ಮಾಲ್ ಮಾಯೆ ಮತ್ತು ಚಿಲ್ಲರ್ ಕಿ ದುಕಾನ್!

ತಾಯಿಯ ಮಡಿಲೇ `ಮಾಲ್’ ಆಗುತ್ತಿರುವಾಗ ಇನ್ನು ಇಂದಿನ ಮಕ್ಕಳಾಗಿರುವ, ಮುಂದಿನ ಪ್ರಜೆಗಳಾಗಲಿರುವ ಯುವ ಸಮೂಹ ಮಾಲ್‍ಗಳಿಂದ ದೂರವಿರಲು ಸಾಧ್ಯವೇ? ಅಲ್ಲಿ ಇಲ್ಲಿ ಕಾಣುತ್ತಿದ್ದ ಸ್ಮಾರ್ಟ್‍ಫೋನ್ ಈಗ ಪ್ರತಿಯೊಬ್ಬರ ಕೈಯಲ್ಲೂ ಇರುವಾಗ, ಮಾಲ್‍ಗಳು ಕೂಡ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್‍ಗಳಂತೆಯೇ ಅಸಂಖ್ಯ ಮಟ್ಟದಲ್ಲಿ ಹುಟ್ಟಿ, ಮಾಲ್‍ಗಳಿಲ್ಲದೇ ಜೀವನವೇ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಗಬಹುದು.

ಮಾಲ್ ಮಾಯೆ ಮತ್ತು ಚಿಲ್ಲರ್ ಕಿ ದುಕಾನ್!

ಭಾರತದ ಬೆನ್ನೆಲುಬು ಕೃಷಿ ಎನ್ನುತ್ತೇವೆ. ಹಾಗೆಯೇ ಭಾರತದ ಆತ್ಮ ಚಿಲ್ಲರೆ ಅಂಗಡಿಗಳು. ದೇಹದ ತುಂಬಾ ನರನಾಡಿಗಳಿದ್ದಂತೆ ಭಾರತದ ತುಂಬಾ ಚಿಲ್ಲರೆ ಅಂಗಡಿಗಳಿವೆ. ಕೃಷಿಯ ನಂತರದಲ್ಲಿ ಭಾರತದಲ್ಲಿ ಅತೀ ಹೆಚ್ಚು ಉದ್ಯೋಗ ಒದಗಿಸಿದ ಕ್ಷೇತ್ರ ಚಿಲ್ಲರೆ ಅಂಗಡಿಗಳದ್ದು. ನೀವು ಯಾವುದೇ ಬೀದಿಗೆ ಹೋದರೂ ಅಲ್ಲಿ ಚಿಲ್ಲರೆ ಅಂಗಡಿಗಳು ಸಿಗುತ್ತವೆ. ಉತ್ಪಾದಕರು ಮತ್ತು ಗ್ರಾಹಕರ ನಡುವಿನ ಅತೀ ದೊಡ್ಡ ಸೇತುವೆ ಆಗಿರುವ ಚಿಲ್ಲರೆ ಅಂಗಡಿಗಳ ಪಾತ್ರ ಜನಜೀವನದಲ್ಲಿ ಅತೀ ಮುಖ್ಯವಾಗಿಬಿಟ್ಟಿದೆ. ಚಿಲ್ಲರೆ ಅಂಗಡಿಗಳು ಇಲ್ಲದ ಭಾರತವನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೇನೋ?! 

ಹಾಗಾದರೆ, ಚಿಲ್ಲರೆ ಅಂಗಡಿ ಎಂದರೇನು? ಅದರ ಅರ್ಥವ್ಯಾಪ್ತಿಯೇನು? ಚಿಲ್ಲರೆ ಅಂಗಡಿಗಳಿಗೂ ಒಂದು ಇತಿಹಾಸವಿದೆ, ಒಂದು ಪರಂಪರೆಯಿದೆ. ಹಣವೇ ಹುಟ್ಟದಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಿ. ಆಗ ತಾನು ಬೆಳೆದ ಅಥವಾ ತನ್ನ ಬಳಿ ಇದ್ದ ವಸ್ತುಗಳನ್ನು ಮತ್ತೊಬ್ಬ ವ್ಯಕ್ತಿಗೆ ನೀಡಿ ತನಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳುವ ಮಾತನ್ನು ನಾವು ಕೇಳಿದ್ದೇವೆ. ಅದು ಆನಂತರದಲ್ಲಿ ಕಾಲಕ್ಕೆ ತಕ್ಕ ಹಾಗೆ ಬದಲಾಗಿ ಈಗಿನ ಚಿಲ್ಲರೆ ಅಂಗಡಿಗಳ ರೂಪ ಪಡೆಯಿತು. ಶತ ಶತಮಾನಗಳ ಹಿಂದೆ ತಾನು ಬೆಳೆದ ಅಥವಾ ಹೊಂದಿದ ವಸ್ತುಗಳನ್ನು ಆ ವ್ಯಕ್ತಿ ಒಂದು ನಿರ್ದಿಷ್ಟ ಜಾಗಕ್ಕೆ ಅಥವಾ ಪ್ರದೇಶಕ್ಕೆ ಕೊಂಡೊಯ್ಯುತ್ತಿದ್ದ. ಮಾರುವವರು ಹಾಗೂ ಕೊಳ್ಳುವವರು ಅಲ್ಲಿ ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ಸೇರಿ ತಮಗೆ ಬೇಕಾದ್ದನ್ನು ಕೊಂಡು ತಮ್ಮ ಬಳಿ ಇದ್ದುದನ್ನು ವಿನಿಮಯ ಮಾಡಿಕೊಂಡು ಬರುತ್ತಿದ್ದರು. ಕಾಲಕ್ರಮೇಣ ಈ ವ್ಯವಸ್ಥೆ ಸಾಕಷ್ಟು ಕುಟುಂಬಗಳಿರುವ ಬೀದಿಗಳಿಗೆ ಅಥವಾ ಪ್ರದೇಶಗಳಿಗೆ ವರ್ಗವಾಯಿತು. ಹಣ ಸೃಷ್ಟಿಯಾಯಿತು. ದುಡಿದ ಹಣದಿಂದ ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳುವ ಪರಂಪರೆ ಶುರುವಾಯಿತು. ವ್ಯಾಪಾರಸ್ಥರು ಜನರು ಇರುವ ಕಡೆ ಅಂಗಡಿ ತೆರೆದು, ಅವರಿಗೆ ಬೇಕಾದ ವಸ್ತುಗಳನ್ನು ಬೇರೆ ಬೇರೆ ಕಡೆಯಿಂದ ಖರೀದಿಸಿ ತಮ್ಮ ಅಂಗಡಿಯ ಮೂಲಕ ಜನರಿಗೆ ಮಾರತೊಡಗಿದರು. ಚಿಲ್ಲರೆ ಅಂಗಡಿಗಳು ಹೀಗೆ ಹುಟ್ಟಿಕೊಂಡವು. 

ವಸ್ತುಗಳನ್ನು ಖರೀದಿಸುವ ಗ್ರಾಹಕರ ಮನೋಸ್ಥಿತಿಗೆ ತಕ್ಕ ಹಾಗೆ ಚಿಲ್ಲರೆ ಅಂಗಡಿಗಳ ಚಿತ್ರಣ ಕೂಡ ಬದಲಾಗುತ್ತಾ ಬಂದಿದೆ. ಚಿಲ್ಲರೆ ಅಂಗಡಿಗಳು ಹುಟ್ಟುವ ಮುನ್ನ ವ್ಯಾಪಾರಸ್ಥ ಹಳ್ಳಿ ಹಳ್ಳಿ ಸುತ್ತಾಡಬೇಕಿತ್ತು. ತನಗೆ ದಕ್ಕಿದ್ದನ್ನು ಗ್ರಾಹಕರಿಗೆ ಮನವೊಲಿಸಿ ಮಾರಬೇಕಿತ್ತು. ಈ ಪ್ರಕ್ರಿಯೆಯಲ್ಲಿ ವ್ಯಾಪಾರಸ್ಥ ತಿಂಗಳುಗಟ್ಟಲೆ ಓಡಾಡುವ ಶ್ರಮ ಹಾಕಬೇಕಿತ್ತು. ಈ ಶ್ರಮದಿಂದ ತಪ್ಪಿಸಿಕೊಳ್ಳಲು ವ್ಯಾಪಾರಸ್ಥನ ಮನಸ್ಸಿನಲ್ಲಿ ಒಂದು ಕಡೆ ಅಂಗಡಿ ತೆರೆದು, ಅಲ್ಲಿ ತಾನು ಸಂಗ್ರಹಿಸಿ ತಂದ ವಸ್ತುಗಳನ್ನು ಸಂಗ್ರಹಿಸಿಟ್ಟು, ಗ್ರಾಹಕರಿಗೆ ಯಾವಾಗ ಬೇಕೋ ಆಗ ವಸ್ತುಗಳನ್ನು ಮಾರಾಟಮಾಡಬಹುದಾದ ಉಪಾಯ ಹೊಳೆದಿರಬೇಕು. ಅಲ್ಲಿಂದ ಚಿಲ್ಲರೆ ಅಂಗಡಿಗಳ ಕಲ್ಪನೆಗೆ ವಾಸ್ತವದ ನೆಲೆ ಸಿಕ್ಕಿರಬಹುದು. 

ಚಿಲ್ಲರೆ ಅಂಗಡಿ ಎಂದರೆ ಅಲ್ಲಿ ನಿಮಗೆ ಬೇಕಾದ ಪ್ರತಿಯೊಂದು ವಸ್ತುಗಳು ಸಿಗುತ್ತವೆ. ಗ್ರಾಹಕನ ಬೇಡಿಕೆಗೆ ತಕ್ಕಹಾಗೆ ಚಿಲ್ಲರೆ ಅಂಗಡಿ ಮಾಲೀಕ ವಸ್ತುಗಳನ್ನು ಸಂಗ್ರಹಿಸಿಟ್ಟು ಚಿಲ್ಲರೆ ಚಿಲ್ಲರೆಯಾಗಿಯೇ ಮಾರಾಟ ಮಾಡುತ್ತಾನೆ. ಮಕ್ಕಳು ಕೊಳ್ಳುವ ಒಂದು ರೂಪಾಯಿ ಚಾಕೋಲೇಟ್‍ನಿಂದ ಹಿಡಿದು, ಗೃಹಿಣಿಗೆ ಬೇಕಾದ ಬಾರ್‍ಸೋಪಿನವರೆಗೂ, ಸೊಳ್ಳೆಬತ್ತಿಯಿಂದ ಹಿಡಿದು ಬೀಡಿ-ಬೆಂಕಿಪೊಟ್ಟಣದವರೆಗೂ ಇಲ್ಲಿ ಎಲ್ಲವೂ ಲಭ್ಯ. ಇಂತಹ ಚಿಲ್ಲರೆ ಅಂಗಡಿಗಳು ಭಾರತದಲ್ಲಿ ಹನ್ನೇರಡು ಮಿಲಿಯನ್‍ಗಿಂತ ಹೆಚ್ಚಿವೆ. ಜಗತ್ತಿಗೆ ಬೇರೆ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಚಿಲ್ಲರೆ ಅಂಗಡಿಗಳ ವಿಚಾರದಲ್ಲಿ ಭಾರತ ಅತೀ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಭಾರತದಲ್ಲಿ ಕನಿಷ್ಟ 20-25 ಕುಟುಂಬಗಳಿಗೆ ಒಂದು ಚಿಲ್ಲರೆ ಅಂಗಡಿ ತನ್ನ ಸೇವೆ ಸಲ್ಲಿಸುತ್ತಿದೆ. ಕನಿಷ್ಟ 11 ಚಿಲ್ಲರೆ ಅಂಗಡಿಗಳಿಂದ 1000 ಜನ ತಮ್ಮ ಬದುಕಿಗೆ ಬೇಕಾದ ವಸ್ತುಗಳನ್ನು ಪ್ರತಿನಿತ್ಯ ಪಡೆಯುತ್ತಿದ್ದಾರೆ. ಜಗತ್ತಿಗೆ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಯುಎಸ್‍ಎ ನಲ್ಲಿ ಕನಿಷ್ಟ 1000 ಜನಕ್ಕೆ 3-4 ಚಿಲ್ಲರೆ ಅಂಗಡಿಗಳು ಸೇವೆ ಸಲ್ಲಿಸುತ್ತಿವೆ. ನಿಮಗೆ ಮತ್ತೊಂದು ಆಶ್ಚರ್ಯವೆನಿಸಬಹುದು; ಇಡೀ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಶೇ.7ರಷ್ಟು ಉದ್ಯೋಗಸ್ಥರನ್ನು ನೀಡಿರುವ ಕ್ಷೇತ್ರವೆಂದರೆ ಅದು ಚಿಲ್ಲರೆ ಅಂಗಡಿಗಳದ್ದೇ ಆಗಿದೆ. ಶೇ.14ರಷ್ಟು ಆದಾಯ ಭಾರತದಲ್ಲಿ ದೊರಕುತ್ತಿರುವುದು ಕೂಡ ಇದೇ ಚಿಲ್ಲರೆ ಅಂಗಡಿಗಳಿಂದ. ಚಿಲ್ಲರೆ ಅಂಗಡಿಗಳ ಮತ್ತೊಂದು ವಿಶೇಷತೆಯಿದೆ; ಯಾವುದೇ ಚಿಲ್ಲರೆ ಅಂಗಡಿಯನ್ನೇ ನೋಡಿ, ಆ ಅಂಗಡಿಯನ್ನು ನಡೆಸುವಾತ ಸ್ವತಃ ಅದರ ಮಾಲೀಕನಾಗಿರುತ್ತಾನೆ. ಸಣ್ಣ ಸಣ್ಣ ಗೃಹ ಉದ್ಯಮಗಳಲ್ಲಿ ಉತ್ಪಾದನೆಗೊಳ್ಳುವ ವಸ್ತುಗಳ ಮಾರಾಟ ಈ ಚಿಲ್ಲರೆ ಅಂಗಡಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಉದಾಹರಣೆಗೆ ಕೊಬ್ಬರಿ ಮಿಠಾಯಿ, ಮೇಣದ ಬತ್ತಿ, ಊದುಬತ್ತಿ, ಖಾರ ಇತ್ಯಾದಿ... ಇತ್ಯಾದಿ...

ಚಿಲ್ಲರೆ ಅಂಗಡಿ ಎಂಬುದು ಒಂದು ಕಡೆ ಸಣ್ಣ ಸಣ್ಣ ಗ್ರಾಹಕರ ಅನಿವಾರ್ಯತೆಗಳಿಗೆ ಸ್ಪಂದಿಸುತ್ತಿದ್ದರೆ, ಇನ್ನೊಂದು ಕಡೆಗೆ ಆಯಾ ಕ್ಷೇತ್ರದಲ್ಲಿ ಆಯಾ ಸಂಪ್ರದಾಯಕ್ಕೆ ಒಳಗಾಗಿ ಹುಟ್ಟಿಕೊಂಡಿರುವ ಗೃಹ ಉದ್ಯಮಗಳಿಗೂ ಮಾರುಕಟ್ಟೆ ಒದಗಿಸುತ್ತಲೇ ಬಂದಿದೆ. ಒಟ್ಟಾರೆಯಾಗಿ ಚಿಲ್ಲರೆ ಅಂಗಡಿಯೆಂಬುದು ಗ್ರಾಹಕ ಮತ್ತು ಉತ್ಪಾದಕನ ನಡುವಿನ ಉತ್ಸಾಹದಾಯಕ ಕೊಂಡಿಯಂತೆ ಕಂಡುಬರುತ್ತದೆ. ಈ  ಉತ್ಸಾಹ ಇನ್ನೆಷ್ಟು ದಿನ? 

ಮಾಲ್‍ಗಳ ಯುಗ; 

ಶತ- ಶತಮಾನಗಳಿಂದ ನಾವು ಚಿಲ್ಲರೆ ಅಂಗಡಿಗಳನ್ನು, ಈ ಚಿಲ್ಲರೆ ಅಂಗಡಿಗಳಿಗೆ ಬೆನ್ನೆಲುಬಾಗಿದ್ದ ಸಂತೆಗಳನ್ನು, ಜಾತ್ರೆಗಳನ್ನು ಕಂಡಿದ್ದೇವೆ. ನಮ್ಮ ನಿತ್ಯದ ಬದುಕಿನಲ್ಲಿ ಇವೆಲ್ಲಾ ಎಷ್ಟೊಂದು ವಿಶೇಷ ಪಾತ್ರ ವಹಿಸುತ್ತಲೇ ಬಂದಿವೆ ಎಂಬುದನ್ನು ವಿವರಿಸಲ ಅಸಾಧ್ಯ. ಈಗ ನಮ್ಮ ಕಣ್ಣಮುಂದೆ ಮಾಲ್‍ಗಳು ಕಾಣುತ್ತಿವೆ. ಮಾಲ್‍ಗಳ ಝಗಮಗಿಸುವಿಕೆ ನಮ್ಮನ್ನು ಸೆಳೆಸೆಳೆದು ಜೇನು ಖಾಲಿಮಾಡಿಸುತ್ತಿದೆ. ಶಾಪಿಂಗ್ ಮಾಲ್, ಶಾಪಿಂಗ್ ಸೆಂಟರ್ ಅಥವಾ ಶಾಪಿಂಗ್ ಆರ್ಕೆಡ್ ಎಂಬಿತ್ಯಾದಿ ರೂಪಗಳಲ್ಲಿ ಮಾಲ್‍ಗಳು ಸೆಳೆಯಲು ಆರಂಭಿಸಿವೆ. ಗಗನಚುಂಬಿ ಕಟ್ಟಡಗಳಲ್ಲಿ, ಏರ್‍ಕಂಡೀಷನ್‍ನ ತಣ್ಣನೆ ಗಾಳಿಗೆ ಮೈಯೊಡ್ಡಿ, ನಮಗೆ ಬೇಕಾದ ವಸ್ತುಗಳನ್ನು ಸ್ವ-ಸಹಾಯ ಪದ್ಧತಿಯಲ್ಲಿ ಸಂಗ್ರಹಿಸಿಕೊಳ್ಳುತ್ತಾ ಕ್ರೆಡಿಟ್ ಕಾರ್ಡನ್ನೋ, ಡೆಬಿಟ್ ಕಾರ್ಡನ್ನೋ ನೀಡಿ ಗೀಚಿಸಿ ಹೊರಕ್ಕೆ ಬರುವ ಎಲ್ಲಾ ವಯೋಮಾನದ ಜನರನ್ನು ನಾವು ಕಾಣುವಂತಾಗಿದೆ. ನಿಮಗೆ ಬೇಕಾದ ಪ್ರತಿಯೊಂದೂ ಈ ಮಾಲ್‍ಗಳಲ್ಲಿ ಸಿಗುವಂತಹ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಕಳೆದ ಹತ್ತು ವರ್ಷಗಳ ಹಿಂದಿನ ಭಾರತವೇ ಬೇರೆ, ಈಗ ಕಾಣುತ್ತಿರುವ ಭಾರತವೇ ಬೇರೆ. ಅನಿವಾರ್ಯ ವಸ್ತುಗಳನ್ನು ಕೊಳ್ಳಲೆಂದೇ ಅಂಗಡಿಗಳಿಗೆ, ಸಂತೆ-ಜಾತ್ರೆಗಳಿಗೆ ಹೋಗುತ್ತಿದ್ದ ಭಾರತದ ಜನ ಈಗ ಮಾಲ್‍ಗಳ ಝಗಮಗಿಸುವಿಕೆಗೆ ಮಾರುಹೋಗುತ್ತಿದ್ದಾರೆ. ತಮಗೆ ಬೇಡದಿದ್ದರೂ ವಸ್ತುಗಳನ್ನು ಖರೀದಿಸುವ ಖಯಾಲಿಗೆ ನಮ್ಮ ಜನ ಜೋತುಬಿದ್ದಂತೆ ಕಾಣುತ್ತಿದ್ದಾರೆ. ಮಾಲ್‍ಗಳ ವಿಶೇಷತೆ ಇರುವುದೇ ಗ್ರಾಹಕ ಒಳಕ್ಕೆ ಬಂದ ಕೂಡಲೇ ಅವನಿಗೆ ಬೇಕಾದ, ಬೇಡವಾದ ವಸ್ತುಗಳನ್ನೆಲ್ಲಾ ಅವನ ಆಸೆಬುರುಕತನಕ್ಕೆ ಒಡ್ಡಿಬಿಡುವುದೇ ಆಗಿದೆ. ಮಾಲ್‍ಗಳ ಮತ್ತೊಂದು ವಿಶೇಷತೆ ಎಂದರೆ, ಇವು ಆಲ್ ಇನ್ ಒನ್ ಸ್ಟೋರ್ ಗಳ ರೀತಿಯಲ್ಲಿ ಕೆಲಸಮಾಡುತ್ತವೆ. 

ಇಡೀ ಭಾರತದ ತುಂಬಾ ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವ ಮಾಲ್‍ಗಳ ಮೂಲ ಇತಿಹಾಸ ಇಂದು ನಿನ್ನೆಯದಲ್ಲ. 15-16ನೇ ಶತಮಾನಗಳಲ್ಲಿ ಮಾಲ್‍ಗಳ ನಿರ್ಮಾಣ ಮತ್ತು ಆ ಮೂಲಕ ವ್ಯವಹಾರ ನಡೆದಿದ್ದರ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಸಾಕಷ್ಟು ರೋಮಾಂಚನಕ್ಕೆ ಒಳಪಡಿಸುವ ರೋಮ್‍ನಲ್ಲಿ ಶಾಪಿಂಗ್ ಮಾಲ್‍ಗಳಿದ್ದವು! ಅಲ್ಲಿ ಟ್ರಜನ್ಸ್ ((Trajan’s)) ಶಾಪಿಂಗ್ ಮಾರ್ಕೆಟ್ ಅನಾದಿಕಾಲದ ಶಾಪಿಂಗ್ ಮಾಲ್‍ನ ಕಥೆಯನ್ನೇ ಹೇಳುತ್ತದೆ. ಇಸ್ತಾಂಬುಲ್‍ನ ದಿ ಗ್ರ್ಯಾಂಡ್ ಬಜಾರ್ 15ನೇ ಶತಮಾನದಲ್ಲಿಯೇ ಶಾಪಿಂಗ್ ಮಾಲ್ ಆಗಿ ಗಮನ ಸೆಳೆದಿತ್ತು. ಇದು ಈಗಲೂ ಕೂಡ ಜಗತ್ತಿನ ಅತೀ ದೊಡ್ಡ ವ್ಯವಹಾರ ಕೇಂದ್ರವಾಗಿ ಗಮನ ಸೆಳೆಯುತ್ತಲೇ ಇದೆ. ಈ ಮಾಲ್‍ನ ವಿಶೇಷತೆ ಎಂದರೆ, 58 ಬೀದಿಗಳನ್ನು ಒಟ್ಟುಗೂಡಿಸಿ 4000 ಅಂಗಡಿಗಳನ್ನು ಇದರೊಳಗೆ ತೆರೆಯಲಾಗಿತ್ತು. 19ನೇ ಶತಮಾನದಲ್ಲಿ ಅಲ್-ಅಬೀದಿಯಾ ಸಾಖ್ ಎಂಬ ಹೆಸರಿನ ಶಾಪಿಂಗ್ ಮಾಲ್ ಸಿರಿಯಾದಲ್ಲಿ ಹುಟ್ಟಿಕೊಂಡಿತ್ತು. ಇದನ್ನು ಈಗಲೂ ಅತೀ ದೊಡ್ಡ ಶಾಪಿಂಗ್ ಮಾಲ್ ಎಂದೇ ಕರೆಯಲಾಗುತ್ತದೆ. ಪ್ಯಾರೀಸ್‍ನಲ್ಲಿ 1628ರಲ್ಲಿ ದ ಮರ್ಚಂಟ್ ಡೈಸ್ ಎನ್‍ಫ್ಯಾಂಟ್ಸ್ ರೌಗ್ಸ್ ಎಂಬ ಹೆಸರಿನ ಶಾಪಿಂಗ್ ಮಾಲ್ ಸ್ಥಾಪನೆಗೊಂಡು ಈಗಲೂ ಕೂಡ ಅಸ್ತಿತ್ವ ಉಳಿಸಿಕೊಂಡಿದೆ. ದಿ ಆಕ್ಸ್‍ಫರ್ಡ್ ಎಂಬ ಮಾಲ್ ಇಂಗ್ಲೆಂಡ್‍ನಲ್ಲಿ 1774ರಲ್ಲಿ ಆರಂಭಗೊಂಡು ಈಗಲೂ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದೆ. ಹೀಗೆ, ಬೇರೆ ಬೇರೆ ದೇಶಗಳ ಇತಿಹಾಸ ಹುಡುಕಿದರೆ ಶತ- ಶತಮಾನಗಳ ಹಿಂದೆಯೇ ರಾಕ್ಷಸ ರೂಪಿ ಶಾಪಿಂಗ್ ಮಾಲ್‍ಗಳು ಇದ್ದವು ಎಂಬುದಕ್ಕೆ ಬಹಳಷ್ಟು ಸಾಕ್ಷಿಗಳು ಸಿಗುತ್ತವೆ. ಭಾರತ ಕೂಡ ಇದಕ್ಕೆ ಹೊರತಲ್ಲ; ನೂರು ವರ್ಷಗಳ ಹಿಂದೆಯೇ ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಟುಡೇ ಸ್ಪೆನ್ಸರ್ ಪ್ಲಾಜಾ ಎಂಬ ದೊಡ್ಡ ಶಾಪಿಂಗ್ ಮಾಲ್ ಇತ್ತು. 1983ರಲ್ಲಿ ಈ ಪ್ಲಾಜಾಕ್ಕೆ ಬೆಂಕಿ ತಗುಲಿ ಸರ್ವನಾಶವಾಯಿತು ಎಂಬ ಕಥೆ ನಮಗೆ ಸಿಗುತ್ತದೆ. 

ಬೃಹತ್ ಗಾತ್ರದ ಶಾಪಿಂಗ್ ಮಾಲ್‍ಗಳದ್ದೇ ಒಂದು ರೀತಿಯ ಸೆಳೆತವಾದರೆ, ಸಣ್ಣ ಮಟ್ಟದ ಶಾಪಿಂಗ್ ಮಾಲ್‍ಗಳ ಸೆಳೆತವೇ ಬೇರೆ. ಆದರೆ, ಈ ಎರಡೂ ಮಾಲ್‍ಗಳ ಉದ್ದೇಶ ಗ್ರಾಹಕನಿಗೆ ಒಂದೇ ಸೂರಿನಡಿ ಅವರಿಗೆ ಬೇಕಾದ ಎಲ್ಲವನ್ನೂ ಒದಗಿಸುವುದೇ ಆಗಿದೆ. ಓರ್ವ ಗ್ರಾಹಕ ಒಳಕ್ಕೆ ಬಂದನೆಂದರೆ ಅವನಿಗೆ ಬೇಕಾದ ಆಹಾರ ಸಾಮಾಗ್ರಿಗಳಿಂದ ಹಿಡಿದು, ಬಟ್ಟೆ, ಆಭರಣ, ಆಟದ ಸಾಮಾನು, ಮನೋರಂಜನಾ ವಸ್ತುಗಳವರೆಗೂ ಆತನ ಕೈಗೆ ದಕ್ಕುವಂತಹ ವ್ಯವಸ್ಥೆಮಾಡಲಾಗಿರುತ್ತದೆ. ಆದಷ್ಟು ಬ್ರಾಂಡೆಡ್ ವಸ್ತುಗಳದ್ದೇ ರಾಜ್ಯಭಾರ.

ಚಿಲ್ಲರೆ ಅಂಗಡಿಗಳ ವೈವಿಧ್ಯ ಮತ್ತು ಮಾಲ್‍ಗಳ ಆಂತರ್ಯ;

ಚಿಲ್ಲರೆ ಅಂಗಡಿಗಳಲ್ಲಿ ನೂರೆಂಟು ವೈವಿಧ್ಯಗಳಿವೆ. ರಸ್ತೆಬದಿಯಲ್ಲಿ ತರಕಾರಿ ಮಾರುವವರು, ಗೊಂಬೆ-ಬಟ್ಟೆಗಳನ್ನು ಮಾರಾಟಮಾಡುವವರು ಸೇರಿದಂತೆ ಸಣ್ಣಪುಟ್ಟ ವಾಹನಗಳಲ್ಲಿ ಪಾನಿಪೂರಿ, ಜ್ಯೂಸ್, ಐಸ್‍ಕ್ರೀಂ ಸೇರಿದಂತೆ ನೂರೆಂಟು ರೀತಿಯ ವಸ್ತುಗಳನ್ನು ಮಾರಾಟಮಾಡುವ ಬೀದಿಬದಿಯ ವ್ಯಾಪರಿಗಳನ್ನು ನೋಡಿರಬಹುದು. ಇವರು ಕೂಡ ಚಿಲ್ಲರೆ ವ್ಯಾಪಾರಸ್ಥರು. ಟೀ ಅಂಗಡಿ, ಪಾನ್‍ಬೀಡಾ ಸ್ಟಾಲ್, ಉಪಾಹಾರ ಮಂದಿರಗಳು, ಬೇಕರಿಗಳು ಸೇರಿದಂತೆ ಹತ್ತುಹಲವು ರೀತಿಯ ಒಂದೇ ವಸ್ತುವನ್ನು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಸ್ಥರು ಕೂಡ ಕಣ್ಣಿಗೆ ಕಾಣುತ್ತಾರೆ. ಹಗ್ಗದಿಂದ ಹಿಡಿದು ಎಳನೀರು ಮಾರುವ ಮಂದಿ ಕೂಡ ಇದೇ ಚಿಲ್ಲರೆ ವ್ಯಾಪಾರಸ್ಥರ ವ್ಯಾಪ್ತಿಗೆ ಸೇರುವವರು. ಚಿಲ್ಲರೆ ಅಂಗಡಿಗಳು ಅಥವಾ ಚಿಲ್ಲರೆ ವ್ಯಾಪಾರಸ್ಥರ ಜಗತ್ತು ವೈವಿಧ್ಯಮಯವಾದುದು. ಒಂದು ಕಡೆ ನಿಂತು ನಮ್ಮ ಗ್ರಾಹಕ ಹಾಲನ್ನು ಕೊಂಡುಕೊಂಡರೆ, ಮತ್ತೊಂದು ಕಡೆ ಹೋಗಿ ತರಕಾರಿ ಖರೀದಿಸುತ್ತಾನೆ. ಇನ್ನೊಂದು ಕಡೆ ತೆರಳಿ ಮಂಡಕ್ಕಿ ಕೊಳ್ಳುತ್ತಾನೆ. ಹೊಟ್ಟೆ ಹಸಿದರೆ ಮಗದೊಂದು ಕಡೆ ಹೋಗಿ ದೋಸೆ ತಿನ್ನುತ್ತಾನೆ. ಹೀಗೆ, ವೈವಿಧ್ಯಮಯ ರೀತಿಯಲ್ಲಿ ನಮ್ಮ ಚಿಲ್ಲರೆ ಪ್ರಪಂಚ ನಮ್ಮ ದೇಶದ ಗ್ರಾಹಕನನ್ನು ಸೆಳೆಯುತ್ತಾ ಬಂದಿದೆ. ಈ ಮೂಲಕ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. 

ಇದು ಒಂದು ಕಡೆ ನಿಂತು ಮಾರಾಟಮಾಡುವ ಚಿಲ್ಲರೆ ವ್ಯಾಪಾರಸ್ಥರ ಪ್ರಪಂಚವಾಯಿತು. ಇನ್ನೊಂದು ಇಂಥದ್ದೇ ಚಿಲ್ಲರೆ ವ್ಯಾಪಾರಸ್ಥರ ಪ್ರಪಂಚವಿದೆ. ಮಾರಾಟಗಾರರು ಬೀದಿಬೀದಿಗೆ ತೆರಳಿ, ಮನೆಮನೆಯ ಮುಂದೆ ನಿಂತು, ತಾವು ತಂದಿರುವ ವಸ್ತುಗಳ ಹೆಸರು ಕೂಗುತ್ತಾ ಗ್ರಾಹಕರನ್ನು ಸೆಳೆಯುವ ಜಂಗಮ ಚಿಲ್ಲರೆ ವ್ಯಾಪಾರಸ್ಥರನ್ನು ನೀವು ನೋಡಿಯೇ ನೋಡಿರುತ್ತೀರಿ. ಇವರಿಗೆ ಒಂದು ನೆಲೆ ಇರುವುದಿಲ್ಲ. ಇವರು ಹೋಗಿದ್ದಲ್ಲೇ ವ್ಯವಹಾರ. ಇದಕ್ಕೆ ಅತ್ಯುತ್ತಮ ಉದಾಹರಣೆ ಸ್ಟೀಲ್ ಪಾತ್ರೆ ಮಾರುವ ಗಾಡಿಯವನು, ಮನೆಮನೆಗೆ ಸೈಕಲ್‍ನಲ್ಲಿ ಹಾಲು ತಂದು ಹಾಕುವ ಹಾಲಿನವನು, ಹೂವು ತಂದು ಕೊಡುವ ಹೂವಿನವಳು..

ಭಾರತದ ಸಂಪ್ರದಾಯ ಹೊದ್ದಿರುವ ಸಂತೆಗಳದ್ದು ಮತ್ತೊಂದು ರೀತಿಯ ಪ್ರಪಂಚ. ಸಂತೆ ಎಂದರೆ ಅತೀ ಪ್ರಾಚೀನವಾದ ಒಂದು ಮಾರಾಟ ವ್ಯವಸ್ಥೆ. ಬೇರೆ ಬೇರೆ ಕಡೆಯ ವ್ಯಾಪಾರಸ್ಥರು ಬೇರೆ ಬೇರೆ ರೀತಿಯ ವಸ್ತುಗಳನ್ನು ಹೊತ್ತು ತಂದು ಒಂದು ನಿರ್ಧರಿತ ಸ್ಥಳದಲ್ಲಿ, ನಿರ್ಧರಿತ ವೇಳೆಯಲ್ಲಿ ಮಾರಾಟ ಮಾಡುವ ಜಾಗವೇ ಸಂತೆ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ಪ್ರತಿಯೊಂದೂ ಮಾರಾಟಕ್ಕೆ ಲಭ್ಯ. ಸಂತೆ ಎಂಬುದೇ ಈಗಿನ ಮಾಲ್‍ಗಳ ಮೂಲ ಇರಬಹುದು ಎನಿಸುತ್ತದೆ. ಇಂತಹ ಸಂತೆಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಥವಾ ಸಣ್ಣಪುಟ್ಟ ನಗರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕುಟುಂಬದ ಜನ ಸಂತೆಗೆ ಹೋಗಿ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ತರುವ ಸಂಭ್ರಮವೇ ಬೇರೆ. ಇದು ಭಾರತದ ಚಿಲ್ಲರೆ ವ್ಯಾಪಾರದ ಒಂದು ಸ್ಪಷ್ಟ ಕನ್ನಡಿ. ಗ್ರಾಹಕರು ಮತ್ತು ಮಾರಾಟಗಾರರು ಸಮಾಗಮವಾಗುವ ಸ್ಥಳವೇ ಸಂತೆ. ಸೋಮವಾರದ ಸಂತೆ, ಮಂಗಳವಾರದ ಸಂತೆ, ಗುರುವಾರ ಸಂತೆ, ಭಾನುವಾರ ಸಂತೆ ಎಂದೆಲ್ಲಾ ಸ್ಥಳೀಯವಾಗಿ ಕರೆಯಲಾಗುತ್ತದೆ. ಇಡೀ ದೇಶದಲ್ಲಿ ಇಂತಹ 42ಸಾವಿರಕ್ಕಿಂತ ಹೆಚ್ಚಿನ ಸಂತೆಗಳಿವೆ. 

ಚಿಲ್ಲರೆ ಅಂಗಡಿಗಳ ಇನ್ನೊಂದು ಅದ್ಭುತವಾದ ಜಗತ್ತಿದೆ. ಅದು ಜಾತ್ರೆಗಳದ್ದು. ಭಾರತದಲ್ಲಿರುವವರಿಗೆ ಜಾತ್ರೆಗಳ ಸಂಭ್ರಮ ಏನೆಂದು ಗೊತ್ತು. ಬಹಳಷ್ಟು ಜಾತ್ರೆಗಳು ಜಾತಿ ಮತ್ತು ಧರ್ಮದ ಆಧಾರದಲ್ಲಿ ನಡೆಯುತ್ತವೆ. ಈ ಜಾತ್ರೆಗಳಲ್ಲಿ ಆಯಾ ಸ್ಥಳದ, ಕ್ಷೇತ್ರದ ವೈಶಿಷ್ಟ್ಯಪೂರ್ಣ ಆಹಾರಗಳನ್ನು ಕಾಣಬಹುದು. ಇಡೀ ದೇಶದಲ್ಲಿ ಪ್ರತಿ ವರ್ಷ ಬೇರೆ ಬೇರೆ ಸಂದರ್ಭಗಳಲ್ಲಿ 2500ಕ್ಕಿಂತ ಹೆಚ್ಚಿನ ಜಾತ್ರೆಗಳು ನಡೆಯುತ್ತವೆ. ಇಲ್ಲಿ ಸಾವಿರದ ಹತ್ತತ್ತಿರ ಅಂಗಡಿಮುಂಗಟ್ಟುಗಳು ತೆರೆದಿರುತ್ತವೆ. ಒಂದು ಜಾತ್ರೆಯಲ್ಲಿ ಲಕ್ಷಾಂತರ ರೂ.ಗಳ ಚಿಲ್ಲರೆ ವ್ಯಾಪಾರ ನಡೆಯುತ್ತದೆಂದರೆ ಆಶ್ಚರ್ಯಪಡಬೇಕಿಲ್ಲ. 

ಸರ್ಕಾರವೇ ಮುಂದೆ ನಿಂತು ಕೃಷಿಯಾಧರಿತ ಮಾರುಕಟ್ಟೆಗಳನ್ನು ನಿರ್ಮಿಸಿದೆ. ಇಲ್ಲಿ ಕೃಷಿಕರು ಬೆಳೆದ ವಸ್ತುಗಳನ್ನು ಚಿಲ್ಲರೆ ಚಿಲ್ಲರೆಯಾಗಿ ಮಾರಾಟಮಾಡಲಾಗುತ್ತಿದೆ. ಈ ಮೂಲಕ ತಾಜಾ ಹಣ್ಣುಗಳು, ಆಹಾರ ಉತ್ಪನ್ನಗಳು ಹಾಗೂ ತರಕಾರಿಗಳು ಸೇರಿದಂತೆ ಹಲವು ವಸ್ತುಗಳು ಸಿಗುತ್ತಿವೆ. ಇನ್ನು ಕಿರಾಣಿ ಅಂಗಡಿಗಳು ಮತ್ತು ಚಿಲ್ಲರೆ ಅಂಗಡಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಸಣ್ಣ ಸಣ್ಣ ಪ್ರದೇಶಗಳಲ್ಲಿ ಇವುಗಳ ಪ್ರಾಮುಖ್ಯತೆಯನ್ನು ಗಮನಿಸಬಹುದು. ಅತೀ ಕಡಿಮೆ ಬಂಡವಾಳದ ಈ ಅಂಗಡಿಗಳಲ್ಲಿ ಸಾಮಾನ್ಯವಾಗಿ ಮಾಲೀಕರೇ ಇರುತ್ತಾರೆ. ಅವರೇ ಕೆಲಸಗಾರರೂ ಕೂಡ ಆಗಿರುತ್ತಾರೆ. ಇವುಗಳ ನಂತರದ ಸ್ಥಿತಿ ಜನರಲ್ ಸ್ಟೋರ್‍ಗಳದ್ದು. ಇಲ್ಲಿ ಬ್ರಾಂಡೆಡ್ ಮತ್ತು ಸ್ಥಳೀಯ ಉತ್ಪನ್ನಗಳು ಸಿಗುತ್ತವೆ. ಔಷಧಿಗಳನ್ನೇ ಮಾರುವ ಮೆಡಿಕಲ್ ಶಾಪ್ಸ್ ಕೂಡ ಈ ಚಿಲ್ಲರೆ ಅಂಗಡಿಗಳ ವ್ಯಾಪ್ತಿಯ ಒಂದು ವ್ಯವಸ್ಥೆ. ಹಾಗೆಯೇ, ಅಕ್ಕಿ ಅಂಗಡಿ, ಸಣ್ಣಪುಟ್ಟ ಎಲೆಕ್ಟ್ರಾನಿಕ್ ಸೇರಿದಂತೆ ಒಂದೇ ವಿಧದ ವಸ್ತುಗಳ ಬೇರೆ ಬೇರೆ ಅಂಗಡಿಗಳು ಕೂಡ ಈ ಚಿಲ್ಲರೆ ಅಂಗಡಿಗಳ ವೈವಿಧ್ಯತೆಯಲ್ಲಿ ಬರುತ್ತವೆ. 

ಇದು ಚಿಲ್ಲರೆ ಅಂಗಡಿಗಳ ಮಾತಾಯಿತು. ಇನ್ನು ಮಾಲ್‍ಗಳಲ್ಲೂ ಕೂಡ ಬೇರೆ ಬೇರೆ ವಿಧಗಳಿವೆ. ಸೂಪರ್ ಮಾರ್ಕೆಟ್‍ಗಳು, ಹೈಪರ್ ಮಾರ್ಕೆಟ್‍ಗಳು, ಡಿಪಾರ್ಟ್‍ಮೆಂಟಲ್ ಸ್ಟೋರ್‍ಗಳು, ಡಿಸ್ಕೌಂಟ್ ಸ್ಟೋರ್‍ಗಳು, ಮಹಾ ಶಾಪಿಂಗ್ ಮಾಲ್‍ಗಳು ಸೇರಿದಂತೆ ಬಹಳಷ್ಟನ್ನು ಭಾರತದಲ್ಲಿ ಕಾಣಬಹುದು. ಮಾಲ್‍ಗಳ ಮಾಲೀಕ ಯಾರು? ಎಂಬುದೇ ನಮಗೆ ಗೊತ್ತಿಲ್ಲದೆ ನಾವು ಈ ಶಾಪಿಂಗ್‍ಮಾಲ್‍ಗಳಲ್ಲಿ ವಸ್ತುಗಳನ್ನು ಖರೀದಿಸುತ್ತೇವೆ. ಚಿಲ್ಲರೆ ಅಂಗಡಿಗಳು ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ಇಷ್ಟೇ ಸ್ಥಳ ಬೇಕೆಂಬ ನಿಯಮವಿರುವುದಿಲ್ಲ. ಆದರೆ, ಬಿಗ್ ಬಜಾರ್, ಸೂಪರ್ ಮಾರ್ಕೆಟ್, ಫುಡ್ ವಲ್ರ್ಡ್ ನಂತಹ ಶಾಪಿಂಗ್ ಮಾಲ್‍ಗಳಿಗೆ ಕನಿಷ್ಟ ಇಷ್ಟೇ ಚದರಡಿ ಸ್ಥಳ ಬೇಕು. ಇಂತಿಷ್ಟೇ ಮಹಡಿ ಇರಬೇಕು ಎಂಬಿತ್ಯಾದಿ ನಿಯಮಗಳಿವೆ. ಕನಿಷ್ಟ 90ಸಾವಿರ ಚದರಡಿ ಜಾಗದಲ್ಲಿ ಬಿಗ್ ಬಜಾರ್ ನಂತಹ ಮಾಲ್‍ಗಳು ಸೃಷ್ಟಿಗೊಳ್ಳುತ್ತವೆ. ವ್ಯವಹಾರ ಕೂಡ ಆನ್‍ಲೈನ್ ಮೂಲಕವೇ ಹೆಚ್ಚು ನಡೆಯುತ್ತದೆ. ಮೊದಮೊದಲು ಮಾಲ್‍ಗಳಲ್ಲಿ ಆಹಾರೇತರ ವಸ್ತುಗಳನ್ನಷ್ಟೇ ಮಾರಾಟ ಮಾಡಲಾಗುತ್ತಿತ್ತು. ಗೃಹೋಪಯೋಗಿ ವಸ್ತುಗಳು, ಫುಟ್‍ವೇರ್‍ನಂತಹ ವಸ್ತುಗಳ ಮಾರಾಟ ಈ ಮಾಲ್‍ಗಳಲ್ಲಿ ಯಥೇಚ್ಛವಾಗಿತ್ತು. ಆದರೆ, ಭಾರತದ ಚಿಲ್ಲರೆ ಮಾರುಕಟ್ಟೆಯ ರುಚಿ ಹತ್ತಿಸಿಕೊಂಡ ವಿದೇಶಿ ಹೂಡಿಕೆದಾರರು ಆ ಚಿಲ್ಲರೆ ಮಾರುಕಟ್ಟೆಯ ಮೇಲೆ ಈಗ ಹಿಡಿತ ಸಾಧಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. 2012ರಲ್ಲಿ ವಿದೇಶಿ ನೇರ ಹೂಡಿಕೆಗೆ ಭಾರತ ಅವಕಾಶಮಾಡಿಕೊಟ್ಟಿದ್ದೇ ತಡ ದೊಡ್ಡ ದೊಡ್ಡ ಮಾಲ್‍ಗಳು ಭಾರತದ ಚಿಲ್ಲರೆ ಮಾರುಕಟ್ಟೆಯ ಮೇಲೆ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಭಾರತದ ಚಿಲ್ಲರೆ ಮಾರುಕಟ್ಟೆ ಇಡೀ ಜಗತ್ತಿನ ಟಾಪ್-5 ಮಾರುಕಟ್ಟೆಗಳಲ್ಲಿ ಒಂದು. ವಿದೇಶಿ ಮಾಲ್‍ಗಳಿಗೆ ಇಷ್ಟು ಮಾಹಿತಿ ಸಾಕಿತ್ತು. 

ಮೊದಮೊದಲು ದೆಹಲಿ, ಬೆಂಗಳೂರು, ಮುಂಬೈನಂತಹ ಕಡೆ ದೊಡ್ಡದೊಡ್ಡ ಮಾಲ್‍ಗಳು ಪ್ರವೇಶಿಸಿದವು. ಬೀದಿ ಬದಿ ವ್ಯವಹಾರ ಮಾಡುವ ವ್ಯವಹಾರಸ್ಥರು ಕೂಡ ಬೆಚ್ಚಿಬೀಳುವಂತಾಯಿತು. ಕೊತ್ತಂಬರಿ, ಟಮೋಟ, ಈರುಳ್ಳಿಯಂತಹ ಸಣ್ಣಪುಟ್ಟ ಆಹಾರ ವಸ್ತುಗಳು ಕೂಡ ಈ ಮಾಲ್‍ಗಳಲ್ಲಿ ಬಿಕರಿಗೆ ಬಂದವು. ಸ್ವಂತ ಮಾಲೀಕತ್ವದ ಚಿಲ್ಲರೆ ಅಂಗಡಿಗಳು ನಿಜಕ್ಕೂ ತಲ್ಲಣಗೊಂಡಿದ್ದು ಆಗಲೇ. 

ಈಗ ಬಿಗ್ ಬಜಾರ್, ಸೂಪರ್ ಮಾರ್ಕೆಟ್‍ನಂತಹ ಮಾಲ್‍ಗಳು ಸಣ್ಣಪುಟ್ಟ ನಗರಗಳಿಗೂ ಕಾಲಿಡುತ್ತಿವೆ. 2012ರ ಹಿಂದಿನವರೆಗೆ ಚಿಲ್ಲರೆ ಅಂಗಡಿಗಳು ಮುಕ್ತಮಾರುಕಟ್ಟೆಯ ಭಯದಲ್ಲಿಯೇ ಬದುಕುವಂತಾಯಿತು. ಕಳೆದ 50 ವರ್ಷಗಳಲ್ಲಿ ಚಿಲ್ಲರೆ ಅಂಗಡಿಗಳ ಮಾರುಕಟ್ಟೆ ವಿಸ್ತಾರಗೊಳ್ಳುತ್ತಲೇ ಬಂದಿತ್ತು. ಕಳೆದ 10 ವರ್ಷಗಳಲ್ಲಿ ಮಾಲ್‍ಗಳಂತಹ 2500ಕ್ಕಿಂತ ಹೆಚ್ಚಿನ ಸೂಪರ್ ಮಾರ್ಕೆಟ್‍ಗಳು ಭಾರತದಲ್ಲಿ ಕಾಣಿಸಿಕೊಂಡವು. ಮುಂದಿನ 5 ವರ್ಷಗಳಲ್ಲಿ ಮತ್ತೆ ಕನಿಷ್ಟವೆಂದರೂ 2500ಕ್ಕಿಂತ ಹೆಚ್ಚಿನ ಮಾಲ್‍ಗಳು ಇಡೀ ದೇಶದ ಚಿಲ್ಲರೆ ಪ್ರಪಂಚವನ್ನು ಆಳಲು ಹೊರಟಿವೆ. ವಾಲ್‍ಮಾರ್ಟ್, ಟೆಸ್ಕೋದಂತಹ ಜಾಗತಿಕಮಟ್ಟದ ಚಿಲ್ಲರೆ ಹೂಡಿಕೆ ಸಂಸ್ಥೆಗಳು ಈಗಾಗಲೇ ಭಾರತವನ್ನು ಹೆದರಿಸಿಟ್ಟಿವೆ. ಇಡೀ ದೇಶದ ನರನಾಡಿಯಾಗಿರುವ ಚಿಲ್ಲರೆ ಅಂಗಡಿಗಳ ಮೇಲೆ ಈ ಜಾಗತಿಕ ಮಟ್ಟದ ಚಿಲ್ಲರೆ ಹೂಡಿಕೆ ಸಂಸ್ಥೆಗಳು ವೈರಸ್‍ನಂತೆ ದಾಳಿಮಾಡುತ್ತಿವೆ. ಉದ್ಯೋಗಸೃಷ್ಟಿ ಹೆಸರಿನಲ್ಲಿ ನಡೆಯುತ್ತಿರುವ ವಿದೇಶಿ ನೇರ ಹೂಡಿಕೆಯ ಈ ಮಹಾ ಮಾಲ್‍ಗಳ ಮೂಲಕ 15 ಮಿಲಿಯನ್ ಚಿಲ್ಲರೆ ಅಂಗಡಿಗಳ ಮೇಲೆ ಕಾರ್ಮೋಡ ಕವಿಸಲಾಗುತ್ತಿದೆ. 

ಭಾರತದಲ್ಲೀಗ ಹೊಸ ನಾಗರೀಕತೆ ಪ್ರವೇಶ ಪಡೆದಿದೆ. ಪಶ್ಚಿಮ ದೇಶಗಳ ಸಂಸ್ಕೃತಿ ಜೊತೆಗೆ ಮಾಲ್‍ಗಳ ಸಂಸ್ಕøತಿ ಕೂಡ ಭಾರತದ ಮಹಾನಗರಗಳಲ್ಲಿ ಮಾತ್ರವಲ್ಲ, ಸಣ್ಣಪುಟ್ಟ ನಗರಗಳಲ್ಲೂ ನೋಡಲು ಸಿಗುತ್ತಿದೆ. ಮಾಲ್‍ಗಳ ಸಂಸ್ಕೃತಿಯೇ ಭಾರತದಂತಹ ದೇಶಕ್ಕೆ ವಿರುದ್ಧವಾದವು ಎಂಬ ವಾದವೂ ಇದೆ. ನಮ್ಮ ದೇಶದ ಜನ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಅವಲಂಭಿಸಿದವರು. ಅತೀ ಹೆಚ್ಚಾಗಿ ಸ್ಥಳೀಯ ಮಾರುಕಟ್ಟೆಗೆ ಜೀವಾಳವಾದವರು. ಅಂಗಡಿಯಿಂದ ಅಂಗಡಿಗೆ ಹೋಗಿ ಚೌಕಾಸಿಮಾಡುತ್ತಾ ವ್ಯವಹಾರ ನಡೆಸುವ ನಮ್ಮ ಜನರಿಗೆ ಇದ್ದಕ್ಕಿದ್ದಹಾಗೆ ಈಗ ಮಾಲ್‍ಗಳ ಮೇಲೆ ಪ್ರೀತಿ ಹೆಚ್ಚಾಗತೊಡಗಿದೆ. ಪ್ರತಿಯೊಂದೂ ಒಂದೇ ಕಡೆ ಸಿಗುತ್ತದೆ ಎಂಬ ಅಂಶಕ್ಕಿಂತ ಹೆಚ್ಚಾಗಿ ಮಾಲ್‍ಗಳ ಸೆಳೆತ ಇಲ್ಲಿ ಕೆಲಸಮಾಡುತ್ತಿದೆ. 5-15 ವರ್ಷದ ಮಕ್ಕಳು ಹೆಚ್ಚಾಗಿ ಇಲ್ಲಿ ಆಕರ್ಷಣೆಗೆ ಒಳಗಾಗುತ್ತಿರುವುದು ಗೊಂಬೆಗಳ ಕಾರಣದಿಂದ. ತನ್ನ ಜೊತೆಗಿನ ಸ್ನೇಹಿತರು ಮಾಲ್‍ಗಳಿಗೆ ಹೋಗಿಬಂದು ಹೇಳುವ ರೋಚಕ ಕಥೆಗಳು ಮಾಲ್‍ಗಳಿಗೆ ಹೋಗದ ಮಕ್ಕಳನ್ನು ಸೆಳೆಯುತ್ತಿರುವಂತಿದೆ. 15-25 ವರ್ಷದೊಳಗೆ ಯುವಕ/ಯುವತಿಯರ ತಲೆಯೊಳಗೆ ಮಾಲ್ ಸಂಸ್ಕೃತಿಯೇ ತಮ್ಮ ಸಂಸ್ಕೃತಿ ಎಂಬಂತೆ ಬಿಂಬಿಸಲಾಗಿದೆ. ಇನ್ನೂ 25-45 ವರ್ಷದೊಳಗಿನವರಿಗೆ ಮಾಲ್‍ಗಳೆಂದರೆ ಅದೊಂದು ಶಾಪಿಂಗ್ ಮತ್ತು ಡಿನ್ನರ್ ಜಾಗ. 

ಭಾರತದ ಮಾರುಕಟ್ಟೆ ಸಂಸ್ಕೃತಿ ಬದಲಾಗುತ್ತಿದೆ. ಮಿಲಿಯನ್‍ಗಟ್ಟಲೆ ‘ಶಾಪಿಂಗ್ ಕ್ರೇಜಿ ನಾಗರೀಕರು’ ಅತೀ ವೇಗವಾಗಿ ಮಾಲ್‍ಗಳತ್ತ ದೌಡಾಯಿಸುತ್ತಿದ್ದಾರೆ. ವಿದೇಶಿ ಹೂಡಿಕೆಯಿಂದ ಫಳಫಳಿಸುವ ಮಾಲ್‍ಗಳು ಮೇಲ್ನೋಟಕ್ಕೆ ಕೇವಲ ಒಂದು ಕ್ರೇಜ್‍ನಂತೆಯೇ ಕಂಡುಬರುತ್ತವೆ. ಆದರೆ, ಅದರತ್ತ ಸೆಳೆಯಲ್ಪಡುತ್ತಿರುವ ಶಾಪಿಂಗ್ ಕ್ರೇಜಿ ನಾಗರೀಕರ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಶಾಪಿಂಗ್ ಕ್ರೇಜಿ ನಾಗರೀಕರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ದೊಡ್ಡ ದೊಡ್ಡ ಮಾಲ್‍ಗಳು ಯಥೇಚ್ಛವಾಗಿ ಮಹಾನಗರ, ನಗರ, ಪಟ್ಟಣಗಳಲ್ಲಿ ಹುಟ್ಟಿಕೊಳ್ಳುತ್ತಿವೆ. ಜಾಗತೀಕರಣ ಮತ್ತು ಆಧುನಿಕತೆ ಎರಡರ ಸಮ್ಮೇಳನದಂತಿರುವ ಮಾಲ್‍ಗಳು ಹೆಚ್ಚಾಗಿ ವಿದೇಶಿ ಮೂಲದ ಕಂಪನಿಗಳ ಬಂಡವಾಳವನ್ನೇ ಹೊಂದಿರುತ್ತವೆ. ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಮಾಲ್‍ಗಳು ಈಗಾಗಲೇ ಭಾರತದ ಶೇ.10ರಷ್ಟು ಆದಾಯಕ್ಕೆ ಕೈಹಾಕಿವೆ. ಭಾರತ ಒಂದರಲ್ಲಿಯೇ 500 ಬಿಲಿಯನ್ ಡಾಲರ್‍ನಷ್ಟು ಹಣವನ್ನು ಈ ಮಾಲ್‍ಗಳು ವರ್ಷವೊಂದರಲ್ಲಿ ಕಮಾಯಿಸುತ್ತಿವೆ. ಇವುಗಳ 2018-19ರ ಗುರಿ 800 ಬಿಲಿಯನ್ ಡಾಲರ್ ಆದಾಯ ಮಾಡುವುದು. ಭಾರತದ ಬಹುತೇಕ ರಾಜ್ಯಗಳು ಸೂಪರ್ ಮಾರ್ಕೆಟ್‍ಗಳ ಸರಪಳಿ ವ್ಯವಹಾರಕ್ಕೆ ಈಗಾಗಲೇ ಹಸಿರು ನಿಶಾನೆ ತೋರಿಸಿವೆ. ಕನಿಷ್ಟ 1 ಮಿಲಯನ್‍ಗಿಂತ ಹೆಚ್ಚಿನ ಜನಸಂಖ್ಯೆ ಇರುವ ಕಡೆ ಇಂತಹ ಚಿಲ್ಲರೆ ಮಾರಾಟದ ಸೂಪರ್ ಮಾರ್ಕೆಟ್‍ಗಳ ಸರಪಳಿ ತಲೆಯೆತ್ತುತ್ತಿದೆ. ಚಿಲ್ಲರೆ ಅಂಗಡಿಗಳ ವಿಚಾರಕ್ಕೆ ಬಂದರೆ ಇಲ್ಲಿಗೆ ಸರಬರಾಜಾಗುವ ವಸ್ತುಗಳನ್ನು ಓರ್ವ ಮಧ್ಯವರ್ತಿ ಹಿಡಿತದಲ್ಲಿ ಪಡೆದಿರುತ್ತಾನೆ. ಆದರೆ, ಮಾಲ್‍ಗಳ ವಿಚಾರದಲ್ಲಿ ನೇರವಾಗಿ ಮಧ್ಯವರ್ತಿ ರಹಿತ ಖರೀದಿ ಇರುವುದರಿಂದ ಬೆಲೆಯಲ್ಲೂ ಕೂಡ ವ್ಯತ್ಯಾಸ ಕಾಣಬಹುದು. ಇದು ಪಕ್ಕದ ಸಂತೆಯಲ್ಲಿ 50ರೂ.ಗಳಿಗೆ ಕೆ.ಜಿ. ಈರುಳ್ಳಿ ಸಿಗುವಾಗ ಮಾಲ್‍ಗಳಲ್ಲಿ 25-30 ರೂ.ಗಳಿಗೆ ಈರುಳ್ಳಿ ಮಾರಲಾಗುತ್ತದೆ. ಇಂತಹ ಹತ್ತುಹಲವು ಉದಾಹರಣೆಗಳನ್ನು ಕಾಣಬಹುದು. ಮಾಲ್‍ಗಳ ಮಾಲೀಕರು ಗ್ರಾಹಕನ ಕಣ್ಣಿಗೆ ಕಾಣದಿದ್ದರೂ ಆ ಮಾಲೀಕ ಹೋಲ್‍ಸೇಲ್ ಕಂಪನಿಗಳ ಜೊತೆ ನೇರ ಒಪ್ಪಂದ ಮಾಡಿಕೊಂಡು ಜಂಟಿ ವ್ಯವಹಾರಕ್ಕೆ ಮುಂದಾಗಿರುತ್ತಾನೆ. ಮಾಲ್‍ಗಳಲ್ಲಿ ಒಂದು ಕಡೆ ಕಣ್ಣಿಗೆ ಹಬ್ಬ, ಇನ್ನೊಂದು ಕಡೆ ಆಫರ್‍ಗಳ ಸುರಿಮಳೆ. ಹೀಗಿದ್ದಾಗ ಗ್ರಾಹಕ `ಕೊಳ್ಳುಬಾಕ’ ಆಗದಿರುತ್ತಾನೆಯೇ? 

ಮಾಲ್‍ಗಳು ಹಳ್ಳಿಗೂ ಕಾಲಿಡುತ್ತಿವೆ!;

ಮಾಲ್‍ಗಳು ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತ ಎಂಬ ಮಾತಿತ್ತು. ಆದರೆ, ಇಡೀ ಜಗತ್ತೇ ಈಗ ಒಂದು ಹಳ್ಳಿ. ಹಾಗಿದ್ದಾಗ, ಮಾಲ್‍ಗಳು ಮಾತ್ರ ಮಹಾನಗರಗಳಿಗಷ್ಟೇ ಸೀಮಿತವಾಗಿರಲು ಸಾಧ್ಯವೇ? ಮಾಲ್ ಸಂಸ್ಕೃತಿ ಮಹಾನಗರಗಳಿಂದ ನಗರಗಳಿಗೆ, ನಗರಗಳಿಂದ ಪಟ್ಟಣಗಳಿಗೆ, ಪಟ್ಟಣಗಳಿಂದ ಹಳ್ಳಿಗಳಿಗೆ ಸರಾಗವಾಗಿ ದಾಟತೊಡಗಿದೆ. ಗ್ರಾಮೀಣ ಚಿಲ್ಲರೆ ಅಂಗಡಿಗಳು ಕೂಡ ಈಗ ಕಣ್ಣೀರು ಹಾಕುವ ಪರಿಸ್ಥಿತಿಗೆ ಬರತೊಡಗಿವೆ. ಚಿಲ್ಲರೆ ಕೈಗಾರಿಕಾ ವಸ್ತುಗಳನ್ನು ಮಾರುವ ರೂಪದಲ್ಲಿ ಮಾಲ್‍ಗಳು ಹಳ್ಳಿಗಳಿಗೆ ಪ್ರವೇಶಿಸುತ್ತವೆ. ಐಟಿಸಿ ಎಂಬ ಕಂಪನಿ ‘ಚೌಪಾಲ್ ಸಾಗರ್’ ಎಂಬ ಮೊಟ್ಟಮೊದಲ ಗ್ರಾಮೀಣ ಮಾಲ್ ಒಂದನ್ನು ಆರಂಭಿಸಿದೆ. ಕೃಷಿಕರಿಗೆ ಬೇಕಾದ ಸಣ್ಣಪುಟ್ಟ ವಸ್ತುಗಳಿಂದ ಹಿಡಿದು, ದೊಡ್ಡ ದೊಡ್ಡ ಯಂತ್ರಗಳವರೆಗೆ ಈ ಮಾಲ್‍ನ ಮೂಲಕ ವಿತರಿಸಲಾಗುತ್ತಿದೆ. ಡಿಸಿಎಂ ಶ್ರೀರಾಮ್ ಗ್ರೂಪ್ ‘ಹರಿಯಾಲಿ ಬಜಾರ್’ ಎಂಬ ಮಾಲ್ ಒಂದನ್ನು ಗ್ರಾಮೀಣ ಜನರಿಗಾಗಿಯೇ ಆರಂಭಿಸಿದೆ. ಗೋದ್ರೇಜ್ ಗ್ರೂಪ್ ‘ಆಧಾರ್’ ಎಂಬ ಮಾಲನ್ನು ಆರಂಭಿಸಿ ಕೃಷಿಕರಿಗೆ ಒನ್ ಸ್ಟಾಪ್ ಶಾಪ್ ಎಂಬ ಸಂಸ್ಕೃತಿಯ ನಶೆ ಏರಿಸುತ್ತಿದೆ. ಎಸ್ಕಾಟ್ರ್ಸ್ ಮತ್ತು ಟಾಟಾ ಕೆಮಿಕಲ್ಸ್ ಕೂಡ ಕೃಷಿಕರನ್ನೇ ಗುರಿಯಾಗಿಸಿಕೊಂಡು ಮಾಲ್‍ಗಳನ್ನು ಆರಂಭಿಸತೊಡಗಿದೆ. ನಂತರದ ದಿನಗಳಲ್ಲಿ ಮಹಾನಗರಗಳ ಜನ ಕೊಳ್ಳುಬಾಕರಾದಂತೆಯೇ ಗ್ರಾಮೀಣ ಜನ ಕೂಡ ಮಾಲ್ ಸಂಸ್ಕೃತಿಗೆ ಒಳಗಾಗಿ ಕೊಳ್ಳುಬಾಕರಾಗುವುದರಲ್ಲಿ ಸಂದೇಹ ಕಾಣುವುದಿಲ್ಲ. 

ಚಿಲ್ಲರೆ ಅಂಗಡಿಗಳು ಮತ್ತು ಮಾಲ್‍ಗಳ ಅನುಕೂಲ ಮತ್ತು ಅನಾನುಕೂಲ;

ಚಿಲ್ಲರೆ ಅಂಗಡಿಗಳು ನೇರವಾಗಿ ತನ್ನ ಬಳಿಯಿರುವ ಜನರನ್ನೇ ಗುರಿಯಾಗಿಸಿಕೊಂಡಿರುತ್ತವೆ. ಭಾರತ ಅಭಿವೃದ್ಧಿಶೀಲ ದೇಶ. ಇಲ್ಲಿ ಬಡವರು ಮತ್ತು ಮಧ್ಯಮ ವರ್ಗದವರೇ ಹೆಚ್ಚು. ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಾಗಿರುವ ಸ್ಥಳಗಳಲ್ಲಿ ಚಿಲ್ಲರೆ ಅಂಗಡಿಗಳ ವ್ಯಾಪಾರ ಕೂಡ ದೊಡ್ಡ ಮಟ್ಟದಲ್ಲಿಯೇ ಇರುತ್ತದೆ. ಚಿಲ್ಲರೆ ಅಂಗಡಿಯ ಸುತ್ತಮುತ್ತವೇ ಜನಜೀವನ ಇರುವುದರಿಂದ ಹಣವಿಲ್ಲದಿದ್ದಾಗ ಸಾಲ ಕೂಡ ದೊರೆಯುವಂತಿರುತ್ತದೆ. ತಕ್ಷಣವೇ ಬೇಕಾದ ವಸ್ತುವನ್ನು ಚಿಲ್ಲರೆ ಹಣ ಕೊಟ್ಟು ಪಡೆಯುವಂತೆಯೂ ಇರುತ್ತದೆ. ಜೊತೆಗೆ ನೇರವಾಗಿ ಅಂಗಡಿಯ ಮಾಲೀಕನ ಮೇಲೆ ನಂಬಿಕೆಯಿಟ್ಟು ವ್ಯವಹಾರ ಮಾಡಬಹುದಾಗಿರುತ್ತದೆ. ಆದರೆ, ಜೊತೆಗೆ ಒಂದಿಷ್ಟು ಅನಾನುಕೂಲಗಳು ಕೂಡ ಇವೆ. ಚಿಲ್ಲರೆ ಅಂಗಡಿಗಳಲ್ಲಿ ವೈಜ್ಞಾನಿಕವಾಗಿ ಸೃಷ್ಟಿಗೊಂಡ ಆಹಾರ ಪದಾರ್ಥಗಳಿರುವುದಿಲ್ಲ. ಇರುವ ಪದಾರ್ಥಗಳಿಗೆ ಸುರಕ್ಷತೆಯಿರುವುದಿಲ್ಲ. ಕಾಪಿಡಬೇಕಾದ ವಸ್ತುಗಳನ್ನು ಹೇಗೆ ಬೇಕೋ ಹಾಗೆ ಇಟ್ಟಿರಲಾಗುತ್ತದೆ. ಸೊಳ್ಳೆಬತ್ತಿಯ ಜೊತೆ ತಲೆನೋವಿನ ಮಾತ್ರೆ ಇಟ್ಟಿರುವುದನ್ನು ಕೂಡ ನಾವು ಕಾಣಬಹುದಾಗಿರುತ್ತದೆ. 

ಆದರೆ, ಮಾಲ್‍ಗಳ ವಿಚಾರದಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತದೆ. ಜೊತೆಗೆ ಕಡಿಮೆ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಪಡೆಯಬಹುದು. ಅಂತೆಯೇ, ಎಲ್ಲಾ ವಸ್ತುಗಳಿಗೂ ತೆರಿಗೆ ಕಟ್ಟುವ ಮೂಲಕ ದೇಶಕ್ಕೂ ಅನುಕೂಲವಾಗುತ್ತದೆ. ಆದರೆ, ಇಷ್ಟಕ್ಕೆ ಮಾತ್ರ ನಾವು ಮಾಲ್‍ಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವಂತಿಲ್ಲ. ದೇಶಕ್ಕೆ ತೆರಿಗೆ ರೂಪದಲ್ಲಿ ಹಣ ಸಿಕ್ಕರೂ ನಾವು ಕೊಳ್ಳುವ ವಸ್ತು ಯಾವುದೋ ಬಹುರಾಷ್ಟ್ರೀಯ ಕಂಪನಿಗಳದ್ದಾಗಿರುತ್ತದೆ. ನಾವು ಕೊಡುವ ಹಣ ವಿದೇಶಕ್ಕೆ ರವಾನೆಯಾಗುತ್ತದೆ. ಸ್ಥಳೀಯವಾಗಿ ಉತ್ಪಾದಿಸಲ್ಪಡುವ ಯಾವುದೇ ವಸ್ತುವಿಗೂ ಮಾಲ್‍ಗಳ ಕಾರಣದಿಂದ ಬೆಲೆ ಸಿಗದೇ ಹೋಗಬಹುದು. ಸ್ಥಳೀಯ ಸಂಸ್ಕೃತಿಯ ಮೇಲೆ ಆಗುವ/ಆಗುತ್ತಿರುವ ದೌರ್ಜನ್ಯ ಕೂಡ ನಾವು ಮಾಲ್‍ನಲ್ಲಿ ಕಾಣಬಹುದು. 

ಚಿಲ್ಲರೆ ಅಂಗಡಿಗಳು ನಮ್ಮ ಕಣ್ಣೆದುರೇ ವ್ಯವಹಾರ ನಡೆಸುತ್ತವೆ. ಆದರೆ, ಮಾಲ್‍ಗಳು ಪ್ರತಿ ಬೀದಿಯಲ್ಲೂ ಇರಲು ಸಾಧ್ಯವಿಲ್ಲ. ಮಾಲ್‍ಗಳಿಗೆ ಹೋಗಬೇಕೆಂದರೆ ಬಹಳಷ್ಟು ಕಡೆ ನಗರದಿಂದ ಹೊರಗೆಯೇ ಹೋಗಬೇಕು. ನಗರದ ಹೊರಭಾಗದಲ್ಲಿಯೇ ಹೆಚ್ಚಾಗಿ ದೊಡ್ಡ ಜಾಗದಲ್ಲಿ ಮಾಲ್‍ಗಳನ್ನು ಸೃಷ್ಟಿಸಲಾಗಿರುತ್ತದೆ. ಬೇಕಾದಾಗೆಲ್ಲಾ ನಾವು ಚಿಲ್ಲರೆ ಅಂಗಡಿಗೆ ಹೋಗಿ ಬರಬಹುದು. ಮಾಲ್‍ಗಳಿಗೆ ಹಾಗೆ ಹೋಗಲು ಸಾಧ್ಯವೇ? 
ಭವಿಷ್ಯದಲ್ಲಿ ಮಾಲ್‍ಗಳು; 

ಮಾಲ್ ಸಂಸ್ಕೃತಿ ಎಂದರೇನು?- ಹಾಗೆಂದು ಪ್ರಶ್ನೆ ಹಾಕಿಕೊಂಡು ಹೋದಾಗ ಸಿಕ್ಕ ಉತ್ತರ- `ಕೊಳ್ಳುಬಾಕತನ, ಕೊಳ್ಳುಬಾಕತನ ಹಾಗೂ ಕೊಳ್ಳುಬಾಕತನ’. ಈ ಕೊಳ್ಳುಬಾಕತನವನ್ನು ಗ್ರಾಹಕನಲ್ಲಿ ಅವನಿಗೇ ಗೊತ್ತಿಲ್ಲದೇ ಮೂಡಿಸುವುದೇ ಮಾಲ್ ಸಂಸ್ಕೃತಿ! ಮನುಷ್ಯನ ಹಪಾಹಪಿತನ ಮತ್ತು ಆತನೊಳಗಿರುವ ಆಸೆಬುರುಕುತನ ಒಟ್ಟಾಗಿ ಸೇರಿ ಮಾಲ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮನುಷ್ಯನ ಈ ಒಳ ಬೇಗುದಿಯನ್ನು ತಿಳಿದುಕೊಂಡಂತೆ ಮಾಲ್‍ಗಳು ಕೂಡ ವರ್ತಿಸುತ್ತಿರುವುದರಿಂದ ಎಲ್ಲೆಡೆಯೂ ಮಾಲ್‍ಗಳೇ ಸೃಷ್ಟಿಯಾಗಬಹುದೇನೋ? 

ಮಾಲ್‍ಗಳು ಹೆಚ್ಚಾದಷ್ಟು ಒಂದು ದೇಶ ಸ್ಥಿತಿವಂತ ದೇಶ ಆಗಿಬಿಡುತ್ತದೆ ಎಂಬುದು ದುರಂತದ ಮಾತೇ ಸರಿ. ಈಗಿನ ಅತ್ಯಾಧುನಿಕ ಯುಗದಲ್ಲಿ ಕ್ಷಣಿಕತೆಗೆ ಹೆಚ್ಚು ಬೆಲೆಯಿದೆ. ಮಾಲ್‍ಗಳು ನೀಡುವ ಆಮಿಷ ಸಣ್ಣಪುಟ್ಟದ್ದೇನಲ್ಲ. ಜನ ಹೆಚ್ಚು ಅವಲಂಭಿಸಿರುವ ಸ್ಮಾರ್ಟ್ ಫೋನ್‍ಗಳಲ್ಲಿ, ಟಿವಿಗಳಲ್ಲಿ, ಫೇಸ್‍ಬುಕ್‍ನಂತಹ ಸಾರ್ವಜನಿಕ ಜಾಲತಾಣಗಳಲ್ಲಿ ಮಾಲ್‍ಗಳು ನೀಡುತ್ತಿರುವ ಆಫರ್ ಎಂಬ ಆಮಿಷಪೂರಿತ ಜಾಹೀರಾತುಗಳು ಬಹಳಷ್ಟು ಬಾರಿ ಮಾಲ್‍ಗಳ ಭವಿಷ್ಯವನ್ನು ಹೇಳಿಬಿಡುತ್ತವೆ. ಶ್ರೀಮಂತ ಜನರಷ್ಟೇ ತಮ್ಮಷ್ಟಕ್ಕೆ ತಾವೇ ಹೇರಿಕೊಂಡಿದ್ದ ಮಾಲ್ ಸಂಸ್ಕೃತಿ ಮಹಾನಗರಗಳಿಗಷ್ಟೇ ಸೀಮಿತವಾಗಿದ್ದರೆ ಭಯಪಡುವ ಅವಶ್ಯಕತೆಯಿರಲಿಲ್ಲ. ಈಗ ನಗರ, ಪಟ್ಟಣ, ಹಳ್ಳಿಗಳಿಗೂ ಮಾಲ್‍ಗಳು ಬಂದು ಕೂರುತ್ತಿವೆ. ಈ ಮಾಲ್‍ಗಳ ಮಡಿಲಲ್ಲಿ ನಮ್ಮ ನಿಮ್ಮ ಮಕ್ಕಳು ಆಡತೊಡಗಿವೆ. ತಾಯಿಯ ಮಡಿಲೇ `ಮಾಲ್’ ಆಗುತ್ತಿರುವಾಗ ಇನ್ನು ಇಂದಿನ ಮಕ್ಕಳಾಗಿರುವ, ಮುಂದಿನ ಪ್ರಜೆಗಳಾಗಲಿರುವ ಯುವ ಸಮೂಹ ಮಾಲ್‍ಗಳಿಂದ ದೂರವಿರಲು ಸಾಧ್ಯವೇ? ಅಲ್ಲಿ ಇಲ್ಲಿ ಕಾಣುತ್ತಿದ್ದ ಸ್ಮಾರ್ಟ್‍ಫೋನ್ ಈಗ ಪ್ರತಿಯೊಬ್ಬರ ಕೈಯಲ್ಲೂ ಇರುವಾಗ, ಮಾಲ್‍ಗಳು ಕೂಡ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್‍ಗಳಂತೆಯೇ ಅಸಂಖ್ಯ ಮಟ್ಟದಲ್ಲಿ ಹುಟ್ಟಿ, ಮಾಲ್‍ಗಳಿಲ್ಲದೇ ಜೀವನವೇ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಗಬಹುದು.