ಸಿದ್ದರಾಮಯ್ಯ ಆಡಳಿತಾವಧಿ ಬಗ್ಗೆ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ಕಾಂಗ್ರೆಸ್ : ಘೋಷಿತ ಸಾಧನೆಗೂ ವಾಸ್ತವದ ಅಂಕಿಅಂಶಗಳಿಗೂ ತಾಳೆಯೇ ಇಲ್ಲ!  

ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಆಡಳಿತದಲ್ಲಿ ₹ 2,232.40 ಕೋಟಿ ಮೊತ್ತ ಲೆಕ್ಕಕ್ಕೆ ಸಿಕ್ಕಿರಲಿಲ್ಲ.

ಸಿದ್ದರಾಮಯ್ಯ ಆಡಳಿತಾವಧಿ ಬಗ್ಗೆ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ಕಾಂಗ್ರೆಸ್ : ಘೋಷಿತ ಸಾಧನೆಗೂ ವಾಸ್ತವದ ಅಂಕಿಅಂಶಗಳಿಗೂ ತಾಳೆಯೇ ಇಲ್ಲ!  

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಆಡಳಿತದಲ್ಲಿ (2013-18)ನ ಹಲವು ನಿಯಮಬಾಹಿರ ಚಟುವಟಿಕೆಗಳು ಮತ್ತು ವಿವಿಧ ಇಲಾಖೆಗಳಲ್ಲಿನ ಅಕ್ರಮಗಳನ್ನು 2018ನೇ ಸಾಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಹೊರಗೆಡವಿದೆ.

ಮೋದಿ  ನೇತೃತ್ವದ ಸರ್ಕಾರಕ್ಕಿಂತಲೂ ಸಿದ್ದರಾಮಯ್ಯ ಅವರ  ಅವಧಿಯಲ್ಲಿ ಶುದ್ಧ ಆಡಳಿತ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಮತ್ತು ಚಾಲನೆಯಲ್ಲಿರುವ ಹೂಡಿಕೆಗಳನ್ನು ಆಕರ್ಷಿಸಿರುವುದು ಸೇರಿದಂತೆ ಅಭಿವೃದ್ಧಿ ದರ ಉತ್ತಮವಾಗಿತ್ತು ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಹೊತ್ತು ಮೆರೆಸಿತ್ತು. ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ಹೇಳಿದ್ದೆಲ್ಲವೂ ಪೊಳ್ಳು ಎಂಬುದನ್ನು  ಸಿಎಜಿ ವರದಿ ಇದೀಗ ನಿರೂಪಿಸಿದೆ.

ಸಿದ್ದರಾಮಯ್ಯ ಅವರ ಐದು ವರ್ಷಗಳ ಆಡಳಿತವನ್ನು ಮೋದಿ ಅಲೆ ಹಿಮ್ಮೆಟ್ಟಿಸುವ ಅಸ್ತ್ರವಾಗಿ ಎಐಸಿಸಿ ಬಳಸಿಕೊಂಡಿತ್ತು. ಅದರಲ್ಲೂ ತುಂಬಾ ಮುಖ್ಯವಾಗಿ 2018ರಲ್ಲಿ ಕರ್ನಾಟಕ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿಯೂ ಸಿದ್ದರಾಮಯ್ಯ ಆಡಳಿತದಲ್ಲಿ ಅಕ್ರಮಗಳು ನಡೆದಿಲ್ಲ ಎಂದಿದ್ದ ಕಾಂಗ್ರೆಸ್ ವರಿಷ್ಠರು ಕೇಂದ್ರದ ವಿರುದ್ಧ ಟೀಕಾಸ್ತ್ರ ನಡೆಸಿದ್ದರು. ಆದರೆ ಸಿಎಜಿ ಸಲ್ಲಿಸಿರುವ ವರದಿ ಸಿದ್ದರಾಮಯ್ಯ ಅವರ ಅವಧಿಯ ಆಡಳಿತ  ಭಿನ್ನವಾಗಿಯೇನೂ ಇರಲಿಲ್ಲ ಎಂದು ಹೇಳಿದೆ.

1.22 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಸರ್ಕಾರ (2013-18ರ ಅವಧಿಯಲ್ಲಿ ) ಹೇಳಿತ್ತಾದರೂ ವಾಸ್ತವದಲ್ಲಿ ಕೇವಲ 44,695 ಉದ್ಯೋಗ ಸೃಷ್ಟಿಯಾಗಿದೆ ಎಂದು ವರದಿ ಹೇಳಿದೆ. ಇದೇ ಅವಧಿಯಲ್ಲಿ ಅಲ್ಪಾವಧಿಯ ಟೈಲರಿಂಗ್ ಕಾರ್ಯಕ್ರಮದಡಿಯಲ್ಲಿ ತರಬೇತಿ ಪಡೆದ 77,461 ಜನರನ್ನು ಯಾವುದೇ ಉದ್ಯೋಗವಿಲ್ಲದ ಉದ್ಯೋಗ ಎಂದು ಸರ್ಕಾರ ತೋರಿಸಿದೆ ಎಂಬ ವಿಚಾರ ವರದಿಯಿಂದ ಗೊತ್ತಾಗಿದೆ.

ಗಣಿಗಾರಿಕೆಯಲ್ಲಿನ ದೊಡ್ಡ ಪ್ರಮಾಣದ ಅಕ್ರಮಗಳು, ಜವಳಿ ನೀತಿ, ಕೃಷಿ ಮಾರುಕಟ್ಟೆ ಸುಧಾರಣೆಗಳು, ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಿರುವುದು ಸೇರಿದಂತೆ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯವನ್ನು ವಸೂಲು ಮಾಡುವಲ್ಲಿನ ನಡೆದಿರುವ ಅಕ್ರಮಗಳು, ಮತ್ತಿತರ ಲೋಪದೋಷಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ನಿಗದಿಪಡಿಸುವಲ್ಲಿ ಮತ್ತು ಮಾರುಕಟ್ಟೆ ಮೌಲ್ಯದ ಸೂಚಕಗಳನ್ನು ಮಾರ್ಗಸೂಚಿ ಮಾರುಕಟ್ಟೆ ಮೌಲ್ಯವನ್ನು ಅಂದಾಜಿಸುವಲ್ಲಿ ಪರಿಗಣಿಸದ ಕಾರಣ ₹ 2,232.40 ಕೋಟಿ ಮೊತ್ತವು (3,335 ಪ್ರಕರಣಗಳಲ್ಲಿ) ಲೆಕ್ಕಕ್ಕೆ ಸಿಕ್ಕಿರಲಿಲ್ಲ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮಾರ್ಗಸೂಚಿ ದರವನ್ನೂ ಪರಿಷ್ಕರಿಸದ ಕಾರಣ ಬೊಕ್ಕಸಕ್ಕೆ ₹ 441 ಕೋಟಿ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿ ಹೊರಗೆಡವಿದೆ.

ಅಲ್ಲದೆ 13,533 ಪ್ರಕರಣಗಳಲ್ಲಿ 3,167.52 ಕೋಟಿ ಅವಮೌಲ್ಯಾಂಕನ (ಅಂಡರ್ ವ್ಯಾಲ್ಯೂವೇಷನ್) ನಡೆದ ಕಾರಣ ₹ 189.82 ಕೋಟಿ ನಷ್ಟವಾಗಿದೆ. ಗ್ರಾಮಗಳಲ್ಲಿ ಅಧಿಕ ಪ್ರಮಾಣದ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯದೊಂದಿಗಿನ ನಮೂದುಗಳನ್ನು ತೆಗೆದು ಹಾಕಿದ್ದರಿಂದ ₹ 33.51 ಕೋಟಿ, 3,237 ಅಪಾರ್ಟ್ಮೆಂಟ್ಗಳಿಗೆ ಸಂಬಂಧಿಸಿದಂತೆ ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿದ್ದರಿಂದ ₹ 48.56 ಕೋಟಿ, ವಿವಿಧ ಯೋಜನೆಗಳಿಗೆ ನಿರ್ದಿಷ್ಟ ಹೆಸರು ನಿಗದಿಪಡಿಸದ ಕಾರಣ ₹ 20.37ಕೋಟಿ ಮೊತ್ತದಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ನಿಗದಿಪಡಿಸಲಾಗಿತ್ತು ಎಂಬ ಅಂಶವು ವರದಿಯಿಂದ ತಿಳಿದು ಬಂದಿದೆ.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೂರಕ ಅಂದಾಜಿನಿಂದ ಹಣ ಪಡೆದುಕೊಂಡು ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡಲಾಗಿತ್ತು. ಅಲ್ಲದೆ ಆರ್ಥಿಕ ವರ್ಷದ ಕೊನೆಯ ಎರಡು ದಿನಗಳ ಕೆಲಸದ ಅವಧಿಯಲ್ಲಿ 17 ಪ್ರಕರಣಗಳಲ್ಲಿ ₹2,246 ಕೋಟಿ ವೆಚ್ಚ ಮಾಡಲಾಗಿದೆ. ಅದೇ ರೀತಿ 13 ಪ್ರಕರಣಗಳಲ್ಲಿ ಪೂರಕ ಅಂದಾಜು ರೂಪಿಸಿ ವಿವಿಧ ಯೋಜನೆಗಳಿಗೆ ₹171.53 ಕೋಟಿ ನೀಡಲಾಗಿತ್ತು. ಆದರೆ ಇಷ್ಟೊಂದು ಹಣ ನೀಡುವ ಅಗತ್ಯ ಇರಲಿಲ್ಲ ಎಂದು ವರದಿ ಅಭಿಪ್ರಾಯಿಸಿದೆ.

ವಿವಿಧ ಇಲಾಖೆ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಠೇವಣಿ ಇಟ್ಟುಕೊಂಡಿದ್ದಾರೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಆಕ್ಷೇಪಿಸಲಾಗಿದೆ.

ಅಲ್ಲದೆ, ಕಾಂಗ್ರೆಸ್ ಆಡಳಿತದಲ್ಲಿ ಅಧಿಕಾರಿಗಳು ಹಣಕಾಸು ವಿಚಾರದಲ್ಲಿ ಹೊಂದಿದ್ದ ಅಶಿಸ್ತು ಕೂಡ ವರದಿಯಲ್ಲಿ ಬಿಂಬಿತವಾಗಿದೆ. ಅಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಹಣ ಉಳಿದಿತ್ತಲ್ಲದೆ ಇದು ನಿಷ್ಕ್ರೀಯಗೊಂಡಿದೆ ಎಂದು ಹೇಳಿರುವ ಸಿಎಜಿ, ವೈಯಕ್ತಿಕ ಖಾತೆಗಳಲ್ಲಿ ₹ 4,75,03,927 ಇತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

ಅಕ್ರಮ ಗಣಿಗಾರಿಕೆ ಕುರಿತು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ, ಹೋರಾಟ ನಡೆಸಿದ್ದ ಸಿದ್ದರಾಮಯ್ಯ ಅವರ ಆಡಳಿತದಲ್ಲಿಯೂ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಿರಲಿಲ್ಲ. ರಾಜ್ಯದ ಹಲವು  ಜಿಲ್ಲೆಗಳಲ್ಲಿ ಅಕ್ರಮವಾಗಿ ಕಟ್ಟಡ ಕಲ್ಲುಗಳು ಮತ್ತು ಗ್ರಾನೈಟ್ ಗಣಿಗಾರಿಕೆ ಮಾಡಲಾಗಿದೆ ಎಂದು ಸಿಎಜಿ ವರದಿ ಆರೋಪಿಸಿದೆ.

'ಅಕ್ರಮವಾಗಿ 9.94 ಲಕ್ಷ ಘನ ಮೀಟರ್ ಪ್ರಮಾಣದಲ್ಲಿ ಕಲ್ಲುಗಳನ್ನು ಹೊರತೆಗೆಯಲಾಗಿದೆ. ಹೀಗೆ ಅಕ್ರಮವಾಗಿ ನಡೆಸಿದ್ದ ಗಣಿಗಾರಿಕೆಯಿಂದ 1,191.96 ಕೋಟಿ ರು. ನಷ್ಟವುಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹುಲಿ ಸಂರಕ್ಷಣೆ ಪ್ರತಿಷ್ಠಾನಕ್ಕೆ ಸಂಬಂಧಿಸಿದ ಬಳಕೆದಾರರ ಕರ ₹46.75 ಕೋಟಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಗೆ ಸಂಗ್ರಹಿಸಿದ ವಂತಿಗೆ ₹909.96 ಕೋಟಿಯನ್ನು ರಾಜ್ಯ ಸಂಚಿತ ನಿಧಿಗೆ ಜಮೆ ಆಗಿರಲಿಲ್ಲ. ಅರಣ್ಯೇತರ ಉದ್ದೇಶಗಳಿಗಾಗಿ 7,785 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಲು ಅನುಮತಿ ನೀಡಿತ್ತು ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

2013-18ರ ಜವಳಿ ನೀತಿಯು ಉದ್ದೇಶಿತ ಗುರಿಯನ್ನು ತಲುಪಿಲ್ಲ.  ₹ 10,000 ಕೋಟಿಗಳನ್ನು ಆಕರ್ಷಿಸುವ ಮತ್ತು ಕನಿಷ್ಠ 500,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದ ಜವಳಿ ನೀತಿ, ಕೇವಲ ಘೋಷಣೆಗಷ್ಟೇ ಸೀಮಿತಗೊಂಡಿರುವುದು ವರದಿಯಿಂದ ಗೊತ್ತಾಗಿದೆ.

"ಜವಳಿ ನೀತಿಯಲ್ಲಿ ಕಲ್ಪಿಸಲಾಗಿರುವ ₹ 10,000 ಕೋಟಿ ಹೂಡಿಕೆ ಗುರಿ ಮತ್ತು 5 ಲಕ್ಷ ಉದ್ಯೋಗ ಉತ್ಪಾದನೆ ಗುರಿ ಸಾಧಿಸಲಾಗಿಲ್ಲ,' ಎಂದು ವರದಿಯಲ್ಲಿ ಉಲ್ಲೇಖಗೊಂಡಿದೆ.