ರೋರಿಚ್ ಎಸ್ಟೇಟ್ ಅರಣ್ಯ ರೋದನ 

ರೋರಿಚ್ ಎಸ್ಟೇಟ್ ನಲ್ಲೇ ಚಿತ್ರನಗರಿ ನಿರ್ಮಿಸಲು ತುದಿಗಾಲಲ್ಲಿ ನಿಂತಿರುವ ಸರ್ಕಾರ, ಇದನ್ನು ಅರಣ್ಯ ಪ್ರದೇಶವೆಂದು ಘೋಷಿಸಲು ಯಾಕೆ ಆಸಕ್ತಿ ವಹಿಸುತ್ತಿಲ್ಲ?

ರೋರಿಚ್ ಎಸ್ಟೇಟ್ ಅರಣ್ಯ ರೋದನ 

ರೋರಿಚ್ ಎಸ್ಟೇಟ್ ನ್ನು ಅರಣ್ಯ ಪ್ರದೇಶ ಅಥವಾ ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಎಂದು ಘೋಷಿಸುವ ಸಂಬಂಧ ಅರಣ್ಯ ಇಲಾಖೆ ಸಲ್ಲಿಸಿದ್ದ ವರದಿ, ಕಳೆದ 7 ವರ್ಷಗಳಿಂದಲೂ ಧೂಳು ಹಿಡಿದು ಕೂತಿದೆ. ಹೀಗಾಗಿ ಈವರೆಗೂ ಈ ಜಮೀನು ಅರಣ್ಯ ಪ್ರದೇಶವೆಂದು ಸರ್ಕಾರ ಘೋಷಿಸಿಲ್ಲ. ಅರಣ್ಯ ಇಲಾಖೆಯೂ ರೋರಿಚ್ ಎಸ್ಟೇಟ್ ಅರಣ್ಯ ಪ್ರದೇಶವಲ್ಲ ಎಂದು ಖಚಿತಪಡಿಸಿದೆ.

ರೋರಿಚ್ ಎಸ್ಟೇಟ್ನಲ್ಲಿ ಚಿತ್ರ ನಗರಿ ನಿರ್ಮಾಣ ಸಂಬಂಧ ಬಿಜೆಪಿ ಸರ್ಕಾರದ ಘೋಷಣೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ರೋರಿಚ್ ಎಸ್ಟೇಟ್ ನ್ನು ಅರಣ್ಯ ಪ್ರದೇಶ ಎಂದು ಘೋಷಿಸಲು ರಾಜ್ಯ ಸರ್ಕಾರ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ ಎಂಬ ಅಂಶವೂ ಹೊರಬಿದ್ದಿದೆ.

ರೋರಿಚ್ ಎಸ್ಟೇಟ್ ಜಮೀನಿನ ನಿರ್ವಹಣೆ ಸೇರಿದಂತೆ ಇನ್ನಿತರ ಕಾರ್ಯಾಚರಣೆಗಳನ್ನು  ಕಂದಾಯ ಇಲಾಖೆಯೇ ನಿರ್ವಹಣೆ ಮಾಡುತ್ತಿದೆ. ಅರಣ್ಯ ಪ್ರದೇಶ ಘೋಷಣೆಗೆ ಸಂಬಂಧಿಸಿದಂತೆ ಬೆಳವಣಿಗೆಗಳ ಕುರಿತು ಇಲಾಖೆಯ  ಪ್ರಧಾನ ಕಾರ್ಯದರ್ಶಿ ಸ್ಮಿತಾ ಬಿಜ್ಜೂರ್ ಅವರನ್ನು ಸಂಪರ್ಕಿಸಲು 'ಡೆಕ್ಕನ್'ನ್ಯೂಸ್ ಪ್ರಯತ್ನಿಸಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

ಖ್ಯಾತ ಕಲಾವಿದ ರೋರಿಚ್ ಮತ್ತು ಪತ್ನಿ ದೇವಿಕಾ ರಾಣಿ ಅವರು ವಾಸಿಸುತ್ತಿದ್ದ 468 ಎಕರೆ ತಾತಗುಣಿ ಎಸ್ಟೇಟ್ ನ್ನು 1927ರ ಭಾರತೀಯ ಅರಣ್ಯ ಕಾಯ್ದೆ (ಸೆಕ್ಷನ್ 4)ರ ಅನ್ವಯ ಅರಣ್ಯ ಪ್ರದೇಶವಾಗಿ ಘೋಷಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆಯ ಹಿಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ 2012ರ ಫೆ.12ರಂದು ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಹೇಳಿದ್ದರು. ವಿಪರ್ಯಾಸವೆಂದರೆ ಇದೇ ಕೌಶಿಕ್ ಮುಖರ್ಜಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದಾಗಲೂ ಇದನ್ನು ಅರಣ್ಯ ಪ್ರದೇಶ ಎಂದು ಘೋಷಿಸಿರಲಿಲ್ಲ.

ಕೌಶಿಕ್ ಮುಖರ್ಜಿ ಅವರಷ್ಟೇ ಅಲ್ಲ, ರೋರಿಚ್ ಎಸ್ಟೇಟ್ ನಲ್ಲಿ ಚಿತ್ರ ನಗರಿ ನಿರ್ಮಾಣ ಮಾಡಲು ತೀವ್ರ ವಿರೋಧ ವ್ಯಕ್ತಪಡಿಸಿರುವ  ಹಿಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಅವಧಿಯಲ್ಲಿಯೂ ಅರಣ್ಯ ಪ್ರದೇಶ ಎಂದು ಘೋಷಣೆ ಆಗಲಿಲ್ಲ.

ರೋರಿಚ್ ಎಸ್ಟೇಟ್ ಅರಣ್ಯ ಪ್ರದೇಶವಲ್ಲ

'167.15 ಎಕರೆ(67.73 ಹೆಕ್ಟೇರ್) ಪ್ರದೇಶ ಯು ಎಂ ಕಾವಲ್ ಎಸ್ ಎಫ್ ಆಗಿದ್ದು, ಇದನ್ನು ಹೊರತುಪಡಿಸಿ ಇರುವ ರೋರಿಚ್ ಎಸ್ಟೇಟ್ ನ ಜಮೀನು ಪ್ರಸ್ತುತ ಅರಣ್ಯ ಪ್ರದೇಶವಾಗಿರುವುದಿಲ್ಲ. ಆದರೆ ಪರಿಭಾವಿತ ಅರಣ್ಯ(ಡೀಮ್ಡ್ ಫಾರೆಸ್ಟ್)ವನ್ನಾಗಿ ಪರಿಗಣಿಸಲು ವರದಿಯನ್ನು ಈ ಹಿಂದೆಯೇ ಸಲ್ಲಿಸಲಾಗಿದೆ, ' ಎಂದು ವನ ವಿಕಾಸದ ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ 2019ರ ಜೂನ್ 25ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ 'ಡೆಕ್ಕನ್'ನ್ಯೂಸ್' ಗೆ ಲಭ್ಯವಾಗಿದೆ.

2012ರಿಂದಲೂ ರೋರಿಚ್ ಎಸ್ಟೇಟ್ ನ್ನು ಅರಣ್ಯ ಪ್ರದೇಶವೆಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂಬುದು ಈ ಪತ್ರದಿಂದಲೇ ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದಷ್ಟೇ ಅಲ್ಲ, 100 ಎಕರೆಯಲ್ಲಿ ‘ಟ್ರೀ ಪಾರ್ಕ್’ ಮಾಡಿರುವ  ಅರಣ್ಯ ಇಲಾಖೆ ಆ ನಂತರ ಈ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಘೋಷಣೆಗೆ ಒತ್ತು ನೀಡದಿರುವುದು ಸಂಶಯಗಳಿಗೆ ಕಾರಣವಾಗಿದೆ.

ಎಸ್ಟೇಟ್ನ ಕೆಲವು ಭಾಗವನ್ನು ಉದ್ಯಾನ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮೀಸಲಿಟ್ಟಿದೆ. ಉಳಿದದ್ದನ್ನು ಅರಣ್ಯ ಪ್ರದೇಶವೆಂದು ಪರಿಗಣಿಸುವ ಸಂಬಂಧದ ಪ್ರಸ್ತಾವವನ್ನು ಅಡ್ವೋಕೇಟ್ ಜನರಲ್ ಅವರಿಗೆ ಕಳಿಸಿತ್ತು.

ಆನೆಗಳು ಸಂಚರಿಸುವ ಈ ಮಾರ್ಗದಲ್ಲಿ ಮರ ಸಾಗಣೆ ಮತ್ತು ಇತರ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ  ಈ ಪ್ರದೇಶವನ್ನು ಅರಣ್ಯ ಪ್ರದೇಶವೆಂದು ಘೋಷಿಸಲು ಈ ಪ್ರಸ್ತಾಪವನ್ನಿಡಲಾಗಿತ್ತು. ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ ಅನ್ನು ನೆದರ್ಲೆಂಡಿನ ವಾನ್ ಗೋ ಮ್ಯೂಸಿಯಂ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಸ್ಟೇಟ್ನ ಗಡಿ ಮತ್ತು ಒತ್ತುವರಿ ಗುರುತಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಕೈಗೊಂಡಿವೆಯಾದರೂ ಈವರೆಗೂ ಅದು ಪೂರ್ಣಗೊಂಡಿಲ್ಲ.

ಅರಣ್ಯ ಪ್ರದೇಶ ಘೋಷಣೆ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕಿದ್ದ  ರೋರಿಚ್ ಮತ್ತು ದೇವಿಕಾ¬ರಾಣಿ ಎಸ್ಟೇಟ್ ಮಂಡಳಿ,  ಡಿಜಿಟಲ್ ಸರ್ವೆ ನಡೆಸಿ   ಎಸ್ಟೇಟ್ ನ್ನು ಅಂತರರಾಷ್ಟ್ರೀಯ ಕಲಾ ಕೇಂದ್ರ ಮತ್ತು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿತ್ತು.

ಕಗ್ಗಲೀಪುರ ವಲಯ ವ್ಯಾಪ್ತಿಯಲ್ಲಿ ಬರುವ ದೇವಿಕಾರಾಣಿ ರೋರಿಚ್ ಎಸ್ಟೇಟ್ ನಲ್ಲಿ ಪಶು ನಿರೋಧಕ ಕಂದಕ ನಿರ್ಮಾಣ ಕಾಮಗಾರಿ, 25 ಹೆಕ್ಟೇರ್ ಪ್ರದೇಶದಲ್ಲಿ ಟ್ರೀ ಪಾರ್ಕ್ ಅಡಿಯಲ್ಲಿ ಸಸ್ಯೋದ್ಯಾನ ನಿರ್ಮಾಣ, ಬರ್ಸೆರ ಮರದ ಸಸಿ ನೆಡುವ ಸಂಬಂಧದ ಮಾಹಿತಿಯನ್ನೂ ಸರ್ಕಾರಕ್ಕೆ ಅದೇ ದಿನದಂದು ಒದಗಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಕಗ್ಗಲೀಪುರ ವಲಯ ವ್ಯಾಪ್ತಿಯಲ್ಲಿನ ದೇವಿಕಾರಾಣಿ ರೋರಿಚ್ ಎಸ್ಟೇಟ್ ನ ಗಡಿಗುಂಟ 3.3 ಕಿ ಮೀ ಪಶು ನಿರೋಧಕ ಕಂದಕ ನಿರ್ಮಾಣ ಹಾಗೂ 3.3 ಹೆಕ್ಟೇರ್ ಬಿದಿರು ನೆಡುತೋಪು ಬೆಳೆಸುವ ಕುರಿತು ಈಗಾಗಲೇ ಅರಣ್ಯ ಇಲಾಖೆ ಕ್ರಮ ವಹಿಸಿದೆ. ಈ ಕಾಮಗಾರಿಗೆ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿರುವುದರಿಂದ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂಬ ವಿಚಾರವೂ ತಿಳಿದು ಬಂದಿದೆ.

ಇನ್ನು, ರೋರಿಚ್ ಎಸ್ಟೇಟ್ ನಲ್ಲಿ ಅರಣ್ಯ ಇಲಾಖೆ ಟ್ರೀ ಪಾರ್ಕ್ ನಿರ್ಮಾಣ ಕಾಮಗಾರಿಯೂ ಮಂದಗತಿಯಲ್ಲಿ ಸಾಗಿದೆ. ಇದು2013-14ನೇ ಸಾಲಿನಲ್ಲಿ ಉತ್ತರಹಳ್ಳಿ ಮನವರ್ತೆ ಕಾವಲ್ ಅಧಿಸೂಚಿತ ಅರಣ್ಯ ಪ್ರದೇಶದ 25 ಹೆಕ್ಟೇರ್ ಪ್ರದೇಶದಲ್ಲಿ ಟ್ರೀ ಪಾರ್ಕ್(ನಗರ ವನ) ಯೋಜನೆಯಡಿ ವಿವಿಧ ಜಾತಿಯ 5,000 ಸಸಿಗಳನ್ನು ನೆಟ್ಟು ಸಸ್ಯೋದ್ಯಾನ ನಿರ್ಮಾಣ ಮಾಡುವ ಯೋಜನೆಯಾಗಿದೆ.

ಅದೇ ರೀತಿ ಇದೇ ಎಸ್ಟೇಟ್ನ 25 ಎಕರೆ ಪ್ರದೇಶದಲ್ಲಿ ಸಸ್ಯ ಕ್ಷೇತ್ರದಲ್ಲಿ ಅಪರೂಪ ಎನ್ನಬಹುದಾದ ಬರ್ಸೆರಾ(ಲಿನೋಲೆ) ಮರದ ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸುವ ಬಗ್ಗೆಯೂ ಇಲಾಖೆ ಚಿಂತಿಸಿರುವುದು ಪತ್ರದಿಂದ ಗೊತ್ತಾಗಿದೆ.