ಭರವಸೆಯ ನಾಳೆಯನ್ನು  ಎದುರು ನೋಡೋಣ   

ಆಸ್ಟ್ರೇಲಿಯಾ ತಂಡವನ್ನು ಆಲ್ ಔಟ್ ಮಾಡಿದ್ದು ಅಷ್ಟೇ ಪ್ರಮುಖವಾದ ಅಂಶ. ಅದು ಭಾರತದ ಬೌಲರ್ ಗಳ ಹಾಗೂ ಫೀಲ್ಡರ್ ಗಳ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. 

ಭರವಸೆಯ ನಾಳೆಯನ್ನು  ಎದುರು ನೋಡೋಣ   

ಭಾರತ ಹತ್ತಬೇಕಾದ ಮೆಟ್ಟಿಲುಗಳು ಇನ್ನೂ ಇವೆ. ಆದರೆ ಕೊನೆಯ ಮೆಟ್ಟಿಲನ್ನೂ ಹತ್ತುವ ಭರವಸೆಯನ್ನು ತಂಡದ ಇಂದಿನ ಗೆಲುವು ಮೂಡಿಸಿದೆ. ಐದು ಬಾರಿ ಚಾಂಪಿಯನ್ ಆದವರನ್ನು ಎರಡು ಬಾರಿ ಕಪ್ ಗೆದ್ದವರು ಈ ಮಟ್ಟಿಗೆ ಸೋಲಿಸಿದ್ದು ಹೆಚ್ಚುಗಾರಿಕೆಯೇ. ಎನ್ನುತ್ತಾರೆ ಪಿ.ಎಂ ವಿಜಯೇಂದ್ರ ರಾವ್

ವಯಸ್ಸಿಗೆ ಬಂದ ಮಕ್ಕಳೆಲ್ಲಾ ಒಬ್ಬರನ್ನೊಬ್ಬರು ಮೀರಿಸುವಂತಹ ಉದ್ಯೋಗ ಗಳಿಸಿ ಕೈತುಂಬಾ ಸಂಬಳ ಗಳಿಸತೊಡಗಿದಾಗ ಆ ಮಧ್ಯಮವರ್ಗದ ಕುಟುಂಬ ಹೇಗೆ ಆರ್ಥಿಕ ಪ್ರಗತಿ ಕಂಡು ನಿಶ್ಚಿಂತೆಯಾಗಿ ಜೀವನ ಸಾಗಿಸುವುದೋ ಹಾಗೆ ನೆನ್ನೆ ಆಡಬೇಕಾಗಿ ಬಂದ  ಭಾರತದ ಬ್ಯಾಟ್ಸ್ ಮ್ಯಾನ್ ಗಳೂ ಧನ್ಡಿಯಾಗಿ ರನ್ ಗಳಿಸಿ ತಂಡದ ಮುನ್ನಡೆಗೆ ಬುನಾದಿ ಹಾಕಿದರು. 

ಬ್ಯಾಟ್ ಮಾಡಲಿಕ್ಕೆ ಅವಕಾಶ ಸಿಕ್ಕಿದ ಬ್ಯಾಟ್ಸ್ ಮ್ಯಾನ್ ಗಳೆಲ್ಲರೂ ಆಕ್ರಮಣಕಾರಿಯಾಗಿ ಆಡಿದ್ದು ಒಂದು ಮುಖ್ಯವಾದ ಅಂಶವಾದರೆ, ಆಸ್ಟ್ರೇಲಿಯಾ ತಂಡವನ್ನು ಆಲ್ ಔಟ್ ಮಾಡಿದ್ದು ಅಷ್ಟೇ ಪ್ರಮುಖವಾದ ಅಂಶ. ಅದು ಭಾರತದ ಬೌಲರ್ ಗಳ ಹಾಗೂ ಫೀಲ್ಡರ್ ಗಳ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. 

ಮೊದಲಿಗೆ, ಭಾರತ ತಂಡಕ್ಕೆ ಶುಭದಾಯಕವಾಗಿದ್ದು ಟಾಸ್. ಬಗೆದಷ್ಟೂ ಪಿಚ್ ನಲ್ಲಿ ರನ್ ಗಳಿರುವುದನ್ನು ಮನಗಂಡ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಮಾಡಲು ನಿರ್ಧರಿಸಿದ್ದು ಸಹಜವಾದ ಆಯ್ಕೆಯಾಗಿತ್ತು. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ರಂಥ ಉತ್ಕೃಷ್ಟ ವೇಗಿಗಳಿಗೆ ವಿನಯಪೂರ್ವಕ ಗೌರವವನ್ನು ಯಥೇಚ್ಛವಾಗಿಯೇ ಸಲ್ಲಿಸಿದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಆ ಜಿಪುಣ ಬೌಲರ್-ದ್ವಯರು ಹಾಕಿದ್ದ ಸಂಕೋಲೆಯಿಂದ ಬಿಡಿಸಿಕೊಂಡು ರನ್ ಶೇಖರಣೆಯ ವೇಗವನ್ನು ಹೆಚ್ಚಿಸಿದರು. ಎಂತಲೇ ಹತ್ತೊಂಬತ್ತನೇ ಓವರ್ ನಲ್ಲೇ ಭಾರತ ನೂರು ರನ್ ಗಳಿಸಿತು. ಈ ಮುನ್ನ ವಿಶ್ವ ಕಪ್ ಪಂದ್ಯಾವಳಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧ ಮೊದಲ ವಿಕೆಟ್ ಗೆ ಅತಿ ಹೆಚ್ಚು ರನ್ ಗಳಿಸಿದ್ದು ಇದೇ ರೋಹಿತ್-ಶಿಖರ್ ಜೋಡಿ - ಎಸ್ ಸಿ ಜಿ ಮೈದಾನದಲ್ಲಿ ಗಳಿಸಿದ 76. ನೆನ್ನೆ, ಆ ದಾಖಲೆಯನ್ನು ಲೀಲಾಜಾಲವಾಗಿ ಹಿಮ್ಮೆಟ್ಟಿ 127 ರನ್ ಪೇರಿಸಿದರು. ನೆನ್ನೆಯ ಪಂದ್ಯಕ್ಕೆ ಮುನ್ನ ವಿಶ್ವ ಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯಾವುದೇ ತಂಡದ ಆರಂಭಿಕ ಆಟಗಾರರು ನೂರು ಅಥವಾ ಹೆಚ್ಚಕ್ಕೂ ರನ್ ಗಳಿಸಿದ್ದು ಮೂರೇ ಬಾರಿ ಅನ್ನುವುದನ್ನು ಗಮನಿಸಿದಾಗ  ಆಸ್ಟ್ರೇಲಿಯಾದ ಬೌಲಿಂಗ್ ಗುಣಮಟ್ಟ ಗೋಚರವಾಗುತ್ತದೆ.  

ಶಿಖರ್ ಗೂ, ಓವಲ್ ಮೈದಾನಕ್ಕೂ ಅದೇನೋ ನಂಟು. ಇಂದಿನವರೆವಿಗೂ ಈ ಮೈದಾನದಲ್ಲಿ ಆತ ಗಳಿಸಿದ ರನ್ ಗಳು - 107, 125, 78, 21, 51, 117. ಶಿಖರ್ ಔಟಾದದ್ದು 33 ನೇ ಓವರ್ ನಲ್ಲಿ. ಆಗ ಮತ್ತೊಂದು ತುದಿಯಲ್ಲಿದ್ದ ವಿರಾಟ್ ತೆಗೆದುಕೊಂಡ ಮಹತ್ತರ ನಿರ್ಧಾರ ಹಿಂದಿನ ಮ್ಯಾಚ್ ನಲ್ಲಿಯಂತೆ ಲೋಕೇಶ್ ರಾಹುಲನ್ನು ಆಡಿಸದೇ, ಟಿ-20 ಪಂದ್ಯಾವಳಿಯಲ್ಲಿ ಉತ್ತಮ ಫಾರ್ಮ್ ಮೆರೆದಿದ್ದ ಹಾರ್ದಿಕ್ ಪಾಂಡ್ಯಗೆ ಮುಂಬಡ್ತಿ ನೀಡಿದ್ದು. ಹಾರ್ದಿಕ್, ಆ ನಂತರ ಬಂದ ಎಂಎಸ್ ಧೋನಿ ಮತ್ತು ರಾಹುಲ್ ಆಸ್ಟ್ರೇಲಿಯಾ ಬೌಲರ್ ಗಳನ್ನು ಬಗ್ಗು ಬಡಿದರು. ಕೇವಲ 44 ಎಸೆತಗಳಲ್ಲಿ ಈ ಮೂವರು ಬ್ಯಾಟಿಂಗ್ ಶೂರರು 86 ರನ್ ದೋಚಿದರು. ಸಮಬಲರಾದ ಎರಡೂ ತಂಡಗಳ ನಡುವೆ ವಿಜಯಿಯನ್ನು ನಿರ್ಧರಿಸುವಲ್ಲಿ ಈ ಮೂವರು ಆಡಿದ ರೀತಿ ನಿರ್ಣಾಯಕ ಪಾತ್ರವನ್ನು ವಹಿಸಿತು. ಅವರ ಸ್ಟ್ರೈಕ್ ರೇಟ್ ಅನುಕ್ರಮವಾಗಿ ೧೭೮, ೧೯೩ ಮತ್ತು ೩೬೮. ರಾಹುಲ್ ಎದುರಿಸಿದ ಮೂರು ಬಾಲ್ ಗಳಲ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಗಳಿಸಿದ್ದು ನೋಡಿದರೆ ಹಾರ್ದಿಕ್ಕಿಗೆ ಮುಂಬಡ್ತಿ ಕೊಡದಿದ್ದರೂ ನಡೆಯುತ್ತಿತ್ತೇನೋ ಅಂದೆನಿಸುವುದು ಕನ್ನಡ ಕ್ರಿಕೆಟ್ ಅಭಿಮಾನಿಗಳಿಗೇ ಮಾತ್ರವೇನಲ್ಲ. ಈ ಮೂವರ ಅಬ್ಬರ ನಿಂತಾಗ, ಕೃಪಣ ಬೌಲರ್ ಸ್ಟಾರ್ಕ್ ತನ್ನ ಹತ್ತು ಓವರ್ ಗಳಲ್ಲಿ 74 ರನ್ಗಳನ್ನು ಬಾರಿಸಿಕೊಂಡಿಯಾಗಿತ್ತು. ಏನೇನೂ ಚೆನ್ನಾಗಿ ಬೌಲ್ ಮಾಡಲಾಗದ ಆಡಮ್ ಝಮ್ಪ ಆರೇ ಓವರ್ ಗಳಲ್ಲಿ 60 ರನ್ ಚಚ್ಚಿಸಿಕೊಂಡಿದ್ದು ಹಾಗೂ ಆಲ್ರೌಂಡ್ ಆಟಗಾರ ಮಾರ್ಕಸ್ ಸ್ಟೋಯಿನಿಸ್ ಏಳು ಓವರ್ ಗಳಲ್ಲಿ 62 ರನ್ ಹರಿಯಬಿಟ್ಟಿದ್ದಷ್ಟೇ ಸ್ಟಾರ್ಕ್ ಗೆ ಸಿಕ್ಕ ಸಮಾಧಾನವಿರಬೇಕು. 

ಭಾರತ ಮತ್ತು ಆಸ್ಟ್ರೇಲಿಯಾ ಮೊದಲೆರಡು ವಿಶ್ವಕಪ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಲೇ ಇಲ್ಲ. ಅವೆರಡು ತಂಡಗಳು ಮೊದಲು ಸೆಣಸಿದ್ದು 1983 ರ  ವಿಶ್ವಕಪ್ ನ ಮೂರನೇ ಆವೃತ್ತಿಯಲ್ಲಿ. ಹಿಂದೆರಡು ಆವೃತ್ತಿಗಳಲ್ಲಿ ತೋರಿದ ನೀರಸ ಪ್ರದರ್ಶನದ ಕಾರಣ ಭಾರತ ದುರ್ಬಲ ತಂಡವೆಂದು ಗುರುತಿಸಿಕೊಂಡಿತ್ತು. ತನ್ನ ಉತ್ತಮ ಆಟಗಾರರನ್ನು ವಿವಾದಾಸ್ಪದ ಪ್ಯಾಕರ್ಸ್ ಸರಣಿಗೆ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಕೂಡ ಪ್ರಬಲವಾಗೇನಿರಲಿಲ್ಲ. ಅಂತಹ ತಂಡದ ವಿರುದ್ಧ ಭಾರತ 162 ರನ್ ಗಳ ಸೋಲುಂಡಿತ್ತು. ನಾಯಕ ಕಪಿಲ್ ದೇವ್ ಬ್ಯಾಟ್ ಮತ್ತು ಬಾಲ್ ಎರಡನ್ನೂ ಸಮರ್ಥವಾಗಿ ಬಳಸಿಕೊಂಡಿದ್ದರು. ಹಿಂದಿನ ಪಂದ್ಯದಲ್ಲಷ್ಟೇ ಕಪಿಲ್ ಜಿಂಬಾಬ್ವೆ ತಂಡದ ವಿರುದ್ಧ ದಾಖಲೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 

ಆಸ್ಟ್ರೇಲಿಯಾ ವಿರುದ್ಧ ಸೋತ ಸೇಡನ್ನು ಒಂದು ವಾರದ ನಂತರ ಭಾರತ ತೀರಿಸಿಕೊಂಡು ಸೆಮಿಫೈನಲ್ ಪ್ರವೇಶಿಸಿತು. ಆ ನಂತರ ಫೈನಲ್ ಪ್ರವೇಶಿಸಿ ವೆಸ್ಟ್ ಇಂಡೀಸ್ ತಂಡವನ್ನು (ಟೂರ್ನಿಯಲ್ಲಿ) ಎರಡನೇ ಬಾರಿಗೆ ಮಣಿಸಿತು.  

1987 ರಲ್ಲಿ, ಆಸ್ಟ್ರೇಲಿಯಾ ವಿರುದ್ಧ ಮದರಾಸಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮತ್ತೆ ಸೋಲನುಭವಿಸಿತು. ಡೀನ್ ಜೋನ್ಸ್ ಹೊಡೆದ ಒಂದು ಹೊಡೆತ ಬೌಂಡರಿಯಲ್ಲ, ಸಿಕ್ಸರ್ ಎಂದು ಆಸ್ಟ್ರೇಲಿಯಾ ಹೇಳಿದ್ದನ್ನು ಕಪಿಲ್ ದೇವ್ ಔದಾರ್ಯದಿಂದ ಅನುಮೋದಿಸಿದರು. ಕೊನೆಗೆ, ಆಸ್ಟ್ರೇಲಿಯಾ ಜಯಿಸಿದ್ದು ಅದೇ ಎರಡು ರನ್ ಗಳ ಅಂತರದಲ್ಲಿ ಎಂಬ ವ್ಯಂಗ್ಯಕ್ಕೆ ಭಾರತ ತುತ್ತಾಯಿತು. ಅದೇ ಆವೃತ್ತಿಯಲ್ಲಿ ಉಭಯ ತಂಡಗಳ ನಡುವೆ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ಸುಲಭವಾಗಿ ಗೆದ್ದಿತು. 

ಆ ನಂತರದ ಏಳು ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಿದ ಭಾರತ ದಕ್ಕಿಸಿಕೊಂಡಿದ್ದು ಒಂದು ಗೆಲುವು ಮಾತ್ರ. ಆ ಏಕೈಕ ಗೆಲುವು ಪಡೆದದ್ದು 2011 ರಲ್ಲಿ. ಅದೇ ವರ್ಷ ಭಾರತ ವಿಶ್ವ ಕಪ್ ನ್ನು ತನ್ನದಾಗಿಸಿಕೊಂಡಿತಾದರೂ ನಾಲ್ಕು ವರ್ಷಗಳ ನಂತರದ ಪಂದ್ಯಾವಳಿಯಲ್ಲಿ ದಯನೀಯ ಸೋಲನ್ನನುಭವಿಸಿ ಟೂರ್ನಿಯಿಂದ ಹೊರಬಿದ್ದಿತು. 

ನೆನ್ನೆ ಸಾಧಿಸಿದ ವಿಜಯದಿಂದ ಮತ್ತೊಮ್ಮೆ ತನ್ನ ಸೋಲಿನ ಸರಣಿಗೆ ಬೈ, ಬೈ ಹೇಳಿದೆ. 

ಭಾರತ ಗೆದ್ದಿದ್ದಷ್ಟೇ ಮುಖ್ಯವಲ್ಲ, ಅದು ಗೆದ್ದ ರೀತಿ ಸಮಾಧಾನಕರವಾಗಿದೆ. ಅಸಾಧಾರಣ ಫಾರ್ಮ್ ನಲ್ಲಿರುವ ವಾರ್ನರ್ ನಂಥ ಕೆಚ್ಛೆದೆಯ ಬ್ಯಾಟ್ಸ್ ಮ್ಯಾನ್ ತನ್ನ ಎಂದಿನ ಆಟವಾಡಲು ಭಾರತದ ಬೌಲರ್ ಗಳು ಬಿಡಲೇ ಇಲ್ಲ. ಹಾಕಿದ ಕಟ್ಟನ್ನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ನಾಯಕ ಆರೋನ್ ಫಿಂಚ್ ರನ್ ಔಟ್ ಆದರು. ವಾರ್ನರ್ನ ಹೆಣಗಾಟಕ್ಕೆ ಚಾಹಲ್ ಕೊನೆಗೂ ಗತಿ ಕಾಣಿಸಿದರು. ಬೌಲಿಂಗ್ ವೀರ ಬುಮ್ರಾ ತನ್ನ ಐದನೇ ಓವರ್ ಮಾಡಲು ಬಂದಾಗ ಆಸ್ಟ್ರೇಲಿಯಾ ಉಬ್ಬಸ ಪಡುತ್ತಿತ್ತು, ಆದರೆ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಎಂಬ ಖ್ಯಾತಿಯ ಸ್ಟೀವನ್ ಸ್ಮಿತ್ ಮತ್ತು ಎಡಗೈ ಬ್ಯಾಟ್ಸ್ ಮ್ಯಾನ್ ಉಸ್ಮಾನ್ ಖವಾಜ ಬ್ಯಾಟ್ ಮಾಡುತ್ತಿದ್ದರು. ಆದರೆ ಬುಮ್ರಾ ಖವಾಜರನ್ನು ಬಲಿಪಡೆದು ಪೆವಿಲಿಯನ್ ಗೆ ಅಟ್ಟಿದರು. ಓವರ್ ಗೆ ಹನ್ನೊಂದು ರನ್ ಗಳನ್ನು ಗಳಿಸಬೇಕಿದ್ದ ಆಸ್ಟ್ರೇಲಿಯಾಗೆ ಗ್ಲೆನ್ ಮ್ಯಾಕ್ಸ್ವೆಲ್ ಆಶಾಕಿರಣ ಒದಗಿಸಿದರು. ಟಿ-20 ಮ್ಯಾಚುಗಳಲ್ಲಿ ಮ್ಯಾಕ್ಸ್ವೆಲ್ ಬುಮ್ರಾ ವಿರುದ್ಧ ಎದುರಿಸಿದ 54 ಬಾಲ್ ಗಳಲ್ಲಿ ಆರು ಬಾರಿ ಔಟಾಗಿದ್ದಾರೆ, ಆದರೆ ಆ ಕಹಿ ನೆನಪನ್ನು ಮರೆತು ವೀರಾವೇಶದಿಂದ ಬ್ಯಾಟ್ ಮಾಡಿದರು. 

ಅದುವರೆವಿಗೂ ಬೌಲಿಂಗ್ ನಲ್ಲಿ ಕೊಡುಗೈ ದಾನಿಯಾಗಿರದ ಭುವನೇಶ್ವರ್ ಕುಮಾರ್ ತಮ್ಮ ಐದು ಓವರ್ ಗಳಲ್ಲಿ ಕೇವಲ 12 ರನ್ ಗಳಿಸಿದ್ದರು. ಆದರೆ ಆಸ್ಟ್ರೇಲಿಯಾ ಇನ್ನಿಂಗ್ಸ್ ನ 38 ನೇ ಓವರ್ ಬೌಲ್ ಮಾಡಿದ ಅವರು 15 ರನ್ ಹೊಡೆಸಿಕೊಂಡರು. ಮರು ಓವರ್ (ನಂಬರ್ 39) ನಲ್ಲಿ ಬುಮ್ರಾ 13 ರನ್ ಕೊಟ್ಟು ಭಾರತೀಯ ಕ್ರಿಕೆಟ್ ಬೆಂಬಲಿಗರಲ್ಲಿ ಆತಂಕ ಮೂಡಿಸಿಬಿಟ್ಟರು. 

ಆದರೆ ನಲವತ್ತನೇ ಓವರ್ ಎಸೆದ ಭುವಿ ಮತ್ತೆ ಜಿಗುಟು ಬೌಲಿಂಗ್ ಮಾಡಿದ್ದಲ್ಲದೇ ಭಾರತಕ್ಕೆ ಕಳಂಕ ಪ್ರಾಯರಾಗಿದ್ದ ಸ್ಮಿತ್ ರನ್ನು ಮನೆಗಟ್ಟಿದರು. ಓವರ್ ಕಡೆಯ ಬಾಲ್ ನಲ್ಲಿ ಸ್ಟೋಯಿನಿಸ್ ರನ್ನೂ ನೋಯಿಸಿ ಕಾಲು ಕೇಳುವಂತೆ ಮಾಡಿದರು. 

ಏಕದಿವಸೀಯ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ರನ್ನು 28 ಬಾಲ್ ಗಳಲ್ಲಿ ಮೂರು ಬಾರಿ, ಹಾಗೂ ಟಿ-20 ಪಂದ್ಯಗಳಲ್ಲಿ 52 ಎಸೆತಗಳಲ್ಲಿ ಐದು ಬಾರಿ ಔಟ್ ಮಾಡಿದ ಕೀರ್ತಿಗೆ ಪಾತ್ರರಾದ ಚಾಹಲ್ ಮತ್ತೊಮ್ಮೆ ಅವರ ವಿಕೆಟ್ ಪಡೆದುಕೊಂಡರು. ಅಲ್ಲಿಗೆ ಆಸ್ಟ್ರೇಲಿಯಾ ಭಾರತಕ್ಕೆ ಪಂದ್ಯವನ್ನೊಪ್ಪಿಸುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ನಂದಿಹೋಗುತ್ತಿದ್ದ ಜ್ವಾಲೆಯನ್ನು ಸ್ವಲ್ಪ ಹೊತ್ತು ಆರದಂತೆ ತಡೆಹಿಡಿಯುವ ಕೆಲಸವನ್ನು ತಂಡದ ಕೊನೆಯ ನೆಚ್ಚುಗೆಯ ಸೇನಾನಿ (ವಿಕೆಟ್ ಕೀಪರ್) ಅಲೆಕ್ಸ್ ಕಾರಿ ಮಾಡಿದರು. 

ಭಾರತ ಹತ್ತಬೇಕಾದ ಮೆಟ್ಟಿಲುಗಳು ಇನ್ನೂ ಇವೆ. ಆದರೆ ಕೊನೆಯ ಮೆಟ್ಟಿಲನ್ನೂ ಹತ್ತುವ ಭರವಸೆಯನ್ನು ತಂಡದ ಇಂದಿನ ಗೆಲುವು ಮೂಡಿಸಿದೆ. ಐದು ಬಾರಿ ಚಾಂಪಿಯನ್ ಆದವರನ್ನು ಎರಡು ಬಾರಿ ಕಪ್ ಗೆದ್ದವರು ಈ ಮಟ್ಟಿಗೆ ಸೋಲಿಸಿದ್ದು ಹೆಚ್ಚುಗಾರಿಕೆಯೇ. 

ಏಕದಿವಸೀಯ ಪಂದ್ಯಗಳಲ್ಲಿ  ವಿರುದ್ಧ 2000 ರನ್  ದಾಟುವುದರಲ್ಲಿ ರೋಹಿತ್ ದಾಖಲೆ ನಿರ್ಮಿಸಿದ್ದಾರೆ.  ಆ ಗಡಿ ತಲುಪುವುದಕ್ಕೆ ಬೇರೆ ಅಗ್ರ ಬ್ಯಾಟ್ಸ್ ಮ್ಯಾನ್ ಗಳಾದ ಸಚಿನ್ ತೆಂಡುಲ್ಕರ್, ವಿವ್  ರಿಚರ್ಡ್ಸ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಅನುಕ್ರಮವಾಗಿ 40, 44, 44, 45 ಇನ್ನಿಂಗ್ಸ್ ಆಡಿದ್ದರೆ, ರೋಹಿತ್ 37 ಇನ್ನಿಂಗ್ಸ್ ಗಳಲ್ಲೇ ಆ ಗುರಿ ಮುಟ್ಟಿ ತಮ್ಮ ಪ್ರತಿಭೆಯ ಪ್ರದರ್ಶನ ನೀಡಿದ್ದಾರೆ.    

ಆಕ್ರಮಣಶೀಲತೆಗೆ ಮತ್ತೊಂದು ಹೆಸರಾಗಿದ್ದ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇಯ್ನ್ಸ್ಆಸ್ಟ್ರೇಲಿಯಾ ವಿರುದ್ಧ ಆಡಿದ ತಂಡಗಳ ಪೈಕಿ ಅತಿ ಯಶಸ್ವಿ ಆರಂಭಿಕ ಜೋಡಿ ಎಂದು ಪ್ರಸಿದ್ಧಿ ಹೊಂದಿದ್ದರು. ಅವರು  ಆ ತಂಡದ ವಿರುದ್ಧ ಕಲೆ ಹಾಕಿದ 1152 ರನ್ ಗಳನ್ನು ಅವರಿಗಿಂತ ಕಡಿಮೆ ಮ್ಯಾಚುಗಳಲ್ಲಿ ಗಳಿಸಿದ ಅಮೋಘ ಸಾಧನೆಯನ್ನು ರೋಹಿತ್ ಮತ್ತು ಶಿಖರ್ ನೆನ್ನೆ ನೆರವೇರಿಸಿದರು. 

ನೆನ್ನೆಯ ವಿಜಯದ ಮತ್ತೊಂದು ಅಂಶವೆಂದರೆ ಬೃಹತ್ ಮೊತ್ತ ಸೇರಿಸುವಾಗ  ಕಳೆದುಕೊಂಡ ವಿಕೆಟ್ ಗಳು ಕೇವಲ ಐದು. ಬೀಸು ಓವರ್ ಗಳಲ್ಲಿ ರನ್ ಗತಿಯನ್ನು ಹೆಚ್ಚಿಸಲು ಹೋಗಿ ಕಳೆದುಕೊಂಡ ವಿಕೆಟ್ ಗಳೂ ಆ ಐದರಲ್ಲಿ ಸೇರಿವೆ.