ಮೈಸೂರು ದಸರೆಗೂ ತಟ್ಟಿದ ಆರ್.ಎಸ್.ಎಸ್. ಕಾಟ: ಅವರೂ ಕಾವ್ಯ ವಾಚನ ಮಾಡಬೇಕಂತೆ!

ಯಾವುದೇ ಫಲ ನೀಡದ ಹಿಂದೂ ಎಂಬ ಅರಚುವಿಕೆ ಮಾತ್ರ ಗೊತ್ತಿರುವ ಆರ್.ಎಸ್.ಎಸ್. ಮಂದಿಗೆ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಅವಕಾಶ ನೀಡಬೇಕೆಂಬ ಆಗ್ರಹ ಕೇಳಿ ಬಂದಿದೆ.

ಮೈಸೂರು ದಸರೆಗೂ ತಟ್ಟಿದ ಆರ್.ಎಸ್.ಎಸ್. ಕಾಟ: ಅವರೂ ಕಾವ್ಯ ವಾಚನ ಮಾಡಬೇಕಂತೆ!

ಕವಿಗೋಷ್ಠಿಯಲ್ಲಿ ಪದ್ಯ ಓದಲು ಆರೆಸ್ಸೆಸ್ ನವರಿಗೂ ಅವಕಾಶ ಕೊಡಿ, ಬಿಜೆಪಿಯವರಿಗೆ ಆಹಾರ ಮೇಳದ ಮಳಿಗೆಗಳನ್ನ ಕೊಡಿ ಎಂಬಿತ್ಯಾದಿ ಬೇಡಿಕೆಯನ್ನ ಬಹಿರಂಗವಾಗಿಯೇ ಮಂಡಿಸುವ ಮೂಲಕ ಮೈಸೂರು ದಸರಾವನ್ನ ಅಧ್ವಾನಗೊಳಿಸುವ ಯತ್ನದ ದಿಬ್ಬಣ ಸಾಗಿಯೇ ಇದೆ.

ಬಿಜೆಪಿಯ ಸಂಸದ ಶ್ರೀನಿವಾಸ ಪ್ರಸಾದ್ ನೆರೆಯಿಂದ ಜನ ತತ್ತರಿಸಿರುವಾಗ ಇಷ್ಟೊಂದು ಅದ್ದೂರಿ ದಸರಾ ಬೇಕಿತ್ತಾ ಎಂದು ಪ್ರಶ್ನಿಸುತ್ತಲೇ  ದೂರವುಳಿದಿರುವುದನ್ನ ಇವರಳಿಯ ನಂಜನಗೂಡು ಶಾಸಕ ಹರ್ಷವರ್ಧನ್ ಅನುಸರಿಸಿದ್ದಾರೆ. ಮಂತ್ರಿಗಿರಿ ಸಿಕ್ಕಿಲ್ಲದ ಅಸಮಾಧಾನದೀಂದ ಕೆ.ಆರ್.ಕ್ಷೇತ್ರದ ರಾಮದಾಸ್ ಅಂತರ ಕಾಯ್ದುಕೊಳ್ಳುತ್ತಿರುವುದು ಕಮಲ ಪಡೆಯ ಸುದ್ದಿಗಳಾಗಿದ್ದರೆ, ಜಿ.ಟಿ.ದೇವೇಗೌಡರನ್ನ ಹೊರತಾಗಿಸಿದರೆ  ದಳ ಮತ್ತು ಕಾಂಗ್ರೆಸ್‍ನ ಶಾಸಕರು ನೀವೇ ಮಾಡಿಕೊಳ್ಳಿ ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ. ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಸೋಮಣ್ಣ ಓಡಾಡಿಕೊಂಡು ದಸರಾ ವಿಜೃಂಭಿಸಲು ಕೆಲಸ ಮಾಡುತ್ತಿದ್ದರೂ, ಪಕ್ಷ ಮತ್ತು ಸಂಘ ಪರಿವಾರದವರು ಇದರ ಫಲಗಳೆಲ್ಲ ನಮಗೆ ಮಾತ್ರ ಸೇರಬೇಕೆಂದು ಕವಿ, ಕಲಾವಿದ, ಹಾಡುಗಾರ, ನೃತ್ಯಗಾರ, ವ್ಯಾಪಾರಿ ಇತ್ಯಾದಿ ವೇಷಗಳಲ್ಲಿ ಠಳಾಯಿಸಿಕೊಂಡು, ಎಲ್ಲದರಲ್ಲೂ ವೇದಿಕೆ ಮತ್ತು ಅವಕಾಶ ಕೊಡಬೇಕೆಂಬ ಅಹವಾಲನ್ನ ಕಿಂಚಿತ್ ಮುಜುಗರವನ್ನು ಇಟ್ಟುಕೊಳ್ಳದೆಯೇ ಮಂಡಿಸುತ್ತಿದ್ದಾರೆ. ಇದಕ್ಕೆ ಡಾ.ಎಸ್.ಎಲ್.ಭೈರಪ್ಪ  ದಸರಾ ಉದ್ಬಾಟಕರು ಎಂದಾದ್ದರಿಂದ ಇಡೀ ದಸರಾವೇ ಬಿಜೆಪಿ-ಸಂಘಪರಿವಾರದವರದ್ದಾಗಬೇಕು ಎಂಬ ತಪ್ಪು ಕಲ್ಪನೆ ಕಾರ್ಯಕರ್ತರಲ್ಲಿ ಮೂಡಿರುವುದೂ ಕಾರಣವಿರಬಹುದು.

ಹುಣಸೂರಿನಲ್ಲಿ ಹನುಮ ಜಯಂತಿ ಎಂಬುದನ್ನ ಇತ್ತೀಚಿನ ವರ್ಷಗಳಲ್ಲಿ ವಿವಾದವಾಗಿಸುವಲ್ಲಿ ಸಫಲವಾಗಿರುವ ಸಂಸದ ಪ್ರತಾಪ ಸಿಂಹ, ನಿಷೇಧಗಳನ್ನ ಉಲ್ಲಂಘಿಸಿ ರಸ್ತೆಗೆ ಅಡ್ಡವಿಟ್ಟಿದ್ದ ಕಟಕಟೆಯನ್ನೂ ಕಾರಿನಿಂದ ಗುದ್ದಿದ್ದರು. ಈ ಪ್ರಕರಣ ಅದು ಹೇಗೆ ಅಂತ್ಯ ಕಂಡಿತೋ ಗೊತ್ತೇ ಇಲ್ಲ. ಆಗೆಲ್ಲ ಸಂಸದನ ವಿರುದ್ದ ಕಿಡಿಕಾರುತ್ತಿದ್ದ ಶಾಸಕ ಎಚ್.ವಿಶ್ವನಾಥ್ ಈಗ ಅದೇ ಪಕ್ಷದ ಕಾಳು ತಿನ್ನಲು ಸಜ್ಜಾಗಿರುವ ಹಕ್ಕಿಯಾಗಿಬಿಟ್ಟಿರುವುದು ವಿಶೇಷ. ಅತಿ ಸೂಕ್ಷ್ಮ ವಿಚಾರವನ್ನಾಗಿ ಹನುಮ ಜಯಂತಿಯನ್ನ ಪರಿವರ್ತಿಸಿರುವ ಪ್ರತಾಪ ಸಿಂಹ ಈಗ ಮಹಿಷ ದಸರಾ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿ ಮುಜುಗರಕ್ಕೀಡಾಗಿದ್ದಾರೆ. ಹಾಗೆಯೇ ಸಂಘ ಮೂಲದವರು ಮಹಿಷ ದಸರಾ ಆಚರಣೆ ಮಾಡುವವರನ್ನ ಹೀಗಳೆಯುತ್ತಾ ಕೂತಿರುವುದರಿಂದಾಗಿ, ಮೈಸೂರು ದಸರಾ ವೀಗ ವಿವಾದದ ಪರ್ವವಾಗಿ ರೂಪಾಂತರಗೊಳ್ಳುತ್ತಿದೆ.

ಬಹಿರಂಗಕ್ಕೆ ಬಾರದಂತೆ ನಾಡಹಬ್ಬದಲ್ಲಿ ತಮ್ಮವರನ್ನೇ ತೂರಿಸಿಕೊಳ್ಳುತ್ತಿದ್ದ ಪ್ರವೃತ್ತಿಗೀಗ ರಾಜಾರೋಷವಾಗಿಯೇ ತಮ್ಮದನ್ನಾಗಿಸಿಕೊಳ್ಳಲು ಹೊರಟಿರುವುದು ಪ್ರತಾಪ ಸಿಂಹನಂಥವರೇ ಪಕ್ಷ-ಸಂಘದ ಬಣ್ಣ ಕೊಡಬೇಡಿ ಎಂದು ಬುದ್ದಿವಾದ ಹೇಳುವಂತಾಗಿದೆ ಎಂದರಿದು ವಿಷಯದ ತೀವ್ರತೆಗೆ ಹಿಡಿದ ಕೈಗನ್ನಡಿ. 

ಉಪಚುನಾವಣೆಯ ನೀತಿ ಸಂಹಿತೆ ಭಯದಲ್ಲಿ ಮಂತ್ರಿ ಮಹೋದಯರು ಹಿಂದೆ ಮುಂದೆ ನೋಡುವಂಥದ್ದೂ ಇವಾಗಿಲ್ಲ. ಅಂತೂ ಮಹಿಷ ದಸರಾ, ಆರೆಸ್ಸೆಸ್‍ನವರ ಪ್ರಭಾವ, ಸ್ವಪಕ್ಷದಲ್ಲೇ ಸಾಮರಸ್ಯವಿಲ್ಲದ್ದೆಲ್ಲವನ್ನ ಇಟ್ಟುಕೊಂಡೇ ದಸರಾ ನಾಳೆ ಮೆರೆಯಲು ಅಣಿಯಾಗಿದೆ.