ನೇಣಿಗೇರಿಸುವ ಶಿಕ್ಷೆ ಅಂದುಕೊಂಡಷ್ಟು ಸಲೀಸಲ್ಲ, ಪಾಲಿಸಲೇಬೇಕಿದೆ ಹಲವು ನಿಯಮಾವಳಿ ಪ್ರಕ್ರಿಯೆ

ಸಾಕಷ್ಟು ಇತಿಹಾಸ, ಕಥಾನಕ, ಹುಟ್ಟು ಬೆಳವಣಿಗೆಯನ್ನೆಲ್ಲ ಹೊಂದಿರುವ ನೇಣಿಗೇರಿಸುವ ಶಿಕ್ಷೆ ನಮ್ಮ ರಾಷ್ಟ್ರದಲ್ಲಿ ಮುಂದಿನ ವಾರದೊಳಗೆ ಘಟಿಸುವುದಕ್ಕೆ ಸಿದ್ದತೆಗಳಾಗುತ್ತಿವೆ.

ನೇಣಿಗೇರಿಸುವ ಶಿಕ್ಷೆ ಅಂದುಕೊಂಡಷ್ಟು ಸಲೀಸಲ್ಲ, ಪಾಲಿಸಲೇಬೇಕಿದೆ ಹಲವು ನಿಯಮಾವಳಿ ಪ್ರಕ್ರಿಯೆ

ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆಯ ಅಪರಾಧಿಗಳನ್ನು ನೇಣು ಕಂಬಕ್ಕೇರಿಸುವ ದಿನ ಹತ್ತಿರವಾಗುತ್ತಿದ್ದು, ಇದಕ್ಕೆ ಬೇಕಾದ ನೇಣು ಹಗ್ಗ ತಯಾರಿಸಿಕೊಡುವಂತೆ ಬಿಹಾರದ ಬಕ್ಸರ್ ಕಾರಾಗೃಹ ಸಿಬ್ಬಂದಿಗೆ ಸೂಚನೆಗಳು ಹೋಗಿವೆ. ಕುತ್ತಿಗೆಗೆ ಬಿಗಿಯುವ ಹಗ್ಗ, ಟೆಂಟ್ ಹಗ್ಗ ಮತ್ತು ಕೈಕೋಳ ತಯಾರಿಕೆಯಲ್ಲಿ ಬಕ್ಸರ್ ಕಾರಾಗೃಹ ಹೆಸರುವಾಸಿ. 1930 ರಿಂದಲೂ ಮನಿಲಾ ಹಗ್ಗ ಎಂದು ಕರೆಯುವ ನೇಣು ಹಗ್ಗ ತಯಾರಿಸಿಕೊಡುವ ನಿಪುಣತೆ ಇಲ್ಲಿನ ಸಿಬ್ಬಂದಿ ಮತ್ತು ಕೈದಿಗಳು ರೂಢಿಸಿಕೊಂಡಿದ್ದಾರೆ.

ಗಂಗಾ ನದಿ ತಟದಲ್ಲಿರುವ ಇಲ್ಲಿನ ವಾತಾವರಣ ಕೂಡ ನೇಣು ಹಗ್ಗ ಹೊಸೆಯಲು ಅನುಕೂಲಕರವಾಗಿದೆ. ಶೇ.67 ರಷ್ಟು ತೆರೆದ ಆಧ್ರತೆ ಬೇಕು ಎಂಬ ಲೆಕ್ಕವಿದೆ. ಹಗ್ಗಕ್ಕೆ ಹೊಸೆಯಲು ಬೇಕಾಗುವ ಜೆ34 ಎಂಬನೂಲು ಪಂಜಾಬ್‍ ನ ಭಟಿಂದ ಅಥವಾ ಬಿಹಾರದ ಮನ್‍ಪುರ್ ಬಟ್ಟೆ ಅಂಗಡಿಯಿಂದ ತರಲಾಗುತ್ತದೆ. ಕಬ್ಬಿಣ ಮತ್ತು ಹಿತ್ತಾಳೆಯ 152 ಎಳೆಗಳನ್ನು ಹೆಣೆದು ನಿಗಧಿತ ಗಾತ್ರದ ಹಗ್ಗ ತಯಾರಿಸಲಾಗುತ್ತದೆ. ನೇಣಿಗೇರುವ ವ್ಯಕ್ತಿಯ ಎತ್ತರಕ್ಕಿಂತ 1.6 ಮೀಟರ್ ನಷ್ಟು ದೊಡ್ಡದಾಗಿ, ಆ ವ್ಯಕ್ತಿ ತೂಕ 91 ಕೆಜಿಗಿಂತ ಹೆಚ್ಚಿಗಿದ್ದರೆ 6 ಅಡಿ, 45 ಕೆಜಿಗಿಂತ ಕಡಿಮೆ ತೂಕದವನಾದರೆ 8 ಅಡಿ ಉದ್ದದ ಹಗ್ಗ ಎಂಬ ನಿಯಮಾವಳಿಗಳೂ ಇವೆ. ಹಾಗೆಯೇ ಹಗ್ಗಕ್ಕೆ ಅರಗು(ವ್ಯಾಕ್ಸ್) ಮೆತ್ತಲಾಗುತ್ತದೆ. ನೇಣು ಕುಣಿಕೆ ಎಡ ಕಿವಿ ಕೆಳಗೆ ಬರುವಂತಿರಬೇಕು, ಹೀಗಿದ್ದಾಗ ಹಗ್ಗದ ಲಿವರ್ ಎಳೆದಾಗ ಕುಣಿಕೆ ಕಿವಿ ಮತ್ತು ದವಡೆಯನ್ನು ಮೇಲಕ್ಕೆ ಎಳೆದುಕೊಂಡು ಯಾವುದೇ ರೀತಿಯ ಜಾಮ್ ಆಗದೆ, ಸಾವು ಸಂಭವಿಸುತ್ತದೆ ಎಂಬ ಉಲ್ಲೇಖಗಳಿವೆ.

ಪ್ರಾಚೀನ ಕಾಲದಲ್ಲಿ ಶಿರಚ್ಚೇದನದಂಥ ಶಿಕ್ಷೆಗಳಿದ್ದವು. ಕಲ್ಲಿನಿಂದ ಹೊಡೆಯುವುದು, ಖಡ್ಗದಿಂದ ಕುತ್ತಿಗೆ ಹಾರಿಸುವುದು ಇತ್ಯಾದಿಗೆಲ್ಲ ಗೌರವಯುತ ಎಂಬ ನಂಬಿಕೆಯೂ ಇದೆ. 5 ನೇ ಶತಮಾನದಲ್ಲೇ ಗ್ರೀಕ್ ರೋಮನ್ ಸಾಮ್ರಾಜ್ಯದ ಅವಧಿಯಲ್ಲೇ ನೇಣಿಗೇರಿಸುವಂಥದ್ದು ಇದೆ. ಬ್ರಿಟನ್‍ನಲ್ಲಿ ಇದು ಮುಂದುವರಿದುಕೊಂಡು ಬಂದು 1868 ರಲ್ಲಿ ಬಹಿರಂಗವಾಗಿ ನೇಣಿಗೇರಿಸುವಂಥದ್ದು ಇದೆ. ತನ್ನ ವಸಾಹತು ಇದ್ದಲೆಲ್ಲ ನೇಣು ಹಾಕುವಂಥದ್ದನ್ನು ಜಾರಿಗೆ ತಂದಿದ್ದಲ್ಲದೆ, ಇದು ಬ್ರೆಜಿಲ್ ಆಂಗ್ಲೋ ಅಮೆರಿಕ, ರಷ್ಯಾ, ಆಸ್ಟ್ರಿಯಾ, ಹಂಗರಿ, ಜಪಾನ್ ಇತ್ಯಾದಿ ಕಡೆಗೆಲ್ಲ ಹಬ್ಬಿತು.ಹೋಮರ್ ನ ಒಡಿಸ್ಸಾದಲ್ಲೂ ನೇಣಿನ ಉಲ್ಲೇಖವಿದೆ.

1965 ರಲ್ಲಿ ಬ್ರಿಟನ್‍ನಲ್ಲಿ ಮರಣ ದಂಡನೆಯನ್ನು ನಿರ್ಬಂಧಿಸಲಾಯಿತು. ನೇಣು ಯಾವ ರೀತಿಗಳಲ್ಲಿ ಹಾಕಬಹುದು ಎಂಬುದಕ್ಕೂ ನಾನಾ ನಮೂನೆಗಳಿವೆ, ಪ್ರಸ್ತುತ ಅಳವಡಿಸಿಕೊಂಡಿರುವ ವಿಧಾನಕ್ಕೆ 'ಲಾಂಗ್ ಡ್ರಾಪ್' ಎನ್ನಲಾಗುತ್ತದೆ. ಇದನ್ನು ತಿಳಿಸಿಕೊಟ್ಟಿದ್ದು ವಿಲಿಯಂ ಮಾರ್‍ವುಡ್ ಎಂಬಾತ 1860 ರ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ, 1973 ರ ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ ಮರಣ ದಂಡನೆ ಪ್ರಕರಣಗಳ ಬಗ್ಗೆ ತಿಳಿಸಿದ್ದಾನೆ. ಭಾರತದಲ್ಲಿಯೂ ವಿರಳಾತಿವಿರಳ ಪ್ರಕರಣದಲ್ಲಿ ಮಾತ್ರವೇ ಮರಣದಂಡನೆ ವಿಧಿಸ ಬೇಕಾಗುತ್ತದೆ. ಅಂದಹಾಗೆ ಸ್ವತಂತ್ರ ಭಾರತದಲ್ಲಿ ಮೊದಲಿಗೆ ನೇಣು ಶಿಕ್ಷೆಗೆ ಒಳಗಾಗಿದ್ದು ಮಹಾತ್ಮಾ ಗಾಂಧಿ ಹಂತಕರಾದ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ(1949, ನವೆಂಬರ್ 15)

ಸಾಯುವವರೆಗೆ ನೇಣು ಬಂದಿದ್ದೇಗೆ?

ಮೂಲತಃ ತೀರ್ಪಿನಲ್ಲಿ ನೇಣಿಗೆ ಹಾಕಿ ಎಂದಷ್ಟೇ ಹೇಳುವಂಥದ್ದು ಇದೆ. ಇದನ್ನೇ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಮೋತಿಲಾಲ ನೆಹರು, ಚಿತ್ತರಂಜನ ದಾಸ್ ಸದುಪಯೋಗ ಪಡೆದುಕೊಂಡಿದ್ದರ ಬಗ್ಗೆ ಕಥನಗಳಿವೆ.

ಆಂಗ್ಲ ಅಧಿಕಾರಿಯ ಕುದುರೆಗೆ ಘಾಸಿಗೊಳಿಸಿದ್ದ ಆರೋಪದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಯುವಕನೊಬ್ಬನಿಗೆ, ಆಂಗ್ಲ ನ್ಯಾಯಾಧೀಶ ನೇಣು ಶಿಕ್ಷೆ ವಿಧಿಸಿದ್ದ. ಆರೋಪಿ ಪರ ವಕಾಲತ್ತು ವಹಿಸಿದ್ದ ಮೋತಿಲಾಲ ನೆಹರು ಅದಕ್ಕೆ ಯಾವ ಆಕ್ಷೇಪಣೆಯನ್ನೂ ಸಲ್ಲಿಸದೆ ತೆರಳಿದ್ದರು. ಇದು ಟೀಕೆಗೂ ಒಳಗಾಗಿತ್ತು.

ಆದರೆ ಆ ಯುವಕನನ್ನು ನೇಣಿಗೇರಿಸುವ ಸಮಯದಲ್ಲಿ ಮೋತಿಲಾಲ್ ನೆಹರು ಹೇಳಿಕೊಟ್ಟಿದ್ದಂತೆ, ಇನ್ನೊಬ್ಬ ವ್ಯಕ್ತಿ ನೇಣುಗಂಬಕ್ಕೇರಿದ್ದ ಯುವಕನ ಕಾಲುಗಳನ್ನು ಭದ್ರವಾಗಿ ಹಿಡಿದುಕೊಂಡಿದ್ದ, ಹೀಗಾಗಿ ಯುವಕ ಸಾಯಲಿಲ್ಲ. ಮತ್ತೆ ನ್ಯಾಯಾಲಯದ ಮುಂದೆ ವಿಚಾರ ಬಂದಾಗ, ತೀರ್ಪಿನಂತೆ ನೇಣು ಹಾಕಲಾಗಿತ್ತು, ಪ್ರಾಣ ಹೋಗಿಲ್ಲ ಎಂದರೆ ಏನೂ ಮಾಡಲಾಗಲ್ಲ ಎಂಬ ವಾದಸರಣಿ ಮಂಡಿಸಿದ್ದರಿಂದಾಗಿ, ಸಾಯುವವರೆಗೆ ನೇಣು ಎಂಬ ಪದ ಬಳಸಲು ಆರಂಭವಾಯಿತು ಎಂಬ ಕತೆಗಳಿವೆ. ಇದಕ್ಕೆ ವಕೀಲ ಚಿತ್ತರಂಜನ್ ದಾಸ್ ಅವರ ಪ್ರಕರಣಗಳೂ ಇವೆ.

ಇದಕ್ಕೆ ಪೂರಕವಾಗಿ 1996 ರಲ್ಲಿ ಸೇನಾ ನ್ಯಾಯಾಲಯ ಉಲ್ಫಾ ಚಟುವಟಿಕೆಗಾಗಿ ರಮಣಕಾಂತ್ ಗೊಗೊಯ್‍ಗೆ ನೇಣು ಶಿಕ್ಷೆವಿಧಿಸಿತ್ತು. ನೇಣಿಗೇರಿಸಿದಾಗ ಕುಣಿಕೆ ಜಾರಿ ಆತನ ಗಲ್ಲದ ಬಳಿ ಒಂದೂವರೆ ಸೆಕೆಂಡ್‍ನಷ್ಟು ಕಾಲ ಇತ್ತು. ಆತ ಸಾಯಲಿಲ್ಲ.ಕುಟುಂಬದವರು ನೇಣು ಹಾಕಿದ್ದಾಗಿದೆ, ಸತ್ತಿಲ್ಲ. ಮತ್ತೆ ನೇಣಿಗೆ ಹಾಕುವಂತಿಲ್ಲ, ಎರಡೆರಡು ಶಿಕ್ಷೆ ಇಲ್ಲ ಎಂದು ವಾದಿಸಿದ್ದರು, ಕೊನೆಗೆ ನ್ಯಾಯಾಲಯ ಮತ್ತೊಮ್ಮೆ ಸಾಯಿಸಲು ಪರ್ಯಾಯ ಇಲ್ಲದ್ದರಿಂದ ಅದನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದ್ದ ಘಟನೆಯೂ ಇವೆ.

ಅನಂತರದಲ್ಲಿನ ಮೊಕದ್ದಮೆಗಳಲ್ಲಿ ನೇಣು ಹಾಕುವುದೆಂದರೆ ಜೀವ ಹೋಗುವವರೆಗೆ ಎಂದೇ ವ್ಯಾಖ್ಯಾನಿಸಲಾಗಿದೆ. ಇದಕ್ಕೆ ಇಷ್ಟೇ ಹೊತ್ತು ಎಂಬುದೇನಿಲ್ಲ. ಹಾಗೆಂದು ಒಂದಕ್ಕಿಂತ ಹೆಚ್ಚು ಸಲ ನೇಣಿಗೆ ಹಾಕುವಂತೆಯೂ ಇಲ್ಲ. ಹಾಗಾಗಿಯೇ ನೇಣುಹಗ್ಗವೂ ಸರಿಯಾಗಿರಬೇಕು, ನೇಣಿಗೇರಿಸುವವನೂ ಸರಿಯಾಗಿರಬೇಕು ಎಂಬ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಅಷ್ಟಕ್ಕೂ ಮರಣ ದಂಡನೆಯನ್ನು ಮುಂಜಾನೆಯೇ ಜಾರಿಗೊಳಿಸುವುದೇಕೆ ಎಂಬುದಕ್ಕೂ ಆಡಳಿತಾತ್ಮಕ, ನೈತಿಕ ಮತ್ತು ಸಾಮಾಜಿಕ ಎಂಬ ಮೂರು ಕಾರಣಗಳಿವೆ. ಮಧ್ಯರಾತ್ರಿ ಹನ್ನೆರಡು ಕಳೆದ ಬಳಿಕ ಮಾರನೆ ದಿನವಾಗುತ್ತದೆ. ಹಾಗಾಗಿ ನೇಣಿಗೇರಬೇಕಾದವನನ್ನು ಎಬ್ಬಿಸಿ, ನಿತ್ಯಕರ್ಮ ಮುಗಿಸಿಕೊಳ್ಳಲು 40 ನಿಮಿಷ ಅವಕಾಶ ಕೊಡಲಾಗುತ್ತದೆ. ನಂತರ ಹೊಸಾ ಬಟ್ಟೆ, ಅವನಿಷ್ಟ ಪಟ್ಟ ತಿಂಡಿ ಕೊಟ್ಟು ಪ್ರಾರ್ಥನೆಗೆ ಅವಕಾಶ ಕೊಡಲಾಗುತ್ತದೆ. ಅವನು ತಾನಾಗಿಯೇ ನಡೆದುಕೊಂಡು ಬರಲು ಹೇಳಲಾಗುತ್ತದೆ.(ಏನಾದರೂ ಬಳಲಿಕೆ, ಅನಾರೋಗ್ಯ, ಗಾಯದಿಂದ ನಡೆಯಲು ಆಗದಿದ್ದರೆ ನೇಣಿಗೇರಿಸಲ್ಲ. ಇದು ಪಾಕೀಸ್ತಾನದಲ್ಲಿ ಕೆಲ ವರ್ಷಗಳ ಹಿಂದೆ ಆಗಿದೆ.) ವಧಾಸ್ಥಾನಕ್ಕೆ ಅವನೇ ನಡೆದು ಹೋಗಿ ನಿಲ್ಲಬೇಕು, ಆಗ ಅವನ ಕೈಗೆ ಹಾಕಿದ್ದ ಬೇಡಿ ತೆಗೆಯಲಾಗುತ್ತದೆ. ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟು, ನೇಣು ಶಿಕ್ಷೆಯ ತೀರ್ಪು ಮತ್ತು ಕಾರಣಗಳನ್ನು ಜೈಲು ಸಿಬ್ಬಂದಿ ಓದಿ ಹೇಳಿದರೆ, ನೇಣು ಹಾಕುವಾತ, ಆದೇಶದ ಅನುಸಾರ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಹೊರತು ವೈಯಕ್ತಿಕ ಕಾರಣಗಳಿಗಲ್ಲ ಎಂದು ಹೇಳಿ, ಆತನ ಕೈಗಳನ್ನು ಹಿಂದಕ್ಕೆ ಕಟ್ಟಿ ಮುಖ ಮುಚ್ಚಲಾಗುತ್ತದೆ. ವೈದ್ಯ, ನ್ಯಾಯಾಧೀಶ, ಜೈಲು ಅಧಿಕಾರಿ ಸಮ್ಮುಖದಲ್ಲಿ ನೇಣಿಗೇರಿಸಲಾಗುತ್ತದೆ. ವೈದ್ಯ ಸಾವಿನ ಬಗ್ಗೆ ಧೃಡೀಕರಣ ಮಾಡಿ, ಅಗತ್ಯ ದಾಖಲಾತಿಗಳನ್ನು ಭರ್ತಿ ಮಾಡಿ, ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುತ್ತದೆ.

ಈ ಎಲ್ಲ ಆಡಳಿತಾತ್ಮಕ ಕೆಲಸವನ್ನು ಸಿಬ್ಬಂದಿ ಮಾಡಿ, ಬೆಳಗ್ಗೆಯಿಂದ ಯಥಾಪ್ರಕಾರದ ಕರ್ತವ್ಯ ಮಾಡಲು ಅನುಕೂಲವಾಗಲಿ ಎಂದು, ಮರಣದಂಡನೆ ಎಂಬುದು ಜೀವಕ್ಕೆ ಹಾನಿ ಮಾಡುವಂಥದ್ದೇ ಹೊರತು, ಮಾನಸಿಕವಾಗಿ ಕ್ಷೋಭೆ ತರುವುದಕ್ಕಲ್ಲ ಎಂಬ ನೈತಿಕತೆಯನ್ನು ಅಪರಾಧಿಗೆ ತುಂಬಲು, ಮತ್ತು ಈ ವಿಚಾರ ಜೈಲಿನ ಇತರೆ ಕೈದಿಗಳಿಗೆ ಹಬ್ಬಿ ಅವರಿಗೆ ಮಾನಸಿಕ ಹಿಂಸೆ ಕೊಡಬಾರದು, ಮಾಧ್ಯಮ ಅಥವಾ ಸಾರ್ವಜನಿಕರು ಗುಂಪುಗೂಡುವ ಮುನ್ನವೇ ಈ ಎಲ್ಲಾ ಪ್ರಕ್ರಿಯೆ ಮುಗಿಸಿ, ಸಾಮಾಜಿಕವಾಗಿ ಯಾವ ರೀತಿ ಶಾಂತಿ ಭಂಗವಾಗದಿರಲಿ ಎಂಬ ಕಾರಣದಿಂದ ಮುಂಜಾನೆ ಮೂರು ನಾಲ್ಕು ಗಂಟೆಯ ಹೊತ್ತಿಗೆಲ್ಲ ನೇಣಿಗೇರಿಸಲಾಗುತ್ತದೆ.

ನೇಣಿಗೇರುವವರ ಹೆಸರು, ವಿವರಗಳನ್ನು ನೇಣಿಗೆ ಹಾಕುವವನಿಗೂ, ನೇಣು ಹಗ್ಗ ಮಾಡುವವರಿಗೂ ಕೊಡಲ್ಲ. ಎಕ್ಸ್ ವೈ...ಎಂಬಿತ್ಯಾದಿಯಾಗಿ ಹೇಳಲಾಗುತ್ತದೆ. ಈ ಸಮಯ ಹಾಗೂ ಇತ್ಯಾದಿಗಳೆಲ್ಲ ಆಯಾ ರಾಜ್ಯಗಳ ನಿಯಮಗಳ ಅನುಸಾರ ಬದಲಾಗಿರುತ್ತವೆ. ಇಂಥ ಎಷ್ಟೆಷ್ಟೋ ಇತಿಹಾಸ, ಕಥಾನಕ, ಹುಟ್ಟು ಬೆಳವಣಿಗೆಯನ್ನೆಲ್ಲ ಹೊಂದಿರುವ ನೇಣಿಗೇರಿಸುವ ಶಿಕ್ಷೆ ನಮ್ಮ ರಾಷ್ಟ್ರದಲ್ಲಿ ಮುಂದಿನ ವಾರದೊಳಗೆ ಘಟಿಸುವುದಕ್ಕೆ ಸಿದ್ದತೆಗಳಾಗುತ್ತಿವೆ. ನೇಣು ಶಿಕ್ಷೆ ಸರಾಗವಾಗಿಸಲು 1930 ರಿಂದಲೂ ನೇಣು ಹಗ್ಗ ಹೆಣೆಯುತ್ತಿರುವ ಬಕ್ಸರ್ ಜೈಲಿನ ಏಳು ಕೈದಿಗಳು- ಸಿಬ್ಬಂದಿಗಳು ಈಗಾಗಲೇ ಹತ್ತು ಹಗ್ಗ ತಯಾರಿಸುವ ಕಾರ್ಯಕೈಗೊಂಡಿದ್ದಾರೆ, ಮೂರು ದಿನಗಳೊಳಗೆ ಇವು ಪೂರ್ಣಗೊಳ್ಳಲಿದ್ದು, ಯಾವ ಹಗ್ಗದ ಮೇಲೆ ಕೊರಳೊಡ್ಡಲು ಯಾರ ಹೆಸರು ಬರೆದಿರುವುದೋ ಗೊತ್ತಿಲ್ಲ.