ಅಪ್ಪನೇ ನನಗೆ ಆದರ್ಶ

ಅಪ್ಪನೇ ನನಗೆ ಆದರ್ಶ

‘ಅಪ್ಪ’ ಆ ಪದದಲ್ಲೇ ಎನೋ ಒಂದು ರೀತಿಯ ಖುಷಿ, ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಮಗುವಿಗೆ ಎಷ್ಟು ಮುಖ್ಯವೋ ಹಾಗೆ ಅಪ್ಪನ ಕೈ ಬೆರಳು ಹಿಡಿದು ಆತ ನೀಡುವ ಧೈರ್ಯವು ಸಹ ತಾಯಿಯ ಎದೆ ಹಾಲಿಗಿಂತ ಮಿಗಿಲು. ಅಪ್ಪ ಕೇವಲ ದುಡಿಮೆ, ಮನೆ ಜವಾಬ್ದಾರಿ ಎನ್ನದೇ ಅಮ್ಮನಿಗಿಂತಲೂ ಮಿಗಿಲಾಗಿ ನಮ್ಮೊಡನೆ ವಾಸ್ತವ ಪ್ರಪಂಚ ಹೇಗಿದೆ ಎಂಬುದನ್ನು  ಕಲಿಸುವುದಲ್ಲದೆ,  ಬದುಕಿನಲ್ಲಿ ಬರುವ ಕಷ್ಟಗಳಿಗೆ ಹೇಗೆ ಸಿದ್ದವಾಗಬೇಕು ಎಂಬುದನ್ನು ಕಲಿಸಿಕೊಡುವವನೇ ಅಪ್ಪ.

ಹೌದು. ಹಿಂದೆ ಒಂದು ಮಾತು ಇತ್ತು ಅಪ್ಪ ಎಂದರೆ ಭಯ. ಅವರು ಗದರಿಸಿದರೆ ಒಂದು ಮೈಲಿ ದೂರ ನಿಂತು ಅವರೊಟ್ಟಿಗೆ ಮಾತು ಅಷ್ಟೇ. ಅಪ್ಪ ಕೇವಲ ಮನೆಯ ಯಜಮಾನ ಅಷ್ಟೇ ಎಂಬ ಮಾತುಗಳು ಇತ್ತು ಆ ಮಾತು ಕಾಲ ಕಳೆದ ಹಾಗೆ ಅಪ್ಪನಿಗೂ ಸಹ  ಮಗಳ ಮೇಲೆ ಪ್ರೀತಿ ಇದೆ. ಅವಳೊಂದಿಗೆ ಖುಷಿಯಿಂದ ಕಳೆಯಬೇಕು ಎನಿಸುತ್ತದೆ ,ಎಂಬುದು ಅರ್ಥವಾಗದೆ ತಾಯಿ ಮಾತ್ರ ಮಗಳ ಕಷ್ಟ ಸುಖಗಳನ್ನು ನೋಡುವವಳು ತಂದೆಯಲ್ಲ ಎನ್ನುವ ಮಾತಿಗೆ ಸೆಡ್ಡು ಹೊಡೆಯುವ ಹಾಗೆ ಮಗಳನನ್ನು ಆಕಾಶದಂತೆ ಪ್ರೀತಿಸಿ ಅವಳನ್ನು ಲಾಲಿಸಿ ಪಾಲಿಸಿ ಆಕೆಯ ಖುಷಿ ಸಂತೋಷದಲ್ಲಿ ತಾನು ಭಾಗಿಯಾಗುವ ಎಷ್ಟೋ ತಂದೆಯರು ಎಲೆಮರೆಯಂತಿದ್ದಾರೆ. ಅದರಲ್ಲಿ ನನ್ನ ಅಪ್ಪ ಸಹ ಒಬ್ಬರು. 

ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ಅಯ್ಯೋ ಹೆಣ್ಣಾ... ಎಂದು ಎಲ್ಲರು ಮೂಗು ಮುರಿಯುತ್ತಿದ್ದರೆ ಅಪ್ಪ ಮಾತ್ರ ಖುಷಿಯಿಂದ ನನಗೆ ಹೆಣ್ಣು ಮಗುವಾಯಿತು ಎಂದು ಹೇಳಿ ಖುಷಿಯಿಂದ ಸ್ವೀಟ್ ಹಂಚಿದ್ದನ್ನು ನಮ್ಮ ಅಮ್ಮ ಈಗಲು ನೆನೆದು ನನ್ನ ಬಳಿ ಹೇಳಿಕೊಳ್ಳುತ್ತಿರುತ್ತಾರೆ.

ಅಪ್ಪನಿಗೆ ನನ್ನ ಕಂಡರೆ ತುಂಬಾ ಇಷ್ಟ ಆದರೆ ಅದನ್ನು ಯಾರ ಮುಂದೆಯು ಹೇಳಿಕೊಂಡವರಲ್ಲ. ಬದಲಾಗಿ ಎಲ್ಲರ ಮುಂದೆ ಬಹಳ ಗತ್ತಿನಿಂದ ಸ್ಟ್ರಿಕ್ಟ್ ಆಗಿ ಇರುತ್ತಿದ್ದರು. ನೋಡಿದವರು ಏನಪ್ಪ ನಿಮ್ಮ ಅಪ್ಪ ಇಷ್ಟೊಂದು ಸ್ಟ್ರಿಕ್ಟ್ ಅಂತೆಲ್ಲ ಹೇಳುತ್ತಿದ್ದರೆ,  ಅಪ್ಪ ಮಾತ್ರ ನಮ್ಮ ಮುಂದೆ ಎಂದಿಗೂ ಆ ರೀತಿ ನಡೆದುಕೊಂಡಿಲ್ಲ. ಚಿಕ್ಕವಳಿದ್ದಾಗ ಕೆಲವೊಮ್ಮೆ ಅಮ್ಮನಿಗೆ ಹೇಳದೆ ಗೆಳತಿಯರ ಜೊತೆ ಆಟವಾಡಲು ಹೋಗಿ ಬಿಡುತ್ತಿದ್ದೆ. ಆಟವಾಡಿ ಬರುವಷ್ಟೊತ್ತಿಗೆ ಅಪ್ಪ ಬಂದು ಬಿಡುತ್ತಿದ್ದರು, ಹೇಳದೆ ಎಲ್ಲಿಗೆ ಹೋಗಿದ್ದೇ ಎಂದು ಜೋರಾಗಿ ಗದರಿಸಿದ್ದು ಸಹ ಈಗಲೂ ನೆನಪಾದರೆ ಅಷ್ಟೇ ಭಯವಾಗುತ್ತದೆ ಆದರೆ ಅದಾದ ಸ್ವಲ್ಪ ಹೊತ್ತಿಗೆ ಎಲ್ಲವನ್ನು ಮರೆತು ಮಗಳೇ ಎಂದು ಕರೆದು ತಿಂಡಿ ಕೊಟ್ಟು ಸಮಾಧಾನ ಮಾಡುತ್ತಿದ್ದನ್ನ ನೆನಪಿಸಿಕೊಂಡರೆ ನನಗೂ ಅಪ್ಪನ ಬಗ್ಗೆ ಪ್ರೀತಿ ಉಕ್ಕುತ್ತದೆ. 

ಅಪ್ಪ ಬೆಂಗಳೂರನ್ನು ಬಿಟ್ಟು ಊರಿಗೆ ಬರಬೇಕಾದ ಸನ್ನಿವೇಶ ಬಂದಾಗ ತನಗೆ ಎಷ್ಟೇ ಕಷ್ಟವಾದರೂ ಅದನ್ನು ತೋರಿಸದೆ ಎಲ್ಲವನ್ನು ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡು ನಮಗೆ ಏನೂ ಕೊರತೆ ಆಗದ ರೀತಿ ಹೊಟ್ಟೆ ಬಟ್ಟೆ ಕಟ್ಟಿ ಬೆಳೆಸಿದರು. ಅಪ್ಪ ಪ್ರತಿ ಸಾರಿ ನನಗೆ ಒಂದು ಮಾತು ಹೇಳುತ್ತಿದ್ದರು ಸ್ವಾಭಿಮಾನದಿಂದ ಬದುಕು, ಸ್ವಾವಲಂಬಿಯಾಗಿ ನಿನ್ನ ಜೀವನವನ್ನು ನೀನೇ ಕಟ್ಟಿಕೊಳ್ಳಬೇಕು ಎಂಬ ಅಪ್ಪನ ಆತ್ಮ ವಿಶ್ವಾಸದ ಮಾತುಗಳೇ ಇಂದು ನಾನು ಇಷ್ಟು ಧೈರ್ಯವಾಗಿ ಮಾತಾನಾಡಲು, ಒಬ್ಬಳೇ ಓಡಾಡಲು ಸಾಧ್ಯವಾಗಿದ್ದು ಅದಕ್ಕೆ ಕಾರಣವೇ ಅಪ್ಪ. 

ಅಪ್ಪ ನನಗೆ ಆಕಾಶದಂತೆ ಅವರ ಪೀತಿಯಲ್ಲಿ ನನಗೆ ಎಂದಿಗೂ ಕೊರತೆ ಕಂಡು ಬಂದಿಲ್ಲ .ನೀನು ಎಲ್ಲಿಯವರೆಗೆ ಬೇಕಾದರೂ ಓದು ಮಗಳೇ ನಾನಿದ್ದೇನೆ ನಿನ್ನ ಜೀವನವನ್ನು ನೀನು ರೂಪಿಸಿಕೊ ಎಂಬ ಮಾತು ಸದಾ ನನಗೆ ನೆನಪಿಸುತ್ತಿರುತ್ತದೆ ನಾನು ಕುಗ್ಗಿದ್ದರೆ ನನ್ನನ್ನು ಮಾನಸಿಕವಾಗಿ ತಯಾರು ಮಾಡುತ್ತಿದ್ದದ್ದು ಜೊತೆಗೆ ಬೆಂಗಾಲವಾಗಿ ನಿಲ್ಲುತ್ತೆ. ಯಾವುದಕ್ಕೂ ಹೆದರಬೇಡ ಎಂದು ಬೆನ್ನು ತಟ್ಟುವ ಮಾತುಗಳೇ ನನಗೆ ಆದರ್ಶ

ಎಷ್ಟೇ ಬಡತನವಿದ್ದರೂ ಪ್ರೀತಿಗೆ ಎಂದೂ ಬಡತನ ತೋರಿಲ್ಲ ಅಂಥ ಬಡತನದಲ್ಲಿಯೂ ನನಗೆ ಉನ್ನತ ಶಿಕ್ಷಣ ನೀಡಿ ನಮಗೆ ‘ವಿದ್ಯೆಯೆ ಆಸ್ತಿ’ ಎಂದು ಕಿವಿಮಾತು ಹೇಳುತ್ತಿದ್ದರು.

ಅಪ್ಪ ನೀನೆ ನನಗೆ ಮೊದಲ ಗುರು ಅಪ್ಪ ‘ಐ ಲವ್ ಯೂ’ ಅಪ್ಪ  "ಹ್ಯಾಪಿ ಫಾದರ್ಸ್ ಡೇ" ಅಪ್ಪ.
                                                                                                                                     -ಭಾವನಾ ಎಸ್