ರ ಒಳಗೆ ಈ ಕಾರ್ಯ ಪೂರೈಸುವಂತೆ ಕಠಿಣ ಆದೇಶ ನೀಡಿತ್ತು.

ಚುನಾವಣಾ ಆಯೋಗ ಪ್ರಾಮಾಣಿಕವಾಗಿ ಹಲವು ದೂರುಗಳನ್ನು ತಿರಸ್ಕರಿಸಿ ಇಬ್ಬರೂ ನಾಯಕರಿಗೆ ಕ್ಲೀನ್ ಚಿಟ್ ನೀಡಿದೆ.  ಈ ಸಂದರ್ಭದಲ್ಲಿ ಚುನಾವಣಾ ಆಯೋಗವನ್ನು ನಿಷ್ಕ್ರಿಯ ಎಂದು ಪರಿಗಣಿಸುವ ವೇಳೆಯಲ್ಲೇ ಮೋದಿ ಮತ್ತು ಷಾ ಅವರಿಗೆ ಕ್ಲೀನ್ ಚಿಟ್ ನೀಡಿದ ಐವರು ಸದಸ್ಯರ ಆಯೋಗದ ಸಮಿತಿಯಲ್ಲಿದ್ದ ಒಬ್ಬರು ಚುನಾವಣಾ ಆಯುಕ್ತರು ತಮ್ಮ ವಿರೋಧ ವ್ಯಕ್ತಪಡಿಸಿರುವುದನ್ನು ಬಹಿರಂಗಪಡಿಸಿರುವುದು ಸ್ವಾಗತಾರ್ಹ ವಿಚಾರ.

 ಚುನಾವಣಾ ಪ್ರಚಾರದಲ್ಲಿ ಸೇನೆಯನ್ನು ಬಳಸುವಂತಿಲ್ಲ ಎಂಬ ಆಯೋಗದ ನಿಯಮವನ್ನು ಪ್ರಧಾನಿ ಮೋದಿ ಉಲ್ಲಂಘಿಸಿದ್ದಾರೆ ಎಂದೇ ಈ ಆಯುಕ್ತರು ಪ್ರತಿಪಾದಿಸಿದ್ದಾರೆ. ಈ ಒಂಟಿ ದನಿ ಅಂತಿಮ ತೀರ್ಪಿನ ಮೇಲೆ ಪರಿಣಾಮ ಬೀರಿಲ್ಲ ಆದರೆ ಈ ಪ್ರತಿರೋಧವೇ ಆರೋಗ್ಯಕರ ಬೆಳವಣಿಗೆಯಾಗಿದ್ದು ಒಂದು ಆಶಾಭಾವನೆಯನ್ನು ಮೂಡಿಸಿದೆ.

ನನ್ನ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಚುನಾವಣಾ ಆಯೋಗ ತನ್ನ ಹಲವಾರು ತಪ್ಪು ಹೆಜ್ಜೆಗಳ ಹೊರತಾಗಿಯೂ ತನ್ನ ವರ್ಚಸ್ಸನ್ನು ಉಳಿಸಿಕೊಂಡಿರಲು ಕಾರಣ ಆಯೋಗದ ವಿಶ್ವಾಸಾರ್ಹತೆ ಮತ್ತು ಈ ಸಂಸ್ಥೆಯಲ್ಲಿ ಜನತೆ ಇಟ್ಟಿರುವ ವಿಶ್ವಾಸ. ಒಮ್ಮೆ ಈ ವಿಶ್ವಾಸಾರ್ಹತೆ ಕುಂದಿದರೆ ಸಮಸ್ಯೆ ಉಲ್ಬಣಿಸುತ್ತದೆ.

ನೇಮಕಾತಿ ಮತ್ತು ಪದಚ್ಯುತಿ

ಸಮಸ್ಯೆಯ ಮೂಲ ಇರುವುದು ಚುನಾವಣಾ ಆಯುಕ್ತರ ನೇಮಕಾತಿ ಪದ್ಧತಿಯಲ್ಲಿನ ದೋಷಗಳಲ್ಲಿ. ಆಯುಕ್ತರನ್ನು ಆಡಳಿತಾರೂಢ ಸರ್ಕಾರಗಳು ಏಕಪಕ್ಷೀಯವಾಗಿ ನೇಮಕ ಮಾಡುತ್ತವೆ. ವಿಶಾಲ ತಳಹದಿಯ ಸಲಹಾ ಮಂಡಲಿಯನ್ನು ರಚಿಸಿ ಆಯುಕ್ತರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಇರದಂತೆ ಮಾಡಲು ಆಗ್ರಹ ಕೇಳಿಬರುತ್ತಲೇ ಇದೆ.

ಇತರ ದೇಶಗಳಲ್ಲಿ ಹೀಗೆಯೇ ಮಾಡಲಾಗುತ್ತದೆ.  ಸೇವಾ ಹಿರಿತನದ ಮೇಲೆ ಬಡ್ತಿ ನೀಡಲಾಗುವುದರಿಂದ ಆಯುಕ್ತರು ಸರ್ಕಾರದ ಒತ್ತಡಗಳಿಗೆ ಮಣಿಯಬೇಕಾಗುತ್ತದೆ. ಸರ್ಕಾರ ಮುಖ್ಯ ಚುನಾವಣಾ ಅಧಿಕಾರಿಯನ್ನು ನಿಯಂತ್ರಿಸಲು ಇಬ್ಬರು ಆಯುಕ್ತರ ಮತದಾನದ ಹಕ್ಕನ್ನು ಬಳಸಬಹುದು.

ತನ್ನ 255ನೆಯ ವರದಿಯಲ್ಲಿ ಭಾರತೀಯ ಕಾನೂನು ಆಯೋಗ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯೆಗೆ ಆಯ್ಕೆ ಮಂಡಲಿಯನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು. ಹಿರಿಯ ರಾಜಕೀಯ ನಾಯಕರಾದ ಎಲ್ ಕೆ ಅಡ್ವಾಣಿ, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಬಿ ಬಿ ಟಂಡನ್, ಎನ್ ಗೋಪಾಲಸ್ವಾಮಿ ಮತ್ತು ನಾನು ಸೇವೆಯಲ್ಲಿದ್ದಾಗಲೇ ಇದನ್ನು ಅನುಮೋದಿಸಿದ್ದೆವು. ಆದರೆ ಎಲ್ಲ ಸರ್ಕಾರಗಳೂ ಇದನ್ನು ನಿರ್ಲಕ್ಷಿಸುತ್ತಿದ್ದು ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಿಂತಲೂ ರಾಜಕೀಯ ಮತ್ತು ಚುನಾವಣಾ ಹಿತಾಸಕ್ತಿಯೇ ಮೇಲುಗೈ ಸಾಧಿಸುತ್ತಿರುವುದು ಇಲ್ಲಿ ಸ್ಪಷ್ಟ.

2018ರಲ್ಲಿ ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.  ಈ ಅರ್ಜಿಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿದೆ.

ಇಂತಹ ಮುಖ್ಯವಾದ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯವೂ ಸಹ , ಪ್ರಜಾತಂತ್ರದ ಸಂರಕ್ಷಕ ಸಂಸ್ಥೆಯಾಗಿ, ಶೀಘ್ರ ವಿಚಾರಣೆ ನಡೆಸಿ ಕಾರ್ಯಪ್ರವೃತ್ತವಾಗಬೇಕಿದೆ. ಪ್ರಜಾತಂತ್ರ ವ್ಯವಸ್ಥೆ ಹಾದಿ ತಪ್ಪಿದರೆ ನ್ಯಾಯಾಲಯವೂ ಅಪಾಯಕ್ಕೆ ಸಿಲುಕುತ್ತದೆ.  ನೇಮಕಾತಿಯ ವಿಧಾನವಷ್ಟೇ ಅಲ್ಲದೆ ಚುನಾವಣಾ ಆಯುಕ್ತರ ಪದಚ್ಯುತಿಯ ನಿಯಮಗಳಲ್ಲೂ ಬದಲಾವಣೆ ಅಗತ್ಯವಿದೆ.

ಈಗಿನ ನಿಯಮಾನುಸಾರ ಮುಖ್ಯ ಚುನಾವಣಾ ಆಯುಕ್ತರನ್ನು ಅವರ ಹುದ್ದೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ.  ಅರಂಭದಲ್ಲಿ ಚುನಾವಣಾ ಆಯೋಗ ಏಕಸದಸ್ಯ ಸಂಸ್ಥೆಯಾಗಿದ್ದುದರಿಂದ ಮುಖ್ಯ ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡಲಾಗಿತ್ತು. ಇದನ್ನು ಈಗ ಇತರ ಆಯುಕ್ತರಿಗೂ ಅನ್ವಯಿಸಬೇಕಾಗುತ್ತದೆ. 1993ರಲ್ಲಿ ಆಯೋಗಕ್ಕೆ ಇನ್ನಿಬ್ಬರು ಆಯುಕ್ತರನ್ನು ಸೇರ್ಪಡಿಸಲಾಗಿತ್ತು.

ಭಾರತದ ಪ್ರಜಾತಂತ್ರ ಇತಿಹಾಸದಲ್ಲಿ ಪ್ರಭುತ್ವದ ಎಲ್ಲ ಸಂಸ್ಥೆಗಳೂ ಒಂದಲ್ಲಾ ಒಂದು ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗಿವೆ. ಆದರೆ ಸಂಸ್ಥೆಗಳ ಸಾಮಥ್ರ್ಯ ಮತ್ತು ವಿಶ್ವಾಸಾರ್ಹತೆ ಪರೀಕ್ಷೆಗೊಳಗಾಗುವುದು ಸರ್ಕಾರದ ಒತ್ತಡಕ್ಕೆ ಸಿಲುಕಿದಾಗ ಮಾತ್ರ. ದುರಂತ ಎಂದರೆ ಇಂದಿನ ಸಂದರ್ಭದಲ್ಲಿ ರಾಜಕೀಯ ನಾಯಕರ ಅಸಾಂವಿಧಾನಿಕ ನಡತೆ ಚರ್ಚೆಗೊಳಗಾಗದೆ ಚುನಾವಣಾ ಆಯೋಗವೇ ಚರ್ಚೆಯ ಕೇಂದ್ರ ಬಿಂದುವಾಗಿದೆ.

ಕಳೆದ ಎರಡು ದಶಕಗಳಲ್ಲಿ ನಲವತ್ತಕ್ಕೂ ಹೆಚ್ಚು ಚುನಾವಣಾ ಸುಧಾರಣೆಗಳು ಬಾಕಿ ಉಳಿದಿವೆ. ರಾಜಕೀಯ ನಾಯಕತ್ವದಲ್ಲಿ ಯಾವುದೇ ಭರವಸೆ ಸಾಧ್ಯವಾಗದೆ ಹೋದಾಗ ಚುನಾವಣಾ ಆಯೋಗ ತನ್ನ ಅಧಿಕಾರವನ್ನು ಬಳಸಿ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸಬೇಕಿದೆ. ಈ ನಿಟ್ಟಿನಲ್ಲಿ ಆಯೋಗಕ್ಕೆ ಸರ್ವೋಚ್ಚ ನ್ಯಾಯಾಲಯದ ಸಂಪೂರ್ಣ ಬೆಂಬಲ ಪ್ರೋತ್ಸಾಹ ಇರುತ್ತದೆ.

ಆಯೋಗ ಕಠಿಣ ನಿಲುವು ತಾಳುವುದು ಅನಿವಾರ್ಯ. ಇದು ಕೇವಲ ವಿವೇಚನೆಯ ಪ್ರಶ್ನೆಯಲ್ಲ ಸಾಂವಿಧಾನಿಕ ಕರ್ತವ್ಯವೂ ಆಗಿದೆ. ಸರ್ಕಾರಗಳು ಬಂದು ಹೋಗುತ್ತವೆ ಆದರೆ ಚುನಾವಣಾ ಆಯೋಗದ ಗೌರವ ಉಳಿದರೆ ಒಳಿತು.

                        (ಮೂಲ : ದಿ ಹಿಂದೂ ಪತ್ರಿಕೆ, ಕನ್ನಡಕ್ಕೆ : ನಾ ದಿವಾಕರ)