ಕಂಪ್ಯೂಟರ್ ಗಳನ್ನು ತಿಂದ ಅಧಿಕಾರಿಗಳು : ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕಲಿಯಬೇಕಿದ್ದ ವಿದ್ಯಾರ್ಥಿಗಳಿಗೆ ತಪ್ಪಿಲ್ಲ ಗೋಳು 

ಕಂಪ್ಯೂಟರ್ ಗಳನ್ನು ತಿಂದ ಅಧಿಕಾರಿಗಳು : ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕಲಿಯಬೇಕಿದ್ದ ವಿದ್ಯಾರ್ಥಿಗಳಿಗೆ ತಪ್ಪಿಲ್ಲ ಗೋಳು 

ಶಾಲಾ ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕೆ ಉದ್ದೇಶದ ಮಾ್ಹಿತಿ ಮತ್ತು ಸಂಪರ್ಕ ತಂತ್ರಜ್ಞಾನ (ಐಸಿಟಿ) 3 ನೇ ಹಂತದ  ಯೋಜನೆಯಡಿ ಬಿಡುಗಡೆಯಾಗಿದ್ದ 35 ಕೋಟಿ ರು. ಅನುದಾನ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿರುವ ಯಾವೊಬ್ಬ ಅಧಿಕಾರಿಗಳ ಮೇಲೂ ಶಿಕ್ಷೆಯಾಗುವ ಲಕ್ಷಣಗಳಿಲ್ಲ. ಹಲವು ವರ್ಷಗಳಿಂದಲೂ ಆರೋಪಿತ ಅಧಿಕಾರಿ, ನೌಕರರ ಮಾಹಿತಿ ಪಡೆಯುವುದರಲ್ಲೇ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಕಾಲಹರಣ ಮಾಡುತ್ತಿದೆ ಎನ್ನುತ್ತಾರೆ ಜಿ.ಮಹಂತೇಶ್. 

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಅಂದಾಜು 35 ಕೋಟಿ ರು.ವೆಚ್ಚದಲ್ಲಿ ಜಾರಿಗೊಳಿಸಿದ್ದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ(ಐಸಿಟಿ)-3ನೇ ಹಂತದ ಯೋಜನೆಯಲ್ಲಿ ಆಗಿರುವ ಆರ್ಥಿಕ ನಷ್ಟ ಮತ್ತು ನಡೆದಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣವನ್ನು ಮಣ್ಣೆಳೆದು ಮುಚ್ಚಲು ಸದ್ದಿಲ್ಲದೆ ಎಲ್ಲಾ ತಯಾರಿ ನಡೆದಿದೆ. 

ಈ ಯೋಜನೆಯಡಿಯಲ್ಲಿ ಎಷ್ಟು ಆರ್ಥಿಕ ನಷ್ಟವಾಗಿದೆ ಎಂಬ ಬಗ್ಗೆ ಲೆಕ್ಕಾಚಾರ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಬಿಡುಗಡೆಗೊಳಿಸಿರುವ ಮೊತ್ತದಲ್ಲಿ ಎಷ್ಟು ದುರುಪಯೋಗವಾಗಿದೆ ಎಂಬುದನ್ನು ಖಚಿತಪಡಿಸಲು ಸಾಧ್ಯವಿರುವುದಿಲ್ಲ ಎಂದು ಅಧಿಕಾರಿಗಳು ಕೈ ಎತ್ತಿದ್ದಾರೆ. ಅಧಿಕಾರಿಗಳ ಈ ಧೋರಣೆ ಪ್ರಕರಣದ ತನಿಖೆ ಏನಾಗಲಿದೆ ಎಂಬ ಬಗ್ಗೆ ಸುಳಿವನ್ನೂ ನೀಡಿದ್ದಾರೆ. 

ಪ್ರಕರಣದ ತನಿಖಾ ಹಂತದ ಬಗ್ಗೆ  ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು 2019ರ ಆಗಸ್ಟ್ 7ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಒದಗಿಸಿರುವ ಮಾಹಿತಿ ಇಡೀ ಪ್ರಕರಣ ಹೇಗೆ ಸಾಗುತ್ತಿದೆ ಎಂಬುದನ್ನು ವಿವರಿಸಿದೆ. ಈ ಪತ್ರದ ಪ್ರತಿ 'ಡೆಕ್ಕನ್'ನ್ಯೂಸ್' ಗೆ ಲಭ್ಯವಾಗಿದೆ. 

ಈ ಯೋಜನೆಯಡಿ ಅವ್ಯವಹಾರ ಮತ್ತು ಕರ್ತವ್ಯಲೋಪ ಎಸಗಿರುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಹಂತದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪ್ರಕ್ರಿಯೆಯೂ ಪ್ರಗತಿ ಕಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ 2019ರ ಜುಲೈ 20ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆ ನೀಡಿದ್ದ ನಿರ್ದೇಶನಗಳನ್ನೂ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಲಿಸಿಲ್ಲದಿರುವುದು ಪತ್ರದಿಂದ ಗೊತ್ತಾಗಿದೆ. 

'ಯಾವ ಯಾವ ಅಧಿಕಾರಿಗಳು ಭಾಗಿಯಾಗಿದ್ದರು, ಯಾವ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಅವರ ಅವಧಿಯಲ್ಲಿ ಆಗಿರುವ ಅಂದಾಜು ಎಷ್ಟು ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಬಗ್ಗೆ ಪಟ್ಟಿ ಮಾಡಿ ಸೇವಾ ವಿವರಗಳೊಂದಿಗೆ ಸಲ್ಲಿಸಬೇಕು. ಯಾವ ಯಾವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅವಕಾಶ ಇದೆ, ಇಲ್ಲ ಎಂಬ ಬಗ್ಗೆ ಮಾಹಿತಿಯನ್ನು 2019ರ ಜುಲೈ 23ರೊಳಗೆ ತಲುಪಿಸಬೇಕು,' ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದರು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ಇಆರ್ ಟಿ) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕರಣದ ಗಂಭೀರತೆಯನ್ನೇ ಅರಿತಿಲ್ಲ. 'ಐಸಿಟಿ-3ನೇ ಹಂತದ ಯೋಜನೆ ಅನುಷ್ಠಾನ ನಿರಂತರವಾಗಿ ಇರುವುದರಿಂದ ಈ ಯೋಜನೆಯಡಿಯಲ್ಲಿ ಎಷ್ಟು ಆರ್ಥಿಕ ನಷ್ಟವಾಗಿದೆ ಎಂಬ ಬಗ್ಗೆ ಲೆಕ್ಕಾಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಬಿಡುಗಡೆಗೊಳಿಸಿದ ಮೊತ್ತದಲ್ಲಿ ಎಷ್ಟು ದುರುಪಯೋಗವಾಗಿದೆ ಎಂಬುದನ್ನೂ ಖಚಿತಪಡಿಸಲು ಸಾಧ್ಯವಿಲ್ಲ,' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ. 

ಆದರೆ 2010ರಿಂದ 2016ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ನಿರ್ದೇಶಕ ವೃಂದದ ಅಧಿಕಾರಿಗಳ ಹೆಸರುಗಳೂ, ಅವರುಗಳ ಅವಧಿಯಲ್ಲಿ ಬಿಡಗಡೆಗೊಳಿಸಿದ ಮೊತ್ತ, ಯಾವ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ ಹಾಗೂ ಆ ಅಧಿಕಾರಿಗಳು ಯಾವ ದಿನಾಂಕಗಳಂದು ನಿವೃತ್ತಿ ಹೊಂದಿರುವುದನ್ನು ಮಾಹಿತಿ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆರ್ಥಿಕ ನಷ್ಟವಾಗಿರುವ ಮಾಹಿತಿ ನೀಡದೇ ಕೈತೊಳೆದುಕೊಂಡಿದ್ದಾರೆ.

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ತಿಳಿವಳಿಕೆ ಒದಗಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಜಾರಿಗೊಳಿಸಿದ್ದ ಯೋಜನೆ, ಸಂಪೂರ್ಣವಾಗಿ ಹಳ್ಳ ಹಿಡಿದಿತ್ತು.  ಈ ಯೋಜನೆಗೆ ಬಿಡುಗಡೆಯಾಗಿದ್ದ ಅಂದಾಜು 35 ಕೋಟಿ ರು.ಗಳನ್ನು ಅಧಿಕಾರಿಗಳ ಸಂಪೂರ್ಣವಾಗಿ ಖರ್ಚು ಮಾಡಿದ್ದರು. 

ಯೋಜನೆಯಡಿ ರಾಜ್ಯದ 4396 ಶಾಲೆಗಳ ಕಂಪ್ಯೂಟರ್ ಗೆ ಬೇಕಾಗುವ ಬ್ಯಾಟರಿ, ಯುಪಿಎಸ್ ಗಳನ್ನು ವಿವಿಧ ಕಂಪೆನಿಗಳು ಪೂರೈಸಿದ್ದವು. ಆದರೆ ಕೆಲ ಶಾಲೆಗಳಿಗೆ ಬ್ಯಾಟರಿ, ಯುಪಿಎಸ್ ಉಪಕರಣಗಳಷ್ಟೇ ಪೂರೈಸಿದ್ದ ಕಂಪನಿಗಳು ಕಂಪ್ಯೂಟರ್ ಗಳನ್ನು ಸರಬರಾಜು ಮಾಡಿರಲಿಲ್ಲ. ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ಕಾರಣ ಕೋಟ್ಯಂತರ ರೂ. ವೌಲ್ಯದ ಬ್ಯಾಟರಿ, ಯುಪಿಎಸ್ ಉಪಕರಣ ಶಾಲಾ ಕೊಠಡಿಯಲ್ಲೇ ಧೂಳು ಹಿಡಿದಿದ್ದವು.

ಐಸಿಟಿ-3ನೇ ಹಂತದ ಯೋಜನೆಯಡಿ ನ್ಯೂಮರಿಕ್ ಪವರ್ ಸಿಸ್ಟಮ್ಸ್ ಲಿಮಿಟೆಡ್ 5 ಕೆವಿಎ ದರ್ಜೆಯ ಬ್ಯಾಟರಿ, ಯುಪಿಎಸ್ ಉಪಕರಣಕ್ಕೆ 1,11,487 ರೂ., 3 ಕೆವಿಎ ದರ್ಜೆಗೆ 71,404, ಟೆಕ್ಟರ್ ಪವರ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, 5 ಕೆವಿಎ ದರ್ಜೆಗೆ 1,25,500, 3 ಕೆವಿಎ ದರ್ಜೆಗೆ 80,380, ಪವರ್ ಒನ್ ಮೈಕ್ರೋ ಸಿಸ್ಟಮ್ಸ್ ಲಿಮಿಟೆಡ್ 5 ಕೆವಿಎ ದರ್ಜೆಗೆ 1,29,118, 3 ಕೆವಿಎ ದರ್ಜೆಗೆ 82,306ರೂ. ದರ ನಮೂದಿಸಿದ್ದವು.  

ಅದೇ ರೀತಿ ಪ್ರೊಜೆಕ್ಟರ್ ಉಪಕರಣ 35,100, ಎಂಎಫ್ಡಿ ಪ್ರಿಂಟರ್ ಪೂರೈಕೆಗೆ 44,160 ರೂ. ದರವನ್ನು ಬೆಂಗಳೂರಿನ ಎಚ್ಸಿಎಲ್ ಇನ್ಫೋ ಸಿಸ್ಟಮ್ಸ್ ಲಿಮಿಟೆಡ್ ನಿಗದಿಪಡಿಸಿತ್ತು. ಇಲಾಖೆ ನೀಡಿದ ಆದೇಶದನ್ವಯ ಉಪಕರಣಗಳ ಸಾಮರ್ಥ್ಯ ಇದೆಯೇ ಎಂಬ ಕುರಿತು ಇಲಾಖೆಯಿಂದ ಪರಿಶೀಲನೆ ನಡೆದಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.

ಈ ಆರೋಪಗಳ ಮಧ್ಯೆಯೇ ಇಲಾಖೆ, ಸಂಸ್ಥೆಗಳಿಗೆ ಉಪಕರಣ ಪೂರೈಕೆ ಬಿಲ್ ಮೊತ್ತ ಪಾವತಿ ಮಾಡಿತ್ತು. ಯೋಜನೆಯಡಿ ಪೂರೈಕೆಯಾಗಿರುವ ಉಪಕರಣಗಳ ಸುಸ್ಥಿತಿ,  ಸುರಕ್ಷಿತ, ಕಳವು ಇತರೆ ಕಾರಣಗಳಿಗೆ ವಿಮೆ ಪಾಲಿಸಿ ಮಾಡಿಸಬೇಕು ಇಲ್ಲವಾದಲ್ಲಿ ಮುಖ್ಯ ಶಿಕ್ಷಕರನ್ನು ಹೊಣೆ ಮಾಡಲಾಗುವುದು ಎಂದು ಉಪಕರಣಗಳು ಸರಬರಾಜಾದ ಒಂದು ವರ್ಷದ ನಂತರ ಆದೇಶ ಹೊರಡಿಸಿತ್ತು.