ಲಾಲ್ ಬಹದ್ದೂರ್ ಶಾಸ್ತ್ರಿ : ಆದರ್ಶ ಯುಗದ ಅಪರೂಪದ ನಾಯಕ  

ಪ್ರಾಮಾಣಿಕತೆ ಎಂದರೆ ಈಗಿನ ರಾಜಕಾರಣಿಗಳಿಗೆ ಬಹುದೂರದ ಮಾತಾಗಿದ್ದರೆ, ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಪ್ರಾಮಾಣಿಕತೆ ಎಂಬುದು ಆತ್ಮಸಂಗಾತಿಯಾಗಿತ್ತು. ಅವರಲ್ಲಿನ ಅಪ್ಪಟ ಮನುಷ್ಯತ್ವ ಯಶಸ್ವೀ ರಾಜಕಾರಣದ ಶಕ್ತಿಯಾಗಿತ್ತು. 

ಲಾಲ್ ಬಹದ್ದೂರ್ ಶಾಸ್ತ್ರಿ : ಆದರ್ಶ ಯುಗದ ಅಪರೂಪದ ನಾಯಕ  

ಗಾಂಧಿ ಜಯಂತಿಯಂದೇ ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಅವರ ಜನ್ಮದಿನವೂ ಬರುವುದರಿಂದ ಅವರನ್ನು ನೆನಪಿಸಿಕೊಳ್ಳುವವರ ಸಂಖ್ಯೆ ಕಡಿಮೆಯೇ. ಹಾಗಂತ ಶಾಸ್ತ್ರಿ ನೆನಪಿಸಿಕೊಳ್ಳದಂಥ ವ್ಯಕ್ತಿತ್ವವಲ್ಲ. ತುಂಬ ಅಪರೂಪದ ವ್ಯಕ್ತಿತ್ವ ಅವರದು. ಲಾಲ್ ಬಹದೂರ್ ಶಾಸ್ತ್ರಿ ಎಂದರೆ ದೈಹಿಕವಾಗಿ ಪುಟ್ಟ ವ್ಯಕ್ತಿತ್ವವಾಗಿದ್ದರೂ, ಅವರ ಪ್ರಾಮಾಣಿಕ, ಸರಳ ಬದುಕಿನಿಂದ ಗಳಿಸಿದ ವ್ಯಕ್ತಿತ್ವ ಹಿಮಾಲಯದೆತ್ತರ. ರಾಜಕಾರಣದಲ್ಲಿದ್ದು ಅವರಂತೆ ಸರಳವಾಗಿರುವುದು, ನ್ಯಾಯಯುತವಾಗಿರುವುದಕ್ಕೂ ಎದೆಗಾರಿಕೆ ಬೇಕು. ಅದು ಅವರಲ್ಲಿತ್ತು. ಎದೆಗಾರಿಕೆ ಎನ್ನುವುದು ಟೇಪು ಹಿಡಿದು ಅಗಲ ಎಷ್ಟೆಂದು ಹೇಳುವುದರ ಮೂಲಕ ಬರುವುದಿಲ್ಲ. ಅದು ವ್ಯಕ್ತವಾಗುವುದು ನಡವಳಿಕೆಯಿಂದ ಮಾತ್ರ. 

ಈ ಒಂದು ಉದಾಹರಣೆಯಿಂದಲೇ ನಿಮಗೆ ಅವರದೆಂಥ ಮನೋಭಾವ ಎನ್ನುವುದು ನಿಮಗೆ ಅರ್ಥವಾಗಿಬಿಡುತ್ತದೆ. ಇವತ್ತಿನ ರಾಜಕಾರಣದಲ್ಲಿ ನೈತಿಕ ಹೊಣೆ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಒಂದೇ ಒಂದು ಉದಾಹರಣೆಯನ್ನು ನಾವು ಕಾಣುತ್ತಿಲ್ಲ.ರಾಜೀನಾಮೆ ನೀಡಬೇಕೆಂಬ ಜನಾಗ್ರಹವಿದ್ದರೂ ಕೇಳಿಸಿಕೊಳ್ಳದಂಥ ಕಿವುಡು ಈಗಿನ ರಾಜಕಾರಣಿಗಳಲ್ಲಿದೆ. ಸದಾ ಅಧಿಕಾರದಲ್ಲಿರಲೇಬೇಕೆಂಬ ಹಪಾಹಪಿ ಇರುವಂಥವರೇ ರಾಜಕಾರಣದಲ್ಲಿರುವುದರಿಂದ ನೈತಿಕತೆ ಎನ್ನುವ ಪದ ಕೂಡ ಇಂಥವರ ನಿಘಂಟಿನಲ್ಲಿ ಇರುವುದು ಸಾಧ್ಯವಿಲ್ಲ. ಆದರೆ ಶಾಸ್ತ್ರಿ ಹಾಗಲ್ಲ. ಅವರು ಭಾರತದ ಆದರ್ಶ ರಾಜಕಾರಣದ ಒಂದು ಪ್ರಮುಖ ಅಧ್ಯಾಯ. ರೈಲ್ವೇ ಸಚಿವರಾಗಿದ್ದಾಗಿನ ಅವಧಿಯಲ್ಲಿ ಸಾವುನೋವುಗಳಿಗೆ ಕಾರಣವಾದ ಒಂದು ರೈಲ್ವೇ ಅಪಘಾತದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನೈತಿಕತೆ ಮೆರೆಯುವುದು ಅವರಿಗೆ ಸಾಧ್ಯವಾಗಿತ್ತು.  

ಅವರು ಹಾಗಿರುವುದಕ್ಕೂ ಕಾರಣವಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮಹಾತ್ಮ ಗಾಂಧಿಯನ್ನು ಗುರು ಎಂದು ಪರಿಗಣಿಸಿದವರು. ಕಠಿಣ ಪರಿಶ್ರಮವು ಪ್ರಾರ್ಥನೆಯಂತೆ ಎಂದು ನಂಭಿದ್ದವರು.  ಮಹಾತ್ಮ ಗಾಂಧಿಯವರಂತೆಯೇ ಸರಳವಾಗಿಯೇ ಬದುಕಿದವರು. ಬಾಪು ಅವರ ಚಿಂತನೆಗಳ ಪ್ರಭಾವ ಶಾಸ್ತ್ರಿ ಅವರ ಮೇಲೆ ಸಾಕಷ್ಟಿತ್ತು. 

ಶಾಸ್ತ್ರಿ ಜನಿಸಿದ್ದು  ಉತ್ತರ ಪ್ರದೇಶದ ವಾರಾಣಸಿಯ ಮುಘಲ್  ಸರಾಯಿಯಲ್ಲಿ 1904 ರ ಅಕ್ಟೋಬರ್ 2 ರಂದು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂಡರು.  ಅವರ ಬದುಕಿನ ಪಾಠಗಳಲ್ಲಿ ಬಾಲ್ಯವೂ ಮುಖ್ಯವಾಗಿತ್ತು. ಕಿತ್ತು ತಿನ್ನುವ ಬಡತನದಲ್ಲಿ ಅವರ ಶಿಕ್ಷಣ ಯಾವ ರೀತಿಯಲ್ಲೂ ಗಮನಾರ್ಹವಾಗಿಲಿಲ್ಲ. ಆದರೆ ಅಪಾರ ದೇಶ ಪ್ರೇಮದಿಂದಾಗಿ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬಾಲ್ಯದಲ್ಲೇ ಆಕರ್ಷಿತರಾದರು. ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಹಾತ್ಮ ಗಾಂಧಿ ದೇಶದ ಜನತೆಗೆ ಕರೆ ನೀಡಿದಾಗಲೇ ಅದಕ್ಕೆ ಓಗೊಟ್ಟವರು ಶಾಸ್ತ್ರಿ.ಆಗ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರ್ಷ. ಇದಕ್ಕಾಗಿ ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ಅವರಿಗೆ ವೈಯಕ್ತಿಕ ಭವಿಷ್ಯಕ್ಕಿಂತ ಸ್ವಾತಂತ್ರ್ಯ ಮುಖ್ಯವಾಗಿತ್ತು.   

ಹೀಗಾಗಿಯೇ ಬ್ರಿಟಿಷ್ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ಹಲವಾರು ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಾಣಸಿಯ ಕಾಶಿ ವಿದ್ಯಾ ಪೀಠವನ್ನು ಲಾಲ್ ಬಹಾದ್ದೂರ ಶಾಸ್ತ್ರಿ ಸೇರಿದರು. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ದಿಜೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿದ ಪದವಿಯೇ ಹೊರತು ಅದು ಜಾತಿಸೂಚಕವಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರು ಈ ಮೊದಲು ಲಾಲ್ ಬಹದ್ದೂರ್ ವರ್ಮಾ.  ಆದರೆ,  ಅವರು ಜಾತಿ-ಸಂಬಂಧಿತ ಪದವಾದ ವರ್ಮ ಎಂಬ ಪದವನ್ನು ತನ್ನ ಹೆಸರಿನಿಂದ ಶಾಶ್ವತವಾಗಿ ತೆಗೆದುಹಾಕಿ ಶಾಸ್ತ್ರಿಯನ್ನು ಹೆಸರಿನ ಮುಂದೆ ಸೇರಿಸಿಕೊಂಡರು.

ಅವರು ವರದಕ್ಷಿಣೆಯ ವಿರೋಧಿಯಾಗಿದ್ದರಷ್ಟೇ ಅಲ್ಲ, ವೈಯಕ್ತಿಕ ಬದುಕಿನಲ್ಲೂ ಹಾಗೇ ನಡೆದುಕೊಂಡರು. ಅವರ ಹಳ್ಳಿಯ ಪಕ್ಕದ ಮಿರ್ಜಾಪುರದ ಲಲಿತಾ ದೇವಿ ಶಾಸ್ತ್ರಿ ಅವರ ಪತ್ನಿ. ಒಂದು ವಿಚಾರವನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ಅವರ ಮದುವೆ ಸಾಂಪ್ರದಾಯಿಕವಾಗಿತ್ತು. ಅವರು ತಮ್ಮ ಪತ್ನಿಯ ಮನೆಯವರಿಂದ ಕೈಮಗ್ಗದ ಕೆಲವು ಬಟ್ಟೆ ಮತ್ತು ಚರಕವನ್ನು ಮಾತ್ರ ಸ್ವೀಕರಿಸಿದ್ದರು. ಹೀಗೆ ನುಡಿದಂತೆ ನಡೆದವರು ಅವರು.
ಸ್ವಾತಂತ್ರ್ಯದ ನಂತರ ರಚನೆಯಾದ ಕೇಂದ್ರ ಸಂಪುಟದಲ್ಲಿ  ರೈಲ್ವೆ , ಸಾರಿಗೆ .ಸಂಪರ್ಕ,, ವಾಣಿಜ್ಯ,ಕೈಗಾರಿಕೆ, ಗೃಹ ಸೇರಿದಂತೆ ವಿವಿಧ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿ ದಕ್ಷತೆಗೆ ಇನ್ನೊಂದು ಹೆಸರಿನಂತೆ ಕಂಗೊಳಿಸಿದ್ದರು. ಅವರಿಂದಾಗಿಯೇ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ದೇಶದ ನಾಲ್ದೆಸೆಗಳಲ್ಲೂ ಪ್ರತಿಧ್ವನಿಸಿತು.  

ಆಡಳಿತ ನಡೆಸುವವರಿಗೆ ಜನತೆಯ ಪ್ರತಿಕ್ರಿಯೆಗಳನ್ನು ಆಲಿಸುವ ಕಿವಿಗಳಿರಬೇಕು ಎಂದು ಅವರು ಸದಾ ಹೇಳುತ್ತಿದ್ದರು. ಆಡಳಿತ ದಿಕ್ಕುತಪ್ಪಿದೆ ಎಂದು ಜನತೆ ಭಾವಿಸಿದರೆ ಅದನ್ನು ಗೌರವಿಸಿ ಜನರ ಭಾವನೆಗಳಿಗೆ ಸ್ಪಂದಿಸಬೇಕು , ಅಂತಿಮವಾಗಿ ಸರ್ಕಾರದ ಮಾಲೀಕರು ಜನರೇ ಹೊರತು ಅವರ ಪ್ರತಿನಿಧಿಗಳಾದ ರಾಜಕಾರಣಿಗಳಲ್ಲ ಎಂದು ಅವರು ನಂಬಿಕೊಂಡಿದ್ದರು. 

ರಾಜಕಾರಣದಲ್ಲಿ ಮೂವತ್ತು ವರುಷಗಳ ಸಮರ್ಪಣಾ ಮನೋಭಾವದ ಸೇವೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಖ್ಯಾತಿಯ ಹಿಂದಿತ್ತು. ಈ ಅವಧಿಯಲ್ಲಿ ಅವರೊಬ್ಬ ಪ್ರಾಮಾಣಿಕ ಮತ್ತು ಅತ್ಯಂತ ಸಮರ್ಥ ನಾಯಕ ಎಂದು ಗುರುತಿಸಿಕೊಂಡಿದ್ದರು. ವಿನಮ್ರತೆ, ಸಹಿಷ್ಣುತೆ, ಮಹಾನ್ ಆಂತರಿಕ ಶಕ್ತಿ ಮತ್ತು ದೃಢನಿಶ್ಚಯವುಳ್ಳ, ಜನರ ಭಾವನೆಯನ್ನು ಅರ್ಥೈಸಿಕೊಂಡ ಅಪರೂಪದ ಜನಪರ ನಾಯಕ ಎಂದು ಭಾರತೀಯ ಇತಿಹಾಸದ ಪುಟಗಳಲ್ಲಿ ದಾಖಲಾದರು.  ಈಗಿನ ರಾಜಕಾರಣಿಗಳಿಗೂ ಶಾಸ್ತ್ರಿ ಆದರ್ಶ ಆಗಬೇಕು. ಆದರೆ ಇಂದಿನ ರಾಜಕೀಯ ವಾತಾವರಣದ ಶಾಸ್ತ್ರಿ ಕಾಲದ ಆದರ್ಶಗಳಿಂದ ಬಹುದೂರ ಸಾಗಿದೆ. ಹೀಗಾಗಿಯೇ ಶಾಸ್ತ್ರಿ ಅಂಥವರು ಕಾಡುತ್ತಲೇ ಇರುತ್ತಾರೆ.