ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಪುತ್ರನೇ ಕಾರಣ: ಸತ್ಯ ಶೋಧನಾ ಸಮಿತಿ

ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಪುತ್ರನೇ ಕಾರಣ: ಸತ್ಯ ಶೋಧನಾ ಸಮಿತಿ

ಬೆಂಗಳೂರು: ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಮತ್ತು ಪರಮಾಪ್ತ ಶರಣಪ್ರಕಾಶ ಪಾಟೀಲ್ ಅವರ ಧೋರಣೆಯೇ ಕಾರಣ ಎಂದು ಸುದರ್ಶನ ನೇತೃತ್ವದ ಸತ್ಯ ಶೋಧನಾ ಸಮಿತಿ ಕಾಂಗ್ರೆಸ್​ ಹೈಕಮಾಂಡ್​ಗೆ ವರದಿ ನೀಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ರಾಜ್ಯದಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷದ ಸೋಲಿಗೆ ಕಾರಣ ಏನು ಎಂಬ ಕುರಿತು ತನಿಖೆ ಮಾಡಲು ಹೈಕಮಾಂಡ್​ ಹಿರಿಯ ನಾಯಕ ಸುದರ್ಶನ್ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿಯೊಂದನ್ನು ರಚನೆ ಮಾಡಿತ್ತು.

ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಪುತ್ರ ಪ್ರಿಯಾಂಕ್ ಖರ್ಗೆ ಕಾರಣ. ಚುನಾವಣೆ ಸಂದರ್ಭದಲ್ಲಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಜಿಲ್ಲೆಯ ಹಿರಿಯ ಮುಖಂಡರನ್ನು ಕಡೆಗಣಿಸಿದ್ದರು. ಹೀಗೆ ಹಿರಿಯ ನಾಯಕರ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದು ಚುನಾವಣೆಯಲ್ಲಿ ದುಬಾರಿಯಾಗಿ ಪರಿಣಮಿಸಿತು. ಖರ್ಗೆ ಸೋಲಿಗೆ ಶರಣಪ್ರಕಾಶ ಪಾಟೀಲ್ ಸಹ ಕಾರಣ. ಜಿಲ್ಲೆಯ ಎಲ್ಲಾ ನಾಯಕರನ್ನು ಕಡೆಗಣಿಸಿರುವ ಇವರ ಧೋರಣೆಯ ಕಾರಣದಿಂದಲೇ ಖರ್ಗೆ ಸೋಲಬೇಕಾಯಿತು ಎಂದು ಈ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈಗಾಗಲೇ ಲೋಕಸಭಾ ಚುನಾವಣಾ ಸೋಲು, ಮೈತ್ರಿ ಅಂತ್ಯದಿಂದ ಅಧಿಕಾರ ವಿಯೋಗ ಹಾಗೂ ಪಕ್ಷದೊಳಗಿನ ಬಣ ಕಿತ್ತಾಟದಿಂದಾಗಿ ರಾಜ್ಯ ಕಾಂಗ್ರೆಸ್​ ಘಟಕ ಗೊಂದಲದ ಗೂಡಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​ ಗೆ ಚಿಕಿತ್ಸೆ ನೀಡುವ ಸಲುವಾಗಿ ಹೈಕಮಾಂಡ್ ಈ ವರದಿಯನ್ನು ಆಧರಿಸಿ ಕೆಲವು ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲಿದೆ. ರಾಜ್ಯ ಕಾಂಗ್ರೆಸ್​ನಲ್ಲಿ ಮೇಜರ್​ ಸರ್ಜರಿ ಆಗಲಿದೆ ಎಂದು ಹೇಳಲಾಗುತ್ತಿದೆ.

ಕೋಲಾರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಚ್.ಮುನಿಯಪ್ಪ ಸೋಲಿಗೆ ಶಾಸಕ ಕೆ.ಆರ್.ರಮೇಶ್ ಕುಮಾರ್, ಮುಖಂಡರಾದ ನಾರಾಯಣಸ್ವಾಮಿ, ವರ್ತೂರು ಪ್ರಕಾಶ್ ಇತರರು ಕಾರಣ ಎಂದು ವರದಿಯಲ್ಲಿ ದಾಖಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿ ಸೋಲುಂಟಾಗಿದ್ದು, ಮುಂದಿನ ದಿನಗಳಲ್ಲಿ ಮೈತ್ರಿ ಮುಂದುವರಿಸಬಾರದು ಎಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಲಹೆ ಮಾಡಿದ್ದಾರೆ.