ಆದರ್ಶ ವ್ಯಕ್ತಿಯ ಹೆಜ್ಜೆಯಲ್ಲಿ ಸಾಗುತ್ತಿರುವ ಸಿಂಧು 

ಆದರ್ಶ ವ್ಯಕ್ತಿಯ ಹೆಜ್ಜೆಯಲ್ಲಿ ಸಾಗುತ್ತಿರುವ ಸಿಂಧು 

ಇಪ್ಪತ್ತನಾಲ್ಕು ಜುಲೈ ಗಳ ಹಿಂದೆ ಜನಿಸಿದ ತಮ್ಮ ಎರಡನೆಯ ಪುತ್ರಿಗೆ  ಸ್ವಯಂ ಅಸಾಧಾರಣ ಕ್ರೀಡಾಪಟುಗಳಾದ ವಿಜಯಾ ಮತ್ತು ರಮಣ ಸಿಂಧು ಎಂದು ನಾಮಕರಣ ಮಾಡಿದಾಗ ಆಕೆ ಸಿಂಧು ನದಿಯ ಉಗಮ ಸ್ಥಾನದಷ್ಟು ಎತ್ತರಕ್ಕೆ ಬೆಳೆಯುತ್ತಾಳೆಂದೋ, ಆ ನದಿಯಷ್ಟು ಉದ್ದವಾಗಿ ಬೆಳೆಯುತ್ತಾಳೆಂದೋ, ಟಿಬೆಟನ್ ಭಾಷೆಯಲ್ಲಿ ಅದೇ ನದಿಗೆ ಕರೆಯುವಂತೆ "ಸಿಂಹಿಣಿ" ಎಂಬಂತೆ ದಿಟ್ಟ ಆಟಗಾರ್ತಿಯಾಗುತ್ತಾಳೆಂದೋ ಎಣಿಸಿರಲಾರರು.

ವಿಜಯಾ ಮತ್ತು ರಮಣರಿಬ್ಬರೂ ವಾಲಿಬಾಲ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಹೆಸರುವಾಸಿಯಾದವರೇ. ರಮಣರಂತೂ 1986ರಲ್ಲಿ ಸೋಲ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಕಂಚು ಪದಕ ಗೆದ್ದ ಭಾರತ ತಂಡದಲ್ಲಿದ್ದರು. ಆ ಸಾಧನೆಗಾಗೇ ಅರ್ಜುನ ಪ್ರಶಸ್ತಿ ಭಾಜನರು. ಅವರ ಹಿರಿಯ ಪುತ್ರಿ ಪಿವಿ ದಿವ್ಯ ರಾಷ್ಟ್ರೀಯ ಮಟ್ಟದಲ್ಲಿ ಹ್ಯಾಂಡ್ಬಾಲ್ ಆಡಿದರಾದರೂ ನಂತರ ಶಿಕ್ಷಣದತ್ತ ಗಮನಕೊಟ್ಟು ವೈದ್ಯರಾದರು. ದ್ವಿತೀಯ ಪುತ್ರಿ ಸಿಂಧು ವಿದ್ಯೆಯತ್ತ ವಾಲಲಿಲ್ಲ ಅಂತಲ್ಲ, ಆಕೆ ಕೂಡ ಎಂಬಿಎ ಪದವಿ ಗಳಿಸಿದ್ದಾರೆ. ಕ್ರೀಡಾರಂಗದಲ್ಲಿ ಆಕೆಯ ಸಾಧನೆ ಗಮನಿಸಿದರೆ, ವ್ಯಾಸಂಗಕ್ಕೆಲ್ಲಿ ಸಮಯ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ, ಆದರೆ, ಅದೇ ಸಿಂಧು ವೈಶಿಷ್ಠ್ಯ. 

ಸಿಂಧು ಬ್ಯಾಡ್ಮಿಂಟನ್ ರ್ಯಾಕೆಟ್ ಕೈಗೆತ್ತಿಗೊಂಡಾಗ ಆಕೆಯಿನ್ನೂ ಎಂಟೂವರೆ ವರ್ಷದ ಪೋರಿ. ಸಿಕಂದರಾಬಾದ್ ನ ಇಂಡಿಯನ್ ರೈಲ್ವೆ ಇನ್ಸ್ ಟಿಟ್ಯೂಟ್ ಅಭ್ಯಾಸ. ಮೆಹಬೂಬ್ ಅಲಿ ಎಂಬುವರು ಅವರ ತರಬೇತುದಾರರು. ಅಲ್ಲಿಂದ ಶುರುವಾದ ಆಕೆಯ ಬ್ಯಾಡ್ಮಿಂಟನ್ ಯಾತ್ರೆಯ ದಾರಿಯುದ್ದಕ್ಕೂ ಒಂದರ ನಂತರ ಒಂದು ಪ್ರಮುಖ ಮೈಲಿಗಲ್ಲುಗಳೇ. ಆಕೆ ಆರಾಧಿಸುವುದು ಕ್ರಿಕೆಟ್ ಧ್ರುವತಾರೆ ಸಚಿನ್ ತೆಂಡುಲ್ಕರ್ ನನ್ನು. ತೆಂಡುಲ್ಕರ್ ಗೆ ಕೂಡ ಸಿಂಧುವೆಂದರೆ ಅಭಿಮಾನ. ಆಕೆ ಒಲಂಪಿಕ್ಸ್ ರಜತ ಪದಕ ಗಳಿಸಿದಾಗ ಆತ ಆಕೆಗೆ  ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದರು. 

ಆಕೆ ಇಷ್ಟಪಡುವ ಕ್ರೀಡಾಗಾರರೆಂದರೆ ಒಲಂಪಿಕ್ ಚಾಂಪಿಯನ್ ಆದ ಉಸೇನ  ಬೋಲ್ಟ್ ಮತ್ತು  ಟೆನ್ನಿಸ್ ದಿಗ್ಗಜರುಗಳಾದ ರೋಜರ್ ಫೆಡರರ್ ಮತ್ತು ರಾಫ ನಾಡೆಲ್. ಇಷ್ಟೆಲ್ಲಾ ಹಿನ್ನೆಲೆಯಿರುವ ಸಿಂಧು ಅವರ ದಾರಿಯಲ್ಲೇ ಸಾಗಿರುವುದರಲ್ಲಿ ಆಶ್ಚರ್ಯವೇ ಇಲ್ಲ. ಅವರ ಮೆಚ್ಚುಗೆಯ ಸಚಿನ್ ಅಂತರ ರಾಷ್ಟ್ರೀಯ ಮಟ್ಟ ಮುಟ್ಟಿದ್ದು ತನ್ನ ಹದಿನಾರನೇ ವಯಸ್ಸಿನಲ್ಲಾದರೆ, ಸಿಂಧು ಆ ಸಾಧನೆಯನ್ನು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲೇ ಮಾಡಿದರು. ಪ್ರವೇಶ ಮಾಡುತ್ತಿದ್ದಂತೆ ಏಷ್ಯನ್ ಸಬ್-ಜೂನಿಯರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಬಾಚಿಕೊಂಡರು. ಆಕೆಯ ಕ್ರೀಡಾಜೀವನದಲ್ಲಿ ಮೊದಲ ಮುಖ್ಯ ತಿರುವು ಪಡೆದದ್ದು 2011 ರಲ್ಲಿ.ಪ್ರವೇಶಿಸಿದ ಎರಡೇ ವರ್ಷದಲ್ಲಿ ಡಗ್ಲಾಸ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಸಿಂಧು ಚಿನ್ನದ ಪದಕ ಗಳಿಸಿದರು. 

ಇರಾನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ರಜತ ಪದಕ, ಆ ನಂತರದಲ್ಲಿ ನಡೆದ ಏಷ್ಯಾ ಸ್ಪರ್ಧೆಯಲ್ಲಿ ಚಿನ್ನದ ಪದಕ, ಮಲೇಷ್ಯಾದಲ್ಲಿ ಚಿನ್ನದ ಪದಕ ಹೀಗೆ ಸರಣಿಯೋಪಾದಿಯಲ್ಲಿ ಆಕೆ ವಿಜೇತಳಾಗುತ್ತಾ ಹೋದ್ದರಿಂದ ಆರು ವರ್ಷದ ಹಿಂದೆ ಅರ್ಜುನ ಪ್ರಶಸ್ತಿ ಅವರನ್ನರಸಿ ಬಂದಿತು. ನಾಲ್ಕು ವರ್ಷದ ಹಿಂದೆ ಪದ್ಮ ಶ್ರೀ ಪ್ರಶಸ್ತಿಗೂ ಭಾಜನರಾದರು. ಅದರಿಂದ ಸ್ಪೂರ್ತಿ ಪಡೆದರೇನೋ ಎನ್ನುವಂತೆ ಮಾರನೇ ವರ್ಷವೇ ಸೌತ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಪಡೆದುಕೊಳ್ಳುವುದರ ಜತೆಗೆ ಒಲಂಪಿಕ್ಸ್ ನಲ್ಲಿ ರಜತ ಪಡೆದ ಪ್ರಪ್ರಥಮ ಭಾರತೀಯ ಮಹಿಳೆಯಾದರು.

ಆಕೆಯ ಒಲಂಪಿಕ್ಸ್ ಸಾಧನೆಯನ್ನು ಗೌರವಿಸಿ ಆಂಧ್ರ ಪ್ರದೇಶ ಸರ್ಕಾರ ಅವರಿಗೆ ಡೆಪ್ಯುಟಿ ಕಲೆಕ್ಟರ್ ಹುದ್ದೆ ನೀಡಿ ಪುರಸ್ಕರಿಸಿತು. ಅದರ ಬೆನ್ನಲ್ಲೇ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರಾಪ್ತವಾಯಿತು. (ನಿರಾಸೆಗೊಳಿಸುವ ಅಂಶವೆಂದರೆ, ಆಕೆ ಒಲಂಪಿಕ್ ಪದಕ ಗಳಿಸಿಕೊಂಡ ನಂತರದಲ್ಲಿ ಭಾರತೀಯರನೇಕರು ಆಕೆ ಯಾವ ಜಾತಿ ಎಂದು ಪತ್ತೆಮಾಡಲು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಗೂಗಲ್ ಶೋಧಿಸಿದ್ದರು.) ಫೋರ್ಬ್ಸ್ ಪತ್ರಿಕೆ ಮೊದಲ ಬಾರಿಗೆ ಸಿದ್ಧಪಡಿಸಿದ 22  ಅದ್ವಿತೀಯ ಭಾರತೀಯ ಕ್ರೀಡಾಗಾರರ ಪಟ್ಟಿಯಲ್ಲಿ ಸಿಂಧುವಿನ ಹೆಸರು ಮೊದಲನೆಯದು.  ಗ್ರಾಝಿಯಾ, ಜೆಎಫ್ಡಬ್ಲ್ಯೂ, ಎಲ್ಲ್ ಮುಂತಾದ ಪ್ರತಿಷ್ಠಿತ ಪತ್ರಿಕೆಗಳ ಮುಖಪುಟಗಳನ್ನೂ ಸಿಂಧು ಮೆರಗುಗೊಳಿಸಿದ್ದಾರೆ. 

ಮೊನ್ನೆ ಯಾರನ್ನು ಮಣಿಸಿ ವಿಶ್ವ ಚಾಂಪಿಯನ್ ಆದರೋ ಅದೇ ನೊಝೋಮಿ ಒಕುಹಾರರನ್ನು 2016 ರ ಒಲಂಪಿಕ್ಸ್ ಸೆಮಿಫೈನಲ್ ನಲ್ಲಿ ಸಿಂಧು ಪರಾಜಯಗೊಳಿಸಿದ್ದರಾದರೂ ಎರಡು ವರ್ಷದ ಹಿಂದೆ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಅದೇ ಪ್ರತಿಸ್ಪರ್ಧಿಯ ವಿರುದ್ಧ ಪರಾಭವಗೊಂಡಿದ್ದರು. ಕಳೆದ ವರ್ಷ ವಿಶ್ವ ಚಾಂಪಿಯನ್ ಷಿಪ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿ ಅವರದ್ದಾಯಿತು. ಅದಾದ ಒಂದು ವರ್ಷದಲ್ಲೇ ಆ ಪ್ರಶಸ್ತಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡ ದಿಟ್ಟೆ ಸಿಂಧು. ಆ ಪ್ರಶಸ್ತಿ ಗೆಲ್ಲುವದಷ್ಟೇ ಮುಖ್ಯವಾಗದೇ ಆಕೆ ಹೇಗೆ ಗೆದ್ದರೆಂಬುದೂ ಮುಖ್ಯ. ವಿಶ್ವಮಟ್ಟದ ಫೈನಲ್ ಪಂದ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ತೀವ್ರ ಸೆಣಸಾಟ ಅಲ್ಲಿರಲಿಲ್ಲ, ಏಕಪಕ್ಷೀಯವಾವಾಗಿ ಕಂಡುಬಂದ ಆ ಪಂದ್ಯ ಸಿಂಧುವಿನ ಅಸಾಧಾರಣ ಪ್ರತಿಭೆ ಮತ್ತು ಫಾರ್ಮ್ ಗೆ ದ್ಯೋತಕವಾಗಿ ನಿಲ್ಲುತ್ತದೆ. 

ಸಿಂಧುವಿನದು ಆಕರ್ಷಕ ವ್ಯಕ್ತಿತ್ವ. ಅವರ ಎತ್ತರ ಆರು ಅಡಿ ಹತ್ತೂವರೆ ಅಂಗುಲ. ಆಕೆ ಎತ್ತರವಿರುವುದರಿಂದಲೇ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾರೆ ಅನ್ನಿಸುವುದು ಸಹಜ. ಕೋರ್ಟಿನ ಉದ್ದಗಲಕ್ಕೂ ಸರಾಗವಾಗಿ ಸಂಚರಿಸುವುದಕ್ಕೆ ಅದೇ ಮುಖ್ಯ ಕಾರಣ. ಸಿಂಧುವಿನ ಮುಖ್ಯ ಹವ್ಯಾಸ ಯೋಗ (ಮತ್ತು ಸಿನೆಮಾ ನೋಡುವುದು). ಆಕೆಯ ಏಕಾಗ್ರತೆ ಮತ್ತು ನಮ್ಯತೆಯ ಹಿಂದಿರುವ ರಹಸ್ಯ ಅದೇ ಇರಬೇಕು. ಆಕೆಯ ಸೊಂಟದ ಸುತ್ತಳತೆ "ಸಿಂಹಿಣಿ"ಯ ಹೋಲಿಕೆಗೆ ತಕ್ಕಂತಿದೆ. ಬ್ಯಾಡ್ಮಿಂಟನ್ ಆಡಿದವರಿಗಷ್ಟೇ ಗೊತ್ತು, ಅದಕ್ಕೆ ಬೇಕಾದ ಫಿಟ್ನೆಸ್ ಎಷ್ಟಿರಬೇಕೆಂದು.2016 ರಲ್ಲಿ ಆಕೆ ಒಲಂಪಿಕ್ಸ್ ಫೈನಲ್ ನಲ್ಲಿ ಇದೆಲ್ಲದರಷ್ಟೇ ಸಿಂಧುವಿನ ಗೆಲುವಿನ ಯಶಸ್ಸಿಗೆ ಕಾರಣ ಆಕೆಯ ಬೆನ್ನ ಹಿಂದೆ ನಿಂತ ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್. ಎಲ್ಲ ಇಂಗ್ಲೆಂಡ್ ಚಾಂಪಿಯನ್ ಪ್ರಶಸ್ತಿ ವಿಜೇತ ಗೋಪಿಚಂದ್ ಸಿಂಧುವಿನ ಸ್ಪೂರ್ತಿಯ ಸೆಲೆ. 

ಅಂತರ ರಾಷ್ಟ್ರೀಯ ಕ್ರೀಡಾರಂಗಕ್ಕೆ ಪಾದಾರ್ಪಣೆ ಮಾಡಿದ ಒಂದು ದಶಕದಲ್ಲಿ ಸಿಂಧು ನಿರಂತರವಾಗಿ ದಾಖಲೆಗಳನ್ನು ನಿರ್ಮಿಸುತ್ತಾ, ಪ್ರಶಸ್ತಿಗಳನ್ನು ಗೆಲ್ಲುತ್ತಾ ಬಂದಿದ್ದಾರೆ. ಅವರು ಮೊನ್ನೆ ವಿಶ್ವ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಪ್ರಬಲ ಪ್ರತಿಸ್ಪರ್ಧಿಯನ್ನು ಬಗ್ಗುಬಡಿದ ರೀತಿ ನೋಡಿದರೆ ಮುಂದಿನ ವರ್ಷ ಇದೇ ಸಮಯದಲ್ಲಿ ನಡೆಯಲಿರುವ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆಯುವುದರಲ್ಲ ಸಂಶಯವಿಲ್ಲ ಎನಿಸುತ್ತದೆ.  ಆಕೆಗಿನ್ನೂ ಇದೀಗ 24 ವರ್ಷ ತುಂಬಿದೆ. ವಯಸ್ಸು ಅವರ ಪರವಾಗಿದೆ.