ಆತ್ಮನಿರೀಕ್ಷಣೆ ಎಂಬ ಕ್ಷಣ ಕ್ಷಣದ ನಿಕಷ

ಆತ್ಮನಿರೀಕ್ಷಣೆ ಎಂಬ ಕ್ಷಣ ಕ್ಷಣದ ನಿಕಷ

ಸ್ವಂತಕ್ಕೇ ಮುಖ ಬಿಗಿದುಕೊಂಡು ಶ್ರೇಷ್ಠರೆನ್ನಿಸಿಕೊಂಡವರ ಗತ್ತಿನಲ್ಲಿ ನಡೆದಾಡುವ ಬಹಳ ಜನರನ್ನು ಕಂಡಿದ್ದೇನೆ. ಪರಿಚಿತ ಅಪರಿಚಿತರ ನಡುವೆ ತಾನಷ್ಟೇ ಶ್ರೇಷ್ಠ ಎಂಬ ವಿಚಿತ್ರ ವ್ಯಸನವಿದು. ಈ ಸ್ವಶ್ರೇಷ್ಠತೆಯ ರೋಗವಿರುವವರು ನೋಡುವವರಿಗೆ ಗಂಭೀರವೆನ್ನಿಸುವವರಂತೆ ಕಂಡರೂ ಆತ್ಮ ನಿರೀಕ್ಷಣೆಯ ವಿಷಯದಲ್ಲಿ ಕುರುಡರಾಗಿರುತ್ತಾರೆ. ತಮ್ಮದೇ ಎದೆ ಮಾತುಗಳಿಗೆ ಕಿವುಡರಾಗಿರುತ್ತಾರೆ.

ಟೀ ಅಂಗಡಿಯಲ್ಲಿ ನೀವು ಪತ್ರಿಕೆ ಓದುತ್ತಿರುವಾಗ ನಿಮ್ಮ ಪರಿಚಯವೇ ಇರದವನೊಬ್ಬ ಅಜನ್ಮ ಶತ್ರುವೇನೋ ಎಂಬಂತೆ ನಿಮ್ಮನ್ನು ನೋಡುತ್ತಿರುತ್ತಾನೆ. ಪ್ರಯಾಣದಲ್ಲಿ ಪಕ್ಕ ಕುಳಿತಾಗಲೂ ಯಾರೋ ಒಬ್ಬ ಮಲಿನಗೊಂಡವನಂತೆ ಚಡಪಡಿಸುತ್ತಾನೆ. ಇನ್ನು ಪರಿಚಯದ ಸಂಗದಲ್ಲೂ ವಂದಿಮಾಗಧರ ಪಡೆಯಲ್ಲಿ ಮಾತ್ರ ನಕ್ಕು ಉಳಿದವರ ನಡುವೆ ಘೋರಗಾಂಭೀರ್ಯ ತಾಳಿದವನೂ ಇರುತ್ತಾನೆ.

ಆದರೆ ತಳವಾರ ಮರಿಯಜ್ಜ ಮತ್ತು ಎಣ್ಣೆ ಶರಣಪ್ಪನದು ವಿಶೇಷ ಜೋಡಿ. ಮರಿಯಜ್ಜ ಮೈಲಿ ದೂರವಿದ್ದರೂ ಮಾತಾಡುತ್ತಿರುವುದು ಕೇಳುತ್ತಲೇ ಇರುತ್ತದೆ. ಅವನಿಗೆ ಹ್ಞೂಂಗುಟ್ಟುತ್ತ, ಅವನ ಒಣ ತರ್ಕಗಳ ಸೌಮ್ಯವಾಗಿ ಪ್ರಶ್ನಿಸಿ ಮಾತನ್ನು ಸರಿದಿಕ್ಕಿಗೆ ಎಳೆದು ತರುವುದು ಶರಣಪ್ಪನ ಕೆಲಸ.

ಈ ಮರಿಯಜ್ಜನದು ಅಪ್ಪ ಮಾಡಿಟ್ಟ ದೊಡ್ಡ ಆಸ್ತಿಗಳನ್ನು ಸಂಬಂಧಿಕರಿಗೆ ಕೋರು ಕೊಟ್ಟು, ಬೆನ್ನುಗೋಡೆ ಬಿದ್ದ ಹನ್ನೆರಡಂಕಣದ ಮನೆಯ ಒಂದು ಕಟ್ಟೆಯ ಮೇಲೆ ಒಬ್ಬಂಟಿ ವಾಸ. ಹೆಂಡತಿ ತೀರಿ ಹೋದದ್ದರಿಂದ ಹೊಲ ಮಾಡುವವರ ಮನೆಗಳಿಂದಲೇ ಮೂರು ಹೊತ್ತು ಊಟ. ಹೊಟ್ಟೆಗೆ ಬೆಳ್ಳಂಬೆಳಗ್ಗೆ ಎರಡು ರೊಟ್ಟಿ ಹಾಕಿಕೊಂಡವನು ಸೀದ ಹನುಮಪ್ಪನ ಗುಡಿ ತುದಿಗಟ್ಟೆಗೆ ಆಸೀನ. ಎಣ್ಣೆಗಪ್ಪಿನ ಮುಖ, ಸಣ್ಣಗಿನ ಬಿಳಿ ಗಡ್ಡ, ಬಿಳಿ ತಲೆ. ಮಾಸಲಾದ ಬಿಳಿ ಅಂಗಿ ಪಂಚೆ. ಹೆಗಲ ಮೇಲೊಂದು ನೀಲಿ ಚೌಕಳಿಯ ಟವೆಲ್ಲು. ಸದಾ ಜೊತೆಗಿರುವ ಅವನಷ್ಟೇ ಸಣ್ಣಗಿನ ಊರುಗೋಲು. ಕಲ್ಲಿ ಜೇಬಿನಲ್ಲಿ ಒಂದು ಚಿಲುಮೆ, ಕಿರಿದಾದ ಬಟ್ಟೆ ತುಂಡು, ಕಡ್ಡಿ ಪೊಟ್ಟಣ.

ಆವೊತ್ತೇಕೋ ಮರಿಯಜ್ಜ ಮಹಾಮೌನಕ್ಕೆ ಶರಣಾಗಿ ಮನೆಯಿಂದ ಕದಲಿರಲಿಲ್ಲ. ಹೊಸಕೋಟೆ ಲಕ್ಷ್ಮವ್ವ ಇಟ್ಟು ಹೋಗಿದ್ದ ರೊಟ್ಟಿ, ಗುರಾಳು ಪುಡಿ, ಮೊಸರು, ಕಟ್ಟೆ ಮೂಲೆಯ ತಟ್ಟೆಯಲ್ಲಿ ಹಾಗೇ ಇತ್ತು. ತನ್ನ ಮನೆಯಿಂದ ಊರು ಮುಂದಲು ಕಡೆಗೆ ಹೋಗುವಾಗ ಹೊರಗಿದ್ದ ಪ್ರತೀ ಮನೆಯವರನ್ನೂ "ತಂಗೀ ತಮ್ಮೆಂಗದನವ್ವಾ?, ಏ ತಮ್ಮ ಸಗಣಿ ಕಸ ಆತೇನಪ? ಏ ಬೆಳ್ಳುಳ್ಳಿ ಬುಡ್ಡಿ ಈಟತ್ಗೆ ಏನ ರಗಳೀ ತಗ್ದೀಯಲ್ಲ? "ಅಂತ ಮಾತಾಡಿಸ್ತಾ, ಗುಡಿಯೊಳಗಿನ ಬಸವಣ್ಣನಿಗೆ ಊರುಗೋಲನ್ನು ತೊಡೆ ಸಂದಿಗಾನಿಸಿಕೊಂಡು ದಾರಿಯಲ್ಲಿ ನಿಂತೇ ಕೈಮುಗಿದು, ಹನುಮಪ್ಪನ ಗುಡಿ ಕಟ್ಟೆಯ ತನ್ನ ಖಾಯಂ ಜಾಗಕ್ಕೆ ಅಂಡೂರುತ್ತಿದ್ದವನು ಆವೊತ್ತು ಮನೆಯಲ್ಲೇ ಬೆನ್ನಿಗೆ ಮೋಟು ತಲೆದಿಂಬಿರಿಸಿಕೊಂಡು ಮಾಳಿಗೆ ನೋಡುತ್ತ ಕುಂತವನು ಕುಂತೇ ಇದ್ದ.

ಎಣ್ಣೆ ಶರಣಪ್ಪ ಮಾಮೂಲಿನಂತೆ ಜಳಕ ಮಾಡಿ, ರೊಟ್ಟಿ ತಿಂದು, ಹೆಂಡತಿ ಮಕ್ಕಳು ಹೊಲಕ್ಕೆ ಹೋದ ಮೇಲೆ ತನ್ನ ಜೋಡಿ ಮರಿಯಜ್ಜನನ್ನು ಸೇರಲು ನೋಡಿದರೆ ಹನುಮಪ್ಪನ ಗುಡಿ ಕಟ್ಟೆ ಖಾಲಿ! ಅತ್ತ ಬೇವಿನ ಕಟ್ಟೆಯಲ್ಲೂ ಇಲ್ಲ. ಸಾಂತವ್ವನ ಹೋಟೆಲ್ಲೂ ಬರಿದು. ಯಾವ ವ್ಯಸನವೂ ಇಲ್ಲದವನಂತೆ ಮಾಹಾತ್ಮಾ ಗಾಂಧಿ, ಇಂದ್ರವ್ವನಿಂದ ಸುರು ಮಾಡಿ ನಿಜಲಿಂಗಪ್ಪ, ಅರಸು, ವೀರೇಂದ್ರ ಪಾಟೀಲ, ದೇವೇಗೌಡ, ಹೆಗಡೆಯವರೆಗೂ ನಿರರ್ಗಳವಾಗಿ ಮಾತು ಕುಟ್ಟಿ ಕೊನೆಗೆ ಎಮ್ಮೆಲ್ಲೆ ನಂಜಪ್ಪನ ಮೇಲೆ ನಂಜು ಖಾರಿ ಊರಿನ ಹಗಲಿಗೆ ರಂಗು ತುಂಬುತ್ತಿದ್ದ ಮರಿಯಜ್ಜನಿಲ್ಲದೆ ಆ ಬೀದಿಗಳು ಬಿಕೋ ಎನ್ನುವಂತಿದ್ದವು.

ಹಗಲು ಹನ್ನೊಂದಕ್ಕೇ ಶರಣಪ್ಪನಿಗೆ ಏನೋ ಕಳಕೊಂಡಂತೆನಿಸಿತು. ಊರಲ್ಲಿ ಅಷ್ಟಾಗಿ ಅಂಗಡಿಗಳಿರದ ಕಾಲದಲ್ಲಿ ಕೊಟ್ಟೂರಿನ ಗಾಣಗಳಿಗೆ ಹೋಗಿ ಒಳ್ಳೆಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆ ತಂದು, ಹೊತ್ತು ಮಾರಿ ಸಂಸಾರ ನೀಸಿದ್ದಕ್ಕೆ ಶರಣಪ್ಪನ ಹೆಸರಿಗೆ ಎಣ್ಣೆ ಜಿಡ್ಡಿನಂತೆ ಅಂಟಿಕೊಂಡು ಬಿಟ್ಟಿತು.

ಚಡಪಡಿಸುತ್ತಿದ್ದ ಅವನ ಕಾಲುಗಳು ಮರಿಯಜ್ಜನ ಮನೆಗೇ ಎಳೆದು ತಂದವು.

ಪಕ್ಕದಲ್ಲಿ ಹೊಗೆನಟ್ಟ ಪುಸ್ತಕವಿಟ್ಟುಕೊಂಡು ಏನೋ ದುಗುಡಗೊಂಡಂತಿದ್ದ ಮರಿಯಜ್ಜ ಶರಣಪ್ಪ ಬಂದ ಕೂಡಲೇ ಒಂದು ನೀಳ ಉಸಿರ್ಗರೆದು ಮತ್ತೂ ಸುಮ್ಮನಾದ.

ಸುತ್ತ ಕಣ್ಣಾಡಿಸಿದ ಶರಣಪ್ಪನ ಕಣ್ಣಿಗೆ ಕಟ್ಟೆ ಮೂಲೆಯಲ್ಲಿ ತಟ್ಟೆ ಮುಚ್ಚಿಟ್ಟ ರೊಟ್ಟಿಗೆ ಇರುವೆ ಸಾಲಿಟ್ಟಿರುವುದು ಕಾಣಿಸಿತು. "ಯಾಕ್ ಮರಿಯಜ್ಜ ಹಗಲೂಟದ್ಹೊತ್ತಾದ್ರೂ ರೊಟ್ಟಿ ದೆಕಿಲೂ ತಿಂದುಲ್ಲ" ಎನ್ನುತ್ತ ತಟ್ಟೆ ತಂದು ಮುಂದಿಟ್ಟು ಉಣ್ಣುವಂತೆ ಮಾಡಿದ.

"ಯಾಕಜ್ಜ ಇಟಕದಂದು ಬ್ಯಾಸರ ಮಾಡಿಕೆಂದಿ ಏನಾತಂಥದ್ದು?" ಅಂದ ಶರಣಪ್ಪನಿಗೆ "ಉಪಯೋಗುಲ್ಲ ಬುಡಲೆ ತಮ್ಮ ಮಾತಾಡಿ. ಊರಾಗ ಮಂದಿ   ಸುಮಾರಾಗಕಚ್ಚ್ಯತಿ. ಅದಕ ಈ ಶರಣರ ವಚನಗಳ್ನಾದ್ರೂ ಓದಿದ್ರ ಸಮಾಧಾನ ಅಕ್ಕತೇನ ಅಂತ ನೋಡ್ಕೆಂತ, ನನ್ನ ಅಂತರಂಗ ನಾನೇ ಸೋಸ್ಗೆಂತ ಬಿದ್ಕಂಡಿದ್ದೆ" ಎಂದವನೇ ಮತ್ತೂ ಸುಮ್ಮನಾದ.

ಮಾತಿಲ್ಲದ ಮರಿಯಜ್ಜನೊಂದಿಗೆ ಶರಣಪ್ಪ ಕಾಲ ನೂಕುವುದು ವಿಪರೀತಕ್ಕಿಟ್ಟುಕೊಂಡಿತು. ಅವನ ಗಂಟುಬಿದ್ದ ಮನಸ್ಸನ್ನು ಸಡಿಲಿಸುವ ಉಪಾಯ ಹೊಳೆದು, ಅಲ್ಲೇ ಜಂತಿಯಲ್ಲಿ ಕಾಗದ ಸುತ್ತಿಟ್ಟಿದ್ದ ಭಂಗಿ ಸೊಪ್ಪನ್ನು ಹೊರ ತೆಗೆದ. ಅಂಗೈಯಲ್ಲಿ ಹದವಾಗಿ ಉಜ್ಜಿದ. ಕಂಬದ ಮೊಳೆಗೆ ನೇತು ಹಾಕಿದ್ದ ಮರಿಯಜ್ಜನ ಅಂಗಿಯ ಕಲ್ಲಿ ಜೇಬಿನಿಂದ ಚಿಲುಮೆ ತೆಗೆದು, ಭಂಗಿ ತುಂಬಿ, ಕಡ್ಡಿ ಗೀರಿ ಒಂದು ಧಮ್ಮೆಳೆದು ಅಜ್ಜನಿಗೆ ಕೊಟ್ಟ. ದೊಡ್ಡ ಉಸಿರನ್ನು ಹೊರ ಹಾಕಿದ ನಂತರ ಚಿಲುಮೆ ಬೆರಳ ಸಂದಿಗೆ ಸಿಕ್ಕಿಸಿಕೊಂಡ ಮರಿಯಜ್ಜ ಎಡೆಬಿಡದಂತೆ ಹೊಗೆಯೆಳೆದುಕೊಂಡು ಮೂಗಿನಿಂದ ನಿಧಾನ ಮಂಜಿನಂತೆ ಹೊರಬಿಟ್ಟು ಶರಣಪ್ಪನ ಕೈಗೆ ಕೊಟ್ಟ.

"ಲೇ ಶರಣಪ್ಪ, ನಿನ್ನೆ ಬೈಗ್ನೊತ್ತು ಅಂಗ ವಂದ ಮಾಡನಂತ ಆ ಹಳೇ ಓಣಿ ಕಣಗಳ ಮೂಲ್ಯಾಕೋಗಿದ್ದೆ. ಅಲ್ಲಿ ಈ ಚೆಲೇದ್ಯರ ನಾಗಮ್ಮ ಮ್ಯಾಕಿ ಬಿಟಗಂದುದ್ದ್ಲು. ಸ್ವಾಭಾವಿಕವಾಗಿ ಏನು ನಾಗವ್ವ ಗಂಡ ಮಕ್ಕ್ಳು ಬೇಶದಾರ?" ಅಂದುದ್ದ ತಡ 'ಏನ್ಬುಡಜ್ಜ  ಕುಲಸ್ತರ ಮನಿಮಗ್ಲಗ ಕೆಟ್ಟ ಬಾಳೇವಾಗ್ಯತಿ ನಮ್ದು' ಅಂದ್ಲು.ಯಾಕವ ಏನಾತು? ಅಂದೆ. ಭೇದಿ ಹಿಡ್ಕಂಡಿದ್ದ ನಾಗವ್ವನ ಸಣ್ಣ ಮಗ ಮಗ್ಗ್ಲಾಗಿರ ನಿಂಗಯ್ಯನ ಮನಿ ಅಂಗಳದಾಗ  ಒಂಚೂರ ಒಸರಿಕೆಂಡುದ್ಕ, ಅದುನ್ನ ದೊಡ್ಡದು ಮಾಡಿ ಹೀನ ಮಾನ ಬೈದು ನಾಗವ್ವನ ಗಂಡನ್ನ, ನಾಗವ್ವನ್ನ ವಡ್ದುದ್ನಂತೆ. ಗೋಳಾಡಿ ಅತ್ಲಪ. ಭಾಳ ಬ್ಯಾಸರಾಗಿ ಎಲ್ಲೂ ವರಕೋಗಂಗಾಗ್ಲುಲ್ಲ. ಈ ವಚನ ಓದ್ಕೆಂತ ಇದ್ದೆ".

"ಯಾರ ವಚನಜ್ಜ?"

ಭಂಗಿಯ ಗುಂಗು ತುಸು ಆವರಿಸಿಕೊಳ್ಳುತ್ತಿರುವಾಗ ಮರಿಯಜ್ಜ ಮಗುವಿನಂತಾಗಿ "ತಮ್ಮಾ ದೇಶ ದೇಶದ ದೊಂಬಿಯಿಂದ ಹಿಡ್ದು ಮನಿ ಒಳಹೊರಗಿನ ದೊಂಬಿಗುಳ್ನ ನೋಡಿದ್ರ ಧರ್ಮ ಉಳ್ಕಳ್ತತೇನ?

ಅಲ್ಲಮಪ್ರಭು ಭಾಳ ನೇರವಾದಿ. ಇಲ್ಲಿ ಕೇಳು ಒಂದು ವಚನದ ಸಾಲ್ನ: ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ? ದಾಳಿಕಾರಂಗೆ ಧರ್ಮವುಂಟೆ?- ಅಂಬ್ತಾನಾತ. ದಾಳಿ ಮಾಡಿ ದೇಶ ಉಳಸೋನು, ಬಡವ್ರ ಬಡ್ದು ಬಾಳ ಕಟ್ಟೋನು ಬ್ಯಾರೆ ಏನ್ಲೆ ಶರಣಿ?"

ಶರಣಪ್ಪನೂ ಕರುಳಿಂದ ಮಾತು ಶುರು ಮಾಡಿದ: "ಯಜ್ಜ ಎಲ್ಲಾ ಅರಿವುಗೇಡಿಗಳ ಪರಪಂಚ. ಕೂಡಿ ಕಟ್ಟಿದ ಬಾಳು, ಕೂಡಿ ಕಟ್ಟಿದ ದೇಶ ಈ ಉರಿಗೊಳ್ಳೀ ಹುಡುಗ್ರಿಂದ, ಈ ಮಾನಗೇಡಿ ಹಿರೇರಿಂದ ಹೆಂಗುಳದೀತು?"

ಮರಿಯಜ್ಜ "ಅಲ್ಲಲೇ ತಮ್ಮಾ ಈ ನಿಂಗಯ್ಯ ಮೈಗೆಲ್ಲ ಇಬತ್ತಿ ಗಂಧ ಬಳ್ಕಂಡು, ಕಣದಗ್ಳ ಹೊಸಮನೀಲಿಂದ ಊರ ಮುಂದ್ಲಗಾಸಿ ಹಾದು ಈಶ್ವರನ ಗುಡಿಗೆ ಬಂದು ದೊಡ್ಡ ಭಕ್ತಿ ತೋರುಸ್ತಾನ. ಆ ಪುಣ್ಯಾತ್ಮ ಬಸವಣ್ಣ ದಯವಿಲ್ಲದ ಧರ್ಮ ಆವುದಯ್ಯಾ? ಅಂದ. ಈ ನಿಂಗಯ್ಯ ಉಚ್ಚಿ ಹೇಲು ಮಾಡ್ದಂಗ ಬದುಕಿದ್ದಾನ? ಮಕ್ಕಳು ದೇವರ ಸಮ. ಈ ಪ್ರಭುದೇವರು ಇಂತರ್ನ ನೋಡಿದ್ರ ಸಾಕು ಉಗುದೇ ಬಿಡ್ತಾನ. ಕೇಳು ಈ ವಚನ "ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ!

ತನು ವಿಕಾರ, ಮನ ವಿಕಾರ, ಇಂದ್ರಿಯ ವಿಕಾರದ ಹಿರಿಯರ ನೋಡಾ!

ಶಿವ ಚಿಂತೆ, ಶಿವ ಜ್ಞಾನಿಗಳ ಕಂಡರೆ ಆಳವಾಡಿ ನುಡಿವರು.

ಗುಹೇಶ್ವರನನರಿಯದ ಕರ್ಮಿಗಳಯ್ಯ"- ಕರ್ಮಗ್ಯಾಡಿಗಳು".

   ಶರಣಪ್ಪ ಮರಿಯಜ್ಜನ ಸಂಗಕ್ಕೆ ಬಿದ್ದದ್ದೂ ಒಂದು ವಿಚಿತ್ರವೇ.ಇಪ್ಪತ್ತು ವರ್ಷ ಬುಟ್ಟ್ಯಾಗ ಎಣ್ಣೆ ಕುಡಿಕೆ ಇಟಗಂಡು ಊರೂರು ಸುತ್ತಿ ಮಾರಿ ಹೊಟ್ಟೆ ಹೊರೆದೋನಿಗೆ ಯಾರೋ ಒಂದು ಹಳೆಯ ಸೈಕಲ್ ಮಾರಿದ್ರು. ಹಂಗೂ ಹಿಂಗೂ ಮಾಡಿ ಸೈಕಲ್ ತುಳಿಯೋದು ಕಲ್ತವ್ನು ಹ್ಯಾಂಡಲ್ ನ ಎರಡೂ ಬದಿಗೆ ಎರಡು ಡಬ್ಬಿ, ಹಿಂದೆರಡು ಡಬ್ಬಿ ಕಟಿಗೆಂಡು ಹಿಂಗ ಕುರುಮಳ್ಳಿ ಸರ ಇಳೀತಿದ್ದಾಗ ಬಿದ್ದು ಪಂಚ ಮುರಕಂಡ. ದುಡೀಲಾರದ ಎತ್ತು, ದುಡೀಲಾರದ ಗಂಡ ಎರಡೂ ಒಂದೇ ಆದ್ವು ಅವನ ಹೆಂಡತಿಗೆ. ಆಕಿ ಆಟು ಮಾತು ಕೇಳಲಾರದೆ ಮೆಲ್ಲಕ ಕೋಲೂರ್ಕೆಂತ ಹನುಮಪ್ಪನ ಗುಡಿಗೆ ಬಂದು ಕುಂತ್ಗಂಡು ಈ ಮರಿಯಜ್ಜನಿಗೆ ಜೊತೆಯಾದ.ಊರೂರು ತಿರುಗಿ ಮಂದಿ ಅಳೆದು, ಮನ್ಯಾಗ ಕುಂತು ಮನಸ್ಸಳದ ಶರಣಪ್ಪನ ಲೋಕದೃಷ್ಟಿ ಮರಿಯಜ್ಜನ ಮಾತಿನಲ್ಲಿ ಮತ್ತೂ ಹೊಳೀತಿತ್ತು.

ಶರಣಪ್ಪ ಮೌನಕ್ಕೆ ಸರಿದ ಮರಿಯಜ್ಜನಿಗೆ " ಅಲ್ಲೋ ಯಜ್ಜ ಈಗಿನ ಹುಡುಗರನ್ನೋಡಿಯೇನು? ಸಾಲಿ ಕಲಿತವ್ರೂ, ಕಲೀದವ್ರೂ ಭಕ್ತರಾಗಕೊಂಟರಪ್ಪ! ದೇವರಿಗಲ್ಲ ದೆವ್ವಕ್ಕ" ಅನ್ನತಡ್ಲೇ

ಮರಿಯಜ್ಜ ಕಾಡಸಿದ್ದೇಶ್ವರನ ಮತ್ತೊಂದು ವಚನ ನೆನಪಿಸ್ಗೆಂಡು

" ಭಕ್ತನಾದರೆ ಬಾಳೆಹಣ್ಣಿನಂತಿರಬೇಕು.

ಭಕ್ತನಾದರೆ ಬೆಲ್ಲದ ಕುಳ್ಳಿನಂತಿರಬೇಕು.

ಭಕ್ತನಾದರೆ ಮಾವಿನ ಫಲದಂತಿರಬೇಕು" ಎಂದು "ಈ ಮೈತುಂಬ ಅಹಂ ತುಂಬಕೆಂಡು,ಒಳ ಮನಸ್ಸನ್ನು ಇಣ್ಕಿ ನೋಡ್ಕೆಳ್ದಂಗ ಕುಣಿಯೋ ಕೋತಿಗಳಿವು. ಇವು ಯಾವ ಸೀಮೆ ಭಕ್ತ್ರು. ಆದರ ಇವುಗಳದೇ ಕಾರಭಾರಾಗ್ಯಾತೀಗ" ಎಂದ. "ಹಂಗ ಆಗ್ಯತಜ್ಜ..., ಈಟೆಲ್ಲ ತಿಳ್ಕಂಡುರ ನೀನು ಜಾಸ್ತಿ ವ್ಯಥಿ ಮಾಡ್ಕೆಬ್ಯಾಡ. ಆರಾಮಾಗಿರು. ಬೈಗಿನ ಕಡೀಗಾದ್ರೂ ಹನುಮಪ್ಪನ ಗುಡಿಗೆ ಬಾ. ನಂದೋಟು  ಕೆಲಸೈತಿ ಬರ್ತೀನಿ" ಎಂದು ಶರಣಪ್ಪ ಹೊರ ಹೊರಟ. ಈ ನೆಲದ ಹುಸಿಗದ್ದಲಕ್ಕೆ ಆಕಾಶ ಒಣಗಿದ ಮುಖ ಮಾಡಿಕೊಂಡಿತ್ತು.