ಮುರಗೆಪ್ಪಜ್ಜನ ಗಣೇಶ ಮರ್ದನದ ಕಥೆ

`ನಿಂದು ಉದ್ರೀ ಹೀಂಗ ಹನುಮಪ್ಪನ ಬಾಲದಂಗ ಬೆಳಕ್ಕೋಂತ ಹೊಂಟತು, ಯಾವಾಗ ತೀರಸ್ತೀ ಇದನ' ಚಾದಂಗಡಿ ಕನ್ನಮ್ಮ ಸ್ವಲಪ ಜಬರ್ದಸ್ತೀ ದನಿಯಲ್ಲೇ ಕೇಳಿದಳು. ಚಾದ ಉದ್ರೀ ವಾಪಾಸಾಗುತ್ತೊ ಇಲ್ಲವೋ ಅನ್ನುವ ಅನುಮಾನವೂ ಅವಳ ದನಿಯಲ್ಲೇ ಇತ್ತು.

ಮುರಗೆಪ್ಪಜ್ಜನ ಗಣೇಶ ಮರ್ದನದ ಕಥೆ
 
`ನಿಂದು ಉದ್ರೀ ಹೀಂಗ ಹನುಮಪ್ಪನ ಬಾಲದಂಗ ಬೆಳಕ್ಕೋಂತ ಹೊಂಟತು,  ಯಾವಾಗ ತೀರಸ್ತೀ ಇದನ'  ಚಾದಂಗಡಿ ಕನ್ನಮ್ಮ ಸ್ವಲ್ಪ ಜಬರ್ದಸ್ತೀ ದನಿಯಲ್ಲೇ ಕೇಳಿದಳು. ಚಾದ ಉದ್ರೀ ವಾಪಾಸಾಗುತ್ತೊ ಇಲ್ಲವೋ ಅನ್ನುವ ಅನುಮಾನವೂ ಅವಳ  ದನಿಯಲ್ಲೇ ಇತ್ತು.
 
`ಅಲಾ ನಿನ್ನೌನು ಇನ್ನೂ ಚಾನ ಕುಡ್ದಿಲ್ಲ; ಆಲೇ ಸುರು ಹಚ್ಕೊಂಡ್ಯಾ ನಿನ್ನ ವಾರಾತ! ಚಾ ಕುಡೇ ಮಟರ ಸ್ವಲ್ಪ ತಣ್ಣಗಿರು. ನಿನಗ ಉತ್ರಾ ಕೊಟಗೊಂತ ಕುಂತರ ಲೋಟಾದನ ಚಾ ತಣ್ಣಗಾಕ್ಕೈತಿ' ಅಂದವನೇ ಕಾಯಾ ವಾಚಾ ಮನಸಾ ಬಿಸಿ ಬಿಸಿ ಚಹಾ ಹೀರುವುದರಲ್ಲೇ ತಲ್ಲೀನನಾದ ಮುರಿಗೆಪ್ಪಜ್ಜ.
 
ಕುಸುಬಿ ಮುರಿಗೆಪ್ಪಜ್ಜ ಹೇಳಿಕೇಳಿ ಕಲಾವಿದ. 'ಏನೇ ಮಾಡಿದರೂ ತಪಸ್ಸಿನ ತರಾ ಮಾಡಬೇಕುʼ ಅನ್ನುವವ. ಹಾಗೇ ಚಾ ಕುಡಿದೆದ್ದು, ಪಂಚೆ ಕೊಡವಿಕ್ಕೋಂತ ಹೇಳಿದ.
 
`ಏಯ್ ಮುದುಕೀ ನಿನ್ನ ರೊಕ್ಕದಲ್ಲ, ಅದಕ್ಯಾಕ ಇಷ್ಟ ಸಂಕಟಪಡ್ತೀ, ನಿಂದೊಂದ ಚಿತ್ರ ತಗದ ಕೊಡ್ತೀನೀ ಬಿಡು' ಅಂದವನೇ ಅಲ್ಲಿಂದ ಸರಸರ ನಡೆದೇಬಿಟ್ಟ.
 
ಅಂಗಡಿ ಕನ್ನಮ್ಮಳಿಗೆ ಖುಶಿಯೋ ಖುಶಿ. `ಎಲ್ಲಾರು ಸತ್ತ ಮ್ಯಾಲ ಇವನ್ಕಡಿಂದ ಫೋಟಾ ತೆಗಿಸ್ತಾರ. ಸಾಯೋದ್ರೊಳಗ ನನ್ನ ಫೋಟೋ ನಾನೇ ನೋಡ್ತೀನಲಾ' ಅನ್ನೋದೇ ಅವಳ ಖುಶಿಗೆ ಕಾರಣವಾಗಿತ್ತು.
 
ಹಾಗೆ ನೋಡಿದರೆ, ನಾನು ಮುರಿಗೆಪ್ಪಜ್ಜನ ಹೆಸರು ಕೇಳಿದ್ದು ಇಂಥ ಫೋಟೋಗಳ ಮೂಲಕವೆ. ಊರಿನ ಯಾವುದೇ ಮನೆಯಲ್ಲಿ ಯಾರೇ ಹಿರಿಯರು ತೀರಿಕೊಂಡ ತಿಂಗಳೊಪ್ಪತ್ತಿನಲ್ಲಿ ಆ ಮನೆಯಲ್ಲಿ ಮುರಿಗೆಪ್ಪಜ್ಜನ ಫೋಟೊ  ಗೋಡೆಯನಲಂಕರಿಸುತಿತ್ತು. ಬರಿ ಮನುಷ್ಯರ ಫೋಟೋಗಳಲ್ಲ. ಒಂದೇ ಮನೆಯಲ್ಲಿ ಬಹಳಷ್ಟು ದಿನ ದುಡಿದು ತೀರಿಕೊಂಡ ಜೋಡಿಯೆತ್ತುಗಳ ಫೋಟೋ ಕೂಡ ಆ ಮನೆಯವರ ಪ್ರೀತಿಯ ಕುರುಹಾಗಿ ಮುರಿಗೆಪ್ಪಜ್ಜನ ಕಲೆಯ ದ್ಯೋತಕವಾಗಿ ಮತ್ತೆ ಆವಿರ್ಭವಿಸುತಿದ್ದವು.
ಮದುವೆ ಇದ್ದಲ್ಲಿ ಮನೆಯ ಅಟವಾಳಗಿ ಮುರಿಗೆಪ್ಪಜ್ಜನ ಕೈಕುಶಲತೆಯಿಂದ ಚಿತ್ರಾಲಂಕಾರಗೊಂಡು ಆ ಸಮಾರಂಭದ ಸಂಭ್ರಮಕ್ಕೆ ಮತ್ತಷ್ಟು ಮೆರಗು ಕೊಡುತಿತ್ತು.
 
ಸುರ್ಯೋದಯ, ಚಂದ್ರೋದಯದ ರಮ್ಯ ಚಿತ್ರಗಳು, ಪ್ರಕೃತಿ ಸೊಬಗಿನ ಸುಂದರ ದೃಶ್ಯಗಳು, ಮೋಹಿನಿಯರ ನಾಟ್ಯ ಭಂಗಿಗಳು, ಹಳ್ಳಿಗಾಡಿನ ಜನಜೀವನದ ಚಿತ್ರಗಳು ಮನೆಯ ಅಟವಾಳಗಿಯಲ್ಲಿ ಹೊಸದೊಂದು ಲೋಕವನ್ನೇ ಸೃಷ್ಠಿಸುತ್ತಿದ್ದವು. ಬೀಗರು ಬಿಜ್ಜರನ್ನು ಅರೆಕ್ಷಣ ತನ್ಮಯಗೊಳಿಸಿ ಮನಸಿಗೆ ತಂಪು ನೀಡುತಿದ್ದವು‌. ಅವು ಮುರಿಗೆಪ್ಪಜ್ಜ ತೆಗೆದ ಚಿತ್ರಗಳು ಎಂಬ ಮಾತು ಕೇಳುವ ಮೂಲಕವೇ ಅಂವಾ ನಮ್ಮ ಎದೆಯೊಳಗೆ ಸ್ಥಾಯಿಯಾಗಿ ಅವನ ಚಿತ್ರಲೋಕದ ಬಗ್ಗೆ ನಾವು ಬೆರಗುಪಡುತಿದ್ದೆವು.
 
ಒಮ್ಮೆ ನಮ್ಮೂರಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ಸಾರ್ವಜನಿಕ ಗಣೇಶೋತ್ಸವಕ್ಕೆ ಪ್ರತಿವರ್ಷ ರಾಣೇಬೆನ್ನೂರಿನಿಂದಲೆ ಮೂರ್ತಿ ತರುತಿದ್ದರು. ಆದರೆ, ಆ ವರ್ಷ ಮುರಿಗೆಪ್ಪಜ್ಜ ಅಪರೂಪವೆಂಬಂತೆ ಹಬ್ಬದಲ್ಲಿ ಊರಲ್ಲೇ ಇದ್ದ‌. ಅದ್ಯಾವ ಕಾರಣಕ್ಕೋ ಮೂರ್ತಿಯನ್ನು ತಾನೇ ಮಾಡುವುದಾಗಿ ಅದಕ್ಕೆ ಬೇಕಾದ ಗದ್ದೆ ಮಣ್ಣು, ಅರಳಿ, ಬಣ್ಣ ಎಲ್ಲ ತಂದು ಕೊಡಿ ಸಾಕು ಎಂದಿದ್ದ. ಇದು ಊರಿನ ಜನರಿಗೆ ಆಶ್ಚರ್ಯ‌ವನ್ನ್ನೂ ಜೊತೆಗೆ ಸಂಭ್ರಮವನ್ನೂ ಉಂಟು ಮಾಡಿತ್ತು. ಏಕೆಂದರೆ, ಮುರಿಗೆಪ್ಪಜ್ಜ ಹೇಳಿಕೇಳಿ ಮನಸುಖರಾಯ! ತನಗೆ ತಿಳಿದರೆ, ಮಾಡಬೇಕೆಂಬ ಹುಕಿ ಬಂದರೆ ಮಾತ್ರ ಆ ಕೆಲಸ ಹಿಡಿದು ಮಾಡುವವ, ಬೇರೆಯವರ ಮರ್ಜಿ, ಒತ್ತಾಯಕ್ಕೆ ಸೊಪ್ಪು ಹಾಕುವ ಜಾಯಮಾನ ಅವನದಲ್ಲವೇ ಅಲ್ಲ. ತನಗೆ ತಿಳೀತೋ ಮಾಡಿದ. ಬೇಡವೆನಿಸಿದರೆ ಯಾರಪ್ಪ ಹೇಳಿದರೂ ಆ ಕೆಲಸ ಮಾಡುತ್ತಿರಲಿಲ್ಲ. ಇಂಥ ಮುರಿಗೆಪ್ಪಜ್ಜ ತಾನಾಗಿಯೇ ಗಣಪತಿ ಮೂರ್ತಿ ಮಾಡಲು ಒಪ್ಪಿದ್ದು ಆಶ್ಚರ್ಯಕ್ಕೆ ಕಾರಣವಾಗಿದ್ದರೆ, ಮುರಿಗೆಪ್ಪಜ್ಜ ಮಾಡ್ತಾನಂದರೆ ಆ ಮೂರ್ತಿ ಅದ್ಭುತವಾಗಿರುತ್ತದೆ ಎಂಬ ಕಾರಣಕ್ಕೆ ಜನರು ಖುಶಿಪಟ್ಟಿದ್ದರು. ಮುರಿಗೆಪ್ಪಜ್ಜನ ಮೂರ್ತಿ ಯಾವ ಘಟನೆಯ ಹಿನ್ನೆಲೆಯಲ್ಲಿ ಒಡಮೂಡಬಹುದು ಎಂಬ ಕುತೂಹಲವೂ ಆಗಲೇ ಕೆಲವರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.
 
ಮೂರ್ತಿಯನ್ನು ಮಾಡಲು ಸಾಮಾನ್ಯ ಕಲಾವಿದರಿಗೆ ವಾರವೊಪ್ಪತ್ತಾದರೂ ಸಮಯಾವಕಾಶ ಬೇಕು. ಮುರಿಗೆಪ್ಪಜ್ಜ ಮೂರ್ತಿ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದ. ಅವನು ಕೇಳಿದ್ದ ಮಣ್ಣು ಬಣ್ಣ ಎಲ್ಲ ತಂದು ಇಟ್ಟಿದ್ದರು. ಇನ್ನು ಎರಡೇ ದಿನದಲ್ಲಿ ಗಣೇಶ ಚವತಿ ಇದೆ. ಆದರೆ, ಮುರಿಗೆಪ್ಪಜ್ಜನ ಸುಳಿವೇ ಇಲ್ಲ. ಇದೇನು ಬಂತಪಾ ಪಡಿಪಾಟಲು ಅಂತ ಊರ ಜನರಿಗೆ ಹೇಳಲಾಗದ ಸಂಧಿಗ್ಧತೆ. ಮೂರ್ತಿಯನ್ನು ತಂದರೆ ಮುರಿಗೆಪ್ಪಜ್ಜನ ಸಿಟ್ಟಿಗೆ ಸಿಕ್ಕೊಳ್ತೇವೆ, ಬಿಟ್ಟರೆ ಗಣೇಶನ ಅವಕೃಪೆಗೆ ತುತ್ತಾಗ್ತೇವೆ. ಏನು ಮಾಡಬೇಕೆಂಬುದು ತಿಳಿಯದೇ ಎಲ್ಲರೂ ತಲೆ ಮೇಲೆ ಕೈ ಹೊತ್ತು ಕೂತರು. ಅದರಲ್ಲೂ ಒಂದಿನ ಕಳೆದೇ ಹೋಯ್ತು! ಮುರಿಗೆಪ್ಪಜ್ಜ ಬರಲಿಲ್ಲ. ಭಕ್ತಗಣವೆಲ್ಲ ಗಣಪನ ಮೇಲೆ ಭಾರ ಹಾಕಿ ಪ್ರಾರ್ಥಿಸತೊಡಗಿತು.!
 
ಇನ್ನೇನು ನಾಳೆಯೇ ಗಣೇಶ ಚವತಿ ಎಂದರೆ ಇಂದು ಸಂಜೆಗೆ ಮುರಿಗೆಪ್ಪಜ್ಜನ ದರ್ಶನವಾಯಿತು ಎಲ್ಲರಿಗೂ. `ಯಜ್ಜಾ ನಾಳೇನ ಗಣೇಶ ಚವತಿ'  ಸಮಿತಿಯ ಯುವಕನೊಬ್ಬ ನೆನಪಿಸಿದ. ` ಹೌದೋ, ನನಗೂ ಗೊತ್ತೈತಿ. ಮುಂಜಾನೆ ಅನ್ನೋದರ ಒಳ್ಗ ನಿಮ್ಮ ಗಣಪನ್ನ ನಿಮ್ಮ ಕೈಗೊಪ್ಪಿಸ್ತೀನಿ ಆತಿಲ್ಲೋ.' ಮುರಿಗೆಪ್ಪಜ್ಜನ ನಿರಾತಂಕ ಉತ್ತರ.
 
ಬೆಳಕ ಹರಿಯೋದ್ರೊಳಗ ಅದ್ಹೆಂಗ್ ಈವಜ್ಜ ಆಳೆತ್ತರದ  ಗಣಪನ್ನ ಮಾಡ್ತಾನ ಅನ್ನೊ ಕೌತುಕ ಜೊತೆಗೆ ಒಟ್ನಲ್ಲಿ ನಾಳೆಯೊಳಗ ಗಣಪನ ಮೂರ್ತಿ ಆಕ್ಕೈತಲ್ಲ ! ಎಂಬ ಸಮಾಧಾನ ಎರಡೂ ಕೂಡಿದ ಜನರ ಮುಖದಲ್ಲೊಮ್ಮೆ ಮಿಂಚಿ ಮರೆಯಾದದವು.
 
ಊರಮಧ್ಯೆ ಬಯಲಿನಲ್ಲಿ ನೂರು ಕ್ಯಾಂಡಲ್ಲಿನ ಬಲ್ಬು ಹಚ್ಚಿ ಗಣಪನ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಮುರಿಗೆಪ್ಪಜ್ಜನ ಜೊತೆ ಬ್ಯಾಡಗಿ ಚಿಕ್ಕಣ್ಣ, ಅಣಜಿ ಬಸಲಿಂಗಪ್ಪ, ಆಣೂರ ಅಣ್ಣಪ್ಪ ಇತ್ಯಾದಿಯಾಗಿ ಅವನ ಮ್ಯಾಳ ಮಣ್ಣಿಗೆ ನೀರು ಸುರಿದು ರಾಡಿ ತುಳಿದು ಕೆಸರನ್ನು ಹದಕ್ಕೆ ತರುವ ಕೆಲಸಕ್ಕೆ ನಿಂತರು. ಮಣ್ಣು ಬೆಣ್ಣೆಯಂತೆ ಹದಕ್ಕೆ ಬರುತ್ತಲೆ ಮುರಿಗೆಪ್ಪಜ್ಜನ ಚಿತ್ತದಲ್ಲಿನ ಗಣಪ ಆಕಾರಗೊಳ್ಳುತ್ತ ಬಹಿರಂಗದಲ್ಲಿ ರೂಪತಳೆಯತೊಡಗಿದ.
 
ನಮ್ಮ ಮುರಿಗೆಪ್ಪಜ್ಜ ಕಂಡಾಗಲೆಲ್ಲ ನನಗೆ ಮೈಖೇಲ್ ಎಂಜೇಲೋ ನೆನಪಾಗುತಿದ್ದ. ನಾಲ್ಕು ವರ್ಷದ ಬಾಲಕ ಏಸುವಿನ ಪ್ರತಿಮೆಗಾಗಿ ಅನುರೂಪ ರೂಪದರ್ಶಿಗಾಗಿ ನಾಲ್ಕಾರು ವರ್ಷ ಅಲೆದ ಎಂಜೇಲೋ ಅಂಥ ಹುಡುಗ ಸಿಕ್ಕ ಮೇಲೆಯೆ ಪ್ರತಿಮೆ ನಿರ್ಮಾಣಕ್ಕೆ ತೊಡಗಿದ್ದನಂತೆ. ವ್ಯಾಟಿಕನ್ ಸಿಟಿಯ ಚರ್ಚ್‌ನ ಕಲಾಕೃತಿಗಳ ನಿರ್ಮಾಣ ಸಂದರ್ಭದಲ್ಲಿ ತನ್ನ ಕೆಲಸದಲ್ಲಿ ಯಾರೂ ಮೂಗು ತೂರಿಸಬಾರದು; ಯಾರೂ ಪ್ರಶ್ನಿಸಬಾರದು ಎಂದು ಮೊದಲೇ ಪೋಪ್ ಗೇ ಷರತ್ತು ಹಾಕಿದ್ದನಂತೆ!
 
ಮುರಿಗೆಪ್ಪಜ್ಜ ಅವತ್ತು ಗಣೇಶ ಮೂರ್ತಿ ಮಾಡಲು ಹೊರಟಾಗಲೂ ಇಂಥವೆ ಷರತ್ತು ವಿಧಿಸಿದ್ದ. ಅದೇ ಪ್ರಕಾರ ರಾತ್ರಿ ಹನ್ನೆರಡು, ಒಂದು ಗಂಟೆ ಸುಮಾರಿಗೆ ಮುರಿಗೆಪ್ಪಜ್ಜ ಮೂರ್ತಿ ಗೆ ಅಂತಿಮ ಸ್ಪರ್ಶ ಕೊಡುತ್ತಲಿದ್ದ .
 
ಅನಿರೀಕ್ಷಿತವೆಂಬಂತೆ ಅಲ್ಲಿಗೆ ಬಂದ ಕುಡುಕನೊಬ್ಬ ಮೂರ್ತಿಯನ್ನು ನೋಡಿ, ಗಣಪನ ಒಂದು ಕಣ್ಣು ಸಣ್ಣ, ಇನ್ನೊಂದು ದೊಡ್ಡದಾಗಿದೆ ಅಂದುಬಿಟ್ಟ. ಈ ಮಾತು ಮುರಿಗೆಪ್ಪಜ್ಜ ಷರತ್ತಿನ ಸ್ಪಷ್ಟ ಉಲ್ಲಂಘನೆಯಾಗಿತ್ತು! ಕೂಡಲೆ ಮುರಿಗೆಪ್ಪಜ್ಜ  ಅಲ್ಲಿವರೆಗೂ ತಪಸ್ಸಿನಂತೆ ಮಾಡಿದ್ದ ಗಣಪನ ಮೂರ್ತಿಯ ಹೆಗಲೇರಿ ಮೂರ್ತಿಯನ್ನು ಕಚಪಚ ತುಳಿದು ನೆಲಸಮ ಮಾಡಿಬಿಟ್ಟ!
 
ಅರೆಕ್ಷಣದಲ್ಲಿ ನಡೆದ ಈ ಘಟನೆಯಿಂದ ಎಲ್ಲರೂ ಮೂಕವಿಸ್ಮಿತರಾದರು. ಏನು ಮಾತನಾಡಬೇಕೆಂಬುದೂ ತೋಚದೆ ಎಲ್ಲರೂ ಬೆಸ್ತು ಬಿದ್ದರು.
 
ಸಿಟ್ಟಿಗೆದ್ದ ಕೆಲ ಯುವಕರು ಇಷ್ಟೆಲ್ಲ ರಾದ್ಧಾಂತ‌ಕ್ಕೆ ಕಾರಣನಾದ ಕುಡುಕನ ಬೆವರಿಳಿಸಿದರು. ಪಾಪ ಅವನು ಮುರಿಗೆಪ್ಪಜ್ಜನ ಬಗ್ಗೆ ಏನೊಂದೂ ತಿಳಿದಿರದ ಅಮಾಯಕನಾಗಿದ್ದ. ಯಾರದೋ ಮನೆಗೆ ಬಂದಿದ್ದ ಪರ ಊರಿನವನಾದ ಅವನು ಮಾತಿನ ತೀಟೆಗೆ ಏನೋ ಅಂದು ಇಂಥ ಅವಘಡಕ್ಕೆ ಕಾರಣನಾಗಿದ್ದ!
 
ಏನೂ ತೋಚದಂತಾಗಿದ್ದ ಊರಿನ ಹಿರಿಯರು ಕೊನೆಗೆ ಮುರಿಗೆಪ್ಪಜ್ಜನನ್ನೆ ಒಲಿಸಿಕೊಳ್ಳುವ ನಿರ್ಧಾರಕ್ಕೆ ಬಂದರು. ಆದ ತಪ್ಪಿಗೆ ಕ್ಷಮೆ ಕೇಳಿ ಮತ್ತೊಮ್ಮೆ ಮೂರ್ತಿಯನ್ನು ನಿರ್ಮಿಸಲು ಅಂಗಲಾಚಿದರು. ಮುರುಗೆಪ್ಪಜ್ಜ ಊರಿನವರ ಪ್ರೀತಿಗೆ ಕರಗಿದ. ಮತ್ತೆ ಮೂರ್ತಿ ಮಾಡುವುದಕ್ಕೆ ಒಪ್ಪಿಕೊಂಡ. ಯುವಕರು ಆ ಜಾಗಕ್ಕೆ ಯಾರೂ ಬರದಂತೆ ಕಾವಲು ನಿಂತರು!
 
ಮುರುಗೆಪ್ಪಜ್ಜ ಈ ಮೊದಲು ಮಾತು ಕೊಟ್ಟಂತೆ ಬೆಳಕು ಹರಿಯುವುದರೊಳಗೆ ಗಣೇಶನನ್ನು ಮತ್ತೊಮ್ಮೆ ರೂಪಿಸಿದ್ದ. ಅತ್ತ ಸೂರ್ಯೋದಯವಾಗುತ್ತಲೇ, ಇತ್ತ ಗಣೇಶ ಎಲ್ಲರಿಗೂ ಅಭಯ ಹಸ್ತ ನೀಡಿದ್ದ!