ಪಾಯಲ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ ಮಾಡಿದ್ದಕ್ಕೆ ಸಾಕ್ಷ್ಯವಿಲ್ಲ, ತನಿಖಾ ತಂಡದಿಂದ 16 ಪುಟಗಳ ವರದಿ

ಪಾಯಲ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ ಮಾಡಿದ್ದಕ್ಕೆ ಸಾಕ್ಷ್ಯವಿಲ್ಲ, ತನಿಖಾ ತಂಡದಿಂದ 16 ಪುಟಗಳ ವರದಿ

ಮುಂಬೈ: ಮೆಡಿಕಲ್‌ ವಿದ್ಯಾರ್ಥಿನಿ ಪಾಯಲ್‌ ತಡ್ವಿ ಅವರು ಜಾತಿ ನಿಂದನೆ ಒಳಗಾಗಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ, ಆದರೆ, ರ‍್ಯಾಗಿಂಗ್‌ ನಡೆದಿರುವುದಕ್ಕೆ ಸಾಕ್ಷಿಗಳಿವೆ ಎಂದು ವಿಶೇಷ ತನಿಖಾ ತಂಡ ವರದಿಯಲ್ಲಿ ತಿಳಿಸಿದೆ.

ಪಾಯಲ್‌  ಅವರ ಆತ್ಮಹತ್ಯೆ ಪ್ರಕರಣ ಕರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಸರ್ಕಾರಕ್ಕೆ 16 ಪುಟಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ  ರ‍್ಯಾಗಿಂಗ್‌ ನಡೆದಿರುವುದಕ್ಕೆ ಸಾಕ್ಷಿಗಳಿವೆ. ಆದರೆ, ಜಾತಿ ನಿಂದನೆ ಮಾಡಿದ್ದಕ್ಕೆ ಸಾಕ್ಷ್ಯವಿಲ್ಲ ಎಂದಿದೆ. ವಿಪರೀತ ಒತ್ತಡ, ಹೆಚ್ಚಿನ ಅವಧಿಯ ಕೆಲಸ, ವಿಭಾಗದ ಮುಖ್ಯಸ್ಥರ ನಿರ್ಲಕ್ಷ್ಯ ಪಾಯಲ್‌ ಅವರ ಸಾವಿಗೆ ಕಾರಣ ಎಂದು ತನಿಖಾ ತಂಡ ಹೇಳಿದೆ.

ಪಾಯಲ್‌ ಅವರ ವಿಚಾರದಲ್ಲಿ ಅವರ ವಿಭಾಗದ ಮುಖ್ಯಸ್ಥರು ವಹಿಸಿದ ನಿರ್ಲಕ್ಷ್ಯವು ಅಕೆಯನ್ನು ಆತ್ಮಹತ್ಯೆಗೆ ದೂಡಿದೆ, ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಹೀಗಾಗದಂತೆ ಎಚ್ಚರ ವಹಿಸುವ ಸಂಬಂಧ ತನಿಖಾ ತಂಡವು ಹಲವು ಶಿಫಾರಸುಗಳನ್ನೂ ನೀಡಿದೆ ಎಂದು 'ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ಟಿಎನ್‌ ಟೋಪಿವಾಲ ನ್ಯಾಷನಲ್‌ ಮೆಡಿಕಲ್‌ ಕಾಲೇಜಿನಲ್ಲಿ ದ್ವೀತಿಯಾ ವರ್ಷದ ಗರ್ಭಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದ ಪಾಯಲ್‌ ತಡ್ವಿ ಅವರು ಬಿವೈಎಲ್‌ ನಾಯರ್‌ ವಸತಿ ಗೃಹದಲ್ಲಿ ಮೇ 22ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಜಾತಿ ನಿಂದನೆ ಮತ್ತು ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು.