ನರೇಂದ್ರ ಮೋದಿ: ಒಡೆದು ಆಳುವ ಮಹಾದಂಡನಾಯಕ

ನರೇಂದ್ರ ಮೋದಿ: ಒಡೆದು ಆಳುವ ಮಹಾದಂಡನಾಯಕ

ಟೈಮ್ ಅಂತಾರಾಷ್ಟ್ರೀಯ ನಿಯತಕಾಲಿಕದ ಇತ್ತೀಚಿನ ಸಂಚಿಕೆ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಏರಿದ ಬಗೆ, ತಮ್ಮ ಸ್ವಾರ್ಥಕ್ಕಾಗಿ ಅಧಿಕಾರಾವಧಿಯುದ್ದಕ್ಕೂ ದೇಶವನ್ನು ಸಾಂಸ್ಕೃತಿಕ ನೆಲೆಯಲ್ಲಿ ಒಡೆಯುತ್ತಾ ಮುನ್ನಡೆದ ರೀತಿಯನ್ನು ವಿಶ್ಲೇಷಿಸಿದೆ.

ಕಾಂಗ್ರೆಸ್‍ ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಪ್ರಬಲ ರಾಷ್ಟ್ರೀಯ ಪಕ್ಷ. ಸ್ವಾತಂತ್ರ್ಯದ ಬಳಿಕ ಹಲವು ದಶಕಗಳ ಕಾಲ ಕೇಂದ್ರ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರ ಹೊಂದಿದ್ದ ಕಾಂಗ್ರೆಸ್‍ 2014 ರಲ್ಲಿ ಏಕಾಏಕಿ ವಿರೋಧ ಪಕ್ಷ ಸ್ಥಾನಕ್ಕೂ ಅನರ್ಹವೆನಿಸುವ ಸ್ಥಿತಿಗೆ ತಲುಪಿತ್ತು. ಬಿ.ಜೆ.ಪಿ 30 ವರ್ಷಗಳ ಬಳಿಕ ದೇಶದಲ್ಲಿ ಸ್ಟಷ್ಟ ಬಹುಮತದೊಂದಿಗೆ 282 ಸ್ಥಾನ ಗಳಿಸಿ ಮೊದಲೇ ನಿರ್ಧರಿಸಿದಂತೆ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಏರಿದ್ದರು. ಹೀಗಾಗಿ 2014 ರ ಚುನಾವಣೆ ಒಂದು ರೀತಿಯಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ. ಆದರೆ ಈ ಕ್ರಾಂತಿಯನ್ನು ಸಾಧ್ಯವಾಗಿಸಿದ್ದು ಭಾರತದಲ್ಲಿ ಹುಟ್ಟಿಕೊಳ್ಳುತ್ತಿದ್ದ ವರ್ಗ ಮತ್ತು ಸಾಂಸ್ಕೃತಿಕ ಬಂಡಾಯ ಎನ್ನುವ ಮಹತ್ವದ ವಿಚಾರವನ್ನು ಟೈಮ್ಸ್‍ ಪತ್ರಿಕೆಯಲ್ಲಿ ಪತ್ರಕರ್ತ ಆತೀಶ್ ತಾಹಿರ್‍ ಪ್ರತಿಪಾದಿಸಿದ್ದಾರೆ. ಆದರೆ ಕೇವಲ ಅರ್ಧ ದಶಕದ ಮೋದಿ ಆಡಳಿತ ಆರ್ಥಿಕ ಸುಧಾರಣೆಗಿಂತಲೂ ರಾಷ್ಟ್ರೀಯವಾದ ಮತ್ತು ಸಾಂಸ್ಕೃತಿಕ ಗತವೈಭವವೇ ಮುಖ್ಯ ಎಂದು ಜನರಿಗೆ ತಿಳಿಹೇಳುವಲ್ಲಿ ಬಹುತೇಕ ಯಶಸ್ವಿಯಾದಂತಿದೆ.

ಸುಮಾರು 12 ವರ್ಷಗಳ ಕಾಲ ಗುಜರಾತ್‍ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವಾಗ ತಾನು ‘ಚಹಾ ಮಾರುತ್ತಿದ್ದ’ ಸಾಧಾರಣ ಮನುಷ್ಯ ಎಂದಿದ್ದು ಇಲ್ಲಿನ ಬಹುಸಂಖ್ಯಾತ ಮಧ್ಯಮ ವರ್ಗದ ಜನರ ಮನಸ್ಸಿಗೆ ನಾಟಿತ್ತು.  ಇದರೊಂದಿಗೆ ‘ಗುಜರಾತ್‍ ಮಾದರಿ’ಯೇ ಸಿಂಗಪೂರ್‌ಗೂ ಮಾದರಿ ಎಂದು ಮಾಧ್ಯಮಗಳು ಬಿತ್ತಿದ್ದ ರಮ್ಯ ಕಲ್ಪನೆಗೆ ದೇಶದ ಮಧ್ಯಮವರ್ಗ ಮನಸೋತಿತ್ತು. ಎಲ್ಲದಕ್ಕೂ ಮಿಗಿಲಾಗಿ ಕಾಂಗ್ರೆಸ್‍ ಪಕ್ಷದಲ್ಲಿ ಹಿಡಿತ ಸಾಧಿಸಿರುವವರ ಕುಟುಂಬ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿರುವವರದ್ದು ಎನ್ನುವ ವಿಚಾರವನ್ನು ಪರಿಣಾಮಕಾರಿಯಾಗಿ ಬಿ.ಜೆ.ಪಿ ಜನರ ಮನಸ್ಸಿಗೆ ದಾಟಿಸಿತ್ತು. ಹೀಗಾಗಿ ಈ ದೇಶದ ಒಂದು ವರ್ಗಕ್ಕೆ ಕಾಂಗ್ರೆಸ್‍ ಪೀಡೆಯಂತೆಯೂ ಮೋದಿ ವಿಮೋಚಕನಂತೆಯೂ ಕಾಣತೊಡಗಿದರು. ‘ಕಾಂಗ್ರೆಸ್‍ ಮುಕ್ತ ಭಾರತ’ ಕಲ್ಪನೆಯಿಂದ ರೋಮಾಂಚನಗೊಂಡರು. ಇಂತಹ ಕೆಲವು ಪ್ರಮುಖ ವಿಚಾರಗಳೇ ಬಿ.ಜೆ.ಪಿಗೆ ಭರಪೂರವಾಗಿ ಸಿಕ್ಕಿದ್ದ ಕಾರಣ ಹಿಂದುತ್ವ ಅಥವಾ ರಾಷ್ಟ್ರೀಯವಾದವನ್ನು 2019ರಲ್ಲಿ ಹೇಳುತ್ತಿರುವಷ್ಟು ಗಟ್ಟಿಯಾಗಿ ಹಿಂದಿನ ಚುನಾವಣೆಯಲ್ಲಿ ಹೇಳಿರಲಿಲ್ಲ.

2014ರ ಚುನಾವಣೆಯಲ್ಲಿ ಬಿ.ಜೆ.ಪಿ ನೇರವಾಗಿ ಹಿಂದುತ್ವವನ್ನು ಪ್ರತಿಪಾದಿಸದಿದ್ದರೂ ತಳ ಮಟ್ಟದಲ್ಲಿ ಬೇರೂರಿದ್ದ ಆರ್‍.ಎಸ್‍.ಎಸ್‍ ಮೋದಿಯನ್ನು ಹಿಂದೂ ಗತ ವೈಭವಗಳನ್ನು ಮತ್ತೆ ಸ್ಥಾಪಿಸಬಲ್ಲ ಓರ್ವ ರಾಯಭಾರಿ ಎಂದು ಜೋರಾಗಿಯೇ ಬಿಂಬಿಸಿತ್ತು. ಪ್ರತೀ ಬೂತ್‍ ಮಟ್ಟದಲ್ಲಿ ಬಿ.ಜೆ.ಪಿ ಹಾಗೂ ಆರ್.ಎಸ್‍.ಎಸ್‍ ‘ಪೇಜ್ ಪ್ರಮುಖ್’ ಗಳು ಗುಜರಾತ್‍ ಮಾದರಿ, ಹಿಂದೂರಾಷ್ಟ್ರದ ಕಲ್ಪನೆಗಳನ್ನು ಯುವಜನರಿಗೆ ಹೇರಳವಾಗಿ  ಸಾಮಾಜಿಕ ಜಾಲತಾಣಗಳಲ್ಲಿ ಒಪ್ಪಿಸತೊಡಗಿದರು. ಮಾಧ್ಯಮಗಳು ಮೋದಿಯ ‘ಚರಿಷ್ಮಾ’ವನ್ನು ಇನ್ನಿಲ್ಲದಂತೆ ಏರಿಸಿದ್ದರಿಂದ ಮಧ್ಯಮ ವರ್ಗದ ಜನತೆ ತಮ್ಮ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸಬಲ್ಲ ನಾಯಕನನ್ನು ಮೋದಿಯಲ್ಲಿ ಕಾಣತೊಡಗಿದರು. ಹೀಗಾಗಿ ಬಹುಸಂಖ್ಯಾತ ಮಧ್ಯಮ ಹಾಗೂ ಬಡ ಜನರಲ್ಲಿ ಒಂದೆಡೆ ಆರ್ಥಿಕತೆಯ ಕಾರಣದಿಂದ ಹುಟ್ಟಿರುವ ‘ವರ್ಗ’ದ ಕಲ್ಪನೆ ಮತ್ತೊಂದೆಡೆ ಸಾಂಸ್ಕೃತಿಕ ಪುನರುಜ್ಜೀವನದ ಮಹತ್ವಾಕಾಂಕ್ಷೆಗಾಗಿ ನಡೆದ ಬಂಡಾಯವೇ 2014 ರ ಚುನಾವಣಾ ಫಲಿತಾಂಶ.

ಬಿ.ಜೆ.ಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಆರ್.ಎಸ್‍.ಎಸ್‍ 800 ವರ್ಷಗಳ ಬಳಿಕ ಓರ್ವ ‘ನೈಜ ಹಿಂದು’ ದೆಹಲಿಯಲ್ಲಿ ಅಧಿಕಾರಕ್ಕೇರಿದ್ದಾನೆ ಎಂದು ಬಣ್ಣಿಸಿತ್ತು. ಆರ್.ಎಸ್‍.ಎಸ್‍ ಗೆ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವ ಹುದ್ದೆಯೊಂದು ಸೃಷ್ಟಿಯಾಗಿತ್ತು. ಹೀಗಾಗಿ ಆರಂಭದಲ್ಲಿ ಹೇಳಿದ್ದ ಜನರ ಆರ್ಥಿಕ ಸುಧಾರಣೆಗಳಿಗಿಂತಲೂ ಈ ದೇಶಕ್ಕೆ ಬಹುಸಂಖ್ಯಾತರ ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ರಕ್ಷಕನೆಂದು ಬಿಂಬಿಸಿಕೊಳ್ಳುವ ಸಂದರ್ಭ ಬಿ.ಜೆ.ಪಿಗೆ ಒದಗಿ ಬಂತು . ಮೋದಿ ಅನಿವಾರ್ಯವಾಗಿ ‘ಡಿವೈಡರ್‍ ಇನ್‍ ಚೀಫ್‍ ಅಥವಾ ವಿಭಜನೆಯ ಮುಖ್ಯಸ್ಥ ’ ಎನ್ನುವ ಆರೋಪಕ್ಕೆ ಪಕ್ಕಾಗಿರುವುದು ಅನಿವಾರ್ಯವಾಯಿತು. ಪರಿಣಾಮವಾಗಿ ಮುಸ್ಲಿಮರು ಗುಂಪು ಹಲ್ಲೆಯಿಂದ ಮೃತಪಟ್ಟಾಗ ಹಲವು ಸಂದರ್ಭಗಳಲ್ಲಿ ಮೌನವಹಿಸುವುದು ಮತ್ತು ಕೆಲವೊಮ್ಮೆ ಹತ್ಯೆಗಳಿಗೆ ಕಠಿಣ ವಿರೋಧಗಳು ಎದುರಾದಾಗ ‘ಅವರ ಬದಲು ನನ್ನನ್ನೇ ಕೊಂದುಬಿಡಿ’ ಎನ್ನುವ ಅತಿ ಭಾವುಕ ಹೇಳಿಕೆಗಳನ್ನು ಮೋದಿ ಅಭ್ಯಾಸ ಮಾಡಿಕೊಳ್ಳಬೇಕಾಯಿತು..

ನರೇಂದ್ರ ಮೋದಿ ಆರಂಭದಲ್ಲಿ ನೀಡಿದ್ದ ಭರವಸೆ ಪೂರ್ಣಗೊಳಿಸಲು ವೈಜ್ಞಾನಿಕವಾಗಿ ಸದೃಢವಾಗಿರುವ ಭಾರತದ ನಿರ್ಮಾಣವಾಗಬೇಕಿತ್ತು. ಆದರೆ ಆಗಿದ್ದು ಮಾತ್ರ ಬೇರೆಯೇ ಕತೆ. ಉನ್ನತ ವಿಶ್ವವಿದ್ಯಾನಿಲಯದಲ್ಲಿ ಏಕ ಸಂಸ್ಕೃತಿ ಚಿಂತನೆಗಳನ್ನು ಬಿತ್ತಿ, ಜಾತ್ಯತೀತ ಮತ್ತು ವೈಜ್ಞಾನಿಕ ಮನೋಭಾವವನ್ನು ಸಮಾಧಿ ಮಾಡುವ ಕೆಲಸಕ್ಕೆ ಚಾಲನೆ ದೊರೆತಿತ್ತು. ಭಾರತದ ಗತ ವೈಭವವೇ ವೈಜ್ಞಾನಿಕ ಹಿನ್ನೆಲೆಯದ್ದು ಎಂದು ಮೋದಿಯೂ ಉರುಹೊಡೆಯತೊಡಗಿದರು. ಪ್ಲಾಸ್ಟಿಕ್‍ ಸರ್ಜರಿಗೆ ಒಳಗಾಗಿರುವವರಲ್ಲಿ  ಗಣಪತಿಯೇ ಮೊದಲು ಎಂದರು. ಇನ್ನೋರ್ವ ಬಿ.ಜೆ.ಪಿ ನಾಯಕರು ‘ಡಾರ್ವಿನ್‍ ಹೇಳಿದಂತೆ ಮಂಗಗಳಿಂದ ಮಾನವರಾಗಿರುವುದಕ್ಕೆ ಯಾವುದೇ ಕಣ್ಣಾರೆ ಸಾಕ್ಷಿಯೇ ಇಲ್ಲ’ ಅಂದು ಬಿಟ್ಟರು. ಹೀಗಾಗಿ ಒಂದು ಪ್ರಮುಖ ಪತ್ರಿಕೆ ‘ರೈಟ್‍ ಎಟ್‍ ದ ಸೆಂಟರ್’ ಅಥವಾ ಕೇಂದ್ರದಲ್ಲಿ ‘ಬಲ’ ಎಂದೇ ಬಿ.ಜೆ.ಪಿ ಆಡಳಿತವನ್ನು ವ್ಯಂಗ್ಯವಾಡಿತ್ತು. 

ಕೇಂದ್ರ ಸರಕಾರದ ಬೆಂಬಲದಲ್ಲಿ ವಿಜ್ಞಾನ ಮತ್ತು ಉದಾರವಾದಿ ಚಿಂತನೆಗಳನ್ನು ಒಂದು ಸಂಸ್ಕೃತಿಯ ಕಾರಣಕ್ಕೆ ಮೂಲೆಗುಂಪಾಗಿಸುವ ಕೆಲಸ ಅವ್ಯಾಹತವಾಗಿ ಸಾಗಿತ್ತು. ಇಂತಹ ಕೆಲಸಗಳು ನಾಜೂಕಾಗಿ ಸಾಗಿ ಯಶಸ್ವಿಯಾಗುತ್ತಿದ್ದಂತೆ ಜನರು ಸಾಂಸ್ಕೃತಿಕ ಪುನರುಜ್ಜೀವನಕ್ಕಿಂತ ಆರ್ಥಿಕ ಸುಧಾರಣೆ ದೊಡ್ಡದಲ್ಲ ಎಂದು ಕಲ್ಪಿಸಿಕೊಳ್ಳುವುದು ಕಷ್ಟವಾಗಲಿಲ್ಲ.

2014 ರ ಫಲಿತಾಂಶಕ್ಕೆ ಕಾಂಗ್ರೆಸ್‍ ಕೊಡುಗೆಗಳು

ಸ್ವಾತಂತ್ರೋತ್ತರ ಕಾಂಗ್ರೆಸ್‍ ಪಯಣವನ್ನು ಗಮನಿಸಿದಾಗ ಜನಗಳ ಮನ ಧುತ್ತನೆ ಬದಲಾಗಿದ್ದಕ್ಕೂ ಕಾರಣ ಸಿಗುತ್ತದೆ. ವೈಜ್ಞಾನಿಕ ತಳಹದಿಯ ಮತ್ತು ಸದೃಢ ರಾಜನೀತಿಯಿಂದ ಈ ದೇಶದ ಮರು ನಿರ್ಮಾಣ ಕಾರ್ಯವನ್ನು ನೆಹರೂ ಆರಂಭಿಸಿದ್ದರು. ಭಾರತದ ಜನಸಂಖ್ಯೆಯಲ್ಲಿ ಶೇ.13 ರಷ್ಟು ಪಾಲು ಹೊಂದಿದ್ದ ಮುಸ್ಲಿಂ ‍ಸಮುದಾಯದ ಕಾರಣಕ್ಕೆ ಜಾತ್ಯತೀತ ದೇಶವಾಗಿ ಉಳಿಯುವುದೇ ಮುಖ್ಯ ಎಂದು ನೆಹರು ಮಹತ್ವದ ತೀರ್ಮಾನ ಕೈಗೊಂಡಿದ್ದರು. ಇಂತಹ ಹಲವು ಉದಾರವಾದಿ ನಿಲುವುಗಳೊಂದಿಗೆ ಭಾರತ ಮುಂದುವರಿಯುತಿದ್ದರೂ ಭಾರತದ ಜಾತಿ, ಕೋಮುಗಳ ತಾಕಲಾಟಗಳು ಜನರ ಮನಸ್ಸಿನಿಂದ ಅಳಿಸಿಹೋಗುವುದು ಸುಲಭವಾಗಿರಲಿಲ್ಲ. ರಾಜಕಾರಣದಲ್ಲಿ ದಲಿತರು ಸೇರಿದಂತೆ ಬಡವರ್ಗದ ಹಿನ್ನೆಲೆಯಿರುವ ಮುಸ್ಲಿಮರ ಪ್ರಾತಿನಿಧ್ಯವೂ ದೊಡ್ಡ ಮಟ್ಟದಲ್ಲಿ ಇರಲಿಲ್ಲ. ಭ್ರಷ್ಟಾಚಾರ ಮಿಶ್ರಿತ ಅಭಿವೃದ್ಧಿ ಬಡ ಜನತೆಗೆ ಭ್ರಮನಿರಸನ ಉಂಟು ಮಾಡಿದ್ದೂ ಸುಳ್ಳಲ್ಲ.

ಭಾರತದಲ್ಲಿ ಖಲಿಸ್ತಾನ ಪ್ರತ್ಯೇಕವಾದಿ ಹೋರಾಟ ಪಂಜಾಬ್‍ನಲ್ಲಿ ಆರಂಭಗೊಂಡಾಗ ಕಾಂಗ್ರೆಸ್‍ಗೆ ತಲೆನೋವು ಶುರುವಾಗಿತ್ತು. ಪಂಜಾಬ್‍ ಪ್ರತ್ಯೇಕತಾವಾದಿ ಹೋರಾಟ ಹತ್ತಿಕ್ಕಲು ಇಂದಿರಾ ಗಾಂಧಿ ಕೈಗೊಂಡ ಕಠಿಣ ನಿಲುವುಗಳಿಂದಾಗಿ ಅಂಗರಕ್ಷಕನಿಂದಲೇ ಹತರಾದರು. ನಂತರ 1984 ರಲ್ಲಿ ನಡೆದ ಸಿಖ್ ನರಮೇಧದ ರಕ್ತ ಕಾಂಗ್ರೆಸ್‍ಗೆ ಮೆತ್ತಿಕೊಂಡಿತ್ತು. ಜೊತೆಗೆ ಕಾಂಗ್ರೆಸ್‍ ಪಕ್ಷವು ಸಮಯೋಚಿತವಾಗಿ ಬದಲಾಗುವ ಸೆಕ್ಯುಲರ್‍ ವಾದ ಎಂದು ಜನತೆ ಊಹಿಸಿಕೊಳ್ಳತೊಡಗಿದರು. ಕಾಂಗ್ರೆಸ್‍ನಲ್ಲಿ ಬೆಳೆದ ರಾಜಕಾರಣಿಗಳು ಬಹುತೇಕರು ಇಂಗ್ಲಿಷ್‍ ಮಾತನಾಡುವ ಮತ್ತು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಭಾರತದ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದ ಸ್ಥಿತಿವಂತ ನಾಯಕರು. ಇವರ ಚಿಂತನೆಗಳು ಕರುಣೆಯ ನೆಲೆಯಲ್ಲಿತ್ತೇ ಹೊರತು ದೊಡ್ಡ ಮಟ್ಟದ ಬದಲಾವಣೆ ಉಂಟು ಮಾಡುವಂಥ ಸಾಮರ್ಥ್ಯದ್ದಾಗಿರಲಿಲ್ಲ. ಹೀಗಾಗಿ ‘ಚಹಾ ಮಾರುವ’ ರಾಜಕಾರಣಿ ಪ್ರಧಾನಿಯಾಗುವ ಕಲ್ಪನೆ ಮಧ್ಯಮ ಮತ್ತು ಬಡ ವರ್ಗಕ್ಕೆ ಹೆಚ್ಚು ಅಪ್ಯಾಯಮಾನವಾಯಿತು. ಈ ಕಲ್ಪನೆಗೆ ಸ್ಪಷ್ಟ ಉದಾಹರಣೆಯಾಗಿ ತೋರಿಸಬಹುದಾದ ರಾಜ್ಯ ಉತ್ತರ ಪ್ರದೇಶ. ಹೆಚ್ಚು ಜಿಲ್ಲೆಗಳಿರುವ ಮತ್ತು ಹೆಚ್ಚು ಬಡತನವನ್ನೂ ಉಳಿಸಿಕೊಂಡಿರುವ ರಾಜ್ಯ ಉತ್ತರ ಪ್ರದೇಶದಲ್ಲಿ ಎಸ್.ಪಿ, ಬಿ.ಎಸ್.ಪಿ ಮತ್ತು ಕಾಂಗ್ರೆಸ್‍ ಮೂರೂ ಸಮಬಲದ ಪಕ್ಷಗಳಾಗಿದ್ದವು. ಆದರೆ 2014 ರ ಚುನಾವಣೆಯಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ 71 ಬಿ.ಜೆ.ಪಿ ಗೆಲ್ಲತಿತ್ತು ಎನ್ನುವುದನ್ನು ಯಾರೂ ಊಹಿಸಿರಲಾರರು.

2014ರ ಬಳಿಕ ಉತ್ತರ ಪ್ರದೇಶದಲ್ಲೂ ಅಭಿವೃದ್ಧಿಗಿಂತ ಗೋರಕ್ಷಣೆಯೇ ಮಹತ್ವದ ವಿಚಾರವಾಗಿ ಬದಲಾಗಿತ್ತು. ಉತ್ತರ ಪ್ರದೇಶ ದೇಶದಲ್ಲಿ ಹೆಚ್ಚು ಮುಸ್ಲಿಮರು ವಾಸಿಸುವ ರಾಜ್ಯ. ಹೀಗಾಗಿ ಕೋಮುಸಂಘರ್ಷ ಅಭಿವೃದ್ಧಿಗಿಂತಲೂ ಒಂದು ತೂಕ ಹೆಚ್ಚಾಗಿಯೇ ಉತ್ತರ ಪ್ರದೇಶದಲ್ಲಿ ಚರ್ಚೆಯಾಗುತ್ತಿದೆ. ಆದರೆ ಎಲ್ಲಾ ಸಮಯದಲ್ಲೂ  ಬಿ.ಜೆ.ಪಿ ಊಹಿಸಿದಂತೆಯೇ ಉತ್ತರ ಪ್ರದೇಶದಲ್ಲಿ ನಡೆದಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋಹತ್ಯೆ ನಿಷೇಧಗೊಳಿಸಿದ ಕೆಲವು ತಿಂಗಳುಗಳಲ್ಲಿ ಬೀಡಾಡಿ ದನಗಳು ಉತ್ತರ ಪ್ರದೇಶಕ್ಕೆ ದೊಡ್ಡ ಸಮಸ್ಯೆ ಉಂಟು ಮಾಡಿತ್ತು. ದೇಶದ ಪ್ರಮುಖ ಪತ್ರಿಕೆಗಳಲ್ಲಿ ಮೊದಲ ಪುಟದ ಸುದ್ದಿಯೂ ಆಗಿತ್ತು. ಈಗಲೂ ಉತ್ತರ ಪ್ರದೇಶದ ಬೀಡಾಡಿ ದನಗಳು ಬಡ ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಹಲವು ಕಾರಣಗಳಿಂದ 2019 ರ ಹೊತ್ತಿಗೆ ಉತ್ತರ ಪ್ರದೇಶದಲ್ಲಿ ಮೋದಿಯ ಜನಪ್ರಿಯತೆಯೂ ತಗ್ಗಿತ್ತು ಎನ್ನುವ ಮಾತಿದೆ. ಆದರೆ ಬಾಲಕೋಟ್‍ ದಾಳಿಯ ಬಳಿಕ ಉತ್ತರ ಪ್ರದೇಶಕ್ಕೆ ಮೋದಿ ಮತ್ತೊಮ್ಮೆ ದೊಡ್ಡ ಭರವಸೆಯಾಗಿ ಕಂಡಿದ್ದಾರೆ.

ಈ ಬಾರಿಯ ಚುನಾವಣೆಗೆ ಮೋದಿ ನೇತೃತ್ವದ ಬಿ.ಜೆ.ಪಿ ಉತ್ತರ ಪ್ರದೇಶದಲ್ಲಿ ರಾಷ್ರೀಯವಾದದ ವಿಚಾರಗಳಿಂದ ಮತ ಗಳಿಸಿಕೊಳ್ಳುವ ಯತ್ನದಲ್ಲಿದೆ. ಹೀಗಾಗಿಯೇ ಮೋದಿ ಇತ್ತೀಚೆಗೆ ಅಯೋಧ್ಯೆಯಲ್ಲಿ ಮಾಡಿರುವ ಚುನಾವಣಾ ಭಾಷಣದಲ್ಲಿ ರಾಮಮಂದಿರದ ಬಗ್ಗೆ ಪ್ರಸ್ತಾಪಿಸದೇ ಕೇವಲ ಬಾಲಕೋಟ್‍ ದಾಳಿ, ರಾಜೀವ್‍ ಗಾಂಧಿ ಕುರಿತಾದ ಟೀಕೆಗಳನ್ನು ಸಾಕಷ್ಟು ಮಾಡಿದ್ದಾರೆ.

ಹಿಂದಿನ ಬಾರಿ ಬಿ.ಜೆ.ಪಿ  ‘ಸಬ್‍ ಕಾ ಸಾಥ್‍ ಸಬ್‍ ಕಾ ವಿಕಾಸ್‍’ ಎನ್ನುವ ಘೋಷ ವಾಕ್ಯ ಮತ್ತು ಮೋದಿಯ ನಾಯಕತ್ವದ ಭರವಸೆಯನ್ನು ಮುಂದಿಟ್ಟು ಮತಯಾಚಿಸಿತ್ತು. ಆದರೆ ಈ ಬಾರಿ ಅಭಿವೃದ್ದಿಗಿಂತಲೂ ಮೋದಿಯವರು ಈ ದೇಶವನ್ನು ಗಂಡಾಂತರಗಳಿಂದ ಪಾರು ಮಾಡಬಲ್ಲ ಮಹಾನ್‍ ನಾಯಕ ಎಂದು ಬಿ.ಜೆ.ಪಿ ಬಿಂಬಿಸುತ್ತಿದೆ. ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) , ಉದ್ಯೋಗ ಸೃಷ್ಟಿ ಮೊದಲಾದವುಗಳು ಬಾಲಕೋಟ್‍ ದಾಳಿಗಿಂತ ಮೊದಲ ಭಾಗದಲ್ಲಿ ಮತ್ತು ‘ದೇಶಕ್ಕಾಗಿ ಮೋದಿ ’ ಎನ್ನುವ ಉದ್ಘಾರ ದಾಳಿಯ ನಂತರದಲ್ಲಿ ಉತ್ತರ ಪ್ರದೇಶದಲ್ಲಿ ಚರ್ಚೆಯಾಗುತ್ತಿದೆ. ಹೀಗಿದ್ದರೂ ಮೋದಿ ಇಂದಿಗೂ ತಾನು ಜನಸಾಮಾನ್ಯ ಎನ್ನುವ ಇಮೇಜ್‍ ಬಿಟ್ಟುಕೊಟ್ಟಿಲ್ಲ. ರಾಜೀವ್ ಗಾಂಧಿಯವರನ್ನು ಟೀಕಿಸುವಾಗ ಶ್ರೀಮಂತ ಕುಟುಂಬದ ವ್ಯಕ್ತಿ ಎಂದೋ ಸೂಟು-ಬೂಟುಧಾರಿಗಳು ಎಂದೋ ಕಾಂಗ್ರೆಸ್‍ ಅನ್ನು ದೂರುತ್ತಲೇ ಇದ್ದಾರೆ. ಈ ನಡುವೆ ಕಾಂಗ್ರೆಸ್‍ ತನ್ನದು ಬಡವರ ಪರ ಪಕ್ಷ ಎಂದು ಪ್ರಣಾಳಿಕೆಯಲ್ಲಿ ಗೊತ್ತು ಮಾಡಲು ಯತ್ನಿಸಿತ್ತು. ಆದರೆ ಕಾಂಗ್ರೆಸ್‍ ಪ್ರಣಾಳಿಕೆಗೆ ಹೆಚ್ಚಿನ ಪಾಲು ತದ್ವಿರುದ್ಧವಾದ ಭರವಸೆಗಳನ್ನು ಬಿ.ಜೆ.ಪಿ ಹೊತ್ತು ತಂದಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವುದು, ಏಕ ನಾಗರಿಕ ಸಂಹಿತೆ ತರುವುದು, ಸಶಸ್ತ್ರ ಅಧಿಕಾರವನ್ನು ಇನ್ನಷ್ಟು ಬಲಗೊಳಿಸುವುದು ಮೊದಲಾದ ರಾಷ್ಟ್ರೀಯವಾದಕ್ಕೆ ನೀರೆರೆಯುವ ಭರವಸೆಗಳನ್ನೇ ಜನರಿಗೆ ಕೊಟ್ಟಿದೆ.

 2018 ರಲ್ಲಿ ಮೋದಿ ತಮ್ಮ ಟ್ವೀಟ್‍ ಒಂದರಲ್ಲಿ ‘ ಅವರ (ಕಾಂಗ್ರೆಸ್ಸಿಗರ) ಸುಲ್ತಾನ್‍ಗಿರಿಗೆ ನನ್ನಂಥ ಬಡಕುಟುಂಬದ ವ್ಯಕ್ತಿಯೊಬ್ಬ ಸವಾಲೊಡ್ಡುತ್ತಿರುವುದು ಅವರ ದೃಷ್ಟಿಯಲ್ಲಿ ದೊಡ್ಡ ಅಪರಾಧ’ ಎಂದು ಬಡಜನರ ಗುಂಪಿಗೆ ನುಸುಳಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ 2014ರ ಫಲಿತಾಂಶ ಪುನಾರವರ್ತನೆಯಾಗುವುದು ಕಷ್ಟ. ಸಾಂಸ್ಕೃತಿಕ ಧ್ರುವೀಕರಣವನ್ನು ಸಾಧಿಸಿದ್ದರೂ ಒಗ್ಗಟ್ಟಾಗಿರುವ ವಿರೋಧ ಪಕ್ಷಗಳು ಈ ಬಾರಿ ಬಿ.ಜೆ.ಪಿಗೆ ದೊಡ್ಡ ಸವಾಲು. ಉತ್ತರ ಪ್ರದೇಶದಲ್ಲಿ ಎಸ್‍.ಪಿ ಮತ್ತು ಬಿ.ಎಸ್.ಪಿ ದೋಸ್ತಿ ಬಿ.ಜೆ.ಪಿಯ ಬಹುಮತಕ್ಕೆ ದೊಡ್ಡ ಬೆದರಿಕೆ. ಈ ಕಾರಣಕ್ಕಾಗಿಯೇ ಪಕ್ಕದ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶದಲ್ಲಿ ಆಗಬಹುದಾದ ನಷ್ಟವನ್ನು ಕೊಂಚವಾದರೂ ತುಂಬಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಹೀಗಾಗಿ ಈ ಬಾರಿ ಬಿ.ಜೆ.ಪಿ ಜನಸಾಮಾನ್ಯರ ಜೀವನ ಮಟ್ಟದ ಅಭಿವೃದ್ಧಿಗಿಂತಲೂ ‘ವಿಭಜನೆ’ಯ ಪ್ರಯತ್ನದಿಂದ ಬರುವ ಫಲಿತಾಂಶಕ್ಕೆ ಪ್ರಯತ್ನಿಸುತ್ತಿರುವಂತಿದೆ.

                                       (ಸೌಜನ್ಯ : ಟೈಮ್ ನಿಯತಕಾಲಿಕ, ಲೇಖನದ ಸಂಕ್ಷಿಪ್ತ ರೂಪ ರಕ್ಷಿತ್ ಬಂಗೇರ)