ಜನಮತವೆಂಬುದು ಕೊಳ್ಳೆ ಹೊಡೆವ ಮಾಲು

ಜನಮತವೆಂಬುದು ಕೊಳ್ಳೆ ಹೊಡೆವ ಮಾಲು

ಈ ಕೆಲ ದಿನಗಳಿಂದ ದಿನಾಲೂ ಬೇಂದ್ರೆಯವರ ಬಹು ಜನಪ್ರಿಯ ಕವಿತೆ "ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು" ನೆನಪಾಗುತ್ತಿದೆ. ಕಾಂಚಾಣ ಮತ್ತು ಕೇಂದ್ರೀಕೃತ ಪ್ರಭುತ್ವ ಒಂದರ ಹೆಗಲ ಮೇಲಿನ್ನೊಂದು ಕೈಹಾಕಿ ನಡೆಯತೊಡಗಿದರೆ ಏನಾಗಬಹುದು ಹೇಳಿ? ಹೆಬ್ಬಾವಿನಂತೆ ಇಡೀ ರಾಷ್ಟ್ರದ ಸಂಪತ್ತನ್ನು ನುಂಗಿ ನೊಣೆದು ಬರೀ ಊರು ಕೇರಿಗೊಬ್ಬೊಬ್ಬ ಭಾಷಣ ಶೂರರು ಹುಟ್ಟಿಕೊಳ್ಳಬಹುದು.ಈಗ ನಡೆಯುತ್ತಿರುವುದು ಅಕ್ಷರಶಃ ಅದೇ. ಸದ್ಯಕ್ಕಿದು ರಾಷ್ಟ್ರದ ಪ್ರಧಾನ ಚಟುವಟಿಕೆ.ಜೊತೆಗೆ ದೃಶ್ಯ ಮಾಧ್ಯಮಗಳ ಮೂಲಕ ಇದು ರೋಚಕ ಸರ್ಕಸ್ಸಿನಂತೆ ವರದಿಯಾಗುತ್ತಾ ಪಾರ್ಕುಗಳಲ್ಲಿ, ಟೀ ಅಂಗಡಿಗಳಲ್ಲಿ, ಹಳ್ಳಿ ಕಟ್ಟೆ ದೇವಸ್ಥಾನಗಳಲ್ಲಿ  ತಂತ್ರ ಪ್ರತಿತಂತ್ರದ ವಿಶ್ಲೇಷಣೆಯ ಮಟ್ಟಕ್ಕಿಳಿದು ಜನಗಳ ನಿಜವಾದ ಸಮಸ್ಯೆಗಳನ್ನು ನೇಪಥ್ಯಕ್ಕೆ ಸರಿಸಿದೆ.

ಹಾಗೆ ನೋಡಿದರೆ ಮಲೆನಾಡೂ ಸೇರಿದಂತೆ ಬಯಲು ಸೀಮೆಯ ಜನರಿಗೆ ಮಳೆಯ ಅಭಾವವುಂಟಾಗಿ ನಾಳಿನ ಬದುಕು ದುಸ್ತರವಾಗುವ ಸ್ಪಷ್ಟ ಸೂಚನೆಗಳಿವೆ. ಈ ಹೊತ್ತಿನಲ್ಲಿ ಬದ್ಧತೆಯಿಂದ ಕೃಷಿಕರ ಬಡವರ ಪರ ನಿಲ್ಲಬೇಕಾಗಿದ್ದ ಜನಪ್ರತಿನಿಧಿಗಳು ತಮಗೆ ನೀಡಿದ ಜನಮತವನ್ನು ಅಧಿಕಾರ ಹಾಗೂ ಷೇರು ಮಾರುಕಟ್ಟೆಯಲ್ಲಿಟ್ಟುಕೊಂಡು ತಮ್ಮ ತಮ್ಮ ಏರುಗತಿಯ ಸೂಚ್ಯಂಕವನ್ನು ನಿರೀಕ್ಷಿಸುತ್ತಾ ಕುಳಿತಿದ್ದಾರೆ. ಇದೇ ಪ್ರಜಾಪ್ರಭುತ್ವದ ವ್ಯಂಗ್ಯ ಮತ್ತು ಈ ಪದಕ್ಕಿರಬಹುದಾದ ವ್ಯಾಪಕ ಅರ್ಥದ ಅಪಮಾನ. ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರಕ್ಕಿರುವ ಅವಕಾಶವನ್ನು ಪ್ರಜಾಪ್ರಭುತ್ವ ಬಲಗೊಳಿಸಲು ಬಳಸುವ ಬದಲಾಗಿ ಕಾರ್ಪೊರೇಟೀಕರಣದ ಕುತಂತ್ರಗಳ ವೈಭವೀಕರಣಕ್ಕೆ ಬಳಸುತ್ತಿರುವ ದೃಶ್ಯ ಮಾಧ್ಯಮಗಳನ್ನು ನೋಡಿದರೆ ಬಡವರ ನಾಳಿನ ದುರಂತವನ್ನು ಊಹಿಸಿಕೊಳ್ಳಲೂ ಭಯವಾಗುತ್ತಿದೆ. ರಾಷ್ಟ್ರದಲ್ಲಿ ಬದುಕು ಕಟ್ಟಿಕೊಳ್ಳುವ ಹೋರಾಟದಲ್ಲೇ ನಡೆಯುತ್ತಿರುವ ಮಾನವ ಹತ್ಯೆಗಳು ಜನಸಾಮಾನ್ಯರ ಅಂತಃಕರಣವನ್ನು ಕಲಕದೆ ಹುಸಿ ಅನುಕಂಪದ ತೆರೆಮರೆಗೆ ಸರಿದು ಮಾಯವಾಗುತ್ತಿವೆ. 

ಇದನ್ನೆಲ್ಲ ಗಮನಿಸುತ್ತಿರುವ ಅಕ್ಷರಸ್ಥ ಸಮುದಾಯ ಇವೆಲ್ಲ ತಮಗೆ ಸಂಬಂಧಿಸಿದ ಸಮಸ್ಯೆಗಳಲ್ಲವೇನೋ ಎಂಬಂತೆ ಬಹುತೇಕ ನಿರ್ಲಿಪ್ತವಾಗಿರುವುದನ್ನು ಗಮನಿಸಿದರೆ ಡಿ.ಆರ್. ನಾಗರಾಜರ ಈ ಮಾತು: "ನಾಡಿನ ಜನ ತಮ್ಮ ತತ್ ಕ್ಷಣದ ಬದುಕಿಗೆ ಮೀರಿದ ಪ್ರಶ್ನೆಗಳು ತಮಗೆ ಸಂಬಂಧಿಸಿದ್ದಲ್ಲ ಎಂದು ಭಾವಿಸಿದಾಗ ಈ ನಾಡು ಕೊಳೆಯಲು ಪ್ರಾರಂಭವಾಗುತ್ತದೆ" ಎಂಬುದು ನೆನಪಾಗುತ್ತದೆ.  ಕೊಳೆಯಲು ಬಿಡಬಾರದೆಂದು ಕನ್ನಡ ಸಾಹಿತ್ಯ ಕಾಲ ಕಾಲಕ್ಕೂ ಎಚ್ಚರಿಸುತ್ತಲೇ ಬಂದಿದೆ. ಕರ್ನಾಟಕದ ಏಕೀಕರಣ ಸಂದರ್ಭದಲ್ಲಂತೂ ಕವಿ ಕುವೆಂಪು ಕನ್ನಡ ನಾಡಿನ ಸಚಿವ ಸಂಪುಟದಲ್ಲಿ ಶಾಶ್ವತವಾಗಿ ಈ ನೆಲದ ಸಂವೇದನೆ ರೂಪಿಸಿದ ಬರಹಗಾರರನ್ನೇ ಸಚಿವರನ್ನಾಗಿಸಿದ್ದಾರೆ. ಹೀಗಿದ್ದರೂ ಸ್ವತಂತ್ರ ಭಾರತವಾಗಲೀ, ಏಕೀಕೃತ ಕರ್ನಾಟಕವಾಗಲೀ ತಾನು ರಚಿಸಿಕೊಂಡ ಸಂವಿಧಾನವನ್ನೇ ಮೀರುತ್ತಲೇ ಬಂದಿವೆ.ದೇವನೂರ ಮಹಾದೇವರ ಬೀರ ಮತ್ತು ಲಚ್ಚಿಯ ಅಸಹಾಯಕತೆ ಈ ರಾಜಕೀಯ ರಾಕ್ಷಸ ವ್ಯವಸ್ಥೆಯೊಳಗೆ ದೊಡ್ಡ ಪರ್ವತವಾಗಿಯೇ ಬೆಳೆದಿದೆ.

ಯಾಕೆ ಹೀಗೆ? ನಮ್ಮ ಜನ ಸದಾ ತತ್ ಕ್ಷಣದ ಸಮಸ್ಯೆಗಳಿಗೆ ತೀರಾ ತೆಳುವಾಗಿ ಸ್ಪಂದಿಸುತ್ತ, ತಮ್ಮ ಬದುಕಿನ ಬುಡ ಅಲ್ಲಾಡಿಸುತ್ತಿರುವ ಒಳ ಸಂಚುಗಳನ್ನು ಮರೆಸುವ ಸಾಮಾಜಿಕ ಮಾಧ್ಯಮಗಳು ಹರಡುತ್ತಿರುವ ಸಾಮೂಹಿಕ ಸನ್ನಿಗೆ  ಒಳಗಾಗಿರುವುದು.ಅನ್ನದ ಪ್ರಶ್ನೆಗಳು ಹಿನ್ನೆಲೆಗೆ ಸರಿದು, ದೇವರ ಹೆಸರ ಹೇಳುವುದೇ ಮನುಷ್ಯನ ಪ್ರಮುಖ ಕರ್ತವ್ಯವೆಂಬಂತೆ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವಂತಾಗಿರುವುದು. ಕಾಡಿನ ಪ್ರಾಣಿಯೊಂದನ್ನು ಬೇಟೆಯಾಡಿ ಬೆಂಕಿಯಲ್ಲಿ ಸುಟ್ಟು ಸೇವಿಸುವ ತರದಿ ಮನುಷ್ಯರನ್ನೂ, ಮನುಷ್ಯತ್ವವನ್ನೂ ಸುಡುವ ಕ್ರೌರ್ಯ ತಲುಪಿರುವ ಈ ನಮ್ಮ ಸಮಾಜ ಅತ್ಯಾಧುನಿಕತೆಯ ಏಣಿ ಹತ್ತಲು ಮಾತ್ರ ತುದಿಗಾಲಲ್ಲಿ ನಿಂತಂತಿದೆ. ಹಾಗಾಗಿ ಇದು ಸಾರ್ವಜನಿಕ ಸಂಕೋಚ ಹರಣದ ಕಾಲ. ಮಾನ,ಪ್ರಾಣ ಎಲ್ಲವೂ ಉಳ್ಳವರ ಇಚ್ಛೆಯ ಸ್ವತ್ತೇ ಆದಂತಿವೆ. ಇವೆಲ್ಲ ರಾಜಕೀಯ ಪ್ರೇರಿತವೋ! ಅಥವಾ ನಮ್ಮ ಸಮಾಜವೇ ಈ ಮಟ್ಟಿನ ಕ್ರೌರ್ಯ ರೂಢಿಸಿಕೊಂಡಿದೆಯೋ! ಇವುಗಳಿಗೆ ಸಮಾಧಾನದಿಂದ ನಮ್ಮ ಜನ ಉತ್ತರ ಕಂಡುಕೊಳ್ಳಲು ಪ್ರಯತ್ನ ನಡೆಸದಿದ್ದರೆ ನಾಳಿನ ಪ್ರತೀ ಸೂರ್ಯೋದಯವೂ,ಸೂರ್ಯಾಸ್ತವೂ ರಕ್ತಸಿಕ್ತವೇ.

ಆದರೆ ಈ ಸ್ಥಿತಿಯನ್ನು ಯಾರ ಮೇಲೆ ಹೊರಿಸಬಹುದೆಂಬ ಪ್ರಶ್ನೆ ಕೇಳಿಕೊಳ್ಳಲು ಗೊಂದಲವಾಗುತ್ತಿದೆ. ಅದಕ್ಕಿಂತಲೂ ಮಿಗಿಲಾಗಿ ಭಯ. ಯಾಕೆಂದರೆ ಜಾತಿ ಆಧಾರಿತ ಈ ನಮ್ಮ ಸಮಾಜದಲ್ಲಿ ಅಧಿಕಾರ ಮತ್ತು ಹಣದ ಬೆನ್ನು ಬಿದ್ದು ತನ್ನ ಸಮುದಾಯದ ನಿಜ ಸ್ಥಿತಿಯನ್ನೇ ಮರೆತು ಬದುಕುತ್ತಿರುವವರ ನಡುವೆ ನಾವಿದ್ದೇವೆ.ಕೆಲವು ಜನ ಪ್ರತಿನಿಧಿಗಳು ತಮ್ಮ ಜಾತಿಯ ಬಡವರ ಕಾಳಜಿಯ ಬಗ್ಗೆ ಬಹು ಜತನದ ಭಾಷೆಯಲ್ಲಿ ಮಾತಾಡುತ್ತಲೇ ಅವರ ಮುಗ್ಧತೆಯನ್ನು ಅಡವಿಟ್ಟುಕೊಂಡೇ ರಾಕ್ಷಸರಾದವರಿದ್ದಾರೆ. ಇಂತಹ ಜಾತಿ ನಿಷ್ಠ ನಾಯಕತ್ವದ ಮೋಸದ ವರ್ತುಲದಿಂದ ಈ ನೊಂದ ಜನ ಹೊರಬರದಿದ್ದರೆ ಮತ್ತು ಬದ್ಧತೆಯುಳ್ಳ ಪರ್ಯಾಯ ಪ್ರತಿನಿಧಿಯೊಬ್ಬನನ್ನು ಬೆಳೆಸಿಕೊಳ್ಳದಿದ್ದರೆ ಇಲ್ಲಿ ಅಂಬೇಡ್ಕರ್ ಕೂಡ ಈ ಮೋಸಗಾರರ ಅಸ್ತ್ರವಾಗುತ್ತಾರೆ. ಮಧು ದಂಡವತೆ, ಗೋಪಾಲಗೌಡರೂ ಸದನದ ಬಾಯುಪಚಾರದ ಪ್ರಸಂಗವಾಗುತ್ತಾರೆ. ಅದಕ್ಕಾಗಿ ನಾಯಕನೊಬ್ಬನ ಬರವಿಗಾಗಿ ಕಾಯದೇ ನಾಯಕತ್ವದ ಅವಗುಣವಿಲ್ಲದ ಸೇವಕನನ್ನು ತಮ್ಮ ಪ್ರತಿನಿಧಿಯಾಗಿಸಿಕೊಳ್ಳಲು ನಮ್ಮ ಸಮಾಜ ಗಂಭೀರ ಚಿಂತನೆಯನ್ನು ಮಾಡಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಹೆಸರಿನ ಇಂತಹ ನೂರಾರು ನಾಟಕಗಳನ್ನು ನೋಡುತ್ತಲೇ ಈ ರಾಷ್ಟ್ರದ ಇತಿಹಾಸ ಬಸವಳಿಯಲಿದೆ.