ಲಿಂಗಾಯತ ಧರ್ಮ ಮತ್ತು ಭಾರತದ ಬಹುತ್ವ ಚಿಂತನೆ

ಲಿಂಗಾಯತ ಧರ್ಮ ಮತ್ತು ಭಾರತದ ಬಹುತ್ವ ಚಿಂತನೆ

ನಮ್ಮ ಗ್ರಾಮೀಣ ಪರಿಸರದಲ್ಲಿ ಅಲ್ಪಸಂಖ್ಯಾತರ ಮನೆಗಳಲ್ಲಿ ಗ್ರಾಮ ದೇವತೆಗಳ ಪೂಜೆ ನಡೆಯುತ್ತಿದ್ದರೆ ಬಹುಸಂಖ್ಯಾತರ ಮನೆಗಳಲ್ಲಿ ಸೂಫಿ ಸಂತರ ಆರಾಧನೆಯೂ ನಡೆಯುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಹುತ್ವ ಸಂಸ್ಕೃತಿಯನ್ನು ಅಳಿಸಿಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಕೋಮುವಾದಿ ರಾಜಕೀಯ ಚಟುವಟಿಕೆಗಳು ಮತ್ತು ನಕಲಿ ಸಂಸ್ಕೃತಿ ರಕ್ಷಕ ಶಕ್ತಿಗಳು ಈ ದೇಶದ ಮೂಲ ಶಕ್ತಿಯಾಗಿರುವ ಜಾತ್ಯತೀತˌ ಹಾಗೂ ಬಹುಸಂಸ್ಕ್ರತಿಯ ಬುನಾದಿಯನ್ನು ದುರ್ಬಲಗೊಳಿಸುತ್ತಿವೆ ಎನ್ನುತ್ತಾರೆ ಡಾ.ಜೆ.ಎಸ್.ಪಾಟೀಲ.

 

ಭರತಖಂಡದ ಮೇಲೆ ಆರ್ಯ ವಲಸಿಗರ ಅತಿಕ್ರಮಣದ ಪೂರ್ವ ಮತ್ತು ನಂತರದ ಕಾಲಘಟ್ಟದಲ್ಲಿ ಕೂಡ ಭಾರತದಲ್ಲಿ ಮೌಖಿಕವಾಗಿ ಆಚರಣೆಯಲ್ಲಿದ್ದದ್ದು ವಿವಿಧ ಬಗೆಯ ಜನಪದೀಯ ಸಮುದಾಯ ಆಚರಣೆಗಳು. ಈ ಆಚರಣೆಗಳು ವಿಭಿನ್ನ ಪ್ರಕಾರಗಳಲ್ಲಿ ಗ್ರಾಂಥಿಕ ಸ್ವರೂಪವನ್ನು ಪಡೆಯದೆಯೂ ನಮ್ಮ ಜನಪದೀಯ ಸಮುದಾಯಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುತ್ತಲೆ ಇದ್ದವು. ಸನಾತನ ಕಾಲದಿಂದಲೂ ಇಲ್ಲಿನ ಬಹುತ್ವ ಪರಂಪರೆಯು ಈ ನೆಲದ ಬಹು ದೊಡ್ಡ ಶಕ್ತಿಯಾಗಿ ಮಾತ್ರವಲ್ಲದೆ ಆಧುನಿಕ ಜಗತ್ತಿಗೆ ಒಂದು ಮಾದರಿಯೂ ಆಗಿ ಪರಿಣಮಿಸಿದ್ದನ್ನು ಅಲ್ಲಗಳೆಯಲಾಗದು. ವಿವಿಧತೆಯ ವಿಷಯದಲ್ಲಿ ಜಗತ್ತಿನಲ್ಲಿ ಭಾರತವನ್ನು ಮೀರಿಸುವ ಇನ್ನೊಂದು ರಾಷ್ಟ್ರ ಇರಲಾರದೆಂದರೆ ಅತಿಶಯೋಕ್ತಿಯಾಗಲಾರದು. ಈ ನೆಲದ ಸುಮಾರು 20ˌ000 ಕ್ಕೂ  ಹೆಚ್ಚು ತಾಯ್ನುಡಿಗಳುˌ ಸುಂದರ ಸಂಸ್ಕ್ರತಿಯನ್ನು ಸಾರುವ ಪ್ರಾದೇಶಿಕ ವೈವಿಧ್ಯಗಳು, ಭೌಗೋಳಿಕ ಭೂಸಿರಿಗಳುˌ  ಸಾವಿರಾರು ವರ್ಷಗಳ ಅವಿಚ್ಛಿನ್ನ ಇತಿಹಾಸ, ವಿಭಿನ್ನ ಜಾತಿˌ ಜನಾಂಗˌ ಮತ್ತು ಸಮುದಾಯಗಳುˌ ಹೀಗೆ ವಿವರಿಸಲಾಗದಷ್ಟು ಅಗಾಧವಾಗಿರುವ ಈ ನೆಲದ ಸಂಸ್ಕೃತಿ ಮತ್ತು ನಾಗರಿಕತೆಗಳ  ರೂಪುಗೊಳ್ಳುವಿಕೆಯಲ್ಲಿ  ಇಲ್ಲಿನ ಎಲ್ಲ ಜನಾಂಗದ ಕೊಡುಗೆಯೂ ಸೇರಿಕೊಂಡಿದ್ದನ್ನು ಅಲ್ಲಗಳೆಯಲಾಗದು. ಈ ಭೂಖಂಡದಲ್ಲಿ ಘಟಿಸಿದ ಮಹತ್ತರವಾದ ವೈಚಾರಿಕ ಮನ್ವಂತರಗಳುˌ ಚಳವಳಿಗಳುˌ ವಾಗ್ವಾದಗಳು‌ ಇಡೀ ಜಗತ್ತನ್ನೇ ಬೆರಗುಗೊಳಿಸುವಷ್ಟು ಪ್ರಖರವಾಗಿವೆ. ಈ ಎಲ್ಲ ವಿಭಿನ್ನತೆಗಳ ಹೊರತಾಗಿಯೂ ಇಲ್ಲಿ ದೊಡ್ಡಮಟ್ಟದ ನಾಗರಿಕ ಕಲಹಗಳಾಗಲಿˌ ಅಂತರ್ ಯುದ್ಧಗಳಾಗಲಿ ಘಟಿಸಿದ ದ್ರಷ್ಟಾಂತಗಳು ಅಪರೂಪ. ಎಲ್ಲರೂ ಕೂಡಿ ಬಾಳುವ ಸಮಷ್ಟಿ ಪ್ರಜ್ಞೆˌ ಸಹನೆˌ ಸಹಿಷ್ಣುತೆ ಮತ್ತು ಪರಸ್ಪರ ಗೌರವಾದರಗಳೇ ನಮ್ಮ ದೇಶದ ಅಂತಃಶಕ್ತಿಯಾಗಿ ಅದನ್ನು ಇವತ್ತಿನ ವರೆಗೆ ಉಳಿಸಿˌ ಜಗತ್ತಿನ ದೈತ್ಯ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಎದ್ದು ನಿಲ್ಲಿಸಿವೆ. ಒಬ್ಬರನ್ನು ಮುಗಿಸಿ ಮತ್ತೊಬ್ಬರು ಬದುಕುವ ಸ್ವಾರ್ಥ ಸಂಸ್ಕ್ರತಿ ಭಾರತದ ಮೂಲ ಗುಣ ಲಕ್ಷಣವೇ ಅಲ್ಲ. ವಿಭಿನ್ನ ಜನಾಂಗಗಳೆಲ್ಲ ಸಮರಸದಿಂದ ಕೂಡಿ ಬಾಳುವ ಕ್ರಮಗಳೇ ಇಲ್ಲಿನ ಪ್ರಜಾಪ್ರಭುತ್ವದ ಬುನಾದಿ.

ನಮ್ಮ ಗ್ರಾಮೀಣ ಪರಿಸರದಲ್ಲಿ ಅಲ್ಪಸಂಖ್ಯಾತರ ಮನೆಗಳಲ್ಲಿ ಗ್ರಾಮ ದೇವತೆಗಳ ಪೂಜೆ ನಡೆಯುತ್ತಿದ್ದರೆ ಬಹುಸಂಖ್ಯಾತರ ಮನೆಗಳಲ್ಲಿ ಸೂಫಿ ಸಂತರ ಆರಾಧನೆಯೂ ನಡೆಯುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಹುತ್ವ ಸಂಸ್ಕೃತಿಯನ್ನು ಅಳಿಸಿಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಕೋಮುವಾದಿ ರಾಜಕೀಯ ಚಟುವಟಿಕೆಗಳು ಮತ್ತು ನಕಲಿ ಸಂಸ್ಕೃತಿ ರಕ್ಷಕ ಶಕ್ತಿಗಳು ಈ ದೇಶದ ಮೂಲ ಶಕ್ತಿಯಾಗಿರುವ ಜಾತ್ಯತೀತˌ ಹಾಗೂ ಬಹುಸಂಸ್ಕ್ರತಿಯ ಬುನಾದಿಯನ್ನು ದುರ್ಬಲಗೊಳಿಸುತ್ತಿವೆ. ಹಿಂದಿನಿಂದಲೂ ಈ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಲೇ ಇಷ್ಟು ಬ್ರಹತ್ ಪ್ರಮಾಣದಲ್ಲಿ ಬೆಳೆದಿದೆ. ಆಗಿನಿಂದಲೂ ಈ ಫ್ಯಾಸಿಷ್ಟ್ ಶಕ್ತಿಗಳು ದೇಶದ ಅಭಿವ್ರದ್ಧಿಗೆ ಕಾಲ್ತೊಡಕಾಗಿ ನಿಂತು ನಿರೀಕ್ಷಿತ ಪ್ರಮಾಣದಲ್ಲಿ ದೇಶದ ಪ್ರಗತಿಗೆ ಹಿನ್ನಡೆಯನ್ನು ಕೊಡಮಾಡಿವೆ. ರಾಜಪ್ರಭುತ್ವ ಕೊನೆಗೊಂಡು ಇಂದಿನ ಪ್ರಜಾಪ್ರಭುತ್ವದ ಕಾಲಮಾನದಲ್ಲೂ ಇಲ್ಲಿನ ಬಹುತ್ವವನ್ನು ಧ್ವಂಸಗೊಳಿಸುವ ಹುನ್ನಾರಗಳು ಮರಳಿ ಮುನ್ನೆಲೆಗೆ ತರುವ ಮೂಲಕ ದೇಶವನ್ನು ಶಿಲಾಯುಗಕ್ಕೆ ಮರಳಿ ಕೊಂಡೊಯ್ಯುವ ದುಸ್ಸಾಹಸ ಆರಂಭಿಸಿವೆ. ಸರ್ವಸಂಗ ಪರಿತ್ಯಾಗಿಗಳ ವೇಷದಲ್ಲಿರುವ ಧಾರ್ಮಿಕ ಮುಖಂಡರುˌ ಮಠಾಧೀಶರುಗಳುˌ ಹಾಗೂ ನಕಲಿ ಬಾಬಾಗಳು ರಾಜಕೀಯ ಪಕ್ಷಗಳನ್ನು ಮತ್ತು ಜನರಿಂದ ಚುನಾಯಿಸಲ್ಪಟ್ಟ ಸರಕಾರವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಈ ನೆಲದಲ್ಲಿ ಶತಮಾನಗಳಿಂದ ಶೋಷಣೆಗೊಳಗಾದ ದಮನಿತ ಸಮುದಾಯಗಳ ಏಳಿಗೆಗಾಗಿ ಅಂಗೀಕರಿಸಲ್ಪಟ್ಟ ಭಾರತದ ಸಂವಿಧಾನದ ಬಗ್ಗೆ ಜನರಲ್ಲಿ ಅಸಹನೆˌ ಅಪನಂಬಿಕೆಗಳನ್ನು ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ವೈಜ್ಞಾನಿಕ ಸಮಾವೇಶಗಳನ್ನು ಶಂಖ ಊದುವ ಮೂಲಕ ಉದ್ಘಾಟಿಸುತ್ತ ವಿಜ್ಞಾನರಂಗದಲ್ಲೂ ಸನಾತನ ಅಜ್ಞಾನಗಳನ್ನು ಬಿತ್ತಲಾಗುತ್ತಿದೆ. ದೇಶದ ಪ್ರತಿಭಾವಂತ ಯುವಕರಿಗೆ ಜ್ಞಾನ ನೀಡುತ್ತಿರುವ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನುˌ ಸಾವಿರಾರು ಜನರಿಗೆ ಅನ್ನ ಆಶ್ರಯ ನೀಡುತ್ತಿರುವ ಸಾರ್ವಜನಿಕ ಉದ್ಯಮಗಳನ್ನು ಹಾಗೂ ವಿವಿಧ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಸಾಂಘಿಕ ಲೂಟಿˌ ಅಲ್ಪಸಂಖ್ಯಾತರುˌ ಹಿಂದುಳಿದವರುˌ ಮತ್ತು ದಲಿತರ ಮೇಲೆ ಹಲ್ಲೆಗಳುˌ ಗುಂಪು ಗೂಂಡಾಗಿರಿಗಳು ಮಿತಿ ಮೀರುತ್ತಿವೆ. ಈ ರೀತಿಯಾಗಿ ಕೋಮುವಾದಿ ಶಕ್ತಿಗಳು ದೇಶದ ಸಂಸ್ಕ್ರತಿಯನ್ನು ನಾಶಗೊಳಿಸುವ ಕಾರ್ಯ ಮಾಡುತ್ತಿವೆ. 

ಇಂಥ ಅಗಣಿತ ಸಂದಿಗ್ಧತೆಗಳ ನಡುವೆಯೂ ಈ ನೆಲದ ಸಂವೇದನಾಶೀಲ ಸಾಮಾನ್ಯ ಜನತೆ ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಿಕೊಳ್ಳುತ್ತಲೆ ಭಾರತವನ್ನು ನಿರಂತರವಾಗಿ ರಕ್ಷಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ.

ಇಂಥ ಸಂದಿಗ್ಧ ಕಾಲಘಟ್ಟದಲ್ಲಿ ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದ ವಚನ ಚಳವಳಿಯನ್ನು ಮತ್ತೆ ಭಾರತದಲ್ಲಿ ಮರುಸ್ಥಾಪಿಸುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ. ಅಂದು ಶರಣರು ಆರಂಭಗೊಳಿಸಿದ್ದು ನೈಜ ಅರ್ಥದಲ್ಲಿ ಬಹುಜನ ಚಳವಳಿಯೆ. ಸಾಂಸ್ಕ್ರತಿಕˌ ಆರ್ಥಿಕˌ ಶೈಕ್ಷಣಿಕ ಮತ್ತು ಸಾಮಾಜಿಕ ಯಜಮಾನಿಕೆಯನ್ನು ಮೇಲ್ವರ್ಗದ ವೈದಿಕರ ಕಪಿಮುಷ್ಟಿಯಲ್ಲಿ ಸಿಲುಕಿ ನೆಲದ ನೈಜ ವಾರಸುದಾರರು ಪಶುಗಳಿಗಿಂತ ಕೀಳಾಗಿ ಕಾಣಲ್ಪಡುತ್ತಿದ್ದ ಸಂದರ್ಭದಲ್ಲಿ ಬಸವಾದಿ ಶರಣರು ಸಮಸಮಾಜ ನಿರ್ಮಾಣದ ಉದ್ದೇಶದಿಂದ ಬಹುಜನ ಚಳವಳಿ ಆರಂಭಿಸಿದ್ದರು. ಇಂದಿನ ಜನತಂತ್ರ ವ್ಯವಸ್ಥೆಯಲ್ಲೂ ಸಂಸ್ಕ್ರತಿಯ ಹೆಸರಿನಲ್ಲಿ ಪ್ರಭುತ್ವವನ್ನು ನಿಯಂತ್ರಿಸುತ್ತಿರುವ ಪಟ್ಟಭದ್ರ ಶಕ್ತಿಗಳು ನಿರ್ಭಯವಾಗಿ ನಿರಂಕುಶತನದಿಂದ ಹೇರುತ್ತಿರುವ ಏಕ ಸಂಸ್ಕ್ರತಿ ಅಂದೂ ಕೂಡ ಬಹುಜನರ ಮೇರೆ ಹೇರುತ್ತಿದ್ದಾಗಲೇ ಕಲ್ಯಾಣದಲ್ಲಿ ಬಸವಣ್ಣನವರ ನೇತ್ರತ್ವದಲ್ಲಿ ಬಹುಜನರೊಡಗೂಡಿ ಸಾಮಾಜೋಧಾರ್ಮಿಕ ಕ್ರಾಂತಿ ಸ್ಪೋಟಗೊಂಡಿತ್ತು. ಕಲ್ಯಾಣದಲ್ಲಿ ಅಂದು ಜರುಗಿದ ಶರಣರ ಕ್ರಾಂತಿ ಒಂದು ಸರ್ವಾಂಗೀಣ ಬಹುಮುಖಿ ಚಿಂತನೆಯ ಚಳವಳಿಯಾಗಿತ್ತು. ಈ ನೆಲದ ಬಹುತ್ವವನ್ನು ನಾಶಪಡಿಸಲೆತ್ನಿಸುತ್ತಿದ್ದ ಕರ್ಮಠ ವೈದಿಕರ ಕೈಯಿಂದ ರಕ್ಷಿಸಿ ಒಂದು ಶೋಷಣೆರಹಿತ ಹೊಸ ವ್ಯವಸ್ಥೆಯನ್ನು ಆರಂಭಿಸುವುದು ಶರಣ ಚಳವಳಿಯ ಬಹುಮುಖ್ಯ ಗುರಿಯಾಗಿತ್ತು. ವೈದಿಕ ಆರ್ಯರ ಆಕ್ರಮಣದ ಹೊರತಾಗಿಯೂ ಅಲ್ಲಲ್ಲಿ ಅಸ್ತಿತ್ವದಲ್ಲಿದ್ದ ಜನಪದೀಯ ಸಮುದಾಯ ಧರ್ಮದ ಆಚರಣೆಗಳಿಗೆ ಶರಣರು ಜೀವ ನೀಡುವ ಕೆಲಸ ಆರಂಭಿಸಿದ್ದರು. ರಾಜಾಶ್ರಯದ ಹಂಗಿನಲ್ಲಿ ಅರಮನೆಯ ಗಿಳಿಯಾಗಿದ್ದ ಪರಕೀಯ ಸೈರಿಯಾ ಮೂಲದ ಸಂಸ್ಕ್ರತವೆಂಬ ವೈದಿಕ ಕರ್ಮಠರ ಸತ್ವಹೀನ ಭಾಷೆಯ ವೈಭವೀಕರಣಕ್ಕೆ ತಡೆಯೊಡ್ಡಿದ ಶರಣರು ನೆಲಮೂಲದ ಕನ್ನಡ ಭಾಷೆಯಲ್ಲಿಯೇ ವಚನ ರಚಿಸುವ ಮೂಲಕ ಬಹುಜನರೊಟ್ಟಿಗೆ ಪರಿಣಾಮಕಾರಿ ಸಂವಾದ ಸಾಧಿಸಿದ್ದರು. ಯಾವ ಬಹುಜನರನ್ನು ಶತಮಾನಗಳಿಂದ ಅಕ್ಷರ ಸಂಸ್ಕ್ರತಿಯಿಂದ ವಂಚಿಸಲಾಗಿತ್ತೊ ಅದೇ ಬಹುಜನರ ಮೂಲಕ ಬಸವಣ್ಣನವರು ಕನ್ನಡದಲ್ಲಿ ವಚನಗಳನ್ನು ಬರೆಯಿಸಿದ್ದು ಜಗತ್ತಿನ ಇತಿಹಾಸದಲ್ಲಿ ಒಂದು ಮಹತ್ತರ ವೈಲಿಗಲ್ಲಾಗಿ ನಿಂತಿತು. ವಚನಗಳು ಅಂದಿನ ಹೀನ ಸಾಮಾಜಿಕ ವ್ಯವಸ್ಥೆಯನ್ನು ವಿರೋಧಿಸಿದ್ದಲ್ಲದೆ ಕನ್ನಡ ಭಾಷೆˌ ಸಾಹಿತ್ಯˌ ಸಂಸ್ಕ್ರತಿˌ ಜನಪದೀಯ ಸಂಸ್ಕ್ರತಿಗಳಿಗೆ ಮರು ಜೀವ ನೀಡಿದವು. ಸಂಸ್ಕ್ರತದ ಹಂಗು ತೊರೆದು ಶರಣರು ಕನ್ನಡ ಭಾಷೆಯನ್ನು ವಿಶ್ವ ಮನ್ನಣೆಗೆ ಪಾತ್ರವಾಗಿಸಿದರು.

ಶರಣರಿಗೆ ತಾಯ್ನುಡಿಯ ಜಾಗ್ರತ ಅರಿವಿತ್ತು. ರಾಜಾಶ್ರಯದಲ್ಲಿ ಪರಾವಲಂಬಿಗಳಾಗಿ ಜೀವಿಸುತ್ತಿದ್ದ ವೈದಿಕರ ಕುಟಿಲ ಹುನ್ನಾರಗಳ ಸಂಸ್ಕ್ರತವೆಂಬ ಬಲೆಯೊಳಗೆ ಬಿದ್ದು ತನ್ನ ಅಸ್ತಿತ್ವವೇ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ನಮ್ಮ ನೆಲಮೂಲದ ಜನಪದೀಯ ಸಂಸ್ಕೃತಿ, ಲೋಕದೃಷ್ಟಿ, ವೈವಿಧ್ಯತೆಗಳ ಜೊತೆ ಜೊತೆಗೆ ನಮ್ಮ ತಾಯ್ನುಡಿ ಕನ್ನಡವನ್ನು ಕಳೆದುಕೊಳ್ಳುತ್ತಿರುವುದರ ಎಚ್ಚರವಿಲ್ಲದೆ ಇರುವಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಶರಣರು ಕನ್ನಡಕ್ಕೆ ಮನ್ನಣೆಯನಿತ್ತು ಸ್ಥಾನೀಯ ಭಾಷಾ ವಿದ್ವಾಂಸರಾಗುವ ಆಸ್ಮಿತೆಯ ಗ್ರಹಿಕೆಯನ್ನು ಕಂಡುಕೊಂಡಿದ್ದರು. ಸಾಹಿತ್ಯವೆಂದರೆ ರಾಜನನ್ನು ಮೆಚ್ಚಿಸಲು ಬರೆಯುತ್ತಿದ್ದ ಸಂಸ್ಕ್ರತದ ಕಟ್ಟುಗಳೆಂದು ತಿಳಿದಿದ್ದ ಕಾಲಘಟ್ಟದಲ್ಲಿ

ಶರಣರು ನಮ್ಮ ದೈನಂದಿನ ವ್ಯವಹಾರಿಕ ಭಾಷೆ ಅಥವ ನಮ್ಮ ಸಮುದಾಯ ನುಡಿ ಕನ್ನಡವನ್ನು ಅಳಿವಿನಂಚಿನಿಂದ ಪಾರುಮಾಡುವ ಗ್ರಹಿಕೆ ತಮ್ಮದಾಗಿಸಿಕೊಂಡಿದ್ದರು. ಜನಪದೀಯ ಭಾಷೆ ಅಥವಾ ಸಮುದಾಯದ ನುಡಿಯು ಒಂದು ಕಸುವು ಎಂತಲೂˌ ಅದು ಲೋಕದೃಷ್ಟಿಯನ್ನು ಕಟ್ಟಿಕೊಡುವ ಅಭಿವ್ಯಕ್ತಿ ಮಾಧ್ಯಮ, ಸಾಂಸ್ಕೃತಿಕ ನೆನಪುಗಳನ್ನು ಕಾಪಿಟ್ಟುಕೊಳ್ಳುವ ಸಾಧನವೆಂದು ಶರಣರು ಭಾವಿಸಿದ್ದರು. ಪ್ರಭುತ್ವದ ಸಹಾಯದಿಂದ ಕರ್ಮಠ ವೈದಿಕರು ಪರಕೀಯ ಸಂಸ್ಕ್ರತ ಭಾಷೆಯನ್ನು ಮೆರೆಸುವ ಭರದಲ್ಲಿ ಆಗಿಹೋಗಬಹುದಾಗಿದ್ದ ಸಮುದಾಯಗಳ ಬಲವಂತದ ಪಲ್ಲಟಗಳಿಂದ ಪ್ರಾಂತೀಯ ನುಡಿಗಳು ಅಳಿಯುತ್ತಿದ್ದವು. ಶೇಕ್ಸ್ ಪಿಯರ್ ಪ್ರತಿಪಾದಿಸಿದ ಹೊಸ ನುಡಿಯಿಂದ ಪ್ರಭಾವಿತರಾದ ಆದಿವಾಸಿ ಕ್ಯಾಲಿಬನ್ ಸಮುದಾಯ ತನ್ನ ಮೂಲ ನುಡಿ ಮರೆತಿದ್ದಂಥ ದೃಷ್ಟಾಂತ ನಮ್ಮ ಕಣ್ಣೆದುರಿಗಿದೆ.ˌ ಕಾಲಕಾಲಕ್ಕೆ ನಮ್ಮ ಪ್ರಾಂತೀಯ ಸಮುದಾಯಗಳು ಅಧಿಕಾರ ಭಾಷೆ, ಸಾಮ್ರಾಜ್ಯಶಾಹಿ ಭಾಷೆಗಳಿಗೆ ಮರುಳಾಗಿ ತಮ್ಮ ನುಡಿ ಕಳೆದುಕೊಳ್ಳುತ್ತವೆ  ಎಂಬುದನ್ನು ಬಹುಶಃ ಶರಣ ಚಳವಳಿಯ ನೇತ್ರತ್ವವಹಿಸಿದ್ದ ಬಸವಣ್ಣನವರು ಸೂಕ್ಷ್ಮವಾಗಿ ಗ್ರಹಿಸಿದ್ದಿರಬಹುದೆಂದು ನಾವು ಊಹಿಸಬಹುದಾಗಿದೆ. ಬಸವಾದಿ ಶರಣರು ಕೇವಲ ಚಳುವಳಿಗಾರರಷ್ಟೇ ಆಗಿರದೆ ವಿದ್ವತ್ ಪೂರ್ಣ ಚಿಂತಕರೂ ಆಗಿದ್ದರು. ವೈದಿಕ ಕರ್ಮಠರು ಜನಸಾಮಾನ್ಯರನ್ನು ಶಿಕ್ಷಣದಿಂದ ವಂಚಿಸುತ್ತಿದ್ದಾಗ ಶರಣರು ಅರಿವಿನ ಪಲ್ಲಟಕ್ಕೆ ಕೊಟ್ಟ ಕೊಡುಗೆ ಅನನ್ಯ. ನಮ್ಮ ಜನಪದೀಯ ನುಡಿಗಳುˌ ಹಾಗೂ ಪ್ರಾಂಥೀಯ ಸಮುದಾಯದ ರಿವಾಜುಗಳುˌ  ಅಳಿವಿನ ಅಂಚಿಗೆ ಜಾರುತ್ತಿದ್ದ ಸಂಕ್ರಮಣ ಸಂದರ್ಭದಲ್ಲಿ ಜನರನ್ನು ಸಂಘಟಿಸಿ ಹೊಸದೊಂದು ಜನಪರ ಚಳುವಳಿ ರೂಪಿಸುವ ಮೂಲಕ ಶರಣರು ಈ ನೆಲಮೂಲದ ಬಹುತ್ವ ಮತ್ತು ಬಹುಮುಖಿ ಚಿಂತನೆಗಳ ಕುರಿತಾದ ಅಳಿವು-ಉಳಿವಿನ ಹೊಸತೊಂದು ವ್ಯಾಖ್ಯಾನದ ಪರಿಧಿಗೆ ತಮ್ಮ ವಚನ ಕೃತಿಗಳನ್ನು ತಂದು ನಿಲ್ಲಿಸಿರುತ್ತಾರೆ. ಶರಣರು ಕಟ್ಟಿಕೊಟ್ಟ ವಚನ ಚಳವಳಿ ಜಗತ್ತಿನಲ್ಲಿ ಪ್ರಥಮ ಪ್ರಜಾಪ್ರಭುತ್ವದ ಸಂಕೇತವಾದ ಅನುಭವ ಮಂಟಪದ ಉದಯಕ್ಕೆ ನಾಂದಿಯಾಗುತ್ತದೆ.  ಶರಣರ ವಚನಗಳು ಜನತಂತ್ರ ಪದ್ದತಿಯ ವಾಗ್ವಾದಕ್ಕೆ ತೆರೆದಿಟ್ಟ ಮಾರ್ಗವಾಗಿ ಕಾರ್ಯಮಾಡುತ್ತದೆ. ವಚನ ಚಳವಳಿಯು ಅದೊಂದು ಅಪೂರ್ಣ ಕ್ರಾಂತಿ ಎಂದು ಅನೇಕ ಇತಿಹಾಸಕಾರರುˌ ವಿದ್ವಾಂಸರು ಮತ್ತು ಪ್ರಾಜ್ಞರಿಂದ ಗುರುತಿಸಿಕೊಳ್ಳುತ್ತಲೆ ಇಂದಿನ ತಲೆಮಾರಿನ ವೈಚಾರಿಕ ಮತ್ತು ಪ್ರಗತಿಪರರ ಬಹುತ್ವದ ಮಹತ್ವ ಕಾಪಾಡುವ ಸ್ರಜನಶೀಲ ಚಿಂತನೆಗೆ ಪ್ರಚೋದನೆ ನೀಡುತ್ತದೆ. ಆ ಮೂಲಕ ಈ ನೆಲದ ಬಹುಮುಖಿ ಸಂಸ್ಕ್ರತಿಯ ಉಳಿವಿಗಾಗಿ ಪರಿಹಾರವನ್ನು ಕಂಡುಕೊಳ್ಳುವ ನಿರೀಕ್ಷೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ತುಡಿಯುತ್ತದೆ.

ಹೀಗಾಗಿ ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮದ ವಚನ ಚಳುವಳಿ ಈ ದೇಶದಲ್ಲಿ ಮೊದಲ ಬಾರಿಗೆ ಪ್ರಾಂತೀಯ ಭಾಷೆಯ ಉಳಿವಿಗಾಗಿˌ ದೀನದಲಿತರ ಶೈಕ್ಷಣಿಕ ಮತ್ತು ಮತ್ತು ಸಾಮಾಜಿಕ ಅಭಿವ್ರದ್ಧಿಗಾಗಿˌ ಸಮಸಮಾಜದ ಕನಸು ನನಸು ಮಾಡಲುˌ ಮತ್ತು ಈ ನೆಲದ ಬಹುತ್ವದ ಉಳಿವು ಹಾಗೂ ಇನ್ನೂ ಅನೇಕ ಜ್ವಲಂತ ಸಮಸ್ಸೆಗಳ ವಿರುದ್ಧ ಸಮರ ಸಾರಿ ಮುಂದಿನ ಪೀಳಿಗೆಗೆ ವೈಚಾರಿಕ ಚಿಂತನೆಯ ಪ್ರೇರಣೆಯನ್ನು ನೀಡಿಹೋಗಿದೆ.