"ಜನಾ ಮೆಚ್ಚೋಹಂಗ್ ಆಡಳಿತಾ ನಡ್ಸಬೇಕು, ಜನಾ ಸಾಯೋಹಂಗ್ ಆಡಳಿತಾ ನಡ್ಸಬಾರ್ದೂ"

"ಈಗ ರಾಹುಕಾಲ, ಯಮಗಂಡ ಕಾಲ ಐತಿ, ಬರ ಐತಿ, ಪ್ರವಾಹ ಬಂದೈತಿ, ದೇಶದ್ಗಾದ ಪೌರತ್ವಕಾಯ್ದೆ ಗದ್ಲ ಐತಿ" ಅಂತ್ "ನೆಪಾ ಹೇಳಿಕೊಂಡು ಸಂಪುಟಾ ವಿಸ್ತರಣೆ ಮಾಡೋದ್ನ ಮುಂದುಡಿಕೊಂಡು ಹೊಂಟಿರೋದ ನೋಡಿದ್ರ ಈವರ್ಷ ಸಚಿವ ಸಂಪುಟಾ ವಿಸ್ತರಣೆ ಆಗೂ ಹಂಗ ಕಾಣವಲ್ದನೋಡ್ರೀ".  ಈಗ ನೋಡಿದ್ರ "ಮಂಗಳೂರಾಗ ಪೌರತ್ವದ ಗದ್ಲದಾಗ್ ಪೊಲೀಸ್ರ ಹೊಡ್ದ ಗುಂಡೆಗೆ ಇಬ್ಬ್ರು ಸತ್ತಹೋಗ್ಯಾರ್"..!. "ಸದ್ಯಕ್ ಸಂಪುಟಾ ವಿಸ್ತರಣೆ ಡೌಟ ಅನಸಾಕ ಹತ್ತೇತಿ"....?

ಏನ್ಪಾ ಬಸಣ್ಣಾ ... ನಿಲ್ಲೋ, ಕರ್ದ್ರ ಹಂಗ್ ಹೊಂಟಿಯಲ್ಲ!. "ಕೈಯಾಗ್ ಏನಿದು, ಶಾಲು-ಹಾರಾ-ತುರಾಯಿ, ರುಮಾಲು ?. ಯಾಕಡೆಪಾ ಸವಾರಿ"....!, "ಹೊಸ್ದಾಗಿ ಆರ್ಸಿ ಬಂದಾರಲ್ಲ, ನಿಮ್ಮ ಪಕ್ಷದ್ ಒಂದ್ ಡಜನ್ ಶಾಸಕ್ರು... ಅವ್ರೂ ಮಾನಾ-ಸನ್ಮಾನ, ಶಾಲು-ಹಾರಾ , ತುರಾಯಿ, ಮನಿ-ಮಠಾ ಮುಗ್ದ್ವ, ಇನ್ನು ಉಳ್ದಾವ್"?.

ಕಾಕಾರ್ ನೀವು "ಹಿಂದಿನಜನ್ಮದಾಗ್ ನಾಯಿ ಆಗಿ ಹುಟ್ಟಿದ್ರೆನೂ"...!. "ನಾ, ನಿಮ್ಮ ಕಣ್ಣತಪ್ಸಿ ಹೋಗಬೇಕಂತ್ ಸುಮಾರ ಸಲಾ ಪ್ರಯತ್ನಾ ಮಾಡ್ತನಿ, ಆದ್ರೂ ಎಲ್ಲೇರ ಒಂದಕಡಿಗೆ ನಿಮ್ಮಕಣ್ಣೀಗೆ ಬಿದ್ದ ಬಿಳ್ತನಿ.   ನಾಯಿ ವಾಸ್ನಿ ಹಿಡಿತೆತಲ್ಲ, ಹಂಗ್ ಎಲ್ಲೆರ ಬಂದ್ ನನ್ನ ಹಿಡ್ದ ಬಿಡ್ತೀರಲ್ಲ"?.

"ಯಾಕ್ಲೇ , ಮೈಯಾಗ್ ಸೊಕ್ಕನು ಮಗ್ನ.....? ನಾಯಿಗೆ ಹೋಲಸ್ತೀ ನನ್ನ"?.

ಸಿಟ್ಟಮಾಡಿಕೊಳ್ಳಬ್ಯಾಡ್ತೀ...ಕಾಕಾ, "ನಾ ಯಾಕ್ ನಿಮ್ಮನ್ನ ನಾಯಿಗೆ ಹೋಲಸ್ಲೀ"...!."ಇನ್ನ ನರಿಗೆ ನಿಮ್ಮನ್ನ ಹೋಲ್ಕಿಮಾಡಿದ್ರೂ ಬೈಯಿತೀರಿ". "ಅದ್ಕ ನಾಯಿ ವಾಸ್ನಿ ಹಿಡ್ದಂಗ್ ಹಿಡಿತೀರಿ ಅಂತ್ ನಿಮ್ಮ ಮೂಗಿನ ವಾಸ್ನಾಶಕ್ತಿನ್ ಹೊಗಳ್ದೆ"....!.

ನಿ.. "ಹೊಗ್ಳತಿಯೋ...., ತೆಗಳ್ತಿಯೋ ಒಂದು ಗೊತ್ತಾಗಂಗಿಲ್ಲ" !. ಅದ್ನ ಅತ್ಲಾಗ್ ಇಡು, ಈಗ ಎಲ್ಲ್ಗೆ ಹೊಂಟಿ ಅನ್ನೊದ್ನ ಹೇಳಿ ಸಾಯಿ ಮಗ್ನ!. 

ಏ... ಅಂತಾದ್ದೇನಿಲ್ರೀ..., ಹಿರೇಕೆರೂರ್ಗೆ ಹೊಂಟಿದ್ದೆ, ಅಲ್ಲೆ "ಮೊನ್ನೆ ಇಲೇಕ್ಷನ್ ಒಳ್ಗ ಆರ್ಸಿ ಬಂದಾರಲ್ರೀ...ನಮ್ಮ ಕೌರವ ಬಿ.ಸಿ.ಪಾಟೀಲ್ರು"... ಅವ್ರನ್ನ ಬೆಟ್ಟಿ ಆಗಾಕ್ ಹೊಂಟಿದ್ದೆ". "ದೊಡ್ಡೋರ್ನ ಬೆಟ್ಟಿ ಆಗಾಕ್ ಹೋಗಹೊತ್ತಿನ್ಯಾಗ್ ಬರಿಗೈಲೆ ಹೋಗಬಾರ್ದು ನೋಡ್ರೀ.!, ಅದ್ಕ್ ಈ ಶಾಲು-ಮಾಲಿ, ರುಮಾಲು ಎಲ್ಲಾ".....?. "ಅವ್ರ್ನ ಬೆಟ್ಟ್ಯಾಗಿ ಸನ್ಮಾನ ಮಾಡಿ ಬಂದ್ರಾತು ಅಂತ್ ಹೊಂಟಿದ್ದೆ, ಅಷ್ಟ್ರಾಗ್ ನಿಮ್ಮ ಆಗಮನಾತ್ ನೋಡ್ರೀ... ! ಇನ್ನ ನನ್ನ ಕತಿ ಮುಗ್ದಂಗ್"...?.

ಲೇ..ಲೇ..ಕಬರಗೇಡಿ, "ಸನ್ಮಾನದ ಸಾಮಾನೆಲ್ಲಾ ವೇಸ್ಟ್ ನೋಡ್"....?.  ನಿ... ಪೇಪರ್ ಓದಂಗಿಲ್ಲನೂ..?.

ದಿನಾ ಓದತನಲ್ರೀ....., "ಕನ್ನಡಾ ಪೇಪರಲ್ದ್ ಕೆಲವೊಮ್ಮೆ ಇಂಗ್ಲಿಷ್ ಪೇಪರ್‍ಗಳ್ನು ತಿರ್ವಿ ಹಾಕಿರ್ತನಿ"...!.

"ನಿ, ಪೇಪರ್‍ಗಳ್ನ ಸರಿಯಾಗಿ ಓದಿದ್ರ ಹಿಂಗೆಲ್ಲಾ ಸನ್ಮಾನ ಮಾಡಾಕ  ಹೊಕ್ಕಿದ್ದೀಲ್ಲಾ"!. ಪಾಟೀಲ್ರು "ಅಭಿಮಾನಿಗಳು ನನ್ಗ ಸನ್ಮಾನ ಮಾಡಬ್ಯಾಡ್ರೀ", "ಸನ್ಮಾನಕ್ಕಂತ್ ನೀವು ಖರ್ಚಮಾಡೋ ರೊಕ್ಕಾನ ನನ್ಗ ಕೊಡ್ರೀ.....ಅಂತ್ ಹೇಳ್ಕಿ ಕೊಟ್ಟಾರ್"!.

"ಯಾಕ್ರೀ... ಅವ್ರ್ಗೇನಾತು?, ಸನ್ಮಾನ ಯಾಕ್ ಬ್ಯಾಡಂತಾರ್ ಅವ್ರು"...?.

"ಲೇ..ಲೇ... ಪೂರ್ತಿ ಹೇಳೋಮಟಾ ಕೇಳೋ ಇಲ್ಲೇ, ಆರ್‍ತಿಂಗ್ಳಗೆ ಹುಟ್ಟಿದವ್ನಹಂಗ್ ಆಡಬ್ಯಾಡ್"!. ಬಿ.ಸಿ.ಪಾಟೀಲ್ರೂ "ಜನಗಳು, ಅಭಿಮಾನಿಗಳು ರೊಕ್ಕಾ ಖರ್ಚಮಾಡಿ ಹಾರ, ತುರಾಯಿ, ಶಾಲು-ಹಣ್ಣು-ಹಂಪ್ಲಾ ತರಬ್ಯಾಡ್ರೀ"....!. ನೀವು "ಸನ್ಮಾನಕ್ಕ ಖರ್ಚಮಾಡೋ ರೊಕ್ಕಾನ್ ನನ್ಗ ಕೊಡ್ರಿ",  "ಆ ರೊಕ್ಕಾನ ನಾನು ಅಯ್ಯೋಧ್ಯಾದ ಒಳ್ಗ  ರಾಮಮಂದ್ರಾ ಕಟ್ಟಾಕ್  ಕೊಡ್ತನಿ" ಅಂತ್ ಅಪ್ಪ್ಣಿ ಹೊರ್ಡಿಸ್ಯಾರ್"?.

ಹೌದನ್ರೀ...ನಾ,  ಬ್ಯಾರೇ ತಿಳ್ಕಂಡಿದ್ದೇ..?.

ನಿ.... ಏನಂತ ತಿಳ್ಕಂಡಿದ್ದೀ...?

ಬ್ಯಾಡ್ ಬಿಡ್ರೀ, ಅದ್ನ ಹೇಳಿದ್ರ ನೀವು ಸಿಟ್ಟಿಗೆ ಬರ್ತೀರಿ...!.

ಇಲ್ಲೋ ಹೇಳೋ... "ನಿ.. ಏನಂತ್ ತಿಳ್ಕಂಡಿದಿ ಅನ್ನೋದನ್ನ ಕೇಳಿ ಈ ಕಿವಿ ಪಾವ್ನಾಕ್ಕಾವು ಹೇಳೂ"....!.

ನೋಡ್ರೀ ನಾನು ಎರ್ಡರೀತಿ ಅನ್ಕೊಂಡಿದ್ದೆ, "ಮೊದ್ಲೇದೂ ಕೆರಿ ನೀರ ಕೆರಿಗೆ ಚೆಲ್ಲಿ ವರಾ ಪಡೆದು"!, ಹೆಂಗಿದ್ರೂ ಪಾಟೀಲ್ರು ಇಲೇಕ್ಷನ್ ಒಳ್ಗ ರೊಕ್ಕಾ ಖರ್ಚಮಾಡ್ಯಾರಾ?." "ಜನಾ ಸನ್ಮಾನಕ್ಕ ಖರ್ಚಮಾಡೋ ರೊಕ್ಕಾನ್   ಆಯರ್ ರೂಪದೊಳ್ಗ ತಮ್ಗ ಕೊಡ್ರೀ , ಆ ರೊಕ್ಕದಾಗ ದೇವ್ರಿಗೆ ಗುಡಿ ಕಟ್ಟಸ್ತನಿ ಅಂತ್ ಹೇಳಿದ್ರನೋ"? ಅಂತ್ ಅನ್ಕೊಂಡಿದ್ದೆ?".

"ಅನಕಂತಿಪಾ... ನಿ... ಬಿಟ್ರ.... ಇನ್ನು ಒಂದ್ ಅನಕಂತಿ"!. "ಬಿ.ಸಿ.ಪಾಟೀಲ್ರೇನ್ ಬಡ ಸಾಹಿತಿ ಅಂತ್ ಅನಕೊಂಡಿ ಏನ್"!, "ಸನ್ಮಾನ ಬ್ಯಾಡ್ ನಮ್ಮ್ಗ, ಸನ್ಮಾದ ಬದ್ಲು ಸನ್ಮಾನಕ್ಕ್ ನೀವು ಖರ್ಚಮಾಡೋ ರೊಕ್ಕಾನ್   ನನ್ಗ ಕೊಡ್ರೀ ಅನ್ನಾಕ್"?. ಮಗ್ನ, "ಅವ್ರು ತಲೆಮಾರಿಂದಾ ಸವ್ಕಾರ್ ಅದಾರೋ ತಮ್ಮಾ"!, "ಅವ್ರುದು ಗೌಡ್ಕಿ ಮನೆತನಾ". ಅದು ಅಲ್ದ ಅವ್ರು ಈರಾಮನ ಪಾರ್ಟಿಯಿಂದ ಆರ್ಸಿ ಬಂದಾರ್, ಅದ್ಕ ಅವ್ರು ರಾಮಮಂದ್ರಾ ಕಟ್ಟಾಕ್ ರೊಕ್ಕಾಕೋಡಾಕ ಹೊಂಟಾರ್.

ಅವ್ರು ಗೌಡ್ರ ಅಷ್ಟ ಅಲ್ರೀ ಕಾಕಾ... !, ಮ್ಯಾಲೆ "ಉತ್ತರ ಕರ್ನಾಟಕದ ಏಕೈಕ್ ಸಿನೇಮಾ ಸ್ಟಾರ್ ಅವ್ರು"!. "ಅವ್ರು ರಾಮಮಂದ್ರಿಕ್ಕರ್ ರೊಕ್ಕಾ ಕೊಡ್ಲಿ!, ರಾವಣನ ಮಂದ್ರಾ ಕಟ್ಟಾಕರ್ ರೊಕ್ಕಾ ಕೊಡ್ಲಿ?". ಅದ್ರ ಉಸಾಬರಿ ನಮಗ್ಯಾಕ್?". ಅದಿರ್ಲೀ ಕಾಕಾ,  "ಈ ಸಾಹಿತಿಗಳ್ಯಾಕ್ ಸನ್ಮಾನದ ಬದ್ಲೀ ಸನ್ಮಾನ ಮಾಡಾಕಂತ್ ಖರ್ಚಮಾಡೋ ರೊಕ್ಕಾನ ಕೊಡ್ರೀ ಅಂತ್ ಯಾಕಂದು"ರ.....?.

ಯಾಕಾಂದ್ರ "ಸಾಹಿತಿಗಳ ಪರಿಸ್ಥಿತಿ ಸರಿ ಇರೊಂಗಿಲ್ಲೋ"...?. "ಈ ಸಾಹಿತಿಗಳಲ್ಲೇ, ಬಡ ಸಾಹಿತಿಗಳದು ಒಂದ್ ವರ್ಗಾ, ಶ್ರೀಮಂತ ಸಾಹಿತಿಗಳ್ದು ಇನ್ನೊಂದು ವರ್ಗಾ!" ಇರತೈತಿ. ಕೆಲವ್ರು "ಸರ್ಕಾರಿ ಸಾಹಿತಿಗಳು ಇರ್ತಾರ!, ಇನ್ನು ಕೆಲವ್ರು ತರ್ಕಾರಿ ಸಾಹಿತಿಗಳು ಇರ್ತಾರ್'.!, "ಕೆಲವ್ರೂ ಅರೆ ಸರ್ಕಾರಿ ಸಾಹಿತಿಗಳು ಇರ್ತಾರ್!. "ಇನ್ನು ಕೆಲವ್ರು ಈ ಅಧಿಕಾರಸ್ತ ರಾಜಕಾರಣ್ಣಿಗಳ ಹಿಂದ-ಮುಂದ ಸುತ್ತಾಡತಾ ಕೆಲ್ವು ಪದ್ವಿ, ಪ್ರಶಸ್ತಿ, ಪ್ರಾಧಿಕಾರದ ಅಧ್ಯಕ್ಷಗಿರಿ, ಅಕಾಡೆಮಿಗಳ ಸದಸ್ಯತ್ವ ಹೊಡ್ಕಂತಿರ್ತಾರ್"!. ಆದ್ರ "ಈಲಾಭಿ-ಗೀಬಿ ಮಾಡಕಾ ಬರಲಿಲ್ದ ಕೆಲ್ವು ಸಾಹಿತಿಗಳು ಪಾಪಾ ತಮ್ಮ ಪಾಡಿಗೆ ತಾವು ಸಾಹಿತ್ಯ ರಚ್ನಾ ಮಾಡ್ತಾ, ಸಾಲಾ ಸೂಲಾ ಮಾಡಿಕೊಂಡ್ ಪುಸ್ತಕ ಪ್ರಿಂಟ್ ಮಾಡ್ಸಿ ಅವಗಳ್ನ ತಲಿಮ್ಯಾಗ ಹೊತಗಂಡ್ ಅವ್ನ ಮಾರಾಟ ಮಾಡಾಕ ಓಡಾತಿರ್ತಾರ್"!.

ಮೊನ್ನೆ "ಹಾವೇರಿಯೋಳ್ಗ ನಾನು ಒಬ್ಬ ಸಾಹಿತಿನ್ ನೋಡ್ದೆ, ನನ್ಗ ಪರಿಚಯಾ ಇರೋರ್....! ಸಾಹಿತ್ಯ ರಚ್ನಾ ಮಾಡಿ, ಮಾಡಿ ಪಾಪಾ ಅದ್ರವು ಕಣ್ಣು, ಕಾಲು ಹೋಗ್ಯಾವು"?, ನಡಾ ಅನ್ನೋದು ಬಗ್ಗಿ ಹೋಗಿತ್ತೂ!.  "ಈ ಪ್ರೆಂಡ್ಸ್ ಸಂಸ್ಥಾದವ್ರು ಉಚಿತ  ಕಣ್ಣು ತಪಸಾಣಾ ಶಿಬಿರಾ ಏರ್ಪಡಿಸಿದ್ದ್ರಲ್ಲ" ಅದ್ಕ ಹೋದ ಹೊತ್ತಿನ್ಯಾಗ ಪಾಪಾ "ಈ ಸಾಹಿತಿ ಹರ್ಕ ಹವಾಯಿ ಚಪ್ಲಿ , ಹರ್ಕ ಜುಬ್ಬಾ, ಹರ್ದದ ಪ್ಯಾಂಟು ಹಾಕ್ಕೊಂಡ್ ಕಾಲ ಎಳ್ಕೋಂಡ್  ತನ್ನ ಕಣ್ಣ ತೋರ್ಸಾಕಂತ್ ಬಂದಿತ್ತು"?.

ನಾನು ದೂರದಿಂದ ಈಸಾಹಿತಿನ ನೋಡಿ, ನಮಸ್ಕಾರ್ರೀ ಸಾಹಿತಿಗಳ ಅಂದೆ, "ಯಾರು ಓ,  ಕಾಕಾ ಅನು , ಏನ್ಪಾ ಬಾಳದಿವ್ಸಾತಲ್ಲೋ ಭೆಟ್ಟಿನ ಆಗಿಲ್ಲಾ"..! ಅಂದೋರ "ತಮ್ಮ ಈಲ್ಲೆ ಕಣ್ಣ ತಪಾಸಣಾ ಮಾಡ್ತಾರ್ ಅಂತ್ ಕೇಳಿದ್ದೆ",  "ಇತ್ತಿತ್ಲಾಗ್ ಒಂದ್ ಕಣ್ಣು ಪೂರ್ತಿ ಕಾಣಾಕವಲ್ದು, ಅದ್ಕ ತೊರ್ಸಿಕೊಂಡ್ರಾತು ಅಂತ್ ಬಂದನಿ ಅಂದ್ರು". "ಅವ್ರ ಸ್ಥಿತಿ ನೋಡಿ  ನನ್ಗ ಕಣ್ಣೀರು ಬಂದ್ವು." ಪಾಪಾ "ಈಮನ್ಷ್ಯಾ ಎಷ್ಟ ಸಾಹಿತ್ಯಾ ರಚ್ನೆ ಮಾಡ್ಯಾರ್! , ಎಷ್ಟ ಮಂದಿಗೆ ಸಾಹಿತ್ಯಾನ್ ಹೆಂಗ್ಯ ರಚ್ನಾ ಮಾಡಬೇಕು ಎನ್ನೋದನ್ನ ಹೇಳಿಕೊಟ್ಟಾರ್".!, "ಎಷಟಮಂದಿ ಇವ್ರಗೆ ಶಿಶ್ಯಂದ್ರು.. ಪಾಪಾ ಕಣ್ಣ ತೋರ್ಸಿಗೊಳ್ಳಾಕ ರೊಕ್ಕ ಇಲ್ದ್ ಉಚಿತ ನೇತ್ರ ತಪಾಸಣಾ ಶಿಬಿರಕ್ಕ ಬಂದಾರ" ಅಂತ್ ಬ್ಯಾಸ್ರಾಗಿ ಬರ್ರೀ ಸರ್... ಅಂತ್ ನಾನು ಅವ್ರ ಕೈ ಹಿಡ್ಕೊಂಡ್ ನನ್ಗ ಪರಿಚಯಾ ಇರೋ ಕಣ್ಣಿನ ಡಾಕ್ರರ್ ಹತ್ರಾ ಅವ್ರನ ಕರ್ಕೊಂಡ್ ಹೋಗಿ ತೋರ್ಸಿದೆ ನೋಡ್"!.

"ಅವ್ರಿಗೆ ಯಾಕ್ ಇಂತಾ ಸ್ಥಿತಿ ಬಂದೈತ್ರೀ ಕಾಕಾ"..?

ಯಾಕಂದ್ರ, "ಅವ್ರು ಈ ಪ್ರಶಸ್ತಿ-ಪುರಸ್ಕಾರಕ್ಕ ಲಾಭಿ ಮಾಡಿಲ್ಲಾ!" ಒಂದು, ಇನ್ನೊಂದು "ಅವ್ರು ಈ ರಾಜಕಾರ್ಣಿಗಳ ಮನಿಗೆ ಹೋಗೋರಲ್ಲಾ". "ತಮ್ಗ ಅನಿಸಿದ್ದನ್ನ ನೇರವಾಗಿ ಬರ್ಕೋಂಡ್ ಬಂದ್ವರು ಅವ್ರು"!. ಮೊನ್ನೆ. ಮೊನ್ನೆ ಅವ್ರ್ನ "ಈ ಪಾಯುವು ಥೌಜಂಡ್ (ಐದಸಾವ್ರ) ಮಠದ ಕಮಿಟಿಯವ್ರು" ಈ ಸಾಹಿತಿನ ಕಂಡ್ "ನಮ್ಮ ನಾಡ್ಗೆ ನಿಮ್ಮ ಸಾಹಿತ್ಯದ ಕೊಡ್ಗೀ ಬಾಳಾ ಐತ್ರೀ".., "ನೀವು ನಮ್ಮ ಊರಾಗ ಇರೋದ ನಮ್ಗ ಹೆಮ್ಮಿ!", ಅದ್ಕ, "ನಿಮ್ಗ ಸನ್ಮಾನ ಮಾಡ್ತವಿ, ನಿಮ್ಮ ಕಂಚಿನ ಪುತ್ಥಳಿನ ನಾಲ್ಕರ ಕತ್ರ್ಯಾಗ್ ನಿಲ್ಸತವಿ"? , ನೀವು ಇದ್ಕ ಒಪ್ಗಿಕೊಡ್ಬೇಕು, ಆವತ್ ಬಂದು ಸನ್ಮಾನ ಸ್ವೀಕರಿಸಬೇಕು" ಅಂತ್ ಕೇಳ್ಕಿಕೊಂಡಿದ್ರು!.

ಆದ್ರ , ಈ ಸಾಹಿತಿ  "ನಿಮ್ಮ ಅಭಿಮಾನಕ್ಕ ಧನ್ಯವಾದಗಳ್ರೆಪಾ....,   ನನ್ನ ಮನಿ ತುಂಬಾ ಈ ಸನ್ಮಾನದ ಶಾಲು, ಪ್ರಶಸ್ತಿ ಫಲ್ಕಾ ತುಂಬ್ಯಾವು, ಮತ್ತ  ನೀವು ಅವ್ನ ಕೊಟ್ರ ಅವುನ್ ಇಡಾಕ  ಮನಿ ಒಳ್ಗ ಜಾಗಾ ಇಲ್ಲಾ"!. "ನೀವು ಕೊಡೋ ಶಾಲು-ಹಾರಾ ತುರಾಯಿಗಳಿಂದಾ ನನ್ನ ಹೊಟ್ಟಿ ತುಂಬೋದಿಲ್ಲಾ"?.  "ನನ್ನ ಕಂಚಿನ್ ಪುತ್ಥಳಿನ ಸರ್ಕಲ್ಲನ್ಯಾಗ ನಿಲ್ಸತವಿ ಅಂತೀರಿ", ನೀವು ನನ್ನ ಕಂಚಿನ ಪುತ್ಥಳಿನ ಮಾಡ್ಸಾಕ ಲಕ್ಷಾಂತರ ರೂಪಾಯಿ ರೊಕ್ಕಾನ ಖರ್ಚ ಮಾಡ್ತೀರಿ!", "ಆ ಕಂಚಿನ  ಪುತ್ಥಳಿಗೆ ನೀವು ಖರ್ಚಮಾಡೋ ರೊಕ್ಕಾನ ನನ್ಗ ಕೊಡ್ರೀ"!, "ಜೀವತಾಂಗಿ ನಾನ್ ಸರ್ಕಲ್ಗೆ ಬಂದು  ನಿತ್ಕಂಡ್ ಬಿಡ್ತನಿ"!,  ಆ ರೊಕ್ಕಾ ನನ್ಗ ಕೊಟ್ಟ್ರ  ನನ್ನ ಸಮಸ್ಯೆ ಬಗಿಹರಿತಾವು"?, "ಮದ್ವಿಗೆ ಬಂದಿರೂ ಮಗ್ಳ ಮನ್ಯಾಗ್ ಅದಾಳ, ಅಕಿ ಮದ್ವಿ ಮಾಡತನಿ", ಅಂತ್ ಅಂದಿದ್ರು...

ಮುಂದ ಹೇಳಬ್ಯಾಡ್ ಬಿಡ್ರೀ ಕಾಕಾರ್!, ಸಾಕು. ನೀವು ಹೇಳಿದ್ದ ಕೇಳಿ ಆ "ನಿಜವಾದ ಸಾಹಿತಿ  ಸಂಕ್ಟಾ ಎಂತಾದ್ದೂ ಅನ್ನೂದು ನನ್ಗ ಅರ್ಥ ಆತು"!. "ಈ ನೀಚ ಸಾಹಿತಿಗಳಿಗೂ-ನಿಜವಾದ ಸಾಹಿತಿಗಳಿಗೂ ಇರೋ ವ್ಯತ್ಯಾಸ ನನ್ಗ ಗೊತ್ತಾತು"?. ನೀವು ಹೇಳಿದಮಾತ ಕೇಳಿ ನನ್ಗ ತಡ್ಯಾಕ್ ಆಗವಲ್ದು!, ನಡ್ರೀ ಅವ್ರ ಮನಿಗೆ ಹೋಗಿ ಬರೋಣ,  ಹೆಂಗಿದ್ರು ಪಾಟೀಲ್ರು ಸನ್ಮಾನ ಮಾಡಬ್ಯಾಡ್ರೀ ಅಂದಾರ್ ಅಂತೀರಿ!. ಈ ಶಾಲಾ, ಮ್ಯಾಲಿ ನಮ್ಮ ಸಾಹಿತಿಗೆ ಹಾಕಿ ಬರೋಣ ಬರ್ರೀ....?

"ಈಗ ಅವ್ರ ಕಣ್ಣಿನ ಆಪರೇಷನ್ ಆಗೇತಿ. ಮತ್ತೊಂದ ದಿವ್ಸ ಹೋಗೋಣು, ಅವ್ರು ರೆಷ್ಟ್ಯಾನ್ಯಾಗ ಅದಾರ್". ಅಂದಂಗ್ ಎನ್ಪಾ ನಿಮ್ಮ ಸಿಎಂ ಸಾಹೇಬ್ರು...  "ಪಾಟೀಲ್ರ ಸೇರದಂಗ್ ಡಜನ್ ಶಾಸಕ್ರನ್ ಮಂತ್ರಿ ಮಾಡ್ತಾರ್, ಇಲ್ಲಾ ನಾಳೆ ಬಾ.... ಕೂಗವ್ವ" ಅನ್ನೋತರ "ನಾಳೆ ಬನ್ನಿ, ಸಚಿವ ಸ್ಥಾನಗಳು ಖಾಲಿ ಇವೆ, ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ" ಅಂತ್ ದಿನಾ ದೂಡಿಕೆಂತ್ ಹೊಕ್ಕಾರ್?.

ಅದ್ ನನ್ಗು ಚಿಂತ್ಯಾಗೇತಿ ನೋಡ್ರೀ...!  "ಅನರ್ಹ ಶಾಸಕ್ರು ಗೆದ್ದ ಮರದಿವ್ಸ ಅವ್ರ್ನ ಮಂತ್ರಿ ಮಾಡ್ತವಿ ಅಂತ ಹೇಳಿದ್ದ ಸಿಎಂ! ಈಗ ನೋಡಿದ್ರ.... ಕೆಂದ್ರದವ್ರ್ನ ಹೇಳಬೇಕು".  "ಈಗ ರಾಹುಕಾಲ, ಯಮಗಂಡ ಕಾಲ ಐತಿ, ಬರ ಐತಿ, ಪ್ರವಾಹ ಬಂದೈತಿ, ದೇಶದ್ಗಾದ ಪೌರತ್ವಕಾಯ್ದೆ ಗದ್ಲ ಐತಿ" ಅಂತ್ "ನೆಪಾ ಹೇಳಿಕೊಂಡು ಸಂಪುಟಾ ವಿಸ್ತರಣೆ ಮಾಡೋದ್ನ ಮುಂದುಡಿಕೊಂಡು ಹೊಂಟಿರೋದ ನೋಡಿದ್ರ ಈವರ್ಷ ಸಚಿವ ಸಂಪುಟಾ ವಿಸ್ತರಣೆ ಆಗೂ ಹಂಗ ಕಾಣವಲ್ದನೋಡ್ರೀ".  ಈಗ ನೋಡಿದ್ರ "ಮಂಗಳೂರಾಗ ಪೌರತ್ವದ ಗದ್ಲದಾಗ್ ಪೊಲೀಸ್ರ ಹೊಡ್ದ ಗುಂಡೆಗೆ ಇಬ್ಬ್ರು ಸತ್ತಹೋಗ್ಯಾರ್"..!. "ಸದ್ಯಕ್ ಸಂಪುಟಾ ವಿಸ್ತರಣೆ ಡೌಟ ಅನಸಾಕ ಹತ್ತೇತಿ"....?

ನೀ ಏನ್ ಅನ್ನೂ, "ನಿಮ್ಮ ಮುಖ್ಯಮಂತ್ರಿ ಕಾಲಗುಣಾ ಸರಿ ಇದ್ದಂಗ್ ಕಾಣ್ಸೋದಿಲ್ಲ ನೋಡೋ"?,

"ಯಾವ್ದರ್ ಕೇರ್ಳದ ಜೋತಿಷಿಗೆ ನಿಮ್ಮ ಸಿಎಂನ್ ಕಾಲು ತೋರ್ಸಾಕ ಹೇಳೋ"...!

ಇದೇನ್ರಿ ನೀವು, ಹಿಂಗ್ ಅಸಂಯಿ ಮಾಡ್ತೀರಿ!, "ಎಲ್ಲಾರು ಕೈ ನೋಡಿ ಜೋತಿಷ್ಯಾ ಹೇಳ್ತಾರ ಅಂತಾದ್ರಾಗ ನೀವು ನೋಡಿದ್ರ ಕಾಲ ತೋರ್ಸಿ ಜ್ಯೋತಿಷ್ಯಾ ಕೇಳೂ ಅಂತೀರಿ"..?.

ಮತ್ತೇನ್ಲೇ....,  "ನಿಮ್ಮ ಯಡೆಯೂರ್ಸಪ್ಪ ಪದೇ ಪದೆ ಕೆರ್ಳಕ್ಕ ಹೋಗೋದು ನೋಡಿದ್ರ ಡೌಟ್ ಬರ್ತತಿ"!, ಎರ್ಡಸಾವ್ರಿದಾ ಎಂಟರಾಗ ಸಿಎಂ ಆಗಿತ್ತು, ಅವಾಗ ಹಾವೇರಿಯೋಳ್ಗ ಗೋಲಿಬಾರ್ ಆಗಿ ಇಬ್ರು ರೈತರು ಸತ್ತಿದ್ದ್ರು", "ಈಗ ಮತ್ತ  ಮುಖ್ಯಮಂತ್ರಿ ಆಗೇತಿ, "ಈಗ ನೋಡಿದ್ರ ಮಂಗಳೂರಾಗ ಇಬ್ಬ್ರು ಗೋಲಿಬಾರ್ಗೆ ಸತ್ತಾರ"!, "ಹಿಂಗ್‍ಆದ್ರ ಹೆಂಗೋ...?.  "ನೋಡ್ಪಾ, ಸತ್ತಜೀವಾ ವಾಪಾಸ ಬರೋದಿಲ"....., "ಸತ್ತೋರ ಮನಿಮಂದಿ ಭೂಮಿಮ್ಯಾಗ್ ಇರೋಮಟಾ  ಮನಿಯವ್ರನ್ ಕಳ್ಕಂಡಿರೋ ದುಃಖ ಇರ್ತೈತಿ". "ಆಡಳಿತಾ ನಡ್ಸಾಕ ಬಂದ್ರ ಕುರ್ಚೆಮ್ಯಾಕ್ ಕುತ್ಗಾಬೇಕು, ಇಲ್ಲಾಂದ್ರ ಯಾವುದಾದ್ರು ದೊಡ್ಡಹುದ್ದೆದಾಗ ಸುಮ್ನ ಕುತಾಕಬೇಕ್". "ಗೋಲಿಬಾರ್ ನಡ್ದೈತಿ, ಅದ್ನ ಒಪ್ಪೆಗೊಳ್ಳಾಕ ಮೀನಾ ಮೇಷಾ ಏಣ್ಸಿದ್ರ ಜನ ಏನಂತ್ ಇಳ್ಕಾಬೇಕು ಇವ್ರ್ನ"!, "ಗೃಹ ಮಂತ್ರಿ ಬೊಮ್ಮಾಯಿ ಒಂದ್ ತರಾ ಹೇಳ್ಕಿ ಕೊಟ್ರ, ಈಸಿಎಂ ಇನ್ನೋಂತಾ ಹೇಳ್ಕಿ ಕೊಡತೈತಿ".! ಇವ್ರ ನಡ್ವು ಸಮನ್ವಯ ಇಲ್ಲಾ ಅಂದಗಾತು?.

"ಅಂದ್ರ ನಿಮ್ಮ ಮಾತಿನ ಅರ್ಥ ಏನು ಅಂತ್"?, "ಅಂದ್ರ, ನಮ್ಮ ಸಿಎಂ... ಸಿಎಂ ಸ್ಥಾನಕ್ಕ ರಾಜೀನಾಮೆ ಕೊಡಬೇಕು ಅಂತಿರೇನು"?. "ಅದು, ಮದ್ಲ ಅತ್ತು-ಕರ್ದು, ಅವ್ರ್ನ- ಇವ್ರ್ನ ಕೈಕಾಲ ಬಿದ್ದು, ಯಾರಾರ್ನೋ ರಾಜೀನಾಮೆ ಕೊಡ್ಸಿ, ಮುಖ್ಯಮಂತ್ರಿ ಆಗೇತಿ?. "ಈಗ ಶಿವನೆ ಅಂತ್ ಆಡಳಿತಾ ನಡ್ಸಾಕ ಹತ್ತೇತಿ.... ಇಂತಾದ್ರಾಗ್ ಹಿಂಗೆಲ್ಲಾ ಆರೋಪ ಮಾಡಿದ್ರ ಹೆಂಗ್ಯರೀ"...?

ಹೌದೋ..., "ಜನಾ ಮೆಚ್ಚೋಹಂಗ್ ಆಡಳಿತಾ ನಡ್ಸಬೇಕು, ಜನಾ ಸಾಯೋಹಂಗ್ ಆಡಳಿತಾ ನಡ್ಸಬಾರ್ದೂ".

"ಈವ್ರ ಸಂಪುಟ್ದಾಗ ಮಿನಿಷ್ಟ್ರಗಳು ಒಬ್ರರ  ನೆಟ್ಗ ಅದಾರನು"?.

"ಯಾಕ್ರೀ ಏನಾಗೇತಿ?, ಎಲ್ಲಾರು ಹಂಗ್ ಒಂದೊಂದ್ ಮುತ್ತ ಇದ್ದಂಗ್ ಅದಾರಲ್ರೀ"..!

"ಹೌದ್ಪಾ, ಹೌದು....ಮುತ್ತಿದ್ದಂಗ್ ಅದಾರ್?. ಕಿರಬೆರ್ಳನಿಂದಾ ನೆತಿ ತಮಟಾ ಏಕ್ ಅದಾರ್"!. "ಬಾಯಿ ತಗ್ದ್ರ ಹಂಗ್ ಮುತ್ತ ಉದ್ರತಾವು"?, "ಇವ್ರು ಉದ್ರಿಸಿದ ಮುತ್ತಗಳನ್ನ ಹಂಗ್ ಹೆಡ್ಗಿ ತುಂಬಬೇಕು" ಅಷ್ಟ ಚಂದ್ ಮಾತಿನ್ಯಾಗ ಮುತ್ತ ಉದ್ರಸ್ತಾರ ಇವ್ರು?".

ಕಾಕಾ "ಇವ್ರ್ನ ಕಂಡ್ರ ನಿಮಗಾಕ್ ಹೊಟ್ಟಿ ಉರಿ"..?.

ಮತ್ತೇನ್ಲೇ ಮಂಗ್ಯಾನಮಗ್ನ!, ರೈಲ್ವೇ ಮಂತ್ರಿ ಅಂಗ್ಡಿ ಸಾಹೇಬ್ರು "ಯಾರಾದ್ರು ರೈಲ್ವೆ ಆಸ್ತಿ ನಾಶ ಮಾಡಿದ್ರ ಅಂತ್ವರಿಗೆ ಗುಂಡಿಟ್ಟು ಕೊಂದಹಾಕ್ರೀ" ಅಂತ್ ಫರ್ಮಾನ ಹೊಂಡ್ಯಾರ್.  ಇಲ್ಲೇ ನೋಡಿದ್ರ "ರಾಜ್ಯದಾಗ ಬಿದ್ದಿರೋ ಬೆಂಕಿನ ಆರ್ಸೋ ಬದ್ಲೂ, ಮತ್ತಟು ಹತಿಗೆಂಡ ಉರಿಲಿ ಅಂತ್ ಹೆಂಗ್ ಬೇಕ್ ಹಂಗ್ ಸಚಿವ್ರು, ಸಂಸದ್ರು, ಶಾಸಕ್ರು ಹೇಳ್ಕೀ ನೀಡಾಕ ಹತ್ಯಾರ್"?. "ವಿರೋಧಪಕ್ಷದವ್ರನ್ ಮಂಗಳೂರೊಳ್ಗ  ಬಿಡ್ದಂಗ್ ಅರೇಷ್ಟ ಮಾಡ್ಯಾರ್"!. "ಸಿದ್ದ್ರಾಣ್ಣ ವಿರೋಧಪಕ್ಷದ ನಾಯ್ಕ ಆಗಿ ಅದ್ನು ಸತಗಿ ಮಂಗಳೂರ್ಗೆ ಹೋಗಾಕ್ ಬಿಡ್ದಂಗ್ ನೋಟಿಸ್ ಕೊಟ್ಟಾರ್". "ರಾಜ್ಯದಾಗ ಪ್ರಜಾಪ್ರಭುತ್ವದ ಆಡಳಿತಾ ಐತೋ, ಹಿಟ್ಲರ್ ಆಡಳಿತಾ ಬಂದೈತೋ"....? ಹೇಳೋ ಬೋಳಿಕೆ....!.

ಕಾಕಾರ ನೀವು "ದೊಡ್ಡ , ಡೊಡ್ಡ ವಿಷ್ಯಾ ಹೇಳಾಕಹತ್ತಿದ್ರ ನನ್ಗ ಏನ್ ಮಾತಾಡಬೇಕು ಅನ್ನೋದು ತಿಳಿಯಂಗಿಲ್ಲಾ"..!.

ಹೌದೋ ಶಾಣ್ಯಾ, ಹೌದ್!. ಎನು ತಿಳಯದಂತಾ ಮಳ್ಳಾ ನೋಡ ನಿ, "ಹುಷಾರು, ತಮ್ಮ ಈಪೌರತ್ವ ಕಾಯ್ದೆ ವಿರೋಧ್ಸಿ ಹೋರಾಟ ಮಾಡೋರ ಹತ್ರ ಅಪ್ಪಿತಪ್ಪಿ ಹೋಗಬ್ಯಾಡಾ"..?. "ಅಪ್ಪಿ-ತಪ್ಪಿ ರೈಲ್ವೆಕಡಿಗಂತು ಮದ್ಲ ಹೋಗಬ್ಯಾಡ್". "ಅಲ್ಲೆ ಯಾರರ ರೈಲ್ವೆಕ್ ಕಲ್ಲ ಹೊಡದ್ರ ಅದ್ನ ಹಣ್ಕಿ ಹಾಕಾಕ ಹೋದಿ ಅಂದ್ರ ಮಗ್ನ, ಹಾದಿಹೆಣಾ ಆಕ್ಕಿ ನೋಡ್" ಹುಷಾರ್!. ಅಂಗ್ಡಿ ಸಾಹೇಭ್ರ   ಗುಂಡ್ ನಿನ್ಗು ಬಿದ್ದಾವು!...ಹೊತ್ತಿರ್ತಾ ಮನಿಸೇರ್ಕಾ ಹೋಗಲೇ ಎನ್ನುತ್ತ ಕಾಕಾ ಮನೆಕಡೆಗೆ ದೌಡಾಯಿಸಿದಾ...