ಮಲೆನಾಡಿನಂತೆ ನಳನಳಿಸುತ್ತಿದೆ ಕೃಷ್ಣೆಯ ಒಡಲು

ಮಲೆನಾಡಿನಂತೆ ನಳನಳಿಸುತ್ತಿದೆ ಕೃಷ್ಣೆಯ ಒಡಲು

ಮೊದಲೆಲ್ಲ ಭೀಕರ ಬರಗಾಲದ ನಾಡೆಂಬಂತೆ ನೋವೇ ಬದುಕಾಗಿದ್ದ ವಿಜಯಪುರ ಈಗ ಹಚ್ಚಹಸಿರಿನಿಂದ ನಳನಳಿಸುತ್ತಿದೆ. ಇಂಥ ಬದಲಾವಣೆಗೆ ಕಾರಣ ಏನು? ಲಕ್ಷ್ಮೀ ಕುಂಬಾರ ವಿವರಿಸಿದ್ದಾರೆ.

 

ಈ ಮೊದಲು ವಿಜಯಪುರವೆಂದರೆ ಸಾಕು ನೆನಪಾಗೋದು ಭೀಕರ ಬರಗಾಲ. ಈ ಜಿಲ್ಲೆಯ ರೈತನ ಪಾಡು ಹೇಳತೀರದು. ಮಳೆಯಾದ್ರೆ ಬೆಳೆ, ಇಲ್ಲವಾದರೆ ಗುಳೆ ಎಂಬ ಮಾತು ಇಲ್ಲಿ ಪ್ರಚಲಿತ. ಇಂಥ ಭೀಕರ ಬರಗಾಲದ ನಡುವೆಯೂ ಕೆಲ ರೈತರು ಉತ್ತಮ ಬೆಳೆ ಬೆಳೆಯುತ್ತಾರೆ. ಕೈತುಂಬ ಆದಾಯವನ್ನು ಪಡೆಯುತ್ತಾರೆ. ಈ ಬೆಳೆಗೆ ಮಳೆಯೂ ಬೇಡಾ, ನೀರು ಬೇಡಾ. ಅರೇ ಇದೇನಿದು ಮಳೆಯಿಲ್ಲದೇ, ನೀರಿಲ್ಲದೇ, ಇವರು ಅದ್ಯಾಂಗ ಬೆಳೆ ಬೆಳೆಯುತ್ತಾರೆ ಅಂತ ತಿಳಿಯೊಕೆ ಈ ಸ್ಟೋರಿ ಓದಿ.

ಇಲ್ಲಿ ಕಣ್ಣಾಯಿಸಿದಲೆಲ್ಲಾ ಹಚ್ಚ ಹಸಿರು, ವಿವಿಧ ಬೆಳೆಗಳ ಹಸಿರು ಹೊದಿಕೆ, ಮಲೆನಾಡಿನ ಪ್ರಕೃತಿ ಸೌಂದರ್ಯದ ನೋಡಿದ ಅನುಭವ. ಇದ್ಯಾವುದೋ ಮಲೆನಾಡಿದ ದೃಶ್ಯ ಇರಬಹುದು ಎಂದು ನೀವೆಲ್ಲಾ ಅಂದುಕೊಂಡರೆ ಖಂಡಿತಾ ಅದು ತಪ್ಪಾಗುತ್ತ ನೋಡ್ರಿ..!

ಇಂಥ ದೃಶ್ಯ ಕಂಡು ಬರೋದು ಬಿಸಿಲನಾಡು, ಬರದ ಬೀಡು ಎಂದೆಲ್ಲಾ ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ. ನಿಮಗೆಲ್ಲಾ ಒಂದು ಕ್ಷಣ ಆಶ್ಚರ್ಯವಾದರೂ ಸತ್ಯ. ಇದನ್ನು ನಂಬಲೇಬೇಕು. ವಿಜಯಪುರ ಜಿಲ್ಲೆಯ ಜೀವನದಿ ಈ ಹಸಿರಿಗೆ ಕಾರಣ.

ಕೊಲ್ಹಾರ ಪಟ್ಟಣದ ಸುತ್ತಮುತ್ತ ಬೇಸಿಗೆಯಲ್ಲಿಯೂ ಬೆಳೆ ಬೆಳೆಯಲಾಗಯತ್ತದೆ. ಮಳೆಗಾಲದಲ್ಲಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಹಿನ್ನೀರಿನಲ್ಲಿ ಇಲ್ಲಿನ ನೂರಾರು ಎಕರೆ ಜಮೀನುಗಳು ಮುಳುಗಡೆಯಾಗಿರುತ್ತವೆ.

ಜನವರಿ ವೇಳೆಗೆ ಜಲಾಶಯದ ನೀರು ಕಡಿಮೆಯಾಗುತ್ತವೆ. ನೀರು ಕಡಿಮೆಯಾಗುತ್ತಿದ್ದಂತೆ ಹಿನ್ನೀರಿನಲ್ಲಿ ಮುಳುಗಡೆಯಾದ ಭೂಮಿಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಮೊದಲೇ ಹಿನ್ನೀರಿನಲ್ಲಿ ಮುಳುಗಿದ್ದ ಭೂಮಿಯನ್ನು ಹದ ಮಾಡಿ ಬಿತ್ತನೆಗೆ ಅಣಿ ಮಾಡುತ್ತಾರೆ. ನಂತರ ಶೇಂಗಾ, ಅಲಸಂದಿ, ಮೆಕ್ಕೆಜೋಳ, ಸೂರ್ಯಕಾಂತಿ, ಸೋಯಾ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯುತ್ತಾರೆ.

ಮೂರುವರೆ ತಿಂಗಳಿಗೆ ಬೆಳೆಗಳು ಕಟಾವಿಗೆ ಬರುತ್ತವೆ. ಮುಂಗಾರಿನ ಮಳೆ ಆರಂಭವಾಗಿ ಜಲಾಶಯದ ಹಿನ್ನೀರು ಸಂಗ್ರಹ ಆಗೋದ್ರೊಳಗೆ ಬಿರು ಬೇಸಿಗೆಯಲ್ಲಿ ಉತ್ತಮ ಬೆಳೆ ಇಲ್ಲಿಯ ರೈತರ ಕೈಗೆ ಸಿಗುತ್ತದೆ. ಒಂದಿಷ್ಟು ಆದಾಯವೂ ರೈತರ ಕೈಗಟಕುತ್ತದೆ.

ಈ ರೀತಿ ಕೃಷ್ಣಾ ನದಿ ತಟದಲ್ಲಿ ರೈತರು ಬೆಳೆಯುವ ಬೆಳೆಯ ಜಮೀನು ಇವರ ಸ್ವಂತದ್ದಲ್ಲಾ. ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿ ನದಿ ತಟದ ಜನರು ಅಲ್ಪಾವಧಿಯ ಬೆಳೆ ಬೆಳೆಯುತ್ತಾರೆ. ಕೆಲವೊಮ್ಮೆ ಆಕಸ್ಮಿಕವಾಗಿ, ಅಕಾಲಿಕವಾಗಿ ಮಳೆಯಾದರೆ ಬೆಳೆ ನದಿ ಪಾಲಾಗುತ್ತದೆ.

ಪ್ರತಿ ವರ್ಷ ಆಲಮಟ್ಟಿ ಜಲಾಶಯದ ಹಿನ್ನೀರು ಸರಿದಾಗ ಇವರೆಲ್ಲರಿಗೆ ಹಬ್ಬ. ಹಿನ್ನೀರು ಸರಿದ ಹಾಗೆ ಇಲ್ಲಿ ಕೃಷಿ ಚಟುವಟಿಕೆ ಗರಿಗೆದರುತ್ತವೆ. ಸಣ್ಣ ಸಣ್ಣ ಹಿಡುವಳಿಯಾಗಿ ಬಿತ್ತನೆ ಮಾಡಿ ಇಲ್ಲಿನ ಜನರು ಬರಗಾಲದಲ್ಲಿಯೂ ಅಲ್ಪಸ್ವಲ್ಪ ಬೆಳೆ ಪಡೆದುಕೊಳ್ಳುತ್ತಾರೆ. ನದಿಯ ಹಿನ್ನೀರಿನ ಮಣ್ಣು ಫಲವತ್ತಾಗಿರುತ್ತದೆ. ಇಂಥ ಫಲವತ್ತತೆಯ ಮಣ್ಣಿಗೆ ಯಾವುದೇ ಗೊಬ್ಬರ ಹಾಗೂ ರಸಾಯನಿಕ ಉಪಯೋಗಿಸದೇ ಬೆಳೆ ಪಡೆಯುವುದು ಇಲ್ಲಿನ ಮತ್ತೊಂದು ವೈಶಿಷ್ಟ್ಯ.

ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯಾಗದೇ ಬರ ಇರುವ ಕಾರಣ ಈ ಬಾರಿ ಹಿನ್ನೀರಿನ ಭೂಮಿಯಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿಲ್ಲಾ ಎಂಬ ಮಾತನ್ನೂ ಹೇಳುತ್ತಾರೆ ಇಲ್ಲಿ ಬೆಳೆ ಬೆಳೆದವರು. ಇಲ್ಲಿ ಅಲ್ಪಾವಧಿ ಬೆಳೆ ಬೆಳೆದ ಕಾರಣ ನಮ್ಮ ಜೀವನೊಪಾಯಕ್ಕೆ ಸಹಾಯವಾಗಿದೆ ಎಂದೂ ಹೇಳುತ್ತಿದ್ದಾರೆ.

ಒಟ್ಟಾರೆ ಕೃಷ್ಣೆಯ ಒಡಲಲ್ಲಿ ಸುಡು ಬಿಸಿಲಿನಲ್ಲಿಯೂ ಹಸಿರು ಕಂಡು ಬರುತ್ತದೆ. ಮುಂಗಾರು ಮಳೆಯಾಗಿ ಜಲಾಶಯದಲ್ಲಿ ನೀರು ಸಂಗ್ರಹವಾಗುವವರೆಗೂ ಇಲ್ಲಿ ಅಲ್ಪಾವಧಿ ಬೆಳೆ ಬೆಳೆಯಲಾಗುತ್ತದೆ. ನದಿ ತಟದ ಸರ್ಕಾರಿ ಭೂಮಿಯಲ್ಲಿ ಸ್ಥಳಿಯ ಜನರು ಬಿತ್ತನೆ ಮಾಡಿ, ಬೆಳೆ ತೆಗೆದುಕೊಂಡರೂ ಸರ್ಕಾರ ಯಾವುದೇ ತೆರಿಗೆ ವಿಧಿಸದೇ ರೈತರಿಗೆ ಅನಕೂಲ ಮಾಡಿದೆ. ಹೀಗೆ ಕೃಷಿ ಚಟುವಟಿಕೆಗಳನ್ನು ಮಾಡುವುದರ ಮೂಲಕ ರೈತರೂ ಸಹ ನದಿಯ ಸ್ವಚ್ಛತೆಗೆ ಸಹಾಯ ಮಾಡಿದಂತಾಗಿದೆ.