ಹಣತೆ ಮಣ್ಣಿನದು, ಬೆಳಕು ಕಣ್ಣಿನದು

ಹಣತೆ ಮಣ್ಣಿನದು, ಬೆಳಕು ಕಣ್ಣಿನದು

ವರ್ಷದುದ್ದಕ್ಕೂ ಮಣ್ಣಿನ ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಭೂತಾಯಿಯ ಪೂಜೆ ಮಾಡಿ ಕೃತಾರ್ಥರಾಗುತ್ತಾರೆ. ಗ್ರಾಮೀಣ ಬದುಕಿನ ವಿಶಿಷ್ಟ ಆಚರಣೆ, ನಂಬಿಕೆಗಳ ಮೇಲೆ ಬೆಳಕು ಚೆಲ್ಲುವ ಲಕ್ಷ್ಮೀ ಮ.ಕುಂಬಾರ ಅವರ ಈ ಮಾಲಿಕೆಯ ಮೊದಲ ಲೇಖನ ಇಲ್ಲಿದೆ.

ವರ್ಷದ ಪ್ರಾರಂಭದಿಂದ ಹಿಡಿದು ವರ್ಷದ ಅಂತ್ಯದವರೆಗೂ ಮಣ್ಣಿನ, ಭೂ ಮಾತೆಯ ಪೂಜೆ ನಡೆಯುತ್ತಲೇ ಇರುತ್ತದೆ. ರೈತ ಉತ್ತುವ ಮೊದಲು ಭೂ ತಾಯಿಯ ಪೂಜೆಗೈದು, ತನ್ನ ಕಾರ್ಯ ಪ್ರಾರಂಭಿಸುತ್ತಾನೆ. ‘ಎಲ್ಲರೂ  ಬಿಟ್ಟರೂ ಭೂಮಿ ತಾಯಿ ಕೈ ಬಿಡಲ್ಲಾ’ಎನ್ನುವುದು ಅವನ ನಂಬಿಕೆ.

‘ಮಣ್ಣನ್ನು ನಂಬಿ ಕೆಟ್ಟವರಿಲ್ಲ’ಎನ್ನುವುದಕ್ಕೆ ಇದು ಕೂಡಾ ಒಂದು ಉದಾಹರಣೆಯಾಗಿದೆ. ಬ್ರಹ್ಮ ಒಬ್ಬ ಕುಂಬಾರ. ಶ್ರೀ ನಾರಾಯಣನ ನಾಬಿಯಿಂದ ಬ್ರಹ್ಮ ಜನಿಸಿದ. ನಂತರ ಅವನು ‘ಮಣ್ಣಿನ ಗೊಂಬೆ ಮಾಡಲು ಪ್ರಾರಂಭಿಸಿದ. ಅದಕ್ಕೆ ರೂಪ ನೀಡಿ, ಜೀವ ತುಂಬಿ ಭೂಲೋಕಕ್ಕೆ ಕಳಿಸುತ್ತಿದ್ದ’ ಎಂದು ನಮ್ಮ ಅಜ್ಜಿಯಂದಿರು ಹೇಳುತ್ತಿದ್ದರು. ಆತ ಮಾಡಿದ ಒಂದು ಗೊಂಬೆಯೇ ಮಾನವ. ಆಯಾ ಕಾಲಕ್ಕೆ ತಕ್ಕಂತೆ, ಕುಂಬಾರನು ಸಹ ಬದಲಾಗುತ್ತಿದ್ದಾನೆ. ಮಹಾನವಮಿಯ ಉತ್ಸವದಲ್ಲಿಯೂ ಕುಂಬಾರನ ಪಾತ್ರ ಕಾಣಬಹುದು. ನವಮಿ ಎಂದಾಗ ನೆನಪಾಗುವುದು ‘ಹಣತೆಯ ಬೆಳಕು’.

ಇದು ನವಮಿಯಲ್ಲಿ ಕುಂಬಾರನ ಭಾಗ್ಯ ತೆರೆಯುವ ದೊಡ್ಡಹಬ್ಬ. ನವಮಿಯಲ್ಲಿ ಕುಂಬಾರನ ಮನೆಯಿಂದ ಹಣತೆ ಮತ್ತು ಕುಳ್ಳಿಗಳನ್ನು ತೆಗೆದುಕೊಂಡು ಹೋಗುವುದು ಇಂದಿಗೂ ರೂಢಿಯಲ್ಲಿದೆ. ಮಹಾನವಮಿ ಇವನ ‘ಮನೆ ಮನಬೆಳಗುವ ಸುವರ್ಣಕಾಲ’ಎಂದು ಹೇಳಿದರೆ ತಪ್ಪಾಗಲಾರದು. ಹಳ್ಳಿಗಳಲ್ಲಿ ಈ ನವರಾತ್ರಿಯಲ್ಲಿ ಮನೆಯ ಜಗುಲಿ ಮೇಲೆ ಘಟ್ಟ ಹಾಕುವರು. ಘಟ್ಟ ಎಂದರೆ ‘ಹುಣ್ಣಿಮೆಗೆ 9 ದಿನಗಳು ಇರುವಂತೆ ಮನೆಯಲ್ಲಿ ಹಗಲಿರುಳು ಜೋಡಿ ದೀಪವನ್ನು ಉರಿಸುವರು. ಇದರೊಂದಿಗೆ 9 ತರಹದ ಕಾಳುಗಳನ್ನು ಎರಿಯ ಮಣ್ಣು, ಹೊಲದ ಮಣ್ಣಿನೊಂದಿಗೆ ಕೂಡಿಸಿ ಒಂದು ದೊಡ್ಡ ಪಣತಿಯಲ್ಲಿ ಇಟ್ಟು ಇಲ್ಲವೇ ಬಾಳಿಯ, ಬದಾಮಿಯ ಎಲೆಯ ಮೇಲೆ ಹಾಕುವರು., ಅದರಲ್ಲಿ ಒಂದು ಕುಳ್ಳಿಯನ್ನಿಟ್ಟು ಪೂಜಿಸುವರು. ಅದು ಕುಂಬಾರನ ಮನೆಯಿಂದ ತಂದ ಹೊಸ ಕುಳ್ಳಿಯೇ ಆಗಿರಬೇಕು.’ ಆತ ಹೇಳಿದ ಬೆಲೆಕೊಟ್ಟು ತರಬೇಕು. ಆದ್ದರಿಂದ ಕುಂಬಾರನಿಗೆ ಈ ಹಬ್ಬ ಲಾಭವನ್ನು ತರುವಂತದ್ದಾಗಿದೆ. ಈ ಘಟ್ಟ ಹಾಕಿದ ಮೇಲೆ ಆ ಮನೆಯ ಒಡತಿ 9 ದಿನಗಳ ಕಾಲ ಉಪವಾಸ, ಒಂದತ್ತು ದಿನ ಬರಿಗಾಲಲ್ಲಿ ಇರುವುದು, ಮಡಿ ಉಡುಪು ಧರಿಸುವುದು, ಯಾವಾಗಲೂ ದೇವಿಪುರಾಣಗಳನ್ನು ಓದುತ್ತಿರುವುದು. ಹೀಗೆ ಇನ್ನೂ ಹಳ್ಳಿಗಳಲ್ಲಿ ಕಾಣಬಹುದು. ನಂತರ ದೀಪಹಾಕಿದ ದಿನ 5 ಮನೆಗೆ ಇಲ್ಲವೇ 11 ಮನೆಗೆ ಹೋಗಿ ಜೋಗ ಬೇಡಿಕೊಂಡು ಬರಬೇಕು. ಅದನ್ನು ಅವರೇ ತಿನ್ನಬೇಕು. ಇಲ್ಲವಾದರೆ ದೇವಿಗೆ ಅಪಚಾರ ಮಾಡಿದಂತಾಗುವುದು ಎಂದು ನಂಬಿದ್ದಾರೆ. ಊರ ಗೌಡರ ಓಣಿಯಲ್ಲಿ ದೇವತೆಯನ್ನು ಸ್ಥಾಪನೆ ಮಾಡುವರು. ಊರಮಂದಿಯಲ್ಲಾ ಸೇರಿ ದಿನಕ್ಕೊಂದು ಬಗೆಯ ಸಿಹಿಯಾದ ಅಡಿಗೆ ಮಾಡಿ ನೈವೇದ್ಯ ಎಂದು ಸ್ವೀಕರಿಸುವರು. 9 ದಿನಗಳವರೆಗೂ ಇಲ್ಲಿ ದಾಸೋಹ ವ್ಯೆವಸ್ಥೆ ಇರುತ್ತದೆ. ಜಾತಿ, ಬೇಧಗಳೆನ್ನದೇ ಕೂಡಿ ಹಬ್ಬಆಚರಿಸುವುದೇ ಇಲ್ಲಿ ಒಂದು ವಿಶೇಷ.

ಮಡಕೆ ಮಾಡುವ ವಿಧಾನ

ಇದು ಪಂಚತತ್ವಗಳ ಮಿಲನ. ಅಂದರೆ ನೀರು, ಎರಡು ವಿಧದ ಮಣ್ಣು, ಲದ್ದಿ, ಆವಿಗೆಯ ಬೂದಿ ಬೇಕಾಗುತ್ತದೆ. ಮಡಿಕೆ ಮಾಡಲು ಬರೀ ಮಣ್ಣಿದ್ದರೆ ಸಾಲದು ಅದರೊಂದಿಗೆ ಕೆಲವೊಂದನ್ನು ಕೂಡಿಸಬೇಕಾಗುತ್ತದೆ. ಅವುಗಳೆಂದರೆ ಕೆರೆಯ ಮಣ್ಣು, ಹೊಟ್ಟಮಣ್ಣು,ಕುದುರೆ ಲದ್ದಿ, ಮಡಿಕೆಸುಟ್ಟ ಬೂದಿಯನ್ನು ಹಾಕಿ ಸಮಪ್ರಮಾಣದಲ್ಲಿ ನೀರು ಬೆರೆಸಿ, ಹದವಾಗಿ ಕಲಸುವರು. ಈ ಮಿಶ್ರಣವನ್ನು ಒಂದು ದಿನ ಮೊದಲೇ ನೆನೆಸಿಡಲಾಗುತ್ತದೆ. ಕೆರೆಮಣ್ಣು ತುಂಬಾ ಗಟ್ಟಿಯಾಗಿದ್ದು, ಮೂಲವಾಗಿ ಕಲ್ಲಿನಂತಿರುತ್ತದೆ. ಇದು ಒಂದು ದಿನದ ಬಳಿಕ ನೀರಿನಲ್ಲಿ ನೆನೆದು ಮೃದು ಹೂವಿನಂತಾಗುವುದು. ಇದು ಜಿಗಿಯಾಗಿ, ಅಂಟಾಗಿರುತ್ತದೆ. ಇದರಲ್ಲಿ ಸಿಕ್ಕಿಹಾಕಿಕೊಂಡರೆ ಬಿಡಿಸಿಕೊಳ್ಳುವುದು ತುಂಬಾ ಕಷ್ಟ. ಆದ್ದರಿಂದ ಇದರೊಂದಿಗೆ ಅದರ ಸಮಪ್ರಮಾಣದಲ್ಲಿ ಹೊಟ್ಟಮಣ್ಣು (ಜಿಗಿ ಇರದ ಒಂದು ವಿಧದ ಮಣ್ಣು) ಮಿಶ್ರಣ ಮಾಡುವುದರಿಂದ ಇದರ ಗುಣಕಡಿಮೆಯಾಗುತ್ತದೆ. ಹೀಗೆ ಮಡಿಕೆಯನ್ನು ತಯಾರಿಸಿ ಅದನ್ನು ತಿಂಗಳುಗಳ ಕಾಲ ನೆರಳಲ್ಲಿ ಒಣಗಿಸಿ, ನಂತರ ಒಂದು ದಿನ ಬಿಸಿಲಲ್ಲಿ ಒಣಗಿಸಿ, ನಂತರ ಸುಡುವರು. ಎಲ್ಲರೂ ಇದು ‘ಬರಿಯ ಮಣ್ಣ ಕುಳ್ಳಿಯೆಂದು’ ಅಲ್ಲಗಳಿಯುತ್ತಾರೆ. ಆದರೆ, ಅವರಿಗೇನು ಗೊತ್ತು, ಅದರ ಹಿಂದಿನ ಕುಂಬಾರನ ಪರಿಶ್ರಮ. ಆತನ ಶ್ರಮ ಎಲ್ಲಿಯು ಕಾಣುವುದಿಲ್ಲಾ. ಆತಮಡಿಕೆ ಮಾಡಿ, ಅದನ್ನು ಬೆಂಕಿಯಲ್ಲಿ ಸುಟ್ಟು ಅದಕ್ಕೊಂದು ಹೊಸ ರೂಪ ನೀಡುವನು. ಸುಮಾರು ಒಂದು ತಿಂಗಳುಗಳ ಕಾಲವನ್ನು ಕುಂಬಾರತೆಗೆದುಕೊಂಡಿರುತ್ತಾನೆ.

ಊರಮಂದಿಗೆಲ್ಲಾ ಈ ಕುಂಬಾರನಿಂದಲೇ ಮಡಿಕೆ ಪೂರೈಕೆಯಾಗಬೇಕು. ದೇವತೆಯ ಪೂಜೆಗೂ ಸಹ ದೀಪಬೆಳಗಲು ಹಣತೆಯಂತು ಬೇಕೆ ಬೇಕು. ನಮ್ಮಊರಲ್ಲಂತೂ ದೀಪಗಳಿಂದ ಅಲಂಕಾರ ಮಾಡಿದ್ದನ್ನು ಇನ್ನೂ ಕಾಣಬಹುದು. ಊರ ದ್ವಾರಬಾಗಿಲಿಂದ ಪ್ರತಿಯೊಂದುಮನೆಮುಂದೆ, ಬೀದಿಯಕೊನೆಯಲ್ಲಿ ಸಾಲಾಗಿ ರಾತ್ರಿವೇಳೆ ದೀಪಹಚ್ಚುವರು. ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಸಾವಿರಾರು ಹಣತೆಗಳನ್ನು ಆ ಊರ ಕುಂಬಾರನೇ ನೀಡಬೇಕು. ಇದು ವಿಜಾಪೂರ ಜಿಲ್ಲೆಯ, ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಸಂಪ್ರದಾಯ.

ದೇವತೆಯ ಪ್ರತಿಷ್ಠಾನ

ಮಹಾನವಮಿಯಲ್ಲಿ 9 ದಿನಗಳವರೆಗೆ ದೇವತೆಯನ್ನು ಪ್ರತಿಷ್ಠಾನ ಮಾಡುವರು. ದಿನ ನಿತ್ಯ ಪೂಜೆ, ದೇವಿಪುರಾಣ ಓದುವರು. “ಮಣ್ಣಿನ ಕಾಯ ಮಣ್ಣಿಗೆ ಎಂಬಂತೆ, ಹಣತೆಗಳು ಅನಾಥವಾಗುತ್ತವೆ, ಹೆಣ್ಣಿಗೂ ಹಣತೆಗೂ ಅವಿನಾಭಾವ ಸಂಬಂಧ”