ಬಂಡವಾಳದ ಗೆಲುವು, ಪ್ರಜಾತಂತ್ರದ ಸೋಲು ಮತ್ತು ಹಕ್ಕುಗಳ ಅವಸಾನ

ಬಂಡವಾಳದ ಗೆಲುವು, ಪ್ರಜಾತಂತ್ರದ ಸೋಲು ಮತ್ತು ಹಕ್ಕುಗಳ ಅವಸಾನ

ಸಾಮಾಜಿಕ ನ್ಯಾಯ, ಸಂವಿಧಾನ ರಕ್ಷಣೆ, ಶೋಷಿತ ವರ್ಗಗಳ ಸಬಲೀಕರಣ, ಅಸ್ಪೃಶ್ಯ ಜಾತಿಗಳ ವಿಮೋಚನೆ ಈ ಎಲ್ಲ ಆದ್ಯತೆಗಳ ನಡುವೆ ನಮ್ಮ ಪ್ರಮುಖ ಆದ್ಯತೆ ಹಣಕಾಸು ಬಂಡವಾಳದ ಉರುಳನ್ನು ಸಡಿಲಗೊಳಿಸುವುದೇ ಆಗಬೇಕಿದೆ ಎನ್ನುತ್ತಾರೆ ನಾ ದಿವಾಕರ.

ಹಣಕಾಸು ಬಂಡವಾಳದ ಉರುಳು ಬಿಗಿಯಾಗುತ್ತಿರುವಂತೆಯೇ ಭಾರತದ ರಾಜಕೀಯ ಭೂಪಟದಲ್ಲೂ ಸಾಕಷ್ಟು ಪರಿಣಾಮಕಾರಿ ಬದಲಾವಣೆಗಳು ಕಂಡುಬರುತ್ತಿವೆ. ಸ್ವಾತಂತ್ರ್ಯ ಪೂರ್ವ ಭಾರತದ ವಸಾಹತುಶಾಹಿ ಆಡಳಿತ ವ್ಯವಸ್ಥೆಯಲ್ಲಿನ ಅನೇಕ ಕಾಯಿದೆ ಕಾನೂನುಗಳು ಸ್ವತಂತ್ರ ಭಾರತದ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಯಾಗುತ್ತಿದೆ. ಒಂದೆಡೆ ಮಾನವ ಹಕ್ಕುಗಳ ಪರಿಕಲ್ಪನೆಗೆ ಸಮಾಧಿ ನಿರ್ಮಿಸಲಾಗುತ್ತಿದ್ದರೆ ಮತ್ತೊಂದೆಡೆ ಎಪ್ಪತ್ತು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿರುವ ಒಕ್ಕೂಟ ವ್ಯವಸ್ಥೆ ಅಪಾಯದ ಅಂಚಿನಲ್ಲಿದೆ. ಭಯೋತ್ಪಾದನೆ ಒಂದು ಜಾಗತಿಕ ವಿದ್ಯಮಾನ. ಇದು ಭಾರತವನ್ನು ಕಾಡುತ್ತಿರುವುದೂ ನಿಜ. ಆದರೆ ಭಯೋತ್ಪಾದಕರು ಯಾರು ಎಂದು ನಿರ್ಧರಿಸುವ ವಿವೇಚನೆಯನ್ನು ಸಾಂವಿಧಾನಿಕ ಚೌಕಟ್ಟಿನಲ್ಲೇ ಬಳಸಬೇಕಾಗುತ್ತದೆ.

ಒಂದು ಸಾಂವಿಧಾನಿಕ ಸಂಸ್ಥೆಗೆ ನೀಡಲಾಗುವ ಅಧಿಕಾರ ವ್ಯಾಪ್ತಿ ಸಂವಿಧಾನದ ಮೌಲ್ಯಗಳನ್ನೂ ಮೀರಿದಾಗ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುವಂತಹ ನಿರ್ಣಯಗಳು ಮೇಲುಗೈ ಸಾಧಿಸುತ್ತವೆ. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದನ್ನು ಕಂಡಿದ್ದೇವೆ. ಇಂದು ಮತ್ತೊಮ್ಮೆ ಇದೇ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಮಾಹಿತಿ ಹಕ್ಕು ಕಾಯ್ದೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆಯ (ಯುಎಪಿಎ) ತಿದ್ದುಪಡಿಗಳು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವಷ್ಟೇ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೂ ಮಾರಕವಾಗಲಿದೆ. ಆದರೆ ಜಾಗತಿಕ ಹಣಕಾಸು ಬಂಡವಾಳಕ್ಕೆ ಇದು ಅನಿವಾರ್ಯವಾಗಿದೆ. ಯೂರೋಪ್,ಅಮೆರಿಕ, ಲ್ಯಾಟಿನ್ ಅಮೆರಿಕದಲ್ಲಿ ನಡೆಯುತ್ತಿರುವುದನ್ನೇ ಭಾರತದಲ್ಲೂ ಕಾಣುತ್ತಿದ್ದೇವೆ. ಬಲಪಂಥೀಯ ರಾಜಕಾರಣ ಎಂದರೆ ಕೇವಲ ಮತೀಯವಾದ-ಕೋಮುವಾದ ಮಾತ್ರವೇ ಅಲ್ಲ ಎಂಬ ವಾಸ್ತವವನ್ನು ಇನ್ನಾದರೂ ನಾವು ಗ್ರಹಿಸಬೇಕಿದೆ.

ಡಿಜಿಟಲೀಕರಣ ಮತ್ತು ವಿದ್ಯುನ್ಮಾನ ಕ್ರಾಂತಿಯ ನವ ಉದಾರವಾದಿ ಜಗತ್ತಿನ ಹೊಸ ಅಧ್ಯಾಯ ಜಾಗತಿಕ ಮಟ್ಟದಲ್ಲೇ ಆರಂಭವಾಗಿದೆ. ಜಾಗತೀಕರಣದ ನಂತರ ಇಡೀ ಜಗತ್ತು ಒಂದು ಪುಟ್ಟ ಗ್ರಾಮದಂತೆ ಕಾಣುತ್ತದೆ ಎನ್ನುವ ಭ್ರಮೆ ಕ್ರಮೇಣ ಕರಗತೊಡಗಿದ್ದು ಸಂಪರ್ಕ ಮತ್ತು ಸಂವಹನ ಪ್ರಕ್ರಿಯೆಯಲ್ಲಿ ಮಾತ್ರ ಸಾಕಾರಗೊಂಡಿದೆ.

ನಿಜ. ಇಂದು ಉತ್ತರ ಮತ್ತು ದಕ್ಷಿಣ ಧೃವಗಳು ದೂರ ಎನಿಸುವುದಿಲ್ಲ. ಆದರೆ ಈ ಎರಡೂ ಧೃವಗಳ ನಡುವೆ ಸೃಷ್ಟಿಯಾಗುತ್ತಿರುವ ತಡೆಗೋಡೆಗಳು ಬಂಡವಾಳದ ಉರುಳು ಬಿಗಿಯಾಗಲು ನೆರವಾಗುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ತಡೆಗೋಡೆಗಳು ಆಳುವವರಿಗೆ ಮೆಟ್ಟಿಲುಗಳಾಗಿ ಪರಿಣಮಿಸಿದರೆ ಜನಸಾಮಾನ್ಯರಿಗೆ ಮಾರಣಾಂತಿಕವಾಗುತ್ತಿವೆ. ಬಿಕ್ಕಟ್ಟಿನಲ್ಲಿ ಸಿಲುಕಿರುವ ಹಣಕಾಸು ಬಂಡವಾಳ ಪ್ರಶಸ್ಥ ಭೂಮಿಗಾಗಿ, ಮುಕ್ತ ಅವಕಾಶಕ್ಕಾಗಿ, ಸುಭದ್ರ ನೆಲೆಗಾಗಿ ತಡಕಾಡುತ್ತಿದೆ. ಭೂಮಿ, ಶ್ರಮ , ಸಂಪನ್ಮೂಲ, ಮಾರುಕಟ್ಟೆ ಮತ್ತು ಅನಿರ್ಬಂಧಿತ ಅವಕಾಶಗಳಿಗಾಗಿ ಹಣಕಾಸು ಬಂಡವಾಳ ವಿಶ್ವಪರ್ಯಟನ ಮಾಡುತ್ತಿದೆ. ಆದರೆ ನವ ಉದಾರವಾದಕ್ಕೆ ಸುಭದ್ರ ಬುನಾದಿ ನಿರ್ಮಿಸಿದ ಅಮೆರಿಕ, ಯೂರೋಪ್ ಮತ್ತಿತರ ಮುಂದುವರೆದ ರಾಷ್ಟ್ರಗಳು ತಮ್ಮ ತಳಪಾಯವನ್ನು ಭದ್ರಪಡಿಸಿಕೊಳ್ಳುತ್ತಿವೆ. ಹಾಗಾಗಿಯೇ ಅಮೆರಿಕದ ಟ್ರಂಪ್‍ಗೆ ವಲಸೆಗಾರರು ಶತ್ರುಗಳಂತೆ ಕಾಣುತ್ತಿದ್ದಾರೆ. ಜರ್ಮನಿ, ಬ್ರಿಟನ್, ಯೂರೋಪ್ ರಾಷ್ಟ್ರಗಳಲ್ಲೂ ಸಹ ಸ್ಥಳೀಯರು ಮತ್ತು ವಲಸೆಗಾರರ ನಡುವಿನ ಸಂಘರ್ಷ ಉಲ್ಬಣಿಸುತ್ತಿದ್ದು ಅಲ್ಲಿನ ಆಡಳಿತ ವ್ಯವಸ್ಥೆ ಬಂಡವಾಳದ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳುತ್ತಿವೆ. 

ಹಾಗಾಗಿ ಹಣಕಾಸು ಬಂಡವಾಳ ವಿಶ್ವಪರ್ಯಟನೆ ನಡೆಸುತ್ತಿದ್ದು ಭಾರತ ಮತ್ತಿತರ ರಾಷ್ಟ್ರಗಳು ಪ್ರಶಸ್ಥ ಕರ್ಮಭೂಮಿಯಂತೆ ಕಾಣುತ್ತಿವೆ. ಔದ್ಯಮಿಕ ಬಂಡವಾಳ ಇದೇ ರೀತಿಯ ಬಿಕ್ಕಟ್ಟು ಎದುರಿಸಿದಾಗಲೂ ಅಂದಿನ ಬಂಡವಾಳಶಾಹಿ ವ್ಯವಸ್ಥೆಗೆ ಭರತಖಂಡವೇ ಪ್ರಸ್ಥಭೂಮಿಯಾಗಿ ಕಂಡಿತ್ತು. ಏಕೆಂದರೆ ಇಲ್ಲಿ ಸಂಪನ್ಮೂಳಗಳಿವೆ. ಅಪಾರ ಖನಿಜ ಮತ್ತು ನೈಸರ್ಗಿಕ ಸಂಪತ್ತು ಇದೆ. ಬಳಕೆಯಾಗದ ಭೂಮಿ ಹೇರಳವಾಗಿದೆ. ಅಗ್ಗದ ಶ್ರಮ ಲಭ್ಯವಿದೆ. ಯಾವುದೇ ಭದ್ರತೆ, ಶಾಶ್ವತ ವೇತನ ಮತ್ತು ನೌಕರಿಯ ಖಾತರಿ ಇಲ್ಲದೆಯೇ ತಮ್ಮ ಬದುಕು ನಡೆಸಲು ಹಗಲಿರುಳು ಶ್ರಮಿಸಲು ಸಿದ್ಧರಾಗಿರುವ ಶ್ರಮಿಕರ ಪಡೆ ಸದಾ ಕಾಲ ಸನ್ನದ್ಧವಾಗಿರುತ್ತದೆ. ವಸಾಹತು ಕಾಲದ ಸಾಂಬಾರು ಪದಾರ್ಥಗಳಂತೆ ಭಾರತದ ಶ್ರಮಜೀವಿಗಳು ಹಣಕಾಸು ಬಂಡವಾಳದ ಅಧಿಪತಿಗಳಿಗೆ ಬಳಸಿಕೊಳ್ಳಬಹುದಾದ ಉತ್ಪಾದಕೀಯ ಶಕ್ತಿಗಳಂತೆ ಕಾಣುತ್ತಿದ್ದಾರೆ. ಈ ಭರವಸೆಯನ್ನು ಆಧರಿಸಿಯೇ ಪ್ರಧಾನಿ ನರೇಂದ್ರ ಮೋದಿ ಇನ್ನು ಐದು ವರ್ಷದಲ್ಲಿ ಭಾರತವನ್ನು ಐದು ಟ್ರಿಲಿಯನ್ ಡಾಲರ್ ದೇಶವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಇದರ ಅರ್ಥ ಇಲ್ಲಿನ ಶ್ರಮಜೀವಿಗಳು ಸ್ವರ್ಗ ಕಾಣುತ್ತಾರೆ ಎಂದಲ್ಲ. ಬದಲಾಗಿ ಈ ಶ್ರಮಜೀವಿಗಳು ಮತ್ತೊಮ್ಮೆ ನವ ವಸಾಹತು ವ್ಯವಸ್ಥೆಯಲ್ಲಿ ಹಣಕಾಸು ಬಂಡವಾಳಕ್ಕೆ ಗುಲಾಮರಾಗಿ ಬದುಕಬಹುದು ಎಂದರ್ಥ. 

ಇದಕ್ಕೆ ಪೂರಕವಾಗಿಯೇ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಹಲವು ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ.  ಹೆಚ್ಚು ಹೆಚ್ಚು ಕಾರ್ಮಿಕರನ್ನು ಅನೌಪಚಾರಿಕ ಕ್ಷೇತ್ರಕ್ಕೆ ದೂಡಿದಂತೆಲ್ಲಾ ಖಾಸಗಿ ಬಂಡವಾಳಿಗರಿಗೆ ಅಗ್ಗದ ಶ್ರಮ ಲಭ್ಯವಾಗುತ್ತದೆ ಎನ್ನುವುದು ಚಾರಿತ್ರಿಕ ಸತ್ಯ. ಭಾರತದಲ್ಲಿ ಇದು ವ್ಯವಸ್ಥಿತವಾಗಿ ನಡೆಯುತ್ತಿದೆ. ನರಸಿಂಹರಾವ್, ದೇವೇಗೌಡ, ವಾಜಪೇಯಿ, ಮನಮೋಹನ್ ಸಿಂಗ್ ಸರ್ಕಾರಗಳ ಆಡಳಿತದಲ್ಲೂ ಇಂತಹ ಹಲವು ಹೆಜ್ಜೆ ಗುರುತುಗಳನ್ನು ಗಮನಿಸಬಹುದು. ವಿಶೇಷ ಆರ್ಥಿಕ ವಲಯವನ್ನು ಸೃಷ್ಟಿ ಮಾಡಿದ್ದೇ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲು ಎನ್ನುವ ಸತ್ಯ ಹಾಸನದ ಗಾರ್ಮೇಂಟ್ ಕಾರ್ಖಾನೆಯ ಘಟನೆಯಲ್ಲಿ ವ್ಯಕ್ತವಾಗುತ್ತಿದೆ.

ನಾವು ಗಮನಿಸುತ್ತಿರುವುದು ತಡವಾಗಿದೆಯಷ್ಟೆ.  ಮೋದಿ ಆಳ್ವಿಕೆಯಲ್ಲಿ ಇಡೀ ದೇಶವೇ ವಿಶೇಷ ಆರ್ಥಿಕ ವಲಯವಾಗಿ ಮಾರ್ಪಡುತ್ತದೆ. ಹಾಗಾಗಿಯೇ 11 ಲಕ್ಷ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಇರುವ ಅಡ್ಡಿ ಆತಂಕಗಳನ್ನು ದೂರಮಾಡಲು ಭೂ ಬ್ಯಾಂಕ್ ಸ್ಥಾಪಿಸಲಾಗುತ್ತಿದ್ದು, ಕೃಷಿಯೇತರ ಭೂಮಿಯನ್ನು ಯಾವುದೇ ಅಡೆತಡೆ ಇಲ್ಲದೆ ಸ್ವಾಧೀನಪಡಿಸಿಕೊಳ್ಳಲು ಕಾರ್ಪೊರೇಟ್ ಉದ್ಯಮಿಗಳಿಗೆ ಮುಕ್ತ ಅವಕಾಶ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಎದುರಾಗಬಹುದಾದ ಸವಾಲುಗಳಿಂದ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. “ ಭಾರತ ” ಎಂದು ಕರೆಯಲ್ಪಡುವ ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಮಿಕರನ್ನು ಹದ್ದುಬಸ್ತಿನಲ್ಲಿಡುವ ದೃಷ್ಟಿಯಿಂದ ಕಾರ್ಮಿಕ ಸಂಹಿತೆಯನ್ನು ರೂಪಿಸಿ, ಜಾರಿಯಲ್ಲಿರುವ ಕಾರ್ಮಿಕ ಕಾನೂನುಗಳನ್ನು ಸಮಾಧಿ ಮಾಡಲಾಗುತ್ತಿದೆ. 

ಇವೆಲ್ಲವೂ ವ್ಯವಸ್ಥಿತವಾಗಿ, ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಜಾರಿಗೊಂಡಾಗ ಮಾತ್ರ ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಗೆ ಅಗತ್ಯವಾದ ವಿದೇಶಿ ಬಂಡವಾಳ, ಖಾಸಗಿ ಬಂಡವಾಳ ಭಾರತದೊಳಗೆ ಹರಿದುಬರಲು ಸಾಧ್ಯ. ಕೇಂದ್ರ ಸರ್ಕಾರ ಇದಕ್ಕೆ ವೇದಿಕೆ ಸೃಷ್ಟಿಸುತ್ತಿದೆ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್, ಛತ್ತಿಸ್‍ಘಡ, ಒಡಿಷಾ ಮತ್ತು ಆಂಧ್ರ ಪ್ರದೇಶ ಈ ರಾಜ್ಯಗಳಲ್ಲಿನ ಔದ್ಯಮಿಕ ಅವಕಾಶಗಳು ಮತ್ತು ಬಂಡವಾಳ ಹೂಡಿಕೆಯ ಅವಕಾಶಗಳು ನವ ಉದಾರವಾದದ ಮುನ್ನಡೆಗೆ ಅತ್ಯಗತ್ಯವಾಗಿರುತ್ತದೆ. ಹಾಗಾಗಿ ನಮ್ಮ ದೇಶದ ರಾಜಕಾರಣವನ್ನು ನಿಯಂತ್ರಿಸುತ್ತಿರುವ ಕಾರ್ಪೋರೇಟ್ ಬಂಡವಾಳಕ್ಕೆ ಈ ರಾಜ್ಯಗಳಲ್ಲಿ ಸುಸ್ಥಿರ, ಏಕಪಕ್ಷದ ಸರ್ಕಾರ ಅನಿವಾರ್ಯವಾಗುತ್ತದೆ. ಅದು ಯಾವ ಬಣ್ಣದ್ದಾದರೂ ಸರಿಯೇ. ಬಿಹಾರದ ನೀತಿಶ್, ಒಡಿಷಾದ ಪಟ್ನಾಯಕ್, ಛತ್ತಿಸ್‍ಘಡದ ಭೂಪೇಶ್ ಬಗೆಲ್, ಮಧ್ಯಪ್ರದೇಶದ ಕಮಲ್ ನಾಥ್, ಆಂಧ್ರದ ಜಗನ್‍ರೆಡ್ಡಿ, ಗುಜರಾತ್ ಮತ್ತು ಮಹರಾಷ್ಟ್ರದ ಬಿಜೆಪಿ ಮುಖ್ಯಮಂತ್ರಿಗಳು ಇವರೆಲ್ಲರೂ ಒಂದೇ ವೇದಿಕೆಯಲ್ಲಿ ಕಂಡುಬರುವುದು ಇಲ್ಲಿಯೇ. ಈಗ ಕರ್ನಾಟಕದ ಸರದಿ, ಕುಮಾರಸ್ವಾಮಿಯೋ, ಸಿದ್ಧರಾಮಯ್ಯನವರೋ ಅಥವಾ ಯಡಿಯೂರಪ್ಪನವರೋ ಅಧಿಕಾರದ ಚುಕ್ಕಾಣಿ ಹಿಡಿಯುವವರು ಕಾರ್ಪೋರೇಟ್ ಬಂಡವಾಳಕ್ಕೆ ಶರಣಾಗುವವರಾಗಿರಬೇಕು. 18 ದಿನಗಳ ವಿಧಾನಸಭೆಯ ಕಲಾಪ ಮತ್ತು ಸಮ್ಮಿಶ್ರ ಸರ್ಕಾರದ ಪತನದ ಹಿಂದೆ ಇರುವ ಮೂಲ ಉದ್ದೇಶ ಇದೇ ಆಗಿದೆ. 

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ, ದೇಶಾದ್ಯಂತ ಕವಿದಿದ್ದ ಯುದ್ಧದ ಕಾರ್ಮೋಡಗಳ ನಡುವೆ, ನರೇಂದ್ರ ಮೋದಿ ಸರ್ಕಾರ ಛತ್ತಿಸ್‍ಘಡದಲ್ಲಿ 170000 ಹೆಕ್ಟೇರ್ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಮುಕ್ತಗೊಳಿಸುವ ನಿರ್ಧಾರ ಕೈಗೊಂಡು ಮರು ಆಯ್ಕೆಯಾದ ನಂತರ ಕೊಟ್ಟಿದ್ದೂ ಆಗಿದೆ. ಅಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಮುಖ್ಯಮಂತ್ರಿಯಾಗಲೀ, ಕಾಂಗ್ರೆಸ್ ಕೇಂದ್ರ ನಾಯಕರಾಗಲಿ ಮಿಸುಕಾಡದೆ ತೆಪ್ಪಗಿದ್ದಾರೆ.  ಇತ್ತ ಜನರು ಪುಲ್ವಾಮಾ ಬಾಲಕೋಟ್‍ನಲ್ಲಿ ಮುಳುಗಿಹೋಗಿದ್ದರು ಅತ್ತ ಆಳುವವರು ಸರ್ಜಿಕಲ್ ಸ್ಟ್ರೈಕ್ ನಡೆಸೇಬಿಟ್ಟಿದ್ದರು. ಬಹುಶಃ ಕರ್ನಾಟಕಕ್ಕೆ ಇದರಿಂದ ಒಂದು ಸ್ಪಷ್ಟ ಸಂದೇಶ ರವಾನೆಯಾಗುತ್ತದೆ. ನಮ್ಮಲ್ಲಿನ ಪಶ್ಚಿಮ ಘಟ್ಟಗಳನ್ನೂ ಸಹ ಇದೇ ರೀತಿ ಗುಡಿಸಿ ಗುಂಡಾಯಿಸಲು ಕಾರ್ಪೋರೇಟ್ ಪಡೆಗಳು ಸನ್ನದ್ಧರಾಗಿವೆ. ಭೂ ಸ್ವಾಧೀನ ಪ್ರಕ್ರಿಯೆಗೆ ಯಾವುದೇ ಆತಂಕ ಇಲ್ಲದೆ ಮುನ್ನಡೆಯಲು ಆಳುವ ವರ್ಗಗಳಿಗೆ ಅವಕಾಶ ಬೇಕಿದೆ. ತಕ್ಕಡಿಯಲ್ಲಿ ಕಪ್ಪೆಗಳಿದ್ದರೆ ತೂಕ ಮಾಡುವುದೇ ದುಸ್ತರವಾಗುತ್ತದೆ. ಸಣ್ಣ ಮರಿ ತಿಮಿಂಗಿಲ ಇದ್ದರೂ ಸಾಕು ಅಗತ್ಯವಿದ್ದಷ್ಟನ್ನು ತೂಕ ಹಾಕಿ ಬಾಚಿಕೊಳ್ಳಬಹುದು ಅಲ್ಲವೇ ? ಆ ತಿಮಿಂಗಿಲದ ಶೋಧವೇ ಮುಂಬಯಿನ ರೆಸಾರ್ಟ್‍ಗಳ ನೆಲ ಹಾಸುಗಳಲ್ಲಿ ಬಿಂಬಿತವಾಗುತ್ತಿದೆ. ಹಣಕಾಸು ಬಂಡವಾಳ ಮತ್ತು ಕಾರ್ಪೋರೇಟ್ ಹೂಡಿಕೆದಾರರಿಗೆ ಕರ್ನಾಟಕದಷ್ಟು ಪ್ರಶಸ್ಥವಾದ ಕರ್ಮಭೂಮಿ ಬಹುಶಃ ಎಲ್ಲಿಯೂ ಸಿಗಲಿಕ್ಕಿಲ್ಲ. ಏಕೆಂದರೆ ಇಲ್ಲಿ ವಲಸೆ ಕಾರ್ಮಿಕರ ದಂಡೇ ಇದೆ. ಬಡತನ ತಾಂಡವಾಡುತ್ತಿದೆ. ಕೃಷಿಗೆ ಬಳಕೆ ಮಾಡಲಾಗದ ಭೂಮಿ ಅಪಾರ ಪ್ರಮಾಣದಲ್ಲಿ ಲಭ್ಯವಿದೆ. ಬೇಸಾಯ ಮಾಡಲಾಗದೆ ಕೈಚೆಲ್ಲಿ ಕುಳಿತ ರೈತ ಸಮುದಾಯವೂ ಇದೆ. ನಿರುದ್ಯೋಗಿ ಯುವಕರ ಸಾಗರವೇ ಇದೆ. ಇಂತಹ ಪ್ರಸ್ಥಭೂಮಿಗಾಗಿಯೇ ಹಣಕಾಸು ಬಂಡವಾಳದ ಕಾರ್ಪೋರೇಟ್ ಹದ್ದುಗಳು ಸದಾ ಕಾಯುತ್ತಿರುತ್ತವೆ.

ಸಾಮಾಜಿಕ ನ್ಯಾಯ, ಸಂವಿಧಾನ ರಕ್ಷಣೆ, ಶೋಷಿತ ವರ್ಗಗಳ ಸಬಲೀಕರಣ, ಅಸ್ಪೃಶ್ಯ ಜಾತಿಗಳ ವಿಮೋಚನೆ ಈ ಎಲ್ಲ ಆದ್ಯತೆಗಳ ನಡುವೆ ನಮ್ಮ ಆದ್ಯತೆ ಈ ಹಣಕಾಸು ಬಂಡವಾಳದ ಉರುಳನ್ನು ಸಡಿಲಗೊಳಿಸುವುದೇ ಆಗಬೇಕಿದೆ. ಉತ್ತರ ಪ್ರದೇಶದಲ್ಲಿ ಭೂಮಾಲೀಕರು ಆದಿವಾಸಿಗಳನ್ನು ಹಾಡಹಗಲೇ ಗುಂಡಿಟ್ಟು ಕೊಂದಿದ್ದಾರೆ ಏಕೆ ? ಏಕೆಂದರೆ ಆದಿವಾಸಿಗಳಿಗೆ, ಅರಣ್ಯ ಭೂಮಿಯನ್ನೇ ನಂಬಿ ಬದುಕುವವರಿಗೆ ಆ ಭೂಮಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಮಾರುಕಟ್ಟೆಯ ಶಕ್ತಿಗಳಿಗೆ ಹಕ್ಕು ಇರುತ್ತದೆ. ಬಂಡವಾಳಿಗರಿಗೆ ಇರುತ್ತದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲೋ, ಮಲೆನಾಡಿನ ಘಟ್ಟಗಳಲ್ಲೋ ಇಂತಹ ಘಟನೆ ಸಂಭವಿಸುವುದಿಲ್ಲ ಎಂದು ಹೇಳಲಾಗುವುದಿಲ್ಲ. ಹಾಸನದ ಗಾರ್ಮೆಂಟ್ ಕಾರ್ಖಾನೆಯ ಕಾರ್ಮಿಕರು ಬಂಡವಾಳದ ಕ್ರೌರ್ಯವನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ. ಬಹುಶಃ ಎರಡು ದಶಕಗಳ ಹಿಂದೆ ಕೆಂಗೇರಿ ಬಳಿಯ ಹೆಜ್ಜಾಲ ಕಾರ್ಖಾನೆಯ ನೌಕರರ ಮೇಲೂ ಇದೇ ರೀತಿಯ ದಾಳಿ ಸಂಭವಿಸಿತ್ತು. ನಾವು ಮರೆತುಬಿಟ್ಟಿದ್ದೇವೆ. ಇಂತಹ ಜನವಿರೋಧಿ ಆಡಳಿತ ನೀತಿಗಳನ್ನು ವಿರೋಧಿಸಲು ನಾವು ಸಜ್ಜಾಗುವುದು ಅತ್ಯಗತ್ಯ. ಹಾಗಾಗುವುದು ಸಹಜ ಎಂದೂ ಆಳುವ ವರ್ಗಗಳಿಗೆ ತಿಳಿದಿದೆ. ಆದ್ದರಿಂದಲೇ ಶಂಕಿತ ವ್ಯಕ್ತಿಯನ್ನೂ ಉಗ್ರ ಅಥವಾ ಭಯೋತ್ಪಾದಕ ಎಂದು ಪರಿಗಣಿಸಬಹುದು ಎಂದು ಕಾನೂನು ತಿದ್ದುಪಡಿ ಮಾಡಲಾಗಿದೆ. ಅಷ್ಟೇ ಅಲ್ಲ ವ್ಯಕ್ತಿ ಯಾವುದೇ ರಾಜ್ಯಕ್ಕೆ ಸೇರಿದವರಾಗಿರಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಆ ಶಂಕಿತ ವ್ಯಕ್ತಿಯನ್ನು ಬಂಧಿಸಲು ಅವಕಾಶ ನೀಡಲಾಗಿದೆ. ಅಂದರೆ ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಅಟ್ಟಹಾಸವನ್ನು ವಿರೋಧಿಸುವವರು ಸಹಜವಾಗಿಯೇ ನಗರ ನಕ್ಸಲರಾಗಿ, ಶಂಕಿತರೂ ಆಗಿಬಿಡುತ್ತಾರೆ.  

ಇಷ್ಟೆಲ್ಲಾ ಎಚ್ಚರಿಕೆಯ ಸಂಕೇತಗಳ ನಡುವೆ ಕರ್ನಾಟಕದ ಜನತೆ 18 ದಿನಗಳ ವಿಧಾನಸಭಾ ಕಲಾಪವನ್ನು ವೀಕ್ಷಿಸಿ ಮತ್ತೊಂದು ತಂಡ ಅಧಿಕಾರ ವಹಿಸಿಕೊಳ್ಳುವುದನ್ನು ಎದುರು ನೋಡುತ್ತಿದೆ. ಶಾಸಕರ ಅತೃಪ್ತಿ, ನಿಷ್ಠಾವಂತರ ಆತ್ಮತೃಪ್ತಿ ಮತ್ತು ಅಧಿಕಾರದಾಹಿಗಳ ಹಪಹಪಿ ಇವೆಲ್ಲವೂ ಸಾಂಕೇತಿಕ ಎನ್ನುವುದನ್ನು ನಾವು ಗ್ರಹಿಸಬೇಕಿದೆ. ಐವತ್ತು ಲಕ್ಷ ರೈತರ ದನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಒಂದು ನಿಷ್ಕ್ರಿಯ ಆಡಳಿತ ವ್ಯವಸ್ಥೆಯನ್ನು ನಾವು ಕಂಡಿದ್ದೇವೆ. ಇನ್ನು ಹಾಸನದ ನಾಲ್ಕು ಸಾವಿರ ಗಾರ್ಮೆಂಟ್ ಕಾರ್ಮಿಕರ ದನಿ ಯಾರಿಗೆ ಕೇಳುತ್ತದೆ. ಹಣಕಾಸು ಬಂಡವಾಳದ ಉರುಳು ಬಿಗಿಯಾಗುತ್ತಿರುವಂತೆಲ್ಲಾ ಈ ಪ್ರತಿರೋಧದ ದನಿಗಳು ಹೆಚ್ಚಾಗುತ್ತವೆ, ಸಹಜವಾಗಿ. ಆದರೆ ಈ ದನಿಗಳಿಗೆ ಮುಂಚಿತವಾಗಿಯೇ ಎಚ್ಚರಿಕೆಯನ್ನು ನೀಡಲಾಗಿದೆ. ಶಂಕಿತ ಎನಿಸಿಕೊಳ್ಳದೆಯೇ ಪ್ರತಿರೋಧ ವ್ಯಕ್ತಪಡಿಸುವ ಹೊಸ ವಿಧಾನಗಳ ಅವಿಷ್ಕಾರ ಆಗಬೇಕಿದೆ. ಇಲ್ಲವಾದಲ್ಲಿ ನಗರೀಕರಣಕ್ಕಿಂತಲೂ ಶೀಘ್ರವಾಗಿ ನಗರ ನಕ್ಸಲೀಕರಣ ಪ್ರಕ್ರಿಯೆ ಕಂಡುಬರುತ್ತದೆ.

ಇಂದು ವಿಧಾನಸೌಧದಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಕಸರತ್ತುಗಳು ಕ್ಷಣಿಕ. ಇದನ್ನು ತಾಲೀಮು ಎನ್ನಬಹುದು. ಆದರೆ ಶಾಶ್ವತವಾಗಿ ಬೇರೂರುವುದು ಕಾರ್ಪೋರೇಟ್ ಬಂಡವಾಳದ ಹಿಡಿತ. ಹಾಗಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಬ್ರಿಟೀಷರ ಕಾಲದ ಸಾಂಬಾರು ಪದಾರ್ಥಗಳಂತೆ ಜಾಗತಿಕ ಬಂಡವಾಳದ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದಾರೆ.

ಈಗ ನಮ್ಮ ಮುಂದಿರುವ ಪ್ರಶ್ನೆ . ಯಾವ ಗುಂಪು ಅಧಿಕಾರದಲ್ಲಿರುತ್ತದೆ ಎನ್ನುವುದಲ್ಲ. ಬದಲಾಗಿ ನಮ್ಮ ರಾಜ್ಯದ ನೆಲ, ಜಲ, ನಿಸರ್ಗ ಮತ್ತು ಮಾನವ ಸಂಪನ್ಮೂಲಗಳು ಯಾರ ಪಾಲಾಗಲಿದೆ ಎನ್ನುವುದು. ಯಾವ ರಾಜಕೀಯ ನಾಯಕರೂ ಈ ನಿಟ್ಟಿನಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವುದಿಲ್ಲ. ಏಕೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಮುಖವಾಡಗಳು ಹೇರಳವಾಗಿ ಲಭ್ಯವಿದೆ. ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಸಂವಿಧಾನದ ಉಳಿವಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ,  ಶೋಷಣೆಯ ವಿರುದ್ಧ, ದೌರ್ಜನ್ಯದ ವಿರುದ್ಧ, ಅವಕಾಶ ವಂಚಿತರ ಪರವಾಗಿ, ಮಾನವ ಹಕ್ಕುಗಳಿಗಾಗಿ, ಘನತೆ ಗೌರವದ ಬದುಕಿಗಾಗಿ ಹೋರಾಡುತ್ತಿದ್ದೇವೆ, ಇರಲಿ.

ಈ ಎಲ್ಲ ಹೋರಾಟಗಳೊಂದಿಗೇ ಹಣಕಾಸು ಬಂಡವಾಳದ ಅಧಿಪತ್ಯ ರಾಜಕಾರಣದ ವಿರುದ್ಧ ಹೋರಾಡದೆ ಹೋದರೆ ಬಹುಶಃ ಎಲ್ಲ ಅನ್ಯಾಯ, ಅಸಮಾನತೆಗಳಿಂದಲೂ ವಿಮೋಚನೆ ಹೊಂದಿದ (?) ಗುಲಾಮರಾಗಿ ಬದುಕಬೇಕಾಗುತ್ತದೆ. ಶತಮಾನಗಳ ಕಾಲದ ದಾಸ್ಯ, ಗುಲಾಮಗಿರಿಯಿಂದ ವಿಮೋಚನೆ ಪಡೆದ ಸಾರ್ವಭೌಮ ರಾಷ್ಟ್ರದ ಪ್ರಜೆಗಳಾಗಿ ನಾವು ಮತ್ತೊಮ್ಮೆ ನವ ವಸಾಹತುಶಾಹಿಗೆ, ನವ ಉದಾರವಾದಕ್ಕೆ, ಹಣಕಾಸು ಬಂಡವಾಳಕ್ಕೆ ಗುಲಾಮರಾಗಿ ಬಾಳಬೇಕೇ ? ಈ ಪ್ರಶ್ನೆ ನಮ್ಮ ಆದ್ಯತೆಗಳನ್ನೂ ನಿರ್ಧರಿಸುತ್ತದೆ.