ಶೀಲಾ ಸಾವು: ದೆಹಲಿ ಕಾಂಗ್ರೆಸ್‍ ಚೇತರಿಕೆ ಪ್ರಶ್ನೆ

ಶೀಲಾ ಸಾವು: ದೆಹಲಿ ಕಾಂಗ್ರೆಸ್‍ ಚೇತರಿಕೆ ಪ್ರಶ್ನೆ

ಬೆಂಗಳೂರು: 15 ವರ್ಷಗಳಷ್ಟು ಸುದೀರ್ಘ ಕಾಲ ದೆಹಲಿಯನ್ನು ಕಾಂಗ್ರೆಸ್‍  ಚುಕ್ಕಾಣಿ ಹಿಡಿದು ಮುನ್ನಡೆಸಿದ್ದ ಶೀಲಾ ದೀಕ್ಷಿತ್‍ ಇನ್ನಿಲ್ಲವಾದ ಸಂದರ್ಭದಲ್ಲಿ, ದೆಹಲಿ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್‍ ಚೇತರಿಸಿಕೊಳ್ಳುವ ಬಗ್ಗೆ ಹತ್ತು ಹಲವು ಪ್ರಶ್ನೆಗಳು ಆ ಪಕ್ಷದ ವಲಯವನ್ನು ಕಾಡುತ್ತಿವೆ.

ಆಮ್ ಆದ್ಮಿ ಪಕ್ಷ ದೆಹಲಿಯ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿದಾಗಲೇ ಕಾಂಗ್ರೆಸ್ ಗೆ ಇಂತಹ ಪ್ರಶ್ನೆಗಳು ಕಾಡಿದ್ದರೂ ಅವು ಸಾಂದರ್ಭಿಕವಾಗಿದ್ದವೇ ಹೊರತು ಆ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುವ ಭೀತಿ ಇರಲಿಲ್ಲ.

 ಏಕೆಂದರೆ, ದೆಹಲಿಗೆ ಏಕೈಕ ನಾಯಕಿ ಎಂಬಂತೆ ಜನಮಾನಸದಲ್ಲಿ ಛಾಪು ಮೂಡಿಸಿದ್ದ  ಶೀಲಾ ದೀಕ್ಷಿತ್‍ ಇದ್ದರು. ಆಮ್ ಆದ್ಮಿ ಪಕ್ಷವು ದೆಹಲಿ ಅತಿಕ್ರಮಿಸಿದ್ದು ಕೇವಲ ತಾತ್ಕಾಲಿಕ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿಸಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಶೀಲಾ ದೀಕ್ಷಿತ್‍ ಇಹಲೋಕ ತ್ಯಜಿಸಿದ್ದಾರೆ. 6 ತಿಂಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಗಳು ಬರಲಿವೆ. ಹೀಗಾಗಿ,  ದೆಹಲಿ ಕಾಂಗ್ರೆಸ್ ಅಸ್ತಿತ್ವದ ಪ್ರಶ್ನೆ ಎಂದಿಗಿಂತಲೂ ಇಂದು ಹೆಚ್ಚಾಗಿ ಕಾರ್ಯಕರ್ತರನ್ನು ಕಾಡುತ್ತಿದೆ.

ಪಕ್ಷದಲ್ಲಿ ಎರಡನೇ ಸಾಲಿನ ನಾಯಕರಿದ್ದಾರೆ. ಆದರೆ, ಅವರಿಗೆ ಸೂಕ್ತ ಮಾರ್ಗದರ್ಶಕರಿಲ್ಲದ ಅನಾಥ ಪ್ರಜ್ಞೆ ಇದೆ. ಪಿ.ಸಿ.ಚಾಕೊ ಮಾತ್ರವಲ್ಲ ಸಾಕಷ್ಟು ನಾಯಕರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೂ ಶೀಲಾ ದೀಕ್ಷಿತ್‍ ಕಾಂಗ್ರೆಸ್‍ ಪಕ್ಷವನ್ನು ಮುನ್ನಡೆಸಿದ್ದರು.

ಇತ್ತೀಚಿನ ದಿನಗಳಲ್ಲಿ ಶೀಲಾ ದೀಕ್ಷಿತ್ ಅವರ ಸ್ಥಾನವನ್ನು ತುಂಬುವ ನಾಯಕರು ದೆಹಲಿ ರಾಜ್ಯ ರಾಜಕೀಯದಲ್ಲಿ ಸಿಗುವುದು ಸ್ವಲ್ಪ ಕಷ್ಟವೆ. ಹರುಣ್ ಯುಸೂಫ್, ದೇವೇಂದ್ರ ಯಾದವ್ ಹಾಗೂ ರಾಕೇಶ್ ಲಿಲೋಥಿಯದಂತಹ ನಾಯಕರು ಪಕ್ಷದ ಜವಾಬ್ದಾರಿ ಹೊರುವಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ, ಅವರಿಗಿಂತಲೂ ಹಿರಿಯರಾದ ಜೆ.ಪಿ.ಅಗರವಾಲ್, ಎ.ಕೆ.ವಾಲಿಯಾ ಹಾಗೂ ಸುಭಾಶ್ ಛೋಪ್ರಾ ನಂತವರೂ ಇದ್ದಾರೆ. ಆದರೆ, ಶೀಲಾ ದೀಕ್ಷಿತ್ ಅವರ ಅನಿರೀಕ್ಷಿತ ಸಾವು, ಶೀಲಾ ಸ್ಥಾನವನ್ನು ತುಂಬುವ ಸಮರ್ಥರು ಯಾರು? ಎಂದೇ ಪ್ರಶ್ನಿಸುವಂತಿದೆ.

ದೇಶದ ಬಹುತೇಕ ಕಡೆ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. 2013ರಲ್ಲಂತೂ ದೆಹಲಿಯಲ್ಲಿ ಕಾಂಗ್ರೆಸ್‍ ಅಕ್ಷರಶಃ ನೆಲಕಚ್ಚಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ 5 ಸ್ಥಾನಗಳ ಪೈಕಿ,, 2ನೇ ಸ್ಥಾನ ಪಡೆದು ಗೌರವ ಉಳಿಸಿಕೊಂಡಿತ್ತು.

ಈ ಬಾರಿಯಾದರೂ ದೆಹಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿ ಹೊರಹೊಮ್ಮಿಸಬೇಕು. 6 ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಬರಲಿವೆ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು  ಎಂಬ ಚಿಂತನೆ ದೆಹಲಿ ಕಾಂಗ್ರೆಸ್  ಕಾರ್ಯಕರ್ತರಲ್ಲಿ ಇರಲಿಲ್ಲಎಂತಲ್ಲ. ಆದರೆ,  ಶೀಲಾ ದೀಕ್ಷಿತ್ ಇರುವವರೆಗೆ ತಾವು ಅಷ್ಟೆನೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂಬ ಭಾವನೆ ಇತ್ತು. ಇಂತಹ ಸಂದರ್ಭದಲ್ಲಿ ಶೀಲಾ ಅವರ ಸಾವು ಸಹಜವಾಗಿ ಕಾಂಗ್ರೆಸ್‍ ಮುಖಂಡರು ಹಾಗೂ ಕಾರ್ಯಕರ್ತರನ್ನು ದಿಕ್ಕು ಕಾಣದಂತೆ ಮಾಡಿದೆ.

ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ (ಡಿಪಿಸಿಸಿ) ಅಜಯ್ ಮಕೆನ್ ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಡಿಸಿಸಿಪಿ ಅಧ್ಯಕ್ಷರಾಗಿದ್ದ ಹಾಗೂ ಸ್ವಲ್ಪ ದಿನಗಳ ಕಾಲ ಬಿಜೆಪಿ ಸೇರ್ಪಡೆಗೊಂಡು ಮತ್ತೆ ಕಾಂಗ್ರೆಸ್ ಗೆ ಮರಳಿದ್ದ ಅರವಿಂದರ್ ಲೌಲಿ ದಂತಹ ನಾಯಕರಿದ್ದಾರೆ.

ವಾಸ್ತವ ಹೀಗಿದ್ದೂ, ಶೀಲಾ ದೀಕ್ಷಿತ್ ಅವರ ಏಕಾಎಕಿ ಸಾವು ದೆಹಲಿ ಕಾಂಗ್ರೆಸ್ ಮಟ್ಟಿಗೆ ಬಹು ದೊಡ್ಡ ಆಘಾತ ತಂದಿದ್ದು ಸುಳ್ಳಲ್ಲ.