ಬರೀ ಧರ್ಮ ಬೇಡ,ಬಸವ ಪ್ರಜ್ಞೆ ಬೇಕು

ಬರೀ ಧರ್ಮ ಬೇಡ,ಬಸವ ಪ್ರಜ್ಞೆ ಬೇಕು

ಇಂದು ಕನ್ನಡ ನೆಲದ ಮೊದಲ ಸಮಾಜವಾದಿ ಬಸವಣ್ಣನ ಜಯಂತಿ. ಮನುಷ್ಯ ಮನುಷ್ಯನಂತೆ ಬದುಕುವ ಹಕ್ಕು ಮತ್ತು ಭರವಸೆ ಕಳೆದುಕೊಂಡಾಗ ಬುದ್ಧ-ಬಸವ-ಅಂಬೇಡ್ಕರ್ ನೆನಪಾಗಿ ಕಾಡುತ್ತಾರೆ ಎನ್ನುವ ಸಿದ್ದು ಯಾಪಲಪರವಿ ಅವರ ವಿಶೇಷ ಲೇಖನ

 

ಬಸವಾದಿ ಶರಣರ ಚಳುವಳಿ ಈ ನಾಡು ಕಂಡ ಸುವರ್ಣ ಯುಗ. ಸಮಾನತೆಯ ಪರಿಕಲ್ಪನೆ ಜಾರಿಗೊಳಿಸಲು ಕಾಯಕ-ದಾಸೋಹ-ಲಿಂಗಪೂಜೆ ಸೂತ್ರ ಹಿಡಿದು ಅನುಭವ ಮಂಟಪವೆಂಬ ಸಂಸತ್ತಿನ ಮೂಲಕ ಕಲ್ಯಾಣ ನಾಡ ವೈಭವ.

 

ಬಸವನೆಂಬ ಬೆರಗು ಲೋಕೋದ್ಧಾರಕ್ಕಾಗಿ ಶ್ರಮಿಸಿದ ಪ್ರತಿಫಲ ಸಾವಿರಾರು ಶರಣರು ನುಡಿದಂತೆ ನಡೆದು, ನಡೆದ ಪರಿಯನು ವಚನಗಳ ಮೂಲಕ ದಾಖಲಿಸಿದ ದಾರ್ಶನಿಕರು.

ಸಮಬಾಳು ಬರೀ ಪರಿಕಲ್ಪನೆಯಾಗಿ ಉಳಿಯದೇ ನಿಜಾಚರಣೆಯಾಗಲು ಶರಣರ ಬದ್ಧತೆಯ ಭಕ್ತಿ ಮತ್ತು ತಾತ್ವಿಕ ನಿಷ್ಠೆಯೇ ಕಾರಣ.

 

ವಚನಗಳು ಇಡೀ ಕಾಲಘಟ್ಟವನ್ನು ಕಟ್ಟಿಕೊಡುತ್ತವೆ. ‘ಆನು ಒಲಿದಂತೆ ಹಾಡುವೆ’ ಎಂದ ಶರಣರು ತನ್ನಾಸೆಯ ರತಿಸುಖ ಅನುಭವಿಸಿದರೂ ಕಾಮುಕರಲ್ಲ, ಕಾಯಕ ನಿಷ್ಟರಾದರೂ ಧನಪಿಶಾಚಿಗಳಲ್ಲ, ನೆಲ ಹಿಡಿದರಾದರೂ ಭೂ ಕಬಳಿಸಲಿಲ್ಲ.

ಹೆಣ್ಣು-ಹೊನ್ನು-ಮಣ್ಣು ಅವರ ಅಗತ್ಯ ಆದರೆ ಹಪಾಹಪಿ ಆಗಿರಲಿಲ್ಲ.

 

ಎಲ್ಲವನ್ನೂ ಸಮವಾಗಿ ಬಳಸಿದ ಸಂಸಾರಿಗಳು. ಗುಡ್ಡ ಗವಿ ಸೇರಿ ಲೋಕೋದ್ಧಾರ ಬಯಸಲಿಲ್ಲ, ಲೋಕದೊಳಿದ್ದು ಭಕ್ತರಾದರು, ಶರಣರಾದರು.

 

ಉಳ್ಳವರ ದೇವಾಲಯಗಳ ಹಂಗ ಹರಿದು ದೇಹ ದೇವಾಲಯ ಮಾಡಿ ಆತ್ಮಾನುಸಂಧಾನದ ಮೂಲಕ ದೇವನ ಅಂಗೈಯಲ್ಲಿ ಪ್ರತಿಷ್ಟಾಪಿಸಿದರು.

ಮಧ್ಯವರ್ತಿ ಪುರೋಹಿತರ *ದೂರದೇ* ದೂರ ತಳ್ಳಿದ ಜಾಣರು. ಎನ್ನ ಕಾಲೇ ಕಂಬ ಶಿರವೇ ಹೊನ್ನ ಕಳಸವೆನ್ನುತ್ತ ಮೈಮನಗಳ ತುಂಬ ಜ್ಞಾನ ವೃದ್ಧಿಸಿಕೊಂಡವರು.

 

ಸಾವಿರಾರು ವಚನಗಳ ಮೂಲಕ ಬದುಕುವ ಕಲೆ ತಿಳಿಸಿದರು. ಎಲ್ಲ ಸಮಸ್ಯೆಗಳ ಪರಿಹಾರಕೆ ವಚನಮಾರ್ಗದ ನಡೆ ಸಾಕು ಎಂದರೂ ಸರಳವಾದ ಮಾರ್ಗ ಅರಿಯದ ಲಿಂಗಾಯತರು ಜಾತಿವಾದಿಗಳಾಗಿ ಸ್ವಯಂ ಶೋಷಕರಾದದ್ದು ಬಹುದೊಡ್ಡ ದುರಂತ.

 

‘ಇವ ನಮ್ಮವ ಇವ ನಮ್ಮವ’ ಎನ್ನದೇ ಇವನ್ಯಾರೋ ಗೊತ್ತಿಲ್ಲ ಅಂದವರು.

ಧಾರ್ಮಿಕ ಲಿಂಗ ಸಮಾನತೆಯ ಪ್ರತಿರೂಪದ ಮಹಾದೇವಿ ಅಕ್ಕ, ಮಹಾಜ್ಞಾನಿ ಚೆನ್ನಬಸವಣ್ಣ, ಅರಿವಿನ ಆಗರ ಅಲ್ಲಮ ನಮಗೆ ಪ್ರಭುವಾಗಲಿಲ್ಲ.

ಬರೀ ಮಾತು,ಮಾತು ಮಾತಿನ ಸೂತಕದಲಿ ಬಸವಪ್ರಜ್ಞೆ ಕಳೆದು ಹೋಗಿದೆ.ವೈಚಾರಿಕ ಹೊಯ್ದಾಟದಲಿ ಅರಿವು ಮಾಯವಾಗಿದೆ.

 

ಬಸವಾದಿ ಶರಣರು ಕೇವಲ ಸಾಮಾಜಿಕ ಹೋರಾಟಗಾರರಲ್ಲ, ಆಧ್ಯಾತ್ಮಿಕ ಸಾಧಕರು.ತಮ್ಮ ಆಧ್ಯಾತ್ಮಿಕ ಸಾಧನೆಯ ಬಲದಿಂದ ನಡೆದಂತೆ ನುಡಿಯುವ ತಾಕತ್ತುಳ್ಳವರಾಗಿದ್ದರು.

ಬರೀ ಬಾಯಿ ಮಾತಿನ ವೇದಾಂತ ಅವರಿಗೆ ಬೇಡವಾಗಿತ್ತು. ಬದುಕು ಸಹಜ, ಪ್ರಾಮಾಣಿಕತೆ. ಮುಕ್ತ ಹಾಗೂ ವೈವಿಧ್ಯಮಯವಾಗರಲು ತಮ್ಮದೇ ಸಂವಿಧಾನ ರೂಪಿಸಿಕೊಂಡು ಅದೇ ಮಾರ್ಗದಲ್ಲಿ ಸಾಗಿದರು.

 

ರಾಜಸತ್ತೆಯೊಂದಿಗೆ ರಾಜಿ ಮಾಡಕೊಳ್ಳದೆ ಮಹಾ ರಾಜರಂತೆ ದಿಟ್ಟವಾಗಿ ಬದುಕಿದರು.

‘ಆಸೆಯೆಂಬುದು ಅರಸಂಗೆ’ ಎಂದು ರಾಜರುಗಳ ದುರಾಸೆಯ ಖಂಡಿಸಿದರು.

ಅನುಭವ ಮಂಟಪದ ವಿಚಾರಗಳ ಪ್ರಭಾವದಿಂದ ಪ್ರಭುಗಳ ಸತ್ತೆ ಲೆಕ್ಕಿಸದೇ ಪ್ರಜಾಪ್ರಭುತ್ವ ಸ್ಥಾಪಿಸಿದರು.

ಪುರೋಹಿತಶಾಹಿಗಳ ಕುತಂತ್ರ ಗೊತ್ತಿದ್ದರೂ ಅವರನ್ನು ಕೆಣಕಿ ವರ್ಣ ಸಂಕರ ಎದುರಿಸಿದರು.

ಜಾತಿಸೂತಕ ಅಳಿಸಲು ಮಧುವರಸ-ಹರಳಯ್ಯನವರ ಸಂಬಂಧ ಬೆಸೆದು ಕ್ರಾಂತಿಯ ಕಿಡಿ ಹೊತ್ತಿಸಿದ್ದು ಆ ಕಿಡಿ ಇಂದಿಗೂ ನಂದಿಲ್ಲ.

ಜಾತಿವಾದಿಗಳ ಕುತಂತ್ರದಿಂದ ಶರಣರು ಹತರಾದರೂ ಧ್ರುತಿಗೆಡಲಿಲ್ಲ. ಮರಣವೇ ಮಹಾನವಮಿ ಎಂಬ ಘೋಷಣೆ ಕೂಗುತ್ತ ವೀರಮರಣ ಹೊಂದಿದರು.

 

ಇದೆಲ್ಲ ನಡೆದು ಒಂಬೈನೂರು ವರ್ಷ ಗತಿಸಿದರೂ ಆ ಕಿಚ್ಚು ಇನ್ನೂ ಉರಿಯುತ್ತಲೇ ಇದೆ ಜ್ಞಾನ ಜ್ಯೋತಿಯಂತೆ.

ಆ ಜ್ಯೋತಿಯ ಬೆಳಕಲಿ ನಡೆಯಬೇಕಾದ ಲಿಂಗಾಯತ ಧರ್ಮೀಯರು ಸ್ವಯಂ ಅಂಧಕಾರದಲಿ ನರಳುವುದು ವಿಪರ್ಯಾಸ.

ಸರಳ ಸೂತ್ರ ಬೇಡ, ಅದೇ ಅವೈಚಾರಿಕ ಅಂಧ ಶ್ರದ್ಧೆಯ ಅಹಂಕಾರ.

ಕಠಿಣವಾದ ಕರ್ಮಠ ಸಿದ್ಧಾಂತದ ಕತ್ತಲೆಯ ಸಂಭ್ರಮದಲಿ ಕಳೆದು ಹೋದ ಅಜ್ಞಾನಿಗಳು.

 

ಫ.ಗು.ಹಳಕಟ್ಟಿ ಅವರ ಶ್ರಮ, ಅನೇಕ ಸಂಶೋಧಕರ ತ್ಯಾಗದ ಪ್ರತಿಫಲ ಅನುಭವಿಸದ ಆತಂಕ.

ಮಾನವೀಯ ಮೌಲ್ಯಗಳ ಕೈಬಿಟ್ಟವರ ಕುತಂತ್ರಕೆ ಸಾತ್ವಿಕರ ಬಲಿ.

ಡಾ.ಎಂ.ಎಂ.ಕಲಬುರ್ಗಿ ಅವರ ಅನುಸಂಧಾನ ಅರಿವಾಗುವ ಮೊದಲೇ ಗುಂಡಿನ ಸುರಿಮಳೆಯಲಿ ಧರ್ಮದ ಹುಡುಕಾಟ.

 

ಬಸವಪ್ರಜ್ಞೆ ನಮ್ಮ ಉಸಿರಾಗಬೇಕಿತ್ತು.ಆಚಾರ,ವಿಚಾರಗಳ ಆಚೆಗಿರುವ ದಟ್ಟ ಪ್ರಜ್ಞೆ ಜಾಗೃತವಾಗಬೇಕಾಗಿದೆ.

ಸ್ವತಂತ್ರ ಧರ್ಮ ಸ್ಥಾಪನೆಯ ಹೋರಾಟದ ಭರಾಟೆಯಲಿ ಪ್ರಜ್ಞೆ ಮರೆಯಾಗಬಾರದು.

ಅಧರ್ಮಿಗಳು ಸಂಘಟಿತರಾಗಲು ಕಾರಣವಾಗದಂತೆ ಹೋರಾಟ ರೂಪುಗೊಳ್ಳಬೇಕಿತ್ತು.

 

ಕಾಲ ಎಲ್ಲವನ್ನು ನಿರ್ಣಯಿಸುತ್ತದೆ ಆದರೆ ಕಾಲ ಮೌಲ್ಯಗಳ ಮಲಿನಗೊಳಿಸುವುದಿಲ್ಲ.

ನಾವು ಮಲಿನರಾಗಿದ್ದಾಗ ಸ್ವಚ್ಛತೆಯ ಮಾತು ಅರ್ಥ ಕಳೆದುಕೊಳ್ಳುತ್ತದೆ.

ಶಬ್ದದೊಳಗಡಗಿದ ನಿಶಬ್ದವನಾಲಿಸುವ ಧ್ಯಾನಸ್ಥ ಸ್ಥಿತಿಗೇರುವದನು ಅಲ್ಲಮ ಹೇಳಿಕೊಟ್ಟಿದ್ದಾನೆ.

ಆದರೆ ನಾವು ಶಬ್ದಗಳ ಆಡಂಬರದ ಅಬ್ಬರದ ಸದ್ದಿನ ಸಂತೆಯಲಿ ಕಳೆದು ಅನಾಥರಾಗಿದ್ದೇವೆ.

 

ಅಣ್ಣ,ಅಲ್ಲಮ,ಅಕ್ಕ ಮತ್ತು ಎಲ್ಲ ಶರಣರು ಹೇಳಿದ್ದು ಬರೀ ತತ್ವಗಳಲ್ಲ, ಅವು ಬದುಕಿನ ರೀತಿ ರಿವಾಜುಗಳು.

‘ಕಳಬೇಡ, ಕೊಲಬೇಡ’ ಎಂದು ಸ್ತುತಿಸುತ ನಾವೇ ಹತರಾಗುವ ಹಂತ ತಲುಪಿದ್ದೇವೆ.

 

ಎಡಬಿಡಂಗಿ ವಾದ ವಿವಾದಗಳಿಂದ ಧಾರ್ಮಿಕ ಅಪಚಾರವಾಗುತ್ತಲಿದೆ.

ಯಾವುದ ಹಿಡಿಯಬೇಕು, ಬಿಡಬೇಕು ಎಂಬ ಗೊಂದಲದಲಿ ಹಿಡಿಯುವುದನ್ನು ಬಿಟ್ಟು ಚಡಪಡಿಸುತ್ತಲಿದ್ದೇವೆ.

 

ತಾವು ಹೇಳಿದ್ದೇ ಸರಿ ಎಂಬ ಧೋರಣೆಯ ಮಠೀಯ ವಾದ, ನಾಶಕ್ಕೆ ತಳ್ಳುತ್ತಿರುವ ಮತೀಯ ವಾದಗಳ ಅಬ್ಬರದ ಅಹಂಕಾರದಲಿ ಶರಣರು ಅನಾಥ.

 

ಧರ್ಮದ ಹೆಸರಿನಲ್ಲಿ ದೇಶ ಆಳುವ ಈ ಹೊತ್ತಿನ ಹಾರಾಟದಲ್ಲಿ ಗೆಲ್ಲುವುದೇ ಮುಖ್ಯ.

ಕಲ್ಯಾಣ ರಾಜ್ಯ, ರಾಮ ರಾಜ್ಯ ಬರೀ ಬಾಯಿ ಮಾತಿನ ಕನವರಿಕೆ.

 

ಕನಸುಗಳ ಹಳವಂಡಕೆ ಯಾರೂ ಇಲ್ಲ ಸಾಕ್ಷಿ.

ಮನಸು ಕಟ್ಟುವ, ಕನಸು ಹೆಣೆಯುವ ಕೈಗಳು ಒಂದಾಗಲು ಬೇಕು, ಬೇಕೇ ಬೇಕು ಬಸವ ನಿಷ್ಠೆ, ಬಸವ ಪ್ರಜ್ಞೆ.

 

ವರ್ತಮಾನದ ತವಕಗಳಲಿ ವಾಸ್ತವ ಕಳೆದು ಹೋಗಿದೆ.

ಗೆಲ್ಲಬೇಕೆಂಬ ಆರ್ಭಟದಲಿ ಮಾನವೀಯತೆ ನೆಲೆ ಕಳೆದುಕೊಂಡಿದೆ.

ಆಟ-ಮೇಲಾಟ ಬರೀ ಮೋಜಿನಾಟ. ಸತ್ಯ ಏನೆಂದು ಗೊತ್ತಿದ್ದರೂ ಅಸತ್ಯದ ವೈಭವಿಕರಣಕೆ ಮನಸು ಹಾತೊರೆಯಲು ಕೇವಲ ಸ್ವಾರ್ಥವೇ ಕಾರಣ.

 

ಮನುಷ್ಯ ಮನುಷ್ಯನಂತೆ ಬದುಕುವ ಹಕ್ಕು ಮತ್ತು ಭರವಸೆ ಕಳೆದುಕೊಂಡಾಗ ಬುದ್ಧ-ಬಸವ-ಅಂಬೇಡ್ಕರ್ ನೆನಪಾಗಿ ಕಾಡುತ್ತಾರೆ ಅಷ್ಟೇ.ಜಯಂತಿಯ ಆಚರಣೆಯ ಮೆರವಣಿಗೆಯ ಸದ್ದಿನಲಿ.

ಭಾಷಣಗಳ ಭರವಸೆಯ ಭರದಲಿ ಬುದ್ಧ ನಗುತ್ತಾನೆ, ಬಸವ ಮೌನವಾಗಿದ್ದಾನೆ, ಅಂಬೇಡ್ಕರ್ ಅಸಹಾಯಕನಾಗಿ ಮುಗಿಲು ನೋಡುತ್ತಾನೆ.

 

ನಾವು ಭರವಸೆಗಳ ನಾಳೆಯ ಕನಸ ಕಟ್ಟೋಣ, ಮನಸ ಬೆಸೆಯೋಣ, ಹೊಸ ನಾಡ ಆಶಯಗಳ ಅಕ್ಷರ ಅರಿಯುವ ಮನಸುಗಳಲಿ ಬಿತ್ತೋಣ.

ಎಲ್ಲರಿಗೂ ಬಸವ ಜಯಂತಿಯ ಶರಣು ಶರಣಾರ್ಥಿಗಳು.