ಅಪ್ಪಯ್ಯನ ಜುಬ್ಬಾ ಮತ್ತದರ ತೋಳು..

ಇಂಥ ಅಪ್ಪಯ್ಯನ ಜುಬ್ಬಾದಿಂದ ಉದ್ಭವಿಸಿದ ಮಿನಿಜುಬ್ಬಾ ಧರಿಸಿ ನಾನೂ `ಜುಬ್ಬಯ್ಯ'ನಾಗಿ ಅವರೊಂದಿಗೆ ಹಲವು ರಾಜಕೀಯ ಸಮಾರಂಭಗಳಿಗೆ ಹೋಗುತ್ತಿದ್ದೆ; ಅದೂ ನನ್ನ ಪ್ರೈಮರಿ ಶಾಲಾ ದಿನಗಳಲ್ಲಿಯೇ ಬಹುಪಾಲು.

ಅಪ್ಪಯ್ಯನ ಜುಬ್ಬಾ ಮತ್ತದರ ತೋಳು..

ನಮ್ಮ ಕಡೆ ನಾವೆಲ್ಲ ನಮ್ಮ ಮನೆಮಂದಿಯನ್ನು ಕರೆಯುವಾಗ ಆ ಸಂಬಂಧ ಸೂಚಕ ಶಬ್ಧದ ಮುಂದೆ ಬಹುಪಾಲಾಗಿ `ಅಯ್ಯಾ' ಎಂದು ಸೇರಿಸುವುದು ರೂಢಿ. ಅಂದರೆ ಅಪ್ಪಯ್ಯ, ದೊಡ್ಡಪ್ಪಯ್ಯ, ಅಣ್ಣಯ್ಯ.. ಹೀಗೆ. ಇದು ಬಹಳಷ್ಟು ಕಡೆ ಚಾಲ್ತಿಯಲ್ಲಿರುವ ನಡೆ. ಆದರೆ  ತಮ್ಮನಿಗೆ ತಮ್ಮಯ್ಯ ಅನ್ನುವುದಿಲ್ಲ. ಅಮ್ಮ ತಂಗಿ ಅಜ್ಜಿ ಮೊದಲಾದ ಹೆಣ್ಮಕ್ಕಳಿಗೆ ಇದು ಲಾಗೂ ಆಗುವುದಿಲ್ಲ; ಅಕ್ಕಯ್ಯ ಎಂಬ ಸಂಬೋಧನೆ ಮಾತ್ರ ಚಾಲನೆಯಲ್ಲಿದೆ. ಚಿಕ್ಕಪ್ಪನಿಗೆ ಕಾಕಾ ಅನ್ನುವುದೇ ಹೆಚ್ಚು. ಚಿಕ್ಕಮ್ಮನಿಗೆ ಚಿಕ್ಕಿ ಅನ್ನುವುದು. ಇವೆಲ್ಲ ಬಹುತೇಕ ಮಲೆನಾಡು-ಬಯಲುಸೀಮೆ ಎರಡರ ಗಡಿಯಲ್ಲಿರುವ ನಮ್ಮಗಳ ಹಾಡುಪಾಡಾಗಿಯಷ್ಟೇ ಉಳುಕೊಂಡಿರಬೇಕು. ಇನ್ನೂ ಮಜಾದ ಸಂಗತಿಯೆಂದರೆ, ಈ ಎಲ್ಲರೂ ವ್ಯಕ್ತಿಗಳೇ ಆಗಿದ್ದರೂ `ಅದು- ಇದು' ಎಂದೂ ಸಂಬೋಧಿಸುವುದು ನಮ್ಮ ಕಡೆ ಸರ್ವೇ ಸಾಮಾನ್ಯ. ಉದಾಹರಣೆಗೆ, `ಅಪ್ಪಯ್ಯ ಬಂದಿತ್ತು.. ಅಮ್ಮ ಊರಿಗೆ ಹೋತು.. ಇತ್ಯಾದಿ'. ಧಾರವಾಡದಲ್ಲಿ ನಾ ಓದೋವಾಗ ನನ್ನ ದೋಸ್ತರೆಲ್ಲ ಇಂಥ ಸಂಬೋಧನೆ, ಮಾತಿನ ಧಾಟಿ ನೋಡಿ ಅಣಕಿಸುತ್ತಿದ್ದರು: `ಅಪ್ಪಯ್ಯ ಬಂದಿತ್ತ.. ಹೋಗಿತ್ತ..!' ಎಂದು ಮುಂತಾಗಿ. ಹಾಗಂಥ ಈ ಇವರನ್ನೆಲ್ಲ ನಮ್ಮ ಗ್ರ್ಯಾಮರ್ ಪ್ರಕಾರ ನಪುಂಸಕಲಿಂಗ ಕೆಟಗರಿಗೆ ಸೇರಿಸಲಾಗುವುದೇ..!?. ಇದು ನಮ್ಮಲ್ಲಿನ ಸಕಲ ಕುಲಬಾಂಧವರ ಮನೆಯಲ್ಲಿ ಬಳಕೆ ಇಲ್ಲ; ಕೆಲ ಮನೆ-ಮನೆತನಗಳಲ್ಲಷ್ಟೇ ಅನ್ನುವುದೂ ಖರೆ. 

ಅಂದ ಹಾಗೆ, ನನ್ನದು ನಮ್ಮಪ್ಪಯ್ಯನದು ಒಂಥರಾ ವಿಚಿತ್ರವೂ ಅನ್ಯೋನ್ಯವೂ ಆದ ಸಂಬಂಧ. ನನ್ನ ಅಪ್ಪಯ್ಯ- ನನ್ನ ವಿದ್ಯೆ ಕಲಿಕೆಯ ಕಾಲದುದ್ದಕ್ಕೂ (ಇಪ್ಪತ್ತಾರರ ವಯೋಮಾನದುದ್ದಕ್ಕೂ) ನನ್ನ ಹಿರಿಯ ಗೆಳೆಯನೇ ಆಗಿದ್ದ. ನನ್ನ ಮಟ್ಟಿಗೆ ಫಿಲಾಸಫರ್ರೂ ಹೌದು. `ಅಪ್ಪ, ಯೆಪ್ಪಾ'- ಎಂದೆಲ್ಲ ನಾವು ಕರೆದರೆ ಅದು `ಏಕವಚನ' ಪ್ರಯೋಗವೇ ಆಗಿಬಿಡುತ್ತದೆಯೆಂಬ `ಮೂಢನಂಬಿಕೆ' ಆಗ ನಮಗಿತ್ತಾದರೂ, `ನೀನು.. ತಾನು..' ಎಂದು ಏಕವಚನದಲ್ಲಿ ಕರೆದರೆ ಅದು ಗೌರವಪೂರ್ವಕವೇ ಎಂಬ ನಂಬಿಕೆಯೂ ಇತ್ತು. ಹಾಗಾಗಿ `ಅಯ್ಯ' ಎಂಬ ಪದಪ್ರಯೋಗದ ಜೊತೆ `ಹೋಗು.. ಬಾ..' ಎಂದು ನಾವು ಯಾವ ಭಿಡೆಯಿಲ್ಲದೇ ಹಿರಿಯರನ್ನು ಕರೆಯುವುದು ಸಾಮಾನ್ಯವಾಗಿತ್ತು. ಈಗಲೂ ಆ ಬಳಕೆ ಮುಂದುವರೆದಿದೆ. ಈ ಹೊತ್ತಿಗೂ ಅಂದರೆ ತಂದೆಯವರ ಎಂಬತ್ನಾಕರ ಇಳಿವಯಸ್ಸಿನಲ್ಲೂ ನಮಗವರು ಏಕವಚನ ಪ್ರಿಯರೇ. ನಮ್ಮಪ್ಪಯ್ಯನ ಜೊತೆ ಕೂಗಾಡಿದಷ್ಟು, ಜಗಳವಾಡಿದಷ್ಟು, ಅಭಿಪ್ರಾಯ ಭೇದ ಹೊಂದಿದಷ್ಟು, ತಕರಾರು ತೆಗೆದಷ್ಟು ಬೇರಾರೊಡನೆಯೂ ಇದೆಲ್ಲ ಇಲ್ಲವೆಂದರೂ ಆದೀತು. ಹಾಗೇ ನನ್ನ `ಮನೋಧರ್ಮ' ಹೀಗೇ ಇರಬೇಕೆಂದು ಕಲಿಸಿಕೊಟ್ಟಿದ್ದೂ ನನ್ನಪ್ಪಯ್ಯನೇ. ಅವರ ಜೊತೆ ಅಡ್ಡಾಟ ಮಾಡಿದಾಗ, ಒಡನಾಡುವಾಗ, ಅವರ ಭಾಷಣ ಕೇಳಿದಾಗ (ನಮ್ಮ ಭಾಗದಲ್ಲೂ ತಾಲೂಕಿನಲ್ಲೂ ಆಗವರು ಉತ್ತಮ ಭಾಷಣಕಾರರು ಆಗಿದ್ದರು) ಅವರಾಡುತ್ತಿದ್ದ ಮಾತು-ವರ್ತನೆಗಳು ನನ್ನ ಬದುಕಿನ ನಡೆಯನ್ನು ನೆಟ್ಟಗಾಗಿಸಿದ್ದರಲ್ಲಿ ಎರಡು ಮಾತೇ ಇಲ್ಲ. ಇಂಥ ಅಪ್ಪಯ್ಯ ತನ್ನ ಇಪ್ಪತ್ತರ ವಯಸ್ಸಿನಲ್ಲೇ ರಾಜಕಾರಿಣಿಯಾದವರು. ಶಾಸಕರು, ಮಂತ್ರಿಗಳು, ಅಧಿಕಾರಿಗಳಂತಹ ದೊಡ್ಡ ವ್ಯಕ್ತಿಗಳ ಜೊತೆ ಒಡನಾಡಿ `ಎಲ್ಲಿ-ಯಾವಾಗ-ಹೇಗೆ' ಮಾತನಾಡಬೇಕೆಂಬ ಗರಿಷ್ಠಮಟ್ಟದ ಪ್ರಬುದ್ಧತೆ ಹೊಂದಿದ್ದವರು. ಅವರಂತೆ ಧೈರ್ಯದಿಂದ, ಕರಾರುವಕ್ಕಾಗಿ ಬಹುತೇಕರು ಮಾತನಾಡುತ್ತಿದ್ದುದೇ ಅವಾಗ ಕಮ್ಮಿ. ಹೀಗಾಗಿ ನನಗೆ ಅನ್ಯರಿಗಿಂತ ಅವರು ಮಾದರಿಯಾದವರು. ನಗುತ್ತ ಎಲ್ಲರನ್ನು ಮಾತನಾಡಿಸಿ ಎಲ್ಲರ ಪಾಲಿಗೂ ಪ್ರೀತಿಪಾತ್ರರೇ ಆಗಿರುತ್ತಿದ್ದ, ಆಗಿರುವ ಅಪ್ಪಯ್ಯ ಸಿಡುಕಿನಲ್ಲಿಯೂ, ನಿರ್ಧಾಕ್ಷಿಣ್ಯ ನಿಲುವುಗಳಲ್ಲೂ ಎತ್ತಿದ ಕೈ. ಮಹಾ ಕನಸುಗಾರ ಹಾಗೂ ಯೋಜನಾ ಆಯೋಗದ ಅಘೋಷಿತ ಅಧ್ಯಕ್ಷನಂತೆಯೂ ನಮ್ಮ ಮನೆತನದಲ್ಲಿ ಕಾರ್ಯ ನಿರ್ವಹಿಸಿದವರು. ಮೊಂಡುತನ, ಹಿಡಿದದ್ದನ್ನು ಸಾಧಿಸಿಯೇ ತೀರಲು ಕಟುಬದ್ಧರಾಗಿ ಹಠಮಾರಿತನದಂತಹ ಹಲವು ನಿಲುವು-ಒಲವುಗಳಿಂದಾಗಿ ಈಗಲೂ ಕೆಲವರಿಗೆ ನನ್ನನ್ನೂ ಸೇರಿಸಿ ಅವರು ಕೆಲಮಟ್ಟಿಗೆ ಅಲರ್ಜಿ; ಬಹುಮಟ್ಟಿಗೆ ಒಪ್ಪಿತರೂ..!

ಆದರೆ, ನನ್ನ ಬಾಲ್ಯಕಾಲದಲ್ಲಿ ಜಗತ್ತನ್ನು ತೋರಿಸಿದ ಮೊದಲಿಗ ನನ್ನಪ್ಪಯ್ಯನೇ. ಅಷ್ಟಿಷ್ಟು ಮನುಷ್ಯತ್ವ, ಜೀವಪರ ಕಾಳಜಿ, ಸಾಮಾಜಿಕ ಕಳಕಳಿಗಳನ್ನು ಕಲಿಸಿದವರು.. ಇತ್ಯಾದಿಯಾಗಿ ಅವರ ವ್ಯಕ್ತಿತ್ವ ಮತ್ತವರ ಬದುಕಿನ ಏಳು ಬೀಳು ಬೇರು ಬಿಳಲುಗಳನ್ನು ಹರಿಗಡೆಯದಂತೆ ವಿವರಿಸುತ್ತಾ ಹೋಗಬಹುದು.. ಇರಲಿ, ಸದ್ಯಕ್ಕೆ ಶಿರೋನಾಮೆಯ ವಿಷಯಕ್ಕೆ ಬರುವುದಾದರೆ, ನಾನು ನೋಡಿದಂತೆ ಈಗಿನವರೆಗೂ ಇವರು ಬಿಳಿ ಕಚ್ಚೆಪಂಜೆ- ಉದ್ದನೆಯ ನೆಹರು ಜುಬ್ಬಾ ಧಿರಿಸು ಪ್ರಿಯರು. ಅವರ ಜುಬ್ಬಾವನ್ನು ನಾವು ಸಣ್ಣವಿರಿದ್ದಾಗ ಹಾಕಿಕೊಂಡು ಮನೆತುಂಬ ಓಡಾಡಿದರೆ ಮನೆಮಂದಿಯೆಲ್ಲ ಬಿದ್ದೆದ್ದು ನಗಾಡುತ್ತಿದ್ದರು. ಆ ಧಿರಿಸು ನಮ್ಮನ್ನು ಪೂರಾ ಮುಚ್ಚಿಯೂ ನೆಲ ಸಾರಿಸುವಷ್ಟಿರುತ್ತಿತ್ತು. ಅವರು ಓದುವಾಗ ಮಾತ್ರ ಪ್ಯಾಂಟು-ಶರ್ಟ್-ಕೋಟು ಹಾಕಿದ್ದನ್ನು ನಾನವರ ಹಳೆಯ ಪೋಟೋಗಳಲ್ಲಿ ಕಂಡುಕೊಂಡಿದ್ದೇನೆ. ಶಿಸ್ತು ಎಂಬ ಶಬ್ಧಕ್ಕೆ ಮೊದಲಿಂದ ಈ ತನಕವೂ ಸಾಕಷ್ಟು ಮರ್ಯಾದೆಯನ್ನು ಕೊಟ್ಟುಕೊಂಡು ಬಂದವರು. ಅವರ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಕಾರ್ಯಕ್ರಮಗಳಿಗೆ ನನ್ನ ಕರೆದೋಯ್ಯುತ್ತಿದ್ದರು. ಅವರ ಜೊತೆ ಅಡ್ಡಾಡಿದ ನಾನು ಆ ಕಾಲದ ಹಲವಾರು ಬಹುದೊಡ್ಡ ರಾಜಕಾರಿಣಿ-ಅಧಿಕಾರಿಗಳನ್ನು ಆ ಕಾಲದಲ್ಲಿಯೇ ನೋಡಿಬಿಟ್ಟಿದ್ದೆ. ಆಗ ಅಲ್ಲಿ ನಡೆಯುತ್ತಿದ್ದ ನಮ್ಮಪ್ಪಯ್ಯನ ಇಂಗ್ಲೀಷು ಮಿಶ್ರಿತ ಕನ್ನಡ ಭಾಷಾ ಸಂಭಾಷಣೆ-ಸಂವಹನ ಲೀಲಾಜಾಲವಾಗಿ ಸಾಗುವುದನ್ನು ನೋಡಿ, `ಮುಂದೆ ನನಗಿಷ್ಟೆಲ್ಲ ದೊಡ್ಡವರೊಂದಿಗೆ ಮಾತನಾಡಲಿಕ್ಕಾಗುತ್ತದೆಯೇ..?' ಎಂದು ಹಗಲು ರಾತ್ರಿ ಚಿಂತಿಸಿದ್ದೂ ಉಂಟು. ಈ ಮಾತು ಅವರ ಭಾಷಣದ ಮಟ್ಟಿಗೂ ಸತ್ಯ. ಅವರು ಓದದೆ ಅರಿತುಕೊಳ್ಳದೆ ವ್ಯಾಕರಣಕ್ಕೆಂದೂ ಮೋಸ ಮಾಡಿ ಮಾತನಾಡಿಯೇ ಇಲ್ಲ ಎನ್ನಬಹುದು. ಅವರ ಪುಸ್ತಕ-ಪತ್ರಿಕಾ ಓದಿನ ಪ್ರೀತಿಯು ಉಲ್ಲೇಖಿಸುವಂಥದ್ದೇ. ಅದೇ ನನ್ನ ಕಡೆಯಿಂದ ನಾಕು ಅಕ್ಷರ ಬರೆಯುವಂತೆ ಮಾಡಿರಬೇಕೇನೋ! ಹಾಗಂತ, ಅವರು ಕಾದಂಬರಿ-ಕಥೆ-ಕವಿತೆ ಓದಿದ್ದು ಬಹುಕಡಿಮೆ. ವ್ಯಕ್ತಿಚಿತ್ರ, ಜೀವನಚರಿತ್ರೆಗಳು, ವೈಚಾರಿಕ ಕೃತಿಗಳನ್ನಷ್ಟೇ ಓದುತ್ತಿದ್ದರು. ನನಗೂ ಓದಲು ಹೇಳುತ್ತಿದ್ದರು. ನಾನು ಅವರು ಕೊಂಡುತಂದ ಪುಸ್ತಕಗಳನ್ನು ಅಷ್ಟಿಷ್ಟು ಓದಿ ಚೆಂದವಾಗಿ ಜೋಡಿಸಿಕೊಂಡಿರುತ್ತಿದ್ದೆ. ಆಗಲೇ ಇಂಟರ್ ಮೀಡಿಯೇಟ್ ಓದಿದ ಅವರ ವಿದ್ಯಾಕಲಿಕೆಯೆಲ್ಲ ಶಿವಮೊಗ್ಗ ಮತ್ತು ಸೊರಬ ತಾಲೂಕಿನ ಕೆಲವು ಊರುಗಳಲ್ಲಿಯೇ ಆಯಿತು. ಜೀವನದ ಬಹುಭಾಗವನ್ನು ಅಡ್ಡಾಟದಲ್ಲೇ ಕಳೆದ ಅವರು ಸರಕಾರಿ ಬಸ್ಸುಗಳನ್ನೇ ಹೆಚ್ಚಾಗಿ ಆಶ್ರಯಿಸಿದ್ದು. ಕಾರುಗೀರಿನಲ್ಲಿ ಓಡಾಡುವಷ್ಟು ಶಕ್ತಿ ಆಗ ನಮಗಿರಲಿಲ್ಲವಾದ್ದರಿಂದ ಅದು ಅನಿವಾರ್ಯವೇ ಆಗಿತ್ತು. ಕಷ್ಟದ ಬದುಕಿನಲ್ಲೂ ಎಂಜಾಯ್ ಮಾಡುವ ಮನೋಭಾವ, ಸಮಸ್ಯೆಗಳನ್ನು ಎದುರಿಸುವ ಬಲವಾದ ಛಾತಿ ಅವರಿಗಿತ್ತು. ಒಮ್ಮೊಮ್ಮೆ ಕೆಲವು ಸಮಸ್ಯೆಗಳಿಂದಾಗಿ ಕುಗ್ಗಿಹೋದಂತೆ ಕಂಡರೂ ತಮ್ಮ ಹಿಡಿದ ಪಟ್ಟನ್ನು ಈಡೇರಿಸಲು ಮತ್ತೆ ಗಟ್ಟಿಯಾಗಿ ನಿಲ್ಲುತ್ತಿದ್ದರು. ಶಿವಮೊಗ್ಗ-ಉತ್ತರ ಕನ್ನಡ-ಧಾರವಾಡ ಜಿಲ್ಲೆಗಳ ಮೂಲೆಮೂಲೆಯಲ್ಲೂ ಅವರಿಗೆ ಪರಿಚಿತರಿದ್ದರು ಕುಲ-ಬಂಧುಬಾಂಧವರನ್ನೂ ಮೀರಿ. ಈಗಲೂ ಅವರ ಅಳಿದುಳಿದ ಸಮಕಾಲೀನ ಹಿರಿಯ ಜೀವಗಳು ನನ್ನ ಕಂಡಾಗೊಮ್ಮೆ `ಅಪ್ಪಾರು ಅರಾಮಿದ್ದಾರಾ..? ಅವರು ನನಗೆ ಭಾಳ ಅತ್ಯಂತ..!' ಎಂದೇ ಕೇಳುತ್ತಾರೆ. ಎಲ್ಲಿಗೇ ಹೋಗಿ ಬಂದರೂ ನಾಕಾರು ಸ್ನೇಹಿತರನ್ನು ತನ್ನ ಹಳೆಯ ಲಿಸ್ಟ್ಗೆ ಹೆಚ್ಚುವರಿಯಾಗಿ ಸೇರಿಸಿಕೊಂಡೇ ಮನೆಗೆ ಬರುತ್ತಿದ್ದರು. ಈ ಹೊತ್ತಿನಲ್ಲಿ, ನಾನು ಧಾರವಾಡ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾಗ ಅಲ್ಲಿ ಹಿರಿಯರಾದ ಶ್ರೀ ಬಂಡಿ ವಕೀಲರು ನಮ್ಮ ಸಿನೀಯರ್ ವಕೀಲರಾದ ಕೆ.ಎಲ್. ಪಾಟೀಲರ ವೃತ್ತಿಸೇವಾ ಬೆಳ್ಳಿಹಬ್ಬದಲ್ಲಿ ಕೆ.ಎಲ್ ಪಾಟೀಲರ ಬಗ್ಗೆ ಹೇಳಿದ ಒಂದು ಮಾತು ನನಗೀಗ ನೆನಪಿಗೆ ಬರುತ್ತಿದೆ: `ಕೆ.ಎಲ್. ಪಾಟೀಲ್ರು ಎಲ್ಲೇ ಹೋದ್ರೂ ನಾಕ್ ಮಂದಿ ಕಟ್ಕೊಂಡ್ ಬರ್ತಾರ; ನಾವ್ ನಾಕ್ ಮಂದಿ ಕಳ್ಕಂಡ್ ಬರ್ತೀವಿ..!' ಅಂತ.  ಈ ಮಾತು ಬಂಡಿ ಅವರು ಹೇಳಲಿಕ್ಕೆ ಕಾರಣ ಸ್ವತಃ ಬಂಡಿ ಅವರು ಹೆಸರಾಂತ ವಕೀಲರಾಗಿದ್ದರೂ ಕುಪಿತ ಮನೋಸ್ಥಿತಿಯವರಾಗಿದ್ದರು ಎಂಬುದು. 

ನಮಗೆ ಜಮೀನು ಕಮ್ಮಿ ಇತ್ತಾದ್ದರಿಂದ ಊಟ-ಬಟ್ಟೆಗೂ ಒಜ್ಜೀಯಾಗಿ ಬದುಕಿನ ದಿನಗಳನ್ನು ಅಜ್ಜಯ್ಯ-ಅಪ್ಪಯ್ಯ-ಅವರ ಅಣ್ಣತಮ್ಮಂದಿರ ಕಾಲ ಕಂಡಿತ್ತು. ಉಣ್ಣುವ ಭತ್ತದ ಒಂದೇ ಒಂದು ಚೀಲವನ್ನು ಕಡವಾಗಿ ಪಡೆಯಲು ಮತ್ತೊಬ್ಬ ಗೌಡರ ಮನೆಬಾಗಿಲನ್ನು ದಿನಗಟ್ಟಲೆ ಕಾದುಕುಂತದ್ದು; ತಂದಮೇಲೆಯೇ ಭತ್ತಕುಟ್ಟಿ ಹಸಮಾಡಿ ಗಂಜಿಯನ್ನುಂಡು ಹಸಿವಿನ ಚೀಲ ತುಂಬಿಕೊಂಡ ಹಿನ್ನೆಲೆಯೂ ನಮಗಿದ್ದದ್ದು ಸುಳ್ಳಲ್ಲ. ನಮ್ಮ ಗದ್ದೆ ಜಮೀನು ಕಮ್ಮಿಯಿರುವುದರಿಂದ ಕೆಲ ಉಳಲಾಗದ ಬಡವರ ಜಮೀನನ್ನು ನಾವೇ ವ್ಯವಸಾಯ ಮಾಡಿ ಅಂಥವರಿಗೆ ನ್ಯಾಯದ ಪಾಲು ಕೊಟ್ಟದ್ದು ಇತ್ತು. ಇಂಥ ಹಲವು ಹಳೆಯ ಅನುಭವದ ಕಥೆಗಳನ್ನು ಅಪ್ಪಯ್ಯ ಆಗಾಗ ನನ್ನ ತಲೆಗೆ ಬಾಲ್ಯದಲ್ಲಿ ತುಂಬುತ್ತಲೇ ಇರುತ್ತಿದ್ದರು. ಬಹಳಷ್ಟು ನ್ಯಾಯೋಚಿತ, ಸುಯೋಗ್ಯ ಮಾತುಗಳನ್ನು ಹೇಳುತ್ತಲೇ ಇರುತ್ತಿದ್ದರು. ಉದಾಹರಣೆಗೆ, ನಾವು ಬಡವನೊಬ್ಬನ ಜಮೀನನ್ನು ವ್ಯವಸಾಯ ಮಾಡುತ್ತಿದ್ದ ಸಂಗತಿಗೆ ಪೂರಕವಾಗಿ ಅವರಾಡಿದ ಮಾತು ನನ್ನನ್ಯಾವಾಗಲೂ ಎಚ್ಚರಿಸುತ್ತಲೇ ಇರುತ್ತದೆ: `ನೋಡು ವಿಜಯಾ, ಯಾವುದೇ ಬಡವನ ಜಮೀನನ್ನಾಗಲಿ, ನಿರ್ಗತಿಕನಾದವನ , ಶ್ರಮಜೀವಿಯ ಹಣವನ್ನಾಗಲಿ, ನಾವು ಯಾವುದೇ ಕಾರಣಕ್ಕೂ ಕಿತ್ತುಕೊಂಡು ತಿನ್ನಬಾರದು; ನಾವು ನ್ಯಾಯವಾಗಿದ್ದು, ಅನ್ಯರಿಗೂ ನ್ಯಾಯ ನೀಡಲು ಪ್ರಾಮಾಣಿಕರಾಗಿ ಪ್ರಯತ್ನಿಸಿದಲ್ಲಿ, ಒಳಿತಿನ ದಿನ ನಮಗಾಗಿ ಕಾದು ಕುಂತಿರುತ್ತದೆ; ಅನ್ಯಾಯ ಮಾಡಿ ಬದುಕಿದವರು ಈಗೇನಾಗಿದ್ದಾರೆ ಎಂಬುದನ್ನು ಹೇಳುತ್ತೇನೆ ಕೇಳು..!' ಎಂದು ನಮ್ಮ ಸುತ್ತಲಿನ ಹತ್ತಾರು ಕಥೆಗಳನ್ನು ಬಿಡಿಸಿ ಹೇಳುತ್ತಿದ್ದರು. ಗೌಡರಾಗಿದ್ದರೂ ಕಷ್ಟದ ಬದುಕು ಬಹುತೇಕವಾಗಿ ನಮ್ಮೂರಲ್ಲಿ ನಮ್ಮ ಮನೆಯನ್ನೇ ಹೆಚ್ಚು ಗುರಿ ಮಾಡಿಕೊಂಡದ್ದನ್ನು ನನಗೆ ಇಪ್ಪತು ವಯಸ್ಸು ದಾಟುವವರೆಗೂ ಕಂಡಿದ್ದೇನೆಂದರೆ, ನಮ್ಮ ಹಳೆ ತಲೆಮಾರು ಎಷ್ಟು ಇದನ್ನೆಲ್ಲ ಉಂಡಿರಬೇಕು, ಅನುಭವಿಸಿರಬೇಕು..?- ಈಗಲೂ ದಿಗಿಲಾಗುತ್ತದೆ. ಹಾಗಂತ ಜಗತ್ತೇ ಅನುಭವಿಸಿರದ ನೋವನ್ನು ನಾವಷ್ಟೇ ಅನುಭವಿಸಿದ್ದೇವೆ ಎಂದರ್ಥದ ಮಾತೂ ನನ್ನ ದಲ್ಲ; ಅಪ್ಪಯ್ಯನ ಜುಬ್ಬದೊಂದಿಗೆ ಆ ಜುಬ್ಬಾದ ತೋಳುಗಳ ಚಾಚಿನ ಹಿನ್ನೆಲೆ ಮುನ್ನೆಲೆಯಿಂದ ನಾನಿದನ್ನು ಹೇಳಲೇಬೇಕಾಗಿತ್ತಲ್ಲವೇ.. ಹೇಳುತ್ತಿದ್ದೇನಷ್ಟೇ..! 

ಇನ್ನೂ ಮುಂದುವರಿದು ಹೇಳಲೇಬೇಕಾದದ್ದೂ ಇದೆ. ಮುಂದೆ `ಅನ್ಯದಾರಿ'ಯೊಂದನ್ನು ಬದುಕಿನ ಓಟಕ್ಕೆ ನಮ್ಮನೆ ಸದಸ್ಯರು ಕಂಡುಕೊಳ್ಳಲೇಬೇಕಿತ್ತು. ಹಾಗಾಗಿ ನಮ್ಮೂರು ಕ್ಯಾಸನೂರಿನಿಂದ ನಮ್ಮ ಮನೆತನದ `ಬಿಜಿನೆಸ್ ಪಯಣ' ಸಣ್ಣ ಕಿರಾಣಿ ಅಂಗಡಿಯೊಂದರಿಂದ ಆರಂಭವಾಗಿ, ಅಂಥ ಸಣ್ಣ ಹಳ್ಳಿಯಲ್ಲೂ ಭತ್ತದ ವ್ಯಾಪಾರ, ಅವಲಕ್ಕಿ ಮಿಲ್ಲು- ಮಂಡಕ್ಕಿ ಬಟ್ಟಿ ಮೊದಲಾಗಿ ಹಲವು ಪ್ರಯೋಗಗಳಲ್ಲಿ ನಮ್ಮಪ್ಪನ ಟೀಮ್ ನಿರತವಾಯಿತು. ಅದರಲ್ಲಿ ಎಷ್ಟು ಪಾಲು ಯಶಸ್ಸುಗಳಿಸಿದರೋ ಗೊತ್ತಿಲ್ಲ, ಆದರೆ ಈ ಪ್ರಯತ್ನಗಳು ನಮ್ಮ ಮನೆತನವನ್ನು ಬರಬರುತ್ತ ವಿತ್ತೀಯವಾಗಿ ಎತ್ತಿ ಹಿಡಿದದ್ದು ಮಾತ್ರ ಖರೆ. ನಿಧಾನವಾಗಿ ನಮ್ಮ ವ್ಯಾಪಾರದ ಸ್ಥಾನಾಂತರವು ನಮ್ಮ ಪಕ್ಕದ ಸಂತೆ-ಹೊಸೂರಿನಲ್ಲಿ ಸ್ವಲ್ಪ ಹಿರಿದಾದ ಮಟ್ಟದಲ್ಲಿಯೇ ಆರಂಭವಾಯಿತು. ಆಗಲೂ ಈಗಲೂ ಸುಮಾರು ಇಪ್ಪತ್ತೈದು ಹಳ್ಳಿಗಳಿಗೆ (ನೆರೆಯ ಸೊರಬ-ಶಿರಸಿ ತಾಲೂಕಿನ ಗಡಿ ಹಳ್ಳಿಗಳನ್ನೂ ಸೇರಿ) ಕೇಂದ್ರಸ್ಥಳವಾಗಿದ್ದ, ಪಂಚಾಯತಿಯನ್ನೂ ಹೊಂದಿದ್ದ, ವ್ಯಾಪಾರೀ ಕೇಂದ್ರ ಈಗಿನ ಚಿಕ್ಕಾಂಶಿ-ಹೊಸೂರು ನಮ್ಮ ಬದುಕಿಗೊಂದು ಬಹುದೊಡ್ಡ ಆಸರೆಯಾಯಿತು. ಕ್ರಮೇಣ ಭತ್ತ ಮತ್ತು ಕಿರಾಣಿ ಅಂಗಡಿ ವ್ಯವಹಾರವೂ ಹೆಚ್ಚಾಯಿತು. ಹಳೆಯ ರೈಸ್ ಮಿಲ್ ಒಂದನ್ನೂ ಕೊಂಡುಕೊಂಡೆವು. ಒಂದೆರಡು ಲಾರಿಗಳನ್ನೂ ಖರೀದಿಸಿಯಾಯಿತು. ಗೊಬ್ಬರ-ಕೀಟನಾಶಕಗಳ ಅಂಗಡಿಯನ್ನೂ ತೆರೆಯಲಾಯಿತು. ತದನಂತರ ಅಡಕೆ-ತೆಂಗು-ಮಾವಿನ ತೋಪುಗಳ ಮುಖೇನ ಕೃಷಿಕ್ಷೇತ್ರವನ್ನೂ ಅಗಲ ಮಾಡಿಕೊಳ್ಳಲಾಯಿತು. ಈ ಎಲ್ಲದರ ಹಿಂದಿನ `ಧೈರ್ಯದಲ್ಲಿ ನಮ್ಮ ಅಪ್ಪಯ್ಯನ ಹಿರಿದಾದ ಪಾತ್ರವು ಇತ್ತಾದರೂ ಯೋಜನೆ ರೂಪಿಸುವಲ್ಲಿಯೇ ಹೆಚ್ಚಾಗಿ ಸೀಮಿತವಾಗಿತ್ತು; ನಮ್ಮ ಒಬ್ಬ ಕಾಕಾ-ಭಾವಂದಿರ ಬದ್ಧತೆಯಿಂದ ಇವೆಲ್ಲ ಇನ್ನೂ ಹೆಚ್ಚು ಪ್ರವರ್ಧಮಾನಕ್ಕೆ ಬರುವಂಥಾದ ಶ್ರಮಸಾಧನೆಯನ್ನು ಮನೆತನದವರು ಎಂದೂ ಮರೆಯಲಾರರು. ಈ ಕಾಕಾ ಇಡೀ ಮನೆತನವನ್ನು ನಿಭಾಯಿಸುವಲ್ಲಿ ಎಷ್ಟೊಂದು ಹೆಣಗಿದರು ಕಷ್ಟಪಟ್ಟರು ಅನ್ನುವುದು ನಮಗೆಲ್ಲ ಗೊತ್ತು. ಈ ಹೊತ್ತಿಗೂ ಅವರು ಕಾಯಕನಿಷ್ಠರೇ ಆಗಿ ನಮ್ಮ ಬೆನ್ನಿಗೆ ಬಹುದೊಡ್ಡ ಬಲವಾಗಿ ನಿಂತಿದ್ದಾರೆ ಎಂದರೆ ಅತಿಯಾಗಿ ಆಡಿದ ಮಾತಾಗುವುದಿಲ್ಲ. ಸದ್ಯಕ್ಕೆ ಇವೆಲ್ಲ `ಹಂಚಿಕೆ' ಎಂಬ ಕಾಲಾನುಕಾಲದ ಬದಲಾವಣೆಯತ್ತ ಸಾಗಿದರೂ ಒಂದು ಮಟ್ಟದ ಆರ್ಥಿಕ ನೆಮ್ಮದಿ ನಮಗಿದ್ದೇ ಇದೆ. ಒಂದು ವಿಶೇಷವೆಂದರೆ, ಸಾಲ ಮಾಡಿಕೊಳ್ಳದೆ ನಾವು ಯಾವ ಸಾಹಸವನ್ನೂ ಈ ಹೊತ್ತಿಗೂ ಮಾಡಿಯೇ ಇಲ್ಲ; ಇದು ಏನನ್ನಾದರೂ ಮಾಡಿಯೇ ತೀರಬೇಕೆಂಬ ಮತ್ತು ಸಾಧಿಸಬೇಕೆಂಬ ಛಲಹೊತ್ತವರ ಬದುಕಿಗೂ ಅನ್ವಯಿಸುವ ಮಾತು. ಈಗ ನಮ್ಮ ಮನೆತನದ ತೋಟಪಟ್ಟಿಗಳಿವೆ; ಗ್ರಾಮೀಣ ಭಾಗದಲ್ಲೂ ಮಾದರಿಯೆನ್ನಿಸುವ ಕಿರಾಣಿ (ಜನರಲ್ ಸ್ಟೋರ್ಸ್ )ಅಂಗಡಿಯಿದೆ;  ಗೊಬ್ಬರ-ಕ್ರಿಮಿನಾಶಕಗಳ ಅಂಗಡಿಯಿದೆ; ಪೆಟ್ರೋಲ್ ಬಂಕ್ ಇದೆ.. ಇವೆಲ್ಲ ಕುಟುಂಬದ ಸದಸ್ಯರಲ್ಲಿನ ಪ್ರತ್ಯೇಕವಾದ ಜವಾಬ್ದಾರಿಯನ್ನು ಹೊಂದಿವೆ. ಅಪ್ಪಯ್ಯನ ಹೆಸರಿಗೆ ಈ ಯಾವವೂ ಯಾವಾಗಲೂ ಇಲ್ಲ. ಆದರೆ, ತಮಾಷೆ ಮತ್ತು ಸೋಜಿಗದ ಸಂಗತಿಯೆಂದರೆ, ಆಯಾ ವಿಭಾಗಗಳಲ್ಲಿ ಸಂಬಂಧಿಸಿದವರು ಕುಂತು ಯಥಾಪ್ರಕಾರ ಜವಾಬ್ದಾರಿ ನಿರ್ವಹಿಸಿಕೊಂಡು ವಹಿವಾಟು ಮಾಡುತ್ತಿರುತ್ತಾರೆ; ಇವು ಹುಟ್ಟಿದ ಆರಂಭ ಕಾಲದಲ್ಲಿ ಅಪ್ಪಯ್ಯ ಆಗಾಗ ಕುಂತದ್ದು ಬಿಟ್ಟರೆ ಅವರು ತಿರುಗಾಡಿದ್ದು, ಸಾಮಾಜಿಕ ಕಾರ್ಯಗಳಲ್ಲಿ ಬೆರೆತು ಹೋಗಿದ್ದೇ ಹೆಚ್ಚು. ಆದರೂ ಇವೆಲ್ಲವೂ ಅಂದರೆ, ತೋಟಪಟ್ಟಿಗಳೂ ಸೇರಿ; ಆ ಭಾಗದ ಜನರು ಅರ್ಥಾತ್ ಗ್ರಾಹಕರು ಮಾತ್ರ `ಇನ್ ಜನರಲ್' ಆಗಿ, `ಬಿ.ಜಿ. ಗೌಡರ (ಪಾಟೀಲ)' ಅಂಗಡಿಗಳು-ತೋಟಗಳೆಂದೇ ಕರೆಯುವುದು ಇನ್ನೂ ಚಾಲ್ತಿಯಲ್ಲಿದೆ. ಅವರನ್ನು ಕೆಲವರು ನೋಡಿಯೇ ಇರುವುದಿಲ್ಲ. ಅಂಗಡಿಯಲ್ಲಿ ಕುಂತ ನನ್ನ ಕಾಕಾನಿಗೂ `ಬಿ.ಜಿ.ಗೌಡ್ರ ಹೆಂಗದೀರಿ..?' ಎಂದು ಕೆಲವರು ಬಾರಿ ಬಾರಿ ಕೇಳಿದ್ದೂ ಇದೆ. ಆಗ ಕಾಕಾ, `ಅವರು ನಮ್ಮ ಅಣ್ಣಯ್ಯ, ಮನೆಯಲ್ಲಿ ಇದಾರಪ್ಪ..!' ಎಂದು ಉತ್ತರಿಸಿದ್ದಿದೆ. ಎಷ್ಟೋ ಸಾರಿ ಕಾಕಾ ಲೋಕಾಭಿರಾಮವಾಗಿ ಗ್ರಾಹಕರೊಂದಿಗೋ ಬಂಧುಗಳೊಂದಿಗೋ ಹರಟುತ್ತಿರುವಾಗ, ಈ ನಮ್ಮಪ್ಪಯ್ಯನ ಸುದ್ದಿ ಬಂದಾಗ, `ಇಲ್ಲಿ ಹಗಲು ರಾತ್ರಿ ಗೂಟ ಹೊಡ್ಕಂಡ್ ಕುಂತು ದುಡಿಯೋರು ನಾವು; ಹೇಳೋ ಹೆಸರು ಮಾತ್ರ ನಿಮ್ಮ ಬಿ.ಜಿ.ಗೌಡ್ರದ್ದು..!' ಎಂದು ನಗಾಡುತ್ತ ತಮಾಷೆಯಾಗಿ ತಮ್ಮಣ್ಣನ ಬಗೆಗೆ ಮಾತನಾಡಿದ್ದೂ ಇದೆ. ಆದರೆ ಅಪ್ಪಯ್ಯನ ಧೈರ್ಯ ಮತ್ತು ಸಾತ್ವಿಕ ಹಠಗಳ ಕುರಿತು ನನ್ನ ಕಾಕಾಗೂ ಹೆಮ್ಮೆ ಇದೆ, ಯಾವುದೇ ತಕರಾರಿಲ್ಲ. ಈ ಅಪ್ಪಯ್ಯನ ಹೆಸರು ಸುತ್ತಣ ಪ್ರದೇಶಗಳಲ್ಲಿ ಆಗಿಂದ ಈ ತನಕವೂ ಎಷ್ಟೊಂದು ಬ್ರ್ಯಾಂಡ್ ನೇಮ್ ಆಗಿಹೋಗಿದೆ ಎಂದರೆ ಸ್ವತಃ ಅಪ್ಪಯ್ಯನಿಗೂ ಇದು ಅಚ್ಚರಿಯುಂಟು ಮಾಡಿದೆ. `ಯಾಕಿದು, ಹೀಗೆ..?' ಎಂದು ಉತ್ತರ ಹುಡುಕಲೇನೂ ಹರಸಾಹಸ ಮಾಡಬೇಕಿಲ್ಲ; ನನ್ನ ಮಟ್ಟಿಗೆ ಹೇಳುವುದಾದರೆ, ಅವರು ಅಷ್ಟೊಂದು ಜನಪ್ರಿಯ ವ್ಯಕ್ತಿ  ಅನ್ನಿಸಿಕೊಳ್ಳಲು ಅವರ ಸರಳ ಬದುಕಿನ ನಡೆಯು ಕಾರಣವಾದಂತೆ ಅವರು ಅವ-ಇವನೆನ್ನದೇ ಎಲ್ಲ ಜನರನ್ನು ಹಚ್ಚಿಕೊಳ್ಳುವ, ಕರೆದು ಮಾತನಾಡಿಸಿ ಅವರೆಲ್ಲರ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಪ್ಲಸ್ ಪರಿಹಾರ ಮಾರ್ಗ ತೋರಿಸುವ ಗುಣವೂ ಕಾರಣವಾಗಿದ್ದು ಪಕ್ಕಾ. ಅಪ್ರತಿಮ ಶಿಕ್ಷಣ ಪ್ರೇಮಿಯಾದ ಅಪ್ಪಯ್ಯ ನಮ್ಮನೆಯ ಎಲ್ಲ ಮಕ್ಕಳಿಗೂ ಯೋಗ್ಯ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಬಹಳ ನಿಷ್ಠೆಯಿಂದ ಶ್ರಮವಹಿಸಿದವರು. ಅಲ್ಲದೆ ಕುಟುಂಬೇತರ ವಿದ್ಯಾದಾಹಿಗಳ ಮಟ್ಟಿಗೂ ಸಾಕಷ್ಟು ಮುತುವರ್ಜಿವಹಿಸಿ ಅವರ ಪ್ರೀತಿಗೆ ಪಾತ್ರರಾದವರು. ನನ್ನ ಬಗ್ಗೆಯಂತೂ ವಿಪರೀತ ಅನ್ನುವಷ್ಟು ನನ್ನ ಕಡೆಯಿಂದ ನಿರೀಕ್ಷಿಸಿ ಸುಮಾರಷ್ಟು ತೃಪ್ತರಾದರೂ ಪರಿಪೂರ್ಣವಾಗಿ ನನ್ನ ಬೆಳವಣಿಗೆ ಬಗ್ಗೆ ಇನ್ನೂ ಆಸೆ ಇಟ್ಟುಕೊಂಡವರು ಅರ್ಥಾತ್ ಸ್ವಲ್ಪ ನಿರಾಸೆಗೊಂಡವರು..! `ಇರುವವರೆಗೂ ನಾ ಕನಸು ಕಾಣುತ್ತೇನೆ; ಇನ್ನಷ್ಟು ಬೆಳವಣಿಗೆಗಳನ್ನು ನೋಡಿಯೇ ನಾ ತೀರುತ್ತೇನೆ; ಇದು ನನ್ನ ಆ ಜನ್ಮ ಸಿದ್ಧ ಹಕ್ಕು..!' ಎಂಬ ಧೋರಣೆ- ಮನೋಭಾವದ ಅಪ್ಪಯ್ಯ ಇನ್ನೂ ನಮ್ಮ ಕಣ್ಮುಂದೆ ನಡೆದಾಡುತ್ತಲೇ ನಮಗೂ ಅಷ್ಟಿಷ್ಟು ಚೈತನ್ಯ ಹುಟ್ಟಿಸುತ್ತಿದ್ದಾರೆ; ಇದು ಈ ಕ್ಷಣದ ನನ್ನ ಹೆಮ್ಮೆಯು ಹೌದು.

ಮತ್ತೂ ನನ್ನ ಈ ಬರಹವು ಇನ್ನೂ ತಲೆಬರಹದ ವ್ಯಾಪ್ತಿಯೆಡೆಗೆ ಬರಲಾಗುತ್ತಲೇ ಇಲ್ಲವೆಂದರೆ, ಅವರ ಉದ್ಧ ನಿಲುವಿನೊಂದಿನ ಅಷ್ಟೇ ಅಗಲಾಳದ ವ್ಯಕ್ತಿತ್ವವೂ ಅವರದ್ದಾಗಿದ್ದುದೇ ಕಾರಣವೂ ಸಹ. ಅವರ ವಸ್ತ್ರ ಸಂಹಿತೆ ಮತ್ತು ಶಿಸ್ತು ನಮ್ಮ ಭಾಗದಲ್ಲಿ ಈಗಲೂ ಜನಜನಿತ. ಕಿಶೆಯಲ್ಲಿ ಒಂದು ರೂಪಾಯಿ ಇಲ್ಲದ ಕಾಲದಲ್ಲೂ ಅವರು ಹಾಗೆಯೇ; ಈಗಲೂ ಹಾಗೆಯೇ. ಎಂದೂ ಕೈಮುಟ್ಟಿ ಕೆಲಸ ಮಾಡದ ಅಪ್ಪಯ್ಯ ಇವತ್ತಿಗೂ ಕೃಷಿಕರೇ, ಅಂಗಡಿ ಮುಗ್ಗಟ್ಟುಗಳಿದ್ದರೂ ಗಲ್ಲೆ ಮೇಲೆ ಕುಂತದ್ದೂ ಕಮ್ಮಿಯೇ. ಆದರೆ ಅವರ ಯೋಚನೆ/ಯೋಜನೆಗಳೋ ಖಾಯಂ ಕಾರ್ಯನಿರತ..! ಇಂತ ಅಪ್ಪಯ್ಯನ ಒಂದಷ್ಟು ಹಳೆಯದಾದ ಜುಬ್ಬಾ ನನಗೆ ಬಾಲ್ಯಕಾಲದುದ್ದಕ್ಕು ಬಿಡದ ನೆಂಟನಾಗಿಯೇ ಇದ್ದದ್ದೂ ಈ ಮೇಲಿನ ತಲೆಬರಹದಡಿ ನಾ ಇಷ್ಟೆಲ್ಲ ಕೊರೆಯಲು ಪ್ರಬಲ ಕಾರಣವಾಯಿತು. ಅಪ್ಪಯ್ಯನ ಇರುವೆಲ್ಲ ಜುಬ್ಬಾಗಳ ಬಣ್ಣ ನಿಖರವಾಗಿ ಬಿಳಿ, ತಿಳಿಹಳದಿ ಮತ್ತು ಬಾದಾಮಿ ಕಲರನ್ನೇ ಹೊಂದಿರುತ್ತಿದ್ದವು ಮತ್ತು ಅವು ಹೆಚ್ಚಾಗಿ  ಖಾದಿಬಟ್ಟೆಗಳೇ ಆಗಿರುತ್ತಿದ್ದವು. ಇಂಥ ಈ ಒಂದು ಜುಬ್ಬಾದಲ್ಲಿ ಕೆಳಗಿಂದ ಮೇಲಿನವರೆಗೂ ನನಗೆ ಫುಲ್ ಡ್ರೆಸ್ ಆಗಿ ಬಿಡುತ್ತಿತ್ತು. ಅಂದರೆ, ಅಪ್ಪಯ್ಯನ ನೆಹರೂ ಶರ್ಟ್ ನ ತೋಳು ಭಾಗ ನನಗೆ ಪೈಜಾಮಾದರೆ, ಅವರ ಜುಬ್ಬಾದ ಉಳಿದ ಭಾಗ ನನಗೆ ಮಿನಿ ಜುಬ್ಬಾ ಆಗುತ್ತಿತ್ತು. ಇದನ್ನು ಅವರು ಖುದ್ದಾಗಿ ಟೈಲರ್ ಬಳಿ ಕುಂತೇ ನನಗೆ ಹೊಲಿಸಿ ಕೊಡುತ್ತಿದ್ದರು. ಅದೂ ನಮ್ಮೂರಿನವರೇ ಆದ ಆಗಿನ ಫೇಮಸ್ ಟೈಲರ್ ಚಂದ್ರಶೇಖರ ದೈವಜ್ಞನೇ ಅದನ್ನು ಹೊಲಿಯಬೇಕಿತ್ತು. ಆತ ಮಹಾ ಸೋಮಾರಿಯಾದರೂ ಅಚ್ಚುಕಟ್ಟಾಗಿ ಹೊಲಿಗೆ ಮಾಡಿ ನಮ್ಮ ಭಾಗದಲ್ಲಿ ಮನೆಮಾತಾಗಿದ್ದಂತಹ ವ್ಯಕ್ತಿ. ಅಪ್ಪನ ಕಾಟಕ್ಕೆ ಅವರ ಕಿರಿಯ ಗೆಳೆಯನಾಗಿದ್ದರೂ ಅವರ ವೈರಿಯೂ ಆಗಿದ್ದ, ಇವರ ಈ ಗಡಿಬಿಡಿ ಕಿರಿಕಿರಿ ಮಟ್ಟಿಗಷ್ಟೇ!. ಅಪ್ಪಯ್ಯನ ಜುಬ್ಬಾ ಮಾತ್ರ ಹಾವೇರಿಯೋ ಅಕ್ಕಿ-ಆಲೂರೋ ಎರಡೂರಿನ ನಿಗದಿತ ದರ್ಜಿಗಳಿಂದಲೇ ರೆಡಿಯಾಗಬೇಕಿತ್ತು. 

ಒಂದು ಕಾಲದಲ್ಲಿ ಅಪ್ಪಯ್ಯ ನಮ್ಮ ತಾಲೂಕಿನ ಅಕ್ಕಿ ಆಲೂರಿನ ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದ ಮ್ಯಾನೇಜರ್ರೋ ಡೈರಕ್ಟರ್ರೋ ಆಗಿ ಸೇವೆ ಸಲ್ಲಿಸಿದ್ದರು. ಅವರ ಮತ್ತು ಅಕ್ಕಿ ಆಲೂರಿನ ನಂಟು ಮೊದಲಿನಿಂದಲೂ ಅಂಟಿನ ತರಹ. ಅದಕ್ಕೆ ಕಾರಣ, ನಮ್ಮ ಹಾನಗಲ್ಲಿನ ಆಗಿನ ಶಾಸಕ ಬಿ.ಆರ್.ಪಾಟೀಲರ ಊರು ಹತ್ತಿರದ ಹಾವಣಗಿ ಎಂಬ ಗ್ರಾಮವಾಗಿತ್ತು. ಅವರ ಇವರ ಸಂಬಂಧವು ಜಗಳವಿಲ್ಲದ ಅಣ್ಣ ತಮ್ಮಂದಿರ ಬಾಂಧವ್ಯದಂತಿತ್ತು. ಬಿ.ಆರ್.ಪಾಟೀಲ ಅವರ ಚುನಾವಣೆಗಳ ಖರ್ಚು ವೆಚ್ಚದ ಲೆಕ್ಕವನ್ನು ಅಪ್ಪಯ್ಯನೇ ಇಡುತ್ತಿದ್ದರಂತೆ. ಹಲವು ಹಳೆಯ ರಾಜಕಾರಿಣಿಗಳಂತೆ ಆಸ್ತಿ ಮಾರಿ ಚುನಾವಣೆ ಮಾಡುತ್ತಿದ್ದ ನಿಜವಾದ ಜನಸೇವಕರು ಅವರಾಗಿದ್ದರು. ಒಂದರ್ಥದಲ್ಲಿ ಅಪ್ಪಯ್ಯ ಅವರ ಬಲಗೈ ಆಗಿದ್ದೇ ಬೆಳೆದವರು. ಅವರ ಜೊತೆ ಮನೆಮಠ ಬಿಟ್ಟು ಅಡ್ಡಾಡಿದವರು. ಹಣ-ಆಸ್ತಿ ತಕ್ಕಮಟ್ಟಿಗಾದರೂ ಇದ್ದಿದ್ದರೆ ಬಿ.ಆರ್.ಪಾಟೀಲ ನಂತರದಲ್ಲಿ ನಮ್ಮಪ್ಪಯ್ಯನೂ ಒಂದು ಬಾರಿ ಶಾಸಕರಾಗಿ ತನ್ನ ಸಾಮಾಜಿಕ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದರೋ ಏನೋ.! ಏನೇನೋ ಆಗಬೇಕೆಂದುಕೊಂಡ ಅಪ್ಪಯ್ಯ ಈ ಇಳಿವಯಸ್ಸಿನಲ್ಲಿಯೂ ಮಹಾ ಕನಸುಗಾರನೇ; ಆಗಬೇಕೆಂದುಕೊಂಡದ್ದು ಆಗದಿದ್ದಾಗ ಸಾಮಾಜಿಕ ಬದುಕಿನಿಂದ ನಿಧಾನಕ್ಕೆ ಹಿಂದೆ ಸರಿದರು. ರಾಮಕೃಷ್ಣ ಹೆಗಡೆ ರಾಜಕೀಯದಲ್ಲಿ ಇರುವನಕ ಅಪ್ಪಯ್ಯನೂ ಸಕ್ರಿಯರಾಗಿದ್ದರು. ಹೆಗಡೆ ಅವರ `ಲೋಕಶಕ್ತಿ' ಪಕ್ಷದ ತಾಲೂಕು ಅಧ್ಯಕ್ಷರಾಗಿದ್ದರು. ನಾನು ಹೈಸ್ಕೂಲಿನಲ್ಲಿರುವಾಗಲೇ ನಮ್ಮ ಚಿಕ್ಕಾಂಶಿ-ಹೊಸೂರು ಗ್ರೂಪ್ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದು, ಈಗಿನಷ್ಟು ಸರಕಾರದ ಅನುದಾನ ಆಗ ಇರದಿದ್ದಾಗಲೂ ಈ ಹೊತ್ತಿಗೂ ಜನ ನೆನಪಿಡುವಂಥ ಕೆಲಸ ಮಾಡಿ ಸೈ ಅನಿಸಿಕೊಂಡವರು. ಈ ಮಹಾಕನಸುಗಾರ ಅಪ್ಪಯ್ಯ ಬರಬರುತ್ತ ತನ್ನ ಕನಸುಗಳನ್ನು ನನ್ನ ಮೇಲೆ ಹೇರತೊಡಗಿದರು. ಕೆಲಮಟ್ಟಿಗೆ ಅವರ ಹೇರುವಿಕೆಗೆ ಪಾತ್ರನೂ ಆದೆ ಅಂದಿಟ್ಟುಕೊಳ್ಳಬಹುದು. ನಾನೂ ಕೆಲಕಾಲ ಧಾರವಾಡದಲ್ಲಿ ಕಾಲೇಜುಯುಗದ ಅಂತ್ಯದಲ್ಲಿ ಜನತಾಪರಿವಾರದೊಂದಿಗೆ ಗುರುತಿಸಿಕೊಂಡು ಅಡ್ಡಾಡಿ ಮತ್ತು ಹಿರಿಯ ನಾಯಕರ ಅನುಯಾಯಿಯಾಗಿಯೂ ದೇಕಿ, ಈಗ ಕಳೆದ ಐದಾರು ವರ್ಷಗಳಿಂದ ರಾಜಕೀಯದ ವರಸೆಯೇ ದಿಕ್ಕುತಪ್ಪಿದ್ದರಿಂದ ಸುಮ್ಮನಾಗಿದ್ದೇನೆ ಅರ್ಥಾತ್ ನಿವೃತ್ತನಾಗಿದ್ದೇನೆ ಅಂದರೆ ಅಚ್ಚರಿಪಡಬೇಡಿ..!

ಇಂಥ ಅಪ್ಪಯ್ಯನ ಜುಬ್ಬಾದಿಂದ ಉದ್ಭವಿಸಿದ ಮಿನಿಜುಬ್ಬಾ ಧರಿಸಿ ನಾನೂ `ಜುಬ್ಬಯ್ಯ'ನಾಗಿ ಅವರೊಂದಿಗೆ ಹಲವು ರಾಜಕೀಯ ಸಮಾರಂಭಗಳಿಗೆ ಹೋಗುತ್ತಿದ್ದೆ; ಅದೂ ನನ್ನ ಪ್ರೈಮರಿ ಶಾಲಾ ದಿನಗಳಲ್ಲಿಯೇ ಬಹುಪಾಲು. ಇವರು ರಾಜಕೀಯವಾಗಿ ಯಾಕ್ಟೀವ್ ಆಗಿದ್ದ ಆ ಕಾಲದಲ್ಲಿ ನಮ್ಮ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಆಗ ಸಿ.ಎಂ.ಇಬ್ರಾಹೀಂ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಇಬ್ರಾಹೀಂ ವಿರುದ್ಧ ಕಾಂಗೈ ಅಭ್ಯರ್ಥಿಯಾಗಿ ಬಹುತೇಕ ಎಫ್.ಹೆಚ್.ಮೋಹಸೀನ್ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್ ನಿಂದ `ನಾಯಿ ನಿಲ್ಲಿಸಿದರೂ ಆರಿಸಿ ಬರುತ್ತದೆ' ಎಂಬ ಮಾತಿತ್ತು. ಇರಲಿ..! ಅಪ್ಪಯ್ಯ `ಇಬ್ರಾಹೀಂ ಅವರು ಅದ್ಭುತವಾಗಿ ಮಾತನಾಡುತ್ತಾರೆ.. ನೀನೂ ಬಾ..' ಎಂದು ಕರೆದಿದ್ದರು. ಆಗ ನಮ್ಮೂರು ಕ್ಯಾಸನೂರಿನಿಂದ ಪಕ್ಷದ ಕಾರ್ಯಕರ್ತರು ಟ್ರ್ಯಾಕ್ಟರ್ ಮೇಲೆ ರಂಟೆಯನ್ನು ಹೇರಿಕೊಂಡು ಮೆರವಣಿಗೆ ಮೂಲಕ ಇಬ್ರಾಹೀಂ ಭಾಷಣ ಕೇಳಲು ಹೊರಟಾಗ ನಾನು ಅಪ್ಪಯ್ಯನ ಜೊತೆ ಹೋಗದೆ ಆ ಟ್ರ್ಯಾಕ್ಟರ್ ಹತ್ತಿಯೇ ಹೋಗಿದ್ದೆ. ನಮ್ಮೂರಿನ ಬಾಜು ಇರುವ `ಆಗಿನ ಸಂತೆ-ಹೊಸೂರು ಈಗಿನ ಚಿಕ್ಕಾಂಶಿ-ಹೊಸೂರಿ'ಗೆ ಆಗಿನ ಜನತಾ ಪಕ್ಷದ ಹಲವಾರು ಮುಖಂಡರು ಬಂದಿದ್ದರು. ಚುನಾವಣಾ ಪ್ರಚಾರ ಭಾಷಣ ಮುಗಿದಾದ ಮೇಲೆ ಅಪ್ಪಯ್ಯ ಅವರೊಂದಿಗೆ ಮತ್ಯಾವುದೋ ಊರಿಗೆ ಹೊರಟುಹೋದರು. ಹಾಗೇ ನಮ್ಮೂರಿನ ಜನರೂ ನನ್ನನ್ನು ಬಿಟ್ಟೇ ನಮ್ಮೂರಿಗೆ ಹೋಗಿಬಿಟ್ಟಿದ್ದರು. ಸಣ್ಣ ಹುಡುಗನಾಗಿದ್ದ ನನಗೆ ಹತ್ತಿರವಿದ್ದೂ ಬಹುದೂರ ಬಂದ ಅನುಭವ ಭಯವನ್ನುಂಟು ಮಾಡಿತ್ತು. ಅಕ್ಷರಶಃ ನಾ ಕಕ್ಕಾಬಿಕ್ಕಿಯಾಗಿದ್ದೆ ಆ ದಿನ. ಕೊನೆಗೆ ಯಾರದೋ ಸೈಕಲ್ಲಲ್ಲಿ ಊರು ತಲುಪಿದ ನೆನಪು. 

ಮತ್ತೊಮ್ಮೆ ಅಂದರೆ ನಾ ಒಂಬತ್ತನೆ ಇಯತ್ತೆಯಲ್ಲಿದ್ದಾಗ ಅದೇ ಜನತಾ ಪಕ್ಷದಿಂದ ಅಬ್ದುಲ್ ನಜೀರ್ಸಾಬರು ನಮ್ಮ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನ ಅಜೀಜ್ ಶೇಠ್ ಎದುರು ನಿಂತಿದ್ದರು. `ನೀರ್ಸಾಬ್' ಎಂದೇ ಮನೆಮಾತಾಗಿದ್ದ ನಜೀರಸಾಬರು ನನ್ನ ರಾಜಕೀಯ ಅರಿವಿನ ಪರದೆಯಲ್ಲಿ ಮೂಡಿಬಂದ ರಾಮಕೃಷ್ಣ ಹೆಗಡೆ ತರುವಾಯದ ಮಹತ್ವದ ಹೆಸರು. ಸ್ವಾತಂತ್ರ್ಯಾನಂತರದಲ್ಲಿ ಕರುನಾಡಿನ ಮೊಟ್ಟಮೊದಲ ಕಾಂಗ್ರೆಸ್ಸೇತರ ಪಕ್ಷವಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಜನತಾ ಸರಕಾರದಲ್ಲಿ ನಜೀರಸಾಬ್ರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆಯ ಸಚಿವರಾಗಿದ್ದರು. ಆಗ ನಮ್ಮ ಕೇಂದ್ರಸ್ಥಳವಾದ ಹೊಸೂರಿಗೆ ಅವರು ಪ್ರಚಾರಾರ್ಥ ಬಂದಾಗ ಅಪ್ಪಯ್ಯನೊಂದಿಗೆ ನಾನೂ ಹೋಗಿ ಅವರ ಭಾಷಣ ಕೇಳಿಬಂದಿದ್ದೆ. ಅವರ ಸರಳನಡೆ-ನುಡಿಗಳು ಮತ್ತು ರಾಮಕೃಷ್ಣ ಹೆಗಡೆ  ಸಂಪುಟದಲ್ಲಿ ಮಾಡಿದ ಅವರ ಹಲವು ಜನೋಪಯೋಗಿ ಕೆಲಸಗಳ ಕುರಿತು ತಕ್ಕಮಟ್ಟಿಗೆ ಅರಿತುಕೊಂಡ ನನ್ನೊಳಗೆ ನಜೀರರು ವಿಶೇಷವಾದ ಮತ್ತು ಪ್ರೀತಿಯ ಸ್ಥಾನ-ಮಾನ ಪಡೆದಿದ್ದರು. ಅವಾಗಾಗಲೇ ನಜೀರಸಾಬರು ನೀರನ್ನೇ ಕಾಣದ ಲಕ್ಷಾಂತರ ಹಳ್ಳಿಗಳಲ್ಲಿ ಕೊಳವೆಬಾವಿ ತೋಡಿಸಿ `ನೀರ್ ಸಾಬ್'ರೆಂದೇ ಖ್ಯಾತಿ ಪಡೆದಿದ್ದರು. ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸ ಹೊಳಪು ತಂದಿದ್ದಲ್ಲದೇ ಅತ್ಯಂತ ಸಾಮಾನ್ಯನೂ ಪಂಚಾಯತಿ ಕಟ್ಟೆಯ ಮುಖ್ಯಸ್ಥನಾಗಿ ಗದ್ದುಗೆಯೇರಲು ಪ್ರಾಮಾಣಿಕವಾಗಿ ಯತ್ನಿಸಿದ್ದರು. ಆ ಚುನಾವಣೆಯ ಸಮಯದಲ್ಲಿ ಜನತಾಪಕ್ಷದ ವತಿಯಿಂದ ಪ್ರಚಾರದ ಹೊಸ ತಂತ್ರವಾಗಿ ನಜೀರ್ರ ಕುರಿತು ಭಜನೆಯ ಹಾಡುಗಳು ಹಳ್ಳಿಹಳ್ಳಿಗಳ ಕಿವಿಗಳನ್ನು ಎಡತಾಕಿದ್ದಿನ್ನೂ ನನಗೆ ನಜೀರರ ನೆನಪಿನ ಕುರುಹಾಗಿ ಗುಂಯ್ಗುಡುತ್ತಿದೆ: `ನಜೀರ ಸಾಬರ ಎಂಥಾ ಒಳ್ಳೇವರ; ನೀರ ಕೊಟ್ಟವರ, ನಮ್ಮ ಜೀವಾ ಹಿಡಿದವರ; ನೀರ ಸಾಬರ ಎಂಥ ಒಳ್ಳೇವರ..!'. ಇಂಥ ನಜೀರಸಾಬರು ಆ ಚುನಾವಣೆಯಲ್ಲಿ ಸೋಲು ಕಂಡಾಗ ಅಕ್ಷರಶಃ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಆಗೆಲ್ಲ ಶಾಲಾ ಬಿಡುವಿನ ಅವಧಿಯಲ್ಲಿ ನಮ್ಮ ಕಿರಾಣಿ ಅಂಗಡಿಯಲ್ಲಿ ಕುಂತು ನನಗೆ ತಿಳಿದಷ್ಟು ವ್ಯಾಪಾರ ಮಾಡುವುದು ಸಾಮಾನ್ಯವಾಗಿತ್ತು. ಆ ಎಲೆಕ್ಶನ್ ಸಂಬಂಧವಾಗಿ ನಮ್ಮಂಗಡಿಯ ಮೇಲ್ಭಾಗದ ಗೋಡೆಗೆ ಹೆಗಡೆ-ನಜೀರರ ಪೋಟೋಗಳನ್ನು ಅಂಟಿಸಿ ಅಂಗಡಿಯಲ್ಲಿದ್ದ ಅಷ್ಟೂ ಬಣ್ಣದ ಬಲ್ಬುಗಳನ್ನು ಜೋಡಿಸಿ ಬೆಳಕ ಬೀರಿದ್ದು, ಸಂಭ್ರಮಿಸಿದ್ದಿನ್ನೂ ಹಚ್ಚಹಸಿರಾಗಿ ನನ್ನ ಮನದ ಬಿತ್ತಿಯಲ್ಲಿ ಭದ್ರವಾಗಿದೆ. ಇದು ನನ್ನ ಅತಿರೇಕದ, ಹುಚ್ಚುತನದ ಪರಮಾವಧಿಯಾಗಿತ್ತೇನೋ ಎಂದು ಈಗ ಅನಿಸುವುದಿದೆ. ನಜೀರರ ಸೋಲನ್ನು ಆ ನನ್ನ ವಯೋಮಾನದಲ್ಲಿ ನನಗೆ ಖರೆ ಅರಗಿಸಿಕೊಳ್ಳಲಾಗಿರಲೇ ಇಲ್ಲ. ಈ ಹೊತ್ತಿನಲ್ಲಿ ನಮ್ಮ ಅಂಗಡಿ ಅಟ್ಟದ ಮೇಲೆ ವಾಸವಾಗಿದ್ದ, ನಮ್ಮ ಮನೆಯವರಂತೆಯೇ ಇದ್ದ ಹೊನ್ನವಳ್ಳಿಯ ಎಚ್.ಎಸ್. ಮಂಜಪ್ಪ ಗುರುಗಳು (ನನ್ನ ಮೊದಲ ಸಾಹಿತ್ಯಕ ಗುರುಗಳು) ಮತ್ತು ಅಪ್ಪಯ್ಯ ನನ್ನನ್ನು ಸಮಾಧಾನಿಸಲು ಸಾಕಷ್ಟು ಹೆಣಗಿದ್ದರು. ಯಾಕೆಂದರೆ ಆ ಸೋಲು ನನ್ನ ಸೋಲೆಂದೇ ನಾನಾಗ ಭಾವಿಸಿದ್ದೆ ಕೂಡ. ಆಗಲೇ ನಾ ಮೊದಲ ಕವಿತೆ ಬರೆದು ಅಪ್ಪಯ್ಯನಿಗೆ ತೋರಿಸಿದ್ದೆ. ಅವರು `ಏನಾದರೂ ಬರಿ, ಓದು, ಒಳ್ಳೆಯದೇ; ಅದು ಭಾಷೆಯನ್ನು ಸುಧಾರಿಸುತ್ತದೆ. ನಿನ್ನ ಜ್ಞಾನವನ್ನೂ ಹೆಚ್ಚಿಸುತ್ತದೆ; ಆದರೆ ಸಾಹಿತಿಗಳ ಬದುಕು ನನಗೆ ತಿಳಿದಂತೆ ಕಡು ಬಡತನದ ಬದುಕು; ನೋವುಗಳನು ನುಂಗಿ ಬರೆಯುವ ಬದುಕು..!' ಎಂದು ಬುದ್ದಿವಾದ ಹೇಳಿದ್ದರು. ಆದರೆ, ಮಂಜಪ್ಪ ಗುರುಗಳು ಮಾತ್ರ ಈ ದಿಶೆಯಲ್ಲಿ ನನ್ನನ್ನು ಅಕ್ಷರಶಃ ಬೆಂಬಲಿಸಿದರು. ದಾರಿ ತೋರಿಸಿದರು. ಇದ್ದುದರಲ್ಲಿ ನನ್ನ ಹಾದಿ ತಪ್ಪಿಲ್ಲವೆಂದೇ ಈಗ ಅಂದುಕೊಂಡಿದ್ದೇನೆ. ನನ್ನ ಪುಸ್ತಕಗಳು ಪ್ರಕಟಣೆ ಆಗುತ್ತ ಹೋದಂತೆ ಅಪ್ಪಯ್ಯ ಪೂರಕವಾಗಿ ವರ್ತಿಸಿದ್ದು ನನಗೆ ಬಹುದೊಡ್ಡ ಬೆಂಬಲವೇ ಆಯಿತು. ಮೊದಲ ಪುಸ್ತಕದ ಬಿಡುಗಡೆ ಕೂಡ ನಮ್ಮೂರ ಶಾಲೆಯಲ್ಲಿ ಅಪ್ಪಯ್ಯನ ಸಾನಿಧ್ಯದಲ್ಲೇ ಆಗಿದ್ದು ನನಗೊಂದು ತುರಾಯಿಯೂ ಹೌದು. ಹೀಗೆ ಹತ್ತೆಂಟು ರೂಪದಲ್ಲಿ,  ಹತ್ತಾರು ಸಂದರ್ಭಗಳಲ್ಲಿ ನಾ ಅಪ್ಪಯ್ಯನ ಸಾಥ್ನ್ನು ಪಡೆದುಕೊಂಡ ಜಂಭ ನನಗಿಗಲೂ ಇದೆ. 

ಅಂತೆಯೇ, ಅಪ್ಪಯ್ಯನನ್ನು ಮತ್ತು ನನ್ನ ಕಾಕಾ ಒಬ್ಬರನ್ನು ಹೆಜ್ಜೆಗೆಹೆಜ್ಜೆಬಿಡದೆ ಹಿಂಬಾಲಿಸಿಕೊಂಡು ಹೋದದ್ದು, ಊರು-ಕೇರಿ-ಕಾಡು-ಮೇಡು-ಹೊಲಗದ್ದೆಗಳನ್ನೆಲ್ಲ ಹೊಕ್ಕು ತಿರುಗಾಡಿದ್ದು, ಹೆದರಿಕೊಂಡದ್ದು, ಆ ಮೂಲಕ ಕೊಂಚ ಧೈರ್ಯಸ್ಥನೂ ಆಗಿ ಮಾರ್ಪಟ್ಟದ್ದು.. ಎಲ್ಲವೂ ನೆನಪು ಹಾರುವಂಥವುಗಳು ಅಲ್ಲವೇ ಅಲ್ಲ; ಇಂಥ ಹೊತ್ತಿನಲ್ಲಿ ಜರುಗಿದ ಹಲವಕ್ಕೆ ನೇರ ಭಾಗಿದಾರನೂ ಆಗಿ ನಾನು `ಅನಾಹುತ' ಅನುಭವಿಯಾಗಿದ್ದುಂಟು. ಮುಂದುವರಿದು ಹೇಳಲೇಬೇಕೆಂದರೆ, ಅದೇ ವಯಸ್ಸಿನಲ್ಲಿ ನಮ್ಮ ದೊಡ್ಡಪ್ಪಯ್ಯ ಒಮ್ಮೆ ಹಗಲೇ ಹಂದಿಬೇಟೆಗಾಗಿ ನಮ್ಮನೆ ಹಿತ್ತಲಿನ ಕಾಡು ದೆವ್ವಗಟ್ಟೆಗೆ ನನ್ನ ಕರೆದುಕೊಂಡು ಹೋಗಿ, ಮಟ್ಟಿಯಲ್ಲವಿತು ಹಂದಿಗೆ ಗುಂಡು ಹೊಡೆದು ನನ್ನ ಅಲ್ಲಿಯೇ ಬಿಟ್ಟು ಮನೆ ಸೇರಿದ್ದರು. ಅದು ಅರೆಗಾಯಗೊಂಡು ಕಾಡ ತುಂಬ ಚೀರಾಡುತ್ತ ಅಲೆದಾಡುವಾಗ ನಾ ಮುತ್ತಲ ಗಿಡವೇರಿ ಕುಂತು ತಾಸಾನುಗಟ್ಟಲೇ ಉಚ್ಚೆಹಸಿಯೊಳಗೆ ನಡುಗುತ್ತ ಕುಂತದ್ದುಂಟು. ಆಮೇಲೆ ಯಾರೋ ಬಂದು ಮನೆಗೆ ಎಚಿಕೊಂಡು ಹೋಗಿ ಬಿಟ್ಟಿದ್ದರು. ಇದು ಮಹಾಬೇಟೆಗಾರನಾಗಿದ್ದ ಅಜ್ಜಯ್ಯನ ಜೊತೆ ಹೋದಾಗಲೂ ಕೆಲವು ಬಾರಿ ಅನುಭವಕ್ಕೆ ಬಂದಿತ್ತು. ನಮ್ಮನೆಯಲ್ಲಿ ಅಜ್ಜಯ್ಯನನ್ನು ಬಿಟ್ಟರೆ ನಮ್ಮೊಬ್ಬ ದೊಡ್ಡಪ್ಪಯ್ಯನಷ್ಟೇ ಬಂದೂಕು ಹಿಡಿದು ಬೇಟೆಯಾಡಿದ್ದು. ಮಗದೊಬ್ಬ ಕಾಕಾ `ಇವರಷ್ಟೇ ಬಂದೂಕು ಹಿಡಿಬೇಕೇನು?' ಎಂದು ಬೇಟೆಗಾರನಾಗ ಹೋಗಿ ನಗೆಪಾಟಲಿಗೀಡಾಗಿದ್ದಷ್ಟೇ ಅಲ್ಲದೆ ಈಡು ಹಿಡಿದು ಹಾರಿಸುವಾಗ ಹಿಮ್ಮೆಟ್ಟಿ ಲಾಗಾ ಹೊಡೆದದ್ದೂ ಜರುಗಿತ್ತು. ಈ ಕಾಕಾನೊಂದಿಗೆ ನನ್ನ ದೋಸ್ತಿ ಎಷ್ಟೆಂದರೆ ರಾತ್ರಿ ಗದ್ದೆ ಕಾಯಲು ಹೋಗುವುದರಿಂದ ಹಿಡಿದು ದನಕಾಯಲು ಜೊತೆಗೂಡಿ ಹೋದದ್ದು; ಆಗಿನ ಕಾಲದ ಹಲವು ಪ್ರಸಿದ್ಧ ಸಿನೆಮಾಗಳನ್ನೂ ಇವರ ಪಂಜೆಚುಂಗು ಹಿಡಕೊಂಡು ಹೋಗಿ ಸಾಕಷ್ಟು ಪಡಿಪಾಟಲು ಪಟ್ಟಿದ್ದನ್ನು ಈ ಕಾಕಾಗೇ ಮೀಸಲಾದ ನನ್ನ ಹಳೆಯ ಪ್ರಬಂಧ (`ಕಾಕಾ ಎಂಬ ದೋಸ್ತಿಯೂ; ಕವಿಗಾರನೆಂಬ ಪಟ್ಟವೂ..!'- `ವಜನುಕಟ್ಟು' ಪ್ರಬಂಧ ಸಂಕಲನ)ವೊಂದರಲ್ಲಿ ಕಟೆದಿಟ್ಟದ್ದಾಗಿದೆ. ಅಜ್ಜಯ್ಯ ಹುಲಿ ಬೇಟೆಯಾಡಿ ಸುತ್ತಮುತ್ತಲೂ ಹೆಸರು ಮಾಡಿದ್ದರೆ, ಈ ದೊಡ್ಡಪ್ಪಯ್ಯ ಹಂದಿ-ಚಿಗರಿ-ಜಿಂಕೆಗಳನ್ನು ಬೇಟೆಯಾಡಿ ನಮ್ಮೂರಿನ ಒಡ್ಡರಿಗೆ ಕೊಟ್ಟುಬಿಡುತ್ತಿದ್ದದ್ದು ಆಗ ಸಾಮಾನ್ಯವಾಗಿತ್ತು. ಈ ಬೇಟೆ ಇವರಿಗೆ ಒಂದು ನಿಟ್ಟಿನಲ್ಲಿ ಖಯಾಲಿಯಾಗಿತ್ತಾದರೂ ಆ ಕಾಲದಲ್ಲಿ ಹುಲಿ ಚಿರತೆಗಳ ಕಾಟವೂ ನಮ್ಮ ಹಳ್ಳಿಗಳಲ್ಲಿತ್ತು ಅನ್ನುವುದಕ್ಕಿಂತ ನಮ್ಮನೆ ದನಕರು ಕಟ್ಟುವ ಕೊಟ್ಟಿಗೆಯಿಂದಲೇ ಅವುಗಳನ್ನು ಈ ಹುಲಿ ಚಿರತೆಗಳು ಎತ್ತಿಕೊಂಡು ಹೋಗುತ್ತಿದ್ದವು. ಹಲಬಾರಿ ಊರೊಳಗೆ ಬಂದು ಮನುಷ್ಯನ್ನೂ ಕೊಂದುಹಾಕಿದ್ದರಿಂದ ಸಹಜವಾಗಿಯೇ ಆಗ ಅನೇಕ ಕಾಡಿಗೆ ಹತ್ತಿರದ ಹಳ್ಳಿಗಳಲ್ಲಿ ಸದಾ ಭಯದ ವಾತಾವರಣವೂ ಮನೆ ಮಾಡಿರುತ್ತಿತ್ತು. ಆ ಕಾರಣವಾಗಿಯೂ ಬಂದೂಕು ಇಟ್ಟುಕೊಳ್ಳಲು ತಾಲೂಕಾ ಆಡಳಿತ ಆಯ್ದ ಕೆಲವರಿಗೆ ಬಂದೂಕು ಬಳಸಲು ಪರವಾನಗಿ ಕೊಡುತ್ತಿತ್ತು. ನಮ್ಮಪ್ಪಯ್ಯ ಮಾತ್ರ ಈ ಬೇಟೆ, ರಂಟೆ-ಕುಂಟೆಗಳ ಕಮತದಲ್ಲಿ ನೇರ ಭಾಗಿಯಾಗಲಿಲ್ಲವಾದರೂ ಆಗೀಗ ಗದ್ದೆಗಳಿಗೆ ಹೋಗಿ ಅಪರೂಪಕ್ಕೆ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಇವನ್ನೆಲ್ಲ ಬಿಟ್ಟು ಮನೆತನದ ಕೋರ್ಟು-ಕಚೇರಿ-ಬ್ಯಾಂಕು-ಪೋಲೀಸು ಗಿಲೀಸು ಮೊದಲಾದ ಹೊರಗಿನ ಕೆಲಸಗಳನ್ನೇ ಹೆಚ್ಚಾಗಿ ಮಾಡುತ್ತಿದ್ದರು. ಇವನ್ನೆಲ್ಲ ನಮ್ಮ ಕಡೆ `ಮನೆತನದ ಹೊರಗಿನ ವ್ಯವಹಾರಗಳು' ಎಂದು ಕರೆಯುತ್ತಾರೆ. ಅಪ್ಪಯ್ಯ ಆಗಿನ ಕಾಲದ ನಮ್ಮೂರಿನ ಅಷ್ಟೇ ಅಲ್ಲ, ಆ ಭಾಗದ ವಿದ್ಯಾವಂತರೂ, ಪ್ರಭಾವವುಳ್ಳವರೂ ಆಗಿದ್ದರಿಂದ ಊರ ಉಸಾಬರಿ(ಪಂಚಾಯ್ತಿ ಗಿಂಚಾಯ್ತಿ ಇತ್ಯಾದಿ)ಯೊಂದಿಗೆ ಇಂಥ ಮನೆಗೆ ಸಂಬಂಧಪಟ್ಟ ಕೆಲಸಗಳನ್ನೂ ನಿರ್ವಹಿಸುತ್ತಿದ್ದರು. ನಮ್ಮಜ್ಜಯ್ಯ-ಅಜ್ಜಮ್ಮನಿಗೆ ಮೂರು ಹೆಣ್ಣು ಪ್ಲಸ್ ಆರು ಗಂಡು ಮಕ್ಕಳಿದ್ದರು. ಈಗಾಗಲೇ ಈ ಒಂಬತ್ರಲ್ಲಿ ನಾಕು ನಂಬರ್ಗಳು ಮೈನಸ್ ಆಗಿವೆ. ಈ ವಿಷಯಾಂತರ ಈಗ್ಯಾಕೆಂದರೆ, ನಮ್ಮಜ್ಜನ ಗುಣಗಳನ್ನು ನನಗೆ ತಿಳಿದಂತೆ ಒಂಬತ್ತು ಮಂದಿಯೂ ಸಮನಾಗಿ ಹಂಚಿಕೊಂಡಂತೆ ನನಗೀಗಲೂ ಒಮ್ಮೊಮ್ಮೆ ಭಾಸವಾಗುತ್ತಿರುವುದು. ಇವರಲ್ಲಿ ನಮ್ಮಪ್ಪಯ್ಯ ಮತ್ತು ಕಾಕಾ ಒಬ್ಬರು ತಮ್ಮ ಓದು ಮತ್ತು ಬದುಕಿನ ಓಟ- ನಿಲುಗಡೆ- ಅಡೆತಡೆಗಳಿಗೆ ಸಿಕ್ಕು ಹಲವಾರು ಗುಣಗಳನ್ನು ಎರವಲಾಗಿ ತಮ್ಮ ವ್ಯಕ್ತಿತ್ವಕ್ಕೆ ಅಂಟಿಸಿಕೊಂಡಿದ್ದನ್ನು ನಾನೀಗಲೂ ಕಾಣುತ್ತಿದ್ದೇನೆ.

ನಾ ಇನ್ನಷ್ಟು ಈ ನಿಟ್ಟಿನಲ್ಲಿ ಹೇಳುತ್ತಾ ಹೋಗಬಹುದು. ಆದರೆ ಹೆಚ್ಚಾಗಿ ಹೇಳುವುದರಿಂದ ಅಪ್ಪಯ್ಯನನ್ನು ದೊಡ್ಡವನನ್ನಾಗಿಯೂ ಮಾಡಲಾಗುವುದಿಲ್ಲ; ಕಮ್ಮಿ ಹೇಳಿ ಸಣ್ಣ ಮಾಡಲೂ ಆಗುವುದಿಲ್ಲ; ಅವರು ಇದ್ದಷ್ಟು ಇದ್ದೇ ಇರುತ್ತಾರೆ! ಈ ಜಗದ ಬಹುತೇಕ ಅಪ್ಪಂದಿರು ಅಮ್ಮಂದಿರು ನಮ್ಮ ಬರವಣಿಗೆಗೆ ಖರೆ ನಿಲುಕಲಾರರೆಂದೇ ನನಗನಿಸುತ್ತದೆ; ಈ ಹಿರಿಯರ ಅನುಭವದ ಮುಂದೆ ನಾವು ಎಲ್ಲ ರೀತಿಯಿಂದಲೂ ಕಿರಿಯರೇ..! ಎಂದಷ್ಟೇ ನನ್ನ ಈ ಹೇಳುವ, ಮತ್ತು ಕೇಳಿರೆಂದು ಬಯಸುವ ಅಕ್ಷರದ ಆದರಣೀಯ ಕಾಯಕಕ್ಕೆ ಸದ್ಯಕ್ಕೆ ಶರಣು ಹೇಳಿ ಸುಮ್ಮನಾದಂತೆ ಮಾಡುತ್ತೇನೆ, ಏನಂತೀರಿ..?