ರಾಜ ನನ್ನ ರಾಜ!

ರಾಜ ನನ್ನ ರಾಜ!

ನನ್ನದೂ ಒಂದು ದೇಶ. ಈ ದೇಶವನ್ನು " ಭರತವರ್ಷೇ, ಭರತಖಂಡೆ.... "ಮುಂತಾಗಿ ಹೊಗಳುವರು. ಈ ನನ್ನ ದೇಶಕ್ಕೂ ಒಬ್ಬ ರಾಜನಿದ್ದಾನೆ. ಅವನು ದೇಶಸೇವೆಗಾಗಿಯೇ ಹುಟ್ಟಿರುವನಂತೆ. ಕೆಲವರು ಆತನನ್ನು ಸ್ವಾಮಿ ವಿವೇಕಾನಂದರಿಗೆ ಹೋಲಿಸುತ್ತಾರೆ. ಹಲವರು ರಾಮನ ಜೊತೆಗೆ ಸಮೀಕರಿಸುತ್ತಾರೆ. ಯಾವ ರಾಜನೂ ಮಾಡಲಾರದ ಕೆಲಸಗಳನ್ನೆಲ್ಲ ಅವನು ಮಾಡಿರುವನಂತೆ. ಅದಕ್ಕಾಗಿ ತಾಯಿ, ಹೆಂಡತಿಯನ್ನೇ ತೊರೆದಿದ್ದಾನಂತೆ. ದೇಶಕ್ಕಾಗಿ ನಾನು ಇಸೊಂದು ತ್ಯಾಗ ಮಾಡಿರುವೆ ಎಂದು ರಾಜನು ಹೋದಲೆಲ್ಲ ಹೇಳಿಕೊಳ್ಳುತ್ತಾನೆ. ಪ್ರಜೆಗಳು ನಮಗೆಂಥ ರಾಜ ಎಂದು ಆನಂದತುಂದಿಲರು.  ರಾಜ ಮಾಡುವ ಕೆಲಸಗಳ ಬಗ್ಗೆ ಅವರಿಗೆ ಅಪಾರ ಮೆಚ್ಚುಗೆ, ಗೌರವ. ನಮ್ಮ ರಾಜ ಏನೇನು ಮಾಡುವನು, ಗೊತ್ತೇನು?

ರಾಜ, ಅವನ ಬಟ್ಟೆ ಅವನೇ ಒಗೆಯುತ್ತಾನೆ. ಅವನ ಊಟ ಅವನೇ ಮಾಡುತ್ತಾನಂತೆ. ಅವನಿಗೆ ಚಾಯಪೇಯವನ್ನು ಮಾಡುವುದು ಬರುವುದಂತೆ. ಮಾವಿನಹಣ್ಣನ್ನು ಚೀಪಿ ಚೀಪಿ ತಿನ್ನುವನು. ಇಷ್ಟೆಲ್ಲಾ ಮಾಡುವ ರಾಜ ತನ್ನ ಕುಂಡಿಯನ್ನು ತಾನೇ ತೊಳೆದುಕೊಳ್ಳುತ್ತಾನೋ ಏನೋ. ಎಂಥ ಅದ್ಭುತ ಇದು.ಕೇಳಿದರೆ ಕಣ್ಣೀರು ಬರುತ್ತದೆ. ಎದೆ ಉಬ್ಬುತ್ತದೆ. ಇಂತಹ ರಾಜನ ಪಡೆದ ನಾನೇ ಧನ್ಯ ಎನಿಸುತ್ತದೆ. ಕನಿಷ್ಟ ನಾನು ಬದುಕಿರುವ ತನಕ ಈ ರಾಜನೇ ನಮ್ಮನ್ನು ಆಳಲಿ ಎಂದೂ ಹೇಳುವ ಪ್ರಜೆಗಳೂ ಇದ್ದಾರೆ. ಕನಿಷ್ಠ ಎರಡೆರೆಡು ಸಲ ಇವರೇ ಆಳಬೇಕೆಂದು ಅವರ ಆಸ್ಥಾನ ಕಲಾವಿದರಾದ ಭೈರೇಗೌಂಡ ಆಳ್ವಾರರು ಊಟಕ್ಕೆ ಹೋದಾಗ, ಸ್ನಾನಕ್ಕೆ ಹೋದಾಗಲೆಲ್ಲ ಹೇಳುತ್ತಲೇ ಇದ್ದಾರೆ. ಈ ನಮ್ಮ ಆಸ್ಥಾನ ಕಲಾವಿದ ಭೈರೇಗೌಂಡ ಆಳ್ವಾರರು ಬಿಡುವ ಹೂಸಿನಲ್ಲಿ ಕೂಡ ಇದೇ ಸುವಾಸನೆ ಹರಡುತ್ತಿದೆ. ಅದೇ ರೀತಿ ಚೂಲಿಬುಲ್ಲಿ ಎಂಬ ಇನ್ನೊಂದು ಬಾಲಕೋವಿದನೂ ಇದನ್ನೇ ಹೇಳುತ್ತಲೆ ತಿರುಗಾಡುತ್ತದೆ. ಈ ಬಾಲಕೋವಿದನನ್ನು ಮೀರಿಸುವ ಇನ್ನೊಂದು ಬಾಲಕೋವಿದನಿದೆ.  ಅದರ ನಾಮಾಂಕಿತವು ರೋಧನ ವಕ್ರತೀರ್ಥ ಎಂಬುದಾಗಿದೆ. ಇವೆರೆಡೂ ಬಾಲಕೋವಿದಗಳ ಕೆಲಸವೇ "ರಾಜಪ್ರಲಾಪ".

ಈ ರಾಜ ಒಮ್ಮೆ ಏನು ಮಾಡಿದ ಗೊತ್ತೇನು. ದೇಶದಲ್ಲಿ ಕಳ್ಳಕಾಕರನ್ನು ಹೆಡೆಮುರಿ ಕಟ್ಟಬೇಕೆಂದು ತೀರ್ಮಾನ ಮಾಡಿದ. ಕಳ್ಳ ಹಣವನ್ನು ಇಲ್ಲದಂತೆ ಮಾಡುವುದೇ ಉತ್ತಮ ಕ್ರಮ ಎಂದು ಭಾವಿಸಿದ. ಯಾರಿಗೂ ತಿಳಿಯದಂತೆ ನಾಣ್ಯಗಳ ಚಲಾವಣೆಯನ್ನು ಬರ್ಖಾಸ್ತು ಮಾಡಿಬಿಟ್ಟ. ಇದು ಮಾಡಿರುವುದೇ ಪ್ರಜಾಹಿತಕ್ಕಾಗಿ ಎಂದು ಸಾರಿದ. ಪ್ರಜೆಗಳು ಏಕಾಏಕಿ ಹೀಗೆ ಮಾಡಿದರೂ, ರಾಜ ತಮ್ಮ ಒಳಿತಿಗಾಗಿ ಇದೆಲ್ಲಾ ಮಾಡಿದ್ದಾನೆ ಎಂದು ಭಾವಿಸಿದರು. ಭಾವಿಸುವುದೇನು ಬಂತು, ನಂಬಿದರು. ಹೊಟ್ಟೆ ತುಂಬಿದ ಪ್ರಜೆಗಳಂತೂ ನಮ್ಮ ರಾಜ " ಇಂದ್ರ- ನರೇಂದ್ರ " ಎಂದು ಹಾಡಿಹೊಗಳಿದರು. ನಮ್ಮ ರಾಜನ ಕ್ರಮ ಕ್ರಾಂತಿಕಾರಿ ಎಂದೂ, ಇದರಿಂದಾಗಿ ಬೊಕ್ಕಸ ತುಂಬಿ ದೇಶದಲ್ಲಿ ಸ್ವರ್ಣ ಯುಗ ಆರಂಭವಾಗುವುದೆಂದು ಹೇಳತೊಡಗಿದರು.
ಹೊಟ್ಟೆ ಹಸಿದವರಿಗೆ ವಿಪರೀತ ತೊಂದರೆ ಶುರುವಾಯಿತು. ಆದರೂ ಅವರು ಸಹಿಸಿಕೊಂಡರು. ಸ್ವಯಂ ರಾಜನೇ ಹದಿನೈದು ದಿನ ಸಮಯ ಕೊಡಿ. ನಿಮ್ಮ ಬದುಕನ್ನು ನಂದನವನ ಮಾಡುವೆನೆಂದ. ಹೊಟ್ಟೆ ಹಸಿದವರು ರಾಜನ ಮಾತುಗಳನ್ನು ನಂಬಿದರು. ಅವರು ನಂಬುವಂತೆ ಹೊಟ್ಟೆ ತುಂಬಿದವರು ನಂಬಿಕೆಗಳನ್ನು ಹೇರುತ್ತಲೇ ಹೋದರು. ಹೊಟ್ಟೆ ತುಂಬದಿದ್ದಾಗ ಮನುಷ್ಯರ ದನಿ ಹೊಮ್ಮೀತೆ? 

ರಾಜನ ಈ ಕ್ರಾಂತಿಕಾರಿ ನಿರ್ಧಾರದಿಂದ ಅನೇಕರ ಕೆಲಸ ಹೋಯಿತು. ಹಲವರ ಪ್ರಾಣವೇ ಹೋಯಿತು. ದೇಶದ ತುಂಬ ಅಲ್ಲೋಲಕಲ್ಲೋಲ. ಆದರೆ ಆಸ್ಥಾನ ಕಲಾವಿದರಾದ ಸರ್ವಶ್ರೀ ಭೈರೇಗೌಂಡ ಆಳ್ವಾರರು, ಬಾಲಕೋವಿದರಾದ ಚೂಲಿಬುಲ್ಲಿ, ರೋಧನ ವಕ್ರತೀರ್ಥಗಳು "ಒಂದು ಕ್ರಾಂತಿಯ ಸಮಯದಲ್ಲಿ ಸಣ್ಣ ಪುಟ್ಟ ಸಾವುನೋವುಗಳು ಸಹಜ. ಖಾವಂದರು ನಮಗಾಗಿ ಮನೆಮಠ ಬಿಟ್ಟು, ಹೆಂಡತಿ ಮಕ್ಕಳನ್ನು ಬಿಟ್ಟು ಇಷ್ಟು ಮಾಡುವಾಗ ಪ್ರಜೆಗಳು, ಪ್ರಜಾಪಾಲಕರನ್ನು ಅನುಮಾನಿಸಬಾರದು. ಹಾಗೆ ಅನುಮಾನಿಸುವುದು ರಾಜದ್ರೋಹ" ಎಂದು ಸಾರಿಸಾರಿ ಹೇಳತೊಡಗಿದರು. ಸನ್ಮಾನ್ಯ ಸರಸ್ವತಿಪುತ್ರರತ್ನಗಳೇ ಇಂತಹ ಬೋಧನೆ ಮಾಡಿದ ಮೇಲೆ ರಾಜನನ್ನು ಅನುಮಾನಿಸಬಹುದೇ? ಪ್ರಜೆಗಳಿಗೆ ಗೊಂದಲ ಆರಂಭವಾಯಿತು. ಅದೇ ಸಮಯದಲ್ಲಿ "ರಾಜನ ಈ ನಿರ್ಧಾರ ಮೂರ್ಖತನದ ಪರಮಾವಧಿ" ಎಂದು ಕೆಲವರು ಹೇಳಲಾರಂಭಿಸಿದರು. ಪ್ರಜೆಗಳ ಗೊಂದಲ ಬಿಗಡಾಯಿಸಿತು. ಯಾರನ್ನು ನಂಬುವುದು, ಯಾರನ್ನು ಬಿಡುವುದು ಎಂಬುದೆ ಸಮಸ್ಯೆಯಾಯಿತು. ಆಗ ರಾಜನ ಆಸ್ಥಾನದ ವಂಧಿಮಾಗದರೆಲ್ಲ ಸೇರಿ ರಾಜ ಏನು ಮಾಡಿದರೂ ಸರಿಯೇ. ರಾಜನನ್ನು ತೆಗಳುವುದು, ರಾಜನನ್ನು ಪ್ರಶ್ನಿಸುವುದು "ರಾಜದ್ರೋಹ ಮಾತ್ರವಲ್ಲ ದೇಶದ್ರೋಹ" ಎಂದು ಮತ್ತೆ ಮತ್ತೆ ಸಾರಿದರು. ಅಂದಿನಿಂದ ದೇಶದಲ್ಲಿ ದೇಶದ್ರೋಹಿ, ದೇಶಪ್ರೇಮಿ ಎಂಬ ಎರಡು ಗುಂಪುಗಳು ಹುಟ್ಟಿಕೊಂಡವು.

ದೇಶ ಹೀಗೆ ಗುಂಪಾಗಿ ಹೋಳಾಗುತ್ತಿರುವಾಗ
ಬರಗಾಲ ಬಂತು. ರೈತಾಪಿ ಜನಗಳು ತತ್ತರಿಸಿಹೋದರು. ತಮ್ಮ ಪಾಲಿನ ದೇವರಾದ ರಾಜ ಏನಾದರೂ ಮಾಡೇ ಮಾಡುತ್ತಾನೆಂದು ಕಾದರು, ಕೋರಿದರು, ಬೇಡಿದರು, ತಮ್ಮ ಮಲವನ್ನು ತಾವೇ ಸುರಿದುಕೊಂಡು ಬೇಗುದಿಯನ್ನು ಹೊರಹಾಕಿದರು. ರಾಜ ಮಾತ್ರ ಹೊಸ ಹೊಸ ಬಟ್ಟೆಗಳನ್ನು ಧರಿಸಿ, ಪುಷ್ಪಕವಿಮಾನದಲ್ಲಿ ಓಡಾಡಿದ. ರೈತರು ಕೊನೆಗೆ ದಂಗೆಯೆದ್ದು ರಾಜನ ಅರಮನೆಯ ಕಡೆ ಹೊರಟರು.ನಾವೇ ನಿಮ್ಮ ಬಳಿ ಬರುತ್ತೇವೆ. ನಮ್ಮ ಗೋಳು ಕೇಳಿ ಎಂದು ಬರಿಗಾಲಲ್ಲಿ ನಡೆದೇಬಂದರು. ಪಾದಗಳು ತರಚಿಹೋದವು. ನಡೆದ ಪಾದಗಳಿಂದ ರಸ್ತೆಯಲ್ಲಿ ರಕ್ತದೋಕುಳಿ ಹರಡಿತು.  ರಾಜ ಇದರಿಂದ ಕಳವಳಗೊಂಡರೂ ತಾನು  ಸ್ಥಿತಪ್ರಜ್ಙ ಎಂದು
ತೋರಿಸಿಕೊಳ್ಳುವ ಬಯಕೆಯಾಯಿತು. ರಾಜ ಸಿರಿವಂತರ ಔತಣ ಕೂಟದಲ್ಲಿ ಭಾಗವಹಿಸಿದ. ಬೆಳಿಗ್ಗೆ ಎದ್ದು ಯೋಗಾಭ್ಯಾಸ ಮಾಡಿದ. ಲಲಿತಾಸಹಸ್ರನಾಮ ಪಠಿಸಿದ. "ರೈತಾಪಿ ಜನ ಮುಗ್ಧರು. ಅವರನ್ನು ರಾಜಬೀದಿಗಿಳಿವಂತೆ ಮಾಡಿದವರೆಲ್ಲ ರಾಜದ್ರೋಹಿಗಳು" ಎಂದು ಫರ್ಮಾನು ಹೊರಡಿಸಿದ. ಯಥಾಪ್ರಕಾರ ಆಸ್ಥಾನ ವಂಧಿಮಾಗದರು ರಾಜನನ್ನು ಹಾಡಿಹೊಗಳಿ ತಮ್ಮ ಜಿಹ್ವಾಚಾಪಲ್ಯವನ್ನು ಮೆರೆದರು. ರಾಜದ್ರೋಹವೆ ದೇಶದ್ರೋಹ  ಎಂದು ಸಾರಿದರು. ಇವರು ಹೊಟ್ಟೆ ತುಂಬಿದ ಜನರೆಂದು ಮತ್ತೆ ಮತ್ತೆ ಹೇಳುವ ಅಗತ್ಯವೇನೂ ಇಲ್ಲ ಬಿಡಿ. ಏಕೆಂದರೆ ಶತಶತಮಾನಗಳಿಂದ ಜಿಹ್ವಾಚಾಪಲ್ಯವನ್ನೇ ಸೇವೆಯೆಂದು ನಂಬಿಸಿಕೊಂಡು ಬಂದಿರುವ ಈ ವರ್ಗವು ಶ್ರೇಷ್ಠ/ಉತ್ತಮ ಎಂದೂ ಒಪ್ಪಿಸಿದೆ. ಆದರೆ ಹಸಿದವರ ನೋವು ಎಂಬುದು ಸಾಮಾನ್ಯವೇ? ಆ ನೋವಿಗಿರುವ ಮುಖಗಳೆಷ್ಟೋ? ಅದನ್ನು ಉತ್ತರಿಸುವ ಕಾಲದ ಹತ್ತಿರ ಹತ್ತಿರ ನಿಂತಿರುವಾಗ ಒಂದು ಪ್ರಸಂಗ ನೆನಪಾಗುತ್ತಿದೆ.
***
ಹಿಂದೆ ಮೈಸೂರು ಸಂಸ್ಥಾನದ ಆಳ್ವಿಕೆಯ ಕಾಲದಲ್ಲಿ ಹೀಗೆ ಒಂದು ಬರಗಾಲ ಬಂದಿತ್ತು. ರೈತಾಪಿ ಜನರು ತತ್ತರಿಸಿಹೋಗಿದ್ದರು. ಆಗಿನ ರಾಜರು ಊರೂರಿಗೆ ಹೋಗಿ ಪ್ರಜೆಗಳ ಯೋಗಕ್ಷೇಮ ವಿಚಾರಿಸುತ್ತಿದ್ದ ಕಾಲವದು. ರಾಜರು ಒಂದು ಊರಿಗೆ ಬಂದಾಗ ರೈತರು " ಸ್ವಾಮಿ ಈ ಸಲ ಮಳೆಯಿಲ್ಲ, ಬೆಳೆಯಿಲ್ಲ. ನಾವು ಬದುಕುವುದೇ ಕಷ್ಟವಾಗಿದೆ. ಹೀಗಿರುವಾಗ ಖಾವಂದರು ದೊಡ್ಡ ಮನಸ್ಸು ಮಾಡಿ, ಕಂದಾಯ, ಕರ ಮಾಫಿ ಮಾಡಬೇಕು" ಎಂದು ಕೋರಿದರು. ರಾಜರು ತಮ್ಮ ದಿವಾನರ ಕಡೆ ತಿರುಗಿನೋಡಿದರು. ದಿವಾನರು " ತಮ್ಮ ಹಸ್ತ, ತಮ್ಮ ಚಿತ್ತ ಮಹಾಸ್ವಾಮಿ" ಎಂದು ಉತ್ತರಿಸಿದರು. ರಾಜರು ರೈತರಿಗೆ " ಆಗಲಿ. ನಿಮ್ಮ ಮನವಿ ಕೇಳಿದ್ದೇವೆ. ಶೀಘ್ರವಾಗಿ ನಿರ್ಧಾರ ಪ್ರಕಟಿಸುತ್ತೇವೆ" ಎಂದು ಭರವಸೆ ನೀಡಿ ಮುಂದೆ ಸಾಗಿದರು. ಇದಾದ ಕೆಲದಿನಗಳಲ್ಲಿ ಹಸ್ತ-ಚಿತ್ತ ಮಳೆ ಚೆನ್ನಾಗಿ ಸುರಿದು ಮಳೆಬೆಳೆಯೂ ಆಯಿತು. ರೈತರೂ ಬದುಕಿದರು, ಬೊಕ್ಕಸವೂ ತುಂಬಿತು.