ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮದ ಸ್ವಾತಂತ್ರ್ಯ ಕಸಿದ ನಿಷೇದಾಜ್ಞೆ: ಅರ್ಜಿ ಪರಿಶೀಲಿಸಲು  ರಿಜಿಸ್ಟ್ರಿಗೆ ಸುಪ್ರೀಂಕೋರ್ಟ್ ನಿರ್ದೇಶನ

ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮದ ಸ್ವಾತಂತ್ರ್ಯ ಕಸಿದ ನಿಷೇದಾಜ್ಞೆ: ಅರ್ಜಿ ಪರಿಶೀಲಿಸಲು  ರಿಜಿಸ್ಟ್ರಿಗೆ ಸುಪ್ರೀಂಕೋರ್ಟ್ ನಿರ್ದೇಶನ

ದೆಹಲಿ: ಜಮ್ಮು –ಕಾಶ್ಮೀರಕ್ಕೆ ಸ್ವಾಯತ್ತೆ ಹಿಂಪಡೆದ ನಂತರದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಹೇರಿದ್ದ  ನಿಷೇದಾಜ್ಞೆಯಿಂದ ಮಾಧ್ಯಮಗಳನ್ನು ಹತ್ತಿಕ್ಕಲಾಯಿತು ಎಂಬ ತಕರಾರು ಅರ್ಜಿಯು ವಿಚಾರಣೆಗೆ ಯೋಗ್ಯವೆ ಎಂದು ಪರಿಶೀಲಿಸುವಂತೆ ಸುಪ್ರೀಂಕೋರ್ಟ್, ಕಾನೂನು ತಜ್ಞರನ್ನು ಒಳಗೊಂಡ ಸಮಿತಿಗೆ (ರಿಜಿಸ್ಟ್ರಿ) ಸೂಚನೆ ನೀಡಿದೆ.

‘ಕಾಶ್ಮೀರ ಟೈಮ್ಸ್’ ಆಂಗ್ಲ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಬಾಸಿನ್ ಅವರು, ಕಣಿವೆ ರಾಜ್ಯದ ಸ್ವಾಯತ್ತತೆ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ಆದ್ದರಿಂದ, ಶೀಘ್ರವೇ ವಿಚಾರಣೆಗೆ ತಮ್ಮ ಅರ್ಜಿಯನ್ನು ತೆಗೆದುಕೊಳ್ಳುವಂತೆ ಕಕ್ಷಿದಾರ ಪರ ವಕೀಲ ವೃಂದಾ  ಗ್ರೋವರ್ ಅವರು ನ್ಯಾ. ಅರುಣ ಮಿಶ್ರಾ ಅವರಿದ್ದ ನ್ಯಾಯಪೀಠದ ಮುಂದೆ ಮನವಿ ಮಾಡಿದರು.

ಆದರೆ, ಈ ಅರ್ಜಿಯನ್ನು ನೋಂದಾಯಿಸಿಕೊಂಡು ಪರಿಶೀಲಿಸುವಂತೆ ನ್ಯಾಯಪೀಠವು ಕಾನೂನು ತಜ್ಞರನ್ನು ಒಳಗೊಂಡ ಉನ್ನತ ಶ್ರೇಣಿಯ  ಸಮಿತಿಯನ್ನು ನಿರ್ದೇಶಿಸಿತು.

ಸಂವಿಧಾನದತ್ತವಾಗಿ ನೀಡಿರುವ 370ನೇ ವಿಧಿ ಹಾಗೂ 35(ಎ) ಕಲಂಗಳನ್ನು ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರವನ್ನು ವಿಭಜಿಸಲಾಗಿದೆ. ಶಾಂತಿ ಕಾಪಾಡುವ ನೆಪದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ. ದೂರವಾಣಿ, ಮೊಬೈಲ್, ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ಸುದ್ದಿ-ಮಾಹಿತಿಯನ್ನು ಸಂಗ್ರಹಿಸಲು ಅಡ್ಡಿಯಾಯಿತು. ಮಾಧ್ಯಮದವರ ಚಲನವಲನಗಳ  ಮೇಲೂ ಸಾಕಷ್ಟು ನಿರ್ಬಂಧ ಹೇರಲಾಯಿತು. ಮಾಧ್ಯಮದ ಜೀವಾಳವಾದ ಮಾಹಿತಿ ವಿನಿಮಯಕ್ಕೆ ಅವಕಾಶ ನೀಡಲಿಲ್ಲ. ಜನತೆ ಸಾಕಷ್ಟು ನೋವು ಅನುಭವಿಸುತ್ತಿದ್ದರೂ, ಅವರ ಸ್ವಾತಂತ್ರ್ಯ ಕಸಿಯಲಾಗುತ್ತಿದ್ದರೂ, ಅವರ ಧ್ವನಿಯಾಗಿ ಇರಬೇಕಿದ್ದ ಮಾಧ್ಯಮಕ್ಕೆ ಏನೂ ಮಾಡದ ಪರಿಸ್ಥಿತಿ ಇತ್ತು. ಈ ರೀತಿಯ ದಬ್ಬಾಳಿಕೆ ವಾಕ್ ಸ್ವಾತಂತ್ರ್ಯದ ಹರಣವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಆ. 4 ರಂದು ತಮ್ಮ ಪತ್ರಿಕೆಯು ಮಾಹಿತಿ ಸಂಗ್ರಹಿಸುವ ಎಂದಿನ ಕೆಲಸ ನಿರ್ವಹಿಸಲು ಅಡ್ಡಿಯಾಯಿತು. ಆದ್ದರಿಂದ, ಜಮ್ಮು-ಕಾಶ್ಮೀರದಲ್ಲಿ ಮಾಧ್ಯಮದ ಯಾವುದೇ ನಿರ್ಬಂಧ ಹೇರಕೂಡದು ಎಂದು  ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.