ಯಾರೂ ಅತಿಮಾನವರಲ್ಲ 

ಯಾರೂ ಅತಿಮಾನವರಲ್ಲ 

ದಶಕಗಳ ಹಿಂದಿನ ಘಟನೆ. ಬ್ರಿಟನ್ ನ ರಾಣಿ ಅಮೆರಿಕಾಗೆ ಭೇಟಿ ನೀಡಿದ ಸಂದರ್ಭ. ವಿಮಾನ ನಿಲ್ದಾಣದದಲ್ಲಿ ವಿಮಾನ ನಿಲ್ಲುತ್ತದೆ. ಹೊರಗೆ ಬಂದು, ಮೆಟ್ಟಿಲುಗಳನ್ನು ಇಳಿಯುವ ಮೊದಲು ಪದ್ಧತಿಯಂತೆ ಆತಿಥೇಯರಿಗೆ ಆತ್ಮೀಯವಾಗಿ ಕೈಬೀಸುತ್ತಾ ನಿಲ್ಲುವ ಮಹಾರಾಣಿಯ ಲಂಗ, ಬೀಸಿದ ಗಾಳಿಗೆ ಅರೆಕ್ಷಣ ಮೇಲೇರುತ್ತದೆ. ಆದರೆ, ಅಂತಹ ಅವಕಾಶಗಳನ್ನು ಕಳೆದುಕೊಳ್ಳದ ಪ್ರೆಸ್ ಫೊಟಾಗ್ರಫರ್ಸ್ ತಮ್ಮ ಕ್ಯಾಮೆರಾಗಳಲ್ಲಿ ಆ ಅಪರೂಪದ ಸಂದರ್ಭವನ್ನು ತುಂಬಿಕೊಳ್ಳುತ್ತಾರೆ. ಮಾರನೇ ದಿನ ಪತ್ರಿಕೆಗಳಲ್ಲಿ ಆ ಚಿತ್ರ ಪ್ರಕಟವಾಗುತ್ತದೆ. ರಾಜಮನೆತನಕ್ಕೆ ಸಂಬಂಧಪಟ್ಟಂತೆ ಮಡಿವಂತಿಕೆ ಅನುಸರಿಸುವ ಬ್ರಿಟಿಷರನ್ನು ಇದು ಕೆರಳಿಸುತ್ತದೆ. ಆ ಆಕ್ಷೇಪಣೀಯ ಛಾಯಾಚಿತ್ರವನ್ನು ಪ್ರಕಟಿಸಿ ತಮ್ಮ ದೇಶದ ರಾಣಿಯ ಘನತೆಗೆ ಧಕ್ಕೆ ತಂದ ಅಮೆರಿಕೆಯ ಮಾಧ್ಯಮದ ವಿರುದ್ಧ ಸಂಪಾದಕೀಯಗಳನ್ನು ಬರೆಯಲಾಗುತ್ತದೆ. ಕುಹಕಕ್ಕೆಂದೇ ಹುಟ್ಟಿರುವ ಅಮೆರಿಕೆಯ ಮಾಧ್ಯಮ ಪ್ರತ್ಯುತ್ತರವಾಗಿ "ಮಹಾರಾಣಿ ಕೂಡ ಮನುಷ್ಯಳೇ ಎಂಬುದನ್ನಷ್ಟೇ ನಾವು ತೋರಿಸಿದ್ದು," ಎನ್ನುತ್ತದೆ. 

ವಿಶ್ವ ಕಪ್ ಗೆಲ್ಲುವುದನ್ನು ಹವ್ಯಾಸ ಮಾಡಿಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕಿಂತಲೂ ಹೆಚ್ಚು ಬಿಲ್ಡ್-ಅಪ್ ಪಡೆದುಕೊಂಡ ತಂಡ ಇಂಗ್ಲೆಂಡ್. ಒಂದು ವಾರದ ಕೆಳಗೆ ಇಂಗ್ಲೆಂಡ್ ತಂಡವೂ ಸೋಲಬಹುದೆಂಬ ನಿರೀಕ್ಷೆ ಬಹುಜನರಿಗೆ ಇರಲಿಲ್ಲ. 250 ಕ್ಕೂ ಕಡಿಮೆ ಸ್ಕೋರನ್ನು ಶ್ರೀಲಂಕಾ ವಿರುದ್ಧ ಗಳಿಸಲಾಗದೇ ಮುಗ್ಗರಿಸಿದ ಇಂಗ್ಲೆಂಡ್ ತಂಡ ಕೂಡ ಮನುಷ್ಯರಿಂದಲೇ ರಚಿತವಾದ ತಂಡ, ಅದನ್ನೂ ಬಗ್ಗು ಬಡಿಯಬಹುದು ಎಂದು ಪಾಕಿಸ್ತಾನ ಈಗಾಗಲೇ ಸಾಬೀತು ಮಾಡಿಯಾಗಿತ್ತು. ಲಸಿತ್ ಮಲಿಂಗಾರ ಕೊನೆಯ ವಿಶ್ವ ಕಪ್ ಪಂದ್ಯಾವಳಿ ಇದಾಗಿದ್ದು ಶ್ರೀಲಂಕಾ ತಂಡ ಅವರಿಗೆ ವಿಶಿಷ್ಟವಾದ ವಿದಾಯ ನೀಡುವ ಸಾಧ್ಯತೆ ಇನ್ನೂ ಉಳಿದುಕೊಂಡಿದೆ. 

ಪ್ರತಿ ಪಂದ್ಯಾವಳಿಯಲ್ಲೂ ತನ್ನ ಪರಾಕ್ರಮವನ್ನು ತನ್ನದೇ ರೀತಿಯಲ್ಲಿ ಪ್ರದರ್ಶಿಸುವುದರಲ್ಲಿ ಛಾಪು ಮೂಡಿಸಿರುವ ಬಾಂಗ್ಲಾ ತಂಡ ಕೂಡ ಆಸ್ಟ್ರೇಲಿಯಾ ಕೈಯಲ್ಲಿ ಸೋಲುಂಡಿತಾದರೂ ಅದನ್ನು "ವೀರ ಅಪಜಯ" ಎಂದಷ್ಟೇ ವರ್ಣಿಸಬಹುದು. 

ನಿಧಾನವಾಗಿಯಾದರೂ ತಮ್ಮ ಆಟವನ್ನು ಒಪ್ಪಿಕೊಳ್ಳತಕ್ಕ ಹದಕ್ಕೆ ತಿರುಗಿಸತೊಡಗಿದ್ದು  ಕೇವಲ ಲಂಕಾ ಮತ್ತು ಬಾಂಗ್ಲಾ ತಂಡಗಳಲ್ಲ. ಇಡೀ ಟೂರ್ನಿಯಲ್ಲಿ ಒಂದೂ ಮ್ಯಾಚ್ ಗೆಲ್ಲದ ತಂಡವೆಂಬ ಅಪಕೀರ್ತಿಯನ್ನು ಹಣೆಗೆ ಅಂಟಿಸಿಕೊಂಡೇ ಭಾರತದ ವಿರುದ್ಧ ಅಖಾಡಕ್ಕಿಳಿದ ಆಫ್ಘಾನಿಸ್ತಾನ ಭಾರತಕ್ಕೆ ಜಾಪಾಳ ಮಾತ್ರೆ ನುಂಗಿಸಿತು. ತನ್ನ ಬೌಲರ್ಗಳಿಗೆ ಪೂರಕವಾದ ವಾತಾವರಣವಿತ್ತು, ಹಾಗಾಗಿ ಆ ಮಟ್ಟಿನ ಸಾಧನೆ ಸಾಧ್ಯವಾಯಿತು ಎಂದು ವಿಶ್ಲೇಷಿಸಿದರೆ ಆಫ್ಘಾನಿಸ್ತಾನಕ್ಕೆ ಅನ್ಯಾಯ ಮಾಡಿದಂತೆ. ಆ ತಂಡದ ಮೂರೂ ಸ್ಪಿನ್ನರ್ ಗಳು ಬ್ಯಾಟಿಂಗ್ ದೈತ್ಯರನ್ನು ಹೊಂದಿದ ಭಾರತವನ್ನು ಆಕಡೆ ಈಕಡೆ ಸರಿಯಾದಂತೆ ಕಟ್ಟುಹಾಕಿದರು. ಭಾರತದ ಜುಜುಬಿ ಮೊತ್ತವನ್ನು ಬೆನ್ನೆತ್ತುವ ಕೈಂಕರ್ಯದಲ್ಲಿ ಎರಡು ಬಾರಿ ಗೆಲುವಿನ ಹೊಂಗಿರಣವನ್ನು ಕಂಡಿದ್ದರು. ಆಕ್ರಮಣಕಾರಿಯಾಗಿ "ಹೌಜಾಟ್" ಕೂಗಿ ಪಂದ್ಯದ ತನ್ನ  ಗಳಿಕೆಯ ಕಾಲುಭಾಗವನ್ನು ನಾಯಕ ವಿರಾಟ್ ಕೊಹ್ಲಿ ಜುಲ್ಮಾನೆಯಾಗಿ ತೆತ್ತಬೇಕಾಯಿತೆಂದರೆ, ಆಫ್ಘಾನಿಸ್ತಾನ ತನ್ನ ಪ್ರಬಲ ಎದುರಾಳಿಗೆ ಒಡ್ಡಿದ ಪೈಪೋಟಿಯ ಅರಿವಾದೀತು. 

ಆ ಪಂದ್ಯದ ಫಲಿತಾಂಶ ಹೊರಬಿದ್ದ ತತ್ಕ್ಷಣದಲ್ಲಿ ಫೇಸ್ಬುಕ್ ಕ್ಯಾಪ್ಸುಲ್ ಮೂಲಕ ನಾನು  ಹೀಗೆ ಅರ್ಥೈಸಿದ್ದೆ. ಭಾರತ ತಂಡವನ್ನು ಗತ್ತಿನಿಂದ ರಸ್ತೆಯಲ್ಲಿ ಚಲಿಸುವ ರೋಲ್ಸ್ ರಾಯ್ಸ್ ಕಾರಿಗೂ, ಆಫ್ಗಾನಿಸ್ತಾನ ತಂಡವನ್ನು ಆ ಕಾರನ್ನು ನಿಲ್ಲಿಸಿ ಡಾಕ್ಯುಮೆಂಟ್ಸ್ ತಪಾಸಣೆ ಮಾಡುವ ಪೊಲೀಸ್ ಪೇದೆಗೂ ಹೋಲಿಸಿದ್ದೆ. ಈ ಹೋಲಿಕೆಗೆ ಅಭೂತಪೂರ್ವ ಜನಮನ್ನಣೆ ಸಿಕ್ಕಿದ್ದರಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ರೋಲ್ಸ್ ರಾಯ್ಸ್ ಮಾಲೀಕನನ್ನೂ ತಡೆಯುವ ಹಕ್ಕು/ಸಾಮರ್ಥ್ಯ ಪೊಲೀಸ್ ಗಿದೆ. ಯಾರೂ ನಿರ್ವಿವಾದಿತ ಪ್ರಾಬಲ್ಯರಲ್ಲ. 

ಅದನ್ನು ಹೇಳುತ್ತಲೇ, ಮೊಹಮ್ಮದ್ ಶಮಿಯ ಬಗ್ಗೆ ಹೇಳಲೇಬೇಕು. ಆತ ಪಂದ್ಯದ ಕಟ್ಟ ಕಡೆಯ ಓವರ್ ಬೌಲ್ ಮಾಡಲು ಇದ್ದ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಿದ ಹಿರಿಮೆ ಬೂಮ್ರಾದು. ಯಾವುದೇ ಉತ್ತಮ ಬೌಲರ್ಗೆ ಮತ್ತೊಂದು ತುದಿಯಿಂದ ಬೌಲ್ ಮಾಡುವ ಬೌಲರ್ನ ಸಾಮರ್ಥ್ಯ ಮುಖ್ಯ. ಬೂಮ್ರಾ, ಶಮಿ ಒಬ್ಬರಿಗೊಬ್ಬರು ಅಮೂಲ್ಯವಾದ ಬೆಂಬಲ ಕೊಟ್ಟುಕೊಂಡರು. ಭುವಿಯ ಕಾಲಿಗೆ ಪೆಟ್ಟುಬಿದ್ದು ಹೊರಗುಳಿಯಬೇಕಾದ ಕಾರಣದಿಂದ ಸಿಕ್ಕ ಅವಕಾಶವನ್ನು ಸಂಪೂರ್ಣ ಬಳಕೆಯನ್ನು ಶಮಿ ಮಾಡಿಕೊಂಡರು. ಚೇತನ್ ಶರ್ಮ 1987 ರಲ್ಲಿ ಗಳಿಸಿದ ಹ್ಯಾಟ್-ಟ್ರಿಕ್ ಬಿಟ್ಟರೆ ವಿಶ್ವ ವೇದಿಕೆಯ ಮೇಲೆ ಈ ಅಪರೂಪದ ಸಾಧನೆ ಮಾಡಿದ ಏಕೈಕ ಭಾರತೀಯ ಶಮಿ.

ಶಮಿಯ ಬೌಲಿಂಗ್ ಗುಣಮಟ್ಟದ ಬಗ್ಗೆ ಎಂದೂ ಸಂಶಯವಿರಲಿಲ್ಲ, ಮೊನ್ನೆಯ ತಮ್ಮ ಪ್ರದರ್ಶನದಿಂದ ತಂಡದ ಹುಮ್ಮಸ್ಸಿಗೆ ಮತ್ತಷ್ಟು ಸ್ಪೂರ್ತಿ ತುಂಬಿದ್ದಾರೆ. 1983 ರಲ್ಲಿ ಮೊದಲ ಬಾರಿಗೆ ಕಪ್ ಗೆದ್ದ ತಂಡವೂ ಅಲ್ಪಮೊತ್ತದ ಸವಾಲನ್ನೇ ಎದುರಾಳಿಗೆ ಒಡ್ಡಿ ಸಮರ್ಥಿಸಿಕೊಂಡಿತ್ತು. ಆ ಭರವಸೆಯನ್ನು ಭಾರತ ತಂಡ ಮತ್ತೆ ಚಿಗುರಿಸಿದೆ. ಆದರೆ, ಭುವನೇಶ್ವರ್ ಶಮಿಗಿಂತ ಚೆನ್ನಾಗಿ ಬ್ಯಾಟ್ ಮಾಡಬಲ್ಲರು ಎಂಬುದನ್ನು ನೆನಪಿಡಬೇಕು. 

ಏತನ್ಮಧ್ಯೆ, ರೇಸ್ ಕುದುರೆಯಷ್ಟೇ ಅನಿರೀಕ್ಷಿತ ಫಲಿತಾಂಶಗಳನ್ನೊದಗಿಸಬಲ್ಲ ಮತ್ತೊಂದು ಏಷ್ಯಾ ತಂಡವಾದ ಪಾಕಿಸ್ತಾನ ನಿರೀಕ್ಷಿಸಿದಂತೆ ದಕ್ಷಿಣ ಆಫ್ರಿಕಾವನ್ನು ಹಿಮ್ಮೆಟ್ಟಿಸಿದೆ.  ಕ್ರಿಕೆಟ್ ಆಟದಲ್ಲಿ ಘಟಿಸಬಹುದಾದ ವಿವಿಧ ವೈಪರೀತ್ಯಗಳೆಲ್ಲವನ್ನೂ ವಿಶ್ವ ಕಪ್ ಪಂದ್ಯಾವಳಿಗಳಲ್ಲಿ ತೀಕ್ಷ್ಣವಾಗಿ ಅನುಭವಿಸುತ್ತಲೇ ಬಂದಿರುವ ದಕ್ಷಿಣ ಆಫ್ರಿಕಾ ತಂಡ ಹಿಂದಿನ ಆವೃತ್ತಿಗಳಲ್ಲಿ, ಮೊದಲಿಗೆ ಯಶಸ್ಸು ಕಂಡು ನಿರ್ಣಾಯಕ ಪಂದ್ಯಗಳಲ್ಲಿ ಎಡವುತ್ತಿತ್ತು. ಆದರೆ, ಟೂರ್ನಿಗೆ ಮೊದಲೇ ಅದರ ಬಲ ಕುಗ್ಗಿದ್ದರಿಂದ ಆ ತಂಡದ ನೀರಸ ಪ್ರದರ್ಶನ ಅಷ್ಟೇನೂ ಅನಿರೀಕ್ಷಿತವಲ್ಲ. 

ನೆನ್ನೆಯ ಸೋಲಿನ ನಂತರ, ನಾಯಕ ಫ್ರಾಂಸ್ವಾ ಡ್ಯೂ ಪ್ಲಸಿಸ್ ಹೇಳಿದ ಒಂದು ಮಾತು ಐಪಿಎಲ್ ಕುರಿತದ್ದು. ಅತ್ಯುತ್ತಮ ವೇಗದ ಬೌಲರ್ ಆದ ರಬಾಡ ಐಪಿಎಲ್ ನಲ್ಲಿ ಆಡುವುದು ತಂಡಕ್ಕೆ ಇಷ್ಟವಿರಲಿಲ್ಲವಂತೆ. ರಬಾಡರ ಶಕ್ತಿಯೆಲ್ಲಾ ವಿಶ್ವ ಕಪ್ ನ ಸ್ವಲ್ಪ ಮುಂಚೆಯಷ್ಟೇ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ವ್ಯಯವಾಗಿದ್ದರಿಂದ ಅವರು ಪ್ರಸಕ್ತ ಪಂದ್ಯಗಳಲ್ಲಿ ಸಮರ್ಪಕವಾಗಿ ಕೊಡುಗೆ ನೀಡಲಾಗಲಿಲ್ಲ ಎಂದು ಪ್ಲಸಿಸ್ ಅಭಿಪ್ರಾಯ ಪಟ್ಟಿದ್ದಾರೆ.  ಇದು ತಮ್ಮ ತಂಡದ ಸೋಲಿಗೆ ಕುಂಟು ನೆಪವಲ್ಲ ಎಂದೂ ಹೇಳಿದ್ದಾರೆ. ಹೌದು, ಇದುವರೆವಿಗೂ ಆರು ಪಂದ್ಯಗಳಲ್ಲಿ ಆರೇ ವಿಕೆಟ್ ಗಳಿಸಿರುವ ರಬಾಡ ಸಾಧನೆ ನೋಡಿದರೆ ಅದು ಕುಂಟು ನೆಪ ಅನಿಸುವುದಿಲ್ಲ. 

ಐಪಿಲ್ ಕುರಿತು ಒಂದು ಅಭಿಪ್ರಾಯ ಹೀಗಿದ್ದರೆ, ಆತಿಥೇಯ ಇಂಗ್ಲೆಂಡ್ ತಂಡದ ಮತ್ತೊಬ್ಬ ಬೌಲರ್ ವ್ಯಕ್ತಪಡಿಸಿರುವ ಅಭಿಪ್ರಾಯ ವ್ಯತಿರಿಕ್ತವಾಗಿದೆ. ವಿಶ್ವ ಕಪ್ ಮೂಲಕ ಇಂಗ್ಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿರುವ ಕಪ್ಪು ಬೌಲರ್ ಜೊಫ್ರಾ ಆರ್ಚರ್ ಐಪಿಎಲ್ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುವಾಗ ಜತೆ ಆಟಗಾರನಾಗಿ ಆಸ್ಟ್ರೇಲಿಯಾದ ಅಗ್ರಶ್ರೇಣಿಯ ಬ್ಯಾಟ್ಸಮನ್ ಸ್ಟೀವ್ ಸ್ಮಿತ್ ಇದ್ದರು. ನೆಟ್ಸ್ ನಲ್ಲಿ ಅವರಿಗೆ ಬೌಲ್ ಮಾಡುವಾಗ ಅವರ ನ್ಯೂನತೆಗಳನ್ನು ಹತ್ತಿರದಿಂದ ಗಮನಿಸಿದ್ದೇನೆ. ಆ ಅನುಭವ ನಾಳೆಯ ಪಂದ್ಯದಲ್ಲಿ ಬೌಲ್ ಮಾಡುವಾಗ ಅನುಕೂಲವಾಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. 

ಸದ್ಯಕ್ಕೆ, ಅಪಜಯದ ಸೋಂಕಿಲ್ಲದಿರುವ ತಂಡಗಳು ಭಾರತ ಮತ್ತು ನ್ಯೂಜಿಲ್ಯಾಂಡ್. ಎಷ್ಟು ದಿನ ಆ ದಾಖಲೆ ಮುಂದುವರೆಯುತ್ತದೆ ನೋಡೋಣ. ಯಾವುದಕ್ಕೂ, ಮಹಾರಾಣಿಯ ನೆನಪಿರಲಿ. ಯಾರೂ ಅತಿಮಾನವರಲ್ಲ.

ಇವೆರಡೂ ತಂಡಗಳು ಸೆಣಸಬೇಕಿದ್ದ ಪಂದ್ಯ ಮಳೆಯ ಕಾರಣ ರದ್ದಾಯಿತು. ನಡೆದಿದ್ದು, ಫಲಿತಾಂಶ ಹೊರಬಿದ್ದಿದ್ದರೆ, ಅವೆರಡರಲ್ಲಿ ಒಂದು ತಂಡಕ್ಕೆ ಆ ಕೀರ್ತಿ ಸಲ್ಲುತ್ತಿರಲಿಲ್ಲ.