ಊರೂರು ಸುತ್ತಾಟಕ್ಕೆ ಅಣಿಯಾದ ಪಕ್ಷಗಳು

ಊರೂರು ಸುತ್ತಾಟಕ್ಕೆ ಅಣಿಯಾದ ಪಕ್ಷಗಳು

ಕಾಂಗ್ರೆಸ್ಸೆಂಬ ಕಾಂಗ್ರೆಸ್ಸು ನಾನಾ ಕಾರಣದಿಂದ ಸುದ್ದಿಯಾಗುತ್ತಾ, ಸಂಜೆಗೇನೋ ಬೆಳಗ್ಗೆಗೇನೋ ಎಂಬ ಕದನ ಕುತೂಹಲಕ್ಕೆ ವಸ್ತುವಾಗಿರುವಾಗಲೇ, ಸಂಸತ್ ಚುನಾವಣೆಯಲ್ಲಿ ಸೋತಿದ್ದೇಕೆ ಎಂಬುದಕ್ಕೆ ಕಾರಣವನ್ನರಿಯಲು ಮೂರು ತಿಂಗಳ ಕಾರ್ಯಕ್ರಮ ರೂಪಿಸಿಕೊಂಡಿದೆ.
 

ಸೋಲಿನ ಪರಾಮರ್ಶನ ಮಾಡಲು ಆರ್. ಸುದರ್ಶನ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನ ರಚಿಸಲಾಗಿದ್ದು, ಒಂದಷ್ಟು ಪ್ರಶ್ನಾವಳಿಗಳನ್ನ ರೂಪಿಸಿಕೊಂಡಿರುವ ಈ ಸಮಿತಿ ವಿವಿಧ  ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾರರಿಂದ, ಪಕ್ಷದ ಕಾರ್ಯಕರ್ತರಿಂದ ಉತ್ತರಗಳನ್ನ ಪಡೆಯಲಿದೆ. ಇದನ್ನೆಲ್ಲ ಮೂರು ತಿಂಗಳಲ್ಲಿ ಸಂಗ್ರಹಿಸಿ ಗುಡ್ಡೆಹಾಕಿಕೊಂಡು, ತಾಳೆ ನೋಡಿ ಕೊನೆಗೆ ಇದೇ ಸೋಲಿಗೆ ಕಾರಣ ಎಂಬುದನ್ನ ಗುರುತು ಹಚ್ಚಿ, ವರದಿಯನ್ನ ಪಕ್ಷಕ್ಕೆ ಸಲ್ಲಿಸಲಿದೆ. 

ಮೈತ್ರಿಯೇ ಕಾರಣ, ಪರಸ್ಪರ ಕೈ ಕಾಲು ಎಳೆದಿದ್ದೇ ಕಾರಣ ಎಂಬ ಸಬೂಬುಗಳೇ ಕಾಂಗ್ರೆಸ್ಸಿಗರ ಬಾಯಿಂದ ಉದುರುತ್ತಿರುವಾಗ ಮತ್ತು ಮೈತ್ರಿ ಸರ್ಕಾರವೇ ನೆಗೆದುಬಿದ್ದರೆ ಮಾತ್ರ ನಮ್ಮ ಪಕ್ಷ ಉಳಿಯಲು ಸಾಧ್ಯ ಎಂಬ ಭವಿಷ್ಯವನ್ನ ಹೇಳುತ್ತಿರುವವರೇ ತುಂಬಿ ತುಳುಕುತ್ತಿರುವಾಗ, ಸೋಲಿನ ನಿಜಾಂಶವನ್ನ ಈ ಸಮಿತಿ ಪತ್ತೆ ಹಚ್ಚೀತೇ, ಪತ್ತೆ ಮಾಡಿದ ಅಂಶಗಳನ್ನ ಸರಿಪಡಿಸಿಕೊಳ್ಳಲು ಏನೇನು ಪರಿಹಾರೋಪಾಯ ತಿಳಿಸಲಿದೆ ಎಂಬುದು ಕಾಯ್ದು ನೋಡುವಂಥದ್ದಾಗಿದೆ.
 

ಸೋತ ಕಾರಣ ಹುಡುಕಲು ಕಾಂಗ್ರೆಸ್ ದಿಬ್ಬಣ ಹೊರಟಿರುವುದು ಒಂದೆಡೆಯಾದರೆ, ನಿರೀಕ್ಷೆಗೂ ಮೀರಿ ಗೆದ್ದಿರುವ ಬಿಜೆಪಿಯವರು ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಊರೂರಿಗೆ ತೆರಳುತ್ತಿರುವುದು ಇನ್ನೊಂದೆಡೆ ಶುರುವಾಗಿದೆ. ಇವೆರಡೂ ಪಕ್ಷಗಳ ಕತೆ ಹೀಗಾದರೆ ದಳದವರು ಪಕ್ಷಸಂಘಟನೆಗಾಗಿ ಇಡೀ ರಾಜ್ಯವನ್ನ ಪಾದಯಾತ್ರೆಯಲ್ಲೇ ಸುತ್ತುವುದಕ್ಕೆ ಕಾರ್ಯರೂಪಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ ಕುಮಾರಸ್ವಾಮಿ ಆವಾಗಿನಿಂದಲೂ ಚಾಮರಾಜನಗರದಿಂದ ಬೀದರ್ ವರೆಗೆ ಪಾದಯಾತ್ರೆ ಎಂಬ ಘೋಷಣೆ ಮಾಡಿದ್ದರೂ ಯೋಜನೆ ಕಾರ್ಯಗತಗೊಂಡಿಲ್ಲ. ಈಗ ಅದನ್ನ ಗಂಭೀರವಾಗಿ ಹಮ್ಮಿಕೊಳ್ಳುವ ಹುರುಪಿನಲ್ಲಿದ್ದು, ಇದಕ್ಕೆ ಗ್ರಾಮವಾಸ್ತವ್ಯದ ವರ್ಚಸ್ಸೂ ಸೇರಿಕೊಂಡು ದಳ ಉನ್ನತಿಗೇರುತ್ತೆ ಎಂಬ ಊಹೆಗಳಿವೆ.
ಇದಾವುದೇ ಪಕ್ಷಗಳು ಅದೇನೇ ವಿಚಾರವನ್ನ ಪತ್ತೆ ಹಚ್ಚಿಕೊಂಡರೂ, ಒಳಗೊಳಗೇ ಪಕ್ಷ ಬಿಡಲು ಕಾಯ್ದಿರುವವರು, ವಿರೋಧಿ ಪಾಳಯಕ್ಕೆ ಗುಪ್ತ ವಿಚಾರಗಳನ್ನೆಲ್ಲ ಪರಭಾರೆ ಮಾಡುತ್ತಿರುವಂಥವರನ್ನ ಪತ್ತೆ ಮಾಡಲು ಸಾಧ್ಯವಾಗುವುದೇ, ಅಂಥವರ ವಿರುದ್ದ ಕ್ರಮತೆಗೆದುಕೊಂಡು ಪಕ್ಷಗಳನ್ನ ಉಳಿಸಿಕೊಳ್ಳುವರೇ  ಕಾಯ್ದುನೋಡಬೇಕು.