ಜನವಂಚಕರು ಈ ಶಾಸಕರು

ಜನವಂಚಕರು ಈ ಶಾಸಕರು

ಪ್ರಿಯ ಓದುಗರೇ,

ನಾನು, ನಮ್ಮ ಬಳಗ, ನಮ್ಮ ಸಂಸ್ಥೆ ಸಮಾಜಕ್ಕೆ ನಿಷ್ಠೆ ಹೊಂದಿದ್ದೇವೆ. ಅಂದರೆ ನಿಮಗೆ. ಕಳೆದೊಂದು ವಾರದಿಂದ ನಮ್ಮ ಶಾಸಕರು ನಡೆದುಕೊಳ್ಳುತ್ತಿರುವ ರೀತಿಯಿಂದ ನಿಮ್ಮಷ್ಟೇ ನನಗೂ ಆಘಾತವಾಗಿದೆ. ನಾವು ಹೇಗಿರುತ್ತೇವೋ ನಮ್ಮನ್ನ ಪ್ರತಿನಿಧಿಸುವವರೂ ಹಾಗೆಯೇ ಇರುತ್ತಾರೆ. ಅವರ ನಡವಳಿಕೆಗಳನ್ನು ಕಂಡು ನಾವು ಶಪಿಸುತ್ತೇವೆ, ಜನಸಮುದಾಯವನ್ನು ನಿರ್ಲಕ್ಷಿಸಿರುವುದನ್ನು ನೋಡಿ ಅವರೆಲ್ಲರ ಮುಖಕ್ಕೆ ಕ್ಯಾಕರಿಸಿ ಉಗಿಯಬೇಕೆನ್ನಿಸುತ್ತದೆ. ನಾಲ್ಕು ಬಾರಿಸಬೇಕು ಅನ್ನಿಸುತ್ತದೆ. ಆದರೆ ಹಾಗೆ ಮಾಡುವುದು ಸಾಧ್ಯವಿಲ್ಲ. ಕೇವಲ ಗೊಣಗಾಟ, ಅಸಹಾಯಕತೆಯಿಂದ ಮರುಗುತ್ತಿರುತ್ತೇವೆ. ಇಂಥವರನ್ನು ಆಯ್ಕೆ ಮಾಡಿರುವುದೇ ನಾವು. ನಾವು ಆಯ್ಕೆ ಮಾಡಿರುವವರು ಸರಿ ಇಲ್ಲ ಎಂದರೆ ನಾವು ಸರಿ ಇಲ್ಲ ಎಂದೇ ಅರ್ಥ. ನಮ್ಮ ಜಾತಿಯವರು ಎಂಬ ಕಾರಣಕ್ಕೆ ಆಯ್ಕೆ ಮಾಡಿರುತ್ತೇವೆ, ನಮ್ಮ ಮಗುವಿನ ನಾಮಕರಣಕ್ಕೆ, ಮದುವೆಗೆ , ಆಸ್ಪತ್ರೆಗೆ ದಾಖಲಾದಾಗ ಅಂತ ಸಣ್ಣಪುಟ್ಟ ಸಹಾಯ ಮಾಡಿದ ಎಂದು ಅವನಿಗೆ ಮತ ಹಾಕಿರುತ್ತೇವೆ. ಮನಮೋಹಕ ಭಾಷಣದ ಭ್ರಮೆಗೆ ಒಳಗಾಗಿ ಗೆಲ್ಲಿಸಿರುತ್ತೇವೆ. ಈ ಎಲ್ಲ ಸಂದರ್ಭಗಳಲ್ಲೂ ನಾವು ಆಯ್ಕೆ ಮಾಡಿದ ಪ್ರತಿನಿಧಿ ಸಮಾಜಕ್ಕೆ ಏನು ಮಾಡಬಲ್ಲ ಎಂದು ಯೋಚಿಸಿರುವುದಿಲ್ಲ. ಸಮಾಜಕ್ಕೆ ಏನು ಮಾಡಿದ್ದಾನೆ ಎಂದು ತೂಕ ಹಾಕುವುದಿಲ್ಲ. ನಮ್ಮ ವೈಯಕ್ತಿಕ ನಂಬಿಕೆಗಳು, ತತ್ವಗಳು, ನಿಷ್ಕಾರಣವಾದ ಒಲವು, ಯಾವುದೋ ಒಂದು  ಪಕ್ಷ ಇವುಗಳನ್ನೆಲ್ಲ ಆಧರಿಸಿ ಯಾವನೋ ಒಬ್ಬನನ್ನು ಆಯ್ಕೆ ಮಾಡಿರುತ್ತೇವೆ.

ಆಯ್ಕೆಯಾದ ಜನಪ್ರತಿನಿಧಿ ನಿ‍ಷ್ಠನಾಗಿರಬೇಕಾದದ್ದು ಈ ಸಮಾಜಕ್ಕೆ, ಮತ ನೀಡಿದ ಕ್ಷೇತ್ರಕ್ಕೆ. ಆತ ಅಥವಾ ಆಕೆ ಯಾವುದೇ ಪಕ್ಷ, ಸಿದ್ಧಾಂತಕ್ಕೆ ಸೇರಿದ್ದರೂ ಅವರು ಮೊದಲು ಉತ್ತರದಾಯಿಯಾಗಿರಬೇಕಾಗಿರುವುದು ಆಯ್ಕೆ ಮಾಡಿದ ಮತದಾರರಿಗೆ. ನಂತರ ಉಳಿದಿದ್ದೆಲ್ಲ. ಕಳೆದ ಎಂಟು ಹತ್ತು ದಿನಗಳಲ್ಲಿ ಮೊದಲು ಒಂದಿಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದರು. ನಂತರ ಇನ್ನೂ ಕೆಲವು ಶಾಸಕರು ರಾಜೀನಾಮೆ ಕೊಟ್ಟರು. ವೈಯಕ್ತಿಕ ನೆಲೆಯಲ್ಲಿ ಅವರ ರಾಜೀನಾಮೆಗಳಿಗೆ ಸಕಾರಣಗಳಿರಬಹುದು. ಅವರನ್ನು ಮಂತ್ರಿ ಮಾಡಲಿಲ್ಲ, ನಿಗಮ, ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಮನವಿಗೆ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವ ಅಥವಾ ಉಸ್ತುವಾರಿ   ಸಚಿವ ಸ್ಪಂದಿಸಲಿಲ್ಲ ಎನ್ನುವ ಯಾವುದೇ ಕಾರಣಗಳನ್ನು ಅವರು ನೀಡಬಹುದು.

ಆದರೆ ಈ ದಿನಗಳಲ್ಲಿ ಆಯ್ಕೆಯಾಗುತ್ತಿರುವ ಬಹುತೇಕ ಶಾಸಕರು ಸಮಾಜಕ್ಕೆ ಅರ್ಥಾತ್ ಕ್ಷೇತ್ರದ ಜನರಿಗೆ, ಮತದಾರರಿಗೆ, ಕನಿಷ್ಠ ಅವರು ಆಯ್ಕೆಯಾದ ಪಕ್ಷಕ್ಕೂ ನಿಷ್ಠರಾಗಿರುತ್ತಿಲ್ಲ. ಈ ಕ್ಷಣದಲ್ಲಿ ಜಾತ್ಯತೀತನಾಗಿ ನಟಿಸುತ್ತಿದ್ದ ಜನಪ್ರತಿನಿಧಿ ಅವನ ಅಗತ್ಯಗಳಿಗೆ ತಕ್ಕಂತೆ ಪಕ್ಷಾಂತರ ಮಾಡಿ ಕೋಮುವಾದಿಯಾಗಿ ಗುರುತಿಸಿಕೊಳ್ಳುತ್ತಾನೆ. ಈಗ ಕೋಮುವಾದಿಯಾಗಿದ್ದವನು ಮುಂದಿನ ಕೆಲವೇ ಕ್ಷಣಗಳಲ್ಲಿ ಜಾತ್ಯತೀತನ ಪೋಸು ನೀಡುತ್ತಾನೆ. ಈ ಯಾರಿಗೂ ತಮ್ಮನ್ನು ಆಯ್ಕೆ ಮಾಡಿದ ಮತದಾರರು ನೆನಪಾಗುವುದಿಲ್ಲ. ತಮಗೆ ಟಿಕೆಟ್ ನೀಡಿದ ಪಕ್ಷವೂ ಹಾಲುಣಿಸಿದ ತಾಯಿಯಂತೆ ಕಾಣುವುದಿಲ್ಲ.

ಅಚ್ಚರಿಯ ಬೆಳವಣಿಗೆ ನೋಡಿ. ಈಗ ಬಂಡೆದ್ದಿರುವವರಲ್ಲಿ ಸಿದ್ದರಾಮಯ್ಯ ವಿರೋಧಿಗಳೂ ಇದ್ದಾರೆ, ಸಿದ್ದರಾಮಯ್ಯ ಬೆಂಬಲಿಗರೂ ಇದ್ದಾರೆ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಬಯಸದವರೂ ಇದ್ದಾರೆ, ಮುಖ್ಯಮಂತ್ರಿಯ ಸಹೋದರ, ಸಚಿವ ಎಚ್.ಡಿ.ರೇವಣ್ಣನ ಕಾಟ ತಾಳಲಾರದೇ ಮೈತ್ರಿ ಸರ್ಕಾರದಿಂದ ಪಾರಾದರೆ ಸಾಕೆಂದು ರಾಜೀನಾಮೆ ನೀಡಿದವರೂ ಇದ್ದಾರೆ.  ಒಂದು ವರ್ಷ ತುಂಬಿರುವ ಸರ್ಕಾರ ಸಾಧಿಸಿದ್ದು ಅಷ್ಟರಲ್ಲೇ ಇದೆ. ತೆರೆಮರೆಯಲ್ಲಿ ಸರ್ಕಾರದ ಕೀಲಿ ಹಿಡಿದಿರುವ ಸಿದ್ದರಾಮಯ್ಯ ಒಂದಲ್ಲ ಒಂದು ರೀತಿಯಲ್ಲಿ ಕುಮಾರಸ್ವಾಮಿಗೆ ಕಾಟ ಕೊಡುತ್ತಿದ್ದರೆ, ಮುಖ್ಯಮಂತ್ರಿಯಾಗಿ ಆತ ತಾನೇ ಏನು ಮಾಡುವುದು ಸಾಧ್ಯವಿದೆ? ಜೆಡಿಎಸ್‌ನಿಂದ ಮಂತ್ರಿಗಳಾಗಿದ್ದರೂ ಎಷ್ಟೋ ಮಂದಿಗೆ ದೇವೇಗೌಡರ ಮನೆಯ ಜೀತದಾಳುಗಳಂತೆ ನಡೆದುಕೊಳ್ಳಬೇಕಾದ ಪರಿಸ್ಥಿತಿ ಇರುವುದರಿಂದ ಆ ಸ್ಥಾನವೂ ನಿಷ್ಪ್ರಯೋಜಕ ಎನ್ನಿಸಿಬಿಟ್ಟಿದೆ ಏನಾದರೂ ಆಗಲಿ ಮುಖ್ಯಮಂತ್ರಿ ಜತೆ ಉತ್ತಮ ಸಂಪರ್ಕ ಹೊಂದಿ ತನ್ನ ಬೇಳೆ ಬೇಯಿಸಿಕೊಂಡರೆ ಸಾಕೆಂಬ ಮನೋಭಾವದಲ್ಲೇ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಾಲ ಕಳೆದಿರುವುದರಿಂದ ಕಾಂಗ್ರೆಸ್‌ನಲ್ಲಿರುವ ಪಕ್ಷ ನಿಷ್ಠರೂ ಬೇಸತ್ತು ಹೋಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ಆಪರೇಷನ್ ಕಮಲಕ್ಕೆ ಯತ್ನಿಸಿ ವಿಫಲವಾದ ಬಿಜೆಪಿ ಸುಮ್ಮನೆಯಂತೂ ಕುಳಿತಿಲ್ಲ. ಅಲ್ಪಾವಧಿಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಅಧಿಕಾರದ ಹಸಿವು ಇನ್ನೂ ತಣಿದಿಲ್ಲ. ಶಾಸಕರಾದವರಿಗೆಲ್ಲ ಮಂತ್ರಿಗಳಾಗಬೇಕೆಂಬ ಆಸೆ. ಸಹಜವಾಗಿಯೇ ಕಳೆದ ಕಾಂಗ್ರೆಸ್ ಸರ್ಕಾರದಲ್ಲೂ ಮಂತ್ರಿಗಳಾಗಿದ್ದವರಿಗೆ ಮತ್ತೆ ಮೈತ್ರಿ ಸರ್ಕಾರದಲ್ಲೂ ಅವಕಾಶ ನೀಡಿರುವುದಕ್ಕೆ ಬೇಸತ್ತ ಶಾಸಕರ ಅಸಹನೆಯ ಕಟ್ಟೆ ಒಡೆದುಹೋಗಿದೆ. ಕೆಲವು ಹಿರಿಯರಿಗೆ ತಮ್ಮ ಅನುಭವವನ್ನು ಕಡೆಗಣಿಸಿ ಯಾರ್ಯಾರನ್ನೋ ಮಂತ್ರಿಗಳಾಗಿ ಮಾಡಿದ್ದಾರೆಂಬ ಕೋಪ.

ಮಂತ್ರಿಗಳಾಗಿ ಆಯ್ಕೆಯಾಗಬೇಕಿರುವುದು ಜಾತಿಬಲ, ಧನಬಲ, ಸ್ನಾಯುಬಲ, ಉದ್ಯಮಗಳ ಲಾಬಿಗಳಿಂದಲ್ಲ. ಪ್ರಾಮಾಣಿಕತೆ, ಕ್ರಿಯಾಶೀಲತೆ, ದಕ್ಷತೆ, ದಿಟ್ಟತನ, ಪಾರದರ್ಶಕತೆ, ಸರಳತೆ, ಜನಪರ ನಿಲುವು  ಇವೇ ಸಚಿವನೊಬ್ಬನಿಗೆ ಅಥವಾ ಜನಪ್ರತಿನಿಧಿಯೊಬ್ಬನಿಗೆ ಇರಬೇಕಾದ ಅರ್ಹತೆ. ಆದರೆ ಈ ಲಕ್ಷಣಗಳೇ ಇಲ್ಲದ, ಬಹುತೇಕ ಇದಕ್ಕೆ ತದ್ವಿರುದ್ಧ ನಿಲುವಿನೊಂದಿಗೆ ಮುಖವಾಡ ತೊಟ್ಟವರಿಗೇ ಮಣೆ ಹಾಕಲಾಗುತ್ತಿದೆ. ಒಮ್ಮೆ ಮಂತ್ರಿ ಸ್ಥಾನದ ರುಚಿ ನೋಡಿದವನಿಗೆ ಅದರೊಂದಿಗೇ ಅಂಟಿಕೊಂಡಿರಲೇ ಬೇಕಾದ ರೋಗ ತಗುಲಿರುತ್ತದೆ. ಈ ರೋಗಕ್ಕೆ ತಕ್ಕಂತೆ ನಮ್ಮ ವ್ಯವಸ್ಥೆಯೂ ರೂಪುಗೊಂಡಿದೆ. ಯೋಗ್ಯರನ್ನು ಆಯ್ಕೆ ಮಾಡುವ ಬದಲು ತಾತ್ಕಾಲಿಕ ಲಾಭದ ಲೆಕ್ಕಾಚಾರಕ್ಕೆ ಮೊರೆಹೋಗಿಬಿಡುತ್ತೇವೆ. ಇದರಿಂದಾಗಿಯೇ ಅಯೋಗ್ಯರೇ ಸುಂದರ ಮುಖವಾಡಗಳನ್ನು ತೊಟ್ಟು ನಮ್ಮನ್ನು ನಿರಂತರ ವಂಚಿಸುವ ಗುತ್ತಿಗೆ ಪಡೆದುಬಿಡುತ್ತಾರೆ.

ಯಾಕೆಂದರೆ ರಾಜಕೀಯ ಎನ್ನುವುದು ಉದ್ಯಮವಾಗಿ ವರ್ಷಗಳೇ ಕಳೆದಿವೆ. ಸಮಾಜಸೇವೆ ಎನ್ನುವುದು ನಗೆಪಾಟಲಿನ ವಿಷಯವಾಗಿದೆ. ರಾಜಕೀಯ ಅಧಿಕಾರವೂ ಕೆಲವೇ ಕುಟುಂಬಗಳ, ಕೆಲವೇ ಉದ್ಯಮಿಗಳ ಹಿಡಿತದಲ್ಲಿರುವುದರಿಂದ ಜನಪರವಾಗಿ ಯಾವುದೇ ಸರ್ಕಾರ ತುಂಬ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ಸಾಧ್ಯವೇ ಇ‍ಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಎಚ್.ವಿಶ್ವನಾಥ್ ತರಹದ ಜನಪ್ರೀತಿಯ ರಾಜಕಾರಣಿಯೂ ಸಿದ್ದರಾಮಯ್ಯ ಕಾಟಕ್ಕೆ ಬೇಸತ್ತು ಜೆಡಿಎಸ್‌ಗೆ ಪಕ್ಷಾಂತರ ಮಾಡುವ ಬದಲು ಒಂದಷ್ಟು ಸಮಯ ಮೌನವಾಗಿಯೇ ಕಾಂಗ್ರೆಸ್‌ನಲ್ಲೇ ಉಳಿಯಬೇಕಿತ್ತು. ಕಾಲವೇ ನಿರ್ಧರಿಸುವ ಪಲ್ಲಟಗಳಲ್ಲಿ  ಮತ್ತೆ ಕ್ರಿಯಾಶೀಲವಾಗುವುದೂ ಸಾಧ್ಯವಿರುತ್ತಿತ್ತು. ನಿರಂತರವಾಗಿ ಅಧಿಕಾರದಲ್ಲಿರಲೇಬೇಕೆಂಬ ಹುಚ್ಚು ಹಠ ಅವರನ್ನೂ ಹಾದಿ ತಪ್ಪಿಸಿದೆ. ವಿಶ್ವನಾಥ್ ಎಂಬ ಸ್ವಾಭಿಮಾನಿ, ಜೆಡಿಎಸ್‌ ದೇವೇಗೌಡರ ಕೃಪಾಶ್ರಯ ಮತ್ತು ಕುಮಾರಸ್ವಾಮಿ ಮಾಲೀಕತ್ವದ ಪಕ್ಷ ಎಂದು ಗೊತ್ತಿದ್ದರೂ ಅಲ್ಲಿಗೆ ಹೋಗಿದ್ದು ಮೊದಲ ತಪ್ಪು. ಹಾಗೆ ಹೋದ ಮೇಲೆ ಶಾಸಕನಾಗುವ ಮೂಲಕ ರಾಜಕೀಯ ಪುನರ್ಜನ್ಮ ಸಿಕ್ಕಿತೆಂದು ದೇವೇಗೌಡರನ್ನು ಹಾಡಿಹೊಗಳಿ ಮಂತ್ರಿಯಾಗುವುದು ಸಾಧ್ಯವೇ ಇಲ್ಲ ಎಂದು ಅರ್ಥವಾದ ನಂತರ ಮತ್ತೆ ಕಾಯುವ ಬದಲು ಇನ್ನೊಂದು ರಾಜೀನಾಮೆಗೆ ಸಿದ್ಧವಾಗಿದ್ದು ಮಹಾಪರಾಧ. ಅವರಿಗೆ ಸಿದ್ಧರಾಮಯ್ಯ ಅವರ ತರಹ ಹೋರಾಟದ ಮನೋಭಾವವಿಲ್ಲ, ದುರಹಂಕಾರವಿಲ್ಲ. ಆದರೆ ಸಜ್ಜನಿಕೆ ಇದೆ, ಜನರ ನಡುವೆ ಬೆರೆಯುವ ಅಪರೂಪದ ಗುಣ ಇದೆ. ಸಕ್ರಿಯವಾಗಿ ರಾಜಕಾರಣದಲ್ಲಿ ಉಳಿಯಲೇಬೇಕೆನ್ನುವವರಿಗೆ ಇವಿಷ್ಟೇ ಗುಣಗಳು ಸಾಕಾಗುವುದಿಲ್ಲ.

ಅದೇ ರೀತಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ. ಪಕ್ಷ ನಿಷ್ಠೆ ಎಂದರೆ ರಾಮಲಿಂಗಾರೆಡ್ಡಿ ಎನ್ನುವಂತೆ ಮಾದರಿಯಾಗಿದ್ದವರು. ತಮ್ಮ ಕ್ಷೇತ್ರದ ಜನರೊಂದಿಗೆ ಸದಾ ಸಂಪರ್ಕದಲ್ಲಿರುವವರು. ಹಾಗೇ ರೋಷನ್ ಬೇಗ್, ಜನತಾ ಪರಿವಾರದಲ್ಲಿದ್ದಾಗಲೂ ಮಂತ್ರಿಯಾಗಿದ್ದವರು. ಕಳೆದ ಕಾಂಗ್ರೆಸ್ ಸರ್ಕಾರದಲ್ಲೂ ಮಂತ್ರಿಯಾಗಿದ್ದವರು. ಈ ಇಬ್ಬರೂ ಈಗಾಗಲೇ ಅನೇಕ ಸಲ ಮಂತ್ರಿಗಳಾಗಿ ಅವಕಾಶ ಪಡೆದಿದ್ದರೂ ಮತ್ತೆ ಕೂಡ ಅದನ್ನೇ ಆಸೆಪಡುವುದು ತಪ್ಪು. 224 ಶಾಸಕರಲ್ಲಿ ಆಡಳಿತದ ಕಡೆ ಇರುವ ಇನ್ನೂ ಅನೇಕ ಶಾಸಕರು ಮಂತ್ರಿಗಳಾಗದೇ ಇದ್ದಾರೆ. ಅವರಲ್ಲೂ ಪ್ರತಿಭಾವಂತರು, ಸಮರ್ಥರು, ದಕ್ಷರೂ, ಪ್ರಾಮಾಣಿಕರೂ ಇರುವುದು ಸಾಧ್ಯವಿದೆ. ಅಂಥವರಿಗೂ ಅವಕಾಶ ನೀಡಬೇಕೆಂಬ ತೆರೆದ ಮನಸ್ಸು ಈಗಾಗಲೇ ಅಧಿಕಾರ ಅನುಭವಿಸಿದ ಹಿರಿಯರಿಗಿರಬೇಕು.

ಕನಿಷ್ಠ ಲಜ್ಜೆಯೂ ಇಲ್ಲದೇ ಮನಸೋ ಇಚ್ಛೆ ರಾಜೀನಾಮೆ ನಿರ್ಧಾರ ಕೈಗೊಳ್ಳುವ ಶಾಸಕರಿಗೆ ಕ್ಷೇತ್ರದ ಜನತೆಯೇ ಪಾಠ ಕಲಿಸಬೇಕು. ಈಗ ಒಂದು ಡಜನ್‌ಗೂ ಹೆಚ್ಚು ಮಂದಿ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳುತ್ತಿದ್ದಾರಲ್ಲಾ? ಯಾವ ಕಾರಣಕ್ಕಾಗಿ? ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿಲ್ಲವೆಂದೇ? ಸರ್ಕಾರಿ ಶಾಲೆ ಕಟ್ಟಡ ದುಸ್ಥಿತಿಯಲ್ಲಿದ್ದರೂ ಜೀರ್ಣೋದ್ಧಾರವಾಗಲಿಲ್ಲವೆಂದೇ? ತಮ್ಮ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಾಣ ಆಗಲಿಲ್ಲವೆಂದೇ? ಅಗತ್ಯ ಸಂಖ್ಯೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಸಂಪರ್ಕ ಒದಗಿಸಲಿಲ್ಲವೆಂದೇ? ಯಾವ ಕಾರಣಕ್ಕೆ? ಅದು ಸ್ವಾರ್ಥ ಮಾತ್ರವಲ್ಲದೇ ಬೇರೇನು?   ಅಧಿಕಾರ, ಥೈಲಿಯಲ್ಲದೇ ಬೇರೇನಾದರೂ ಇರಲು ಸಾಧ್ಯವೇ?

ಹೀಗೆ ರಾಜೀನಾಮೆ ಕೊಡುವ ಶಾಸಕರು ಮತ ನೀಡಿದ ಜನರ ನಡುವಿರದೇ ಯಾವುದೋ ರೆಸಾರ್ಟ್‌ಗೋ, ಇನ್ಯಾವುದೋ ಊರಿಗೋ ಹೋಗಿ ಆಶ್ರಯ ಪಡೆಯುತ್ತಾರೆಂದರೆ ಏನರ್ಥ? ವೈಭವೋಪೇತ ಮಹಲುಗಳಲ್ಲಿ ಸುಖದ ಬದುಕಿಗೆ ಮೊರೆ ಹೋಗುತ್ತಾರೆ ಎಂದರೆ ಅವರು ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುವುದು ಸಾಧ್ಯವೇ ಇಲ್ಲ. ಗ್ರಾಮವಾಸ್ತವ್ಯಗಳು, ದಲಿತ ಕೇರಿಗಳ ಭಾಷಣಗಳು ಎಲ್ಲವೂ ಪೊಳ್ಳು. ಇದನ್ನು ಮತದಾರರೂ ಅರಿಯಬೇಕು. “ನಾವಿನ್ನೂ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದೇವೆ, ನಾವು ಬಿಜೆಪಿಗೆ ಹೋಗುವುದಿಲ್ಲ, ನಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ” ಎಂದು ಈಗ ರಾಜೀನಾಮೆ ನೀಡಿದವರು ಹೇಳುತ್ತಿದ್ದಾರಲ್ಲಾ? ಹಾಗಾದರೆ ಅವರ ರಾಜೀನಾಮೆ ಯಾಕಾಗಿ? ಜನಕಾರಣಗಳಿಲ್ಲದ ರಾಜೀನಾಮೆ ಕೇವಲ ಸ್ವಾರ್ಥದ ಆಶಯ ಹೊಂದಿರುತ್ತದೆ ಅಷ್ಟೇ. ಮತದಾರರು ಅವರನ್ನೆಲ್ಲ ಆಯ್ಕೆ ಮಾಡಿರುವುದಾದರೂ ಯಾಕಾಗಿ? ಇಷ್ಟಬಂದಂತೆ ರಾಜೀನಾಮೆ ಕೊಡುವ ಹಕ್ಕು ಅವರಿಗಿಲ್ಲ. ಅದನ್ನು ಮತದಾರರೇ ನಿರ್ಧರಿಸಬೇಕು.

ಇವರು ಶಾಸಕರಲ್ಲ, ಇವರು ಜನವಂಚಕರು. ಅಜನನಿಷ್ಠೆ, ತತ್ವನಿಷ್ಠೆ, ಪಕ್ಷನಿಷ್ಠೆ ಇಲ್ಲದೇ ಕೇವಲ ಅಧಿಕಾರ ನಿಷ್ಠೆಯ ಜನಪ್ರತಿನಿಧಿಗಳನ್ನು ರಾಜಕೀಯರಂಗದಿಂದಲೇ ಒದ್ದೋಡಿಸಬೇಕು. ಮಂಡ್ಯದಲ್ಲಿ ಜಾತಿ ರಾಜಕಾರಣಕ್ಕೆ ಮತದಾರರು ಕಲಿಸಿದ ಪಾಠ ಎಲ್ಲ ಕ್ಷೇತ್ರಗಳಿಗೂ ಮಾದರಿಯಾಗಬೇಕು. ಯೋಗ್ಯರಷ್ಟೇ ನಮ್ಮನ್ನು ಆಳಬೇಕು ಎಂಬ ಮನೋಭಾವ ಮತದಾರರಲ್ಲಿ ಆವಾಹನೆಯಾಗಬೇಕು. ನಾವು ಯೋಗ್ಯರಾದರೆ ನಮ್ಮ ಪ್ರತಿನಿಧಿಗಳೂ ಯೋಗ್ಯರಾಗಿರುತ್ತಾರೆ ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಆಗ ಮಾತ್ರ ಸ್ವಲ್ಪವಾದರೂ ಬದಲಾವಣೆ ಕಾಣುವುದು ಸಾಧ್ಯವಿದೆ.

                                                                                                                                                                    -ಟಿ.ಕೆ.ತ್ಯಾಗರಾಜ್