ಮಾಧ್ಯಮದ ಹಕ್ಕನ್ನು ಹತ್ತಿಕ್ಕುವುದು ಬೇಡ: ಟಿವಿಗಳಿಗೂ ಸ್ವಯಂ ನಿಯಂತ್ರಣವಿರಲಿ

ಪ್ರೇಕ್ಷಕರನ್ನು ಸದಾ ಗಮನದಲ್ಲಿಟ್ಟುಕೊಂಡು ಸುದ್ದಿಯನ್ನಾಗಲಿ ಅಥವಾ ಕಾರ್ಯಕ್ರಮವನ್ನಾಗಲಿ ಮಾಡುವಾಗ ಎಚ್ಚರವಹಿಸಬೇಕಾದುದು ಅನಿವಾರ್ಯ. ಇಲ್ಲಿ ತಪ್ಪಿಗೆ ಕ್ಷಮೆ ಇಲ್ಲ. ಆ ಎಚ್ಚರಿಕೆ ಮಾಧ್ಯಮಕ್ಕೆ ಬರಬೇಕು.

ಮಾಧ್ಯಮದ ಹಕ್ಕನ್ನು ಹತ್ತಿಕ್ಕುವುದು ಬೇಡ: ಟಿವಿಗಳಿಗೂ ಸ್ವಯಂ ನಿಯಂತ್ರಣವಿರಲಿ

ಟೆಲಿವಿಷನ್ ಮಾಧ್ಯಮ ಇಂದಿನ ದಿನಗಳಲ್ಲಿ ಜನಾಭಿಪ್ರಾಯ ರೂಢಿಸುವಲ್ಲಿ ಪ್ರಭಾವಿ ಎಂಬುದರಲ್ಲಿ ಎರಡು ಮಾತಿಲ್ಲ. ಖಾಸಗಿ ಸುದ್ದಿ ವಾಹಿನಿಗಳು ಬಂದ ಮೇಲೆ ಅವುಗಳ ಪ್ರಭಾವ ಮತ್ತು ಪರಿಣಾಮ ಮತ್ತಷ್ಟು ಹೆಚ್ಚುತ್ತಲೇ ಹೋಗುತ್ತಿದೆ. ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು  ವಿಶ್ವವಿದ್ಯಾಲಯಗಳ ಕಾಲೇಜುಗಳಲ್ಲಿ ಹೇಳಿಕೊಡುವ ಪಾಠದಲ್ಲಿ ವಿದ್ಯಾರ್ಥಿಗಳಿಗೆ ಭ್ರಮೆ ತುಂಬಲಾಗುತ್ತದೆ. ಆದರೆ ವಾಸ್ತವವಾಗಿ ನಮ್ಮ ಸಂವಿಧಾನದಲ್ಲಿ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಅದೇ ಗುಂಗು ನಮ್ಮ ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿಯೂ ಇದೆ.

ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಪತ್ರಿಕೋದ್ಯಮದ ಪ್ರಮುಖ ಮತ್ತು ನಿರ್ಣಾಯಕ ಪಾತ್ರ ವಹಿಸುವುದನ್ನು ಅಲ್ಲಗಳೆಯಲು ಆಗದು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಹೋರಾಟದಲ್ಲಿ ಪತ್ರಿಕೆಗಳ ಪಾತ್ರವು ಅತ್ಯಂತ ಮುಖ್ಯವಾಗಿತ್ತು. ಆಗ ಈ ಪತ್ರಿಕೋದ್ಯಮಕ್ಕೆ ಒಂದು ಗುರಿ ಇತ್ತು. ಉದ್ದೇಶವೂ ಮತ್ತು ಜವಾಬ್ದಾರಿಯೂ ಇತ್ತು. ಸ್ವಾತಂತ್ರ್ಯಾ ನಂತರದ ಹಲವು ವರ್ಷ ಈ ತತ್ವ ಮತ್ತು ಸಿದ್ಧಾಂತವನ್ನು ಹಿರಿಯ ಪತ್ರಕರ್ತರು ಮತ್ತು ಪತ್ರಿಕಾ ಸಂಸ್ಥೆಗಳು ಪಾಲಿಸಿಕೊಂಡು ಬಂದವು.

ಆದರೆ ಈಗ ಅದೇ ದಾರಿಯಲ್ಲಿ ಮಾಧ್ಯಮ ಕ್ಷೇತ್ರ ನಡೆಯುತ್ತಿದೆ ಎಂದು ಹೇಳಲಾಗದು. ಈಗ ಎಲ್ಲ ಉದ್ಯಮದಂತೆಯೇ ಮಾಧ್ಯಮ ಕ್ಷೇತ್ರವೂ ಆಗಿದೆ. ಒಂದು ಪತ್ರಿಕೆ ಮಾಡಲು ಅಥವಾ ಒಂದು ಟಿವಿ ಚಾನೆಲ್ ನ್ನು ಆರಂಭಿಸಲು ಅಪಾರ ಪ್ರಮಾಣದ ಹಣ ಹೂಡಿಕೆಯ ಅವಶ್ಯಕತೆ ಇದೆ. ಈಗ ಸ್ಪರ್ಧಾ ಯುಗ ಮತ್ತು ಮುಕ್ತ ಆರ್ಥಿಕ ನೀತಿಯ ಈ ಹಣಕಾಸು ವ್ಯವಹಾರ, ಮಾರುಕಟ್ಟೆಯ ವಾಣಿಜ್ಯ ವ್ಯವಹಾರವೆಲ್ಲ ನಿಂತಿರುವುದು ಗ್ರಾಹಕನ ಬೇಕು ಬೇಡ ಎನ್ನುವ ಬೇಡಿಕೆಯ ಮೇಲೆ. ಹಾಗಾಗಿ ಪತ್ರಿಕೋದ್ಯಮ ಸೇರಿದಂತೆ ಲಾಭ ಮತ್ತು ನಷ್ಟದ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ.

ಇಂದಿನ ದಿನಗಳಲ್ಲಿ ಪತ್ರಿಕೆ ಅಥವಾ ಟಿವಿ ವಾಹಿನಿಗಳನ್ನು ನಡೆಸುವವರಲ್ಲಿ ಹಾಕಿದ ಹಣ ವಾಪಸ್ ಬರಬೇಕು. ಎನ್ನುವ ಬಯಕೆ. ಇದು ಸಹಜ. ಈ ಅಪೇಕ್ಷೆಯಲ್ಲಿ ತಪ್ಪೇನಿಲ್ಲ. ಈ ಉದ್ಯಮ ತನಗೆ ಹೆಸರು ತಂದುಕೊಡಬೇಕು. ಹಾಗು ಬೇರೆ ಉದ್ಯಮಗಳಿದ್ದರೆ, ರಾಜಕಾರಣದಲ್ಲಿದ್ದರೆ ಅದನ್ನು ರಕ್ಷಿಸುವ ಗುರಾಣಿಯಾಗಿರಬೇಕೆಂದು ಅಪೇಕ್ಷೆ ಪಡುವವರೇ ಹೆಚ್ಚು. ಇಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವವರು ಬಹುತೇಕವಾಗಿ ಆಯಾ ಸಂಸ್ಥೆಗಳ ಸೂಚನೆಯಂತೆಯೇ ಅವರೇ ಹಾಕಿಕೊಟ್ಟ ದಾರಿಯಲ್ಲಿ ಹೋಗಬೇಕಾಗುತ್ತದೆ. ಇದು ಇಂದಿನ ಪತ್ರಕರ್ತರ ಅನಿವಾರ್ಯ ಸ್ಥಿತಿ. ಇದೆಲ್ಲ ಇಲ್ಲ ಎಂದು ಮೇಲ್ನೋಟಕ್ಕೆ ವಾದಿಸುವುದು ಕೇವಲ ಪತ್ರಿಕೋದ್ಯಮಕ್ಕೆ ಒಂದು ಪಾವಿತ್ರ್ಯ ಇದೆ ಎಂದು ಸಾಬೀತುಪಡಿಸುವ ಉದ್ದೇಶದಿಂದಷ್ಟೆ ಹೊರತು ವಸ್ತುಸ್ಥಿತಿಯಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾಸ್ವಾತಂತ್ರ್ಯಕ್ಕೆ ಆಗಿಂದ್ದಾಗ್ಗೆ ಆಳುವ ಪಕ್ಷಗಳ ಸರ್ಕಾರದಿಂದ ಅಡ್ಡಿ ಆತಂಕ ಕೇಳಿ ಬರುತ್ತಲೇ ಇದೆ. ಸರ್ಕಾರ ಮತ್ತು ನಮ್ಮ ಸಂಸದೀಯ ವ್ಯವಸ್ಥೆ ಈ ಮಾಧ್ಯಮಕ್ಕೆ ನೀಡಬೇಕಾದ ಮಾನ್ಯತೆ, ಸೌಲಭ್ಯವನ್ನು ನಿರೀಕ್ಷೆಯ ಮಟ್ಟದಲ್ಲಿ ಇಲ್ಲವಾದರೂ ಅವಶ್ಯಕತೆ ತಕ್ಕಂತೆಗೆ ನೀಡುತ್ತಾ ಬಂದಿದೆ.

ವಿಧಾನಸಭೆಯಲ್ಲಿ ಶಾಸಕರು ಕುಳಿತುಕೊಳ್ಳುವಂತೆಯೇ ಪತ್ರಿಕಾ ಗ್ಯಾಲರಿಯ ಸೌಲಭ್ಯವನ್ನು ಸ್ಫೀಕರ್ ಅವರು ಕುಳಿತುಕೊಳ್ಳುವ ಎಡಭಾಗದಲ್ಲಿ ಕಲ್ಪಿಸಲಾಗಿದೆ. ಕಳೆದ ಎರಡು ದಶಕಗಳಿಂದೀಚೆಗೆ ಟಿವಿ ವಾಹಿನಿಗಳು ಆರಂಭವಾದಾಗಿನಿಂದ ಕ್ಯಾಮೆರಾಗಳನ್ನಿಡಲು ಪ್ರೇಕ್ಷಕರ ಗ್ಯಾಲರಿಯಲ್ಲಿ ಸ್ಥಳಾವಕಾಶ ಮಾಡಲಾಗಿದೆ. ಹಾಗೆಯೇ ಛಾಯಾಗ್ರಾಹಕರಿಗೂ ಇದುವರೆಗೆ ಈ ಸೌಲಭ್ಯ ಕಲ್ಪಿಸಲಾಗಿತ್ತು.

ಟಿವಿ ವಾಹಿನಿಗಳು ಸಹಾ ವರ್ಷ ವರ್ಷವೂ ಹೆಚ್ಚುತ್ತಲೇ ಇವೆ. ಅವರಿಗೆಲ್ಲ ಸ್ಥಳಾವಕಾಶ ಮಾಡಿಕೊಡುವುದು ಸಹಾ ಸದನದ ನಿರ್ವಹಣೆಯನ್ನು ನಿಭಾಯಿಸುವ ಸ್ಪೀಕರ್ ಅವರಿಗೆ ಸೇರಿದ್ದು. ಇದುವರೆಗೆ ಎಲ್ಲವೂ ಸಲೀಸಾಗಿಯೇ ನಡೆದು ಬಂದಿತ್ತು. ಅನೇಕ ಸಂದರ್ಭಗಳಲ್ಲಿ ನಮ್ಮ ಶಾಸಕರು ವಿವಿಧ ಚಟುವಟಿಕೆಗಳನ್ನು ಕ್ಯಾಮರಾ ಮೂಲಕ ಸೆರೆ ಹಿಡಿದು ತೋರಿಸಲಾಗುತ್ತಿತ್ತು. ಕೆಲವರ ಚಟುವಟಿಕೆ ಅವರಿಗೂ, ಸದನಕ್ಕೂ ಮತ್ತು ಜನರಿಗೂ ಮುಜುಗರ ಮಾಡಿದ ಪ್ರಸಂಗಗಳು ಈಗಾಗಲೇ ನಡೆದಿವೆ.

ಈ ಹಿನ್ನೆಲೆಯಲ್ಲಿಯೋ ಅಥವಾ ಬೇರಾವ ಕಾರಣದಿಂದಲೋ ಈಗಿನ ಸ್ಪೀಕರ್ ಟಿ ವಿ ವಾಹಿನಿಗಳಿಗೆ ಸದನದ ಗ್ಯಾಲರಿಯಲ್ಲಿ ಅವಕಾಶ ನಿರಾಕರಿಸಿ, ಕೇಂದ್ರ ಸರ್ಕಾರದ ಒಡೆತನದಲ್ಲಿರುವ ದೂರದರ್ಶನಕ್ಕೆ ಮಾತ್ರ ಅವಕಾಶ ನೀಡಿ ಅವರು ನೀಡುವ  ದೃಶ್ಯವನ್ನು (ಕ್ಲಿಪ್ ಗಳನ್ನು) ಪಡೆಯುಬಹುದು ಎಂದು ಆದೇಶ ಮಾಡಿದ್ದಾರೆ. ಟಿ ವಿ ವಾಹಿನಿ ಗಳನ್ನು ಈಗ ಸದನದ ನೇರ ಕಲಾಪದಿಂದ ಹೊರಹಾಕಲಾಗಿದೆ. ಇದು ಸಹಜವಾಗಿಯೇ ದೃಶ್ಯ ಮಾಧ್ಯಮವನ್ನು ಸದನದ ಕಲಾಪದಿಂದ ನಿಷೇಧ ಮಾಡಿದಂತೆಯೇ. ಈ ನಿಷೇಧದ ವಿರುದ್ಧ ಮಾಧ್ಯಮದ ಪ್ರತಿನಿಧಿಗಳು ಸಭಾಧ್ಯಕ್ಷರ ಕ್ರಮವನ್ನು ಖಂಡಿಸಿದ್ದಾರೆ.

ನಿಜ. ಇದುವರೆಗೆ ಇದ್ದ ಸೌಲಭ್ಯವನ್ನು ಕಿತ್ತುಹಾಕುವುದು ಕೇವಲ ಟಿವಿ ಚಾನೆಲ್‍ಗಳಿಗೆ ಮಾತ್ರ ನಷ್ಟವಲ್ಲ. ಅದು ವೀಕ್ಷಕರಿಗೂ ನಷ್ಟವೇ. ಸಭಾಧ್ಯಕ್ಷರ ಈ ಕ್ರಮದಲ್ಲಿ ಸರ್ಕಾರದ ಪ್ರಭಾವ ಅಥವಾ ಯಾವರೀತಿಯ ಒತ್ತಡವಿದೆಯೋ ಅವರಿಗೇ ಗೊತ್ತು. 

ಕಲಾಪದ ವೇಳೆ ಸದಸ್ಯರ ಕೆಲವು ಅಸಹ್ಯಕರವಾದ ಚಟುವಟಿಕೆಯನ್ನು ಮರೆಮಾಚುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎನ್ನುವುದು ನಿಜವಾಗಿದ್ದರೆ ಅದು ಸರಿ ಕಾಣದು. ಸದನದ ಕಲಾಪ ಪಾರದರ್ಶಕವಾಗಿರಬೇಕು. ರಾಜ್ಯದ ಜನರು ತಮ್ಮ ಪ್ರತಿನಿಧಿಗಳು ಅಲ್ಲಿ ಏನು ಮಾಡುತ್ತಾರೆ ಅವರ ವರ್ತನೆ ಹೇಗಿರುತ್ತದೆ. ಅವರು ಏನು ಮಾತನಾಡುತ್ತಾರೆ, ಹೇಗೆ ಮಾತನಾಡುತ್ತಾರೆ ಯಾವ ವಿಷಯವನ್ನು ಮಾತನಾಡುತ್ತಾರೆ ಎಂದು ತಿಳಿಯುವ ಹಕ್ಕು ಜನರಿಗೆ ಇದೆ. ಈ ಅವಕಾಶದಿಂದ ಜನರನ್ನು ವಂಚಿಸುವುದು ವಿವೇಚನೆಯ ಮಾರ್ಗ ಎನಿಸದು. ಈ ಎಲ್ಲ ದೃಶ್ಯಗಳನ್ನು ಸರ್ಕಾರಿ ನಿಯಂತ್ರಿತ ದೂರದರ್ಶನ ಸೆರೆ ಹಿಡಿಯುತ್ತದೆ ಎಂದು ಹೇಳಲಾಗದು. ಹಾಗಾಗಿ ಕಲಾಪದ ನಿಜವಾದ ದೃಶ್ಯ ಟಿವಿ ಮಾಧ್ಯಮದ ಮೂಲಕ ಇನ್ನು ಮುಂದೆ ಅನಾವರಣ ಗೊಳ್ಳುವುದು ಅಸಾಧ್ಯ.

ಇದುವರೆಗೆ ಇದ್ದ ಸೌಲಭ್ಯದಿಂದ ಸರ್ಕಾರದ ಮಾನ ಹರಾಜು ಆಗುತ್ತಿದೆ ಎಂದು ಯಾರೂ ಭಾವಿಸಬೇಕಿಲ್ಲ. ವಾಸ್ತವವಾಗಿ ಬಹುತೇಕ ಟಿವಿ ವಾಹಿನಿಗಳು ಈಗಿನ ಬಿಜೆಪಿ ಮತ್ತು ಸರ್ಕಾರದ ತುತ್ತೂರಿಯಾಗಿಯೇ ಕೆಲಸ ಮಾಡುತ್ತಾ ಬಂದಿವೆ. ಅದನ್ನೇ ಈಗಲೂ ಮುಂದುವರಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಆದ್ದರಿಂದ ಈಗಿನ ಟಿವಿ ಚಾನೆಲ್‍ಗಳಿಂದ ಸರ್ಕಾರಕ್ಕೆ ಯಾವುದೇ ಹಾನಿ ಆಗುವ ಸಾಧ್ಯತೆ ಇಲ್ಲ ಎನ್ನಬಹುದು. ಆದರೂ ಸಭಾಧ್ಯಕ್ಷರು ಏಕೆ ಹೀಗೆ ಮಾಡಿದ್ದಾರೆ ಎನ್ನುವುದೇ ಈಗಿನ ಪ್ರಶ್ನೆ.

ಈ ಬದಲಾವಣೆಗೆ ಸಭಾಧ್ಯಕ್ಷರು ಇನ್ನೂ ಸ್ಷಷ್ಟವಾದ ಕಾರಣ ನೀಡುವುದು ಒಳ್ಳೆಯದು. ಇಲ್ಲವಾದರೆ ಈಗಿನ ಸ್ಪೀಕರ್ ಮತ್ತು ಸರ್ಕಾರದಿಂದ ಟಿವಿ ಮಾಧ್ಯಮಗಳ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ ಎನ್ನುವ ಆರೋಪಗಳು ಬರುವುದನ್ನು ಯಾರೂ ತಡೆಯಲು ಆಗದು.

ಸಂಸತ್ತಿನಲ್ಲಿರುವ ರೀತಿಯಲ್ಲೇ ರಾಜ್ಯ ವಿಧಾನಸಭೆಯಲ್ಲೂ ಮಾಡಲಾಗುವುದು ಎನ್ನುವುದಾದರೆ ಸಭಾಧ್ಯಕ್ಷರು ವಿಧಾನಮಂಡಲದ ಕಲಾಪವನ್ನು ವರದಿ ಮಾಡುವ ಹಿರಿಯ ಮಾಧ್ಯಮ ಪ್ರತಿನಿಧಿಗಳ ಸಭೆ ನಡೆಸಿ ತಮ್ಮ ಯೋಜನೆಯ ಉದ್ದೇಶವನ್ನು ಸಾಧಕ- ಬಾಧಕಗಳನ್ನು ಚರ್ಚಿಸಿ ಈ ತೀರ್ಮಾನಕ್ಕೆ ಬರಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ಮುಕ್ತ ಮನಸ್ಸಿನಿಂದ ಸಭಾಧ್ಯಕ್ಷರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತುಕತೆ ಮಾಡುವುದು ಉತ್ತಮ. 

ಸಂಸತ್ತಿನಲ್ಲಿರುವುದನ್ನೇ ಅನುಕರಿಸಲಾಗುವುದು ಎನ್ನುವುದಾದರೆ ಅಲ್ಲಿರುವಂತೆಯೇ ಟಿವಿ ಇರಲಿ ಪತ್ರಿಕೆಗಳಿರಲಿ ಅವರ ವೃತ್ತಿ ಕಾರ್ಯಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವುದು ಅವಶ್ಯ. ಈ ಬಗೆಗೆ  ಮಾಧ್ಯಮ ಪ್ರತಿನಿಧಿಗಳು ಸಹಾ ಸಭಾಧ್ಯಕ್ಷರ ಜೊತೆ ಸಹಕರಿಸಬೇಕು. ಏಕೆಂದರೆ ಮಾಧ್ಯಮ ರಂಗದಲ್ಲಿರುವವರು  ಲಭ್ಯವಾದ ಅನೇಕ ಸಂದರ್ಭ ಮತ್ತು ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡವರಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ ಇಂದಿನ ನಮ್ಮ ಬಹುತೇಕ ಟಿವಿ ವಾಹಿನಿಗಳ ಕಾರ್ಯಕ್ರಮ, ಅವುಗಳಲ್ಲಿ  ಪ್ರಸಾರವಾಗುವ ಸುದ್ದಿಯ ಸತ್ಯಾಸತ್ಯತೆ, ಪಕ್ಷಪಾತ ಧೋರಣೆ, ಅನವಶ್ಯಕವಾಗಿ ವೈಭವೀಕರಣ ಮತ್ತೆ ಕೆಲವು ಸಂದರ್ಭಗಳಲ್ಲಿ ಹಲವರ ಚಾರಿತ್ಯವನ್ನು ಹಾಳುಮಾಡುವ ಕಾರ್ಯಕ್ರಮ ಇತ್ಯಾದಿಗಳಿಂದ ಜನರೂ ರೋಸಿಹೋಗಿದ್ದಾರೆ. 

ಟಿ ವಿ ವಾಹಿನಿಗಳು ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದು ಹೇಳಲಾಗದು. ಪ್ರೇಕ್ಷಕರ ಭಾವನೆಗಳಿಗೆ ಟಿವಿ ಚಾನೆಲ್‍ಗಳಲ್ಲಿ ಮೂರುಕಾಸಿನ ಕಿಮ್ಮತ್ತು ಇಲ್ಲ. ಪ್ರತಿಯೊಂದು ಟಿವಿ ವಾಹಿನಿಗಳು ನಿಷ್ಟಕ್ಷಪಾತದಿಂದ ನಡೆದುಕೊಳ್ಳುತ್ತಿವೆ ಎಂದು ಯಾರೂ ಬೆನ್ನುತಟ್ಟುವವರಿಲ್ಲ. ಟಿಆರ್ ಪಿ ಪೈಪೋಟಿ ನಡೆಸುವ ಏಕಮಾತ್ರ ಉದ್ದೇಶದಿಂದ ಆಗುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗುತ್ತಿರುವ ಸೂಚನೆಗಳೂ ಯಾವ ಟಿವಿ ವಾಹಿನಿಗಳಲ್ಲೂ ಕಾಣುತ್ತಿಲ್ಲದಿರುವುದು ದುರ್ದೈವ.

ತಾನು ನೀಡುವ ಸುದ್ದಿಯ ಸತ್ಯಾಸತ್ಯೆಯನ್ನು ಖಚಿತಪಡಿಸಿಕೊಳ್ಳುವ ಪ್ರಾಮಾಣಿಕತೆ ಯಾವ ಟಿವಿ ವಾಹಿನಿಗಳಲ್ಲಿಯೂ ಕಾಣುತ್ತಿಲ್ಲ.ತಾನು ಮಾಡಿದ್ದೇ ಸರಿ ಎನ್ನುವ ದಾಷ್ಟ್ರ್ಯತನ ಕಾಣುತ್ತಿದೆ. ಇದು ಆರೋಗ್ಯಕರ ಲಕ್ಷಣವಲ್ಲ. ತಪ್ಪುಗಳನ್ನು ಪ್ರಸ್ತಾಪಿಸಿದಾಗ ಮತ್ತು ಕಾರ್ಯಕ್ರಮಗಳು ಸರಿ ಇಲ್ಲ ಎಂದು ಹೇಳಿದಾಗ ‘ರಿಮೋಟ್ ನಿಮ್ಮ ಕೈಯಲ್ಲಿದೆಯಲ್ಲವೇ’ ಎಂದು ಹೇಳಿ ನುಣುಚಿಕೊಳ್ಳುವುದು ಸುಲಭ. ಇದು ಬೇಜಾವಾಬ್ದಾರಿಯಲ್ಲದೆ ಮತ್ತೇನಲ್ಲ. ಜನರ ವಿಶ್ವಾಸ ಗಳಿಸುವುದು ಮತ್ತು ಸತ್ಯ ಸಂಗತಿಯನ್ನು ತೋರುವುದರಿಂದ ಆರೋಗ್ಯ ಪೂರ್ಣ ಸಮಾಜವನ್ನು ಸೃಷ್ಟಿಸಲು ಸಾಧ್ಯ ಆ ಕೆಲಸದತ್ತ ಟಿವಿಗಳು ಹೆಚ್ಚು ಗಮನ ನೀಡಬೇಕಿದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಆದರೆ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಒಳ್ಳೆಯ ಮನಸ್ಸಿರಬೇಕು ಅಷ್ಟೆ.

ಮಾಧ್ಯಮದ ಕೆಲಸವೇ ಆತುರದ್ದು. ವೇಳೆಯ ಜೊತೆ ಹೋರಾಟ ನಡೆಸಬೇಕು. ಪೈಪೋಟಿ ಎನ್ನುವುದು ಮಾಧ್ಯಮದಲ್ಲಿ ಪ್ರತಿಕ್ಷಣವೂ ಎದುರಿಸುವ ಸವಾಲು ಇದು ಎಲ್ಲರಿಗೂ ಅನ್ವಯ. ಈ ದಿಶೆಯಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಆ ತಪ್ಪುಗಳನ್ನು ಒಪ್ಪಿಕೊಂಡು ಮುನ್ನಡೆಯುವುದು ವಿವೇಕ. ಪ್ರೇಕ್ಷಕರನ್ನು ಸದಾ ಗಮನದಲ್ಲಿಟ್ಟುಕೊಂಡು ಸುದ್ದಿಯನ್ನಾಗಲಿ ಅಥವಾ ಕಾರ್ಯಕ್ರಮವನ್ನಾಗಲಿ ಮಾಡುವಾಗ ಎಚ್ಚರವಹಿಸಬೇಕಾದುದು ಅನಿವಾರ್ಯ. ಇಲ್ಲಿ ತಪ್ಪಿಗೆ ಕ್ಷಮೆ ಇಲ್ಲ. ಆ ಎಚ್ಚರಿಕೆ ಮಾಧ್ಯಮಕ್ಕೆ ಬರಬೇಕು.