ಐರೋಪ್ಯ ರಾಷ್ಟ್ರಗಳ ನಿಯೋಗಕ್ಕೆ ಅವಕಾಶ: ಮೈಮೇಲೆ ಎಳೆದುಕೊಂಡ ಸಮಸ್ಯೆ

ಕೇಂದ್ರದ ಬಿಜೆಪಿ ಸರ್ಕಾರ ಐರೋಪ್ಯ ರಾಷ್ಟ್ರಗಳ ಸಂಸದೀಯ ನಿಯೋಗಕ್ಕೆ ಭೇಟಿ ನೀಡುವ ಅವಕಾಶ ಸಮಸ್ಯೆಯನ್ನು ತಾನೇ ಮೈಮೇಲೆ ಎಳೆದುಕೊಂಡಿದೆ. ಇಲ್ಲವೇ ಇದನ್ನು ಅಂತರ್ ರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡಲು ಅವಕಾಶ ನೀಡಿದೆ

ಐರೋಪ್ಯ ರಾಷ್ಟ್ರಗಳ ನಿಯೋಗಕ್ಕೆ ಅವಕಾಶ: ಮೈಮೇಲೆ ಎಳೆದುಕೊಂಡ ಸಮಸ್ಯೆ

ಭಾರತೀಯ ಜನತಾ ಪಕ್ಷವು ಲೋಕಸಭೆ ಚುನಾವಣೆಯ ದಿನಗಳಲ್ಲಿ ತಾನು ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಸಂವಿಧಾನದ ವಿಧಿ 370 ಮತ್ತು 35ಎ ರದ್ದು ಪಡಿಸುವುದಾಗಿ ಹೇಳಿದ್ದನ್ನು ತನ್ನ ಚುನಾವಣಾ ಪ್ರಣಾಳಿಕೆಯನ್ನು ಕಾರ್ಯತಃ ಮಾಡಿ ತೋರಿಸಿರುವುದು ಈಗ ಹಳೆಯ ಸಂಗತಿ. ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಕೇಂದ್ರ ಸರ್ಕಾರ ತನ್ನ ಆಡಳಿತದ ತೆಕ್ಕೆಗೆ ತೆಗೆದುಕೊಂಡಾಗಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದಿಂದ ಪಾಕಿಸ್ತಾನದ ಭಯೋತ್ಪಾದಕರಿಗೆ ಇದು ಹೆಬ್ಬಾಗಿಲಾಗಿತ್ತು. ಮತ್ತು ಕಾಶ್ಮೀರದ ಜನತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದರು ಎಂದು ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ.

ಸಂವಿಧಾನದ ವಿಧಿ 370 ಮತ್ತು 35ಎ ರದ್ದುಪಡಿಸಿದ ಮೇಲೆ ಅಲ್ಲಿನ ಪರಿಸ್ಥಿತಿಯೇ ಬದಲಾಗಿದೆ. ಅಲ್ಲಿ ನಿಷೇಧಾಜ್ಞೆ ಜಾರಿಯ ಜೊತೆಗೆ ಸುಮಾರು 50 ಸಾವಿರ ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿ ಕಣ್ಗಾವಲಾಗಿದ್ದು ಕಣಿವೆ ಪ್ರದೇಶ ಸ್ತಬ್ಧವಾಗಿದೆ. ವಿರೋಧಿ ನಾಯಕರನ್ನು ಜೈಲಲ್ಲಿ ಇಟ್ಟಿರುವುದು ಮತ್ತು ಲೋಕಸಭೆ ಸದಸ್ಯ ಹಾಗು ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಅಂತಹವರನ್ನು ಗೃಹಬಂಧನದಲ್ಲಿಟ್ಟಿರುವುದು ಇಡೀ ದೇಶಕ್ಕೇ ಗೊತ್ತಿರುವ ಸಂಗತಿ.

ಆದರೆ ಈಗ ಪ್ರಶ್ನೆ ಇದಲ್ಲ. ದೇಶಕ್ಕೆ ಸ್ವಾತಂತ್ರ್ಯಾ ಬಂದ ನಂತರ ಮತ್ತು ಪ್ರಾಂತೀಯ ರಾಜರುಗಳ ಆಡಳಿತವನ್ನು ರದ್ದುಗೊಳಿಸಿ ಏಕ ಭಾರತ ಕಲ್ಪನೆಯನ್ನು ಸಾಕಾರಗೊಳಿಸಿದ ಮೇಲೆ ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನವನ್ನು ರದ್ದುಪಡಿಸಿದ ಮೇಲೆ ಅಲ್ಲಿ ಎಲ್ಲ ನಾಗರಿಕ ಹಕ್ಕುಗಳನ್ನು ಮೊಟಕು ಮಾಡಲಾಗಿದೆ ಎನ್ನುವ ಬಲವಾದ ಆರೋಪಗಳು ಮತ್ತು ಟೀಕೆಗಳು ಪ್ರತಿಪಕ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಹಲವು ಮಾಧ್ಯಮಗಳೂ ಸಂಪಾದಕೀಯ ಮತ್ತು ವಿಶೇಷ ಲೇಖನಗಳನ್ನು ಬರೆಯುವ ಮೂಲಕ ದನಿಗೂಡಿಸಿವೆ.

ಇಂತಹ ಉಸಿರುಗಟ್ಟುವ ವಾತಾವರಣ ಅಲ್ಲಿರುವುದಾಗಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದು ನೋಡಬೇಕೆಂದು ಬಯಸಿದರೆ ಯಾರೂ ಸುಲಭವಾಗಿ ಹೋಗಿಬರಲು ಆಗುವುದಿಲ್ಲ. ಸಂಸತ್ ಸದಸ್ಯರಿಗೂ ಅಲ್ಲಿನ ಭೇಟಿಗಾಗಿ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಸಿಪಿಎಂನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರು ಸುಪ್ರೀಂ ಕೋರ್ಟಿನ ಒಪ್ಪಿಗೆ ಪಡೆದು ಅಲ್ಲಿಗೆ ಭೇಟಿ ನೀಡಿ ಬಂದರು. ಆದರೆ ಆ ರಾಜ್ಯಕ್ಕೆ ಒಮ್ಮೆ ಮುಖ್ಯಮಂತ್ರಿ ಆಗಿದ್ದ ಕಾಂಗ್ರೆಸ್ಸಿನ ರಾಜ್ಯಸಭೆ ಸದಸ್ಯ ಗುಲಾಂ ನಬಿ ಆಜಾದ್ ಅವರಿಗೂ ಅಲ್ಲಿಗೆ ಮುಕ್ತವಾಗಿ ಹೋಗಿ ಬರಲು ಆಗುತ್ತಿಲ್ಲ.

ಈ ನಿರ್ಬಂಧ ಹೇರಿರುವುದೇ ಈಗ ಕೇಂದ್ರ ಸರ್ಕಾರವನ್ನು ಪ್ರತಿಪಕ್ಷಗಳು ಹಿಗ್ಗಾಮುಗ್ಗಾ ಟೀಕಿಸಲು ಕಾರಣವಾಗಿದೆ. ಈ ನಿರ್ಬಂಧಕ್ಕೆ ಹಲವು ಕಾರಣಗಳಿರುವುದಾಗಿ ಮತ್ತು ಇದು ತಾತ್ಕಾಲಿಕ ಎಂದು ಕೇಂದ್ರ ಸರ್ಕಾರ ತನ್ನ ಆಡಳಿತ ಕ್ರಮವನ್ನು ಸಹಜವಾಗಿಯೇ ಸಮರ್ಥಿಸಿಕೊಳ್ಳುತ್ತಿದೆ.

ವಾಸ್ತವ ಪರಿಸ್ಥಿತಿ ಹೀಗಿರುವಾಗ ಐರೋಪ್ಯ ರಾಷ್ಟ್ರಗಳ 23 ಮಂದಿ ಸಂಸತ್ ಸದಸ್ಯರ ನಿಯೋಗ ಎರಡು ದಿನ ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಆಡಳಿತ ಆಯ್ಕೆ ಮಾಡಿದ್ದ ಸಾರ್ವಜನಿಕ ವ್ಯಕ್ತಿಗಳ ಜೊತೆ ಸಂವಾದ ಮಾಡಿರುವುದು ಈಗ ಟೀಕೆಗೆ ಗುರಿಯಾಗಿರುವುದು ಕೇಂದ್ರ ಸರ್ಕಾರಕ್ಕೆ ಜೀರ್ಣಿಸಿಕೊಳ್ಳಲಾರದ ಬೆಳವಣಿಗೆಯಾಗಿದೆ.

ಈ ನಿಯೋಗದಲ್ಲಿ ಬ್ರಿಟನ್, ಫ್ರಾನ್ಸ್, ಇಟಲಿ, ಪೊಲೆಂಡ್ ಮತ್ತು ಜರ್ಮನಿ ದೇಶಗಳ ಸಂಸತ್ ಸದಸ್ಯರಿದ್ದಾರೆ. ಎರಡು ದಿನಗಳ ಪ್ರವಾಸ ಮುಗಿಸಿರುವ ಈ ನಿಯೋಗ ಭಯೋತ್ಪಾದನೆ ವಿರುದ್ಧ ದನಿ ಎತ್ತಿದೆ. ಭಯೋತ್ಪಾದನೆಯನ್ನು ನಿರ್ಮೂಲ ಮಾಡುವ ಭಾರತದ ಯತ್ನಕ್ಕೆ ತನ್ನ ಬೆಂಬಲವನ್ನೂ ವ್ಯಕ್ತಪಡಿಸಿರುವುದು ಸಂತೋಷ. ಹಾಗೆಯೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ವಿಧಿ 370 ಮತ್ತು 35ಎ ರದ್ದು ಮಾಡಿರುವುದು ಭಾರತದ ಆಂತರಿಕ ವಿಷಯ. ಇದರಲ್ಲಿ ನಾವು ಮೂಗುತೂರಿಸುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವುದು ಭಾರತಕ್ಕೆ ಸಮಾಧಾನಕರ ಬೆಳವಣಿಗೆ.

ಈ ನಿಯೋಗ ಈಗಾಗಲೇ ಪ್ರಧಾನಿ, ಉಪರಾಷ್ಟ್ರಪತಿ, ವಿದೇಶಾಂಗ ಸಚಿವ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನೂ ಭೇಟಿಯಾಗಿ ತನ್ನ ಅಭಿಪ್ರಾಯವನ್ನು ವಿನಿಮಯ ಮಾಡಿಕೊಂಡಿದೆ.

ಈಗ ಸಮಸ್ಯೆ ಮತ್ತು ವಿವಾದ ಉಂಟಾಗಿರುವುದು ಭಾರತದ ಸಂಸತ್ ಸದಸ್ಯರಿಗೆ ಅವಕಾಶ ನಿರಾಕರಿಸಿ ವಿದೇಶಿ ನಿಯೋಗ ಕಣಿವೆ ರಾಜ್ಯದಲ್ಲಿ ಪ್ರವಾಸ ಮಾಡಲು ಕೇಂದ್ರ ಸರ್ಕಾರ ನೀಡಿರುವ ಅನುಮತಿ. ಈ ನಿಯೋಗಕ್ಕೆ ಆಮಂತ್ರಣ ನೀಡಿದವರಾರು ಮತ್ತು ಏಕೆ ಎನ್ನುವ ಪ್ರಶ್ನೆಗೆ ಕೇಂದ್ರ ಸರ್ಕಾರ ಇನ್ನೂ ತನ್ನ ಉತ್ತರ ನೀಡಬೇಕಿದೆ.

ಬ್ರೆಜಿಲ್ ನಲ್ಲಿ ನೆಲೆಸಿರುವ ಮಾದಿ ಶರ್ಮಾ ಎನ್ನುವ ಭಾರತೀಯ ಸಂಜಾತೆಯ ಪ್ರಯತ್ನದಂತೆ ಈ ಐರೋಪ್ಯ ರಾಷ್ಟ್ರಗಳ ಸಂಸತ್ ಸದಸ್ಯರ ನಿಯೋಗದ ಭೇಟಿಗೆ ಅವಕಾಶ ದೊರೆತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಂತರ್ ರಾಷ್ಟ್ರೀಯ ಈ ನಿಯೋಗ ಈಗ ತನ್ನ ಭೇಟಿ ಮುಗಿಸಿದೆ. ಇದರ ಕೆಲಸ ಏನು? ಮುಂದೇನು ಮಾಡಲಿದೆ ಎನ್ನುವುದು ಪ್ರಶ್ನಾರ್ಥಕವಾಗಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ನಿಲುವನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಮರ್ಥಿಸಲು ಈ ನಿಯೋಗವನ್ನು ಬಳಸಿಕೊಂಡಿದ್ದಾರೆ ಎನ್ನುವುದು ಪ್ರತಿಪಕ್ಷಗಳ ಆರೋಪ.

ಈ ರೀತಿ ವಿದೇಶಿ ನಿಯೋಗಕ್ಕೆ ಅವಕಾಶ ನೀಡುವುದರಿಂದ ಕಾಶ್ಮೀರ ಸಮಸ್ಯೆಯನ್ನು ಅಂತರ್ ರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡಲಾಗುತ್ತಿದೆ ಎನ್ನುವುದು ಹಲವರ ಟೀಕೆಗಳು. ಈ ಟೀಕೆಯನ್ನು ಸುಲಭವಾಗಿ ತಳ್ಳಿಹಾಕಲು ಬರುವುದಿಲ್ಲ. ನಾಳೆ ಮತ್ತೆ ಹಲವು ರಾಷ್ಟ್ರಗಳ ಸಂಸತ್ ಸದಸ್ಯರ ನಿಯೋಗಗಳು ಕಾಶ್ಮೀರ ಭೇಟಿಗೆ ಅವಕಾಶ ಕೋರಬಹುದು. ಆಗ ಕೇಂದ್ರ ಸರ್ಕಾರಕ್ಕೆ ಇಂತಹ ಬೇಡಿಕೆಗಳನ್ನು ಈಡೇರಿಸಲಾಗದೆ ಬಿಸಿ ತುಪ್ಪವನ್ನು ಗಂಟಲಲ್ಲಿ ಇಟ್ಟುಕೊಂಡಂತಾಗಬಹುದು.

ಈ ಐರೋಪ್ಯ ರಾಷ್ಟ್ರಗಳ ನಿಯೋಗದ ಭೇಟಿಯಿಂದ ಕಾಶ್ಮೀರದ ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವ ಸ್ಪಷ್ಟ ಸೂಚನೆ. ಇದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿಯ ಕೆಲವು ನಾಯಕರು ಹೇಳುತ್ತಿದ್ದಾರೆ. ಸರಿ ಹಾಗಾದರೆ ನಮ್ಮ ಸಂಸತ್ ಸದಸ್ಯರು ಮತ್ತು ಸಾಮಾನ್ಯ ಪ್ರಜೆಗಳಿಗೂ ಕಾಶ್ಮೀರ ಭೇಟಿಗೆ ಮುಕ್ತ ಅವಕಾಶ ನೀಡಬೇಕು. ಬೇರೆ ರಾಜ್ಯಗಳ ಜನಸಾಮಾನ್ಯರು ಹಿಂದಿನಂತೆ ಅಲ್ಲಿಗೆ ಭೇಟಿ ನಿಡುವಂತಹ ಪರಿಸ್ಥಿತಿ ಬರಬೇಕು. ಆಗ ಮಾತ್ರ ಅಲ್ಲಿನ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿದೆ ಎಂದು ಅರ್ಥ ಮಾಡಿಕೊಳ್ಳಬಹುದು ಎನ್ನುವುದು ಪ್ರತಿಪಕ್ಷಗಳ ಹೇಳಿಕೆ.

ಈ ಎಲ್ಲ ಬೆಳವಣಿಗೆ ನಡುವೆ ಫಾರೂಖ್ ಅಬ್ದುಲ್ಲಾ ಅವರ ಗೃಹ ಬಂಧನದ ಅವಧಿಯನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಸದ್ಯಕ್ಕೆ ಕಣಿವೆ ರಾಜ್ಯದ ಪರಿಸ್ಥಿತಿ ಸುಧಾರಿಸಿಲ್ಲ ಎಂದೇ ಭಾವಿಸಬೇಕಿದೆ.

ಈ ಐರೋಪ್ಯ ರಾಷ್ಟ್ರಗಳ ನಿಯೋಗ ತನ್ನ ಭೇಟಿಯ ನಂತರ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನೂ ನಡೆಸಿದೆ. ಈ ಪತ್ರಿಕಾಗೋಷ್ಠಿಗೆ ಆಯ್ದ ಪತ್ರಕರ್ತರನ್ನು ಮಾತ್ರ ಆಮಂತ್ರಿಸಲಾಗಿತ್ತು. ಹಾಗಾಗಿ ವಾಸ್ತವ ಸ್ಥಿತಿಯ ಸಂಗತಿಗಳು ಬೆಳಕಿಗೆ ಬಂದಿಲ್ಲ ಎನ್ನುವ ಆರೋಪಗಳೂ ಕೇಳಿಬರುತ್ತಿವೆ.

ಈ ಆರೋಪದಲ್ಲಿ ಸತ್ಯ ಇಲ್ಲ ಎನ್ನಲಾಗದು. ಭಾರತದ ಸಂಸತ್ ಸದಸ್ಯರು ಮತ್ತು ಸ್ವ ಇಚ್ಚೆ ಮೇರೆಗೆ ಕಾಶ್ಮೀರಕ್ಕೆ ಭೇಟಿ ನೀಡಲು ಬಯಸಿದ ಪತ್ರಕರ್ತರು ವಿಶೇಷವಾಗಿ ವಿದೇಶಿ ಪತ್ರಕರ್ತರಿಗೆ ಈ ಮೊದಲು ಈಗಲೂ ಅವಕಾಶ ನಿರಾಕರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐರೋಪ್ಯ ರಾಷ್ಟ್ರಗಳ ನಿಯೋಗದ ಸದಸ್ಯ ನಿಕೋಲಾಸ್ ಫೆಸ್ಟ್ ಎನ್ನುವವರು ಭಾರತೀಯ ಸಂಸತ್ ಸದಸ್ಯರ ಭೇಟಿಗೆ ಕೇಂದ್ರ ಸರ್ಕಾರ ಅವಕಾಶ ನೀಡಬೇಕೆನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಿರುವುದು ಈ ನಿಯೋಗದ ಭೇಟಿಯ ವ್ಯವಸ್ಥೆ ಮಾಡಿದ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಐರೋಪ್ಯ ರಾಷ್ಟ್ರಗಳ ಈ ನಿಯೋಗವು ಭಾರತದ ರಾಜಕೀಯ ಮತ್ತು ಆಂತರಿಕ ವಿಷಯಗಳ ಬಗೆಗೆ ತನಗೆ ಆಸಕ್ತಿ ಇಲ್ಲ. ತಮ್ಮೆಲ್ಲರ ಆತಂಕ ಇರುವುದು ಇಂದು ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆ. ಈ ಭಯೋತ್ಪಾದನೆಯನ್ನು ಮಟ್ಟಹಾಕುವ ಭಾರತದ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದು ನಿಯೋಗದ ಎಲ್ಲ ಸದಸ್ಯರು ಹೇಳಿರುವುದು ಭಾರತದ ಕ್ರಮವನ್ನು ಸಮರ್ಥಿಸಿದಂತಾಗಿದೆ.

ಈಗಾಗಲೇ ಹಲವು ಸಂಘಟನೆಗಳು, ಜನಪ್ರತಿನಿಧಿಗಳು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅಂತರ ರಾಷ್ಟ್ರೀಯ ಸಂಸದೀಯ ನಿಯೋಗದ ಮನಸ್ಸಿನಲ್ಲಿ ಏನು ಇದೆ ಎನ್ನುವುದನ್ನು ಈಗಲೇ ಹೇಳಲಾಗದು. ತಮ್ಮ ರಾಷ್ಟ್ರಗಳಿಗೆ ವಾಪಸ್ ಆದ ಬಳಿಕ ಈಗಿನ ಕಾಶ್ಮೀರದ ಸಮಸ್ಯೆಯನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ. ಹಾಗೆಯೇ ಅದನ್ನು ಅಂತರ್ ರಾಷ್ಟ್ರೀಯ ಸಮುದಾಯಕ್ಕೆ ಏನನ್ನು ಹೇಳಲಿದ್ದಾರೆ ಎನ್ನುವುದನ್ನು  ಕಾದು ನೋಡಬೇಕಿದೆ.

ಆದರೆ ವಾಸ್ತವವಾಗಿ ಈ ಅಂತರ್ ರಾಷ್ಟ್ರೀಯ ನಿಯೋಗಕ್ಕೆ ಕಾಶ್ಮೀರ ಭೇಟಿಗೆ ಮುಕ್ತ ಅವಕಾಶ ನೀಡಿ ತಮಗೆ ಭೇಟಿಯ ಅವಕಾಶ ನಿರಾಕರಿಸಿರುವುದನ್ನು ಸಹಜವಾಗಿಯೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಒಂದು ಪ್ರಬಲ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಹೀಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಐರೋಪ್ಯ ರಾಷ್ಟ್ರಗಳ ಸಂಸದೀಯ ನಿಯೋಗಕ್ಕೆ ಭೇಟಿ ನೀಡುವ ಅವಕಾಶ ಸಮಸ್ಯೆಯನ್ನು ತಾನೇ ಮೈಮೇಲೆ ಎಳೆದುಕೊಂಡಿದೆ. ಇಲ್ಲವೇ ಇದನ್ನು ಅಂತರ್ ರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡಲು ಅವಕಾಶ ನೀಡಿದೆ ಎಂಬುದು ರಾಜಕೀಯ ವಿಶ್ಲೇಷಕರ ಭವಿಷ್ಯ. 

.