ಪ್ರೇಮಿಗಳ ಅಸ್ಥಿಪಂಜರ- ಅಸ್ಥಿಪಂಜರವಾಗುತ್ತಿರುವ ಪ್ರೇಮ!

ಈ ಪ್ರೇಮಿಗಳು ಮೊಟ್ಟಮೊದಲ ಬಾರಿಗೆ ಕಂಡುಬಂದಾಗ ಇಡೀ ಜಗತ್ತೇ ನಿಬ್ಬೆರಗಾಗಿತ್ತು. ಬಹಳ ವಿಶೇಷವೆಂದರೆ, ಆ ದೃಶ್ಯದಲ್ಲಿ ಗಮನ ಸೆಳೆದಿದ್ದು ಆ ಪ್ರೇಮಿಗಳು ಮಲಗಿರುವ ರೀತಿ. ಹೆಣ್ಣು ಆಕಾಶದ ಕಡೆ ಮುಖ ಮಾಡಿಕೊಂಡು ಮಲಗಿದ್ದಾಳೆ. ಪಕ್ಕದಲ್ಲಿಯೇ ಇರುವ ಗಂಡು ತನ್ನ ಪ್ರೇಯಸಿಯನ್ನು ನೋಡಿಕೊಂಡೇ ಪ್ರಾಣ ಬಿಟ್ಟಂತಿದೆ. ಪ್ರೇಯಸಿಯನ್ನು ನೋಡುತ್ತಿರುವ ಪ್ರೇಮಿ ಇಲ್ಲಿ ಸಾವಿರ ಭಾವಗಳನ್ನು ಮೂಡಿಸುತ್ತಿದ್ದಾನೆ.

ಪ್ರೇಮಿಗಳ ಅಸ್ಥಿಪಂಜರ- ಅಸ್ಥಿಪಂಜರವಾಗುತ್ತಿರುವ ಪ್ರೇಮ!

ಭೂಮಿ ಮತ್ತು ಪ್ರೇಮ- ನನಗೆ ಈಗಲೂ ಒಂದು ರಹಸ್ಯವೇ! ಈ ರಹಸ್ಯದ ಪ್ರೇಮ ಮತ್ತು ಭೂಮಿಯೊಳಗೆ ಪ್ರತಿನಿತ್ಯ ಒಂದಲ್ಲ ಒಂದು ನಿಗೂಢಗಳು ಅನಾವರಣ ಆಗುತ್ತಲೇ ಇರುತ್ತವೆ. ಆ ನಿಗೂಢಗಳೋ ಕೆಲವೊಮ್ಮೆ ಮನುಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿ ಹಾಕಿಬಿಡುತ್ತವೆ; ಮತ್ತೆ ಕೆಲವೊಮ್ಮೆ ಮನುಷ್ಯ ಅದೆಷ್ಟು ಬುದ್ದಿವಂತಿಕೆ ತೋರಿಸಿದರೂ ಅವನ ಕುಬ್ಜತೆಯ ಅಳತೆ ಎಷ್ಟು ಎಂಬುದನ್ನು ಕೂಡ ತೋರಿಸಿಬಿಡುತ್ತವೆ. ಹೀಗಿದ್ದರೂ ಮನುಷ್ಯ ತನ್ನದೇ ಜಗತ್ತಿನ ಆವರಣದೊಳಗೆ ನಿಂತೇ ರಹಸ್ಯಗಳನ್ನು ಅನಾವರಣ ಮಾಡುವ ಇರಾದೆಯಲ್ಲಿರುತ್ತಾನಲ್ಲ, ಅದು ಪ್ರಶಂಸನೀಯ ವಿಷಯ. 

ಭೂಮಿಯ ಇತಿಹಾಸದಲ್ಲಿ ಪ್ರೇಮಿಗಳಿಗೇನು ಬರ; ಆಡಂ-ಈವ್, ಕ್ಲಿಯೋಪಾತ್ರ- ಮಾರ್ಕ್ ಆಂಟನಿ, ಹಿಲೋಯಿಸ್- ಅಬೆಲಾರ್ಡ್, ಹೆನ್ರಿ 8- ಕ್ಯಾಥರೀನ್ ಪಾರ್, ಷಾ ಜಹಾನ್- ಮುಮ್ತಾಝ್ ಮಹಲ್, ನೆಪೋಲಿಯನ್- ಜೋಸೆಫೀನ್, ಕ್ವೀನ್ ವಿಕ್ಟೋರಿಯಾ- ಪ್ರಿನ್ಸ್ ಆಲ್ಬರ್ಟ್, ಜಾನ್- ಜಾಕಿ ಕೆನಡಿ... ಪ್ರೇಮಿಗಳ ಪಟ್ಟಿಗೇನು ಕಡಿಮೆಯೇ? ಪ್ರೇಮಿಗಳು ಈ ಭೂಮಿಯಲ್ಲಿ ಪ್ರವಾಹದೋಪಾದಿಯಲ್ಲಿ ಬರುತ್ತಾರೆ ಮತ್ತು ಅಷ್ಟೇ ದೊಡ್ಡ ಸದ್ದು ಮಾಡಿ ಇತಿಹಾಸ ಸೃಷ್ಟಿಸಿ ಮರೆಯಾಗುತ್ತಾರೆ. ಇತ್ತೀಚೆಗೆ ಇಂಥದ್ದೇ ಒಂದು ಪ್ರೇಮ ಸಲ್ಲಾಪದಲ್ಲಿ ತೊಡಗಿದಂತಿರುವ ಗಂಡು-ಹೆಣ್ಣಿನ ಅಸ್ಥಿಪಂಜರ ಕಣ್ಣಿಗೆ ಬಿತ್ತು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಆ ಸುದ್ದಿಯನ್ನು ಜನವರಿ ತಿಂಗಳಲ್ಲಿ ಪ್ರಕಟಿಸಿತ್ತು. 

ಪುಣೆಯ ಡೆಕ್ಕನ್ ಕಾಲೇಜ್ ಡೀಮ್ಡ್ ವಿಶ್ವವಿದ್ಯಾನಿಲಯದ ಪುರಾತತ್ವ ಶಾಸ್ತ್ರಜ್ಞ ಹರಪ್ಪ ಸ್ಮಶಾನಭೂಮಿಯಲ್ಲಿ ಸಂಶೋಧನೆಗೆ ತೊಡಗಿದ್ದಾಗ ಅಲ್ಲಿ ಅವರ ಗಮನ ಸೆಳೆದಿದ್ದು ಇಬ್ಬರು ಪ್ರೇಮಿಗಳು. ಹರಿಯಾಣದ ರಖಿಘರ್ಹೀ ಎಂಬಲ್ಲಿ ಈ ಪ್ರೇಮಿಗಳು ಉಪಸ್ಥಿತರಿದ್ದರು. ಸುಮಾರು 4500 ವರ್ಷಗಳ ಹಿಂದಿನ ನಾಗರಿಕತೆಯಾಗಿರುವ ಹರಪ್ಪದ ಪ್ರದೇಶದಲ್ಲಿ ಈ ಪ್ರೇಮಿಗಳು ಮೊಟ್ಟಮೊದಲ ಬಾರಿಗೆ ಕಂಡುಬಂದಾಗ ಇಡೀ ಜಗತ್ತೇ ನಿಬ್ಬೆರಗಾಗಿತ್ತು. ಬಹಳ ವಿಶೇಷವೆಂದರೆ, ಆ ದೃಶ್ಯದಲ್ಲಿ ಗಮನ ಸೆಳೆದಿದ್ದು ಆ ಪ್ರೇಮಿಗಳು ಮಲಗಿರುವ ರೀತಿ. ಹೆಣ್ಣು ಆಕಾಶದ ಕಡೆ ಮುಖ ಮಾಡಿಕೊಂಡು ಮಲಗಿದ್ದಾಳೆ. ಪಕ್ಕದಲ್ಲಿಯೇ ಇರುವ ಗಂಡು ತನ್ನ ಪ್ರೇಯಸಿಯನ್ನು ನೋಡಿಕೊಂಡೇ ಪ್ರಾಣ ಬಿಟ್ಟಂತಿದೆ. ಪ್ರೇಯಸಿಯನ್ನು ನೋಡುತ್ತಿರುವ ಪ್ರೇಮಿ ಇಲ್ಲಿ ಸಾವಿರ ಭಾವಗಳನ್ನು ಮೂಡಿಸುತ್ತಿದ್ದಾನೆ. ಇಬ್ಬರು ಪ್ರೇಮಿಗಳ ದೇಹ ಕರಗಿ ಹೋಗಿದೆ. ಮಾಂಸದ ಲವಲೇಶವೂ ಅಲ್ಲಿಲ್ಲ. ನರನಾಡಿಗಳು ಅದ್ಯಾವಾಗಲೋ ಮಣ್ಣು ಮಣ್ಣಾಗಿ ಹೋಗಿರಬೇಕು. ಆದರೂ ಉಳಿದ ಅಸ್ಥಿಪಂಜರಗಳು ಆ ಪ್ರೇಮಿಗಳಿಬ್ಬರ ಮನೋಸ್ಥಿತಿಯನ್ನು ಹೇಳುತ್ತಿವೆ. ತನ್ನ ತೋಳ ಮೇಲೆಯೇ ಪ್ರೇಯಸಿಯನ್ನು ಮಲಗಿಸಿಕೊಂಡು ಪ್ರೇಮಿ ಇಲ್ಲಿ ಸತ್ತನಾ? ಇಬ್ಬರ ದೇಹಗಳು ಒಟ್ಟಿಗೆ ಹೂತಲ್ಪಟ್ಟವಾ? ಇಬ್ಬರಿಗೂ ಒಂದೇ ಏಟಿಗೆ ಸಾವು ಬಲಿ ತೆಗೆದುಕೊಂಡಿತಾ? ತನ್ನ ಕಣ್ಣ ಮುಂದಿದ್ದ ಪ್ರೇಯಸಿಯನ್ನು ಆ ಪ್ರಿಯಕರ ದೂರ ಮಾಡಲೇ ಇಲ್ಲ ಎಂಬುದು ಸಾವಿರಾರು ವರ್ಷಗಳ ನಂತರವೂ ಅಳಿದುಳಿದ ಅಸ್ಥಿಪಂಜರಗಳು ಕತೆ ಹೇಳುವಂತಿವೆ. 

ಹರಪ್ಪ ನಾಗರಿಕತೆಯು ಸುಮಾರು 5000 ವರ್ಷಗಳ ಹಿಂದಿತ್ತು. ಅದೊಂದು ನಾಗರಿಕತೆಯಾಗಿ ಬೆಳೆದಿತ್ತು, ಬೆಳೆಯುತ್ತಿತ್ತು. ಆ ನಾಗರಿಕತೆಯ ಒಳಗೂ ಪ್ರೇಮಿಗಳಿದ್ದರಾ? ಆ ಪ್ರೇಮಿಗಳು ತಮ್ಮ ಧರ್ಮ,ಜಾತಿ ಮೀರಿ ಪ್ರೇಮಿಸುತ್ತಿದ್ದರಾ? ಆ ಧರ್ಮ,ಜಾತಿ ಮೀರಿ ಪ್ರೇಮಿಸುತ್ತಿದ್ದ ಪ್ರೇಮಿಗಳಿಗೆ ಕಠೋರವಾದ ಶಿಕ್ಷೆಗಳು ಇದ್ದವಾ? ಅವರನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿತ್ತಾ? ಜೀವಂತ ಸಮಾಧಿ ಮಾಡಲಾಗುತ್ತಿತ್ತಾ? ಇಲ್ಲಿ ಸಿಕ್ಕಿರುವ ಹರಪ್ಪ ಕಾಲದ ಅಸ್ಥಿಪಂಜರಗಳಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವ ಈ ಪ್ರೇಮಿಗಳ ಅಸ್ಥಿಪಂಜರ ಬೇರೆಯದೇ ಕಥೆಯನ್ನು, ಆಗಿನ ನಾಗರಿಕತೆಯ ವ್ಯಥೆಯನ್ನು ಹೇಳಲು ಹೊರಟಿವೆಯಾ? ಹರಪ್ಪ ಕಾಲದ ಪ್ರಪ್ರಥಮ ಜೋಡಿ ಐತಿಹಾಸಿಕ ದಾಖಲೆ ಎನಿಸಿರುವ ಈ ಗಂಡು-ಹೆಣ್ಣಿನ ಅಸ್ಥಿಪಂಜರಗಳು ತಮ್ಮ ಭಾವನೆಗಳನ್ನು ಈಗಲೂ ಬಿಟ್ಟುಕೊಟ್ಟಿಲ್ಲ. ತಮ್ಮ ನಡುವೆ ಇದ್ದ ಪ್ರೀತಿಯನ್ನು ಹಾಗೆಯೇ ಮಣ್ಣು ಮಾಡಿಕೊಂಡಿವೆ. ಮಣ್ಣಾದ ಪ್ರೀತಿ ಮತ್ತೆ ಇಲ್ಲಿ ಅಸ್ಥಿಪಂಜರಗಳ ಮೂಲಕ ಜೀವ ಪಡೆದಂತಿದೆ. 

ಉತ್ತರದಲ್ಲಿ ತಲೆಯಿಟ್ಟು ಮಲಗಿದಂತಿರುವ ಈ ಗಂಡು-ಹೆಣ್ಣಿನ ಅಸ್ಥಿಪಂಜರಗಳು ಹೇಳುವ, ಹೇಳುತ್ತಿರುವ, ಹೇಳಲು ಹೊರಟಿರುವ ಕಥೆಯಾದರೂ ಏನು? ಪುರಾತತ್ವ ತಜ್ಞ, ಈ ಜೋಡಿ ಅಸ್ಥಿಪಂಜರಗಳನ್ನು ಹುಡುಕಿ ತೆಗೆದ ಟೀಮ್ ಲೀಡರ್ ವಸಂತ್ ಶಿಂಧೆ, ಈ ಗಂಡು-ಹೆಣ್ಣು ಇಬ್ಬರೂ ಒಂದೇ ಸಮಯದಲ್ಲಿ ಪ್ರಾಣ ಬಿಟ್ಟಿದ್ದಾರೆ. ಗಂಡಿಗೆ 35 ವರ್ಷ ವಯಸ್ಸಿರಬಹುದು. ಹೆಣ್ಣಿಗೆ 25 ವಯಸ್ಸು. ಸಾವಿಗೆ ಕಾರಣವೇನು? ಸದ್ಯಕ್ಕೆ ಗೊತ್ತಿಲ್ಲ. ಇವರು ಪ್ರೇಮಿಗಳು ಎಂಬುದಕ್ಕೆ ಬಹಳಷ್ಟು ಸಾಕ್ಷಿಗಳು ಸಿಗುತ್ತವೆ. ಇಬ್ಬರೂ ಜಗಳವಾಡಿ ಸತ್ತರಾ? ಪ್ರೇಮಿಸಿ ಸತ್ತರಾ? ಪ್ರಶ್ನೆಗಳಿಗೆ ಉತ್ತರವಿಲ್ಲ. ಇಬ್ಬರ ದೇಹಗಳನ್ನು 500 ಸೆಂ.ಮೀ. ಆಳದಲ್ಲಿ ಹೂಳಲಾಗಿದೆ. ಗಂಡು 5.8 ಅಡಿ ಎತ್ತರವಿದ್ದರೆ, ಹೆಣ್ಣಿನ ಎತ್ತರ 5.6 ಅಡಿ. ಹರಪ್ಪ ನಾಗರೀಕರಿಗೆ ಈಗಿನ ಮನುಷ್ಯರಂತೆಯೇ ಒಂದಿಷ್ಟು ಭ್ರಮೆಗಳಿದ್ದವು. ಸಾವಿನ ನಂತರವೂ ಬದುಕಿದೆ ಎಂದು ಅವರು ನಂಬಿಕೊಂಡಿದ್ದರು. ಹಾಗಾಗಿ, ಅವರು ಸಾವನ್ನು ಸಂಭ್ರಮಿಸುತ್ತಿದ್ದರಾ? ಸತ್ತವರನ್ನು ಪೋಷಿಸುತ್ತಿದ್ದರಾ? ಸತ್ತ ನಂತರ ಗೋರಿ ಕಟ್ಟಿಸಿಕೊಂಡು ಆ ಮೇಲೆ ಮತ್ತೆ ಯಾರು ಹುಟ್ಟಿ ಬಂದರೋ ಗೊತ್ತಿಲ್ಲ; ಸಾವೆಂಬುದು ಸಾವಷ್ಟೆ. ಅಲ್ಲಿ ಬದುಕಿನ ಅಂತಿಮ ಘಟ್ಟವಿದೆ. ಅಲ್ಲಿ ಚಟ್ಟ ಏರಿದರೆ ಮುಗಿಯಿತು, ಬದುಕು ಸಮಾಪ್ತಿ. 

ಪ್ರೇಮಿಗಳು ಸತ್ತ ನಂತರ ಪರಸ್ಪರ ತಬ್ಬಿಕೊಂಡೋ, ಅಕ್ಕಪಕ್ಕದಲ್ಲೋ ಮಣ್ಣಾಗಿ ಭೂಮಿಯ ಆಳದಲ್ಲಿ ಕಳೆದು ಹೋದವರೆಷ್ಟೊ? ಸಿಕ್ಕವರು ಮಾತ್ರ ಕೆಲವರು. ಹರಪ್ಪ ಸ್ಮಶಾನ ಭೂಮಿಯಲ್ಲಿ ಸಿಕ್ಕ ಮೊದಲ ಐತಿಹಾಸಿಕ ಪ್ರೇಮಿಗಳು ಇವರಿರಬಹುದು. ಆದರೆ, ಅಂಥದ್ದೇ ಪ್ರೇಮ ಪ್ರಸಂಗಗಳನ್ನು ಜಗತ್ತಿಗೆ ಸಾರಲೆಂದೇ ಬಹಳಷ್ಟು ಕಡೆ ಪ್ರೇಮಿಗಳ ಮೃತ ದೇಹಗಳ ಅಸ್ಥಿಪಂಜರಗಳು ಭೂಮಿಯಿಂದ  ಎದ್ದು ಬಂದಿವೆ. ಇದೇ ಪ್ರಾಕ್ತನಶಾಸ್ತ್ರ ತಜ್ಞರು ಭೂಮಿ ಅಗೆದಾಗಲೆಲ್ಲ ಪ್ರೇಮಿಗಳು ಸಿಕ್ಕಿದ್ದು ಕಡಿಮೆ. ಇಟಲಿಯ ವಲ್ದರೋ ಎಂಬ ಹಳ್ಳಿಯಲ್ಲಿ ಅಕ್ಕಪಕ್ಕದಲ್ಲಿಯೇ ಗಂಡು-ಹೆಣ್ಣಿನ ಅಸ್ಥಿಪಂಜರಗಳು ಸಿಕ್ಕಿದ್ದವು. ರಷ್ಯಾದ ಆ್ಯಂಡ್ರೋನೋವೋ ಬಳಿಯಲ್ಲಿಯೂ ಈ ರೀತಿಯ ದೃಶ್ಯ ಕಾಣಸಿಕ್ಕಿತ್ತು. ಗ್ರೀಸ್ ನ ಗೋರಿಯೊಂದರಲ್ಲಿ ಕೂಡ ಸುಮಾರು 5800 ವರ್ಷಗಳಷ್ಟು ಹಳೆಯದಾದ ಅಸ್ಥಿಪಂಜರಗಳು ದೊರೆತಿವೆ. 

ಇದೆಲ್ಲ ಕುತೂಹಲಕ್ಕೆ ಇಲ್ಲಿ ಹೇಳಿದ್ದೇನೆ; ಭೂಮಿಯೇ ಒಂದು ರಹಸ್ಯವಾಗಿರುವಾಗ ಅಲ್ಲಿ ಸಂಭವಿಸುವ ಸಾವು ಅದೆಷ್ಟು ಕುತೂಹಲಕಾರಿ ಘಟ್ಟಗಳನ್ನು ದಾಟಿ ಎಷ್ಟೋ ವರ್ಷಗಳ ನಂತರದಲ್ಲಿ ಮತ್ತೆ ಅಸ್ಥಿಪಂಜರಗಳ ಮೂಲಕ ಕಾಣಬರುತ್ತದಲ್ಲ; ವ್ಯವಹಾರಿಕ ಪ್ರಪಂಚದಿಂದ ಬಿಡಿಸಿಕೊಂಡು ಸಾವಿನ ಮಡಿಲು ಸೇರಿಕೊಳ್ಳುವ ಬಹಳಷ್ಟು ಜೀವಗಳನ್ನು ನಾವು ನೋಡಿದ್ದೇವೆ. ಸತ್ತವರನ್ನು ಸುಮ್ಮನೆ ಎಸೆದು ಬರುವ ಜನ ನಾವಲ್ಲ. ಹಾಗಾಗಿ, ನಾವು ನಾಗರೀಕರು. ಇತ್ತೀಚೆಗೆ ಖಾಸಗಿ ಟಿವಿಯೊಂದರಲ್ಲಿ ಮೃತ ದೇಹಗಳನ್ನು ಒಂದು ಜನಾಂಗ ಹೇಗೆ ಶೃಂಗರಿಸಿ ಸಂಭ್ರಮಿಸುತ್ತದೆ ಎಂಬುದನ್ನು ತೋರಿಸುತ್ತಿದ್ದರು. ಮೃತ ದೇಹಕ್ಕೆ ಸ್ನಾನ ಮಾಡಿಸಿ, ಅದಕ್ಕೆ ನೂತನ ವಸ್ತ್ರಗಳನ್ನು ಉಡಿಸಿ ಆ ಜನ ಸಂಭ್ರಮಿಸುತ್ತಿದ್ದರು. ಆ ಹೆಣವನ್ನು ವಾರಗಟ್ಟಲೆ, ವರ್ಷಗಟ್ಟಲೆ ಶವಪೆಟ್ಟಿಗೆಯಲ್ಲಿಟ್ಟು ಸಂರಕ್ಷಿಸಿ ಹಬ್ಬ ಆಚರಿಸಿದಂತೆ ಆಚರಿಸುತ್ತಿದ್ದರು. ಇದು ಅವರ ಯುಗಯುಗದ ಸಂಪ್ರದಾಯವಂತೆ. ಸತ್ತ ಕೂಡಲೇ ಆ ಶವಕ್ಕೆ ಬೇರೆಯದೇ ರೂಪ ನೀಡಲಾಗುತ್ತದೆ. ಮೊದಲಿಗೆ ಸ್ನಾನ, ಆನಂತರ ಮಕ್ಕಳು ಗೊಂಬೆಗೆ ಸಿಂಗರಿಸುವಂತೆ ಸಿಂಗಾರಗಳು ನಡೆಯುತ್ತವೆ. ಅಲ್ಲಿ ವರ್ಷಕ್ಕೊಮ್ಮೆ ಹಬ್ಬ ಆಚರಿಸಲಾಗುತ್ತಿದೆ. ಸತ್ತ ವ್ಯಕ್ತಿಗೆ ವರ್ಷದ ಸಿಂಗಾರ ಬೇರೆ. ಸತ್ತವರು ಸತ್ತುಹೋದರೂ ಅವರನ್ನು ಜೀವಂತ ವ್ಯಕ್ತಿಗಳಂತೆ ನೋಡಿಕೊಳ್ಳುವ ಜನರ ದೃಶ್ಯ ಅಲ್ಲಿ ಹಾದುಹೋಗುತ್ತಿತ್ತು. ಮೃತರಿಗೆ ನಿರ್ಮಿಸುವ ಚಟ್ಟದ ಶೃಂಗಾರ ನೋಡಿಬಿಟ್ಟರೆ ಎಂಥವರೂ ಆ ಚಟ್ಟದ ಮೇಲೆ ಮಲಗಿ ಎದ್ದು ಬರುವಂತಿರುತ್ತದೆ!ಆದರೆ, ಪ್ರೇಮಿಗಳ ಶವವನ್ನಿಡುವ ಶವಪೆಟ್ಟಿಗೆ ಮಾತ್ರ ಕಲರ್ಫುಲ್. ಶವಯಾತ್ರೆ ಸಂದರ್ಭದಲ್ಲಿ ಕೋಣಗಳನ್ನು ಕೂಡ ಜೊತೆಗೊಯ್ಯುತ್ತಾರೆ. ಅದೇನು ಯಮನ ವಾಹನ ಎಂಬ ಕಲ್ಪನೆಯಿಂದಲೋ ಏನೋ; ಆ ನಂತರ ಆ ಕೋಣಗಳನ್ನು ಬಲಿಕೊಟ್ಟು ಯಮನ ಪಾದ ಸೇರಿಸುತ್ತಾರೆ. ಈ ಕೋಣಗಳು ಸಾಯದಿದ್ದರೆ ಸತ್ತ ಮನುಷ್ಯರು ಸ್ವರ್ಗಕ್ಕೆ ಹೋಗುವುದಿಲ್ಲವಂತೆ.  

ಊರ ದೇವರುಗಳನ್ನೆಲ್ಲ ಮೆರವಣಿಗೆ ಮೂಲಕ ಹೊತ್ತು ತಂದು ಒಂದು ಕಡೆ ಸೇರಿಸುತ್ತಾರಲ್ಲ ಹಾಗೆ ಶವಗಳನ್ನೂ ಕೂಡ ಬೇರೆ ಬೇರೆ ಕಡೆಗಳಿಂದ ಹೊತ್ತು ತಂದು ಅಲ್ಲಿ ಗುಡ್ಡೆ ಹಾಕಿಕೊಳ್ಳುತ್ತಾರೆ. ಬರುವ ಅತಿಥಿಗಳ ಮುಂದೆ ಪೂಜೆ ನಡೆಯುತ್ತದೆ. ಕುಡಿಯಲು ವೈನ್ ಕೊಡುತ್ತಾರೆ. ತಿನ್ನಲು ಆಹಾರ ನೀಡುತ್ತಾರೆ. ಅಲ್ಲಿ ಶವಗಳಿಗಾಗಿಯೇ ಕೋಣೆಗಳನ್ನು ನಿರ್ಮಿಸಲಾಗುತ್ತದೆ. ಕೆಲವರು ಬೆಟ್ಟಗಳಲ್ಲಿ ಕಲ್ಲುಬಂಡೆಗಳನ್ನು ಕೊರೆದು ಗವಿಗಳಲ್ಲಿ ಶವಗಳ ಸಂಸ್ಕರಣೆ ಮಾಡುತ್ತಾರೆ. ಅಲ್ಲಿಯೇ ಆ ಶವಗಳಿಗೆ ಸಂಬಂಧಿಸಿದಂತೆ ಮಾಡಲಾದ ಮರದ ಪ್ರತಿಮೆಗಳನ್ನು ಗುರುತಿಗಾಗಿ ಇಡಲಾಗುತ್ತದೆ. ಆ ಶವಗಳೋ ಕೂಲಿಂಗ್ ಗ್ಲಾಸುಗಳಿಂದ ಹಿಡಿದು ಈಗಿನ ಎಲ್ಲ ಶೋಕಿ ವಸ್ತುಗಳನ್ನು ಹೊತ್ತಿರುತ್ತವೆ. ಇದೆಲ್ಲ ಆಚರಣೆ ಇರುವುದು ಇಂಡೋನೇಷ್ಯಾದ ಟೋಜಾರ ಎಂಬ ದ್ವೀಪದಲ್ಲಿ. ಅಲ್ಲಿ ಆರಂಭದಲ್ಲಿ ಸತ್ತವರೊಂದಿಗೆ ಮಲಗುವ ಪ್ರಕ್ರಿಯೆಯೂ ಇದೆಯಂತೆ.ಪ್ರೇಮಿಯೋ ಪ್ರೇಯಸಿಯೋ ತೀರಿಕೊಂಡರೆಂದರೆ, ಆ ಸಂಪ್ರದಾಯದಲ್ಲಿ ಒಂದಿಷ್ಟು ಪ್ರೇಮಮಯ ವಾತಾವರಣ ಮೂಡಿಸಲಾಗುತ್ತದೆ ಎಂದು ಆ ಊರಿನ ಹಿರಿಯ ಹೇಳತ್ತಿದ್ದ. ಪ್ರೇಮಿಗಳ ಸಾವಿನ ಅಗಾಧ ಕಥೆಗಳು ಇತಿಹಾಸದ ತುಂಬಾ ಬಿದ್ದಿವೆ.

ಒಂದೊಂದು ಧರ್ಮಕ್ಕೂ, ಒಂದೊಂದು ಜಾತಿಗೂ ಬೇರೆ ಬೇರೆಯದೇ ಆದ ಶವಸಂಸ್ಕಾರ ಪದ್ದತಿಗಳಿವೆ.ಆದರೆ, ಪ್ರೇಮಿಗಳ ವಿಚಾರದಲ್ಲಿ ಎಲ್ಲರೂ ಶೋಷಕರಂತೆಯೇ ಕಾಣುತ್ತಾರಲ್ಲ. ನೆಲದೊಳಗೆ ಹೂತಿಟ್ಟ ಶವಗಳು ಅಂತಿಮವಾಗಿ ಅಸ್ಥಿಪಂಜರದ ರೂಪತಾಳಿ ಸಾವಿರ ಸಾವಿರ ವರ್ಷಗಳ ನಂತರವೂ ಸಿಗುತ್ತಿವೆಯಲ್ಲ; ಆ ಮೂಲಕ ಆ ಕಾಲದ ಇತಿಹಾಸವನ್ನು ಹೇಳುತ್ತಿವೆಯಲ್ಲ; ಇತ್ತೀಚೆಗೆ ಸಿಕ್ಕ ಪ್ರೇಮಿಗಳ ಅಸ್ಥಿಪಂಜರ ಮಂದಿನ ದಿನಗಳಲ್ಲಿ ಪ್ರೇಮದ ಇತಿಹಾಸವನ್ನು ಮರು ಸೃಷ್ಟಿಸಬಲ್ಲದಾ? ಆದರೆ, ಪ್ರೇಮವೆಂಬುದೇ ಈಗ ಅಸ್ಥಿಪಂಜರವಾಗುತ್ತಿದೆಯಲ್ಲ!