ರಾಜಕಾರಣಿಗಳ ನೈತಿಕತೆ, ಲೆಕ್ಕಾಚಾರಗಳು, ಸ್ವಜನ ಪಕ್ಷಪಾತ ಮತ್ತು ಹೇಡಿತನ

ರಾಜಕಾರಣಿಗಳ ನೈತಿಕತೆ, ಲೆಕ್ಕಾಚಾರಗಳು, ಸ್ವಜನ ಪಕ್ಷಪಾತ ಮತ್ತು ಹೇಡಿತನ

ರಾಜಕಾರಣಿಗಳನ್ನು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಅಧ್ಯಯನ ಮಾಡುತ್ತಿರುವ ನಾನು, ಅವರ ಗೋಸುಂಬೆ ವರ್ತನೆ, ಸ್ವಜನ ಪಕ್ಷಪಾತ, ಕಪಟತನ ಎಲ್ಲವನ್ನೂ ನೋಡಿ ಅಸಹ್ಯಪಟ್ಟುಕೊಂಡಿದ್ದೇನೆ. ತುಂಬ ಸುಭಗರೆಂದು ತೋರಿಸಿಕೊಳ್ಳುವವರ ಮೇಲೆ ಅನುಮಾನದ ಕಣ್ಣಿಟ್ಟುಕೊಂಡೇ ವೃತ್ತಿ ಬದುಕಿನಲ್ಲಿ ನಡೆಯುತ್ತಿರುವ ನನಗೆ ಈ ‘ನಾಯಕರು’ ಎಂಬ ವ್ಯಕ್ತಿಗಳ ಅನುಯಾಯಿಗಳೇ ಹೆಚ್ಚು ವಾಕರಿಕೆ ತರುವಂತೆ ಮಾಡುತ್ತಿರುವುದನ್ನು ನೋಡುತ್ತಲೇ ಇದ್ದೇನೆ.


ಈ ಕುಮಾರಸ್ವಾಮಿ ಎಂಬ ಮುಖ್ಯಮಂತ್ರಿಯ ವ್ಯಾವಹಾರಿಕ ನಡೆಯನ್ನೇ ನೋಡಿ. ಕೆಪಿಎಸ್ಸಿ ಅಕ್ರಮ ನೇಮಕಾತಿ ವಿರುದ್ಧ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳೇ ತೀರ್ಪು ನೀಡಿದ್ದರೂ ಅದನ್ನು ಪಾಲಿಸುವ ಬದಲು ಅಕ್ರಮವಾಗಿ ನೇಮಕಗೊಂಡವರನ್ನು ರಕ್ಷಿಸುವ ಸಲುವಾಗಿಯೇ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸುತ್ತಾರೆ. ಸ್ಪೀಕರ್ ರಮೇಶ್ ಕುಮಾರ್ ಅವರಂಥ ಬೆರಳೆಣಿಕೆ ಮಂದಿ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.  ಆದರೂ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ದೊರೆಯುತ್ತದೆ. ಶಾಸಕರು ಇರುವುದೇ ಶಾಸನಗಳನ್ನು ಮಾಡುವುದಕ್ಕೆ. ಆದರೆ ಕಾನೂನಿಗೆ ಗೌರವ ಕೊಡಬೇಕಾದ ಸಚಿವ ಸಂಪುಟವೇ ನ್ಯಾಯಾಲಯದ ತೀರ್ಮಾನವನ್ನು ಧಿಕ್ಕರಿಸುತ್ತದೆ. ಬಹುತೇಕ ಒಂದು ಸಮುದಾಯದಿಂದ ಅಕ್ರಮವಾಗಿ ಆಯ್ಕೆಯಾದ ಫಲಾನುಭವಿಗಳನ್ನು ರಕ್ಷಿಸುವ ಸಲುವಾಗಿಯೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎನ್ನಲಾಗುತ್ತಿದೆ.

ಆದರೆ ಈ ಅಕ್ರಮ ಎನ್ನುವ ವ್ಯವಹಾರದಲ್ಲಿ ಏನೆಲ್ಲ ನಡೆದಿರಬಹುದು ಎನ್ನುವುದೇ ಅತಿ ಮುಖ್ಯ ವಿಷಯ. ಸುಗ್ರೀವಾಜ್ಞೆ ಅಕ್ರಮ ಫಲಾನುಭವಿಗಳನ್ನಷ್ಟೇ ರಕ್ಷಿಸುವುದಿಲ್ಲ, ದಗಲುಬಾಜಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಬೇಕಿದ್ದವರನ್ನೆಲ್ಲ ರಕ್ಷಿಸಿಬಿಡುತ್ತದೆ. ಬೆರಳೆಣಿಕೆಯ ಫಲಾನುಭವಿಗಳಿಗಿಂತ ನ್ಯಾಯಯುತವಾಗಿ ಆಯ್ಕೆಯಾಗಬೇಕಿದ್ದವರಿಗೆ ಆಗಿರುವ ವಂಚನೆ, ಈ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿ ನಡೆದಿರುವ ವ್ಯವಹಾರದ ಪಾಲುದಾರರು ಯಾರ್ಯಾರು ಎನ್ನುವುದೇ ಮುಖ್ಯ. ಇಂಥ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಆಲೋಚನೆಗೆ ಯಾವೊಬ್ಬ ಸಚಿವರೂ ವಿರೋಧ ವ್ಯಕ್ತಪಡಿಸಿಲ್ಲ ಎಂದರೆ ಏನರ್ಥ? ಈ ಅಕ್ರಮವನ್ನು ಒಪ್ಪಿಕೊಳ್ಳುತ್ತಾರೆಂದೇ? ಅಥವಾ ಕುಮಾರಸ್ವಾಮಿ ಎದುರು ಯಾವ ಸಚಿವರಿಗೂ ಬೆನ್ನುಮೂಳೆ ಇಲ್ಲವೆಂದೇ? ಮೈತ್ರಿ ಸರ್ಕಾರದ ಮಹಾನ್ ಸಮನ್ವಯಕಾರರ ಪಟ್ಟದಲ್ಲಿರುವ ಮಹಾನ್ ನಾಯಕ ಸಿದ್ದರಾಮಯ್ಯ ಏನು ತೌಡು ಕುಟ್ಟುತ್ತಿದ್ದರೇ? ಇಂಥದ್ದೆಲ್ಲ ಬೆಳವಣಿಗೆಗಳಾಗುತ್ತಿರುವಾಗ ಅವರೇನು ಮಾಡುತ್ತಿದ್ದರು? ಎಲ್ಲರೂ ಈ ಅಕ್ರಮಗಳಲ್ಲಿ ಪರೋಕ್ಷ ಭಾಗಿದಾರರೇ? ಏನಿದರ ಅರ್ಥ ಎನ್ನುವುದನ್ನು ಈ ಎಲ್ಲರೂ ಸ್ಪಷ್ಟಪಡಿಸಬೇಕಾದ ಜರೂರತ್ತಿದೆ. ಸೇವಾ ಜೇಷ್ಠತೆ, ಪದೋನ್ನತಿ ನೀತಿಯನ್ನೇ ಈ ಸುಗ್ರೀವಾಜ್ಞೆ ಬುಡಮೇಲು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿರುವಾಗಲೇ  ಯಾಕಾಗಿ ಆತುರಾತುರವಾಗಿ ಹೊರಡಿಸಬೇಕಿತ್ತು? 


ಒಂದು ತಪ್ಪನ್ನು ಸರಿ ಮಾಡಲು ಹೋಗಿರುವ ಸರ್ಕಾರ ಇನ್ನೊಂದು ಸರಿಯನ್ನು ತಪ್ಪು ಮಾಡುವ ನಿರ್ಧಾರ ಕೈಗೊಂಡಿದೆ. ಅದು ರಜೆಗಳ ವಿಷಯದಲ್ಲಿ. ಸರ್ಕಾರಿ ರಜೆಗಳನ್ನು ಕಡಿತಗೊಳಿಸಲು ಸಚಿವ ಕೃಷ್ಣಬೈರೇಗೌಡ ಸಮಿತಿ ನೀಡಿದ್ದ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅಂಗೀಕಾರ ನೀಡಿದ್ದರು. ಬಸವ ಜಯಂತಿ, ಕನಕ ಜಯಂತಿ, ವಾಲ್ಮೀಕಿ ಜಯಂತಿ ಸೇರಿದಂತೆ ಕೆಲವು ಸಾರ್ವತ್ರಿಕ ರಜೆ ಮತ್ತು ಸರ್ಕಾರಿ ಸಿಬ್ಬಂದಿಗೆ ನೀಡುತ್ತಿದ್ದ ಸಾಂದರ್ಭಿಕ ರಜೆಗಳನ್ನು ಕಡಿತಗೊಳಿಸುವ ಶಿಫಾರಸಿಗೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆಂಬ ಸುದ್ದಿಯೇ ನನ್ನಂಥ ಎಷ್ಟೋ ಮಂದಿಗೆ ಇಷ್ಟವಾಗಿತ್ತು. ಯಾಕೆಂದರೆ ಭಾರತ ಸಂದರ್ಭ ಯಾವುದಾದರೂ ರಜೆಗಳಿಗಾಗಿಯೇ ಹಾತೊರೆಯುವ ದೇಶ. ನೂರಾರು ಜಾತಿ, ಸಾವಿರಾರು ಮಹಾಪುರುಷರು, ಸಾಧು ಸಂತರಿಗೇನೂ ಇಲ್ಲಿ ಕಡಿಮೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ಜಾತಿಯೇ ಆಧಾರವಾಗಿರುವ ರಾಜಕಾರಣದಲ್ಲಿ ಎಲ್ಲ ಜಾತಿಗಳನ್ನು ಓಲೈಸುವ ಸಲುವಾಗಿ ಒಂದೊಂದು ಜಾತಿಯ ಮಹಾಪುರುಷ(ಮಹಾಪುರುಷರ್ಯಾರೂ ಒಂದು ಜಾತಿಗೆ ಸೀಮಿತವಾಗಿರುವುದಿಲ್ಲ ಎನ್ನುವುದೇನೋ ನಿಜ. ಅವರ ಅನುಯಾಯಿಗಳು ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಬಿಡುತ್ತಾರಷ್ಟೇ)ರಿಗೂ ಒಂದೊಂದು ಜಯಂತಿ, ರಜೆ ಅಂತ ನಿರ್ಧರಿಸುತ್ತಾ ಹೋದರೆ ವರ್ಷವಿಡೀ ರಜೆ ಘೋಷಿಸಬೇಕಾಗುತ್ತದೆ.

ಇಂಥ ಸಂದರ್ಭದಲ್ಲಿ ಕುಮಾರಸ್ವಾಮಿ ದಿಟ್ಟ ಹೆಜ್ಜೆ ಇರಿಸಿದ್ದಾರೆಂದು ಭಾವಿಸಿರುವಾಗಲೇ ಸಚಿವ ಸಂಪುಟ ಸಭೆಯಲ್ಲಿ ಜಯಂತಿಗಳ ರಜೆ ಕಡಿತಕ್ಕೆ ಒಪ್ಪಿಗೆ ಸಿಗುವುದಿಲ್ಲ. ಸರ್ಕಾರಿ ನೌಕರರ ಸಾಂದರ್ಭಿಕ ರಜೆ ಕಡಿತಗೊಳಿಸಿದರೂ ಹಿಂಬಾಗಿಲ ಮೂಲಕ ನಾಲ್ಕನೇ ಶನಿವಾರದ ರಜೆ ನೀಡಿ ರಜೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ತತ್ವಶಃ ರಜೆಗಳ ಕಡಿತಕ್ಕೆ ಮನಸ್ಸು ಮಾಡಿದ್ದರೆ ಅದರ ಅಗತ್ಯವೇನೆಂದು ಸಚಿವ ಸಂಪುಟದಲ್ಲಿ ಮನವರಿಕೆ ಮಾಡಿಕೊಡುವ ಅಗತ್ಯ ಇತ್ತು. ಹಾಗೆ ಮನವರಿಕೆ ಮಾಡಿಕೊಡಲು ಅವರು ಅಸಮರ್ಥರಾಗಿದ್ದಾರೆಂದರೆ ಮೊದಲೇ ಸಮ್ಮತಿ ನೀಡುವ ಅಗತ್ಯವಿರಲಿಲ್ಲ. ನಾಯಕನಾದವನು ಜಯಂತಿಗಳ ರಜೆಗಳ ಕಡಿತ ಎಂಬ ಸಂಕೀರ್ಣ ವಿಷಯವನ್ನು ಸರಳಗೊಳಿಸಿ ತಮ್ಮ ಉದ್ದೇಶದಂತೆ ಅನುಷ್ಠಾನಕ್ಕೆ ಮುಂದಾಗಬೇಕಿತ್ತು.ಆದರೆ ಈ ವಿಷಯದಲ್ಲಿ ಹಾಗಾಗಿಲ್ಲ. ಅವರಿಗೆ ಇಚ್ಛಾಶಕ್ತಿ ಇದ್ದಂತಿರಲಿಲ್ಲ. ರಜೆಗಳನ್ನು ಕಡಿತಗೊಳಿಸಲು ಹೊರಟರೆ ಕೆಂಪೇಗೌಡ ಜಯಂತಿಗೆ ರಜೆ ನೀಡಲು ಅವಕಾಶ ದೊರೆಯಬಹುದೆಂದು ಹೀಗೆ ಮಾಡಿದ್ದರೇ? ಗೊತ್ತಿಲ್ಲ.

ಯಾವುದೇ ಜಯಂತಿಗೂ ರಜೆ ಕೊಡುವ ಅಗತ್ಯ ಇಲ್ಲ. ಮಹಾ ಪುರುಷರ ವಿಚಾರಧಾರೆಗಳನ್ನು ಪ್ರಾಮಾಣಿಕವಾಗಿ ಅನುಸರಿಸುವುದಷ್ಟೇ ಮುಖ್ಯ. ಅವರ ನಿರ್ಧಾರದಂತೆ ರಜೆ ಕಡಿತಗೊಳಿಸಲು ಸಾಧ್ಯವಿಲ್ಲ ಎನ್ನುವುದಾದರೆ ಅವರ ದಿಟ್ಟತನವೂ ಕೇವಲ ನಟನೆಯಷ್ಟೇ ಅನ್ನಿಸಿಬಿಡುತ್ತದೆ. ಹಾಗೇ ಸಚಿವ ಸಂಪುಟದ ಇತರ ಸಹೋದ್ಯೋಗಿಗಳೂ ಅದಕ್ಕೆ ಒಲವು ವ್ಯಕ್ತಪಡಿಸಿಲ್ಲವೆಂದರೆ ಅವರ ಮನಃಸ್ಥಿತಿಯೂ ಪ್ರಗತಿಪರವಾಗಿಲ್ಲ ಎಂದೇ ಭಾವಿಸಬೇಕಾಗುತ್ತದೆ. ಓಲೈಕೆ ರಾಜಕಾರಣದಲ್ಲಿ ಸದೃಢ ಪ್ರಗತಿಗಿಂತ ದುರ್ಬಲ ತೋರಿಕೆಗೇ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಕನಕ ಜಯಂತಿ ರಜೆ ಕಡಿತಗೊಳಿಸಿದರೆ ಕುರುಬ ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ, ವಾಲ್ಮೀಕಿ ಜಯಂತಿ ರಜೆ ರದ್ದಾದರೆ ವಾಲ್ಮೀಕಿ ಸಮುದಾಯದ ಪ್ರೀತಿ ದೂರವಾಗುತ್ತದೆ, ಬಸವ ಜಯಂತಿ ರಜೆ ಬೇಡವೆಂದರೆ ಲಿಂಗಾಯತರು ಸುಮ್ಮನಿರುವುದಿಲ್ಲ ಎಂಬೆಲ್ಲ ಲೆಕ್ಕಾಚಾರಗಳು ಮುನ್ನಡೆಗೆ ಅಡ್ಡಿ ಉಂಟುಮಾಡುತ್ತವೆ. ನಿಜ ನಾಯಕನಾದವನು ಈ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ, ಆತ ಸಮಾಜದ ಒಟ್ಟು ಹಿತವನ್ನಷ್ಟೇ ಬಯಸಿ ಮುನ್ನಡೆಯಬೇಕಾಗುತ್ತದೆ.


ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ?  


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸರ್ಕಾರದಲ್ಲಾಗಲೀ, ವಿಧಾನಮಂಡಲದಲ್ಲಾಗಲೀ ಮಹತ್ವದ ಜವಾಬ್ದಾರಿಯನ್ನೇನೂ ಹೊತ್ತಿಲ್ಲ. ವಿಧಾನಮಂಡಲದ ಪ್ರಕಾರ ಅವರು ಶಾಸಕರು ಮಾತ್ರ. ಅವರಿಗೆ ಶಾಸಕರ ಭವನದಲ್ಲಿ ಶಾಸಕರಿಗೆ ಮೀಸಲಿರಿಸಿರುವ ಕೊಠಡಿ ಕೊಟ್ಟರೆ ಅದು ತಪ್ಪೇನಲ್ಲ.ಅದು ಅವರ ಹಕ್ಕು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು. ಶಾಸಕಾಂಗ ಪಕ್ಷಕ್ಕೆ ನೀಡಿರುವ ಕೊಠಡಿಯಲ್ಲೇ ಅವರು ಇರಬಹುದು. ಆದರೆ ವಿಧಾನಸೌಧದ ಮೊದಲ ಮಹಡಿಯಲ್ಲಿ ಒಂದು ಕೊಠಡಿ ನೀಡಲಾಗಿದೆ. ಅದು ಕೋಳಿವಾಡ್ ಅವರು ಸ್ಪೀಕರ್ ಆಗಿದ್ದಾಗ ವಿಧಾನಸಭೆಯ ವರದಿಗಾರರ ಕೊಠಡಿಯನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಿದ ಕೊಠಡಿ. ಮುಖ್ಯಮಂತ್ರಿಗಳ ಕೊಠಡಿಗಿಂತ ಎರಡು ಪಟ್ಟು ದೊಡ್ಡ ಕೊಠಡಿ. ಅದಕ್ಕೆ ಕಾರಣ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದು. ಸಮನ್ವಯ ಸಮಿತಿ ಎನ್ನುವುದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಆಂತರಿಕ ವ್ಯವಸ್ಥೆ.ವಿಧಾನಮಂಡಲದ ಕಾಯಿದೆ ಪ್ರಕಾರ ಸಮನ್ವಯ ಸಮಿತಿ ಎಂಬುದಿಲ್ಲ. ಈ ಕೊಠಡಿಯನ್ನು ಸ್ವತಃ ಸ್ಪೀಕರ್ ರಮೇಶ್ ಕುಮಾರ್ ಅವರೇ ಸಿದ್ದರಾಮಯ್ಯ ಅವರಿಗೆ ಕೊಟ್ಟಿದ್ದಾರೆಯೇ ಅಥವಾ ಸಿದ್ದರಾಮಯ್ಯ ಇಟ್ಟ ಬೇಡಿಕೆ ಹಿನ್ನೆಲೆಯಲ್ಲಿ ನೀಡಲಾಗಿದೆಯೇ ಗೊತ್ತಿಲ್ಲ. ಈ ಕೊಠಡಿ ನೀಡಿರುವುದಂತೂ ಕಾನೂನು ಬಾಹಿರ ಎಂದು ವಿಧಾನಮಂಡಲ ಕಾಯ್ದೆ ಬಲ್ಲ ತಜ್ಞರು ಹೇಳುತ್ತಿದ್ದಾರೆ.


ಅಷ್ಟೇ ಅಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಾಸ್ತವ್ಯ ಹೂಡಿದ್ದ ‘ಕಾವೇರಿ’ ಯನ್ನು ಸಚಿವ ಜಾರ್ಜ್ ಅವರಿಗೆ ನೀಡಲಾಗಿದ್ದರೂ ಸಿದ್ದರಾಮಯ್ಯ ಅವರೇ ಈ ಬಂಗಲೆಯಲ್ಲಿ ಮುಂದುವರಿದಿದ್ದಾರೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಒಂದು ವರ್ಷವಾಗಿದ್ದು ಅವರಿಗೆ ಈ ಬಂಗಲೆಯಲ್ಲಿರುವುದಕ್ಕೆ ಯಾವುದೇ ಹಕ್ಕು, ಅಧಿಕಾರ ಇಲ್ಲವಾದರೂ ಅಲ್ಲೇ ಇದ್ದಾರೆ. ಕೆಲವರು ದಂಡ ಕಟ್ಟಿಕೊಂಡು ಕೆಲವು ದಿನ ಅಥವಾ ಮೂರ್ನಾಲ್ಕು ತಿಂಗಳು ಇರುತ್ತಾರೆ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ತಮ್ಮ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಇಪ್ಪತ್ನಾಲ್ಕು ಗಂಟೆಗಳಲ್ಲಿ ಸರ್ಕಾರಿ ಬಂಗಲೆಯನ್ನು ಬಿಟ್ಟು ಹೊರನಡೆದಿದ್ದರು. ಆದರೆ ಸದಾ ನೈತಿಕತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಈ ಬಂಗಲೆಯಲ್ಲೇ ಇನ್ನೂ ಇದ್ದಾರೆಂದರೆ ಅವರಿಗೆ ಏನನ್ನಬೇಕು?


ಆಂಧ್ರದಲ್ಲಿ ಎಲ್ಲ ಸಮುದಾಯಗಳನ್ನೊಳಗೊಳ್ಳುವ ಸಂದೇಶ


ನಮ್ಮ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ನೂತನ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಸಂಪುಟದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯ ಮತ್ತು ಕಾಪು ಸೇದಂತೆ ಐವರು ಉಪಮುಖ್ಯಮಂತ್ರಿಗಳಿದ್ದಾರೆ. ಪರಿಶಿಷ್ಠರು ಮತ್ತು ಹಿಂದುಳಿದ ವರ್ಗಕ್ಕೆ ಸಂಪುಟದಲ್ಲಿ ಗಣನೀಯ ಪಾಲು ನೀಡಿದ್ದಾರೆ. ಕಾರ್ಯತಃ ಐವರು ಉಪಮುಖ್ಯಮಂತ್ರಿಗಳ ಅಗತ್ಯವಿತ್ತೇ, ಭಾರತದಲ್ಲೇ ಮೊದಲ ಸಲ ಎನ್ನುವ ಈ ಪ್ರಮಾಣದಲ್ಲಿ ಉಪಮುಖ್ಯಮಂತ್ರಿಗಳ ನೇಮಕ ಸರಿಯೇ ಎನ್ನುವ ಪ್ರಶ್ನೆಗಳೆಲ್ಲ ಚರ್ಚಾರ್ಹ ವಿಷಯವೇ.

ಆದರೆ ಎಲ್ಲ ಅವಕಾಶವಂಚಿತ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಸಂದೇಶವನ್ನು ಜಗನ್ ಈ ಮೂಲಕ ನೀಡಿದ್ದಾರೆ. ತಮ್ಮ ಕುಟುಂಬದ ಎಲ್ಲರೂ ಒಂದಲ್ಲ ಒಂದು ಸ್ಥಾನ ಪಡೆದಿರಬೇಕು ಎನ್ನುವ ಇಂದಿನ ರಾಜಕಾರಣದಲ್ಲಿ ಜಗನ್ ಯಾವುದೋ ಒಂದುಜಾತಿಗೆ ಸೀಮಿತವಾಗದೇ ಎಲ್ಲರಿಗೂ ಅವಕಾಶ ನೀಡಿ ಆರೋಗ್ಯಕರ ಹೆಜ್ಜೆ ಇರಿಸಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಜಗನ್ಗೆ ದೂರದೃಷ್ಟಿ ಇದೆ ಎಂದನಿಸುತ್ತದೆ, ಆದರೆ ಅವರ ಗುರಿ ಏನೆನ್ನುವುದು ಈಗಲೇ ಹೇಳಲಾಗುವುದಿಲ್ಲ ಎಂದು ಗೆಳೆಯ, ತೆಲುಗು ಪತ್ರಕರ್ತ ಆದಿನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಯಾಕೆಂದರೆ ಜಗನ್ ಉದ್ದೇಶ ಮತ್ತು ಗುರಿ ದಿನ ಕಳೆದಂತೆ ಸ್ಪಷ್ಟವಾಗುತ್ತದೆ. ಸದ್ಯ ಅವರು ಹತ್ತು ವರ್ಷಗಳ ದೀರ್ಘ ಹೋರಾಟದಲ್ಲಿ ತಮಗೆ ನೆರವಾದವರಿಗೆಲ್ಲ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಇತರ ಪ್ರಬಲ ಜಾತಿಗಳ ನಡುವೆ ಪರಿಶಿಷ್ಟರು, ಹಿಂದುಳಿದವರು, ಮುಸ್ಲಿಮರನ್ನು ಉಪಮುಖ್ಯಮಂತ್ರಿ ಮಾಡುವುದು ಸಾಮಾನ್ಯ ವಿಷಯವೇನಲ್ಲ. ಉಪಮುಖ್ಯಮಂತ್ರಿಗಳಿಗೆ ಸಾಂವಿಧಾನಿಕ ಸ್ಥಾನಮಾನ ಇಲ್ಲದಿರಬಹುದು. ಜನರಂತೂ ಗುರುತಿಸುತ್ತಾರೆ.

ತೆಲುಗು ದೇಶಂ ಪಕ್ಷ ಸಂಪೂರ್ಣ ನೆಲಕಚ್ಚುವಂತೆ ಅಭೂತಪೂರ್ವ ಗೆಲುವು ಕಂಡ ವೈಎಸ್ಆರ್ ಕಾಂಗ್ರೆಸ್ನ ನಾಯಕ ಜಗನ್ ಸರ್ವಾಧಿಕಾರಿಯಂತೆ ಹೆಜ್ಜೆ ಇರಿಸುವ ಎಲ್ಲ ಅವಕಾಶಗಳಿದ್ದವು. ಆದರೆ ಆತನ ನಡೆ ಹಾಗಿಲ್ಲ. ಇಷ್ಟೊಂದು ಉಪಮುಖ್ಯಮಂತ್ರಿಗಳು ಬೇಕಿತ್ತೇ ಅನ್ನಿಸಿದರೂ ಒಂದರ್ಥದಲ್ಲಿ ಒಳ್ಳೆಯ ಸಂದೇಶವನ್ನೇ ನೀಡಿದೆ. ಇಂಥ ಮಹಾನ್ ಗೆಲುವನ್ನು ಜೆಡಿಎಸ್ ಅಥವಾ ಕಾಂಗ್ರೆಸ್ಸಿಗರೇ ಪಡೆದಿದ್ದರೂ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಸಾಧ್ಯವಿರಲಿಲ್ಲ. ಪ್ರಾಮಾಣಿಕ ಹೋರಾಟ ಮತ್ತು ಕರಾರುವಾಕ್ಕಾದ ಲೆಕ್ಕಾಚಾರಕ್ಕೆ ಗೆಲುವು ಸಿಗುತ್ತದೆ ಎನ್ನುವುದನ್ನು ಜಗನ್ ಸಾಬೀತುಪಡಿಸಿದ್ದಾರೆ. ಮುಂದೆ ವಿವಿಧ ಕಾಲಘಟ್ಟಗಳಲ್ಲಿ ಜಗನ್ ಆಡಳಿತದ ನಿಜಮುಖ ಬಚ್ಚಿಡಲಂತೂ ಸಾಧ್ಯವಿಲ್ಲ. ನೋಡೋಣ. 
                                                                                     

  -ಪ್ರಧಾನಸಂಪಾದಕ