ಬಿಜೆಪಿಯಿಂದ ಸಂವಿಧಾನ ರಕ್ಷಣೆಯ ಅಣಕ

ಬಿಜೆಪಿಯಿಂದ ಸಂವಿಧಾನ ರಕ್ಷಣೆಯ ಅಣಕ

ಕಳೆದ ಬಾರಿಯ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕೆಲವು ಸಚಿವರು, ಸಂಸದರು ಮತ್ತು ಪಕ್ಷದ ಇತರೆ ನಾಯಕರಿಂದ ಅವಹೇಳನಕ್ಕೆ ಮತ್ತು ಹಾದಿಬೀದಿಯಲ್ಲಿ ಟೀಕೆಗೆ ಗುರಿಯಾದದ್ದು ನಮ್ಮ ಆಡಳಿತ ವ್ಯವಸ್ಥೆಗೆ ಆಧಾರವಾದ ಸಂವಿಧಾನ. ಇದರ ಜೊತೆಗೆ ಗೋರಕ್ಷಣೆ ಹೆಸರಿನಲ್ಲಿ ದೇಶದಾದ್ಯಂತ ವಿಶೇಷವಾಗಿ ಉತ್ತರ ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ನಡೆದ ನಿರಂತರ ಹಲ್ಲೆ, ದೌರ್ಜನ್ಯಗಳು ಸರ್ಕಾರಕ್ಕೆ ಕಳಂಕ ತಂದಿತು. ಸರ್ಕಾರ ಈ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡದ್ದಾಗಲಿ ಅಥವಾ ಇಂತಹ ದೌರ್ಜನ್ಯಗಳಿಗೆ ಅಂತ್ಯ ಆಗಲೇ ಇಲ್ಲ ಎನ್ನುವುದು ದುರದೃಷ್ಟಕರ.

ಇದನ್ನು ಗಮನಿಸಿದರೆ ಪ್ರಧಾನಿ ಮೋದಿ ಅವರು ಈ ಬಗೆಗೆ ಅಷ್ಟಾಗಿ ತಲೆಕೆಡಿಸಿಕೊಂಡಂತೆಯೂ ಕಾಣಲಿಲ್ಲ. 2014ರಲ್ಲಿ ತಮ್ಮ ನೇತೃತ್ವದಲ್ಲಿ ಬಿಜೆಪಿ ಬಹುಮತ ಪಡೆದು ತಮ್ಮನ್ನು ಸಂಸದೀಯ ನಾಯಕನ ಆಯ್ಕೆಯ ಸಭೆಗೆ ಆಗಮಿಸುವಾಗ ಸಂಸತ್ ಭವನದ ಮುಖ್ಯದ್ವಾರಕ್ಕೆ ಅಡ್ಡ ಬಿದ್ದು ಸಂಸತ್ತನ್ನು ಗೌರವಿಸುವ ನಡವಳಿಕೆಯನ್ನು ಪ್ರದರ್ಶಿಸಿದ್ದರು.

ಆದರೆ 2019ರ ಚುನಾವಣೆಯಲ್ಲಿ ಮತ್ತೆ ಬಹುಮತಗಳಿಸಿ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡುವ ಎನ್ ಡಿ ಎ ಸಭೆಗೆ ಆಗಮಿಸಿದ ನರೇಂದ್ರ ಮೋದಿ ಅವರು ಸೆಂಟ್ರಲ್ ಹಾಲ್ ಗೆ ಬಂದವರೇ ಮೊದಲೇ ವೇದಿಕೆಯಲ್ಲಿ ಇಡಲಾಗಿದ್ದ ಸಂವಿಧಾನ ಕೃತಿಗೆ ಶಿರಬಾಗಿ ನಮಸ್ಕರಿಸಿ ಅಚ್ಚರಿ ಉಂಟು ಮಾಡಿದರು. “ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು” ಎಂದು ಹೇಳುತ್ತಿದ್ದ ಸಂಸದರಿಗೆ, ಸಚಿವರಿಗೆ ಮತ್ತು ಪಕ್ಷದ ಇತರೆ ನಾಯಕರು ಹಾಗು ಕಾರ್ಯಕರ್ತರಿಗೆ  ಪ್ರಧಾನಿ ಅವರ ಈ ಅಚ್ಚರಿಯ ನಡೆ “ಶಾಕ್” ನೀಡಿದ್ದು ವಿಶೇಷ. 

ವಿಪರ್ಯಾಸ ಎಂದರೆ ಮೋದಿ ಅವರು ಸಂವಿಧಾನದ ಅವಹೇಳನ ತಮ್ಮವರಿಂದಲೇ ನಡೆದರೂ ಅವರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ ಎನ್ನುವುದು ನಿಜವಿದ್ದರೂ, ಈ ಬಾರಿ ಸಂವಿಧಾನಕ್ಕೆ ಗೌರವಿಸುವ ಮೂಲಕ ತಮ್ಮ ಪಕ್ಷದಲ್ಲಿನ ಸಂವಿಧಾನ ವಿರೋಧಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಇತಿಹಾಸದತ್ತ ಕಣ್ಣಾಡಿಸಿದಾಗ ವಾಸ್ತವವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಆ ಪಕ್ಷದ ಕೆಂಗಣ್ಣಿಗೆ ಗುರಿಯಾಗುವುದು ಸಂವಿಧಾನ, ಮೀಸಲಾತಿ ಪದ್ಧತಿ ಮತ್ತು ಮುಸ್ಲಿಮರು. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಈ ಐವತ್ತು ವರ್ಷಗಳಲ್ಲಿ ಸಂವಿಧಾನದ ಕಾರ್ಯವೈಖರಿ ಹೇಗಾಗಿದೆ. ಮುಂದೇನಾಗಬೇಕು. ಸಂಸದೀಯ ವ್ಯವಸ್ಥೆ, ಕಾರ್ಯಾಂಗ ಮತ್ತು ನ್ಯಾಯಾಂಗದ ಪುನರ್ ವಿಮರ್ಶೆ ಆಗಬೇಕೆಂದು ನಿರ್ಧರಿಸಲಾಯಿತು. ಮೀಸಲಾತಿ ಪದ್ಧತಿಯನ್ನೂ ಪರಾಮರ್ಶೆ ಮಾಡುವ ವಿಚಾರ ಚಾಲ್ತಿಗೆ ಬಂದರೂ ದೇಶದಾದ್ಯಂತ ದಲಿತ ವರ್ಗದ ಜನರ ಪ್ರತಿಭಟನೆಯಿಂದ ಆ ವಿಷಯವನ್ನು ಕೈ ಬಿಡಲಾಯಿತು.

ಉಳಿದಂತೆ ಸಂವಿಧಾನ ಪರಾಮರ್ಶೆಯ ವಿಷಯ ಪಟ್ಟಿಯಲ್ಲಿ ಹಲವು ಸಂಗತಿಗಳು ಸೇರಿದ್ದವು. ಅದರಲ್ಲಿ ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ನಡೆಯಬಹುದಾದ ಪಕ್ಷಾಂತರ ವಿಷಯವೂ ಸೇರಿತ್ತು. ನ್ಯಾಯಮೂರ್ತಿ ವೆಂಕಟಾಚಲಯ್ಯ ನೇತೃತ್ವದ ಆಯೋಗವೇನೋ ಎರಡು ವರ್ಷದಲ್ಲಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು. ವರದಿ ಸರ್ಕಾರದ ಕೈ ಸೇರಿತು. ಅಷ್ಟೊತ್ತಿಗಾಗಲೆ 2004ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ವರದಿಯನ್ನು ಮೂಲೆಗುಂಪು ಮಾಡಿತು. ಈ ವರದಿ ಈಗಲೂ ಪ್ರಧಾನಿ ಮತ್ತು ಸಂಸದೀಯ ಹಾಗು ಕಾನೂನು ಸಚಿವಾಲಯದಲ್ಲಿ ಧೂಳು ತಿನ್ನುತ್ತಿದೆ. ಆ ವರದಿಯಲ್ಲಿ ಏನಿದೆ ಎಂದು ನೋಡುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ.

ಅಂತು ನ್ಯಾ. ವೆಂಕಟಾಚಲಯ್ಯ ಅವರ ವರದಿ ಇದೀಗ ಇತಿಹಾಸದ ಪುಟ ಸೇರಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಹಾಗು ಈಗಿನ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ವಿವಿಧ ರಾಜ್ಯಗಳಲ್ಲಿ ಪಕ್ಷಾಂತರ ಅರ್ಥಾತ್ ‘ಆಪರೇಷನ್ ಕಮಲ’ದ ಹೆಸರಿನಲ್ಲಿ ಬಿಜೆಪಿಯೇತರ ಸರ್ಕಾರ ಉರುಳಿಸುವ ಜನತಂತ್ರ ವಿರೋಧಿ ನೀತಿ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. 

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಗೋವಾ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಪಕ್ಷಾಂತರದ ಜನತಂತ್ರ ವಿರೋಧಿ ನೀತಿಗೆ ಕೈಹಾಕಲಾಗಿದೆ. ಗೋವಾದಲ್ಲಿ ಬಿಜೆಪಿಯು ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಳ್ಳುವ ಮೂಲಕ ತನಗಿದ್ದ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕದಲ್ಲಿ 16 ಮಂದಿ ಕಾಂಗ್ರೆಸ್-ಜೆಡಿ ಎಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ಸದನದ ಕಲಾಪಕ್ಕೆ ಬರದಂತೆ ಮುಂಬೈಯಲ್ಲಿ ವಾಸ್ತವ್ಯ ಮಾಡಿಸುವ ಮೂಲಕ ಸರ್ಕಾರವನ್ನೇ ಉರುಳಿಸಲಾಗಿದೆ. ಈ ಬೆಳವಣಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನಕ್ಕೆ ನೀಡುವ ಗೌರವ ಇದೇನಾ ಎಂದು ಪ್ರಶ್ನಿಸುವಂತಾಗಿದೆ. ಪ್ರಧಾನಿ ಮೋದಿ ಅವರಿಗೆ ಜನತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆನ್ನುವ ಆಸಕ್ತಿ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಅವಲೋಕಿಸಿದರೆ ಇಂತಹ ಪ್ರಯತ್ನ ಬಿಜೆಪಿ ಸರ್ಕಾರದಿಂದ ಹಗಲುಗನಸು ಎನ್ನುವಂತಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸದನದಲ್ಲಿ ಮಂಡಿಸಲಾಗಿದ್ದ “ವಿಶ್ವಾಸ ಮತ”ದ ಮೇಲಿನ ನಿರ್ಣಯದ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯರು ಸಂವಿಧಾನದ ಹತ್ತನೇ ಶೆಡ್ಯೂಲ್ ನ ಹಲವು ಕಲಂಗಳನ್ನು ಪ್ರಸ್ತಾಪಿಸಿ ಪಕ್ಷಾಂತರದ ವಿರುದ್ಧ ಸ್ಪೀಕರ್ ಅವರು ಕೈಗೊಳ್ಳಬಹುದಾದ ಕ್ರಮಗಳನ್ನು ವಿವರಿಸಿದ್ದಾರೆ. ಮುಂಬೈಗೆ ಹಾರಿರುವ ಶಾಸಕರ ನಿಲುವಿನ ಹಿಂದೆ ಇರಬಹುದಾದ ಕೈವಾಡ ಬಿಜೆಪಿಯದು ಎಂದು ಕಟುವಾಗಿ ಟೀಕಿಸಿದಾಗ ಬಿಜೆಪಿಯ ಪರವಾಗಿ ಮಾತನಾಡಿದ ಶಾಸಕ ಜೆ.ಸಿ. ಮಾಧುಸ್ವಾಮಿ “ ಇಂತಹ ಅಡೆತಡೆಗಳ ಕಾರಣಕ್ಕಾಗಿಯೇ ಸಂವಿಧಾನ ಬದಲಾಗಬೇಕು” ಎಂದರು. ಹಾಗಿದ್ದರೆ ಪ್ರಧಾನಿ ಮೋದಿ ಅವರು ಸಂವಿಧಾನಕ್ಕೆ ತಲೆಬಾಗಿ ನಮಸ್ಕರಿಸಿದ ಸಂವಿಧಾನಕ್ಕೆ ಅವರ ಪಕ್ಷದಲ್ಲಿಯೇ ಮತ್ತೆ ಕಿಮ್ಮತ್ತು ಇಲ್ಲ ಎನ್ನುವುದು ಪುನರಾವರ್ತನೆಗೊಂಡಿದೆ. ಹಾಗಿದ್ದರೆ ಪ್ರಧಾನಿ ಮೋದಿ ಅವರು ಸಂವಿಧಾನಕ್ಕೆ ಸಲ್ಲಿಸಿದ ಗೌರವ ಕೇವಲ ಬೂಟಾಟಿಕೆಯೇ? ಅಥವಾ ಪ್ರಧಾನಿ ಅವರ ಅಸಹಾಯಕತೆಯೇ ಎಂದು ಕೇಳುವಂತಾಗಿದೆ.

ಸಂವಿಧಾನ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ  ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರಿಗೆ ಇದೆ ಎನ್ನಲಾದ ಗೌರವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಡಾ. ಅಂಬೇಡ್ಕರ್ ಅವರ ನೆನಪನ್ನು ಮತ್ತಷ್ಟು ಅಚ್ಚ ಹಸಿರುಗೊಳಿಸುವ ಸ್ಮಾರಕ ಭವನಗಳ ಪುನಶ್ಚೇತನ ಕಾರ್ಯ ಒಂದು ಕಡೆ ಆದರೆ ದೇಶದ ಆಡಳಿತ ವ್ಯವಸ್ಥೆಗೆ ನೀಡಿದ ಸಂವಿಧಾನದ ಬಗೆಗೆ ಅವರ ಪಕ್ಷದಲ್ಲಿ ಆಗಿಂದಾಗ್ಗೆ ವ್ಯಕ್ತವಾಗುವ ನಿರ್ಲಕ್ಷ್ಯ ಮತ್ತು ಅಗೌರವ ವಿಚಿತ್ರ ಬೆಳವಣಿಗೆ.

ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ 2003ರಲ್ಲಿ ದೆಹಲಿಯ ಅಲಿಘರ್ ರಸ್ತೆಯಲ್ಲಿನ ಅಂಬೇಡ್ಕರ್ ನಿವಾಸವನ್ನು ಮತ್ತು ಅದರ ಆಸುಪಾಸಿನ ನಿವೇಶನವನ್ನು ಜಿಂದಾಲ್ ಸಂಸ್ಥೆಯಿಂದ ಖರೀದಿಸಿ ಸಂವಿಧಾನ ಪುಸ್ತಕದ ಆಕೃತಿಯಲ್ಲಿ ಅತ್ಯಾಧುನಿಕ ಬೃಹತ್ತಾದ ಸ್ಮಾರಕ ಭವನ ನಿರ್ಮಾಣಕ್ಕೆ ಕಳೆದ ವರ್ಷವಷ್ಟೇ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇನ್ನೆರಡು ವರ್ಷದಲ್ಲಿ ಈ ಭವನ ಉದ್ಘಾಟನೆಗೆ ಸಿದ್ಧವಾಗಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ಅಂತೆಯೇ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ಮುಂಬೈಯಲ್ಲಿ ಪಾಳುಬಿದ್ದಿದ್ದ 12 ಎಕರೆ ಪ್ರದೇಶದಲ್ಲಿ 766 ಕೋಟಿ ಅಂದಾಜು ವೆಚ್ಚದಲ್ಲಿ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಿಸುತ್ತಿದೆ. ಈ ಭವನ ನಿರ್ಮಾಣಕ್ಕೆ ಕಳೆದ ವರ್ಷ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ನೆರವನ್ನೂ ಘೋಷಿಸಿದ್ದಾರೆ.

ಹಾಗೆಯೇ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಲಂಡನ್ ನಲ್ಲಿ ಅಂಬೇಡ್ಕರ್ ಅವರು ವ್ಯಾಸಂಗ ಮಾಡುವಾಗ ನೆಲೆಸಿದ್ದ ಕಟ್ಟಡವನ್ನು ಖರೀದಿಸಿ ನಾಲ್ಕು ದಶಲಕ್ಷ ಪೌಂಡ್ ಅಂದಾಜು ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಬಿಜೆಪಿ ಸರ್ಕಾರದ ಈ ಕಾರ್ಯವನ್ನು ಮೆಚ್ಚಲೇಬೇಕು. ಆದರೆ ಮತ್ತೊಂದು ಕಡೆ ಬಿಜೆಪಿ ಮತ್ತು ಸಂಘಪರಿವಾರದ ದಲಿತ ವಿರೋಧಿ ನೀತಿ, ಅದು ಗೋಮಾಂಸದ ಹೆಸರಿನಲ್ಲಿ ನಡೆಸುವ ಗುಂಪು ದಾಳಿ. ಈ ಘಟನೆಗಳಿಂದ ಆಗುತ್ತಿರುವ ಅಸಹಾಯಕ ದಲಿತರ ಸಾವು -ನೋವು ಈ ಪಕ್ಷ ಮತ್ತು ಸರ್ಕಾರದ ನಡೆಯನ್ನು ಸಂಶಯದಿಂದ ನೋಡುವಂತಾಗಿರುವುದು ದುರದೃಷ್ಟಕರ. 

“ಸಬ್ ಕಾ ಸಾಥ್; ಸಬ್ ಕಾ ವಿಕಾಸ್; ಸಬ್ ಕಾ ವಿಶ್ವಾಸ್” ಇದು ಪ್ರಧಾನಿ ಮೋದಿ ಅವರ ಈ ವರ್ಷದ ಘೋಷವಾಕ್ಯ. ಆದರೆ ಈ ಘೋಷವಾಕ್ಯ ಅಕ್ಷರಶಃ ಜಾರಿಗೆ ಬಂದಿದೆಯೋ ಎಂದು ಒಮ್ಮೆ ಅವಲೋಕನ ಮಾಡಿದರೆ ನಿರಾಶೆ ಕಾದಿಟ್ಟದ್ದು. ಅವರ ಆಶಯದಂತೆ ಪಕ್ಷದ ಕಾರ್ಯಕರ್ತರು ಮತ್ತು ಇತರೆ ನಾಯಕರು ನಡೆದುಕೊಳ್ಳುತ್ತಿರುವುದು ಕಾಣುತ್ತಿಲ್ಲ. ಗೋ ಹತ್ಯೆ, ಗೋಮಾಂಸ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದಾರೆಂಬ ಕಾರಣವೊಡ್ಡಿ ದಲಿತರು ಮಾತ್ರವಲ್ಲ ಮುಸ್ಲಿಮರ ಮೇಲೂ ಅನೇಕ ಕಡೆಗಳಲ್ಲಿ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಗುಂಪುದಾಳಿ ಮಾಡಿ ಹತ್ಯೆ ಮಾಡಲಾಗುತ್ತಿದೆ. ಹೀಗೆ ಇಡೀ ದೇಶದಾದ್ಯಂತ ಬಿಜೆಪಿ ಆಡಳಿತದ ಅವಧಿಯಲ್ಲಿ 1094 ಘಟಣೆಗಳು ನಡೆದಿರುವ ವರದಿ ಇದೆ. ಇದು ಕೇವಲ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮೊಕದ್ದಮೆಗಳು. ಆದರೆ ವಾಸ್ತವವಾಗಿ ಠಾಣೆಗಳ ಮೆಟ್ಟಿಲೇರದ ಈ ಸಂಖ್ಯೆ ದುಪ್ಪಟ್ಟು ಆಗಿರಲಿಕ್ಕೆ ಸಾಧ್ಯ.

ಈಗ ಮತ್ತೊಂದು ಮಾದರಿಯ ದೌರ್ಜನ್ಯ ಅಲ್ಪ ಸಂಖ್ಯಾತರ ಮೇಲೆ ನಡೆಯಲು ಆರಂಭವಾಗಿದೆ. ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಅನೇಕ ಕಡೆಗಳಲ್ಲಿ ಮುಸ್ಲಿಮರನ್ನು ಹಿಡಿದು ಬಲವಂತವಾಗಿ “ಜೈಶ್ರೀರಾಂ” ಎಂದು ಘೋಷಣೆ ಕೂಗಲು ಒತ್ತಾಯ. ಇಲ್ಲವಾದರೆ ಅವರ ಮೇಲೆ ದಾಳಿ. ಈ ದಾಳಿ ಸಾವು ನೋವುಗಳಲ್ಲಿ ಅಂತ್ಯ ಕಂಡಿರುವ ಘಟನೆಗಳು ನಡೆದಿವೆ.

ಇಂತಹ ಘಟನೆಗಳ ಬಗೆಗೆ ಮಾಹಿತಿ ಸಂಗ್ರಹಿಸಿ ದೇಶದ ವಿವಿಧ ಭಾಗಗಳ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಖ್ಯಾತ ಬುದ್ಧಿಜೀವಿಗಳು, ಸಿನೆಮಾ ರಂಗದ ಕಲಾವಿದರು ಮತ್ತು ಬರಹಗಾರರು ಪ್ರಧಾನಿ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ಗುಂಪು ದಾಳಿ ನಿಲ್ಲಬೇಕು. ದಲಿತರು ಮತ್ತು ಮುಸ್ಲಿಮರಿಗೆ ರಕ್ಷಣೆ ಸಿಗಬೇಕೆಂದು ಆಗ್ರಹಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಈ ಗುಂಪು ದಾಳಿ ಈಗ ಪ್ರಧಾನಿ ಅವರಿಗೆ ತಲೆ ನೋವಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. 

ದಲಿತರು ಮತ್ತು ಮುಸ್ಲಿಮರ ರಕ್ಷಣೆ ಕೇವಲ ಬಾಯಿ ಮಾತಾದರೆ ಸಾಲದು. ಅದು ಅಕ್ಷರಶಃ ಜಾರಿಗೆ ಬರಬೇಕು. ಇಂತಹ ದ್ವೇಷದ ವಾತಾವರಣವನ್ನು ಕಾನೂನಿನ ಪ್ರಯೋಗದ ಜೊತೆಗೆ ದೇಶದಲ್ಲಿ ಪರಸ್ಪರ ಸೌಹಾರ್ದ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ.