ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ ಇಂದಿನಿಂದ ಪ್ರಾರಂಭ

ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ ಇಂದಿನಿಂದ ಪ್ರಾರಂಭ

ಗುವಾಹಾಟಿ: ದೇಶದ ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಹೊರಹೊಮ್ಮಿಸುವ “ಖೇಲೋ ಇಂಡಿಯಾ’ದ 3ನೇ ಆವೃತ್ತಿ ಇಂದಿನಿಂದ ಗುವಾಹಾಟಿಯಲ್ಲಿ ಪ್ರಾರಂಭವಾಗಲಿದೆ. ಈ ಬಾರಿ 6,800 ಕ್ರೀಡಾಪಟುಗಳು ಒಟ್ಟು 20 ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಇದರಲ್ಲಿ ಕರ್ನಾಟಕದ 288 ಸ್ಪರ್ಧಿಗಳಿದ್ದಾರೆ.

ಇಲ್ಲಿನ “ಇಂದಿರಾ ಗಾಂಧಿ ಕ್ರೀಡಾಂಗಣ’ದಲ್ಲಿ ಜರುಗಲಿರುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಮುಖ್ಯ ಅತಿಥಿಗಳಾಗಿರುತ್ತಾರೆ.

ಹಿಮಾ ದಾಸ್‌ ಸಹಿತ ದೇಶದ ತಾರಾ ಅಥ್ಲೀಟ್ಸ್‌ ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಆಧುನಿಕ ತಂತ್ರಜ್ಞಾನದ ಲೇಸರ್‌ ಶೋ ಜತೆಗೆ ಅಸ್ಸಾಂನ ಸಾಂಪ್ರದಾಯಿಕ ಕಲೆಗಳು ಈ ಸಂದರ್ಭದಲ್ಲಿ ಅನಾವರಣಗೊಳ್ಳಲಿವೆ.
“ಇದು ದೇಶದ ಕ್ರೀಡಾಕ್ರಾಂತಿಗೆ ಸಾಕ್ಷಿಯಾಗಬಲ್ಲ ಕೂಟ. ಇದು ಅಸ್ಸಾಂನಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಕ್ರೀಡಾಕೂಟ ಯಶಸ್ವಿಯಾಗಲಿ, ಎಲ್ಲ ಕ್ರೀಡಾ ಪಟುಗಳಿಗೆ ಶುಭ ಹಾರೈಕೆಗಳು’ ಎಂದು ಸೋನೊವಾಲ್‌ ಈ ಸಂದರ್ಭದಲ್ಲಿ ಹೇಳಿದರು.

ಕ್ರೀಡಾಳುಗಳ ಪ್ರಯಾಣಕ್ಕೆಂದೇ ವಿಮಾನ ವ್ಯವಸ್ಥೆ ಮಾಡಿರುವುದು ಈ ಬಾರಿಯ ವಿಶೇಷ. ಕೋಲ್ಕತಾ ಮತ್ತು ಹೊಸದಿಲ್ಲಿಯಿಂದ ಈ ವಿಮಾನ ಗುವಾಹಾಟಿಗೆ ಹಾರಾಟ ನಡೆಸಲಿದೆ.