ವಿಧಾನಸಭಾ ಸಚಿವಾಲಯದ ಕೆಲವು ಅಧಿಕಾರಿಗಳು ಪ್ರಾಮಾಣಿಕತೆ ವಿಚಾರದಲ್ಲಿ ಹಿಂದೆ, ಕರ್ತವ್ಯ ವ್ಯಾಪ್ತಿಯ ಕೆಲಸಕ್ಕೂ ಗೌರವ ಧನ ಪಡೆಯುವಲ್ಲಿ ಮುಂದೆ!

ವಿಧಾನಸಭಾ ಸಚಿವಾಲಯದ ಕೆಲವು ಅಧಿಕಾರಿಗಳು ಪ್ರಾಮಾಣಿಕತೆ ವಿಚಾರದಲ್ಲಿ ಹಿಂದೆ, ಕರ್ತವ್ಯ ವ್ಯಾಪ್ತಿಯ ಕೆಲಸಕ್ಕೂ ಗೌರವ ಧನ ಪಡೆಯುವಲ್ಲಿ ಮುಂದೆ!

ಕರ್ನಾಟಕ  ವಿಧಾನಸಭೆ ಸಚಿವಾಲಯದಲ್ಲಿ ಅಕ್ರಮಗಳಿಗೆ  ಮಿತಿಯೂ ಇಲ್ಲ; ಕೊನೆಯೂ ಇಲ್ಲ. ಅದರಲ್ಲೂ ಹಿಂದಿನ ಸ್ಪೀಕರ್‌ ಕೋಳಿವಾಡ ಅವರ  ಅವಧಿಯಲ್ಲಂತೂ  ಸಚಿವಾಲಯದ  ಗೌರವ ಮಣ್ಣುಪಾಲಾಗಿತ್ತು. ನೇಮಕಾತಿ ಪ್ರಕ್ರಿಯೆಗಳಲ್ಲಂತೂ ವಿಪರೀತ ಅಕ್ರಮಗಳು ನಡೆದಿದ್ದವು. ಇದರ  ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿ,  ಸಿಬ್ಬಂದಿಗೆ ಗೌರವ ಧನ ಮತ್ತು ಊಟೋಪಚಾರದ ಹೆಸರಿನಲ್ಲಿ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವ ಮತ್ತೊಂದು  ಅಕ್ರಮವನ್ನು ಜಿ.ಮಹಂತೇಶ್ ದಾಖಲೆ ಸಮೇತ ಬಯಲು ಮಾಡಿದ್ದಾರೆ.

 

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ತರಾತುರಿಯಲ್ಲಿ ವಿಧಾನಸಭೆ ಸಚಿವಾಲಯದಲ್ಲಿ ನಡೆದಿದ್ದ ನೇಮಕ ಹಗರಣದ ಇನ್ನೊಂದು ಮುಖ ಅನಾವರಣಗೊಂಡಿದೆ. ನೇಮಕಾತಿ ಪ್ರಕ್ರಿಯೆ ನಡೆಸಲು ನಿಯೋಜನೆಗೊಂಡಿದ್ದ ಹಿಂದಿನ ಪ್ರಭಾರ ಕಾರ್ಯದರ್ಶಿ ಎಸ್ ಮೂರ್ತಿ  ಅವರೂ ಸೇರಿದಂತೆ ಇನ್ನಿತರ ಅಧಿಕಾರಿಗಳು, ನೌಕರರಿಗೆ ಪಾವತಿಸಿರುವ 'ಗೌರವ ಧನ' ಹೆಸರಿನಲ್ಲಿ ಸರ್ಕಾರದ ಹಣ ದುರುಪಯೋಗವಾಗಿದೆ.

ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ಸಿಬ್ಬಂದಿಗೆ ದಿನವೊಂದಕ್ಕೆ 500 ರು.ಗಳಂತೆ ಒಟ್ಟಾರೆಯಾಗಿ 21 ಲಕ್ಷ ರು.ಗಳಿಗೂ ಅಧಿಕ ಮೊತ್ತವನ್ನು ನಿಯಮಬಾಹಿರವಾಗಿ ವಿವಿಧ ದಿನಾಂಕಗಳಂದು ಪಾವತಿಸಿರುವುದನ್ನು 'ಡೆಕ್ಕನ್' ನ್ಯೂಸ್‌ ಪತ್ತೆ ಹಚ್ಚಿದೆ. 

ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿ, ನೌಕರರಿಗೆ ಊಟೋಪಚಾರ ವ್ಯವಸ್ಥೆಗೆ ಸಚಿವಾಲಯವೇ ಲಕ್ಷಾಂತರ ರುಪಾಯಿ ಖರ್ಚು ಮಾಡಿತ್ತು. ಊಟೋಪಚಾರ ಭತ್ಯೆ ಮತ್ತು ವಾಹನ ಸೌಲಭ್ಯ ಪಡೆದ ನಂತರ ಯಾವುದೇ ರೀತಿಯಲ್ಲೂ ಗೌರವ ಧನ ಪಾವತಿಸಲು ಅವಕಾಶಗಳಿಲ್ಲ. ಪ್ರಭಾರ ಕಾರ್ಯದರ್ಶಿಯೂ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಚಿವಾಲಯದ ವಾಹನ ಸೌಲಭ್ಯ ಪಡೆದಿದ್ದರೂ ಗೌರವ ಧನ ಪಾವತಿಸಿರುವುದು ಸಂಶಯಗಳಿಗೆ ಕಾರಣವಾಗಿದೆ. 

ಇನ್ನು, ಊಟೋಪಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿ,  ನೌಕರರೇ ಈ ವ್ಯವಸ್ಥೆಗಾಗಿ ವೈಯಕ್ತಿಕವಾಗಿ ವೆಚ್ಚ  ಮಾಡಿದ್ದಾರೆ  ಎಂದು ಸಭಾಧ್ಯಕ್ಷರನ್ನೂ ದಾರಿತಪ್ಪಿಸಿ ವಂಚಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ಸಮಗ್ರ  ದಾಖಲಾತಿಗಳು ‘ಡೆಕ್ಕನ್ ನ್ಯೂಸ್’ಬಳಿ ಇದೆ. 

ಈ ಹಿಂದಿನ ಸ್ಪೀಕರ್‌ ಕೋಳಿವಾಡ ಮತ್ತು  ಪ್ರಭಾರಿ ಕಾರ್ಯದರ್ಶಿಯಾಗಿದ್ದ ಎಸ್‌ ಮೂರ್ತಿ ಅವರ ಅಧಿಕಾರಾವಧಿಯಲ್ಲಿ ನಡೆದಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಹಾಲಿ ಸ್ಪೀಕರ್‌ ಕೆ ಆರ್‌ ರಮೇಶ್‌ಕುಮಾರ್‌ ಅವರ ಸೂಚನೆ  ಮೇರೆಗೆ ಕಂಟ್ರೋಲರ್‌ ಅಂಡ್‌  ಆಡಿಟರ್‌ ಜನರಲ್‌(ಮಹಾಲೇಖಪಾಲರು) ನಡೆಸಿದ್ದ  ವಿಶೇಷ ಆಡಿಟ್‌ ವರದಿ ಕೈ ಸೇರಿ ಹಲವು  ತಿಂಗಳಾದರೂ ಸ್ಪೀಕರ್ ರಮೇಶ್‌ಕುಮಾರ್‌ ಈವರೆವಿಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದರ  ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ, ನೌಕರರಿಗೆ ಗೌರವ ಧನ ಹೆಸರಿನಲ್ಲಿ ಸರ್ಕಾರದ ಹಣ ಮತ್ತು ಅಧಿಕಾರ ದುರುಪಯೋಗವಾಗಿರುವುದು ಕಂಡು ಬಂದಿದೆ.

ಕರ್ನಾಟಕ  ವಿಧಾನಸಭೆ ಸಚಿವಾಲಯದ 2017-18 ನೇ ಸಾಲಿನ ನೇರ  ನೇಮಕಾತಿ ಕಾರ್ಯಗಳಿಗೆ ಅಧಿಕಾರಿ, ನೌಕರರನ್ನು ಪ್ರತ್ಯೇಕವಾಗಿ 2018ರ ಜನವರಿ 3 ಮತ್ತು 6, ಫೆ. 16ರ ಆದೇಶಗಳ ಮೂಲಕ ನಿಯೋಜಿಸಲಾಗಿತ್ತು. ವಿವಿಧ ಹುದ್ದೆಗಳಿಗೆ ಸಲ್ಲಿಕೆಯಾಗಿದ್ದ ಹದಿನೈದು ಸಾವಿರ ಅರ್ಜಿಗಳ ಪರಿಶೀಲನೆ, ವರ್ಗೀಕರಣ, ಗಣಕ  ಯಂತ್ರದಲ್ಲಿ  ದಾಖಲು, ಸಂದರ್ಶನ ಪತ್ರ ರವಾನೆ, ಮೂಲ ದಾಖಲಾತಿಗಳ ಪರಿಶೀಲನೆ, ನೇಮಕಾತಿ ಪತ್ರ ರವಾನಿಸುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಅತಿವೇಗದಲ್ಲಿ ಕೈಗೊಳ್ಳಲು  ಅಧಿಕಾರಿ, ನೌಕರರನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಕೂಡಲೇ ತಮಗೆ ಹಂಚಿಕೆಯಾಗಿರುವ ಕಾರ್ಯಗಳನ್ನು ವಹಿಸಿಕೊಳ್ಳಬೇಕು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಶಾಖೆಗಳ ನಿಯಂತ್ರಣಾಧಿಕಾರಿಗಳು ಅವರನ್ನು ಕರ್ತವ್ಯಗಳಿಂದ ಬಿಡುಗಡೆಗೊಳಿಸಬೇಕು ಎಂದು ಸೂಚಿಸಲಾಗಿತ್ತು. 

ಗೌರವ ಧನ ಪಾವತಿಸಬೇಕೆ?

ಅಂದರೆ ನೇರ ನೇಮಕಾತಿ ಕಾರ್ಯಗಳಿಗೆ ಪ್ರತ್ಯೇಕವಾಗಿ ಅಧಿಕಾರಿ, ನೌಕರರನ್ನು ನಿಯೋಜಿಸಲಾಗಿತ್ತು. ಈ ಕಾರ್ಯವು ಸರ್ಕಾರಿ  ನೌಕರನ ವಿಧಿಬದ್ಧ ಕರ್ತವ್ಯ. ಸರ್ಕಾರಿ  ಕೆಲಸದ ವೇಳೆ ನಂತರ  ಹೆಚ್ಚು ಅವಧಿ ಕೆಲಸ  ಮಾಡುವುದು ಸರ್ಕಾರಿ  ನೌಕರನ ಜವಾಬ್ದಾರಿಯಾಗಿದೆ. ಅಲ್ಲದೆ, ವಿಧಿಸಿರುವ ಸಾಮಾನ್ಯ ನಿಯಮಾವಳಿಗಳ ಪ್ರಕಾರ "ಸಂಬಂಧಪಟ್ಟ ಸರ್ಕಾರಿ ನೌಕರರ ವಿಧಿಬದ್ಧ ಕರ್ತವ್ಯವೆಂದೂ ನಿಜವಾಗಿಯೂ ಪರಿಗಣಿಸಬಹುದಾದ ಯಾವುದೇ ಕೆಲಸದ ಬಗ್ಗೆ ಯಾವ ಬಗೆಯ ಗೌರವ ಧನವನ್ನೂ ಕೊಡತಕ್ಕದ್ದಲ್ಲ. ವಿಶೇಷ ಕಾಲಗಳಲ್ಲಿ ಮತ್ತು ಸನ್ನಿವೇಶಗಳಲ್ಲಿ ಸರ್ಕಾರಿ ಕೆಲಸದ ವೇಳೆಯಾಚೆಗೆ ಹೆಚ್ಚು ಹೊತ್ತು ಕೆಲಸ ಮಾಡುವುದು ಸರ್ಕಾರಿ ನೌಕರನ ಹೊಣೆಯಾಗಿದೆ. ಈ ಕಾರಣದಿಂದಾಗಿ ಸಾಮಾನ್ಯವಾಗಿ ಯಾವ ಗೌರವ ಧನವನ್ನೂ ಕೊಡತಕ್ಕದ್ದಲ್ಲ," ಎಂಬ  ಅಂಶ ನಿಯಾಮಾವಳಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಗೊಂಡಿದೆ. 

ಕೆಲ ವಿಶೇಷ ಕಾರಣಗಳನ್ನು ದಾಖಲಿಸಿ ಗೌರವ ಧನ ಪಾವತಿಸಲಾಗುತ್ತದೆ.  ಸರ್ಕಾರಿ ಕೆಲಸದ  ವೇಳೆಯಾಚೆಗೆ ಹೆಚ್ಚು ಹೊತ್ತು ನಿರಂತರವಾಗಿ  ಮತ್ತು ಅಧಿಕೃತ ರಜಾ ದಿನಗಳಲ್ಲಿ ಕೆಲಸ ಮಾಡುವ ಸನ್ನಿವೇಶವಿದ್ದಾಗ ಗೌರವ ಧನ ಅಥವಾ ವಿಶೇಷ ವೇತನ  ಕೇಳುವುದು ನ್ಯಾಯಸಮ್ಮತ. ಈ ನಿಯಮದಂತೆ ಆರ್ಥಿಕ ಇಲಾಖೆಯ ಸಹಮತಿ ಇಲ್ಲದೆಯೇ ಗೌರವ ಧನ ಪಾವತಿಸಲು ಅವಕಾಶವಿಲ್ಲ. ಆದರೆ ಆರ್ಥಿಕ ಇಲಾಖೆ ಸಹಮತಿ ಪಡೆಯುವ ಬಗ್ಗೆ ಟಿಪ್ಪಣಿ ಹಾಳೆಯಲ್ಲಿ ನಮೂದಿಸಲಾಗಿದೆ. ಆದರೆ ಸಹಮತಿ ನೀಡಿರುವ ಬಗ್ಗೆ ಯಾವ ದಾಖಲೆಯನ್ನೂ ಸಚಿವಾಲಯ ಆರ್.ಟಿ.ಐ. ವ್ಯಾಪ್ತಿಯಲ್ಲಿ 'ಡೆಕ್ಕನ್'ನ್ಯೂಸ್‌ಗೆ ಒದಗಿಸಿಲ್ಲ.

ಊಟೋಪಚಾರ ಖರ್ಚಿನ 4 ಲಕ್ಷ ರು ಯಾರ ಜೇಬಿಗೆ?

ನೇರ ನೇಮಕಾತಿ ಕಾರ್ಯಗಳ  ಅವಧಿಯಲ್ಲಿ ಅಧಿಕಾರಿ, ನೌಕರರಿಗೆ ಒದಗಿಸಿದ್ದ ಲಘು  ಉಪಾಹಾರ, ಊಟ, ಕಾಫಿ ವ್ಯವಸ್ಥೆ ಸೇವೆಗಳಿಗೆ ಖರ್ಚಾಗಿರುವ ಹಣದಲ್ಲೂ ಅಕ್ರಮದ ವಾಸನೆ ಬಡಿದಿದೆ. "ನೇಮಕಾತಿ ಕಾರ್ಯ ನಿರ್ವಹಣೆ ಮಾಡಲು ಅಧಿಕಾರಿ, ನೌಕರರು ಕಚೇರಿಗೆ ಬೇಗ ಆಗಮಿಸಲು ಮತ್ತು ರಾತ್ರಿ ವೇಳೆ  ತೆರಳಲು ಸಾರಿಗೆ  ವ್ಯವಸ್ಥೆ ಹಾಗೂ ಬೆಳಗ್ಗೆ ಮತ್ತು ರಾತ್ರಿ ಊಟೋಪಚಾರದ  ವ್ಯವಸ್ಥೆಗಳನ್ನು  ಅಧಿಕಾರಿಗಳು,  ಸಿಬ್ಬಂದಿಗಳು ತಮ್ಮ ವೈಯಕ್ತಿಕ ವೆಚ್ಚದಲ್ಲಿ  ಮಾಢಿಕೊಂಡಿರುತ್ತಾರೆ," ಎಂದು ಟಿಪ್ಪಣಿ ಹಾಳೆಯಲ್ಲಿ ನಮೂದಾಗಿದೆ. ವಿಶೇಷವೆಂದರೆ ಈ  ಟಿಪ್ಪಣಿಗೆ ಖುದ್ದು ಹಿಂದಿನ ಪ್ರಭಾರ ಕಾರ್ಯದರ್ಶಿ ಎಸ್‌ ಮೂರ್ತಿ ಅವರೇ ಸಹಿ ಮಾಡಿದ್ದಾರೆ. 

ಆದರೆ 'ಡೆಕ್ಕನ್‌' ನ್ಯೂಸ್‌ ಗೆ ಆರ್‌ ಟಿ ಐ ಅಡಿಯಲ್ಲಿ ಸಚಿವಾಲಯದ ಅಧೀನ ಕಾರ್ಯದರ್ಶಿ ಸರಸ್ವತಿ  ಬಾಯಿ ಅವರು ನೀಡಿರುವ ಮಾಹಿತಿಯೇ ಬೇರೆ ಇದೆ. 'ಕರ್ನಾಟಕ ವಿಧಾನಸಭೆ ಸಚಿವಾಲಯದ ವಿವಿಧ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಧಿಕಾರಿ, ನೌಕರರಿಗೆ ಲಘು ಉಪಹಾರ, ಊಟ, ಕಾಫಿ, ಟೀ, ನೀರು ಸರಬರಾಜು ಮಾಡಿರುವ ಸಂಬಂಧ ಒಟ್ಟು 4,51,110 ರು.ಖರ್ಚಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

ಈ ಮಾಹಿತಿಯ ಅಂಶಗಳನ್ನು ಗಮನಿಸಿದರೆ ಸಾಕು, ಗೌರವ ಧನ ಮತ್ತು ಊಟೋಪಚಾರದ ಖರ್ಚಿನಲ್ಲಿ  ಅಕ್ರಮಗಳಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು  ಬರುತ್ತದೆ.  

ಊಟೋಪಚಾರದ ವ್ಯವಸ್ಥೆ/ಸೌಲಭ್ಯಗಳನ್ನು ನೀಡಿದ್ದರೂ ದಿನವೊಂದಕ್ಕೆ 500 ರು.ಗಳಂತೆ ಅಧಿಕಾರಿ, ನೌಕರರು ಕಾರ್ಯನಿರ್ವಹಿಸಿರುವ ದಿನಗಳ ಲೆಕ್ಕದಲ್ಲಿ ಗೌರವ ಧನ ಪಾವತಿಸಿರುವ ಸಚಿವಾಲಯದ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ. 

ಪ್ರಭಾರ ಕಾರ್ಯದರ್ಶಿಯೂ ಸೇರಿದಂತೆ ಮೇಲಿನ ಅಧಿಕಾರಿಗಳ  ಹಂತದಲ್ಲಿಯೂ ಗೌರವ ಧನ ಪಾವತಿಯಾಗಿರುವುದು ಕಂಡು ಬಂದಿದೆ. ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳಿಗೆ ಕಚೇರಿಯಿಂದ ಅಧಿಕೃತವಾಗಿ ಸರ್ಕಾರಿ ವಾಹನ ವ್ಯವಸ್ಥೆ ಇದ್ದರೂ  ಗೌರವ ಧನ ಪಾವತಿಯಾಗಿದೆ. ಇನ್ನು,  ಕೆಳ ಹಂತದ  ಸಿಬ್ಬಂದಿಗಳು ನೇರ ನೇಮಕಾತಿ ಕಾರ್ಯಗಳನ್ನು ಸರ್ಕಾರಿ ಕೆಲಸದ ಅವಧಿಯಲ್ಲಿ ನಿರ್ವಹಿಸಿ ಮೇಲಾಧಿಕಾರಿಗಳಿಗೆ ಕಡತ ಸಲ್ಲಿಸಿದ್ದಾರೆ. ಆದರೆ ವಿಧಾನಸಭೆ  ಸಚಿವಾಲಯದ ಕಾರ್ಯದರ್ಶಿ, ಜಂಟಿ  ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳು ಅವರ ಕರ್ತವ್ಯದ ಜತೆ  ನೇಮಕಾತಿ ಕಾರ್ಯ ನಿರ್ವಹಿಸುವಂತೆ ಸೂಚಿಸಿಲ್ಲ. 

ಏಕೆಂದರೆ, 2018ರ ಜನವರಿ 3ರ ಆದೇಶದಲ್ಲಿ ಸಚಿವಾಲಯದ ಮುಖ್ಯಸ್ಥರಾದ ಕಾರ್ಯದರ್ಶಿ ಅವರನ್ನೇ ನೇರ ನೇಮಕಾತಿ ಕಾರ್ಯಗಳಿಗೆ ನಿಯೋಜಿಸಲಾಗಿತ್ತು. ಆ ಅವಧಿಯಲ್ಲಿ  ಕಾರ್ಯದರ್ಶಿಯೂ ಇಲಾಖೆಯ ಇತರೆ ಕಾರ್ಯಗಳನ್ನು ನಿರ್ವಹಿಸಿದ್ದರೇ ಅಥವಾ ಇಲ್ಲವೇ ಎಂಬುದು ಪ್ರಶ್ನಾರ್ಹವಾಗಿದೆ. 

ಅದೇ ಆದೇಶದಲ್ಲಿ ಮೇಲಾಧಿಕಾರಿಗಳು  ಕೂಡಲೇ  ಹಂಚಿಕೆಯಾದ ಕರ್ತವ್ಯವನ್ನು  ವಹಿಸಿಕೊಳ್ಳಲು ಸೂಚಿಸಿತ್ತು. ಸಾಮಾನ್ಯವಾಗಿ ಇಲಾಖೆಯ ಮೇಲಾಧಿಕಾರಿಗಳು ಅವರ ಕಾರ್ಯಗಳೊಂದಿಗೆ ಇತರೆ ಕೆಲಸದ ಉಸ್ತುವಾರಿ ವಹಿಸಬೇಕಾಗಿರುತ್ತದೆ.

ಗೌರವ ಧನ  ಪಾವತಿಸಲು ಅವಕಾಶಗಳಿಲ್ಲ

ಈ ವಿವರಣೆಯ ಅಂಶಗಳನ್ನು ಗಮನಿಸಿದರೆ ಕೆಸಿಎಸ್‌ಆರ್‌ ನಿಯಮ 28(b) 1(b)ರಂತೆ ವಿಧಾನಸಭೆ  ಸಚಿವಾಲಯದ ನೇರ ನೇಮಕಾತಿ ಸಂದರ್ಭದಲ್ಲಿ ಅಧಿಕಾರಿ,  ನೌಕರರಿಗೆ  ಗೌರವ ಧನ  ಪಾವತಿಸಲು ಅವಕಾಶವಿಲ್ಲ. ಆದರೂ ಗೌರವ ಧನದ ಹೆಸರಿನಲ್ಲಿ ಹೆಚ್ಚುವರಿಯಾಗಿ ವೇತನ ಪಾವತಿಸಿದಂತಾಗಿದೆ. ಸರ್ಕಾರಕ್ಕೆ  ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರದ ಹಣ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಿಸಿಎ ನಿಯಮಾವಳಿಗಳ 1957ರ ನಿಯಮ 8ರ ಪ್ರಕಾರ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. 

ಜಮೇದಾರ್‌, ಸ್ವಾಗತಕಾರ, ಚಾಲಕ ಸೇರಿದಂತೆ ಒಟ್ಟು 12 ಮಂದಿ ಸಿಬ್ಬಂದಿಗೆ  3,72,000 ರು., ಅಧೀನ ಕಾರ್ಯದರ್ಶಿ, ಡಾಟಾ ಎಂಟ್ರಿ  ಆಪರೇಟರ್‌, ಶಾಖಾಧಿಕಾರಿ, ಟೈಪಿಸ್ಟ್,  ಉಪ ಕಾರ್ಯದರ್ಶಿ, ದಲಾಯತ್, ಕಂಪ್ಯೂಟರ್‌ ಆಪರೇಟರ್ ಸೇರಿದಂತೆ ಒಟ್ಟು 82 ಸಿಬ್ಬಂದಿಗೆ ಗೌರವ ಧನ ಹೆಸರಿನಲ್ಲಿ ಮೇ 2018 ರಂದು 16,57,000 ರು ಪಾವತಿಯಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

ವಿಶೇಷವೆಂದರೆ ಜಮೆದಾರರೊಬ್ಬರಿಗೆ 38,000 ರು, ಚಾಲಕರಿಗೆ 44,000 ಸ್ವಾಗತಕಾರರಿಗೆ 30,500 ರು.ಗಳಂತೆ ಗೌರವ ಧನ ಪಾವತಿಯಾಗಿದೆ. ಇನ್ನು ಡಾಟಾ ಎಂಟ್ರಿ ಸೂಪರ್‌ವೈಸರ್‌ ಒಬ್ಬರಿಗೆ 43,000, ಟೈಪಿಸ್ಟ್‌ಗೆ  44,000, ಕಿರಿಯ ಸಹಾಯಕರಿಗೆ  44,000, ದಲಾಯತ್ ಗಳಿಗೆ 44,000 ರು.ಗಳಂತೆ ಪಾವತಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಎಸ್‌ ಮೂರ್ತಿ ಅವರಿಗೂ 44,000  ಪಾವತಿ

ಇನ್ನು, ವಿಧಾನಸಭೆ  ಸಚಿವಾಲಯದ ಪ್ರಭಾರ ಕಾರ್ಯದರ್ಶಿಯಾಗಿದ್ದ(ಸದ್ಯ ಅಮಾನತುಗೊಂಡಿದ್ದಾರೆ) ಎಸ್‌ ಮೂರ್ತಿ ಅವರಿಗೂ ಗೌರವ ಧನ ಹೆಸರಿನಲ್ಲಿ 44,000( 88 ದಿನಗಳು) ರು.ಪಾವತಿಯಾಗಿದೆ. ಮೂರ್ತಿ ಅವರೂ ಸೇರಿದಂತೆ 94 ಮಂದಿ ಅಧಿಕಾರಿ, ನೌಕರರಿಗೆ ದಿನವೊಂದಕ್ಕೆ 500 ರು.ನಂತೆ ಒಟ್ಟು 20,31,000 ಗೌರವ ಧನ ಪಾವತಿಯಾಗಿದೆ. ಈ ಸಂಬಂಧ 2018ರ ಏಪ್ರಿಲ್ 28ರಂದು ಆದೇಶ ಹೊರಡಿಸಲಾಗಿತ್ತು.

ಈ ಪೈಕಿ ಸೀನಿಯರ್‌ ಪ್ರೋಗ್ರಾಮರ್‌ ನವೀನಾ ಷರೀಫ್‌ ಅವರಿಗೆ 44,000,ಕಾರ್ಯದರ್ಶಿ ಎಸ್‌ ಮೂರ್ತಿ ಅವರ  ಅಪ್ತ ಕಾರ್ಯದರ್ಶಿ ಎಂ ಶಶಿಕಾಂತ್ ಅವರಿಗೆ 44,000 , ಶೀಘ್ರಲಿಪಿಗಾರ ಶಿವರಾಮು ಎಂಬುವರಿಗೆ 43,000, ಟೈಪಿಸ್ಟ್ ರೂಪರಾಣಿ ಎಂಬುವರಿಗೆ 44,000,ವಾಹನ ಚಾಲಕ ವಾಸದೇವಸಿಂಗ್‌  ಎಂಬುವರಿಗೆ 44,000,ದಲಾಯತ್‌ ಆಕಾಶ್‌ಗೌಡ ಎಂಬುವರಿಗೆ 44,000 ರು.ಗೌರವ ಧನ ಪಾವತಿಯಾಗಿದೆ. 

ಅಲ್ಲದೆ, ಸಚಿವಾಲಯದ ದಲಾಯತ್‌ ಹುದ್ದೆಗಾಗಿ ಸಲ್ಲಿಸಿದ್ದ ಅಭ್ಯರ್ಥಿಗಳ ಅರ್ಜಿಗಳನ್ನು  ಪರಿಶೀಲಿಸುವುದು ಮತ್ತು ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಯಾರಿಸುವ ಕಾರ್ಯಕ್ಕಾಗಿ 32  ಸಿಬ್ಬಂದಿಯನ್ನು ಕಾರ್ಯದರ್ಶಿ ಅವರ ಮೌಖಿಕ ಆದೇಶದ ಮೇರೆಗೆ ನಿಯೋಜಿಸಲಾಗಿತ್ತು ಎಂಬುದು ದಾಖಲೆಗಳಿಂದ ಗೊತ್ತಾಗಿದೆ.

ಹಣಕಾಸು ನಷ್ಟ ಭರಿಸುವವರಾರು?

ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಗೌರವ ಧನ ಪಾವತಿಸಿರುವುದರ ಕುರಿತು ಸ್ಪೀಕರ್‌ ಈವರೆವಿಗೂ ತನಿಖೆಗೆ ಆದೇಶಿಸಿಲ್ಲ. ಸಿಸಿಎ ನಿಯಮಾವಳಿಗಳು 1957 ರ ನಿಯಮ  8ರ ಅನ್ವಯ ಗೌರವ ಧನ ಪಡೆದವರ ವಿರುದ್ಧ ದಂಡನೆ ವಿಧಿಸಬಹುದಲ್ಲದೆ, ಇದೇ ನಿಯಮ 8ರ  ಪ್ರಕಾರ ಸರ್ಕಾರಕ್ಕೆ ಆಗಿರುವ ಹಣಕಾಸಿನ ನಷ್ಟವನ್ನು ವೇತನದಿಂದ  ವಸೂಲು ಮಾಡುವ ಅವಕಾಶವಿದೆ.

90 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ 151 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹೈದರಾಬಾದ್‌ ಕರ್ನಾಟಕ ಭಾಗದ ಜನರಿಗೆ ಮೀಸಲಾತಿ ಕಲ್ಪಿಸಿಲ್ಲ. ಅಂದಿನ ಸ್ಪೀಕರ್‌, ಮುಖ್ಯಮಂತ್ರಿ, ಕಾನೂನು ಸಚಿವರು, ಮುಖ್ಯ ಸಚೇತಕರೂ ಈ ಅಕ್ರಮದಲ್ಲಿ ಭಾಗಿಯಾಗಿ ತಮ್ಮ ವಿಧಾನಸಭಾ ಕ್ಷೇತ್ರದ ಜನರಿಗೆ ಉದ್ಯೋಗ ಕೊಡಿಸಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌  ಆರ್‌ ಹಿರೇಮಠ್‌ ಅವರು ಸ್ಪೀಕರ್‌ಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.