ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಯೋಜನೆಗಳು ಭರಪೂರ : ಅನುಷ್ಠಾನದ ವಿಷಯದಲ್ಲಿ ಸಂಪೂರ್ಣ ಬರ

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಯೋಜನೆಗಳು ಭರಪೂರ : ಅನುಷ್ಠಾನದ ವಿಷಯದಲ್ಲಿ ಸಂಪೂರ್ಣ ಬರ

ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಅನುಷ್ಠಾನ ಕಾರ್ಯಕ್ರಮಗಳು ತೆವಳುತ್ತಿವೆ. ಬಜೆಟ್ ನಲ್ಲಿ ಸಾವಿರಾರು ಕೋಟಿ ರು.ಗಳನ್ನು ಒದಗಿಸಿದೆಯಾದರೂ ಅವೆಲ್ಲವೂ ಘೋಷಣೆಗಷ್ಟೇ ಸೀಮಿತಗೊಂಡಿವೆ. ಕೆಲವು ಇಲಾಖೆಗಳ ಕಾರ್ಯಕ್ರಮಗಳಿಗೆ ಅನುದಾನ ಲಭ್ಯವಿದ್ದರೂ ಅಲ್ಪಸಂಖ್ಯಾತರ ಕಾರ್ಯಕ್ರಮಗಳಿಗೆ ಮೀಸಲಿರಿಸಿಲ್ಲ. ಅನುದಾನ ಒದಗಿಸಿರುವಂತೆ ಬಿಡುಗಡೆಯಾಗಿದ್ದರೂ ಖರ್ಚಿನಲ್ಲಿ ಶೂನ್ಯ ಸಂಪಾದನೆಯಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಪ್ರಗತಿ ಬಗ್ಗೆ ರಾಜ್ಯದ ಅಧಿಕಾರಿಗಳ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಇದೊಂದು ಕೈಗನ್ನಡಿಯಷ್ಟೇ ಎನ್ನುತ್ತಾರೆ ಜಿ.ಮಹಂತೇಶ್.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮವನ್ನು ಆರಂಭಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ ಈ ಯೋಜನೆಯ ಲಾಭ ಅಲ್ಪಸಂಖ್ಯಾತರಿಗೆ ನಿರೀಕ್ಷಿತ ಮಟ್ಟದಲ್ಲಿ ದೊರೆತಿಲ್ಲ. ವಿಪರ್ಯಾಸವೆಂದರೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದರಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೇ ಹಿಂದೆ ಬಿದ್ದಿದೆ. 

ಅಷ್ಟೇ ಏಕೆ, ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 400 ಕೋಟಿ ರು.ಗಳನ್ನು ಒದಗಿಸಿದ್ದರೂ ನಯಾಪೈಸೆಯನ್ನೂ ಮೀಸಲಿರಿಸಿಲ್ಲ. ಹೀಗಾಗಿ ಖರ್ಚಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಯೋಜನೆ, ಸಾಂಖ್ಯಿಕ ಇಲಾಖೆ ಬೆಳಕು ಚೆಲ್ಲಿದೆ. ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೂ ಒಳಗೊಂಡಂತೆ ಎಲ್ಲಾ ಇಲಾಖೆಗಳ ಅಧಿಕಾರಿಶಾಹಿ ಮನಸ್ಥಿತಿ ಹೇಗಿದೆ ಎಂಬುದಕ್ಕೆ ಮೇ 2019ರ ಅಂತ್ಯದವರೆಗೆ ಸಾಧಿಸಿರುವ ಪ್ರಗತಿಯ ವಿವರವೇ ಕೈಗನ್ನಡಿಯಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒಟ್ಟು 1,131.55 ಕೋಟಿ ರು.ಗಳನ್ನು ಅನುದಾನ ಒದಗಿಸಿದೆಯಾದರೂ ಈ ಪೈಕಿ 509 ಕೋಟಿ ರು.ಗಳನ್ನಷ್ಟೇ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದೆ. ಹಾಗೆಯೇ ಇದರಲ್ಲಿ ಬಿಡುಗಡೆಯಾಗಿರುವುದು 119.85 ಕೋಟಿ ರು ಮಾತ್ರ. ಇನ್ನು ಖರ್ಚಿನ ಮಾತು ಕೇಳಬೇಡಿ, ಏಕೆಂದರೆ ಖರ್ಚಾಗಿರುವುದು ಕೇವಲ 17.10 ಕೋಟಿ ರು.ಗಳಷ್ಟೇ.

ಕೌಶಲ್ಯ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿರುವ ಕೌಶಲ್ಯ ಅಭಿವೃದ್ಧಿ ಮಿಷನ್, ಎನ್ ಆರ್ ಎಲ್ ಎಂ, ಎನ್ ಎಲ್ ಯು ಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಸ್ತ್ರೀ ಶಕ್ತಿ, ಐಸಿಡಿಎಸ್, ಭಾಗ್ಯಲಕ್ಷ್ಮಿ, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ರಾಷ್ಟ್ರೀಯ ಕುಡಿಯುವ ನೀರು ಯೋಜನೆ, ವಸತಿ ಇಲಾಖೆಯ ಪ್ರಧಾನ ಮಂತ್ರಿ ಆವಾಜ್ ಯೋಜನೆ(ಗ್ರಾಮೀಣ), ವಾಜಪೇಯಿ ನಗರ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಜ್ ಯೋಜನೆ(ನಗರ), ಬಸವ ವಸತಿ ಯೋಜನೆ, ಕೊಳಚೆ ನಿರ್ಮೂಲನೆ ಇಲಾಖೆಗೆ ಒಟ್ಟು 7,854.07 ಕೋಟಿ ರು.ಅನುದಾನದಲ್ಲಿ ಲಭ್ಯವಿದೆ. ಈ ಪೈಕಿ 207.37 ಕೋಟಿ ರು.ಗಳನ್ನಷ್ಟೇ ಮೀಸಲಿರಿಸಿದೆಯೇ ಹೊರತು ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.

ಪ್ರಧಾನಮಂತ್ರಿ ಆವಾಜ್, ವಾಜಪೇಯಿ ನಗರ ವಸತಿ, ಬಸವ ವಸತಿ ಯೋಜನೆಗೆಂದು ಲಭ್ಯವಿದ್ದ ಒಟ್ಟು 1,476.07 ಕೋಟಿ ರು.ಅನುದಾನದ ಪೈಕಿ 185.17 ಕೋಟಿ ರು.ಗಳನ್ನಷ್ಟೇ ಮೀಸಲಿರಿಸಲಾಗಿದೆ. ಆದರೆ ಮೇ 2019ರ ಅಂತ್ಯಕ್ಕೆ ಈ ಮೂರು ವಸತಿ ಯೋಜನೆಗಳಿಗೆ ಬಿಡಿಗಾಸೂ ಸಿಕ್ಕಿಲ್ಲ.

ಮದರಸಾಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಅನುದಾನದಲ್ಲಿ 30.00 ಕೋಟಿ ರು.ಒದಗಿಸಿದೆಯಾದರೂ ಮೇ 2019ರ ಅಂತ್ಯಕ್ಕೆ ಪ್ರಗತಿ ಅಂಕಿ ಸಂಖ್ಯೆಗಳ ಪ್ರಕಾರ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಅದೇ ರೀತಿ ವಿವಿಧ ವಲಯಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಒಟ್ಟು ಅನುದಾನದಲ್ಲಿ 40 ಕೋಟಿ ರು.ಗಳಿದ್ದರೂ 10 ಕೋಟಿ ರು.ಮಾತ್ರ ಬಿಡುಗಡೆಯಾಗಿದೆ. ಈ ವಲಯದಲ್ಲಿಯೂ ನಯಾಪೈಸೆಯಷ್ಟೂ ಖರ್ಚಾಗಿಲ್ಲ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಒದಗಿಸಿದ್ದ 144 ಕೋಟಿ ರು.ಅನುದಾನದ ಪೈಕಿ 36.10 ಕೋಟಿ ರು.ಬಿಡುಗಡೆಯಾಗಿದೆ.ಮೇ 2019ರ ಅಂತ್ಯಕ್ಕೆ 17.10 ಕೋಟಿ ರು.ಖರ್ಚಾಗಿದೆ. ಇನ್ನು, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಶಾಲೆಗಳ ಕಟ್ಟಡ ನಿರ್ಮಾಣ, ಅಲ್ಪಸಂಖ್ಯಾತರ ಕಚೇರಿ ಸಂಕೀರ್ಣ ನಿರ್ಮಾಣ, ಉರ್ದು ಸಮುದಾಯ ಭವನ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣದ ಹೆಸರಿನಲ್ಲಿ 220 ಕೋಟಿ ರು. ಅನುದಾನದಲ್ಲಿ ಲಭ್ಯವಿದೆಯಾದರೂ ಇದೇ ಉದ್ದೇಶಗಳಿಗಾಗಿ ನಯಾಪೈಸೆಯನ್ನೂ ಮೀಸಲಿರಿಸಿಲ್ಲದಿರುವುದು ಪ್ರಗತಿ ವಿವರದಿಂದ ಗೊತ್ತಾಗಿದೆ.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ 275 ಕೋಟಿ ರು.ಅನುದಾನದಲ್ಲಿ ಲಭ್ಯವಿದೆ. ಆದರೆ ಇದರಲ್ಲಿ 68.75 ಕೋಟಿ ರು.ಬಿಡುಗಡೆಯಾಗಿದೆಯಾದರೂ ಮರುಪಾವತಿಸಿರುವುದು ಮತ್ತು ವಿದ್ಯಾರ್ಥಿ ವೇತನ ನೀಡಿರುವ ಬಗ್ಗೆ ಪ್ರಗತಿ ಕಂಡು ಬಂದಿಲ್ಲ.

ಕೌಶಲ್ಯ ಅಭಿವೃದ್ಧಿ ಮಿಷನ್ಗೆ 108.53 ಕೋಟಿ ರು.ಗಳನ್ನು ಅನುದಾನದಲ್ಲಿ ಒದಗಿಸಿದೆಯಾದರೂ ಈ ಪೈಕಿ ನಯಾಪೈಸೆಯನ್ನೂ ಮೀಸಲಿರಿಸಿಲ್ಲ. ಹೀಗಾಗಿ ಬಿಡುಗಡೆ ಮತ್ತು ಖರ್ಚಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎನ್ ಆರ್ ಎಲ್ ಎಂ ಯೋಜನೆಗೆ ಒದಗಿಸಿದ್ದ 150.00 ಕೋಟಿ ರು.ಪೈಕಿ 9 ಕೋಟಿ ರು, ಎನ್ ಎಲ್ ಯುಎಂ ಯೋಜನೆಗೆ ಒದಗಿಸಿರುವ 14 ಕೋಟಿ ರು.ಪೈಕಿ 2.10 ಕೋಟಿ ರು.ಮಾತ್ರ ಮೀಸಲಿರಿಸಿದೆ. ಇಲ್ಲಿಯೂ ಕೂಡ ನಯಾಪೈಸೆಯೂ ಖರ್ಚಾಗದಿರುವುದು ಪ್ರಗತಿ ವಿವರದಿಂದ ತಿಳಿದು ಬಂದಿದೆ.

ಸ್ತ್ರೀ ಶಕ್ತಿ ಯೋಜನೆ 10.79 ಕೋಟಿ ರು., ಐಸಿಡಿಎಸ್ ಗೆ 1,547.45 ಕೋಟಿ ರು., ಭಾಗ್ಯಲಕ್ಷ್ಮಿ ಯೋಜನೆಗೆ 309.42 ಕೋಟಿ ರು.ಅನುದಾನದಲ್ಲಿ ಲಭ್ಯವಿದ್ದರೂ ನಯಾಪೈಸೆಯನ್ನೂ ಮೀಸಲಿರಿಸಿಲ್ಲ. ಅದೇ ರೀತಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಗೆ 2,795.58 ಕೋಟಿ ರು. ಮತ್ತು ಸಮಗ್ರ ಶಿಕ್ಷಣ ಯೋಜನೆಗೆ 1,367.55 ಕೋಟಿ ರು. ಲಭ್ಯವಿದ್ದರೂ ಮೀಸಲಿರಿಸುವ ಗೋಜಿಗೆ ಹೋಗಿಲ್ಲ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಗೆ ಒಟ್ಟು 750 ಕೋಟಿ ರು., ವಾಜಪೇಯಿ ನಗರ ವಸತಿ ಮತ್ತು ಬಸವ ವಸತಿ ಯೋಜನೆಗೆಂದು ಒದಗಿಸಿದ್ದ 726.07 ಕೋಟಿ ರು. ಸೇರಿ ಒಟ್ಟು 1,476.07 ಕೋಟಿ ರು. ಪೈಕಿ 185.17 ಕೋಟಿ ರು.ಮೀಸಲಿರಿಸಲಾಗಿದೆ. ಬಿಡುಗಡೆ ಮಾತ್ರ ಸೊನ್ನೆ.

ಉರ್ದು ಶಾಲೆಗಳನ್ನು ಉನ್ನತೀಕರಣಗೊಳಿಸುವುದಕ್ಕೆ ಸಂಬಂಧಿಸಿದಂತೆ 9 ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರ ಅನುಮೋದನೆ ನೀಡಿ ವರ್ಷ ಕಳೆದಿದೆಯಾದರೂ ಈವರೆವಿಗೂ ಪ್ರಗತಿ ಕಂಡಿಲ್ಲ. ಅಲ್ಪಸಂಖ್ಯಾತರಿಗಾಗಿ ನಿಗದಿಪಡಿಸಿರುವ ಗುರಿಯಲ್ಲಿ ಬಾಲಕರ ಮತ್ತು ಬಾಲಕಿಯರ ಶೌಚಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಗುರಿ ನಿಗದಿಪಡಿಸಿಲ್ಲ ಎಂಬುದು ತಿಳಿದು ಬಂದಿದೆ.

ವಿವಿಧ ಇಲಾಖೆಗಳ ಅನುದಾನದಲ್ಲಿ ಶೇ.15ರಷ್ಟನ್ನು ಜೈನರು, ಸಿಖ್ಖರು, ಪಾರ್ಸಿಗಳು, ಮುಸ್ಲಿಮರು, ಕ್ರೈಸ್ತರು ಹಾಗೂ ಬೌದ್ಧರನ್ನು ಒಳಗೊಂಡ ಅಲ್ಪಸಂಖ್ಯಾತ ಸಮುದಾಯದ ಜನರ ಅಭಿವೃದ್ಧಿಗಾಗಿ ಮೀಸಲಿರಿಸಿ ಅನುಷ್ಠಾನಗೊಳಿಸಲು ಸರಕಾರ ಆದೇಶ ಹೊರಡಿಸಿತ್ತು. ಆದರೆ, ಹಲವು ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗಾಗಿ ನಿಗದಿಪಡಿಸಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಅರ್ಜಿಗಳು ಬರಲಿಲ್ಲ ಎಂದು ನೆಪ ಹೇಳುವ ಅಧಿಕಾರಿಗಳು, ಇಡೀ ಕಾರ್ಯಕ್ರಮಗಳನ್ನೇ ತೆವಳಿಸುತ್ತಿದ್ದಾರೆ ಅಥವಾ ಉದ್ದೇಶಪೂರ್ವಕವಾಗಿ ಕತ್ತಲಲ್ಲಿಡುತ್ತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.