ಕಾವಲುಗಾರರ (ಚೌಕೀದಾರರ) ನೈಜ ಸಮಸ್ಯೆ ಅರಿವಿದೆಯೇ ಪ್ರಧಾನಿ ಮೋದಿಯವರೇ?

ಕಾವಲುಗಾರರ (ಚೌಕೀದಾರರ) ನೈಜ ಸಮಸ್ಯೆ ಅರಿವಿದೆಯೇ ಪ್ರಧಾನಿ ಮೋದಿಯವರೇ?

ಮಿ. ನರೇಂದ್ರ ಮೋದಿಯವರೇ,

2014ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ನಾಯಕರಾಗಿದ್ದ ಮಣಿಶಂಕರ್ ಅಯ್ಯರ್ ಕಾರ್ಯಕ್ರಮವೊಂದರಲ್ಲಿ ಚಾಯ್ವಾಲಾ ಈ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದರು. ಆಗ ಪ್ರಚಾರಕ್ಕಾಗಿ ಇದೇ ಹೇಳಿಕೆಯನ್ನೇ ಬಿಜೆಪಿ, ಸಂಘ ಪರಿವಾರ ಮತ್ತು ಎನ್ ಡಿ ಎ ಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನೀವೆಲ್ಲ ಬಳಸಿಕೊಂಡಿರಿ.

2019ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಿಮ್ಮನ್ನು ನೀವೇ ದೇಶದ ಚೌಕೀದಾರ (ಕಾವಲುಗಾರ) ಎಂದು ಕರೆದುಕೊಂಡಿರಿ. ಫಕೀರ, ಶ್ರಮಿಕ ನಂ 1, ಹಿಂದೂ ಹೃದಯ ಸಾಮ್ರಾಟ, ಗರೀಬ್ (ಬಡವ), ಗಂಗಾ ಮಾತೆಯ ಪುತ್ರ, ಮಜ್ದೂರ್ (ಕೂಲಿ), 56 ಇಂದಿನ ಎದೆ ಉಳ್ಳವನು, ಪ್ರಧಾನ ಸೇವಕ ಇತ್ಯಾದಿಯಾಗಿ ಇದುವರೆಗೆ ನಿಮ್ಮನ್ನು ನೀವು ಕರೆದುಕೊಂಡಿದ್ದೀರಿ.

ನಿಮಗೆ ಯಾವುದಾದರೂ ಕಾವಲುಗಾರನ, ಚಾಯ್ವಾಲಾ (ಚಹಾ ಮಾರುವವನ), ಕೂಲಿ ಕಾರ್ಮಿಕನ, ಬಡವನ ಇಂದಿನ ನೈಜ ಪರಿಸ್ಥಿತಿ ಕುರಿತು ಅರಿವಿದೆಯೇ? ಇನ್ನೇನು 2019ರ ಲೋಕಸಭೆ ಚುನಾವಣೆ ಮುಗಿದು, ಮತಯಂತ್ರಗಳು ಭದ್ರವಾಗುವ ಹೊತ್ತು ಸಮೀಪಿಸಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಮೋದಿ ಸರ್ಕಾರ 300ರ ಗಡಿ ದಾಟಲಿದೆ ಎಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಛ್ನಿಂದ ಕಾಮರೂಪ್ವರೆಗೆ ಇಡೀ ದೇಶ ಹೇಳುತ್ತಿದೆ ಎಂದು ನೀವೇ ಹೇಳಿಕೊಂಡಿದ್ದೀರಿ. ಇರಲಿ, ನಿಮ್ಮ ಇತ್ತೀಚಿನ ಭಾಷಣಗಳಲ್ಲಿ ಮೋದಿ ಶಬ್ದ ಹೊರತುಪಡಿಸಿ ಯಾವುದೇ ಹೊಸ ಪದಪುಂಜಗಳು ಬಳಕೆಯಾಗಿಲ್ಲ. ಅಷ್ಟು ಆತ್ಮರತಿಗೆ ತಾವು ಇಳಿದಿದ್ದೀರಿ. ಮರೆಯುವ ಮುನ್ನ ತಮ್ಮನ್ನು ತಾವು ಕರೆದುಕೊಂಡಿರುವ ಉದ್ಯೋಗ ಮಾಡುವವರ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ. ಹೇಗಿದ್ದರೂ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಇದೇ ಅವಧಿಯನ್ನು ತಾವು ಮಠ, ಮಂದಿರಗಳಿಗೆ ಭೇಟಿ ಕೊಡಲು ಬಳಸಿಕೊಳ್ಳುತ್ತೀದ್ದೀರಿ. ಹೇಗೂ ನೀವು ಈಗ ಮಂದಿರಗಳಿಗೆ ಭೇಟಿ ನೀಡುವ ಸಮಯದಲ್ಲಿ ಎದುರಾಗುವ ಕಾವಲುಗಾರ, ಚಾಯ್ ವಾಲಾ, ಕೂಲಿ ಕಾರ್ಮಿಕ, ಬಡವರನ್ನು ಒಮ್ಮೆ ಭೇಟಿಯಾಗಿ ಅವರೊಂದಿಗೆ ಚರ್ಚಿಸಿ. ಇನ್ನೊಂದು ಅವಧಿಗೆ ಈ ದೇಶದ ನಾಗರಿಕರು ತಮಗೆ ಅಧಿಕಾರ ನಡೆಸಿ ಎಂದು ಆಶೀರ್ವದಿಸಿದರೆ, ಆಗ ಅವರ ಸಮಸ್ಯೆಗಳನ್ನು ಪರಿಹರಿಸಿ.

1.          ದೇಶದ ಕಾವಲುಗಾರರ (ಚೌಕೀದಾರರ) ಸಮಸ್ಯೆಗಳು:

ಮೋದಿಯವರೇ, ದಿನಕ್ಕೆ ಕನಿಷ್ಠ 12 ಗಂಟೆ ದುಡಿಮೆ. ಪಿಎಫ್, ಇಎಸ್ಐ ಭಾಗ್ಯ ಬಹುತೇಕರಿಗೆ ಇಲ್ಲ. ತಾವು ಕೆಲಸ ಮಾಡುತ್ತಿರುವೆಡೆಯಲ್ಲೇ ಬಹುತೇಕರು ಸ್ನಾನ, ಅಡುಗೆ, ಶೌಚಕಾರ್ಯ ಇತ್ಯಾದಿಗಳಿಗೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಬಟ್ಟೆ ಒಗೆಯಲು, ಒಣಗಿಸಲು ಬಹುತೇಕ ಕಾವಲುಗಾರರಿಗೆ ಸ್ಥಳಾವಕಾಶ ಇರುವುದಿಲ್ಲ. ಇನ್ನು ಕೆಲವು ಕಾವಲುಗಾರರು ತಾವು ಕೆಲಸ ಮಾಡುತ್ತಿರುವ ಸ್ಥಳದಲ್ಲೇ ತಮ್ಮ ಮಡದಿ, ಮಕ್ಕಳನ್ನೂ ಸಾಕುತ್ತಿರುತ್ತಾರೆ. ಅಲ್ಲೇ ಅವರ ನಿತ್ಯಕರ್ಮಗಳೂ ನಡೆಯುತ್ತವೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗದೆ ಮಕ್ಕಳನ್ನು ಕೂಲಿ ಅಥವಾ ಭಿಕ್ಷಾಟನೆಗೆ ಕಳುಹಿಸುವ ಕಾವಲುಗಾರರ ಸಂಖ್ಯೆ ದೇಶದಲ್ಲಿ ಬೃಹತ್ ಸಂಖ್ಯೆಯಲ್ಲಿದೆ. ಇದರ ಜೊತೆಗೆ, ಕಾವಲುಗಾರರ ಹೆಂಡತಿ, ಮಕ್ಕಳ ಮೇಲೆ ಕಣ್ಣು, ಕೈ, ಬಾಯಿ ಹಾಕುವವರ ಸಂಖ್ಯೆಯೂ ಬೃಹತ್ ಪ್ರಮಾಣದಲ್ಲಿದೆ. ಮೋದಿಯವರೇ, ಒಮ್ಮೆ, “ನಾನು ಚೌಕೀದಾರ” ಎಂದು ಹೇಳಿಕೊಂಡ ಕಾರಣಕ್ಕಾಗಿ ಒಂದಷ್ಟು ಚೌಕೀದಾರರ ವೈಯಕ್ತಿಕ ಕಷ್ಟಗಳತ್ತ ಗಮನ ಹರಿಸಿ.

2.          ದೇಶದ ಚಹಾ ಮಾರಾಟಗಾರರ (ಚಾಯ್ವಾಲಾ) ಸಮಸ್ಯೆಗಳು

ಮೋದಿಯವರೇ, ತಾವು ಯಾವುದೋ ರೈಲ್ವೇ ನಿಲ್ದಾಣದಲ್ಲಿ ಚಾಯ್ವಾಲಾ ಆಗಿದ್ದಿರಿ ಎಂದು ಹೇಳಿಕೊಂಡಿದ್ದೀರಿ. ಆದರೆ, ನೀವು ಹೇಳಿದ ಕಾಲಕ್ಕೂ ಅಲ್ಲಿ ರೈಲ್ವೇ ನಿಲ್ದಾಣ ನಿರ್ಮಾಣವಾದ ಕಾಲಕ್ಕೂ ವ್ಯತ್ಯಾಸವಿದೆ. ಇರಲಿ… ನೀವು ಚಾಯ್ವಾಲಾ ಎಂದು ಹೇಳಿಕೊಂಡ ಕಾರಣಕ್ಕೆ, ದೇಶದ ಚಾಯ್ವಾಲಾಗಳಾನ್ನೊಮ್ಮೆ ಮಾತನಾಡಿಸಿ. ಅವರು ಪ್ರತಿನಿತ್ಯ ಮುಂಜಾನೆ 5ರಿಂದ ರಾತ್ರಿ 8:30 – 9:30ರವರೆಗೆ ದುಡಿಯುತ್ತಾರೆ. ಮುಂಜಾನೆ ವಾಕಿಂಗ್ಗೆ ಬರುವ ಶ್ರೀಮಂತರಿಂದ, ದಿನನಿತ್ಯದ ದುಡಿಮೆಗಾಗಿ ಹೋರಾಡುತ್ತಿರುವವರ ಚಹಾ ಕುಡಿಯುವ ಆಸೆಯನ್ನು ತಣಿಸುವ ಚಾಯ್ವಾಲಾಗಳು ಕನಿಷ್ಠ 12-16 ಗಂಟೆಗಳ ಕಾಲ ನಿಂತೇ ಚಹಾ ಮಾಡುವ, ಚಹಾ ಲೋಟಗಳನ್ನು ತೊಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಅವರ ದೈನಂದಿನ ಚಟುವಟಿಕೆಯ ಕಾರಣದಿಂದಾಗಿ ಅವರ ದೇಹದ ಭಾರವನ್ನು ಹೊತ್ತ ಅವರ ಕಾಲುಗಳು ದಣಿದು, ಕೆಲವು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ನೀವು ದೇವಾಲಯಗಳಿಗೆ ಭೇಟಿ ನೀಡುವ ವೇಳೆ ಒಮ್ಮೆ ದೇಶದ ಚಾಯ್ವಾಲಾಗಳನ್ನು ಭೇಟಿಯಾಗಿ ಅವರ ಕಷ್ಟಸುಖಗಳನ್ನು ವಿಚಾರಿಸಿ. ಅವರ ಮಕ್ಕಳು, ಹೆಂಡತಿಯ ಪರಿಸ್ಥಿತಿ, ಆರೋಗ್ಯದ ಕುರಿತು ತಿಳಿಯಿರಿ.

3.          ದೇಶದ ಕೂಲಿಕಾರರ (ಶ್ರಮಿಕರು) ಸಮಸ್ಯೆಗಳು

ಮೋದಿಯವರೇ, ತಮ್ಮನ್ನು ತಾವು ದೇಶದ ಶ್ರಮಿಕ ನಂಬರ್ 1 ಎಂದು ನೀವು ಕರೆದುಕೊಂಡಿದ್ದೀರಿ. 2022ಕ್ಕೆ ದೇಶದಲ್ಲಿರುವ ಎಲ್ಲ ಕುಟುಂಬಗಳಿಗೂ ಸುಸಜ್ಜಿತ ಮನೆ ಕೊಡುವುದಾಗಿ ವಾಗ್ದಾನ ಮಾಡಿದ್ದೀರಿ. 18 ತಿಂಗಳಲ್ಲಿ ದೇಶದ ಎಲ್ಲ ಕುಟುಂಬಗಳಿಗೂ ವಿದ್ಯುತ್ ಸೌಕರ್ಯ ಒದಗಿಸುವ ಭರವಸೆಯನ್ನೂ ನೀಡಿದ್ದಿರಿ. ಆದರೆ, ಅದು ಸಾಧ್ಯವಾಗಿಲ್ಲ ಎಂಬ ಸಂಗತಿ ನಿಮ್ಮ ಕಾರ್ಯಭಾರದ ಒತ್ತಡದ ಕಾರಣದಿಂದಾಗಿ ಅರಿವಿಗೆ ಬರದಿರಬಹುದು. ನಿಮ್ಮ ಅಧಿಕಾರಿಗಳು ಈ ವಿಷಯವನ್ನು ನಿಮ್ಮಿಂದ ಮರೆಮಾಚಿರಬಹುದು.  ನೀವು 2019ರ, ಮೇ 23ರ ನಂತರ ಮತ್ತೊಮ್ಮೆ ಪ್ರಧಾನಿಯಾದಲ್ಲಿ ದೇಶದ ಕೂಲಿಕಾರ್ಮಿಕರ ಪರಿಸ್ಥಿತಿ ಏನಾಗಿದೆ? ಎಂದು ತಿಳಿದುಕೊಡು ಭವಿಷ್ಯದಲ್ಲಿ ಅವರಿಗೆ ಭದ್ರತೆ ನೀಡಿ. ನಿಮ್ಮ ಆಯುಷ್ಮಾನ್ ಭಾರತ್ ಯೋಜನೆ ಎಷ್ಟು ಕೂಲಿ ಕಾರ್ಮಿಕರಿಗೆ ಪರಿಚಿತ ಎಂದು ತಿಳಿದುಕೊಳ್ಳಿ. ದರಿದ್ರರೇ ದೇಶದ ದೈವ ಎಂಬ ಹೇಳಿಕೆಯೊಂದಿದೆ. ನೀವು ದೇವಾಲಯಗಳಿಗೆ ಭೇಟಿ ನೀಡಿ, ದೇವಾನುದೇವತೆಗಳಿಂದ ಆಶೀರ್ವಾದ ಪಡೆಯುವ ಸಮಯದಲ್ಲಿ ದೇಶದ ಕೂಲಿ ಕಾರ್ಮಿಕರ ಪರಿಸ್ಥಿತಿಯತ್ತ ಗಮನ ಕೊಡಿ. ಅವರು ಶಾಲೆಗೆ ಮಕ್ಕಳನ್ನು ಸೇರಿಸಲು ಸಾಧ್ಯವಾಗದೆ ಪರದಾಡುತ್ತಿರುವ ನೋವಿನ ಕತೆಗಳಿಗೆ ಕಿವಿಯಾಗಿ, ಇನ್ನೂ ದೇಶದಲ್ಲಿ ಎಲ್ಪಿಜಿ ಸೌಲಭ್ಯವಿಲ್ಲದೇ ಹಸಿ ಸೌದೆ, ಪೇಪರ್, ಚಿಂದಿ ಇತ್ಯಾದಿಗಳಿಂದ ಅಡುಗೆ ಮಾಡುತ್ತಿರುವ ದೇಶದ ಹೆಂಗಸರ ಕಷ್ಟಗಳನ್ನು ಕಣ್ತುಂಬಿಕೊಳ್ಳಿ. ಅಚ್ಚೇದಿನ್ ತರುತ್ತೇನೆ ಎಂದು ಹೇಳಿ ಸಿಲಿಂಡರ್ ದರ ಹೆಚ್ಚಿಸಿರುವುದಕ್ಕೆ ಸಿಲಿಂಡರ್ ಕೊಳ್ಳಲಾಗದೆ ಪರದಾಡುತ್ತಿರುವ ಕೂಲಿ ಕಾರ್ಮಿಕರ ಸಮಸ್ಯೆಯನ್ನು ನಿಮ್ಮ ಮುಂದಿನ ಅಧಿಕಾರದ ಅವಧಿಯಲ್ಲಾದರೂ ಪರಿಹರಿಸಿ.

ಪ್ರಧಾನಿ ಮೋದಿಯವರೇ, ಈ ದೇಶದ ಜನ ನಿಮ್ಮ ಸಬ್ ಕಾ ಸಾಥ್ ಸಬ್ ಕಾ ವಿಕಾಸ್(ಎಲ್ಲರೊಂದಿಗೆ ಎಲ್ಲರ ವಿಕಾಸ), ಅಚ್ಛೇ ದಿನ್ ಆನೇವಾಲಾ ಹೈ (ಒಳ್ಳೆಯ ದಿನಗಳು ಮುಂದೆ ಬರಲಿವೆ) ಇತ್ಯಾದಿ ಘೋಷಣೆಗಳನ್ನು ನಂಬಿ 2014ರಲ್ಲಿ ಮತ ಹಾಕಿದ್ದರು. ಇದೇ ಜನ ನಿಮಗೆ ಮತ್ತೊಂದು ಅವಧಿಗೆ ಆಶೀರ್ವಾದ ಮಾಡಿ ಅಧಿಕಾರವನ್ನು ನೀಡಿದರೆ ದಯಮಾಡಿ 70 ವರ್ಷಗಳ ಕಾಲ ಕಾಂಗ್ರೆಸ್, ನೆಹರೂ, ಇಂದಿರಾ, ರಾಜೀವ್ ಏನನ್ನೂ ಮಾಡಲಿಲ್ಲ ಎಂದು ಮಾತ್ರ ನೆಪ ಹೇಳಬೇಡಿ.

ನೀವೇ ಹೇಳಿದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಅಚ್ಛೇದಿನ್, ಎಲ್ಲರಿಗೂ ನೀರು, ವಿದ್ಯುತ್, ಮನೆ, ವಿದೇಶದಲ್ಲಿರುವ ಕಪ್ಪು ಹಣವನ್ನು ನೂರೇ ದಿನದಲ್ಲಿ ವಾಪಸ್ ತರುವುದು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದು ಇತ್ಯಾದಿಗಳತ್ತ ಗಮನ ಹರಿಸಿ. ಯಾವುದೇ ಕಾರಣಕ್ಕೂ ಪಕೋಡ ಮಾಡಿ 200 ರೂಪಾಯಿ ಸಂಪಾದಿಸಬಹುದು ಎಂದು ಮಾತ್ರ ಹೇಳಬೇಡಿ. ಮೋಡಗಳಿದ್ದಾಗ ರೆಡಾರ್ ಕಣ್ಣು ತಪ್ಪಿಸಬಹುದು, ನಾನು ಕ್ಯಾಮೆರಾ ಬಳಸಿ ಫೋಟೋ ತೆಗೆದು, ಈ ಮೇಯ್ಲ್ ಮಾಡಿದೆ, ಚರಂಡಿಯಿಂದ ಗ್ಯಾಸ್ ಉತ್ಪಾದಿಸಿ ಚಹಾ ಮಾಡಿದೆ ಎಂಬತಹ ಹೇಳಿಕೆಗಳನ್ನು ಪುನರಾವರ್ತಿಸಬೇಡಿ.

ವಿದೇಶಕ್ಕೆ ಹೋಗಿ ನಮ್ಮ ದೇಶ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿತ್ತು. ನಾನು ಬಂದ ಮೇಲೆ ಸುಧಾರಿಸಿದೆ ಎನ್ನಬೇಡಿ. ವಿದೇಶಕ್ಕೆ ಹೋಗಿ ನಮ್ಮ ರಾಷ್ಟ್ರಗೀತೆ ನುಡಿಯವ ವೇಳೆ ನಡೆದು ಅವಮಾನಿಸಬೇಡಿ, ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿ ಸುಸ್ತಾಗಿ, ರಾಷ್ಟ್ರಗೀತೆ ನುಡಿಸುವ ವೇಳೆ ನೀರು ಕುಡಿದು ಅವಮಾನ ಮಾಡಬೇಡಿ. ನಿಮ್ಮ ಅನುಯಾಯಿಗಳು ಗೋಭಯೋತ್ಪಾದಕರಾಗಿ ದೇಶದ ದಲಿತರು, ಅಲ್ಪಸಂಖ್ಯಾತರನ್ನು ಹಲ್ಲೆಗೈಯುವಾಗ, ಹತ್ಯೆಗೈಯುವಾಗ, ನಿಮ್ಮ ಪಕ್ಷದ ನಾಯಕರೇ aಗೋಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವಾಗ, ನಿಮ್ಮ ಸೈದ್ಧಾಂತಿಕ ವಿರೋಧಿಗಳಿಗೆ ಸುಪಾರಿ ಕೊಡುವಾಗ, ಅವರನ್ನು ಹತ್ಯೆಗೈಯುವಾಗ, ಗಾಂಧಿ ಹತ್ಯೆಯನ್ನು ಸಮರ್ಥಿಸಿ ನಿಮ್ಮ ಪಕ್ಷದ ನಾಯಕರು ಹೇಳಿಕೆ ನೀಡುವಾಗ, ಗೋಡ್ಸೆಯನ್ನು ದೇಶಭಕ್ತ ಎನ್ನುವಾಗ, ಟ್ವೀಟ್ ಮಾಡುವಾಗ ನೀವು ಮೌನಿ ಬಾಬಾ ಆಗಬೇಡಿ, ಹಿಮಾಲಯಕ್ಕೆ ಅಥವಾ ಕಾಡಿಗೆ ಹೋಗಬೇಡಿ. ದಯಮಾಡಿ, ನಿಮ್ಮ ಬೆಂಬಲಿಗರಿಗೆ ಬುದ್ಧಿ ಹೇಳಿ.

ಮಾತೆ ಹೀರಾಬೆನ್ರನ್ನು ಮನೆಗೆ ಕರೆಸಿಕೊಂಡು, ಕ್ಯಾಮೆರಾಮೆನ್ಗಳ ಮೆರವಣಿಗೆ ಮಾಡಬೇಡಿ, ಅಮ್ಮನ ಮನೆಗೆ ಹೋಗಿ ಸಿಹಿ ತಿನ್ನಿಸಿ, ಅವರು ಕರವಸ್ತ್ರವನ್ನು ತೆಗೆದುಕೊಂಡು ಬಾಯಿ ಒರೆಸಿಕೊಳ್ಳಲು ಹೋದಾಗ ಅವರ ಕೈಯಿಂದ ಕರವಸ್ತ್ರವನ್ನು ಕಿತ್ತುಕೊಂಡು ಬಾಯಿ ಒರೆಸಿಕೊಳ್ಳಬೇಡಿ, ನನ್ನ ಹೆಂಡತಿಯ ಕುರಿತು ಮಾಹಿತಿ ಇಲ್ಲ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಡಿ, ನಿಮ್ಮ ಭದ್ರತಾ ಸಿಬ್ಬಂದಿ ಮತ್ತು ಸಹೋದ್ಯೋಗಿ ಮಂತ್ರಿಗಳು ನಿಮ್ಮನ್ನು ಜೂಮ್ ಮಾಡಿರುವ ಕ್ಯಾಮೆರಾಗೆ ಅಡ್ಡ ಬಂದಾಗ ಗದರಬೇಡಿ, ವಿದೇಶೀಯರು ಬಂದಾಗ ಅವರ ಕೈಕುಲುಕಲು ಮತ್ತು ಅಪ್ಪಿಕೊಳ್ಳಲು ಹೋದಾಗ ಅವರು ನಿಮಗೆ ಕೈಮುಗಿಯುವ ಪರಿಸ್ಥಿತಿಯನ್ನು ನಿರ್ಮಿಸಬೇಡಿ, ಯೋಗ ಮಾಡುತ್ತೇನೆ ಎಂದು ಕ್ಯಾಮೆರಾಗಳನ್ನು ತರಿಸಿಕೊಂಡು ಟ್ರೋಲ್ಗೆ ಗುರಿಯಾಗಬೇಡಿ, ಟ್ವೀಟರ್ಗಳಲ್ಲಿ ಕಪೋಲಕಲ್ಪಿತ ಕತೆಗಳನ್ನು ಹರಿಬಿಡಬೇಡಿ.

ವಂದನೆಗಳೊಂದಿಗೆ.                                                                                   

          ಡಾ. ಪ್ರದೀಪ್ ಮಾಲ್ಗುಡಿ

                                                                           ಪತ್ರಕರ್ತ ಮತ್ತು ಸಂಶೋಧಕ