ಸಾಹಿತಿಯಾದವನು ಶೋಷಿತರ ಪರವಾಗಿ ನಿಲ್ಲುತ್ತಾನೆ : ಪ್ರಸಿದ್ಧ ತೆಲುಗು ಸಾಹಿತಿ ಪೆದ್ದಿಂಟಿ ಅಶೋಕ್ ಕುಮಾರ್

ಸಾಹಿತಿಯಾದವನು ಪ್ರಜೆಗಳು ಯಾವ ಸಂಕಷ್ಟದಲ್ಲಿದ್ದಾರೆ, ಎಲ್ಲಿ ಅನ್ಯಾಯವಾಗುತ್ತಿದೆ ಎಂದು ಅವರ ವಿಳಾಸ ಹುಡುಕಿ ಅಂತಹ ಬಲಹೀರನ ಧ್ವನಿಯಾಗಿ ಸರ್ಕಾರವನ್ನು ಪ್ರಶ್ನಿಸುತ್ತಾನೆ ಹಾಗೂ ಆ ಮೂಲಕ ಪ್ರಜೆಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಾನೆ. ಅದಕ್ಕೇ ಎಲ್ಲರಿಗಿಂತ ಸಮಾಜಕ್ಕೆ ಸಾಹಿತಿಗಳು ಹೆಚ್ಚು ಅಗತ್ಯ. 

ಸಾಹಿತಿಯಾದವನು ಶೋಷಿತರ ಪರವಾಗಿ ನಿಲ್ಲುತ್ತಾನೆ : ಪ್ರಸಿದ್ಧ ತೆಲುಗು ಸಾಹಿತಿ ಪೆದ್ದಿಂಟಿ ಅಶೋಕ್ ಕುಮಾರ್

ಬಿಳಿ ರಕ್ತಕಣಗಳು ರೋಗಾಣುಗಳನ್ನು ನಾಶಪಡಿಸುವ ಸೈನಿಕರಂತೆ ಕೆಲಸ ಮಾಡಿ ನಮ್ಮ ದೇಹದ ಆರೋಗ್ಯವನ್ನು ಹೇಗೆ ಕಾಪಾಡುತ್ತದೆಯೋ ಹಾಗೆ ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮಗಳ ವಿರುದ್ಧ ಧ್ವನಿಯಾಗಿ ಸಾಹಿತಿಗಳು ಆರೋಗ್ಯಕರ ಸಮಾಜ ಸೃಷ್ಟಿಗೆ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದು ಪ್ರಸಿದ್ಧ ತೆಲುಗು ಸಾಹಿತಿ ಪೆದ್ದಿಂಟಿ ಅಶೋಕ್ ಕುಮಾರ್ ಹೇಳುತ್ತಾರೆ. 

ವಿದ್ಯಾಭ್ಯಾಸಕ್ಕಾಗಿ ಹೊರಗೆ ಹೋಗಿ ಬರುವ ವೇಳೆಗೆ ತನ್ನೂರಿನ  ಅಲ್ಲೋಲ ಕಲ್ಲೋಲವಾಗಿ ಬದಲಾದ ಚಿತ್ರಣ ಅಶೋಕ್ ಕುಮಾರ್ ಅವರಲ್ಲಿ ತಲ್ಲಣ ಉಂಟುಮಾಡಿತು. ತಮ್ಮ ಮನಸಿನ ಭಾರವನ್ನು ಹೊರ ಹಾಕಲು ಲೇಖನಿ ಹಿಡಿದ ಅವರು ಕಣ್ಣಿಗೆ ಕಾಣಿಸುವ ಜೀವನವನ್ನೇ ಕಥೆಗಳಾಗಿ ಚಿತ್ರಿಸ ತೊಡಗಿದರು. 

ಅವರು, ಈವರೆಗೆ 200 ಕಥೆಗಳು, 6 ಕಾದಂಬರಿಗಳು, 7 ನಾಟಕಗಳು, 7 ಕಥಾಸಂಕಲನಗಳು, ೧೦೦ಕ್ಕೂ ಹೆಚ್ಚುಪ್ರಬಂಧಗಳನ್ನುರಚಿಸಿದ್ದಾರೆ. ಇವರ ʼಜಿಗಿರಿʼ ಕಾದಂಬರಿ 9 ಭಾಷೆಗಳಿಗೆ ಅನುವಾದಗೊಂಡಿದೆ. ಹಲವು ಕಥೆಗಳು ಇಂಗ್ಲಿಷ್, ಹಿಂದಿ, ಕನ್ನಡ ಹಾಗೂ ಮರಾಠಿ ಭಾಷೆಗಳಿಗೆ ಅನುವಾದಗೊಂಡಿವೆ.ಇವರು ನಾಲ್ಕು ಜನಪ್ರಿಯ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದು, ಗೀತರಚನೆಯಲ್ಲೂ ಕೈಯಾಡಿಸಿದ್ದಾರೆ.ಇತ್ತೀಚೆಗೆ ಬಿಡುಗಡೆಯಾಗಿ ಅಪಾರ ಜನಮನ್ನಣೆ ಗಳಿಸಿದ ʼಮಲ್ಲೇಶಂʼ ಚಿತ್ರಕ್ಕೆ ಸಂಭಾಷಣೆ ಹಾಗೂ ಗೀತೆ ರಚನೆಮಾಡಿರುವ ಹೆಗ್ಗಳಿಕೆಇವರದು. 

ಇವರ ಹಲವು ಕಥೆಗಳು ಪ್ರಸ್ತುತ ತೆಲಂಗಾಣ ಮತ್ತು ಆಂಧ್ರ ವಿಶ್ವವಿದ್ಯಾಲಯಗಳ ಎಂ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿ ಬೋಧಿಸಲ್ಪಡುತ್ತಿದೆ. ಇವರʼಜಿಗಿರಿʼ ಕಾದಂಬರಿ ಉಸ್ಮಾನಿಯಾ ವಿಶ್ವವಿದ್ಯಾಲಯ ಓರಿಯಂಟಲ್ ಕಾಲೇಜು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿದೆ.  ಪೆದ್ದಿಂಟಿ ಅಶೋಕ್ ಕುಮಾರ್ ಅವರ ಸಾಹಿತ್ಯದ ಮೇಲೆ 6 ಪಿ.ಎಚ್ ಡಿ ಮತ್ತು 9 ಎಂ.ಫಿಲ್ ಸಂಶೋಧನಾ ಪ್ರಬಂಧಗಳ ಅಧ್ಯಯನ ನಡೆಯುತ್ತಿರುವುದು ಶ್ಲಾಘನೀಯ.

ಇತ್ತೀಚೆಗೆ ನಮಸ್ತೇ ತೆಲಂಗಾಣ, ಮುಲ್ಕನೂರು ಸಾರ್ವಜನಿಕ ಗ್ರಂಥಾಲಯ ಸಹಯೋಗದಲ್ಲಿ ʼತೆಲಂಗಾಣ ಸಂಸ್ಕೃತಿ, ಇತಿಹಾಸ, ಸಮಕಾಲೀನ ಜೀವನ ವೈವಿಧ್ಯತೆʼ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಕಥಾಸ್ಪರ್ಧೆಯಲ್ಲಿ ಇವರ ʼವಿತ್ತನಂʼ ಕಥೆ ಮೊದಲ ಬಹುಮಾನ ಗಳಿಸಿರುವುದು ಕೂಡ ಅಭಿನಂದನೀಯ.

ಇತ್ತೀಚೆಗೆ ಹೈದರಾಬಾದಿನಲ್ಲಿ ಭೇಟಿಯಾಗಿ ಅವರೊಂದಿಗೆ ನಡೆಸಿದ ಮಾತುಕತೆ ನಿಮಗಾಗಿ..

•    ಸರ್, ನಿಮ್ಮ ಬಹುತೇಕ ರಚನೆಗಳ ವಸ್ತು ಹಳ್ಳಿಗಳ ಸುತ್ತ ಕೇಂದ್ರೀಕೃತವಾಗಿರುತ್ತದೆ. ಆಧುನಿಕತೆಗೆ ಮರುಳಾಗಿರುವ ಯುವಕರಿಂದ ನೀವೇನು ಬಯಸುತ್ತೀರಿ?
ಇಂದಿನ ಆಧುನಿಕತೆಯಿರಲಿ, ಯುವಕರಿರಲಿ ಎಲ್ಲದಕ್ಕೂ ಮೂಲ ಹಳ್ಳಿಗಳೇ. ದೇಶ ಸುಭಿಕ್ಷವಾಗಿರಬೇಕೆಂದರೆ ಹಳ್ಳಿಗಳು, ಅಲ್ಲಿನ ಪರಿಸರ ಸಂಪನ್ಮೂಲ ಸಂರಕ್ಷಿಸಲ್ಪಡಬೇಕು.

ಆಧುನಿಕತೆ ಹಾಗೂ ಯಾಂತ್ರೀಕರಣದ ಪರಿಣಾಮ ಹಳ್ಳಿಗಳು ವಿಧ್ವಂಸವಾಗುತ್ತಿವೆ. ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಗುಡ್ಡ, ಅರಣ್ಯಗಳನ್ನು ನಾಶಮಾಡಿ ರಸ್ತೆ ನಿರ್ಮಾಣ ಮಾಡುತ್ತಿರುವುದು, ಮಳೆಯ ಅಭಾವದ ಕಾರಣ ಕೃಷಿಗಾಗಿ ರೈತರು ಅತಿಯಾಗಿ ಬೋರ್ ಗಳನ್ನ ಅವಲಂಬಿಸಿದ ಪರಿಣಾಮ ಭೂಮಿಯ ನೀರಿನ ಮಟ್ಟ ಪ್ರಪಾತಕ್ಕಿಳಿದಿರುವುದು, ಹೀಗೆ ಹಲವಾರು ಕಾರಣಗಳಿಂದ ಹಳ್ಳಿಗಳ ಚಿತ್ರಣ ಸಂಪೂರ್ಣವಾಗಿ ಬದಲಾಗಿವೆ. ಇದರಿಂದ ಜೀವನೋಪಾಯಕ್ಕಾಗಿ ಗ್ರಾಮೀಣ ಭಾಗದ ಜನರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇವೆಲ್ಲ ನನ್ನನ್ನು  ಬಹಳ ಕಾಡುತ್ತಿರುವ ವಿಚಾರಗಳು.

ದೇಶದ ಯಾವುದೇ ರಾಜ್ಯ ತೆಗೆದುಕೊಂಡರೂ ಯುವಕರು ಆಧುನಿಕತೆ ತಂತ್ರಜ್ಞಾನದ ಉತ್ತಮ ಜ್ಞಾನಕ್ಕೆ ತೆರೆದುಕೊಳ್ಳದೆ ಅವುಗಳಲ್ಲಿರುವ ಅನಗತ್ಯ ಮನರಂಜನೆ, ನಕಾರಾತ್ಮಕ ಅಂಶಗಳಿಗೆ ಮಾರುಹೋಗಿ ಅವುಗಳಿಗೆ ಬಾಲಿಶರಾಗುತ್ತಿರುವುದು ವಿಷಾದನೀಯ. ಹಾಗಲ್ಲದೆ ಅದರಲ್ಲಿರುವ ಅಂಶಗಳಿಂದ ಉತ್ತಮ ಜ್ಞಾನಾರ್ಜನೆ ಪಡೆದು ತಮ್ಮ ವೈಯಕ್ತಿಕ ಏಳಿಗೆಗೆ, ತನ್ಮೂಲಕ ಸಮಾಜಕ್ಕೆ ಒಳಿತುಂಟು ಮಾಡುವ ಕೆಲಸ ಮಾಡಬೇಕು. 
    
•    ನಿಮ್ಮ ʼಜಿಗಿರಿʼ ಕಾದಂಬರಿಯಲ್ಲಿ ಒಂದು ಪ್ರಾಣಿಗೆ ಮಾನವ ಗುಣಗಳು ಮತ್ತು ಮನೆಯವರಿಗೆ ಒಂದು ಪ್ರಾಣಿಯ ಗುಣಗಳು ಬರುತ್ತವೆ. ಇಂತಹ ಬದಲಾವಣೆ ಒಂದು ಕಾದಂಬರಿಯ ವಸ್ತುವಾಗಿ ಮೂಡಿಬರಲು ಕಾರಣ ಮತ್ತು ಪ್ರೇರಣೆಯೇನು?
ಅದು ಒಂದು ಬಹಳ ಅದ್ಭುತ ವಿಚಾರ. ಕರಡಿ ಕಾಡಿನಲ್ಲಿದ್ದು ಮನುಷ್ಯರನ್ನು ತಿನ್ನುವ ಕ್ರೂರಪ್ರಾಣಿ. ಅದು ಊರಿಗೆ ಬಂದು ಮನುಷ್ಯರ ನಡುವೆ ಇದ್ದು ತನ್ನ ಕ್ರೂರ ಮೃಗ ಲಕ್ಷಣಗಳನ್ನು ಕಳೆದುಕೊಂಡು ಮನುಷ್ಯನಂತೆ ಬದಲಾಗುತ್ತದೆ. ಆದರೆ ಮಾನವೀಯತೆಯಿಂದ  ಬದುಕಬೇಕಾಗಿರುವದ ಯಾ ಗುಣವುಳ್ಳ ಮನುಷ್ಯರು ಕ್ರೂರಮೃಗಗಳಂತೆ ಪ್ರವತಿಸುತ್ತ ಅದನ್ನು ಸಾಯಿಸಬೇಕೆಂದು ನೋಡುತ್ತಾರೆ. ಮನುಷ್ಯನ ಲಕ್ಷಣಗಳುಳ್ಳ ಕ್ರೂರಮೃಗಕ್ಕೂ, ಒಂದು ಕ್ರೂರಲಕ್ಷಣಗಳುಳ್ಳ ಮನುಷ್ಯನಿಗೂ ನಡುವಿನ ವೈರುಧ್ಯವೇ ʼಜಿಗಿರಿʼ ಕಾದಂಬರಿಯ ಕಥಾವಸ್ತು.

ಸಮಾಜ, ತಲೆಮಾರುಗಳು ಬದಲಾಗುತ್ತಿರುವಷ್ಟು, ಮನುಷ್ಯ ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರದಂತಹ ಅಮಾನವೀಯ ಕೃತ್ಯಗಳನ್ನೆಸಗುವ ಕ್ರೂರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮೂಡಿದ ಕಾದಂಬರಿ ʼಜಿಗಿರಿʼ.

•    ಸರ್, ಆಶ-ನಿರಾಶ ನಿಮ್ಮ ಮೊದಲ ಕಥೆ..ಅಂದಿಗೆ ಹಾಗೂ ಇಂದಿಗೆ ಕಥಾವಸ್ತು, ಕಥನ ವಿಧಾನದಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ? 
ನಾನು ಮೊದಲಿಗೆ ಬರೆಯುತ್ತಿದ್ದ ಹಾಗೂ ಇಂದಿನ ಕಥೆಗಳಿಗೆ ಸಾಕಷ್ಟು ಬದಲಾವಣೆಗಳಾಗಿವೆ. ʼಆಶ-ನಿರಾಶ ʼಕಥೆಯಿಂದ ಮೊದಲಾಗಿ ಇತ್ತೀಚಿನʼ ಗುಂಡೆಲೋವಾನʼ ವರೆಗೆ ಕಥೆಗಳಲ್ಲಿ ಸಾಕಷ್ಟು ವಿಭಿನ್ನತೆಯಿದೆ. ಸಮಾಜ ಅತಿವೇಗವಾಗಿ ಬದಲಾಗಿ, ಸಮಾಜದ ಅಗತ್ಯಗಳೂ ಬದಲಾಗಿವೆ. ಹೊಸ ಹೊಸ ಸಮಸ್ಯೆಗಳು ತಲೆಯೆತ್ತಿವೆ. ಅವೇ ನನ್ನಿಂದ ಕಥೆಗಳನ್ನು ಬರೆಸುತ್ತಿವೆ.

•    ನಿಮ್ಮ ಕಥೆಗಳು ಇಂಗ್ಲಿಷ್, ಹಿಂದಿ, ಕನ್ನಡ ಹಾಗೂ ಮರಾಠಿ ಭಾಷೆಗಳಿಗೆ ಅನುವಾದಗೊಂಡಿವೆ. ಅಲ್ಲಿ ಪ್ರತಿಕ್ರಿಯೆ ಹೇಗಿದೆ? 
ನನ್ನ ʼಮಾಯಿಮುಂತʼ ಕಥೆ ಹಿಂದಿಗೆ ಅನುವಾದಗೊಂಡ ಸಮಯದಲ್ಲಿ ಹಿಂದಿಯ ಖ್ಯಾತ ವಿಮರ್ಶಕರೊಬ್ಬರು ಭಾರತ ದೇಶದ ಎಲ್ಲ ಭಾಷೆಗಳ ಕಥೆಗಳನ್ನು ನಾನು ಓದಿದ್ದೇನೆ. ಆದರೆ ಇಷ್ಟು ವಿಭಿನ್ನವಾಗಿ, ಸಾದೃಶವಾಗಿ ಬಹಳ ಅದ್ಭುತವಾಗಿ ಮೂಡಿ ಬಂದಿರುವ ಕಥೆ ಓದಿದ್ದು ಇದೇ ಮೊದಲು. ನಿಜಕ್ಕೆ ಭಾರತದಲ್ಲಿ ಇಂತಹ ಕಥೆ ಬಂದಿಲ್ಲ ಎಂದು ಹೇಳಿದಾಗ ಬಹಳ ಸಂತೋಷವಾಯಿತು. ಅದೇ ರೀತಿ ಇತರ ಭಾಷೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. 

•    ಸ್ವತಃ ಶಾಲಾ ಶಿಕ್ಷಕರಾಗಿರುವ ನೀವು ವೃತ್ತಿ ಮತ್ತು ಸಾಹಿತ್ಯ ರಚನೆ ಎರಡರಲ್ಲೂ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತಿರುವಿರಿ? 
ಇತರೆಲ್ಲರಿಗಿಂತಲೂ ಶಿಕ್ಷಕರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿರುತ್ತದೆ. ಒಂದು ಅಕ್ಷರ, ಒಂದು ವಾಕ್ಯ, ಒಂದು ಕವಿತೆ ಲಕ್ಷಾಂತರ ಮೆದುಳುಗಳಲ್ಲಿ ಸಂಚಲನ ಉಂಟು ಮಾಡುತ್ತದೆ. ಸಮಾಜದೊಂದಿನ ಒಡನಾಟಕ್ಕೆ ಸಾಹಿತ್ಯ ನನ್ನ ಕೈಹಿಡಿದು ನಡೆಸುತ್ತಿದೆ. ನಾನು ಒಬ್ಬ ಗಣಿತ ಶಿಕ್ಷಕ. ಗಣಿತದಲ್ಲಿ ಹಂತಹಂತವಾಗಿ ಸಮಸ್ಯೆಗಳು ಹೇಗೆ ನಿಖರ ಪರಿಷ್ಕಾರ ಕಾಣುತ್ತವೆಯೋ, ಹಾಗೆ ನನ್ನ ಕಥೆಗಳು ಸಮಸ್ಯೆಯಿಂದ ಪರಿಷ್ಕಾರದತ್ತ ಸಾಗುತ್ತವೆ. 

•    ಈಗಿನ ಬರಹಗಾರರನ್ನು ತೀವ್ರವಾಗಿ ಕಾಡುತ್ತಿರುವ ವಿಚಾರಗಳೇನು?
ಮುಖ್ಯವಾಗಿ ಇಂದಿನ ಘಟನೆಗಳು,  ಸರ್ಕಾರ ಹಾಗೂ ಜಾಗತೀಕರಣದಿಂದಾಗಿ ಆಗುತ್ತಿರುವ ಬದಲಾವಣೆಗಳೇ ಇಂದಿನ ಬರಹಗಾರರಿಂದ ಕಥೆಗಳನ್ನು ಬರೆಸುತ್ತಿವೆ. ಅತ್ಯಂತ ತ್ವರಿತವಾದ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ನೂರುವರ್ಷಗಳಲ್ಲಿ ಆಗಬೇಕಿದ್ದ ಬದಲಾವಣೆ ಒಮ್ಮೆಗೇ ಆಗಿರುವ ಪರಿಣಾಮ ಅಂದರೆ, ಮೊಬೈಲ್, ಸ್ಮಾರ್ಟ್ ಫೋನ್, ಐ ಫೋನ್, ವಿಡಿಯೋಗಳು, ಯೂಟ್ಯೂಬ್ ಹೀಗೆ ದಿಢೀರನೆ ಎರಡು ಮೂರುವರ್ಷಗಳಲ್ಲಿಯೇ ಅಂಗೈಯಲ್ಲಿ ಇಡೀ ವಿಶ್ವದರ್ಶನವಾಗುವ ಪರಿಸ್ಥಿತಿ, ಪ್ರತಿ ವಿಲಾಸಿ ವಸ್ತುಗಳು ಅಗತ್ಯಗಳಾಗಿ ಬದಲಾಗಿರುವ ವಸ್ತು ಸಂಸ್ಕೃತಿ ಇವೆಲ್ಲ ಲೇಖಕರನ್ನು ಕಾಡುತ್ತಿರುವ ಅಂಶಗಳು.

•    ಸರ್, ತೆಲುಗು ಕಥೆಗಳಲ್ಲಿಇಂದು ಹೊಸತನವಿದೆಯೇ?
ತೆಲುಗು ಕಥೆಗಳಲ್ಲಿ ಈಗ ಅಸ್ತಿತ್ವ ಹೋರಾಟಗಳು ಅಂದರೆ ಮಹಿಳೆಯರು, ದಲಿತರು, ಮುಸ್ಲಿಂ ಅಲ್ಪಸಂಖ್ಯಾತರು ಹೀಗೆ ಆಯಾವರ್ಗದವರೇ ತಮ್ಮ ಸಮುದಾಯದ ಕಥೆಗಳನ್ನು ಬರೆಯುತ್ತಿದ್ದಾರೆ. ಅವು ಹೊರಗಿನವರು ಅವರ ಕಥೆ ಬರೆಯುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಈಗ ಮಹಿಳೆಯರ ಕಥೆಗಳನ್ನು ಮಹಿಳೆಯರು ಬರೆದರೆ ಬಲವಾಗಿರುತ್ತವೆ. ಪುರುಷರು ಮಹಿಳೆಯರ ಕಥೆ ಬರೆದರೆ ಪೇಲವವಾಗಿರುತ್ತದೆ. 

•    ನಿಮ್ಮ ಕಥೆಗಳಲ್ಲಿ ನಿಮಗೆ ಬಹಳ ಇಷ್ಟವಾದ ಕಥೆ ಯಾವುದು?
ನಾಲ್ಕು ಮಕ್ಕಳಲ್ಲಿ ತಂದೆಯನ್ನು ನಿಮಗೆ ಯಾವ ಮಗ ಇಷ್ಟ ಎಂದರೆ ಹೇಳಲಾರರು. ಒಂದೊಂದು ಕಥೆಯೂ ಪ್ರತ್ಯೇಕ ವಸ್ತುವನ್ನಿಟ್ಟುಕೊಂಡು ರಚಿಸಿದವು. ಆದ್ದರಿಂದ ಅವೆಲ್ಲವೂ ಇಷ್ಟ. ಕಡ್ಡಾಯವಾಗಿ ಹೇಳಬೇಕೆಂದರೆ ʼಮಾಯಿಮುಂತʼ ನಾನು ಬಹಳ ಇಷ್ಟ ಪಟ್ಟು ಬರೆದ ಕಥೆ. ಎಮ್ಮೆಗೆ ಹೆಣ್ಣುಕರು ಹುಟ್ಟಿದರೆ ಸಂತೋಷ ಪಡುತ್ತೇವೆ, ನಮ್ಮ ಮನೆಗಳಲ್ಲಿ ಹೆಣ್ಣುಶಿಶು ಜನಿಸಿದರೆ ಬೇಸರ ಪಟ್ಟುಕೊಳ್ಳುತ್ತೇವೆ .ಆದರೆ ಒಂದು ಎಮ್ಮೆ ಅಪಾರ ನೋವನುಭವಿಸಿ ಹೆರಿಗೆಯಾದ ನಂತರ ಅದು ತನ್ನ ಬಳಲಿಕೆಯಲ್ಲೂ ಸ್ವತಃ ತಾನೇ ವೈದ್ಯೆಯಾಗಿ, ಅಮ್ಮನಾಗಿ ತನ್ನ ಕರುವನ್ನು ಹಂತಹಂತವಾಗಿ ಶುಭ್ರಮಾಡಿ ಆರೈಕೆ ಮಾಡುವ ವಿಧಾನವನ್ನು ವಿವರಿಸಿದ ಕಥೆ. ಅಂದರೆ ಒಬ್ಬ ತಾಯಿ ಮನುಷ್ಯನಾಗಿರಲಿ, ಪ್ರಾಣಿಯಾಗಲಿ ತನ್ನ ಮಕ್ಕಳನ್ನು ಸಂರಕ್ಷಿಸುವ ಸಂವೇದನೆಯುಳ್ಳ ಕಥೆ. ಇದು ಹಿಂದಿ, ಇಂಗ್ಲಿಷ್ಗೂ ಅನುವಾದಗೊಂಡಿದೆ.

•    ನೀವು ಪ್ರತ್ಯೇಕ ತೆಲಂಗಾಣ ಹೋರಾಟದಲ್ಲಿ ಪಾಲ್ಗೊಂಡಾಗಿನ ಅನುಭವ ನಮ್ಮೊಡನೆ ಹಂಚಿ ಕೊಳ್ಳುವಿರಾ?  
ಸಾಕಷ್ಟು ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ಹೋರಾಟಗಳ ಫಲವಾಗಿ 2018ರಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆಯಾಯಿತು. 

ತೆಲಂಗಾಣ ಹೋರಾಟ ತಮಗೆ ಸಿಗಬೇಕಿದ್ದ ಉದ್ಯೋಗ, ಶಿಕ್ಷಣ, ಇತರ ಸೌಲಭ್ಯಗಳು, ಸಂಪನ್ಮೂಲಗಳ ಅಸಮಾನ ಹಂಚಿಕೆ, ನಿರಂತರ ಅವಮಾನ, ಆಕ್ರಮಣ, ಮೋಸಗಳ ವಿರುದ್ಧ, ತಮ್ಮ ಆತ್ಮಗೌರವ, ಸ್ವಾಭಿಮಾನಗಳಿಗೆ ಬಿದ್ದ ಹೊಡೆತಗಳಿಂದ ಸಿಡಿದೆದ್ದು ನಡೆದ ಹೋರಾಟ.

ಸಾಹಿತಿಗಳಿಗೆ ಪ್ರಶ್ನಿಸುವ ಮತ್ತು ಮುನ್ನಡೆಯುವ ಎರಡು ಮುಖ್ಯ ಜವಾಬ್ದಾರಿಗಳಿರುತ್ತವೆ. ತೆಲಂಗಾಣ ಏಕೆ ಬೇಕು, ಯಾವ ರೀತಿ ಇಷ್ಟು ದಿನ ಮೋಸ ಹೋಗಿದೆ, ತೆಲಂಗಾಣ ಪ್ರತ್ಯೇಕವಾಗದಿದ್ದರೆ ಏನು ನಷ್ಟ ಹೋಗುತ್ತೇವೆ ಎಂದು ಒಬ್ಬ ಸಾಹಿತಿಯಾಗಿ ನನ್ನ ಬರಹ, ಭಾಷಣಗಳ ಮೂಲಕ ಹಾಗೂ ರಸ್ತೆ ರೋಕೋ, ಧರಣಿಗಳಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಾಲ್ಗೊಳ್ಳುವ ಮೂಲಕ ಜಾಗೃತಿ ಮೂಡಿಸಿದ್ದೇನೆ. 

•    ನೀವು ಬರಹಗಾರರಾಗಿ ತೆಲಂಗಾಣ ಅಥವಾ ಆಂಧ್ರಗಳಲ್ಲಿ ಯಾವ ಭಾಷೆಯ ಲೇಖಕರಾಗಿ ಗುರುತಿಸಿಕೊಳ್ಳುವಿರಿ? 
ನಾನು ತೆಲುಗು ಲೇಖಕನಾಗಿ ಗುರುತಿಸಿಕೊಳ್ಳುತ್ತೇನೆ. ತೆಲುಗು ತೆಲಂಗಾಣ ಹಾಗೂ ಆಂಧ್ರ ಎರಡು ಉಭಯ ರಾಜ್ಯಗಳ ಭಾಷೆ.   ಮುಖ್ಯವಾಗಿ ಸಾಹಿತಿ ಜಗತ್ತಿನ ಮನುಷ್ಯ. ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯವನ್ನು ಖಂಡಿಸುತ್ತಾನೆ ಹಾಗೂ ಶೋಷಿತರ ಪರವಾಗಿ ನಿಲ್ಲುತ್ತಾನೆ.  

ಸಾಮಾನ್ಯವಾಗಿ ಇಲ್ಲಿ ತೆಲಂಗಾಣ, ಆಂಧ್ರ ಹಾಗೂ ಸಾಮಾನ್ಯ ಭಾಷೆಯ ಬರಹ ಕಾಣಬಹುದು. ತೆಲಂಗಾಣ ಶೈಲಿಯಲ್ಲಿ ಬರೆದರೆ ತೆಲಂಗಾಣದವರಿಗೆ, ಆಂಧ್ರ ಶೈಲಿಯಲ್ಲಿ ಬರೆದರೆ ಆಂಧ್ರದವರಿಗೆ ಅರ್ಥವಾಗುತ್ತದೆ. ಸಾಮಾನ್ಯ ಶೈಲಿಯಲ್ಲಿ ಬರೆದರೆ ಇಬ್ಬರಿಗೂ ಅರ್ಥವಾಗುತ್ತದೆ. ಕೆಲವನ್ನು ಸಾಮಾನ್ಯಶೈಲಿಯಲ್ಲಿ ಬರೆಯುತ್ತೇನೆ, ತೆಲಂಗಾಣ ಭಾಷೆಯಲ್ಲಿ ಬರೆದಾಗಲೂ ಎಲ್ಲರಿಗೂ ಅರ್ಥವಾಗುವಂತೆ ಬರೆಯುತ್ತೇನೆ. ಒಟ್ಟಾರೆ ನಾನು ಬರೆಯುವ ಪ್ರತಿ ಕಥೆ ಇಡೀ ಎಲ್ಲ ತೆಲುಗಿನವರಿಗೂ ಅರ್ಥವಾಗುತ್ತದೆ.  

•    ಶಾಲಾ ಶಿಕ್ಷಕರಾಗಿರುವ ನೀವು ನಿಮ್ಮ ವಿದ್ಯಾರ್ಥಿಗಳನ್ನು ಸಾಹಿತ್ಯ ರಚನೆಯಲ್ಲಿ ತೊಡಗಿಸಿರುವುದು ಬಹಳ ಅಭಿನಂದನೀಯ.  ಆ ಕುರಿತು ವಿವರಿಸಿ. 
ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿ ಶಿಕ್ಷಣದ ನಂತರ ಬಹುತೇಕರು ವೈದ್ಯರು, ಇಂಜಿನಿಯರ್, ಪೊಲೀಸ್, ವ್ಯಾಪಾರಿ, ವಕೀಲರಾಗಿ ಹೀಗೆ ತಂತಮ್ಮ ವೃತ್ತಿ ಜೀವನದಲ್ಲಿ ಮುಳುಗಿ ಹೋಗುತ್ತಿದ್ದಾರೆ. 

ಆದರೆ ಸಾಹಿತಿಯಾದವನು ಪ್ರಜೆಗಳು ಯಾವ ಸಂಕಷ್ಟದಲ್ಲಿದ್ದಾರೆ, ಎಲ್ಲಿ ಅನ್ಯಾಯವಾಗುತ್ತಿದೆ ಎಂದು ಅವರ ವಿಳಾಸ ಹುಡುಕಿ ಅಂತಹ ಬಲಹೀರನ ಧ್ವನಿಯಾಗಿ ಸರ್ಕಾರವನ್ನು ಪ್ರಶ್ನಿಸುತ್ತಾನೆ ಹಾಗೂ ಆ ಮೂಲಕ ಪ್ರಜೆಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಾನೆ. ಅದಕ್ಕೇ ಎಲ್ಲರಿಗಿಂತ ಸಮಾಜಕ್ಕೆ ಸಾಹಿತಿಗಳು ಹೆಚ್ಚು ಅಗತ್ಯ. 

ಆದರೆ ಸಮಾಜಕ್ಕೆ ಜಾಗೃತಿ ಮೂಡಿಸುವ ಬರಹಗಾರರು ಫ್ಯಾಕ್ಟರಿಗಳಲ್ಲಿ ತಯಾರಾಗುವುದಿಲ್ಲ, ಅವರು ಶಾಲೆಗಳಲ್ಲಿಯೇ ತಯಾರಾಗಬೇಕು. ಆದ್ದರಿಂದ ಚಿಕ್ಕಂದಿನಿಂದಲೇ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಕಥೆಗಳನ್ನು ಬರೆಸುವುದು, ಓದಿಸುವ ಅಭ್ಯಾಸ ಮಾಡಿಸುತ್ತಿದ್ದೇನೆ. ನಮ್ಮ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ ಹೋಗುವ ವೇಳೆಗೆ ನನ್ನ ವಿದ್ಯಾರ್ಥಿಗಳು ಒಳ್ಳೆಯ ಕಥೆ, ಕವಿತೆಗಳನ್ನು ಬರೆಯುತ್ತ ಹೋಗುತ್ತಾರೆ. ಅವರು ಸಮಾಜಮುಖಿ ಸಾಹಿತಿಗಳಾಗಬೇಕೆಂಬುದೇ ನನ್ನ ಮುಖ್ಯ ಆಶಯ.

•    ಸಾಹಿತಿಯಾಗಿ ನೀವು ವಿಮರ್ಶೆಗಳಿಗೆ ಹೇಗೆ ಸ್ಪಂದಿಸುವಿರಿ?
ಬಹಳ ಮುಖ್ಯವಾದ ಪ್ರಶ್ನೆ. ತೆಲುಗಿನಲ್ಲಿ ಈಗ ವಿಮರ್ಶೆಗಳನ್ನು ಬಹುತೇಕರು ಸ್ವೀಕರಿಸುತ್ತಿಲ್ಲ. ವಿಮರ್ಶೆಗಳಲ್ಲಿ ಎರಡು ರೀತಿ. ಸ್ವವಿಮರ್ಶೆ, ಇಲ್ಲವೇ ಉದ್ದೇಶಪೂರ್ವಕವಾಗಿ ಮಾಡುವಂತಹವು. ಮುಖ್ಯವಾಗಿ ನಾನು ಒಂದು ಕಥೆ ಬರೆದ ನಂತರ  ಆ ಕಥೆ ನನ್ನದಲ್ಲಎಂದು ಕೊಳ್ಳುತ್ತೇನೆ. 

ಇತರರ ಕಥೆಗಳನ್ನು ಹೇಗೆ ವಿಮರ್ಶಿಸುತ್ತೇನೋ ಹಾಗೇ ನನ್ನ ಕಥೆಯನ್ನು ನಾನು ವಿಮರ್ಶಿಸಿಕೊಂಡ ಸಂದರ್ಭಗಳೂ ಸಾಕಷ್ಟಿವೆ. ಇದು ಬಹಳ ಉತ್ತಮ ಕಥೆ, ಅದು ಹೀಗೆ ಬರೆದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು ಎಂದು. ಆದ್ದರಿಂದಲೇ ನಾನು ಬರೆಯ ಬಲ್ಲೆ. 

•    ನಿಮ್ಮ ಜೀವನದಲ್ಲಿ ಮರೆಯಲಾರದ ಪ್ರಶಂಸೆ?
ನನ್ನ ʼಜುಮ್ಮೇಕಿರಾತ್ಮೆʼ ಗಲ್ಫ್ ಕಾರ್ಮಿಕರ ಜೀವನ, ಅವರ ನೋವುಗಳು ಹೇಗಿರುತ್ತದೆಂಬ ಕುರಿತು ಚಿತ್ರಿಸಿದ ಕಥೆ. ಅದನ್ನು ಓದಿ 120 ಮಂದಿ ಗಲ್ಫ್ ಜೈಲಿನಿಂದ ಹೊರಗೆ ಬಂದು, ನಂತರ ಅವರು ಫೋನ್ ಮಾಡಿ ನಿಮ್ಮ ಕಥೆ ಓದಿದ ನಂತರ ಹೇಗೆ ಹೊರಗೆ ಬರಬಹುದೆಂದು ತಿಳಿಯಿತು ಎಂದು ಹೇಳಿದರು. ಆಗ ಕಥೆಯಿಂದ ಇಷ್ಟು ಪ್ರಯೋಜನವಾಗುತ್ತದಾ ಎನಿಸಿ, ಸಾರ್ಥಕ ಭಾವ ಮೂಡಿತು. ಹಾಗೇ ನನ್ನ ʼಎಡಾರಿಮಂಟಲುʼ ಕಾದಂಬರಿ ಓದಿದ ನಿಜಾಮಾಬಾದ್ ನ ಒಬ್ಬ ವ್ಯಕ್ತಿ ಅದರಲ್ಲಿರುವ ಗಲ್ಫ್ ಕಾರ್ಮಿಕರ ಬಾಧೆಗಳನ್ನು ಅರಿತುಕೊಂಡು ಅಲ್ಲಿಗೆ ಹೋಗದಿರಲು ನಿರ್ಧರಿಸಿ, ಇಲ್ಲೇ ಹೋಟೆಲ್ ಆರಂಭಿಸಿ ನೆಲೆಯೂರಿದನಂತೆ. ನಂತರ ಅವರು ತಮ್ಮ ಮಗಳ ಮದುವೆಗೆ ನನ್ನನ್ನು ಆಹ್ವಾನಿಸಿ ಈ ವಿಚಾರ ನನ್ನೊಂದಿಗೆ ಹಂಚಿ ಕೊಂಡರು. ಅದನ್ನು ಎಂದಿಗೂ ಮರೆಲಾರೆ.

•    ನಿಮ್ಮ ʼತೆಗಾರಂʼ ನಾಟಕ 25 ಪ್ರಶಸ್ತಿಗಳನ್ನು ಗಳಿಸಿ ಇತಿಹಾಸ ಸೃಷ್ಟಿಸಿದೆ. ಇದರ ವೈಶಿಷ್ಟ್ಯವೇನು? 
ಸಾಮಾಜಿಕ ಅರಿವಿನ ಕೊರತೆಯಿಂದಾಗಿ ಒಂದು ಮಾನಸಿಕ ವ್ಯಾಧಿಯುಳ್ಳ ಮಹಿಳೆಯರಿಗೆ ದೇವರಪಟ್ಟ ಕಟ್ಟಿ ಶಿವಸತ್ತುಗಳೆಂದು ವೈವಾಹಿಕ ಜೀವನಕ್ಕೆ ಅವಕಾಶ ಕೊಡದೆ ಅವರ ಜೀವನವನ್ನು ಹಾಳು ಮಾಡುತ್ತಿದ್ದಾರೆ.

ಅದೊಂದು ಮಾನಸಿಕ ಕಾಯಿಲೆ, ಮನೋವೈದ್ಯರಿಗೆ ತೋರಿಸಿ ಉತ್ತಮ ಚಿಕಿತ್ಸೆ ಕೊಡಿಸಿ, ಅವರನ್ನು ಪ್ರೀತಿ, ಸಹಾನುಭೂತಿಗಳಿಂದ ನೋಡಿಕೊಂಡರೆ ವ್ಯಾಧಿ ಗುಣಮುಖವಾಗುತ್ತದೆ ಎಂಬ ಅರಿವು ಮೂಡಿಸುವ ಸಲುವಾಗಿ ಬರೆದ ನಾಟಕ. 

ಮೊದಲು ʼತೆಗಾರಂʼ ಕಥೆ ಬರೆದೆ. ಅದಕ್ಕೆ ಬಹಳ ಉತ್ತಮ ಪ್ರತಿಕ್ರಿಯೆ ದೊರೆಯಿತು. ಇದು 2008-09ರ ಉತ್ತಮ ಕಥೆಯಾಗಿ ಆಯ್ಕೆಯಾಗಿತ್ತು ಹಾಗೂ ಇದು ಇಂಗ್ಲಿಷ್ಗೆ ಅನುವಾದಗೊಂಡಿದೆ. ನಂತರ ಅದನ್ನು ನಾಟಕ ಬರೆದಾಗ ಊಹಿಸದಷ್ಟು ಅದ್ಭುತ ಪ್ರತಿಕ್ರಿಯೆ ಬಂದಿತು. ಇದನ್ನು ಕಿರುಚಿತ್ರ ತೆಗೆಯುವ ಆಲೋಚನೆಯೂ ಇದೆ.

ಈ ನಾಟಕಕ್ಕೆ ಆಂಧ್ರಪ್ರದೇಶ ರಾಜ್ಯಮಟ್ಟದ ನಂದಿ ಪ್ರಶಸ್ತಿ, ಪರುಚೂರು ರಘುಬಾಬು ಸ್ಮಾರಕ 29ನೇ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ ಆರುಪ್ರಶಸ್ತಿಗಳು ಸೇರಿದಂತೆ 25 ಪ್ರಶಸ್ತಿಗಳನ್ನು ಗಳಿಸಿದೆ. 

•    ನೀವು ಸಿನಿಮಾಗಳಿಗೆ ಗೀತೆಗಳನ್ನು ಬರೆದಿರುವಿರಿ, ಭವಿಷ್ಯತ್ತಿನಲ್ಲಿ ಎಂದಾದರೂ ಬರೆಯುತ್ತೇನೆಂದು ಮೊದಲೇ ನಿಮಗೆ ಅನಿಸಿತ್ತೇ?
ಹೌದು, ಮುಖ್ಯವಾಗಿ ನನಗೆ ಗೀತರಚನೆ ಬಹಳ ಇಷ್ಟ. ಗೀತರಚನೆಕಾರನಾಗಬೇಕೆಂದೇ ನನ್ನ ಮೊದಲ ಬಯಕೆಯಾಗಿತ್ತು. ಆದರೆ ಕಥೆ, ಕಾದಂಬರಿ, ನಾಟಕ, ಪ್ರಬಂಧಗಳನ್ನು ಬರೆದು, ತಡವಾಗಿ ಇದೀಗ ಸಿನಿಮಾ ಗೀತರಚನೆಕಾರನಾಗಿದ್ದೇನೆ. ಒಳ್ಳೆಯ ಹಾಡುಗಳನ್ನು ಬರೆಯಬೇಕೆಂಬ ಮಹದಾಸೆಯಿದೆ. 

•    ನೀವು ಸಂಭಾಷಣೆ ಬರೆದಿರುವ ʼಮಲ್ಲೇಶಂʼ ಚಿತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಅದರ ವಿಶೇಷಗಳೇನು?
ವಿದ್ಯೆ ಎಂದರೆ ಭಟ್ಟಿ ಹೊಡೆಯುವುದಲ್ಲ. ನೆನಪಿನ ಶಕ್ತಿಗೆ ಸಂಬಂಧಿಸಿದ ಅಂಶವನ್ನೇ ಓದು ಎಂದು ಕೊಳ್ಳುತ್ತಿದ್ದಾರೆ. ಮಲ್ಲೇಶಂ ಆರನೇ ತರಗತಿಗೇ ಓದು ನಿಲ್ಲಿಸಿದ ವಿದ್ಯಾರ್ಥಿ. ತನ್ನ ಅಮ್ಮನ ಕಷ್ಟವನ್ನು ದೂರಮಾಡಬೇಕೆಂಬ ತುಡಿತದಿಂದ ಲಕ್ಷ್ಮಿಆಸು ಯಂತ್ರವನ್ನು ಕಂಡುಹಿಡಿದ. ಇದೊಂದು ಪ್ರೇರಣೆ. ಮಲ್ಲೇಶಂ ಒಬ್ಬನೇ ಅಲ್ಲ, ಇತಿಹಾಸದಲ್ಲಿ ಆವಿಷ್ಕಾರವಾದ ಪ್ರತಿವಸ್ತುವಿನ ಹಿಂದೆ ಇಂತಹ ಕಥೆಯೇ ಇರುತ್ತದೆ. ಮಕ್ಕಳಿಗೆ ಈ ಸಿನಿಮಾ ತಪ್ಪದೆ ತೋರಿಸಿ. ನಿಮ್ಮ ಮಕ್ಕಳಲ್ಲಿಯೂ ಒಬ್ಬ ಪರಿಣಿತ ಇರಬಹುದು. ನಿಮ್ಮ ಮಕ್ಕಳಿಗೆ ಕಷ್ಟ ನೀಡದೆ ಬೆಳೆಸಿ, ಆದರೆ ನಿಮ್ಮ ಕಷ್ಟ ತಿಳಿಸದೆ ಬೆಳೆಸಬೇಡಿ.

•    ಇತ್ತೀಚೆಗೆ ನೀವು ಸಿನಿಮಾಗಳಲ್ಲಿ ಕೂಡ ತೊಡಗಿಸಿಕೊಂಡಿರುವಿರಿ. ಒಂದು ವೇಳೆ ನಿಮ್ಮ ಕಾದಂಬರಿ ಸಿನಿಮಾ ಆಗುವುದಾದರೆ ನಿಮ್ಮ ಆಯ್ಕೆ ಯಾವುದು? 
ʼಜಿಗಿರಿʼ ಕಾದಂಬರಿ ಚಲನಚಿತ್ರವಾದರೆ ಹಾಲಿವುಡ್ ನ ʼಲೈಫ್ ಆಫ್ ಪೈʼ ಸಿನಿಮಾ ರೀತಿಯಲ್ಲಿ ಇರುತ್ತದೆ. ಅದನ್ನು ಮಾಡುವ ಬಯಕೆ ಇದೆ. ಅದಕ್ಕೆ ಸಾಕಷ್ಟು ಮಂದಿ ಆಸಕ್ತಿ ತೋರಿಸುತ್ತಿದ್ದಾರೆ.  

•    ನಿಮ್ಮ ಕಥೆಗಳಲ್ಲಿ ಸಾಕಷ್ಟು ಪ್ರಾಣಿಗಳು ಪಾತ್ರ ವಹಿಸುತ್ತವೆ, ಇದರ ಹಿನ್ನೆಲೆಯೇನು?
ಸಾಮಾನ್ಯವಾಗಿ ನಮ್ಮಲ್ಲಿ ಯಾರಾದರೂ ಬಹಳ ಬೇಗ ಮರೆತು ಹೋದರೆ ಅವರಿಗೆ ಕೋಳಿ ಮೆದುಳು ಎನ್ನುತ್ತಾರೆ. ಆದರೆ ಒಂದು ಕೋಳಿ 57 ದಿನಗಳಲ್ಲಿ ತನ್ನ ಮಕ್ಕಳನ್ನು ತನ್ನ ಹಾಗೇ ಕೋಳಿಯಂತೆ ತಿದ್ದಿತೀಡಿ ಬೆಳೆಸುತ್ತದೆ. 

ಆದರೆ 30 ವರ್ಷದಾಟಿದರೂ ಮನುಷ್ಯ ತನ್ನ ಮಕ್ಕಳನ್ನು ಮನುಷ್ಯನಾಗಿ ಬೆಳೆಸುವುದಿಲ್ಲ. ತನ್ನ ನಿವೃತ್ತಿ, ಸಾವಿನ ನಂತರವೂ ಮಕ್ಕಳ ಸುಖ ಬಯಸಿ ಅವರಿಗೆ ಆಸ್ತಿ, ಸಂಪತ್ತುಗಳನ್ನು ಸಂಪಾದಿಸಿಡುವುದರಲ್ಲಿಯೇ ಮುಳುಗಿರುತ್ತಾನೆ. 

ಈ ಪ್ರಯತ್ನದಲ್ಲಿ ಅನ್ಯಾಯ, ಅಕ್ರಮ, ಕಳ್ಳತನ, ದರೋಡೆ, ಕೊಲೆಯಂತಹ ದುಷ್ಕೃತ್ಯಗಳಲ್ಲಿ ತೊಡಗಿದ್ದಾನೆ. ಹಾಗಾದರೆ ತಪ್ಪು ಎಲ್ಲಿದೆ, ಪಠ್ಯವಸ್ತುವಿನಲ್ಲಿದೆ, ಕಲಿಸುವುದರಲ್ಲಿದೆ. ಶಾಲೆಯಾ, ತಾಯಿಯಾ, ತಂದೆಯಾ, ಸಮಾಜವಾಯಾರೋ, ಆದರೆ ಮನುಷ್ಯನಿಗೆ ಹೇಳಬೇಕಾದ ಸಿಲಬಸ್ ಹೇಳುತ್ತಿಲ್ಲ. 

ಪ್ರಾಣಿಗಳು ನಮಗಿಂತಲೂ ಬಹಳ ತಿಳುವಳಿಕೆಯುಳ್ಳವು. ಹೀಗಾಗಿ ನಾನು ಕೋಳಿ, ಕೋತಿ, ಬೆಕ್ಕು, ಕಾಡುಹಂದಿ, ಆನೆ, ಎಮ್ಮೆ ಹೀಗೆ ಹಲವು ಪ್ರಾಣಿಗಳ ಕಥೆಗಳ ಮೂಲಕ ಅವುಗಳಿಂದ ಕಲಿಯಬೇಕಾದ ಸಾಕಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲಿದ್ದೇನೆ. 

•    ಓದುಗರಿಗೆ ನಿಮ್ಮ ಸಂದೇಶವೇನು?
ಸಮಾಜದ ಒಳಿತನ್ನು ಬಯಸುವುದು ಸಾಹಿತ್ಯ. ಒಳ್ಳೆಯ ಸಮಾಜ ಉತ್ತಮ ಸಾಹಿತ್ಯವನ್ನು ಸೃಷ್ಟಿಸುತ್ತದೆ, ಉತ್ತಮ ಸಾಹಿತ್ಯ ಒಳ್ಳೆಯ ಸಮಾಜವನ್ನು ಸೃಷ್ಟಿಸುತ್ತದೆ. ಸಾಹಿತ್ಯ- ಸಮಾಜ ಎರಡೂ ಕಾಡು ಮತ್ತು ಹುಲಿ ಇದ್ದಂತೆ. ಕಾಡು ಇದ್ದರೆ ಹುಲಿ ರಕ್ಷಿಸಲ್ಪಡುತ್ತದೆ, ಹುಲಿ ಇದ್ದರೆ ಕಾಡು ರಕ್ಷಿಸಲ್ಪಡುತ್ತದೆ.

ಉತ್ತಮ ಸಾಹಿತ್ಯವನ್ನು ಓದಿ ಉಳಿಸಿ, ಬೆಳೆಸಬೇಕು. ಇಂದಿನ ಮಕ್ಕಳಿಗೆ ಕೇವಲ ಪಠ್ಯಪುಸ್ತಕಗಳಲ್ಲದೆ ಕಥೆ, ಕವಿತೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಕಲಿಸಬೇಕು. ಸಾಹಿತ್ಯ ಸಮಾಜ ಸಮಾನಾಂತರವಾಗಿ ಹೋಗಬೇಕು. ಈಗಾಗಲೇ ಸಾಹಿತ್ಯದಿಂದ ಸಮಾಜ ಸಾಕಷ್ಟು ದೂರವಾಗಿದೆ. ಹಾಗಾಗದಂತೆ ಮಾರ್ಪಡಿಸಬೇಕು.