ಅತ್ಯಾಚಾರ ಪ್ರಕರಣಗಳು ಜಾತಿ, ಬಣ್ಣ, ವರ್ಗದ ಆಧಾರದ ಮೇಲೆ ನಿರ್ಧರಿತವಾಗುತ್ತವೆಯೇ?

ಪ್ರಿಯಾಂಕ ರೆಡ್ಡಿ ಪ್ರಕರಣದಲ್ಲಿ ಪೊಲೀಸರು ವಹಿಸಿದ ಆಸಕ್ತಿ, ದಲಿತ ವರ್ಗದ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಕಾಣುತ್ತಿಲ್ಲವೇಕೆ ಎಂಬ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ.

ಅತ್ಯಾಚಾರ ಪ್ರಕರಣಗಳು ಜಾತಿ, ಬಣ್ಣ, ವರ್ಗದ ಆಧಾರದ ಮೇಲೆ ನಿರ್ಧರಿತವಾಗುತ್ತವೆಯೇ?

ಹೈದರಾಬಾದ್:ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿರುವ ಪ್ರಕರಣಕ್ಕೆ ಜಾತಿ ಮತ್ತು ವರ್ಗ ಥಳಕು ಹಾಕಿಕೊಂಡಿದೆ.

ಕೆಳ ವರ್ಗಗಳ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುವುದೇ ಇಲ್ಲ. ತೆಲಂಗಾಣದಲ್ಲಿ ರೆಡ್ಡಿ ಜಾತಿಯು ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಸಮುದಾಯ. ಹೀಗಾಗಿ ಈ ಪ್ರಕರಣದಲ್ಲಿ ತಕ್ಷಣವೇ ನ್ಯಾಯ ದೊರೆತಿದೆ. ಆದರೆ ಈ ಪ್ರಕರಣದಲ್ಲಿ ಕಂಡಂತಹ ಪ್ರತಿಕ್ರಿಯೆ ಆಸಿಫಾಬಾದ್ ಮಹಿಳಾ ಪ್ರಕರಣದಲ್ಲಿ ವ್ಯಕ್ತವಾಗಿಲ್ಲ. ಇನ್ನು, ಅತ್ಯಾಚಾರ ಅಥವಾ ದೌರ್ಜನ್ಯಕ್ಕೀಡಾಗುವ ಕೆಳ ವರ್ಗದ ದಲಿತ ಮಹಿಳೆಯರಿಗೆ ಇಂತಹ ನ್ಯಾಯ ದೊರೆತಿರುವ ನಿದರ್ಶನಗಳು ವಿರಳ.

ದಿಶಾ ಪ್ರಕರಣದಲ್ಲಿ ಘಟನೆ ನಡೆದ ಸ್ಥಳಕ್ಕೆ ಆರೋಪಿಗಳನ್ನು ಮಹಜರು ಮಾಡಲು ಪೊಲೀಸರು ಸ್ಥಳ ಪರಿಶೀಲನೆಗೆಂದು ಕರೆದೊಯ್ದಿದ್ದರು. ಆದರೆ ಅಲ್ಲಿ ನಡೆದಿದ್ದೇನು ಆರೋಪಿಗಳು ಪರಾರಿಯಾಗಲು ಪ್ರಯತ್ನಿಸಿದ್ದಾರೆ ಎಂಬ ಕಾರಣವನ್ನು ಮುಂದೊಡ್ಡಿ ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿರುವ ಹೆಣ್ಣುಮಕ್ಕಳ ಮೇಲೆ ಹಲವು ಅತ್ಯಾಚಾರ ಘಟನೆಗಳು ನಡೆದಿವೆ. ಅಂತಹ ಆರೋಪಿಗಳನ್ನೇಕೆ ಎನ್‌ಕೌಂಟರ್‌ ಮಾಡಲಿಲ್ಲ. ಅವರನ್ನೂ  ಗಲ್ಲಿಗೇರಿಸಿ ಎಂಬ ಒತ್ತಾಯಗಳು ಹೆಚ್ಚುತ್ತಿವೆ.

ಈ ಸಮುದಾಯಗಳಿಗೆ ಸೇರಿರುವ ನಾಯಕರು ಅಲ್ಲಿನ ದ್ವಂದ್ವತೆಯನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಅಳಿವಿನ ಅಂಚಿನಲ್ಲಿರುವವರ ಮೇಲೆ ಆಗುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.

ಕೆ. ಚಂದ್ರಶೇಖರ್ ರಾವ್ ಸಂಪುಟದಲ್ಲಿ ಗೃಹ ಸಚಿವರು ಇಬ್ಬರು ಮಹಿಳಾ ಮಂತ್ರಿಗಳು ಸೇರಿದಂತೆ ತೆಲಂಗಾಣದ ಹಲವು ಸಚಿವರು ದಿಶಾ ಅವರ ಮನೆಗೆ ದೌಡಾಯಿಸಿ ಸಾಂತ್ವಾನ ಹೇಳತೊಡಗಿದರು. ಆದರೆ ಆಸಿಫಾ ಬಾದ್ ಸಂತ್ರಸ್ತೆಯ ಕುಟುಂಬಕ್ಕೆ ಕೇವಲ ಟಿ ಆರ್ ಎಸ್ ನ ಸ್ಥಳೀಯ ಶಾಸಕರು ಮಾತ್ರ ಭೇಟಿ ನೀಡಿದ್ದರು.

ಕಳೆದ ವಾರ ತೆಲಂಗಾಣದ ಬುಡಕಟ್ಟು ಪ್ರಾಬಲ್ಯವುಳ್ಳ ಜಿಲ್ಲೆಯಾದ ಕುಮುರಾಮ್ ಭೀಮ್ ಆಸಿಫಾಬಾದ್‌ನಲ್ಲಿ ದಿಶಾ ಪ್ರಕರಣಕ್ಕೂ ಮೂರು ದಿನಗಳ ಮುನ್ನ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬಳ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಈ ಘಟನೆಯಲ್ಲಿ ಬಾಧಿತರಾದವರಿಗೆ ತ್ವರಿತ ನ್ಯಾಯ ಬೇಕು ಎಂದು ಆಗ್ರಹಿಸಿ ಅಲ್ಲಿನ ಜನರು ಪ್ರತಿಭಟಿಸಿದ್ದರು.

ಮತ್ತೊಂದು ಪ್ರಕರಣವನ್ನೇ ನೋಡಿ. ವಿವಾಹಿತ ಮಹಿಳೆ ಒಬ್ಬಳು ಸುಮಾರು 30 ವರ್ಷದಿಂದ ಅಡುಗೆ ಉಪಕರಣಗಳು ಹಾಗೂ ಬುಟ್ಟಿಗಳನ್ನು ಮಾರಾಟ ಮಾಡುತ್ತಿದ್ದ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಆಕೆಯ ಶವ ಯಲ್ಲಾ ಪತ್ತಾರ್ ಗ್ರಾಮದ ಬಳಿ ಪತ್ತೆಯಾಗಿದೆ. ಈ ಘಟನೆ ಸಂಬಂಧ ಮೃತ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದರು.  

ಪೊಲೀಸರು ದಿಶಾ ಪ್ರಕರಣದಂತೆಯೇ ಎರಡು ದಿನಗಳಲ್ಲಿ ಆರೋಪಿಗಳಾದ ಶೈಕ್ ಬಾಬು, ಶೈಕ್ ಶಬುದ್ದೀನ್ ಮತ್ತು ಶೈಕ್ ಮಕ್ಡೂಮ್ ಈ ಮೂವರನ್ನು ಬಂಧಿಸಿರುವ ಪೊಲೀಸರು ಆದಿಲಾಬಾದ್ ಜೈಲಿಗೆ ಕಳಿಸಿದ್ದಾರೆ.

ಕಳೆದ ವಾರದಿಂದಲೂ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಂದಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಸಾಮಾನ್ಯ ಜನರ ಗುಂಪು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಕೆಲವರು ಅತ್ಯಾಚಾರಿಗಳನ್ನು ಗಲ್ಲಿಗೆರಿಸಿ ಎಂದರೆ ಇನ್ನು ಹಲವರು ಎನ್ ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿದ್ದರು.

ಈ ಪ್ರತಿಭಟನೆ, ಒತ್ತಾಯಗಳು ಸಾರ್ವಜನಿಕ ಅಭಿಪ್ರಾಯಗಳನ್ನು ವ್ಯಾಪಕವಾಗಿ  ಮೂಡಿಸಲಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಆಸಿಫಾ ಬಾದ್ ಪ್ರಕರಣದ ಬಗ್ಗೆ ದನಿ ಎತ್ತಿದರು. ಈ ಪ್ರಕರಣದ ಕುರಿತು  ವಿಶೇಷ ನ್ಯಾಯಲಯದಲ್ಲಿ ಆದೇಶ ಹೊರಬೀಳಲಿದೆ. ಇದರ ತೀವ್ರತೆ ಹೇಗಿತ್ತೆಂದರೆ  ಈ ಪ್ರಕರಣದ ಸಂತ್ರಸ್ತೆಗೆ ಸಮತಾ ಎಂದು ಹೆಸರಿಟ್ಟರಲ್ಲದೆ ಶಿಕ್ಷೆಗೆ ಗುರಿಪಡಿಸಿ ಎಂಬ ಹಕ್ಕೊತ್ತಾಯಗಳು ಮೊಳಗಿದವು.

ಇನ್ನು, ದಿಶಾ ಹತ್ಯೆಯಾದ ದಿನದಂದೇ ವಾರಂಗಲ್ ಪಕ್ಕದ ಹನುಮಕೊಂಡದಲ್ಲಿ ಯಾದವ ಸಮುದಾಯಕ್ಕೆ ಸೇರಿರುವ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಯಿತಲ್ಲದೆ ಅದೇ ದಿನದಂದು ಹತ್ಯೆಗೀಡಾದಳು. ಈ ಯುವತಿಯ ಪೋಷಕರು ದಿಶಾ ಪ್ರಕರಣದಲ್ಲಿ ಆರೋಪಿಗಳಿಗೆ ಎನ್ ಕೌಂಟರ್ ಮಾಡಿ ನ್ಯಾಯ ಕೊಟ್ಟಿರುವ ರೀತಿಯಲ್ಲಿಯೇ ನಮಗೂ ನ್ಯಾಯ ಕೊಡಿಸಿ ಎಂದು ಪೊಲೀಸರ ಮುಂದೆ ಮೊರೆಯಿಟ್ಟಿದ್ದಾರೆ.

ಹೈದರಾಬಾದ್ ಬಳಿಯ ಹಜೀಪುರ ಗ್ರಾಮದಲ್ಲಿನ ಒಂದೇ ಕುಟುಂಬದ ಮೂರು ಅಪ್ರಾಪ್ತ ಬಾಲಕಿಯರ ಮೇಲೆ ಶ್ರೀನಿವಾಸ್ ರೆಡ್ಡಿ ಎಂಬಾತ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ. ಆತನ ವಿರುದ್ದ ಪಂಚಾತಯ್ ಕಚೇರಿಯ ಮುಂದೆ ಧರಣಿ ನಡೆಸಿ ಆತನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಆ ಬೇಡಿಕೆ ಈಡೇರಿತೇ?

ಕಳೆದ ಎಪ್ರಿಲ್‌ನಲ್ಲಿ ಕಾಣೆಯಾಗಿದ್ದ ಬಾಲಕಿಯರ ಶವಗಳು ಬಾವಿಯಲ್ಲಿ ಪತ್ತೆಯಾಗಿದ್ದವು. ಇಂತಹ ಹಲವು ಪ್ರಕರಣಗಳ ಸಂಖ್ಯೆ ಸಾಕಷ್ಟಿವೆ. ಸರದಿಯೋಪಾದಿಯಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಲೇ ಇವೆ. ಕೆಳಜಾತಿಯ ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸರು ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಕವಿತಾ ಗೌಡ.
ಕೆಳವರ್ಗಕ್ಕೆ ಸೇರಿರುವ ಮಹಿಳೆಯರ ಮೇಲೆ ಮೇಲಿಂದ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ರಾಜ್ಯ ಪೊಲೀಸರು ಕ್ಷಿಪ್ರಗತಿಯಲ್ಲೇಕೆ ಕಾರ್ಯನಿರ್ವಹಿಸುತ್ತಿಲ್ಲ. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಸಮುದಾಯದ ನಾಯಕರ ಗುಂಪೊಂದು ರಾಜ್ಯ ಡಿಜೆಪಿ ಮಹೇಂದರ್ ರೆಡ್ಡಿ ಅವರಿಗೆ 2015ರಲ್ಲೇ ಸಲ್ಲಿಸಿದ್ದ ಮನವಿ ಏನಾಯಿತು?

ಸ್ಥಳೀಯ ಮಾಧ್ಯಮಗಳ ಪ್ರಕಾರ ಈ  ಸಮುದಾಯದ ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆ ಮಾಡಿದ 13  ಪ್ರಕರಣಗಳು ಇನ್ನೂ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಡಿಜಿಪಿ ಅವರಿಗೆ ಮನವಿ ಸಲ್ಲಿಸಿತ್ತು.

ನಾವು ಬಡವರು, ಅದಕ್ಕಾಗಿಯೇ ಕೊಲ್ಲಲ್ಪಟ್ಟೆವು

ದಿಶಾ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಕೆಳ ವರ್ಗದವರು. ಪ್ರಭಾವಿಗಳೂ ಅಲ್ಲ. ಹೀಗಾಗಿಯೇ ಅವರನ್ನು ತೆಲಂಗಾಣ ಪೊಲೀಸರು ಕ್ಷಿಪ್ರಗತಿಯಲ್ಲಿ ಎನ್‌ಕೌಂಟರ್‌ ಮಾಡಿದರು ಎಂದು ಹೇಳಲಾಗುತ್ತಿದೆ.  ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ 4 ಆರೋಪಿಗಳ ಕುಟುಂಬದವರು ಮಕ್ತಲ್‌ ಬಳಿ ರಸ್ತೆ ತಡೆದು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇದೇ ಸಂಧರ್ಭದಲ್ಲಿ ಚೆನ್ನಕೇಶವಲು ಅವರ ಪತ್ನಿ ರೇಣುಕಾ ಹಾಗೂ ತಾಯಿ ಜಯಮ್ಮ ದಿಶಾ ಪ್ರಕರಣದಲ್ಲಿ ಮಾತ್ರ ಎನ್ ಕೌಂಟರ್ ಮಾಡಿದ ಪೊಲೀಸರು ಬೇರೆ ಕಡೆ ನಡೆಯುವ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲದೆ ಅವರನ್ನು ಜೈಲಿನಲ್ಲಿ ಇರಿಸಲಾಗುತ್ತದಲ್ಲ ಅದು ಎಷ್ಟು ಸರಿ ಎಂದು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವರ್ಯಾರು?

ನ್ಯಾಯಾಲಯ ಅವರಿಗೆ ಮರಣದಂಡನೆ ನೀಡಿದ್ದರೆ ಅದಕ್ಕೆ ನಾವು ಒಪ್ಪುತ್ತಿದ್ದೆವೇನೋ.  ಆದರೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲದೆ ನನ್ನ ಪತಿ ಅವರ ಬಂದೂಕನ್ನು ಕಸಿದುಕೊಂಡ ಎಂದು ನಂಬುವುದಾದರೂ ಹೇಗೆ? ನನ್ನ ಗಂಡನನ್ನು ಗುಂಡಿಕ್ಕಿ ಕೊಲ್ಲಬಹುದು, ಯಾಕೆಂದರೆ ನಾವು ಅದೃಷ್ಟಹೀನ ಬಡವರು ಎಂದು ರೇಣುಕಾ ಅಸಹಾಯಕತೆಯನ್ನು ಹೊರಹಾಕುತ್ತಲೇ ಇದ್ದಾರೆ.

ಜಾತಿ ವರ್ಗದ ಹೆಸರಿನಲ್ಲಿ ಅತ್ಯಾಚಾರಗಳು ನಡೆದರೂ  ಅದು ಕೇವಲ ಉನ್ನತ ವರ್ಗದವರಿಗೆ ಸಿಗುವಂತಹ ನ್ಯಾಯವೇ ಹೊರತು ಕೆಳವರ್ಗದ ದಲಿತ ಮಹಿಳೆಯರಿಗಲ್ಲ. ಇದರಿಂದ ಯಾವ ನ್ಯಾಯವು ಸಿಗುವುದಿಲ್ಲ.ಹಾಗೆಯೇ ಅತ್ಯಾಚಾರಿಯು ಸಹ ದಲಿತ, ಅಲ್ಪಸಂಖ್ಯಾತನಾಗಿದ್ದಾರೆ ಆತನೂ  ಸಹ ಹೀಗೆ ಎನ್ ಕೌಂಟರ್ ಗೆ ಬಲಿಯಾಗಬೇಕಾಗುತ್ತದೆ ಎನ್ನುವ ದನಿ ಬಹುಶಃ ಯಾರಿಗೂ ಕೇಳಿಸಲಾರದೇನೋ?