ಅಮ್ಮಂದಿರ ದಿನ ಇಂದು

ಅಮ್ಮಂದಿರ ದಿನ ಇಂದು
picture/sbs.com.au

ಇಂದು ವಿಶ್ವ ಅಮ್ಮಂದಿರ ದಿನಾಚರಣೆ. ಈ ದಿನಾಚರಣೆಯು ಯಾವ ಉದ್ದೇಶಕ್ಕಾಗಿ, ಹೇಗೆ ಹುಟ್ಟಿಕೊಂಡಿತು, ಕ್ರಮೇಣ ಬಂಡವಾಳಶಾಹಿಗಳ ವಾಣಿಜ್ಯೋದ್ಯಮದ ತಂತ್ರದಿಂದ ಆಚರಣೆಯ ಉದ್ದೇಶವೇ ಬದಲಾಗಿರುವುದರ ಬಗ್ಗೆ ಜಿ ಆರ್ ಸತ್ಯಲಿಂಗರಾಜು ಅವರ ಲೇಖನ.

ಮೇ ತಿಂಗಳ ಎರಡನೇ ಭಾನುವಾರ `ಅಮ್ಮಂದಿರ ದಿನಾಚರಣೆ'. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಮದರ್ಸ್ ಸಂಡೆ, ಮದರ್ಸ್ ಡೇ ಎಂಬ ಹೆಸರಲ್ಲೂ ಆಚರಿಸುವ ಇದು ಇತ್ತೀಚಿನ ಟ್ರೆಂಡ್ ಅಲ್ಲ. ಕ್ರಿ.ಪೂ. 250 ರಿಂದಲೇ ಇದು ಇತ್ತು.

 ಗ್ರೀಕರ ಅನುಸಾರ `ರ್ಹಿಆ' , ರೋಮನ್ ನಂಬುಗೆ ಅನುಸಾರ `ಸಿಬೆಲೆ' ದೇವಾನುದೇವತೆಗಳ ತಾಯಂದಿರು. ಇವರಿಗೆ ಗೌರವ ಸಲ್ಲಿಸುವುದಕ್ಕಾಗಿಯೇ ಸಮೀಪದ ಚರ್ಚುಗಳಿಗೆ ಹೋಗುತ್ತಿದ್ದರು. ಯುಕೆಯ ಲೆಂಟ್ ಪ್ರದೇಶದಲ್ಲಿ ಈಸ್ಟರ್ ಸಂಡೆಗಿಂತ ನಾಲ್ಕು ವಾರದ ಹಿಂದಿನ ಭಾನುವಾರದಂದು ವರ್ಜಿನ್ ಅಥವಾ ತಾಯಿ ಮೇರಿ ಚರ್ಚಿಗೆ ಹೋಗಿ ಗೌರವ ಸಲ್ಲಿಸುತ್ತಿದ್ದರು. ಕುಟುಂಬದ ಮಕ್ಕಳು ಹಾಗು ಇತರೆ ಸದಸ್ಯರು ಬೇರೆ ಬೇರೆ ಕಡೆ ಹೋಗಿದ್ದರೂ, ಈ ದಿನದಂದು ಮಾತ್ರ ಮರಳಿ ಬಂದು ಒಟ್ಟಿಗೆ ಇರಲೇಬೇಕಾಗುತ್ತಿದ್ದರಿಂದ, ಇದೊಂದು ರೀತಿಯಲ್ಲಿ ಕೌಟುಂಬಿಕ ಸಂಬಂಧವನ್ನ ಉಳಿಸುವ ಬೆಳೆಸುವ ಉದ್ದೇಶವನ್ನೊಂದಿತ್ತು.

 ಹದಿನಾರನೇ ಶತಮಾನದಲ್ಲಿ ಅಮ್ಮಂದಿರ ದಿನ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತಾದರೂ, ಕ್ರಮೇಣ ಸವಕಲಾಗುತ್ತಾ ಬಂದಿತ್ತು. ಆದರೆ ಕೈಗಾರಿಕಾ ಕ್ರಾಂತಿಗಳು,  ಎರಡನೇ ವಿಶ್ವಯುದ್ದದ ಸಂದರ್ಭಗಳು ಮತ್ತೆ ಈ ದಿನವನ್ನ ಮುಂಚೂಣಿಗೆ ತಂದವು. ಕೈಗಾರಿಕಾ ಕ್ರಾಂತಿಗಳಲ್ಲಿ ಮಹಿಳಾ ಕಾರ್ಮಿಕರೂ ಹೆಚ್ಚಾಗಿ ತೊಡಗಿಕೊಂಡರು. ಇವರ ಮಕ್ಕಳು ವಿವಿಧ ಕಾರಣಕ್ಕಾಗಿ ತಾಯಿಯಿಂದ ದೂರಾಗಿ ಉದ್ದಿಮೆಗಳಲ್ಲಿ ದುಡಿಯುತ್ತಾ ಸಂಕಷ್ಟಕ್ಕೀಡಾಗಿದ್ದರು. ಜಾಗತೀಕ ಯುದ್ದ ಕೂಡ ತಾಯಿ ಮಕ್ಕಳು ಮತ್ತು ಕುಟುಂಬವನ್ನ ಛಿದ್ರಗೊಳಿಸಿತ್ತು.  ಆ ಹಿನ್ನೆಲೆಯಲ್ಲಿ ಮತ್ತೆ ತಾಯಂದಿರ ದಿನ ಮತ್ತೆ ಮಹತ್ವದ್ದಾಗುತ್ತಾ ಬಂತು.

 ಅಮೆರಿಕಾ ಸಂಯುಕ್ತ ಸಂಸ್ಥಾನ ಒಗ್ಗೂಡಿಸುವ ಉದ್ದೇಶವನ್ನೂ ಒಳಗೊಂಡು ಅಲ್ಲಿನ ವೆಸ್ಟ್ ವರ್ಜಿನ್‍ನ ಗ್ರಾಫಿನ್ ಪ್ರದೇಶದ ಅನ್ನಾ ಜರ್ವಿಸ್ ಎಂಬಾಕೆ 1908 ರಲ್ಲಿ ತನ್ನ ತಾಯಿಯ ನೆನಪಲ್ಲಿ ಅಮ್ಮಂದಿರ ದಿನವನ್ನ ಆಚರಿಸಿ, ಅದನ್ನೇ ಇತರರು ಅನುಸರಿಸಲು ಮತ್ತು ಅಮೆರಿಕ ಒಗ್ಗೂಡುವ ಆಶಯವನ್ನ ಸಾಧಿಸಲು `ಲೇಡಿ ಕ್ಲಬ್'ಗಳನ್ನ ಆರಂಭಿಸಿದರು. ಅಲ್ಲಿಂದಾಚೆಗೆ ಮದರ್ಸ್ ಸಂಡೆ ಅಥವಾ ಮದರ್ಸ್ ಡೇ ಎಂಬುದು ಬೇರೆ ಬೇರೆ ರಾಷ್ಟ್ರಗಳಲ್ಲೂ ಆಚರಣೆಗೆ ಬಂತು.

ಚರ್ಚುಗಳಲ್ಲಿ 1912 ರಿಂದಲೇ ತಾಯಂದಿರ ದಿನಾಚರಣೆಯನ್ನ ಅಧಿಕೃತವಾಗಿ ಆಚರಿಸುವುದು ಆರಂಭವಾಗಿ, 1914 ರಲ್ಲಿ ಅಮೆರಿಕ ಈ ದಿನವನ್ನ ಸಾರ್ವತ್ರಿಕ ರಜಾ ದಿನವನ್ನಾಗಿ ಘೋಷಿಸಿತು.

 ವಾಣಿಜ್ಯೋದ್ಯಮದ ಪಾತ್ರ;

  ತಾಯಂದಿರ ದಿನಾಚರಣೆ ವರ್ಷವರ್ಷಕ್ಕೂ ತನ್ನದೇ ಆದ ಟ್ರೆಂಡ್ ಪಡೆಯಲು ಮುಂದಾಗಿದ್ದು ಬಂಡವಾಳಶಾಹಿಗಳು, ವ್ಯಾಪಾರೋದ್ಯಮಿಗಳು. ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆಗೆ ಸೀಮಿತವಾಗಿದ್ದನ್ನ ಹೂವುಗುಚ್ಚ ಕೊಡಬೇಕು, ಗ್ರೀಟಿಂಗ್ ಕಾರ್ಡು ಕೊಡಬೇಕು ಎಂಬುದನ್ನ ವ್ಯಾಪಾರ ತಂತ್ರವನ್ನಾಗಿ ಬದಲಿಸಿದರು. ಬೇರೆ ಹಬ್ಬಗಳಲ್ಲಿದ್ದ ಸಂಪ್ರದಾಯದಂತೆ ಅಮ್ಮಂದಿರ ದಿನಾಚರಣೆಯಲ್ಲು ಕೇಕ್, ಹಬ್ಬದೂಟ ಇತ್ಯಾದಿಯಂಥದ್ದು ಬಳಕೆಗೆ ಬರುವಂತೆ ಮಾಡಿದರು. (ಇಷ್ಟೊಂದು ವಾಣಿಜ್ಯಕರಣಗೊಂಡಿದ್ದರಿಂದ ಬೇಸತ್ತ ಅನ್ನಾ ಜಾರ್ವಿಸ್ ಕೊನೆಕೊನೆಗೆ ತಾನೇ ರೂಪುಕೊಟ್ಟಿದ್ದ ಅಮ್ಮಂದಿರ ದಿನಾಚರಣೆ ಆಚರಣೆಯನ್ನ ಕೈಬಿಡುವಂತಾಗಿತ್ತು)

 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೇ ಬೇರೆ, ವಿಶ್ವ ಅಮ್ಮಂದಿರ ದಿನಾಚರಣೆಯೇ ಬೇರೆಯಾಗಿ ಆಚರಣೆಯಾಗುತ್ತಿರುವಂಥದ್ದು ಮೂಲತ: ದೇವರುಗಳ ತಾಯಂದಿರಿಗೆ ನಮಿಸುವ ಉದ್ದೇಶದಿಂದ ಇದ್ದುದು, ಕುಟುಂಬದ ತಾಯಿ ಮಕ್ಕಳೆಲ್ಲ ಒಂದು ದಿನವಾದರೂ ಜತೆಗಿರಬೇಕು ಎಂಬುದಾಗಿ ಪರಿವರ್ತನೆಗೊಂಡು, ಅಮೆರಿಕ ಒಂದುಗೂಡಲು ಮಹಿಳೆಯರು ಪಟ್ಟ ಪ್ರಯತ್ನ, ಕೈಗಾರಿಕಾ ಕ್ರಾಂತಿ, ವಿಶ್ವ ಸಮರದಲ್ಲಿ ತಾಯಂದಿರ ಪಾತ್ರವನ್ನ ನೆನೆವುದಕ್ಕಾಗಿ ಬೆಳೆದುಬಂದು, ಕೊನೆಗೆ ವಾಣಿಜ್ಯಕರಣಗೊಂಡು ಬಿಟ್ಟಿದೆ.

 ಭಾರತದಲ್ಲಿ....

 ಅಮೆರಿಕ ಒಗ್ಗೂಡಲು ಅಮ್ಮಂದಿರ ದಿನ ಆಚರಣೆಗೆ ಲೇಡಿ ಕ್ಲಬ್‍ಗಳನ್ನ ಕಟ್ಟಿದಂತೆಯೇ, ಸ್ವಾತಂತ್ರ್ಯ ಹೋರಾಟಕ್ಕೆ ಜನ ಒಂದಾಗಲು ಬಾಲಗಂಗಾಧರನಾಥ ತಿಲಕ್ `ಗಣಪತಿ ಕೂರಿಸುವ' ಪರಿಪಾಠವನ್ನ ಆರಂಭಿಸಿದರು. ಅದು ಕ್ರಮೇಣ ವಾಣಿಜ್ಯಕರಣವಾಗಿ ರೂಪಾಂತರಗೊಂಡು, ಮೂಲ ಆಶಯವನ್ನೇ ಮರೆತಿದೆ ಎಂಬುದನ್ನೂ ಇಲ್ಲಿ ಮನಗಾಣಬಹುದು.

 ಅಮ್ಮಂದಿರ ದಿನವನ್ನ ಪಾಶ್ಚಿಮಾತ್ಯರ ಅನುಕರಣೆಯನುಸಾರ ನಮ್ಮಲ್ಲೂ ಆಚರಿಸಲಾಗುತ್ತಿದೆ. ಆದರೆ ಚರ್ಚುಗಳಿಗೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂಥದ್ದು, ದೇವಾಲಯಗಳಿಗೆ ಹೋಗಿ ಪೂಜೆ ಮಾಡುವಂಥದ್ದು ಇಲ್ಲ. ಅಮ್ಮಂದಿರಿಗೆ ವಿಶ್ ಮಾಡುವುದು, ಗಿಫ್ಟ್ ಕೊಡುವುದರಲ್ಲಿ ಮುಗಿಯುತ್ತಿದೆ.