ಕೈ ಚೆಲ್ಲಿ ಕುಳಿತದ್ದಾಯಿತು ಇನ್ನು ಕೈ ಚಾಚುವುದೊಂದೇ ಬಾಕಿ

ಈಗಾಗಲೇ ಬೀದಿ ಪಾಲಾಗುತ್ತಿರುವ ಕಾರ್ಖಾನೆಯ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳು, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಬಡ ಜನತೆ, ಕೆಳ ಮಧ್ಯಮ ವರ್ಗಗಳು ಈ ಜನರಿಗೆ ಮುಂಬರುವ ದಿನಗಳು ಕಠಿಣವಾಗಲಿವೆ.

ಕೈ ಚೆಲ್ಲಿ ಕುಳಿತದ್ದಾಯಿತು ಇನ್ನು ಕೈ ಚಾಚುವುದೊಂದೇ ಬಾಕಿ

ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಏಕಾಏಕಿ ಸಂಭವಿಸಿದ್ದಲ್ಲ. 1991ರಲ್ಲಿ ರಾವ್ ಸಿಂಗ್ ಜೋಡಿ ಆರಂಭಿಸಿದ ಜೋಡೆತ್ತಿನ ಪಯಣಕ್ಕೆ ಮೋದಿ ಶಾ ಜೋಡಿ ಅಂತ್ಯ ಹಾಡುತ್ತಿದ್ದಾರೆ ಎಂದು ಸರಳ ಭಾಷೆಯಲ್ಲಿ ಹೇಳಬಹುದು. ನರಸಿಂಹನ್ ಸಮಿತಿಯ ವರದಿಯಲ್ಲೇ ಮರುಪಾವತಿಯಾಗದ ಸಾಲಗಳ ನಿರ್ವಹಣೆಯ ಹಿನ್ನೆಲೆಯಲ್ಲಿ ಬ್ಯಾಂಕುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಸ್ತಾಪ ಇತ್ತು ಎನ್ನುವುದನ್ನು ಗಮನಿಸಬೇಕು. ನವ ಉದಾರವಾದ ಮತ್ತು ಹಣಕಾಸು ಬಂಡವಾಳಕ್ಕೆ ಇದು ಅಗತ್ಯವೂ ಹೌದು. ಬೃಹತ್ ಬಂಡವಾಳ ಇರುವ ಬ್ಯಾಂಕುಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುತ್ತವೆ. ವಿದೇಶಿ ಬಂಡವಾಳದ ಹರಿವು ಹೆಚ್ಚಾಗಲು ನೆರವಾಗುತ್ತದೆ. ಆಮದು ರಫ್ತು ವ್ಯಾಪಾರಿಗಳಿಗೆ ಉತ್ತೇಜನ ನೀಡಲು ಮತ್ತು ವಿದೇಶಿ ವಿನಿಮಯಕ್ಕೆ ಹೆಚ್ಚಿನ ಒತ್ತು ನೀಡಲು ಬೃಹತ್ ಬ್ಯಾಂಕುಗಳ ಅವಶ್ಯಕತೆ ಇದೆ. ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದಾಗಲೂ ಕೈಗಾರಿಕೋದ್ಯಮಿಗಳಿಗೆ ನೆರವಾಗುವ ಉದ್ದೇಶವೇ ಪ್ರಧಾನವಾಗಿತ್ತು ಎನ್ನುವುದನ್ನು ಗಮನಿಸಬೇಕು. ಔದ್ಯಮಿಕ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಹಾಗೆಯೇ ಮರುಪಾವತಿಯಾಗದ ಬೃಹತ್ ಸಾಲಗಳ ಪ್ರಮಾಣವೂ ಹೆಚ್ಚಾಗಿದೆ. ಒಂದು ಉದ್ಯಮಕ್ಕೆ ಅಥವಾ ಒಬ್ಬ ಉದ್ಯಮಿಗೆ ಹಲವು ಬ್ಯಾಂಕುಗಳು ಸೇರಿ ಕನ್ಸೋರ್ಟಿಯಂ ಸಾಲಗಳನ್ನು ನೀಡಿರುವುದೂ ಇದೆ. ಇವೆಲ್ಲವನ್ನೂ ಒಂದು ಸೂರಿನಡಿಯೇ ನಿರ್ವಹಿಸುವ ನೀತಿಯ  ಒಂದು ಭಾಗ ಬ್ಯಾಂಕುಗಳ ವಿಲೀನ ಪ್ರಕ್ರಿಯೆ.

ಬ್ಯಾಂಕ್ ನೌಕರರ ಸಂಘಟನೆಗಳು ಕಳೆದ 25 ವರ್ಷಗಳಿಂದಲೂ ಬ್ಯಾಂಕ್ ವಿಲೀನವನ್ನು ವಿರೋಧಿಸಿ ಮುಷ್ಕರ ಹೂಡುತ್ತಲೇ ಇವೆ. ಒಂದು ರೀತಿ ವರ್ಷಕ್ಕೊಮ್ಮೆ ಶ್ರಾದ್ಧ ಮಾಡುವಂತೆ ತಮ್ಮ ಇತರ ಬೇಡಿಕೆಗಳೊಡನೆ ವಿಲೀನವನ್ನು ವಿರೋಧಿಸುವ ಒಂದು ಘೋಷಣೆಯನ್ನು ತಪ್ಪದೆ ನಮೂದಿಸುತ್ತಾ ಬಂದಿವೆ. ಆದರೆ ವಿಲೀನ ಏಕೆ ಬೇಕಿಲ್ಲ, ಅದರಿಂದ ಭಾರತದ ಜನಸಾಮಾನ್ಯರಿಗೆ ಉಂಟಾಗುವ ತೊಂದರೆಗಳೇನು, ಇದರಿಂದ ಯಾರಿಗೆ ಲಾಭವಾಗುತ್ತದೆ, ಹಣಕಾಸು ಬಂಡವಾಳ ಮತ್ತು ನವ ಉದಾರವಾದ ಹೇಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ತನ್ನ ಭದ್ರಕೋಟೆಯಂತೆ ಬಳಸುತ್ತದೆ ಈ ಅಂಶಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯಲು ಪ್ರಯತ್ನಿಸಿಯೇ ಇಲ್ಲ. ಅಲ್ಲೊಂದು ಇಲ್ಲೊಂದು ವಿಶ್ಲೇಷಣಾತ್ಮಕ ಲೇಖನಗಳನ್ನೋ, ಕರಪತ್ರಗಳನ್ನೂ ಪ್ರಕಟಿಸಿ, ಸರ್ಕಾರಕ್ಕೆ ತಮ್ಮ ಪ್ರತಿರೋಧ ವ್ಯಕ್ತಪಡಿಸಲು ಮನವಿ ಪತ್ರಗಳನ್ನು ಸಲ್ಲಿಸಿರುವುದನ್ನು ಬಿಟ್ಟರೆ ಬ್ಯಾಂಕ್ ನೌಕರ ಸಂಘಟನೆಗಳು ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ. ಇದು ದುರಂತ. ಆದರೂ ಸತ್ಯ.

ಮತ್ತೊಂದು ವಾಸ್ತವ ಸಂಗತಿ ಎಂದರೆ ಬ್ಯಾಂಕುಗಳ ಗಣಕೀಕರಣ ಪ್ರಕ್ರಿಯೆ ಸಂಪೂರ್ಣವಾಗಿ, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಬ್ಯಾಂಕುಗಳ ಸಾಫ್ಟ್ ವೇರ್ ನಿರ್ವಹಣೆ ಮತ್ತು ಗಣಕೀಕರಣ ಪ್ರಕ್ರಿಯೆಯ ನಿರ್ವಹಣೆ ಸಂಪೂರ್ಣವಾಗಿ ಇನ್ಫೋಸಿಸ್, ಟಿಸಿಎಸ್ ಮುಂತಾದ ಸಾಫ್ಟ್ ವೇರ್ ಕಂಪನಿಗಳ ಪಾಲಾಗಿದೆ. ಬ್ಯಾಂಕುಗಳ ಹಿರಿಯ ಅಧಿಕಾರಿ ವರ್ಗಗಳಿಗೂ ಈ ಸಾಫ್ಟ್ ವೇರ್ ಗಳ ಮೂಲಕ ಅಳವಡಿಸಲಾಗುವ ಬದಲಾವಣೆಗಳ ಪೂರ್ಣ ಅರಿವು ಇರುವುದಿಲ್ಲ. ಸಾಫ್ಟ್ ವೇರ್ ಕಾರ್ಯಕ್ರಮಗಳನ್ನು ರೂಪಿಸುವ ಖಾಸಗಿ ಕಂಪನಿಗಳು ನಿರ್ಮಿಸಿರುವ ಭದ್ರಕೋಟೆಯೊಳಗೆ ಒಂದು ಹಂತದವರೆಗಿನ ಅಧಿಕಾರಿಗಳಿಗೆ ಪ್ರವೇಶವೂ ಇರುವುದಿಲ್ಲ ಎನ್ನುವುದು ವಾಸ್ತವ. ಹಾಗಾಗಿಯೇ ಕೆಲವೊಮ್ಮೆ ಬ್ಯಾಂಕುಗಳಲ್ಲಿ ದಿನಪೂರ್ತಿ ಸರ್ವರ್ ಡೌನ್ ಆದರೂ ಬ್ಯಾಂಕಿನ ಪ್ರಬಂಧಕರಿಗೆ ಕಾರಣ ತಿಳಿದಿರುವುದಿಲ್ಲ. ಪ್ರಧಾನ ಕಚೇರಿಗಳಲ್ಲಿನ ಹಿರಿಯ ಅಧಿಕಾರಿಗಳಿಗೂ ಸಮಸ್ಯೆ ಯಾವಾಗ ಸರಿಹೋಗುತ್ತದೆ ಎಂದು ಅರಿವು ಇರುವುದಿಲ್ಲ. ಗ್ರಾಹಕರ ಗೊಣಗಾಟವನ್ನು ಸಹಿಸಿಕೊಂಡೇ ಶಾಖೆಯ ಸಿಬ್ಬಂದಿ ಜೋಲುಮುಖದೊಂದಿಗೆ ತೆಪ್ಪನೆ ಕುಳಿತಿರುವುದನ್ನು ಗಮನಿಸುತ್ತಲೇ ಇದ್ದೇವೆ.

ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಚಾಲನೆ ದೊರೆತು ಎರಡು ದಶಕಗಳೇ ಕಳೆದಿವೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಾದ ಕೂಡಲೇ ವಿವಿಧ ಬ್ಯಾಂಕುಗಳ ಸಾಫ್ಟ್ ವೇರ್ ಕಾರ್ಯಕ್ರಮಗಳನ್ನು ಸಮೀಕರಿಸಿ, ವಿಲೀನಕ್ಕೆ ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಉದಾಹರಣೆಗೆ ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕುಗಳಲ್ಲಿ ಐಫ್ಲೆಕ್ಸ್ ಸಾಫ್ಟ್ ವೇರ್ ಚಾಲ್ತಿಯಲ್ಲಿದ್ದು ವಿಲೀನವಾದರೆ ಹೇಗೆ ನಿರ್ವಹಿಸಬೇಕು ಎಂಬ ನೀಲಿ ನಕ್ಷೆ ಸಿದ್ಧವಾಗಿ ವರುಷಗಳೇ ಕಳೆದಿವೆ. ಈಗ ಮಾಂಗಲ್ಯಂ ತಂತುನಾನೇನಾ ಹೇಳುವುದೊಂದೇ ಬಾಕಿ. ಬ್ಯಾಂಕ್ ನೌಕರರ ಸಂಘಟನೆಗಳಿಗೆ ಇದು ಅಬೇಧ್ಯ ರಹಸ್ಯವೂ ಆಗಿರಲಿಲ್ಲ, ಅಗೋಚರ ಕ್ರಿಯೆಯೂ ಆಗಿರಲಿಲ್ಲ, ತಿಳಿಯದೆ ಇರುವ ವಿಚಾರವೂ ಆಗಿರಲಿಲ್ಲ.  ಇದು ಆಗಿಯೇ ತೀರುತ್ತದೆ ಎಂಬ ಪರಿಜ್ಞಾನವೂ ಇತ್ತು. ಆದರೆ ಒಂದು ವೇಳೆ ವಿಲೀನ ಆದರೆ ಏನಾಗುತ್ತದೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಲು ಸಂಘಟನೆಗಳು ಮುಂದಾಗಲಿಲ್ಲ. ಬಹುಶಃ ಎಐಬಿಇಎ ಮತ್ತಿತರ ಸಂಘಟನೆಗಳಲ್ಲಿ ಈ ಕುರಿತು  ಚಿಂತಿಸುವ ಒಂದು ವ್ಯವಸ್ಥೆಯೇ ಇರಲಿಲ್ಲ. ಚಿಂತನ ಮಂಥನ ಪ್ರಕ್ರಿಯೆಗೆ ಎಂದೋ ತಿಲಾಂಜಲಿ ನೀಡಲಾಗಿತ್ತು ಎನ್ನುವುದು ವಾಸ್ತವ.

ಹಾಗಾಗಿಯೇ ವಿಜಯಾ ಬ್ಯಾಂಕ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಾಗ, ಮೈಸೂರು ಬ್ಯಾಂಕ್ ಹಠಾತ್ತನೆ ಮರೆಯಾದಾಗ ಅಪಸ್ವರ ಕೇಳಿಬಂದಿತ್ತೇ ಹೊರತು ಪ್ರತಿರೋಧದ ಗಟ್ಟಿ ದನಿ ಕೇಳಲೇ ಇಲ್ಲ. ಈಗಲೂ ಅಷ್ಟೇ. ವಿಲೀನ ಪ್ರಕ್ರಿಯೆಗೆ ನಮ್ಮ ವಿರೋಧ ಇದೆ ಎಂಬ ಹೇಳಿಕೆ ಮತ್ತು ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಧಿಕ್ಕಾರ ಎಂಬ ಘೋಷಣೆಯಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ಆಗಲಿ ಇದು ನಮ್ಮಿಂದ ತಡೆಗಟ್ಟಲಾಗದ ಒಂದು ವಿದ್ಯಮಾನ ಎಂದೇ ಇಟ್ಟುಕೊಳ್ಳೋಣ. ಮುಂದೇನು ? ಇಲ್ಲಿಯೂ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಈಗ ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ತಮ್ಮ ಹೆಸರನ್ನು ಉಳಿಸಿಕೊಂಡು, ಗರ್ಭದಲ್ಲಿ ಮತ್ತೊಂದು ಬ್ಯಾಂಕಿನ ಅವಶೇಷವನ್ನು ಅಡಗಿಸಿಟ್ಟುಕೊಳ್ಳಲಿವೆ. ಮುಂದೊಂದು ದಿನ ಈ ಹೆಸರುಗಳೂ ಇಲ್ಲವಾಗುತ್ತವೆ. ನಮ್ಮ ಬ್ಯಾಂಕ್ ದೊಡ್ಡದಾಗಿದೆ ಎಂದು ಕೆನರಾಬ್ಯಾಂಕ್ ಸಿಬ್ಬಂದಿ ಅಮ್ಮೆಂಬಾಳ ಸುಬ್ಬರಾವ್ ಪೈ ಅವರ ಭಾವಚಿತ್ರದ ಮುಂದೆ ಸಂಭ್ರಮಿಸುವುದು ಬೇಕಿಲ್ಲ. ಇದು ಕೃತಕ ಗರ್ಭ. ಮುಂದೊಂದು ದಿನ ಅದೂ ಇಲ್ಲವಾಗುತ್ತದೆ. 

ಇಲ್ಲಿ ಪ್ರಶ್ನೆ ಇರುವುದು ಭಾರತದ ಸಾಮಾನ್ಯ ಜನತೆಯನ್ನು ಕುರಿತಾದದ್ದು. ಸಾಫ್ಟ್ ವೇರ್ ನೌಕರರಿಗೆ, ಸಣ್ಣ ಉದ್ಯಮಿಗಳಿಗೆ, ಶ್ರೀಮಂತ-ಮಧ್ಯಮ ರೈತರಿಗೆ, ಎಸ್ಟೇಟ್ ಮಾಲಿಕರಿಗೆ, ಬೃಹತ್ ಉದ್ಯಮಿಗಳಿಗೆ, ಆಮದು ರಫ್ತು ವ್ಯಾಪಾರಿಗಳಿಗೆ, ವಿದೇಶಿ ವಿನಿಯಮ ಸಂಸ್ಥೆಗಳಿಗೆ, ಕಾರ್ಪೋರೇಟ್ ಉದ್ಯಮಿಗಳಿಗೆ, ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಇದು ಭವಿಷ್ಯದ ಸುದಿನಗಳ ಮುನ್ಸೂಚನೆಯಾದೀತು. ಆದರೆ ಈಗಾಗಲೇ ಬೀದಿ ಪಾಲಾಗುತ್ತಿರುವ ಕಾರ್ಖಾನೆಯ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳು, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಬಡ ಜನತೆ, ಕೆಳ ಮಧ್ಯಮ ವರ್ಗಗಳು ಈ ಜನರಿಗೆ ಮುಂಬರುವ ದಿನಗಳು ಕಠಿಣವಾಗಲಿವೆ. ಲೇವಾದೇವಿ ವ್ಯವಹಾರದ ಜಾಗತಿಕ ಸ್ವರೂಪವನ್ನು ಎದುರಿಸಬೇಕಾಗುತ್ತದೆ. ಬಂಡವಾಳದ ಕ್ರೋಢೀಕರಣ ಹೆಚ್ಚಾದಂತೆಲ್ಲಾ ಹಣಕಾಸಿನ ಕೊರತೆಯನ್ನು ಹೆಚ್ಚಿಸಲಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಡ್ಡಿ ದರಗಳನ್ನೂ ಕಡಿಮೆ ಮಾಡುತ್ತಾ ಹೋಗುವ ಬೃಹತ್ ಬ್ಯಾಂಕುಗಳಿಗೆ ಸಾಸಿವೆ ಡಬ್ಬಿಯ ಪುಡಿಗಾಸು ಲೆಕ್ಕಕ್ಕೇ ಇರುವುದಿಲ್ಲ. ಟಿಎಂಎ ಪೈ ಆರಂಭಿಸಿದ ಪಿಗ್ಮಿ ಡಿಪಾಸಿಟ್ ಇತಿಹಾಸದ ದಂತಕತೆಯಾಗಿ ಬಿಡುತ್ತದೆ.

ಹಣಕಾಸು ಬಂಡವಾಳ ಮತ್ತು ಕಾರ್ಪೋರೇಟ್ ಉದ್ಯಮ ಲಾಭಕ್ಕಾಗಿ ಹಾತೊರೆಯುವ ತಿಮಿಂಗಿಲ. ಬ್ಯಾಂಕುಗಳು ಈ ತಿಮಿಂಗಿಲವನ್ನು ಪ್ರಶಸ್ತ ಸ್ಥಳಕ್ಕೆ ಕೊಂಡೊಯ್ಯುವ ನಾವೆಗಳು. ನವ ಉದಾರವಾದ ಈ ನಾವೆಗಳಿಗೆ ಆಸರೆಯಾಗುವ ಕಡಲು. ಸಣ್ಣ ಮೀನುಗಳು ತಿಮಿಂಗಿಲಕ್ಕೆ ಆಹಾರವಾಗುತ್ತಲೇ ಹೋಗುತ್ತವೆ. ಬೃಹತ್ ಚಂಡ ಮಾರುತ ಬಂದರೂ ಅಲೆಗಳಿಗೆ ಬಲಿಯಾಗುವುದು ಸಾಧಾರಣ ಜಲಚರಗಳು ಮತ್ತು ಸಣ್ಣ ಪುಟ್ಟ ದೋಣಿಗಳು. ನಾವು ನಾವಿಕರನ್ನು ಮಾತ್ರ ಬದಲಿಸಿದ್ದೇವೆ. ನಾವೆಗಳನ್ನು ಇವರು ಪುನರ್ ನಿರ್ಮಾಣ ಮಾಡಿದ್ದಾರೆ. ಕಡಲ ಅಲೆಗಳು ಹೊಯ್ದಾಡುವ ನಾವೆಗಳನ್ನು ರಕ್ಷಿಸುತ್ತಲೇ ತಿಮಿಂಗಿಲಗಳನ್ನು ಕಾಪಾಡುತ್ತಾ ಶಾಂತವಾಗುತ್ತವೆ. ಕೆಲವೊಮ್ಮೆ ಅಬ್ಬರಿಸಿದರೂ ತಿಮಿಂಗಿಲಗಳನ್ನು ರಕ್ಷಿಸುವ ಹೊಣೆ ನಾವಿಕರದ್ದೇ ಆಗಿರುತ್ತದೆ. ಹಾಗಾಗಿಯೇ ನಾವೆಗಳು ಸದೃಢವಾಗಿರಬೇಕಲ್ಲವೇ ? ದೂರದ ಮರಳ ದಿಬ್ಬದ ಮೇಲೆ ಕುಳಿತು ಕಡಲ ಅಲೆಗಳ ನಡುವೆ ಅತ್ತಿಂದಲಿತ್ತ ವಾಲಾಡುತ್ತಾ ಬರುವ ನಾವೆಗಳು ನಮಗೇನೋ ತಂದು ಕೊಡುತ್ತವೆ ಎಂಬ ನಿರೀಕ್ಷೆಯಲ್ಲಿರುವ ಶ್ರೀಸಾಮಾನ್ಯನಿಗೆ ಪುಡಿ ಮೀನುಗಳು ಸಿಕ್ಕರೆ ಧನ್ಯ.