ಹೆತ್ತ ಮಗಳೇ ಗುರುವಾಗಿ ಬಂದಳು !!!

ಹೆತ್ತ ಮಗಳೇ ಗುರುವಾಗಿ ಬಂದಳು !!!

ಎಲ್ಲರಿಗೂ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರುವಾಗಿರುತ್ತಾಳೆ. ನನ್ನ ವಿಷಯದಲ್ಲೂ ಇದು ಸತ್ಯವಾದರೂ ನನ್ನ ಮಗಳೇ ನನಗೆ ಗುರುವಾಗಿ ನಿಲ್ಲುತ್ತಾಳೆ ಎಂದು ನಾನು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಇದು ನಡೆದದ್ದು ಹೀಗೆ. 

ನಾನು ಹುಟ್ಟಿದ್ದು ಪೊಲೀಸ್ ಪೇದೆಯ ಮನೆಯಲ್ಲಿ. ನನ್ನ ತಂದೆಗೆ ಪದೇ ಪದೇ ವರ್ಗಾವಣೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯ ಏಳೂ ತಾಲೂಕು ಗಳನ್ನು ಸುತ್ತಿಯಾಗಿತ್ತು. ಹಲವಾರು ಹಳ್ಳಿ ಪೊಲೀಸ್ ಠಾಣೆ ಗಳನ್ನು ನೋಡಿಯಾಗಿತ್ತು. ಈ ಕಾರಣದಿಂದ ಸ್ಕೂಲ್ ವರ್ಗಾವಣೆ ಪತ್ರದಲ್ಲೂ ಹಲವಾರು ಶಾಲೆಯ ಹೆಸರು ಮತ್ತು ವಿಳಾಸಗಳಿವೆ. ಅಸಲಿ ವಿಷಯ ಶುರುವಾಗುವುದೇ ಇಲ್ಲಿ. ಮೊದಲೇ ಸಂಬಳ ಕಡಿಮೆ ಇದ್ದ ಕಾರಣ ನನ್ನ ತಂದೆಗೆ ನನಗೆ ಸೈಕಲ್ ತಂದು ಕೊಡಲಾಗಲಿಲ್ಲ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ನನ್ನ ಮಗಳಂತೆ ಮೂರು ಚಕ್ರದ ಸೈಕಲ್ ಓಡಿಸುವ ಅವಕಾಶ ನನಗೆ ಸಿಗಲಿಲ್ಲ. ಆರನೇ ತರಗತಿಗೆ ಬರುತ್ತಲೇ ಬಾಳೆಹೊನ್ನೂರಿನ ಹತ್ತಿರದ ಸಿಗೋಡು ಎಂಬಲ್ಲಿ ಜವಾಹರ್ ನವೋದಯ ವಿದ್ಯಾಲಯ ಕ್ಕೆ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣಳಾಗಿ ಅಲ್ಲಿಗೆ ಓದಲು ಮನೆಯನ್ನು ಬಿಟ್ಟು ತೆರಳಿದೆ. 

ಅಲ್ಲಿ ನನಗೆ ವಸತಿನಿಲಯ ಮತ್ತು ಶಾಲೆ ಹತ್ತಿರವೇ ಇದ್ದ ಕಾರಣ ಸೈಕಲ್ ನ ಅವಶ್ಯಕತೆ ಬೀಳಲಿಲ್ಲ. ಇನ್ನೂ ರಜೆಯಲ್ಲಿ ಮಾತ್ರವೇ ಮನೆಗೆ ಹೋಗಬಹುದಾಗಿದ್ದು, ಹೋದಾಗ ರಜೆಗೆಂದೇ ನೀಡಿದ ಹೋಂ ವರ್ಕ್, ಟಿವಿ ನೋಡುವುದು, ಆಟ ಆಡುವುದು, ಅಪ್ಪ ಅಮ್ಮನ ಮುದ್ದನ್ನು ಅನುಭವಿಸುವುದು ಬಿಟ್ಟರೇ, ಆಗಲೂ ಸೈಕಲ್ ಕಲಿಯಲಾಗಲಿಲ್ಲ . ನಾನು ಅದನ್ನು ಕೇಳಲೂ ಇಲ್ಲ, ಸೈಕಲ್ ತರಲೂ ಇಲ್ಲ. ಹೀಗೆ ಎರಡನೇ ಪಿಯುಸಿ ಯನ್ನು ಮುಗಿಸಿದ್ದಾಯಿತು. ಡಿಗ್ರಿ ಓದಲೆಂದು ಚಿಕ್ಕಮಗಳೂರಿಗೆ ಹೋದೆನು.ಅಲ್ಲಿಯೂ ವಸತಿನಿಲಯದ ವಾಸ ಮುಂದುವರೆಯಿತು. ಕಾಲೇಜಿಗೆ, ಕಾಲೇಜು ಬಸ್ಸಿನಲ್ಲಿ, ಕೆಲವೊಮ್ಮೆ ಆಟೋದಲ್ಲಿ ಹೋಗುತ್ತಿದ್ದೆ. ನನ್ನ ಆತ್ಮೀಯ ಗೆಳತಿಯು ಸೈಕಲ್ ಇಟ್ಟುಕೊಂಡಿದ್ದರೂ ಅದನ್ನು ತನ್ನ ಉಪಯೋಗಕ್ಕೆ ಕೇಳಲು ಸ್ವಾಭಿಮಾನ ಅಡ್ಡಿಬಂತು. ಸೈಕಲ್ ಅನ್ನು ಡಿಗ್ರಿ ಓದುವಾಗಲೂ ಕಲಿಯಲಾಗಲಿಲ್ಲ. 

ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ಕುವೆಂಪು ವಿಶ್ವವಿದ್ಯಾಲಯ ಶಂಕರ ಘಟ್ಟ, ಶಿವಮೊಗ್ಗ ಜಿಲ್ಲೆಗೆ ಹೋದೆನು. ಅಲ್ಲಿಯೂ ವಸತಿನಿಲಯದ ವಾಸ ಖಾಯಂ ಆಯ್ತು. ಕಾಲೇಜು ಹತ್ತಿರದಲ್ಲಿದ್ದ ಕಾರಣ ಕಾಲ್ನಡಿಗೆಯಲ್ಲೇ ಹೋಗಬಹುದಾಗಿತ್ತು. ಕೆಲ ಹುಡುಗರು ಬೈಕ್ ತಂದಿದ್ದರು. ಹುಡುಗಿಯರಂತೂ ಕಾಲ್ನಡಿಗೆಯಲ್ಲೇ ನಟರಾಜ ಸರ್ವಿಸ್ ಮಾಡುತ್ತಿದ್ದರು. ಮನೆಯಿಂದ ಬರುವವರು ಬಸ್ ನಲ್ಲಿ ಬರುತ್ತಿದ್ದರು. ಅಲ್ಲಿಯೂ ಸೈಕಲ್ ನ ಪ್ರಮೇಯ ಬರಲಿಲ್ಲ. ಎಂ. ಎಸ್. ಡಬ್ಲ್ಯೂ ಮಾಸ್ಟರ್ ಡಿಗ್ರಿ ಮುಗಿದ ನಂತರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಲ್ಯಾಣಾಧಿಕಾರಿಯಾಗಿ ಸೇರಿದೆ. ಪೇಯಿಂಗ್ ಗೆಸ್ಟ್ ಆಗಿ ವಾಸ ಶುರುವಾಯಿತು. ಆಫೀಸಿಗೆ ಬಸ್ ನಲ್ಲಿ ಹೋಗುವುದು, ಬರುವುದು ಮತ್ತು ಟ್ರಾಫಿಕ್ ಜಾಮ್ ನಲ್ಲಿ ಒದ್ದಾಡುವುದರಲ್ಲಿ ಸೈಕಲ್ ನೆನಪಿಗೆ ಬರಲಿಲ್ಲ. ಈ ನಡುವೆ ಮನೆಯಲ್ಲಿ ಮದುವೆ ಮಾಡಿಕೋ ಎಂದು ದುಂಬಾಲು ಬೀಳತೊಡಗಿದಾಗ ಮೈಸೂರಿನ ವಾಸಿ ಡಾಕ್ಟರ್ ಅನಿಲ್ ರೊಂದಿಗೆ ವಿವಾಹವೂ ಆಯ್ತು. ಜೊತೆಗೆ ದಿನಾಲೂ ಬೆಂಗಳೂರಿಗೆ  ಓಡಾಡಲು ಕಷ್ಟವೆನಿಸಿ ಕೆಲಸವನ್ನು ಬಿಟ್ಟಾಯಿತು. 

ಗಂಡನ ಮನೆಯಲ್ಲಿ ಕಾರು ಮತ್ತು ಹೋಂಡಾ ಆಕ್ಟಿವಾ ಸ್ಕೂಟರ್ ಇತ್ತು. ಎಲ್ಲಿಗೆ ಹೋಗಬೇಕಾದರೂ ಪತಿರಾಯರನ್ನೋ ಇಲ್ಲವೇ ಮಾವನವರನ್ನೋ ಕಾಯಬೇಕಿತ್ತು. ಆಗ ನಾನು ಸೈಕಲ್ ಕಲಿತಿದ್ದರೆ ಗಾಡಿ ಓಡಿಸಲು ಸಲೀಸಾಗುತ್ತಿತ್ತು ಎಂದು ಬಹಳ ಅನ್ನಿಸುತ್ತಿತ್ತು. ಆದರೆ ಪರಿಸ್ಥಿತಿ ನನ್ನ ವಿರುದ್ಧವಾಗಿ ಯಾವಾಗಲೋ ಸೆಡ್ಡು ಹೊಡೆದು ನಿಂತಿತ್ತು. ಇದು ಸಾಲದೆಂಬಂತೆ ನನ್ನ ಪತಿಯೂ “ ಓದಿನಲ್ಲಿ ಮುಂದಿದ್ದೀಯಾ, ಸೈಕಲ್ ತುಳಿಯಲು ಬರೋಲ್ಲ ಎಂದು ಪದೇ ಪದೇ ಗೋಳು ಹುಯಿದು ಕೊಳ್ಳುತ್ತಿದ್ದರು. ಅದನ್ನು ಬಲವಂತವಾಗಿ ಸಹಿಸಿಕೊಳ್ಳುತ್ತಿದ್ದೆ. ಈ ಜಂಜಾಟದಲ್ಲಿ ಮಗಳೂ ಹುಟ್ಟಿದಳು. ಇನ್ನು ಸೈಕಲ್ ಕಲಿತೇನು ಎಂಬ ಆಸೆ ಪ್ರಯತ್ನಕ್ಕೆ ಎಳ್ಳು ನೀರು ಬಿಟ್ಟಾಗಿತ್ತು. ಮಗಳ ಆರೈಕೆ, ಮನೆ  ಕೆಲಸ ಅದು ಇದು ಎಂದು ವೇಳೆ ಕಳೆಯತೊಡಗಿತು. 

ನನ್ನ ಮಗಳು 3 ವರ್ಷದವಳಿದ್ದಾಗ ನನ್ನಪ್ಪ ಅವಳಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಮೂರುಚಕ್ರದ ಸೈಕಲ್ ತೆಗೆದು ಕೊಟ್ಟರು. ನನ್ನ ಮಗಳಂತೂ ಸೈಕಲ್ ಕಲಿಯಲಾಗಲಿಲ್ಲ, ಮೊಮ್ಮಗಳಾದರೂ ಕಲಿಯಲಿ ಎಂಬ ಇಚ್ಛೆ ಅವರದಾಗಿತ್ತು. ನನ್ನ ಮಗಳು ನಾಲ್ಕನೇ ತರಗತಿಗೆ ಬರುವಷ್ಟರಲ್ಲಿ ನನ್ನ ಪತಿಯು ‘ಆಶಾಳಂತೆ ನನ್ನ ಮಗಳು ಸೈಕಲ್ ಕಲಿಯದೇ ಇರಬಾರದು ಎಂದು ಹೊಸ ಸೈಕಲ್ ತೆಗೆದು ಕೊಟ್ಟರು. ಅವಳು ಸ್ವಲ್ಪ ಜಾಸ್ತಿ ಎತ್ತರವಿದ್ದ ಕಾರಣ ಅಂಗಡಿಯವ ಅವಳನ್ನು 7ನೇ ತರಗತಿ ಎಂದು ಭಾವಿಸಿ ‘ ನಿನಗೆ ಸೈಕಲ್ ಇನ್ನೂ ಬರೊಲ್ಲವಾ? ಎಂದು ಕೊಳ್ಳಲು ಹೋದಾಗ ಛೇಡಿಸಿದ್ದ. ಆಗ ನಾನು ಅವಳ ವಯಸ್ಸು 10ಎಂದಾಗ ಅಚ್ಚರಿ ಪಟ್ಟಿದ್ದ. ಹೀಗೆ ಅವಳಿಗೆ ದೊಡ್ಡ ಮಕ್ಕಳು ಬಳಸುವ ಸೈಕಲ\ ಅನ್ನೇ ಕೊಡಿಸಿದೆವು. ಇದಕ್ಕೂ ಮುನ್ನ ಒಮ್ಮೆ ಅನಿಲ್ ರವರು ನನಗೆ ಗಾಡಿ ಕಲಿಸುತ್ತೇನೆಂದು ಮೈದಾನಕ್ಕೆ ಕರೆದು ಕೊಂಡು  ಹೋಗಿದ್ದರು. ನಾನು ತಿಳಿಯದೆ ಎಕ್ಸಲೇಟರನ್ನು ಜೋರಾಗಿ ಕೊಟ್ಟಾಗ ಸ್ಕೂಟರ್ ಭರ್ರೆಂದು ಮುನ್ನುಗ್ಗಿತು. ಆಗ ಹಿಂದೆ ಕುಳಿತಿದ್ದ ಅವರು ಹೆದರಿ “ನಿನಗೆ ಗಾಡಿ ಹೇಳಿ ಕೊಡೋಕೆ ಹೋಗಿ ನೀನು ಕಾಲು ಮುರಿದುಕೊಳ್ಳುವುದಲ್ಲದೆ ನನ್ನನ್ನೂ ಬೀಳಿಸಿ ಪೆಟ್ಟು ಮಾಡುತ್ತೀಯಾ” ಎಂದು ವಾಪಸ್ಸು ಕರೆ ತಂದಿದ್ದರು. ಅಲ್ಲಿಗೆ ನಾನು ಗಾಡಿ ಕಲಿಯುವ ಆಸೆ ಬಿಟ್ಟು ಬಿಟ್ಟಿದ್ದೆ. 

ಆದರೂ ಪದೇ ಪದೇ ಸೈಕಲ್ ಬರೋಲ್ಲ ಎಂದು ಹಂಗಿಸುವುದನ್ನು ನನ್ನ ಪತಿರಾಯ ಬಿಟ್ಟಿರಲಿಲ್ಲ. ಮಗಳಿಗೆ ಸೈಕಲ್ ಕೊಡಿಸಿ, ಅದನ್ನು ಕಲಿಸುವ ಉಸ್ತುವಾರಿಯನ್ನು ಅವಳಪ್ಪನೇ ಹೊತ್ತರು. ಅಂತೂ ಇಂತೂ ಮಗಳು ಆರು ತಿಂಗಳಲ್ಲಿ ಸೈಕಲ್ ಓಡಿಸುವುದನ್ನು ಕಲಿತಳು. ಆಗ ನನಗೆ ನಾನೇ ಸೈಕಲ್ ಕಲಿತಷ್ಟು ಸಂತೋಷವಾಗಿತ್ತು. ಒಮ್ಮೆ ಅನಿಲ್ ರವರು “ ಈ ಸೈಕಲ್ ನಲ್ಲಾದರೂ ಕಲಿ “ಎಂದಿದ್ದರು. ನನಗೆ ಸಮಯವಿರದ  ಕಾರಣ ಸುಮ್ಮನಾಗಿದ್ದೆ. ನನ್ನ ಪತಿಯು ಹೊಳೆನರಸೀಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದಿದ್ದರಿಂದ ಮಗಳನ್ನು ಓದಲು ಮೈಸೂರಿನಲ್ಲಿ ನನ್ನತ್ತೆ ಮನೆಯಲ್ಲಿ ಬಿಟ್ಟಿದ್ದೆವು. ವಾರಕ್ಕೊಮ್ಮೆ ಅವಳನ್ನು ನೋಡುವ ಸಲುವಾಗಿ ಶನಿವಾರ ರಾತ್ರಿ ಬಂದು ಸೋಮವಾರ ಬೆಳಗ್ಗೆ ಹೊರಟು ಹೋಗುತ್ತಿದ್ದೆವು. 

ಈ ವರ್ಷ ಅನಿಲ್ ರವರಿಗೆ ಮಡಿಕೇರಿಗೆ ವರ್ಗಾವಣೆ ಆಯಿತು. ಹಾಗಾಗಿ ಅವರು ವಾತಾವರಣ ಸರಿಹೊಂದುವುದಿಲ್ಲವೆಂದು ನನ್ನನ್ನೂ ಮೈಸೂರಿನಲ್ಲಿಯೇ ಇರಲು ಹೇಳಿ ವಾರಕ್ಕೊಮ್ಮೆ ಅವರು ಬರುವ ಏರ್ಪಾಡನ್ನು ಮಾಡಿದರು. ನಾನು ಯಾವಾಗ ಮೈಸೂರಿನಲ್ಲಿಯೇ ಖಾಯಂ ಎಂದು ತಿಳಿಯಿತೋ ಮಗಳು ಸೈಕಲ್ ಕಲಿಯುವಂತೆ ದುಂಬಾಲು ಬಿದ್ದಳು. ನನಗೂ ಕಲಿಯುವ ಅಸೆ ಇದ್ದರೂ ಯಾರೂ ಏನು ತಿಳಿಯುವರೋ ಎಂಬ ಭಾವನೆಯಿಂದ ಸುಮ್ಮನಿದ್ದೆ. ಕಳೆದ ಆಗಸ್ಟ್ ತಿಂಗಳ ಆರಂಭದಲ್ಲಿ ಮಗಳು ರಚ್ಚೆ ಹಿಡಿದಳು ‘ಸೈಕಲ್ ಕಲಿ , ಸೈಕಲ್ ಕಲಿ ‘ ಎಂದು. ಹೇಗೂ ಸಾಯಂಕಾಲ ಜಾಗಿಂಗ್ ಹೋಗುತ್ತಿದ್ದ ಕಾರಣ ಸೈಕಲ್ ನ್ನು ಜಾಗಿಂಗ್ ನಂತರ ಕಲಿಯುವುದೆಂದು ತೀರ್ಮಾನಿಸಿ ಹೊರಟೆ. ಯಾರು?  ನನಗೆ ಸೈಕಲ್ ಹೇಳಿ ಕೊಡುತ್ತಾರೆಂದು ಅವಳನ್ನು ಕೇಳಿದೆ. ಅದಕ್ಕವಳು ನಾನೇ ಹೇಳಿ ಕೊಡುತ್ತೇನೆ ಎಂದು ದೃಢ ಮನಸ್ಸಿನಿಂದ ಹೇಳಿದಳು. ಆಗ ನಾನು ಕಲಿಸಲು ಯಾರಾದರೇನು, ಇನ್ನೊಬ್ಬರ ಹತ್ತಿರ ಕಲಿಯುವ ಬದಲು ಮಗಳ ಹತ್ತಿರವೇ ಕಲಿತರಾಯಿತು ಎಂದು ಒಪ್ಪಿಗೆ ನೀಡಿದೆ. 

ಅಲ್ಲಿಂದ ಶುರುವಾಯಿತು ನನ್ನ ಮಗಳ ಸೈಕಲ್ ಕ್ಲಾಸ್. ಮೊದಲು ಸೈಕಲ್ ಅನ್ನು ಹೇಗೆ ಹೊರ ತೆಗೆಯುವುದು, ಒಳಗೆ ನಿಲ್ಲಿಸುವುದು, ಒಂದು ಕಾಲಿನ ಮೇಲೆ ಹೇಗೆ ಬ್ಯಾಲೆನ್ಸ್ ಮಾಡುವುದು, ಹಿಂದಕ್ಕೆ ಹೇಗೆ ಬರುವುದು ಎಂದೆಲ್ಲ ಹೇಳಿಕೊಟ್ಟಳು. ಮೊದಲನೇ ದಿನ ಮನೆಯ ಮುಂದೆಯೇ ಪ್ರಾಕ್ಟೀಸ್ ಶುರುವಾಯಿತು. ಮರುದಿನ ಸೀಟ್ ಮೇಲೆ ಕುಳಿತು ಒಂದು ಕಾಲಿನ ಮೇಲೆ ಬ್ಯಾಲೆನ್ಸ್ ಮಾಡುವುದನ್ನು ಕಲಿತೆ. ಸೈಕಲನ್ನು ಅತಿ ಸುಲಭವಾಗಿ ಹಿಂದೆ ತರುತ್ತಿದ್ದೆ, ಆದರೆ ಮುಂದಕ್ಕೆ ಪೆಡಲ್ ತುಳಿಯುವುದೇ ದೊಡ್ಡ ಸಮಸ್ಯೆಯಾಗಿತ್ತು. ಮೂರನೇ ದಿನ ಮಗಳು ಮನೆಯ ಮುಂದಿನ ಜಾಗ ಚಿಕ್ಕದು, ಕಲಿಯಲು ಆಗುವುದಿಲ್ಲ ಮೈದಾನಕ್ಕೆ ಹೋಗೋಣ ಎಂದಳು. ಅಷ್ಟರಲ್ಲಾಗಲೇ ಸೈಕಲ್ ಕಲಿಯಲೇಬೇಕೆಂಬ ತುಡಿತ ನನ್ನಲ್ಲಿ ಜೋರಾಗಿತ್ತು. ಯಾರೇನೆಂದುಕೊಂಡಾರೋ ಎಂಬ ಮೈಚಳಿ ಬಿಟ್ಟು ಹೂಂ ಎಂದು ಮೈದಾನಕ್ಕೆ ಹೋದೆವು. ನನ್ನ ಮಗಳು ಅವಳ ಅನುಭವದ ಆಧಾರದ  ಮೇಲೆ, ಮೈದಾನದ ಇಳಿಜಾರಿನಲ್ಲಿ ಸೈಕಲ್ ಪೆಡಲ್  ತುಳಿಯುವುದು ಸುಲಭ ಎಂದು ಇಳಿಜಾರಿನ ಕಡೆಯಿಂದ ಸೈಕಲ್ ಶುರು ಮಾಡಿಸುತ್ತಿದ್ದಳು. ಅವಳು ಹೇಳಿದ ರೀತಿ ನಾನು ಬಲಗಾಲಿನ ಮೇಲೆ ಪೆಡಲ್ ಬ್ಯಾಲೆನ್ಸ್ ಮಾಡಿ, ಎಡಗಾಲು ಪೆಡಲ್ ಮೇಲೆ ಇಡಲು ಹೋದರೆ ಸೈಕಲ್ ಬೀಳುವಂತಾಗುತ್ತಿತ್ತು. ಅಂತೂ ಇಂತೂ ಕಷ್ಟಪಟ್ಟು ಎರಡೂ ಕಾಲನ್ನು ಪೆಡಲ್ ಮೇಲೆ ಇರಿಸಿ ಬ್ಯಾಲೆನ್ಸ್ ಮಾಡಿ ಎರಡೂ ಮೀಟರ್ ದೂರ ಕ್ರಮಿಸಲು ಹರ ಸಾಹಸ ಪಟ್ಟೆ. ಮೈ ಕೈಯಲ್ಲ ಟೆನ್ಶನ್ ಗೆ ಬಿಗಿ ಹಿಡಿದುಕುಳಿತು ಸೈಕಲ್ ತುಳಿಯಲು ಪ್ರಯತ್ನಿಸಿದ ಕಾರಣ ಸಿಕ್ಕಾಪಟ್ಟೆ ನೋಯುತ್ತಿತ್ತು. ಒಮ್ಮೊಮ್ಮೆ ಸೈಕಲ್ ಕರೆದುಕೊಂಡು ಹೋದತ್ತ ಹೋಗಿಬಿಡುತ್ತಿದ್ದೆ. ಅದು ನಿಂತಾಗ ವಾಪಸ್ಸು ಇಳಿಜಾರಿನ ಕಡೆಗೆ ಮಗಳು ಸೈಕಲ್ ತಂದು ಕೊಡುತ್ತಿದ್ದಳು. 

ಪ್ರತಿ ಹಂತದಲ್ಲೂ ಮಗಳು ಹೊಸ ಸ್ಫೂರ್ತಿ ತುಂಬುತ್ತಿದ್ದಳು. ನಾನು ತಪ್ಪು ಮಾಡಿದಾಗ ಬೈಯುತ್ತಿರಲಿಲ್ಲ. ಹೀಗೆ ಕೂರು, ಹ್ಯಾಂಡಲ್ ಹೀಗೆ ಹಿಡಿ, ಕುಳಿತಾಗ ಭಾರವನ್ನು ಎರಡೂ ಪೆಡಲ್ ಮೇಲೆ ಸಮವಾಗಿ ಬಿಡು, ಸೈಕಲ್ ಹೋಗುವ ದಾರಿಗೆ ಹೋಗಬೇಡ, ನಿನ್ನ ದಾರಿಗೆ ಸೈಕಲ್ ತೆಗದುಕೊಂಡು ಹೋಗು, ಕಾಂಫಿಡೆಂಟ್  ಆಗಿರು, ಪೆಡಲ್ ತುಳಿ ತುಳಿ, ಕಾಲು ನೆಲಕ್ಕೆ ಕೊಡಬೇಡ, ನಿನ್ನ ಹಿಂದೆಯೇ ಇದ್ದೇನೆ, ಏನೂ ಆಗಲ್ಲ ಎಂದೆಲ್ಲ ಹೇಳಿ ಹುರಿದುಂಬಿಸುತ್ತಿದ್ದಳು.ನಾನು ಎತ್ತೆತ್ತಲೋ ಸೈಕಲ್ನೊಂದಿಗೆ ಹೋದಾಗ ನನಗೆ ಬೈಯದೇ ಸೈಕಲ್ ಗೆ ಬೈದು ಅದಕ್ಕೆ ಮಣ್ಣು ತಿನ್ನಿಸಿದ್ದಳು ಸೈಕಲ್ ದೇ ತಪ್ಪೆನ್ನುವಂತೆ ಸಿಟ್ಟಿನಿಂದ. ಒಮ್ಮೆಯಂತೂ ಸೈಕಲ್ ನ ನಾನು ಹಿಂದೆ ಯಿಂದ ಹಿಡಿದುಕೊಳ್ಳುತ್ತೇನೆ ನೀನು ಪೆಡಲ್ ಮಾಡು ಎಂದಾಗ ನನಗೆ ನಗು ಬಂದು ಬೇಡ ನಾನು ಬೀಳುವುದಿಲ್ಲ, ಬೀಳುವಂತಾದರೆ ನೆಲಕ್ಕೆ ಕಾಲು ಕೊಡುತ್ತೇನೆ ಎಂದೆ. 

ನಾಲ್ಕನೇ ದಿನ ಅವಳು ಹೇಳಿದ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು 8 ಸುತ್ತಿನಷ್ಟು ಪೆಡಲ್ ತುಳಿದು ಹತ್ತು ಮೀಟರ್ ನಷ್ಟು ದೂರ ಕ್ರಮಿಸಿ, ಹಿಂದೆ ತಿರುಗಿ ನೋಡಿದರೆ ನನ್ನ ಮಗಳು ನನ್ನತ್ತ ಕಣ್ಣರಳಿಸಿಕೊಂಡು ಬಾಯಿಯಲ್ಲಿ ಮೇಲೆ  ಅಕ್ಷರಶಃ ಕೈಯಿಟ್ಟು ಕೊಂಡು ಸ್ಥಂಭಿಭೂತಳಾಗಿ ನಿಂತಿದ್ದಳು. ಹತ್ತಿರ ಓಡಿ  ಬಂದು “ ಅಮ್ಮಾ ಅದ್ಹೇಗೆ ನಾಲ್ಕೇ ದಿನದಲ್ಲಿ ಬ್ಯಾಲೆನ್ಸ್ ಮಾಡೋದನ್ನು ಕಲಿತೆ. ನಾನು ಪೆಡಲ್ ತುಳಿಯಲು ಎಷ್ಟು ಸಮಯ ತೆಗೆದುಕೊಂಡೆ ಗೊತ್ತಾ?  ಹೇಗೆ ಮಾಡಿದೆ ನಿನಗೆ ಸೈಕಲ್ ಹತ್ತಿ ಗೊತ್ತಿಲ್ಲವಲ್ಲ “ ಎಂದು ಮುಗ್ದತೆಯಿಂದ ಕೇಳಿದಳು. ಅದಕ್ಕೆ ನಾನು ಉತ್ತರಿಸುತ್ತಾ ‘ ಕಂದ ನೀನು ಚಿಕ್ಕವಳು, ದೊಡ್ಡ ಸೈಕಲ್ ಸಂಭಾಳಿಸುವ ಶಕ್ತಿ ನಿನಗಿಲ್ಲ. ಹಾಗಾಗಿ ಕಲಿಯಲು ತಡವಾಯಿತು. ನಾನು ದೊಡ್ಡವಳಿದ್ದೇನೆ ಶಕ್ತಿಯಿದೆ ಹಾಗಾಗಿ ಸ್ವಲ್ಪ ಸುಲಭವಾಯಿತು ಎಂದೆ. ಸರಿ ಎಂದಳು ನಗುತ್ತಾ. 

ಮನೆಗೆ ಬಂದ ನಂತರ ಅತ್ತೆ ಮಾವನಿಗೆ ಹೇಳಿದ್ದೆ ಹೇಳಿದ್ದೂ ‘ಅಮ್ಮಾ ನಾಲ್ಕೇ ದಿನದಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡುವುದನ್ನು ಕಲಿತು ಪೆಡಲ್ ತುಳೀತಾ ಇದೆ ‘ ಎಂದು. ಅದೂ ಸಾಲದು ಎಂದು ನನ್ನ ತಂದೆ ತಾಯಿ ಬಾಗಿನ ಕೊಡಲು ಅಂದು ಬಂದಾಗ ಅವರಿಗೂ ಹೇಳಿ ಸಂಭ್ರಮಿಸಿದಳು. ಅವರೂ ಖುಷಿ ಪಟ್ಟರು. ಅಮ್ಮನಂತೂ ಚೆನ್ನಾಗಿ ಕಲಿ ಎಂದು ಬೆನ್ನು ತಟ್ಟಿದರು. ಈ ವಿಷಯ ಪತಿದೇವರಿಗೂ ತಲುಪಿತು ಅವರು ಏನೂ ಹೇಳದೆ ಮೀಸೆಯಂಚಿನಲ್ಲಿ ಹುಸಿನಗೆ ನಕ್ಕರು. ಐದನೇ ದಿನಕ್ಕೆ ಸೈಕಲ್ ಹಿಡಿತಕ್ಕೆ ಬಂತು. ನನಗೂ ಆತ್ಮವಿಶ್ವಾಸ ಹೆಚ್ಚಾಯಿತು. ಈಗ ದಿನಾ ಸೈಕಲ್ ತುಳಿಯಲು ಮೈದಾನಕ್ಕೆ ಹೋಗುತ್ತೇವೆ. ಸೈಕಲ್ ತುಳಿಯುವುದು ಸುಲಭವೆನಿಸುತ್ತಿದೆ. 

ಸದ್ಯಕ್ಕೆ ಪತಿರಾಯರ ಮೂದಲಿಕೆಗೆ ಬ್ರೇಕ್ ಬಿದ್ದಿದೆ. ಮುಂದಿನ ದಿನಗಳಲ್ಲಿ ಸ್ಕೂಟಿ ಕಲಿಯುವ ಗುರಿ ಇಟ್ಟುಕೊಂಡಿದ್ದೇನೆ. ಒಂದು ದಿನವೂ ಸೈಕಲ್ ಓಡಿಸದೆ ಸೋಮಾರಿತನ ಮಾಡಲು ಮಗಳು ಬಿಡುವುದೇ ಇಲ್ಲ. ನಾನಂದು ಕೊಂಡಿದ್ದೆ, ವಿದ್ಯೆ ಕಲಿಯಲು ವಯಸ್ಸಿನ ಅಂತರವಿಲ್ಲ ಎಂದು. ಆದರೆ ವಿದ್ಯೆ ಕಲಿಸಲು  ಕೂಡ ವಯಸ್ಸಿನ ಮಿತಿಯಿಲ್ಲ. ಬಹುಶಃ ವಿದ್ಯೆಯೊಂದೇ “ ಕಾಲದ ಪರಿಮಿತಿಗೆ ಒಳಪಡದೆ, ವಯಸ್ಸಿನ ಅಂಕುಶಕ್ಕೆ ಸಿಕ್ಕದೆ, ಜಾತಿ ಧರ್ಮ ಲಿಂಗ, ಮೇಲು ಕೀಳು, ಅಂತಸ್ತಿನ ಒಡೆತನಕ್ಕೆ ತಲೆ ಬಾಗದೆ ಪ್ರಯತ್ನದ ತಪಕ್ಕೆ ಒಲಿಯುವುದು “. 

ನನ್ನ ವಿದ್ಯಾರ್ಥಿ ಜೀವನದಲ್ಲಿ ಬೈದು ಏಟುಕೊಟ್ಟು ಹೇಳಿಕೊಟ್ಟ ಗುರುಗಳನ್ನು ನೋಡಿದ್ದೇನೆ. ಹೆದರಿ ಅವರಿಂದ ಕಲಿತಿದ್ದೇನೆ. ನಾನೂ ಕೂಡ ಪಾಠ ಹೇಳಿಕೊಡುವಾಗ ನನ್ನ ಮಗಳಿಗೆ ಬೈದಿದ್ದೇನೆ,  ತಾಳ್ಮೆ ಕೆಟ್ಟಾಗ ಕೆಲವೊಂದು ಬಾರಿ ಮೊಟಕಿದ್ದೇನೆ ಕೂಡಾ. ಬಹುಶಃ ನನ್ನ ಜೀವನದಲ್ಲಿ ಏನನ್ನೂ ಬೈಯ್ಯದೇ, ಹಂಗಿಸದೆ, ಬೇಸರಿಸದೆ ಸೈಕಲ್ ತುಳಿಯುವುದನ್ನು ಹೇಳಿಕೊಟ್ಟ ಮುದ್ದಿನ ಪುಟ್ಟ ಗುರು ನನ್ನ ಮಗಳು ಪ್ರನುಷ. ಅವಳಿಂದಾಗಿ ನನ್ನ ಮುವತ್ತೈದನೇ ವಯಸ್ಸಿನಲ್ಲಿ ಸೈಕಲ್ ಕಲಿಯುವ ಯೋಗ ನನ್ನದಾಗಿದೆ. ಅವಳಿಗೆ ನಾನು ಆಭಾರಿಯಾಗಿದ್ದೇನೆ. ಅವಳೂ ಕೂಡಾ ನನ್ನ ಅನೇಕ ಗುರುಗಳ ಸಾಲಿನಲ್ಲಿ ನಿಲ್ಲುತ್ತಾಳೆ.